Back
Home » ಸುದ್ದಿ
ಆರ್ ಟಿಐ ಕಾರ್ಯಕರ್ತನ ಕೊಲೆ, ಬಿಜೆಪಿ ಮಾಜಿ ಸಂಸದನಿಗೆ ಜೀವಾವಧಿ ಶಿಕ್ಷೆ
Oneindia | 12th Jul, 2019 10:10 AM

ಅಹಮದಾಬಾದ್, ಜುಲೈ 12: ಆರ್ ಟಿಐ ಕಾರ್ಯಕರ್ತ ಅಮಿತ್ ಜೆಥ್ವಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಾಜಿ ಸಂಸದ ದಿನು ಸೋಲಂಕಿ ಸೇರಿದಂತೆ ಎಲ್ಲಾ 7 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಗುಜರಾತ್ ಹೈಕೋರ್ಟಿನ ಹೊರಗಡೆ ಜುಲೈ 20, 2010ರಂದು ಅಮಿತ್ ಅವರನ್ನು ಹತ್ಯೆ ಮಾಡಲಾಗಿತ್ತು. 2009ರಿಂದ 2014ರ ಅವಧಿಯಲ್ಲಿ ಗುಜರಾತಿನ ಜುನಾಗಢ ಕ್ಷೇತ್ರದಲ್ಲಿ ಬಿಜೆಪಿ ಸಂಸದರಾಗಿದ್ದ ಸೋಲಂಕಿ ಅವರು ತಮ್ಮ ಕಸಿನ್ ಶಿವ ಸೋಲಂಕಿ ಹಾಗೂ ಇನ್ನು ಐವರು ಜೊತೆ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ಘೋಷಿಸಲಾಗಿದೆ.

ದಿನು ಸೋಲಂಕಿ ಅವರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಜೆಥ್ವಾ ಅವರು ಬಹಿರಂಗಪಡಿಸಿದ್ದರು. ಸೋಲಂಕಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿ, ಹೈಕೋರ್ಟಿನಲ್ಲಿ ವಾದಿಸಿದ್ದರು. ಏಷ್ಯಾದ ಸಿಂಹಗಳ ಧಾಮ ಗಿರ್ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಗಣಿಗಾರಿಕೆ ನಡೆಸಿದ ಆರೋಪವನ್ನು ಸೋಲಂಕಿ ಮೇಲೆ ಹೊರೆಸಲಾಗಿತ್ತು.

ದಿನು ಸೋಲಂಕಿ ಅವರ ಜೊತೆಗೆ ಶೈಲೇಶ್ ಪಾಂಡ್ಯ, ಬಹದೂರ್ ಸಿಂಗ್ ವಧೇರ್, ಪಂಚನ್ ದೇಸಾಯಿ, ಸಂಜಯ್ ಚೌಹಾಣ್ ಹಾಗೂ ಉದಾಜಿ ಠಾಕೂರ್ ಅವರಿಗೂ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ.

ಪ್ರಕರಣದ ವಿಚಾರಣೆ ಹಳ್ಳ ಹಿಡಿಯುತ್ತಿದ್ದಂತೆ, ಮೃತ ಜೆಥ್ವಾ ಅವರ ತಂದೆ ಭಿಕಾಭಾಯಿ ಜೆಥ್ವಾ ಅವರು ಕಾನೂನು ಹೋರಾಟ ಮುಂದುವರೆಸಿದರು. ಘಟನೆ ನಡೆದ ವೇಳೆ ಕೋರ್ಟ್ ಆವರಣದಲ್ಲಿದ್ದ 105ಕ್ಕೂ ಅಧಿಕ ಮಂದಿ ಹತ್ಯೆಗೆ ಸಾಕ್ಷಿಯಾಗಿದ್ದರು.ಎಲ್ಲರನ್ನು ಸೋಲಂಕಿ ಅವರು ಬೆದರಿಸಿದ್ದಾರೆ ಎಂಬ ಅಂಶದ ಮೇಲೆ ವಾದಿಸಿದರು. ಕೊನೆಗೂ ಜೆಥ್ವಾ ಹತ್ಯೆ ಮಾಡಿದ ಅಪರಾಧಿಗಳಿಗೆ ಶಿಕ್ಷೆ ಸಿಕ್ಕಿದೆ.

   
 
ಹೆಲ್ತ್