Back
Home » ಆರೋಗ್ಯ
ಪ್ರೋಟೀನ್ ಪುಡಿ: ಇದರಲ್ಲಿ ಬೆರೆಸಲು ಯಾವುದು ಹೆಚ್ಚು ಸೂಕ್ತ? ನೀರೋ ಹಾಲೋ?
Boldsky | 30th Jul, 2019 11:52 AM

ನಮ್ಮ ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಾಗಿ ಬೇಕಾಗಿರುವ ಪ್ರೋಟೀನ್ ದೊಡ್ಡ ಗಾತ್ರದ ಪೋಷಕಾಂಶವಾಗಿದೆ. ಈ ಅಗತ್ಯತೆಯನ್ನು ಕೆಲವಾರು ಆಹಾರಗಳ ಮೂಲಕ ಪೂರೈಸಿಕೊಳ್ಳಬಹುದಾದರೂ ಇಂದಿನ ದಿನಗಳಲ್ಲಿ ಇನ್ನೂ ಸುಲಭರೀತಿಯಲ್ಲಿ ಪ್ರೋಟೀನ್ ಶೇಕ್ ಎಂಬ ಪ್ರೋಟೀನ್ ಪುಡಿ ಬೆರೆಸಿದ ಪೇಯವನ್ನು ಸೇವಿಸುವ ಮೂಲಕ ಪಡೆಯಬಹುದು. ಇಂದು ಹೆಚ್ಚು ಜನಪ್ರಿಯವಾಗಿರುವ ಈ ಪೇಯ ದಿನದ ಒಂದು ಹೊತ್ತಿನ ಆಹಾರದ ಭಾಗವೇ ಆಗಿಬಿಟ್ಟಿದೆ.

ಅದರಲ್ಲೂ ವ್ಯಾಯಾಮಶಾಲೆಯಲ್ಲಿ ನಿತ್ಯವೂ ವ್ಯಾಯಾಮ ಮಾಡುವವರಿಗೆ ಹೆಚ್ಚು ಫಲದಾಯಕವಾಗಿದೆ. ಸಾಮಾನ್ಯವಾಗಿ ಪ್ರೋಟೀನ್ ಮಾಂಸಾಹಾರದ ಮೂಲಕ ಹೆಚ್ಚು ಲಭಿಸುವ ಆಹಾರವಾಗಿದ್ದು ಇದುವರೆಗೆ ಮಿತವಾದ ಆಯ್ಕೆಗಳಿದ್ದ ಸಸ್ಯಾಹಾರಿಗಳಿಗೆ ಈ ಪೇಯ ಹೆಚ್ಚು ಪ್ರಯೋಜನಕಾರಿಯಾಗಿದೆ.

ಪ್ರೋಟೀನ್ ಎಂದರೇನು?

ಇದೊಂದು ಅವಶ್ಯಕ ಅಮೈನೋ ಆಮ್ಲವಾಗಿದೆ ಹಾಗೂ ಮಾನವ ದೇಹದ ಅಂಗಾಶಗಳನ್ನು ರಚಿಸಲು ಮತ್ತು ಸವೆದ ಅಂಗಾಂಶಗಳನ್ನು ದುರಸ್ತಿಗೊಳಿಸಲು ಬಳಸಲ್ಪಡುವ ಮೂಲಧಾತುಗಳಾಗಿವೆ.

ನಮ್ಮ ದೇಹದ ಮೂಳೆಗಳು, ಸ್ನಾಯುಗಳು, ಅಸ್ಥೆಮಜ್ಜೆ, ತ್ವಚೆ ಮತ್ತು ರಕ್ತ ಆರೋಗ್ಯಕರವಾಗಿರಲು ಪ್ರೋಟೀನ್ ಅಗತ್ಯವಾಗಿ ಬೇಕು. ಕಿಣ್ವ, ರಸದೂತಗಳು ಹಾಗೂ ಇತರ ಅಗತ್ಯ ರಾಸಾಯನಿಕಗಳ ತಯಾರಿಕೆಗೆ ಪ್ರೋಟೀನ್ ಅಗತ್ಯವಾಗಿ ಬೇಕು. ಮೊಟ್ಟೆ, ಮೊಸರು, ಮಾಂಸ ಹಾಗೂ ಮೀನು ಪ್ರೋಟೀನ್ ಸಮೃದ್ಧವಾಗಿರುವ ಆಹಾರಗಳಾಗಿವೆ.

ಹಾಲಿನಲ್ಲಿ ಎರಡು ಬಗೆಯ ಪ್ರೋಟೀನುಗಳಿವೆ: ಕೇಸಿನ್ ಮತ್ತು ವ್ಹೇ. (casein and whey)

ಹಾಲಿನಿಂದ ಇವೆರಡು ಪ್ರೋಟೀನುಗಳನ್ನು ಪ್ರತ್ಯೇಕಿಸಿದಾಗ ಲಭಿಸುವ ಚೀಸ್ ನ ಉಪ ಉತ್ಪನ್ನಗಳ ರೂಪದಲ್ಲಿ ದೊರಕುತ್ತವೆ. ಹಾಲಿಗಿಂತಲೂ ಹಾಲಿನಿಂದ ಪ್ರತ್ಯೇಕಿಸಲ್ಪಟ್ಟ ವ್ಹೇ ಪ್ರೋಟೀನ್ ಅತಿ ಹೆಚ್ಚು ಆರೋಗ್ಯಕರ, ಏಕೆಂದರೆ ಇದರಲ್ಲಿ ಒಂಭತ್ತು ಬಗೆಯ ಅವಶ್ಯಕ ಅಮೈನೋ ಆಮ್ಲಗಳಿವೆ ಹಾಗೂ ಲ್ಯಾಕ್ಟೋಸ್ ಪ್ರಮಾಣ ಅತಿ ಕಡಿಮೆ ಇರುತ್ತದೆ.

ಅಷ್ಟಕ್ಕೂ ಪ್ರೋಟೀನ್ ಪುಡಿಯ ಅಗತ್ಯವೇನಿದೆ?

ಉತ್ತಮ ಗುಣಮಟ್ಟದ ಪ್ರೋಟೀನ್ ಪುಡಿಯಲ್ಲಿ ವ್ಹೇ ಪ್ರೋಟೀನ್ ಇರುತ್ತದೆ ಹಾಗೂ ಇದು ದೇಹಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ದೈನಂದಿನ ಪ್ರೋಟೀನ್ ಸೇವನೆಯ ಜೊತೆಗೇ ಸುಮಾರು 25-30 ಗ್ರಾಂನಷ್ಟು ಪ್ರೋಟೀನ್ ಪುಡಿಯನ್ನು ಹೆಚ್ಚುವರಿಯಾಗಿ ಸೇವಿಸುವ ಮೂಲಕ ದೇಹದಾರ್ಢ್ಯತೆಯ ಗುರಿಗಳನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಗುತ್ತದೆ ಹಾಗೂ ಅಹಾರದ ಸಂತೃಪ್ತಿಯೂ ಲಭಿಸುತ್ತದೆ.

ಪ್ರೋಟೀನ್ ಪುಡಿಯನ್ನು ಬೆರೆಸಿ ಕುಡಿಯಲು ಯಾವುದು ಸೂಕ್ತ? ನೀರೋ, ಹಾಲೋ?

ಪ್ರೋಟೀನ್ ಶೇಕ್ ಪೇಯವನ್ನು ತಯಾರಿಸಲು ಪ್ರೋಟೀನ್ ಪುಡಿಯನ್ನು ನೀರಿನೊಂದಿಗೆ ಅಥವಾ ಹಾಲಿನೊಂದಿಗೆ ಬೆರೆಸಬಹುದು. ಆದರೆ ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕರ ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಈ ಆಯ್ಕೆ ಕುಡಿಯುವವರ ರುಚಿಯನ್ನು ಆಧರಿಸಿರುತ್ತದೆ. ಆದರೂ, ದೇಹದಾರ್ಢ್ಯತೆಯ ಗುರಿ ಹಾಗೂ ಈಗಿರುವ ಶಾರೀರ ಹೇಗಿದೆ ಎಂಬ ಅಂಶಗಳನ್ನು ಪರಿಗಣಿಸಿ ಈ ಆಯ್ಕೆಯನ್ನು ಖಚಿತಪಡಿಸಬಹುದು. ನಿಮ್ಮ ದೇಹದಾರ್ಢ್ಯತೆಯ ಗುರಿ, ಹುರಿಗಟ್ಟಿದ ಸ್ನಾಯುಗಳನ್ನು ಹೊಂದುವುದು, ಸ್ನಾಯುಗಳನ್ನು ಹೆಚ್ಚಿಸುವುದು, ದೇಹದ ತೂಕವನ್ನು ಹೆಚ್ಚಿಸುವುದು ಮೊದಲಾದ ಆದ್ಯತೆಗಳನ್ನು ಪರಿಗಣಿಸಿ ಈ ಪ್ರೋಟೀನ್ ಪೇಯವನ್ನು ಸಿದ್ಧಪಡಿಸಬಹುದು.

ಹಾಲಿನೊಂದಿಗೆ ಬೆರೆಸಿದ ಪ್ರೋಟೀನ್ ಪುಡಿ

ಈ ಪುಡಿಯನ್ನು ಹಾಲಿನಲ್ಲಿ ಬೆರೆಸಿದಾಗ ಈ ಪೇಯ ಹೆಚ್ಚು ಶಕ್ತಿಭರಿತವಾಗುತ್ತದೆ. ಹಾಲಿನಲ್ಲಿ ಈಗಾಗಲೇ ನೈಸರ್ಗಿಕ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ. ಈಗ ಬೆರೆತಿರುವ ವ್ಹೇ ಪ್ರೋಟೀನ್ ಪುಡಿ ಈ ಹಾಲನ್ನು ಇನ್ನಷ್ಟು ಶಕ್ತಿಯುತವಾಗಿಸಿ ಸ್ನಾಯುಗಳನ್ನು ವೃದ್ದಿಸಲು ಮತ್ತು ತೂಕವನ್ನು ಹೆಚ್ಚಿಸಲೂ ನೆರವಾಗುತ್ತದೆ. ಒಂದು ವೇಳೆ ನೀವು ತೂಕವನ್ನು ಇಳಿಸುವ ಇರಾದೆಯನ್ನು ಹೊಂದಿದ್ದರೆ ನೀವು ಪ್ರೋಟೀನ್ ಪುಡಿ ಮತ್ತು ಹಾಲನ್ನು ಜೊತೆಯಾಗಿ ಸೇವಿಸಬಾರದು. ಬದಲಿಗೆ ಹಾಲಿನ ಪುಡಿಯಿಂದ ತಯಾರಿಸಿದ ಅಥವಾ ಹಸುವಿನ ಹಾಲಿನಿಂದ ತಯಾರಿಸಿದ ಪ್ರೋಟೀನ್ ಶೇಕ್ ಸೇವಿಸಬಹುದು.

ಸಾಮಾನ್ಯವಾಗಿ ಪ್ರೋಟೀನ್ ಪೇಯ ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಈ ಅವಧಿಯಲ್ಲಿ ನಿಧಾನವಾಗಿ ದೇಹ ಪೋಷಕಾಂಶಗಳನ್ನು ಹೀರಿಕೊಂಡು ಹೆಚ್ಚು ಹೊತ್ತು ವ್ಯಾಯಾಮ ನಡೆಸಲು ಸಾಧ್ಯವಾಗುತ್ತದೆ. ಆದರೆ ನಮ್ಮ ದೇಹ ಈ ಪೇಯದ ಒಟ್ಟೂ ಪ್ರೋಟೀನ್ ನಲ್ಲಿ ಒಂದಂಶವನ್ನು ಮಾತ್ರವೇ ಬಳಸಿಕೊಳ್ಳುತ್ತದೆ ಹಾಗೂ ಉಳಿದ ಪ್ರಮಾಣ ಬಳಸಲ್ಪಡದೇ ವ್ಯರ್ಥವಾಗುತ್ತದೆ. ಆದರೂ, ಈ ಪ್ರಮಾಣವೇ ದೇಹದ ಅಗತ್ಯಕ್ಕೆ ಬೇಕಾದಷ್ಟಾಗುತ್ತದೆ.

ನೀರಿನೊಂದಿಗೆ ಬೆರೆಸಿದ ಪ್ರೋಟೀನ್ ಪುಡಿ

ತೂಕ ಇಳಿಸಲು ಪ್ರೋಟೀನ್ ಅತ್ಯುತ್ತಮ ಪೋಷಕಾಂಶವಾಗಿದೆ. ಹಾಗಾಗಿ ತೂಕ ಇಳಿಸುವವರು ಹೆಚ್ಚು ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟುಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸುವುದು ಉತ್ತಮ.

*ಒಂದು ವೇಳೆ ನೀವು ತೂಕವನ್ನು ಇನ್ನಷ್ಟು ಶೀಘ್ರವಾಗಿ ಕಳೆದುಕೊಳ್ಳಬೇಕೆಂದಿದ್ದರೆ ನಿಮ್ಮ ಪ್ರೋಟೀನ್ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಇದರಲ್ಲಿ ಉತ್ತಮ ಪ್ರಮಾಣದ ಹಣ್ಣು ಮತ್ತು ತರಕಾರಿಗಳನ್ನೂ ಸೇರಿಸಬೇಕು. ಇದು ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುವುದರ ಜೊತೆಗೇ ತೂಕ ಇಳಿಸುವ ಗತಿಯನ್ನೂ ಶೀಘ್ರವಾಗಿಸುತ್ತದೆ.

*ಅಲ್ಲದೇ ನೀರಿನೊಂದಿಗೆ ಬೆರೆಸಿದ ಪ್ರೊಟೀನ್ ಪುಡಿ ಜೀರ್ಣಿಸಿಕೊಳ್ಳುವುದು ಸುಲಭವಾಗುತ್ತದೆ ಹಾಗೂ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಸುಲಭವಾಗಿ ಲಭಿಸುತ್ತವೆ. ಇದು ವ್ಯಾಯಾಮದ ಬಳಿಕ ಬಳಲಿದ ಸ್ನಾಯುಗಳಿಗೆ ಮರುಚೇತನ ನೀಡಲು ಸಾಧ್ಯವಾಗುತ್ತದೆ.

*ಅಲ್ಲದೇ ನೀರು ನಮ್ಮ ದೇಹಕ್ಕೆ ಹೆಚ್ಚು ಆರ್ದ್ರತೆ ನೀಡಲು ಅಗತ್ಯವಾಗಿದೆ ಹಾಗೂ ನೀರಿನಂಶವನ್ನು ಉಳಿಸಿಕೊಳ್ಳಲು ಪ್ರೋಟೀನ್ ನೊಂದಿಗೆ ನೀರನ್ನು ಬೆರೆಸುವುದು ಹೆಚ್ಚು ಸೂಕ್ತವಾಗಿದೆ.

ಸಾಮಾನ್ಯವಾಗಿ ಸಿದ್ಧರೂಪದಲ್ಲಿ ಸಿಗುವ ಪ್ರೋಟೀನ್ ಪುಡಿಯ ಪ್ಯಾಕೆಟ್ಟುಗಳಲ್ಲಿ ಎಷ್ಟು ಹಾಲು ಬೆರೆಸಬೇಕು ಅಥವಾ ನೀರು ಬೆರೆಸಬೇಕು ಎಂಬ ಮಾಹಿತಿಯನ್ನು ಮುದ್ರಿಸಲಾಗಿರುತ್ತದೆ. ಹಾಲಿನಲ್ಲಿ ನೈಸರ್ಗಿಕವಾಗಿಯೇ ಇರುವ ಪ್ರೊಟೀನ್ ಮತ್ತು ಕೊಬ್ಬುಗಳು ಈಗ ಬೆರೆಸಿದ ಪ್ರೋಟೀನ್ ಪುಡಿಯ ಬೆರೆಸುವಿಕೆಯಿಂದ ಇನ್ನಷ್ಟು ಪೌಷ್ಟಿಕವಾಗುತ್ತದೆ. ಒಂದು ವೇಳೆ ನೀವು ಕೊಬ್ಬು ರಹಿತ ಆಹಾರವನ್ನು ಸೇವಿಸುತ್ತಿದ್ದರೆ ಅಥವಾ ನಿಮ್ಮ ಆಹಾರದಲ್ಲಿ ಈಗಾಗಲೇ ಪೋಷಕಾಂಶಗಳಿದ್ದರೆ ನಿಮಗೆ ಈ ಹೆಚ್ಚುವರಿ ಪೋಷಕಾಂಶವಿರುವ ಆಹಾರದ ಅಗತ್ಯವಿಲ್ಲ. ಒಂದು ವೇಳೆ ಆಹಾರದ ರುಚಿ ನಿಮ್ಮ ಆದ್ಯತೆಯಾಗಿದ್ದರೆ ನೀವು ಪ್ರೋಟೀನ್ ಪೇಯದಲ್ಲಿ ಬೆರೆಸಲು ಹಾಲನ್ನು ಬೆರೆಸಬಹುದು. ಇದು ಕೇವಲ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ನಿಮ್ಮ ಪೋಷಕಾಂಶದ ಅಗತ್ಯತೆಯನ್ನೂ ಪೂರೈಸುತ್ತದೆ.

ಅಲ್ಲದೇ, ವ್ಯಾಯಾಮವನ್ನೇ ಮಾಡದೆ ಪ್ರೋಟೀನ್ ಪೇಯವನ್ನು ಸೇವಿಸುವುದು ತೀರಾ ಅಪಾಯಕರ! ಅಲ್ಲದೇ ಪೇಯವನ್ನು ಸೇವಿಸಬೇಕಾದ ಸಮಯವನ್ನು ಪರಿಗಣಿಸುವುದೂ ಅಗತ್ಯವಾಗಿದೆ. ಹಾಗಾಗಿ, ವ್ಯಾಯಾಮದ ಬಳಿಕ ಬಳಲಿದ್ದ ಸಮಯದಲ್ಲಿ ಮಾತ್ರವೇ ಈ ಪೇಯವನ್ನು ಸೇವಿಸುವ ಮೂಲಕ ಗರಿಷ್ಟ ಪ್ರಯೋಜನಗಳನ್ನು ಪಡೆಯಬಹುದು.

 
ಹೆಲ್ತ್