Back
Home » ಸುದ್ದಿ
ರನ್ನಿಂಗ್ ಸ್ಟಾರ್ ಭೈರತಿ ಬಸವರಾಜ್ ಅವಿರೋಧವಾಗಿ ಕ್ರೀಡಾ ಸಚಿವರಾಗಲಿ
Oneindia | 12th Jul, 2019 10:53 AM

ಸರ್ವೋಚ್ಚ ನ್ಯಾಯಾಲಯದ ಗಡುವನ್ನು ಸಮಯಕ್ಕೆ ಸರಿಯಾಗಿ ಗುರಿಮುಟ್ಟಲು ಕೆ ಆರ್ ಪುರಂ ಕಾಂಗ್ರೆಸ್ ಶಾಸಕ ಭೈರತಿ ಬಸವರಾಜು, ಗುರುವಾರ (ಜುಲೈ 12) ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಓಡಿಕೊಂಡು ಬಂದು ಭೇಟಿ ಮಾಡಿದ್ದು ವ್ಯಾಪಕ ಟ್ರೋಲ್ ಆಗಲು ಕಾರಣವಾಗಿದೆ.

ಗುರುವಾರ ಸಂಜೆ ಆರು ಗಂಟೆಯೊಳಗೆ ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ವೀಕರಿಸಿ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸುಪ್ರೀಂಕೋರ್ಟ್ ಅದೇಶ ನೀಡಿತ್ತು. ರಾಜೀನಾಮೆ ಸ್ವೀಕರಿಸುವಲ್ಲಿ ಸ್ಪೀಕರ್ ವಿಳಂಬ ಧೋರಣೆ ತಾಳುತ್ತಿದ್ದಾರೆಂದು ಅತೃಪ್ತರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.

Live Updates: ಎಲ್ಲರ ಚಿತ್ತ ಸುಪ್ರೀಂಕೋರ್ಟ್ ಆದೇಶದತ್ತ

ಸುಪ್ರೀಂ ಆದೇಶದಿಂದ ಖುಷಿಯಾದ ಅತೃಪ್ತ ಶಾಸಕರು ಮುಂಬೈನ ಐಷಾರಾಮಿ ಹೊಟೇಲ್ ನಿಂದ ತರಾತುರಿಯಲ್ಲಿ ಬೆಂಗಳೂರು ವಿಮಾನ ಹತ್ತಿದ್ದರು. ಗಡುವು ಮುಗಿಯುವ 20-30 ಇರುವಾಗ ಇವರೆಲ್ಲಾ ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.

ವಿಶೇಷ ಬಸ್ ನಲ್ಲಿ ವಿಮಾನ ನಿಲ್ದಾಣದಿಂದ ವಿಧಾನಸೌಧದತ್ತ ಅತೃಪ್ತರು ಆಗಮಿಸುತ್ತಿದ್ದರು, ಇವರಿಗೆಲ್ಲಾ ಸಿಗ್ನಲ್ ಫ್ರೀ ಜೊತೆಗೆ, ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಗಡುವಿನ ಆರು ಗಂಟೆ ಮುಗಿದು ಐದು ನಿಮಿಷದ ನಂತರ ಇವರನ್ನು ಕರೆದುಕೊಂಡು ಬರುತ್ತಿದ್ದ ಬಸ್ ಶಕ್ತಿಕೇಂದ್ರಕ್ಕೆ ಬಂದು ತಲುಪಿತು.

ಗಡುವು ಮೀರಿದ್ದರಿಂದ ಎಲ್ಲಾ ಅತೃಪ್ತರು ಸ್ಪೀಕರ್ ಅವರನ್ನು ಅರ್ಜೆಂಟಾಗಿ ಭೇಟಿಯಾಗುವ ಅನಿವಾರ್ಯತೆಯಲ್ಲಿ ಇದ್ದಿದ್ದರಿಂದ, ಅವರ ಕಚೇರಿಯತ್ತ ದೌಡಾಯಿಸುತ್ತಿದ್ದರು. ಅದರಲ್ಲಿ, ಶಾಸಕ ಭೈರತಿ ಬಸವರಾಜ್ ಓಡಿ ಬಂದು ಸ್ಪೀಕರ್ ಕಚೇರಿಯನ್ನು ಎಲ್ಲರಿಗಿಂತ ಮೊದಲು ಬಂದು ತಲುಪಿದರು.

ಭೈರತಿ ಓಡಿಕೊಂಡು ಬರುತ್ತಿದ್ದಾಗ, ಬೇರೆ ದಾರಿಯಿಲ್ಲದೇ ಪೊಲೀಸರೂ ಕೂಡಾ ಅವರ ಹಿಂದೆ ಓಡುತ್ತಾ ಬರಬೇಕಾಯಿತು. ಭೈರತಿ ಬಸವರಾಜು ಅವರ ಈ ರನ್ನಿಂಗ್ ರೇಸ್, ಸಾಮಾಜಿಕ ತಾಣದಲ್ಲಿ ವ್ಯಾಪಕ ಟ್ರೋಲ್ ಆಗುತ್ತಿದೆ. ಅವರಿಗೆ, ಕೆಲವರು ರನ್ನಿಂಗ್ ಸ್ಟಾರ್ ಬಿರುದುಕೊಟ್ಟರೆ, ಜನಸಾಮಾನ್ಯರ ಸಮಸ್ಯೆಗೂ ಇದೇ ಕಾಳಜಿವಹಿಸುತ್ತಾರಾ ಎಂದು ಪ್ರಶ್ನಿಸುತ್ತಿದ್ದಾರೆ.

ಬಿಜೆಪಿ ಜೊತೆ ಸದ್ಯ ಮೈತ್ರಿ ಇಲ್ಲ, ಎಚ್ ಡಿ ರೇವಣ್ಣ: ಆಮೇಲೆ?

ಇನ್ನೂ ಕೆಲವರು, ಭೈರತಿ ಬಸವರಾಜು ಅವರನ್ನು ಪಕ್ಷಾತೀತವಾಗಿ, ಅವಿರೋಧವಾಗಿ ರಾಜ್ಯದ ಕ್ರೀಡಾ ಸಚಿವರನ್ನಾಗಿ ನೇಮಿಸಲಿ ಎಂದು ಕಾಲೆಳೆಯುತ್ತಿದ್ದಾರೆ. ಬಹುಷಃ ಗುರುವಾರ, ಭೈರತಿ ಓಡಿ ಬಂದು ರಾಜೀನಾಮೆ ಸಲ್ಲಿಸಿದ್ದನ್ನು, ಸದ್ಯದ ಮಟ್ಟಿಗೆ ರಾಜ್ಯದ ಜನತೆ ಮರೆಯುವುದಿಲ್ಲ.

   
 
ಹೆಲ್ತ್