Back
Home » ಇತ್ತೀಚಿನ
ಎಲೆಕ್ಟ್ರಿಕ್ ಕಾರ್ ಮಾರ್ಕೆಟ್ ವಿಸ್ತರಣೆಗೆ ಸರ್ಕಾರದ ದಾಪುಗಾಲು..! ಜಿಎಸ್‌ಟಿ, ತೆರಿಗೆ ವಿನಾಯಿತಿ..!
Gizbot | 10th Jul, 2019 07:00 PM
 • ಫೇಮ್ (FAME)

  ಕೇಂದ್ರ ಸರ್ಕಾರ ಎರಡನೇ ಹಂತದ ಫೇಮ್ (FAME - Faster Adoption and Manufacturing of Hybrid and Electronic Vehicles in India) ಯೋಜನೆಯನ್ನು ಭಾರತದಲ್ಲಿ ಶೀಘ್ರದಲ್ಲಿಯೇ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಯೋಜನೆ National Electric Mobility Mission Plan 2020ನ್ನು ಯಶಸ್ವಿಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿಯೇ ಸರ್ಕಾರ 10 ಸಾವಿರ ಕೋಟಿ ರೂಪಾಯಿ ಹಣವನ್ನು ವಿನಿಯೋಗಿಸುತ್ತಿದೆ. ಇನ್ನು, ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್, ಇನ್ಮುಂದೆ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಒತ್ತು ನೀಡಬೇಕು. ಏಕೆಂದರೆ ಎಲೆಕ್ಟ್ರಿಕ್ ವಾಹನಗಳು ಮುಂದಿನ ಪೀಳಿಗೆಗೆ ಸುಸ್ಥಿರ ಚಲನಶೀಲತೆಯನ್ನು ನೀಡುತ್ತವೆ. ಒಟ್ಟಾರೆ, ಜೀವಮಾನದ ಮಾಲೀಕತ್ವದ ವೆಚ್ಚವನ್ನು ಕಡಿಮೆ ಮಾಡುವ ಎಲೆಕ್ಟ್ರಿಕ್ ವಾಹನಗಳನ್ನು ಗ್ರಾಹಕರಿಗೆ ಆಕರ್ಷಕವಾದ ಪರ್ಯಾಯವಾಗಿಸುವುದಕ್ಕೆ ಸೂಕ್ತ ನೀತಿ ತರುವುದು ಅಗತ್ಯವಾಗಿದದೆ ಎಂದು ಹೇಳಿದ್ದಾರೆ.


 • ಜಿಎಸ್‌ಟಿ ಇಳಿಕೆ

  ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ.12 ರಿಂದ ಶೇ.5ಕ್ಕೆ ಇಳಿಸುವುದಾಗಿ ಹಣಕಾಸು ಸಚಿವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಇದಷ್ಟೇ ಅಲ್ಲದೇ, ವಿದ್ಯುತ್ ವಾಹನಗಳನ್ನು ಗ್ರಾಹಕರ ಕೈಗೆಟುಕುವಂತೆ ಮಾಡಲು ವಾಹನಗಳ ಖರೀದಿಗೆ ತೆಗೆದುಕೊಂಡ ಸಾಲಗಳಿಗೆ ಪಾವತಿಸುವ ಬಡ್ಡಿಗೆ ಸರ್ಕಾರ 1.5 ಲಕ್ಷ ರೂಪಾಯಿಗಳ ಹೆಚ್ಚುವರಿ ಆದಾಯ ತೆರಿಗೆ ವಿನಾಯಿತಿಯನ್ನು ನೀಡುವುದಾಗಿಯೂ ಸರ್ಕಾರ ಘೋಷಿಸಿದ್ದು, ಈ ಮೌಲ್ಯ ಸಾಲದ ಅವಧಿಯಲ್ಲಿ ಸುಮಾರು 2.5ಲಕ್ಷ ರೂಪಾಯಿಗಳ ಲಾಭವಾಗುತ್ತದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.


 • ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ

  ಇನ್ನು, ಆರ್ಥಿಕ ಸಮೀಕ್ಷೆಯ ಪ್ರಕಾರ, ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯ ಪಾಲು ಭಾರತದಲ್ಲಿ ಕೇವಲ ಶೇ.0.06ರಷ್ಟಿದೆ. ಚೀನಾದಲ್ಲಿ ಶೇ.2 ಮತ್ತು ನಾರ್ವೆಯಲ್ಲಿ ಶೇ.39ರಷ್ಟು ಪ್ರಮಾಣದ ಮಾರುಕಟ್ಟೆಯನ್ನು ಎಲೆಕ್ಟ್ರಿಕ್ ವಾಹನಗಳು ಆಕ್ರಮಿಸಿಕೊಂಡಿವೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಕಡಿಮೆ ಇರುವುದಕ್ಕೆ ಕಾರಣ ಗುರುತಿಸುವುದಾದರೆ, ಚಾರ್ಜಿಂಗ್ ಮೂಲಸೌಕರ್ಯಗಳ ಕೊರತೆ ಮತ್ತು ಅಧಿಕ ವೆಚ್ಚ ಪ್ರಮುಖವಾಗಿ ಕಣ್ಣಿಗೆ ರಾಚುತ್ತದೆ. ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಪ್ರಮಾಣ ಹೆಚ್ಚಿಸಲು ವೇಗದ ಚಾರ್ಜಿಂಗ್ ಸೌಲಭ್ಯಗಳನ್ನು ಅಳವಡಿಸಬೇಕು ಎಂದು ಸಮೀಕ್ಷೆ ಹೇಳಿದೆ.


 • ಇವಿ ಮಾರುಕಟ್ಟೆಗೆ ಸವಾಲುಗಳು

  ರಿಚಾರ್ಜೆಬಲ್ ಬ್ಯಾಟರಿಗಳಿಂದ ಎಲೆಕ್ಟ್ರಿಕ್ ವಾಹನಗಳು ಕಾರ್ಯನಿರ್ವಹಿಸುತ್ತವೆ ಎಂದು ಪರಿಗಣಿಸಿದರೆ, ದೇಶದಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳ ಕೊರತೆ ಕಾಣುತ್ತದೆ. ಈ ಕೊರತೆಯೇ ಭಾರತದಲ್ಲಿ ಇವಿ ಮಾರುಕಟ್ಟೆ ವಿಸ್ತರಣೆಯಲ್ಲಿ ತೊಡಕಾಗುತ್ತಿದೆ. ಇದು ಒಂದು ಕಡೆಯಾದರೆ, ಲಾಜಿಸ್ಟಿಕ್ ಮಟ್ಟದಲ್ಲಿಯೂ ಕೂಡ ಅನೇಕ ಅನಾನುಕೂಲತೆಗಳಿದ್ದು, ಮಾರುಕಟ್ಟೆ ವಿಸ್ತರಣೆಗೆ ಅಡ್ಡಿಯನ್ನುಂಟು ಮಾಡುತ್ತಿವೆ. ಈ ಸಮಸ್ಯೆಗಳನ್ನು ಎದುರಿಸಲು ಮೂಲಸೌಕರ್ಯಗಳನ್ನು ಹೆಚ್ಚಿಸಬೆಕಾಗಿದ್ದು, ಖಾಸಗಿ ಹೂಡಿಕೆದಾರರು ಈ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ರೂಪುಗೊಳ್ಳಲಿರುವ ವಿದ್ಯುತ್ ವಾಹನಗಳು ದುಬಾರಿಯಾಗುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಮತ್ತು ಸಂಶೋಧನೆ ಮತ್ತು ವಾಹನದ ಅಭಿವೃದ್ಧಿಗಾಗಿ ಲಕ್ಷಾಂತರ ಹಣ ಹೂಡಿಕೆ ಮಾಡಿದ ಆಟೋಮೊಬೈಲ್ ಕಂಪನಿಗಳು ತಮ್ಮ ಹೂಡಿಕೆಯನ್ನು ವಾಪಸ್ ಪಡೆಯಲು ಹೆಚ್ಚಿನ ಬೆಲೆಗೆ ವಾಹನಗಳನ್ನು ಮಾರಾಟ ಮಾಡಲು ಪ್ರೇರೆಪಿಸುತ್ತದೆ. ಆದ್ದರಿಂದ ಜಿಎಸ್‌ಟಿ ಕಡಿತ ಮತ್ತು ಸಾಲಗಳ ಮೇಲಿನ ತೆರಿಗೆ ವಿನಾಯಿತಿ ಎಲೆಕ್ಟ್ರಿಕ್ ವಾಹನಗಳನ್ನು ಕೈಗೆಟುಕುವಂತೆ ಮಾಡುತ್ತದೆ. ಇನ್ನು, ಈ ನಿರ್ಧಾರಗಳು ಭಾರತದ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯನ್ನು ಹೆಚ್ಚಿಸಲು ಮಾತ್ರ ಸಹಾಯ ಮಾಡುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.


 • ಟಾಟಾ ಮೋಟಾರ್ಸ್, ಮಹೀಂದ್ರಾ

  ಈ ಹಿಂದೆ ದೇಶದಲ್ಲಿ ಇ ಮೊಬಿಲಿಟಿಯನ್ನು ಹೆಚ್ಚಿಸಲು ಆರಂಭಿಕ ಕ್ರಮಗಳನ್ನು ಸರ್ಕಾರ ಕೈಗೊಂಡಾಗ ಖಾಸಗಿ ಕಾರು ತಯಾರಕರ ಸಹಭಾಗಿತ್ವವನ್ನು ಸರ್ಕಾರ ಹೆಚ್ಚು ಉತ್ತೇಜಿಸುತ್ತಿದ್ದಿಲ್ಲ. ಇನ್ನು, ಇ ಕಾರ್‌ಗಳ ಉತ್ಪಾದನೆಯನ್ನು ತಮ್ಮನ್ನು ತೊಡಗಿಸಿಕೊಳ್ಳಲು ದೇಶದ ಪ್ರಮುಖ ಆಟೋಮೊಬೈಲ್ ಕಂಪನಿಗಳಾದ ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್ ಆಸಕ್ತಿ ವ್ಯಕ್ತಪಡಿಸಿವೆ. ಆದರೆ, ಮಾರುತಿ ಸುಜುಕಿ, ಹ್ಯುಂಡೈ ಮತ್ತು ಹೋಂಡಾ ಕಂಪನಿಗಳು ಭಾರತೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿಲ್ಲ.


 • ಮಹೀಂದ್ರಾ ಇವಿ ಪ್ಲಾಂಟ್

  ಮಹೀಂದ್ರಾ ಕಂಪನಿ ಕಳೆದ ವರ್ಷ ತನ್ನ ಚಕನ್ ಪ್ಲಾಂಟ್‌ನ ಎಲೆಕ್ಟ್ರಿಕ್ ವಾಹನ ಯೋಜನೆಯಲ್ಲಿ 500 ಕೋಟಿ ರೂ.ಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿತು. ಈ ಹೆಚ್ಚುವರಿ ಹೂಡಿಕೆಯನ್ನು ಎಲೆಕ್ಟ್ರಿಕ್ ವಾಹನಗಳು ಮತ್ತು ಸಂಬಂಧಿತ ಘಟಕಗಳಿಗೆ ಉತ್ಪನ್ನ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಗೆ ಬಳಸಿಕೊಳ್ಳಬೇಕಾಗಿತ್ತು. ಈಗಾಗಲೇ e-Verito and e2o PLUSನ್ನು ತಯಾರಿ ಮತ್ತು ಮಾರಾಟ ಮಾಡುತ್ತಿದೆ.


 • ಟಾಟಾ ಪ್ರಯತ್ನ

  ಮತ್ತೊಂದೆಡೆ, ಟಾಟಾ ಮೋಟಾರ್ಸ್ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ನ್ಯಾನೋ ರೂಪಾಂತರದಲ್ಲಿ ಕೆಲವು ವರ್ಷಗಳ ಹಿಂದೆ ಬಿಡುಗಡೆ ಮಾಡಿತ್ತು. ಆದರೆ, ಅದು ಜನರನ್ನು ತಲುಪುವಲ್ಲಿ ವಿಫಲವಾಯಿತು. ಇತ್ತೀಚೆಗೆ ಸೆಡಾನ್ ಟೈಗರ್‌ನ ಎಲೆಕ್ಟ್ರಿಕ್ ರೂಪಾಂತರವನ್ನು ಟಾಟಾ ಕಂಪನಿ ಬಿಡುಗಡೆ ಮಾಡಿತ್ತು. ಮತ್ತು ಈ ವಾಹನಕ್ಕೆ ಮಾರುಕಟ್ಟೆಯಿಂದ ಸಕಾರಾತ್ಮಕ ಪ್ರತಿಕ್ರಿಯೆಯೂ ಸಿಕ್ಕಿತು. ಇನ್ನು, ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಜಾಗ್ವಾರ್ ಲ್ಯಾಂಡ್ ರೋವರ್ ಯುಕೆಯಲ್ಲಿ ಎಲೆಕ್ಟ್ರಿಕ್ ಕಾರು ತಯಾರಿಸುವ ಯೋಜನೆಯನ್ನು ಪ್ರಕಟಿಸಿದೆ. ಇವೆಲ್ಲದರ ಹೊರತಾಗಿ ಸರ್ಕಾರ ಕಲ್ಪಿಸಿರುವ ಸುಧಾರಣೆಗಳು ಮತ್ತು ಹೂಡಿಕೆಗಳು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯ ವಿಸ್ತರಣೆ ಮಾಡುವ ಸಾಧ್ಯತೆಯನ್ನು ಮುಂದೆ ಸಮಯವೇ ನಿರ್ಧರಿಸುತ್ತದೆ.
ಕೆಲವು ದಿನಗಳ ಹಿಂದಷ್ಟೇ ತಮ್ಮ ಚೊಚ್ಚಲ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಚ್ಚರಿ ಅಂಶಗಳನ್ನು ದೇಶದ ಮುಂದಿಟ್ಟಿದ್ದು ನಿಮಗೆ ಗೊತ್ತೆ ಇದೆ. ಅದರಂತೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಉತ್ತೇಜನ ನೀಡುವ ಬಗ್ಗೆಯೂ ಮಾತನಾಡಿದ್ದಾರೆ.

ದೇಶವನ್ನು ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಯೋಜನೆಯನ್ನು ರೂಪಿಸಿದ್ದು, ಯೋಜನೆಯ ಭಾಗವಾಗಿ ಸರ್ಕಾರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹಣವನ್ನು ವಿನಿಯೋಗಿಸುತ್ತಿದೆ. ಮತ್ತು ಎಲೆಕ್ಟ್ರಿಕ್ ಕಾರುಗಳ ಖರೀದಿ ಉತ್ತೇಜಿಸಲು ತೆರಿಗೆ ವಿನಾಯಿತಿ ನೀಡುವ ಕ್ರಮಕ್ಕೆ ಮುಂದಾಗಿದೆ. ಇದಷ್ಟೇ ಅಲ್ಲದೇ, ಎಲೆಕ್ಟ್ರಿಕ್ ಕಾರುಗಳ ಬಿಡಿ ಭಾಗಗಳ ಆಮದಿಗೆ ಆಮದು ತೆರಿಗೆ ವಿನಾಯಿತಿಯನ್ನು ನೀಡುವ ಬಗ್ಗೆಯೂ ಸಹ ತಯಾರಕರಿಗೆ ಕೇಂದ್ರ ಸರ್ಕಾರ ಭರವಸೆ ನೀಡಿದೆ.

   
 
ಹೆಲ್ತ್