Back
Home » Business
ಬಜೆಟ್ 2019 - ನಿಮಗೆ ಗೊತ್ತಿರಬೇಕಾದ ಪ್ರಮುಖ ತೆರಿಗೆ ಬದಲಾವಣೆಗಳು
Good Returns | 10th Jul, 2019 10:47 AM

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಪ್ರಥಮ ಬಜೆಟ್‌ನಲ್ಲಿ ದೇಶದ ಆರ್ಥಿಕತೆಯ ಬೆಳವಣಿಗೆಗೆ ಬೇಕಾದ ದಿಕ್ಕನ್ನು ತೋರಿದ್ದಾರೆ. ಸಾಮಾಜಿಕ ಹಾಗೂ ನಿರ್ಮಾಣ ಮೂಲಭೂತ ಸೌಕರ್ಯಗಳು, ಹಣಕಾಸು ವಲಯದ ಪ್ರತಿಯೊಂದು ವ್ಯವಹಾರಕ್ಕೆ ಡಿಜಿಟಲ್ ಸ್ಪರ್ಶ ಹಾಗೂ ಮಾಲಿನ್ಯ ರಹಿತ ಭಾರತ ಇವು ಬಜೆಟ್‌ನ ಕೆಲ ದಿಕ್ಸೂಚಿಗಳಾಗಿವೆ. ಈ ಎಲ್ಲ ಅಂಶಗಳು ತೆರಿಗೆ ನೀತಿಯಲ್ಲಿ ಸಹ ಬಿಂಬಿಸಲ್ಪಟ್ಟಿವೆ. ಹಾಗಾದರೆ ಈ ಬಾರಿಯ ಬಜೆಟ್‌ನಲ್ಲಿನ ತೆರಿಗೆ ನಿಯಮಗಳು ವೈಯಕ್ತಿಕ ತೆರಿಗೆದಾರರ ಮೇಲೆ ಯಾವೆಲ್ಲ ಪರಿಣಾಮ ಬೀರಲಿವೆ ಎಂಬುದನ್ನು ನೋಡೋಣ.

1. ತೆರಿಗೆ ಸಂಗ್ರಹ ಹೆಚ್ಚಳದ ಗುರಿ

ಇತ್ತೀಚಿನ ದಿನಗಳಲ್ಲಿ ಭಾರತೀಯರ ಆದಾಯ ಮಟ್ಟಗಳು ಹೆಚ್ಚಾಗುತ್ತಿದ್ದು, ಹೆಚ್ಚಿನ ಆದಾಯ ವಲಯದವರು ದೇಶದ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಕೊಡುಗೆ ನೀಡಲಿ ಎಂದು ಸೀತಾರಾಮನ್ ಹೇಳಿದ್ದಾರೆ. ಇದನ್ನು ಸಾಧಿಸುವ ಸಲುವಾಗಿ 2 ಕೋಟಿ ರೂ.ಗಳಿಂದ 5 ಕೋಟಿ ರೂ. ತೆರಿಗೆಗೆ ಒಳಪಡುವ ಆದಾಯ ಹೊಂದಿದವರಿಗೆ ವಿಧಿಸಲಾಗುತ್ತಿದ್ದ ಸರ್ಚಾರ್ಜ್ ಅನ್ನು ಶೇ.25 ಕ್ಕೆ ಏರಿಸಲಾಗಿದೆ. ಹಾಗೆಯೇ 5 ಕೋಟಿ ರೂ.ಗಳಿಗೂ ಅಧಿಕ ತೆರಿಗೆಗೆ ಒಳಪಡುವ ಆದಾಯ ಇದ್ದವರಿಗೆ ಶೇ.37 ಸರ್ಚಾರ್ಜ್ ಹೇರಲಾಗಿದೆ. ಈ ಮುನ್ನ 1 ಕೋಟಿ ರೂ.ಗಳಿಗೆ ಮಿಕ್ಕಿ ಆದಾಯ ಪಡೆಯುತ್ತಿದ್ದ ಎಲ್ಲರಿಗೂ ಶೇ.15 ರಂತೆ ಏಕರೂಪದ ಸರ್ಚಾರ್ಜ್ ವಿಧಿಸಲಾಗುತ್ತಿತ್ತು. ಈಗಿನ ತೆರಿಗೆ ನಿಯಮ ಬದಲಾವಣೆಯಿಂದ ಗರಿಷ್ಠ ಆದಾಯ ತೆರಿಗೆಯ ಪ್ರಮಾಣವು ಶೇ.39 ಹಾಗೂ ಶೇ.42.74 ಕ್ಕೆ ಏರಲಿದೆ.

2. ತೆರಿಗೆ ವ್ಯಾಪ್ತಿ ಹೆಚ್ಚಳ ಉದ್ದೇಶ

ಎ) ಸ್ಥಿರಾಸ್ಥಿಯ ಸಂದರ್ಭದಲ್ಲಿ ಟಿಡಿಎಸ್ ನಿಯಮದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ಸ್ಥಿರಾಸ್ಥಿಯ ತೆರಿಗೆ ನಿಯಮವು ಕ್ಲಬ್ ಸದಸ್ಯತ್ವ, ಕಾರ ಪಾರ್ಕಿಂಗ್ ಶುಲ್ಕ, ವಿದ್ಯುತ್ ಹಾಗೂ ನೀರಿನ ಬಿಲ್ಲುಗಳು, ನಿರ್ವಹಣಾ ಶುಲ್ಕ, ಅಡ್ವಾನ್ಸ್ ಶುಲ್ಕ ಹಾಗೂ ಇದೇ ರೀತಿಯ ಎಲ್ಲ ಶುಲ್ಕಗಳ ಒಟ್ಟು ಮೊತ್ತದ ಮೇಲೆ ತೆರಿಗೆ ನಿರ್ಧರಿಸಲಾಗುತ್ತದೆ.

ಬಿ) ಅನಿವಾಸಿ ಭಾರತೀಯರಿಗೆ ನೀಡುವ ಗಿಫ್ಟ್

ಭಾರತದ ನಿವಾಸಿಯೊಬ್ಬ ವಿದೇಶದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರಿಗೆ ನೀಡುವ ಹಣ, ಗಿಫ್ಟ್ ಅಥವಾ ಇನ್ನಾವುದೇ ರೀತಿಯ ಆಸ್ತಿ ವರ್ಗಾವಣೆಗಳಿಗೆ ಭಾರತದಲ್ಲಿ ಯಾವುದೇ ರೀತಿಯ ತೆರಿಗೆಯನ್ನು ವಿಧಿಸಲಾಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ಇಂಥ ವ್ಯವಹಾರಗಳಿಗೆ (ಜುಲೈ 5, 2019 ಅಥವಾ ಅದರ ನಂತರದ ವ್ಯವಹಾರಗಳು) ತೆರಿಗೆ ವಿಧಿಸಲು ಸರಕಾರ ಮುಂದಾಗಿದೆ.

ಸಿ) ಕಡ್ಡಾಯ ಟ್ಯಾಕ್ಸ್ ರಿಟರ್ನ್ ಫೈಲಿಂಗ್

ದೊಡ್ಡ ಮೊತ್ತದ ವ್ಯವಹಾರಗಳನ್ನು ನಡೆಸುವ ವ್ಯಕ್ತಿಗಳು ಈ ಮುನ್ನ ತೆರಿಗೆ ವ್ಯಾಪ್ತಿಗೆ ಒಳಪಡದಿದ್ದರೂ ಇನ್ನು ಮುಂದೆ ಕೆಲ ನಿರ್ದಿಷ್ಟ ಸಂದರ್ಭಗಳಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ. ಹಿಂದಿನ ವರ್ಷದಲ್ಲಿ ಈ ಕೆಳಗಿನ ಯಾವುದೇ ಸಂದರ್ಭಗಳು ಅವರಿಗೆ ಅನ್ವಯವಾಗುವಂತಿದ್ದರೆ ಅಂಥವರು ತೆರಿಗೆ ಪಾವತಿಸಬೇಕಾಗುತ್ತದೆ.

- ಒಂದು ಅಥವಾ ಅದಕ್ಕಿಂತ ಹೆಚ್ಚು ಚಾಲ್ತಿ ಖಾತೆಗೆ 1 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಡಿಪಾಸಿಟ್ ಮಾಡಿದಲ್ಲಿ; ಅಥವಾ

- ವಿದೇಶ ಪ್ರವಾಸಕ್ಕಾಗಿ 2 ಲಕ್ಷ ರೂ.ಗಳಿಗೂ ಅಧಿಕ ಮೊತ್ತ ಖರ್ಚು ಮಾಡಿದ್ದಲ್ಲಿ; ಅಥವಾ

- 1 ಲಕ್ಷ ರೂ.ಗಳಿಗೂ ಮೀರಿದ ವಿದ್ಯುತ್ ಬಿಲ್; ಅಥವಾ

- ಇನ್ನಿತರ ಯಾವುದೇ ಅನ್ವಯವಾಗುವ ನಿಯಮಗಳಡಿ ಬರುತ್ತಿದ್ದರೆ

ಡಿ) ಆಧಾರ ಹಾಗೂ ಪ್ಯಾನ್ ಜೋಡಣೆ

ಇನ್ನು ಮುಂದೆ ಪ್ಯಾನ್ ಹಾಗೂ ಆಧಾರ ಸಂಖ್ಯೆಗಳನ್ನು ಒಂದರ ಬದಲು ಮತ್ತೊಂದು ಬಳಸಬಹುದಾಗಿದೆ. ಪ್ಯಾನ್ ಹೊಂದಿರದ ವ್ಯಕ್ತಿಗಳು ಅಥವಾ ಪ್ಯಾನ್ ಹೊಂದಿದ್ದು ಅದನ್ನು ಆಧಾರ ಸಂಖ್ಯೆಗೆ ಲಿಂಕ್ ಮಾಡಲಾಗಿದ್ದಲ್ಲಿ ಅಂಥವರು ಪ್ಯಾನ್ ಸಂಖ್ಯೆ ನೀಡುವ ಅವಶ್ಯಕ ಸಂದರ್ಭಗಳಲ್ಲಿ ಅದರ ಬದಲು ಆಧಾರ ಸಂಖ್ಯೆಯನ್ನು ನೀಡಬಹುದಾಗಿದೆ.

3. ಎಲೆಕ್ಟ್ರಿಕ್ ಬೈಕ್‌ಗಳಿಗೆ ಉತ್ತೇಜನ

ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂಥ ವಾಹನ ಖರೀದಿಗೆ ಪಡೆಯುವ ಸಾಲದ ಮೇಲೆ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವನೆ ತರಲಾಗಿದೆ. ಏಪ್ರಿಲ್ 1, 2019 ರಿಂದ ಮಾರ್ಚ್ 31, 2023 ರ ಅವಧಿಯಲ್ಲಿ ಹಣಕಾಸು ಸಂಸ್ಥೆಗಳಿಂದ ಎಲೆಕ್ಟ್ರಿಕ್ ವಾಹನ ಕೊಳ್ಳಲು ಪಡೆಯಲಾಗುವ ಸಾಲಗಳ ಮೇಲೆ ಈ ವಿನಾಯಿತಿ ಅನ್ವಯವಾಗಲಿದೆ. ಇದಕ್ಕೆ 1.50 ಲಕ್ಷ ರೂ. ಮಿತಿ ವಿಧಿಸಲಾಗಿದ್ದು, ಈಗಾಗಲೇ ಇನ್ನೊಂದು ಎಲೆಕ್ಟ್ರಿಕ್ ವಾಹನ ಹೊಂದಿರಕೂಡದು ಎಂಬ ನಿಯಮ ವಿಧಿಸಲಾಗಿದೆ.

4. ಎಲ್ಲರಿಗೂ ಮನೆ ಯೋಜನೆ

ಸರಕಾರದ ಮಹತ್ವಾಕಾಂಕ್ಷಿ 'ಎಲ್ಲರಿಗೂ ಸೂರು' ಯೋಜನೆಯನ್ನು ಮತ್ತಷ್ಟು ವ್ಯಾಪಕಗೊಳಿಸಲು ಯಾವುದೇ ಹಣಕಾಸು ಸಂಸ್ಥೆಯಿಂದ ಪಡೆದ ಗೃಹ ಸಾಲದ ಮೇಲೆ ಹೆಚ್ಚುವರಿ 1.5 ಲಕ್ಷ ರೂ.ಗಳ ತೆರಿಗೆ ವಿನಾಯಿತಿಯನ್ನು ಘೋಷಿಸಲಾಗಿದೆ. ಏಪ್ರಿಲ್ 1, 2019 ರಿಂದ ಮಾರ್ಚ್ 31, 2020 ಅವಧಿಯಲ್ಲಿನ ಸಾಲಕ್ಕೆ ಈ ನಿಯಮ ಅನ್ವಯವಾಗುತ್ತಿದ್ದು, ಆಸ್ತಿಯ ಸ್ಟ್ಯಾಂಪ್ ಡ್ಯೂಟಿ 45 ಲಕ್ಷ ರೂ. ಮೀರಕೂಡದು ಹಾಗೂ ಸಾಲ ಪಡೆದ ದಿನದಂದು ಆ ವ್ಯಕ್ತಿಯ ಹೆಸರಲ್ಲಿ ಮತ್ತೊಂದು ವಾಸದ ಮನೆ ಇರಕೂಡದು ಎಂಬ ನಿಯಮಗಳನ್ನು ವಿಧಿಸಲಾಗಿದೆ.

5. ಎನ್‌ಪಿಎಸ್ ಉತ್ತೇಜನ ಕ್ರಮಗಳು

ಎನ್‌ಪಿಎಸ್ ಯೋಜನೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ, ಎನ್‌ಎಪಿಎಸ್ ಖಾತೆ ಮುಚ್ಚುವ ಸಂದರ್ಭದಲ್ಲಿ ಎನ್‌ಪಿಎಸ್ ಸಂಸ್ಥೆ ಸದಸ್ಯರಿಗೆ ಪಾವತಿಸುವ ಮೊತ್ತದ ಶೇ.40 ಮೊತ್ತದ ಬದಲಾಗಿ ಶೇ.60 ರಷ್ಟು ಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.

6. ತೆರಿಗೆ ವಿನಾಯಿತಿ

ಸಂಬಳ ಆದಾಯ, ಸೆಕ್ಯೂರಿಟಿಗಳ ಮೇಲಿನ ಕ್ಯಾಪಿಟಲ್ ಗೇನ್ಸ್, ಬ್ಯಾಂಕ್ ಬಡ್ಡಿ, ಡಿವಿಡೆಂಡ್ ಹಾಗೂ ತೆರಿಗೆ ವಿನಾಯಿತಿಗಳನ್ನು ಒಳಗೊಂಡ ಪೂರ್ವ ನಿರ್ಧರಿತ ಟ್ಯಾಕ್ಸ್ ರಿಟರ್ನ್‌ಗಳಿಗೆ ತೆರಿಗೆ ವಿನಾಯಿತಿಯನ್ನು ಪ್ರಸ್ತಾಪಿಸಲಾಗಿದೆ. ಸಂಬಂಧಿತ ಬ್ಯಾಂಕುಗಳು, ಸ್ಟಾಕ್ ಎಕ್ಸಚೇಂಜ್‌ಗಳು ಮತ್ತು ಮ್ಯೂಚುವಲ್ ಫಂಡ್ ಕಂಪನಿಗಳಿಂದ ಸಂಬಂಧಿತ ಮಾಹಿತಿಗಳನ್ನು ಸಂಗ್ರಹಿಸಿ ಈ ತೆರಿಗೆ ವಿನಾಯಿತಿ ಸೌಲಭ್ಯ ಜಾರಿಗೊಳಿಸಲು ನಿರ್ಧರಿಸಲಾಗಿದೆ.

7. ಇ-ಅಸೆಸ್‌ಮೆಂಟ್

ತೆರಿಗೆ ಇಲಾಖೆ ಹಾಗೂ ತೆರಿಗೆ ಪಾವತಿದಾರರ ಮಧ್ಯದ ಸಂವಹನವನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡಲು ಇ-ಅಸೆಸ್‌ಮೆಂಟ್ ಯೋಜನೆಯನ್ನು ತಯಾರಿಸಲಾಗುತ್ತಿದ್ದು, ಇದನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು.

8. ಕಪ್ಪು ಹಣ ನಿಷೇಧ ಕಾಯ್ದೆ

ಕಪ್ಪು ಹಣ ನಿಷೇಧ ಕಾಯ್ದೆಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಬ್ಲ್ಯಾಕ್ ಮನೀ ಆಕ್ಟ್ ನಲ್ಲಿ ಬದಲಾವಣೆ ತರಲಾಗಿದ್ದು, ಆದಾಯ ಗಳಿಸುವ ಆಯಾ ಹಣಕಾಸು ವರ್ಷದಲ್ಲಿ ವ್ಯಕ್ತಿಯ ನಿವಾಸದ ದೇಶವನ್ನು ಆಧರಿಸಿ ಬ್ಲ್ಯಾಕ್ ಮನೀ ಆಕ್ಟ್ ಅನ್ವಯವಾಗಲಿದೆ.

ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಸದನಗಳಲ್ಲಿ ಫೈನಾನ್ಸ್ ಬಿಲ್ ಪಾಸ್ ಆಗಿ ಅದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆಯ ಮುದ್ರೆ ಬಿದ್ದ ನಂತರ ಮೇಲೆ ತಿಳಿಸಲಾದ ಎಲ್ಲ ತೆರಿಗೆ ಬದಲಾವಣೆಗಳು ಜಾರಿಗೆ ಬರಲಿವೆ.

   
 
ಹೆಲ್ತ್