Back
Home » ಸಮ್ಮಿಲನ
ಎರಡೇ ತಿಂಗಳಲ್ಲಿ 200ಕ್ಕೂ ಅಧಿಕ ಲೈಂಗಿಕ ಕಿರುಕುಳ ಪರಿಹರಿಸಿದ ಲೇಡಿ ಪೋಲೀಸ್!
Boldsky | 6th Aug, 2019 10:00 AM

ಮಹಿಳೆ ಯಾವ ದೇಶದಲ್ಲಿಯೇ ಇರಲಿ. ಅವಳಿಗೆ ಸಿಗುವ ಗೌರವ ಹಾಗೂ ಸ್ಥಾನಮಾನಗಳು ಸರಿಯಾಗಿ ದೊರಕಬೇಕು. ಇಲ್ಲವಾದರೆ ಅವಳ ಮೇಲೆ ದೌರ್ಜನ್ಯ ಹಾಗೂ ಸಾಕಷ್ಟು ಕಿರುಕುಳಗಳು ನಡೆಯುತ್ತವೆ. ಅದರಲ್ಲೂ ಲೈಂಗಿಕ ಕಿರುಕುಳಗಳು ಎಗ್ಗಿಲ್ಲದೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ನಿತ್ಯವೂ ಮಹಿಳೆ ಅವಮಾನ, ನೋವು, ಮಾನಸಿಕ ಒತ್ತಡದಲ್ಲಿಯೇ ಕಣ್ಣೀರು ಇಡಬೇಕಾದಂತಹ ಪರಿಸ್ಥಿತಿಗಳು ಎದುರಾಗುತ್ತವೆ. ನಿಜ, ಯಾವ ಪ್ರದೇಶದಲ್ಲಿ ಈ ರೀತಿಯ ಅನ್ಯಾಯಗಳು ಮಹಿಳೆಯ ವಿರುದ್ಧ ಜರುಗುವುದೋ ಅಲ್ಲಿ ಸಮಸ್ಯೆಗಳು ಹೆಚ್ಚಾಗಿರುತ್ತವೆ.

ಇಂತಹ ಸ್ಥಿತಿಗಳು ಸಾಮಾನ್ಯವಾಗಿ ಪುರುಷ ಪ್ರಧಾನ ಸಮಾಜದಲ್ಲಿ ಹೆಚ್ಚಾಗಿರುತ್ತವೆ ಎಂದು ಹೇಳಬಹುದು. ಅಂತಹ ರಾಷ್ಟ್ರಗಳಲ್ಲಿ ಒಂದಾದ ಪಾಕಿಸ್ತಾನವು ಇದಕ್ಕೆ ಹೊರತಾಗಿಲ್ಲ. ಪಾಕಿಸ್ತಾನದಲ್ಲಿ ಮಹಿಳೆಯರ ಮೇಲೆ ಸಾಕಷ್ಟು ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಲಾಗುತ್ತದೆ. ಅಂತಹ ಸ್ಥಳದಲ್ಲಿ ಒಬ್ಬ ದಿಟ್ಟ ಮಹಿಳೆ ತನ್ನ ಬುದ್ಧಿಶಕ್ತಿ ಹಾಗೂ ಸಾಮಥ್ರ್ಯದಿಂದ ಸ್ಟೇಷನ್ ಹೌಸ್ ಆಫಿಸರ್ (ಎಸ್ ಎಚ್ ಓ) ಆಗಿ ಮಹಿಳಾ ಸಬಲೀಕರಣದತ್ತ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದ್ದಾಳೆ.

ಹೌದು, ಪಾಕಿಸ್ತಾನದ ಮುಲ್ತಾನ್ ಅಲ್ಲಿರುವ ಪಾಕ್ಪಟ್ಟನ್ ಜಿಲ್ಲಾ ಪೊಲೀಸ್ ಇಲಾಖೆ ಇತ್ತೀಚೆಗೆ ಕುಲ್ಸೂಮ್ ಫಾತಿಮಾ ಅವರನ್ನು ಸ್ಟೇಷನ್ ಹೌಸ್ ಆಫಿಸರ್ ಆಗಿ ನೇಮಿಸಿತ್ತು. ಈ ದಿಟ್ಟ ಮಹಿಳೆ ತನ್ನ ಕೆಲಸ ಹಾಗೂ ಪ್ರಾಮಾಣಿಕತೆಯಿಂದ ಮಹಿಳಾ ಸಬಲೀಕರಣದತ್ತ ದಾಪುಗಾಲನ್ನು ಇಟ್ಟಿದ್ದಾಳೆ. ಪಾಕ್ಪಟ್ಟನ್ ಅಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯಾಗಿ ಇದೇ ಮೊದಲ ಬಾರಿಗೆ ನೇಮಕಗೊಂಡಿದ್ದು ಎಂದು ಹೇಳಲಾಗುತ್ತಿದೆ. ಈಕೆ ತನ್ನ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಅರಿತು ಧೈರ್ಯದ ಹೆಜ್ಜೆ ಇಡಲು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಸಾಕಷ್ಟು ಲೈಂಗಿಕ ಕಿರುಕುಳದ ಪ್ರಕರಣಗಳನ್ನು ದಾಖಲುಮಾಡುವುದರ ಮೂಲಕ ಪರಿಶೀಲನೆ ನಡೆಸಿದ್ದಾಳೆ.

ದಾಖಲೆ ಸೃಷ್ಟಿಸಿದ್ದಾರೆ

ಎರಡು ತಿಂಗಳ ಸಣ್ಣ ಅವಧಿಯಲ್ಲಿ ಅವರು 200 ಅತ್ಯಾಚಾರ ಪ್ರಕರಣಗಳನ್ನು ಪರಿಹರಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. "ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡುವುದು ತ್ವರಿತ ನ್ಯಾಯವನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಅಪರಾಧಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ" ಎಂದು ಪಾಕ್ಪಟ್ಟನ್ ಜಿಲ್ಲಾ ಪೊಲೀಸ್ ಅಧಿಕಾರಿ ಇಬಾದತ್ ನಿಸಾರ್ ಈ ಹಿಂದೆ ಎಕ್ಸ್ಪ್ರೆಸ್ ಟ್ರಿಬ್ಯೂನ್ಗೆ ತಿಳಿಸಿದ್ದಾರೆ. ದಕ್ಷಿಣ ಪಂಜಾಬ್ನ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಪಾಕ್ಪಟ್ಟನ್ ಅಲ್ಲಿ ಮಹಿಳೆಯರನ್ನು ಒಳಗೊಂಡ ಅಪರಾಧಗಳ ಅನುಪಾತ ಹೆಚ್ಚಾಗಿದೆ ಎಂದು ವಿವರಿಸಿದರು. ಆದ್ದರಿಂದ ವಿಚಾರಣೆ ಮತ್ತು ತನಿಖೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಮಹಿಳಾ ಅಧಿಕಾರಿಗಳನ್ನು ಸೇರಿಸಿಕೊಳ್ಳಲು ತೀರ್ಮಾನಿಸಲಾಯಿತು.

ಫಾತಿಮಾ ಅನಿಸಿಕೆ

ನನಗೆ ವೃತ್ತಿಯ ಆರಂಭದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿದು ಅತಿಯಾದ ಬೇಸರ ಹಾಗೂ ಕೋಪ ಬಂದಿತ್ತು ಎಂದು ಫಾತಿಮಾ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅವಳು ಯಾವಾಗಲೂ ಅದರ ಬಗ್ಗೆ ಏನಾದರೂ ಮಾಡಬೇಕೆಂದು ಆಶಿಸುತ್ತಿದ್ದಳು . ಆ ಸಮಯಕ್ಕೆ ಸರಿಯಾಗಿ ಎಸ್ಎಚ್ಒ ಆಗಿ ನೇಮಕಗೊಂಡಿದ್ದರಿಂದ "ನನಗೆ ಅವಕಾಶ ಸಿಕ್ಕಿತು. ಸ್ಪರ್ಧಾ ತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣನಾದ ನಂತರ ನನ್ನನ್ನು ಪಂಜಾಬ್ ಪೊಲೀಸರಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ನೇಮಿಸಲಾಯಿತು" ಎಂದು ಅವರು ಉಲ್ಲೇಖಿಸಿದ್ದಾರೆ. ಫಾತಿಮಾ ಅವರು ಸದ್ದಾರ್ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಆಕೆಗೆ ಮಾಡೆಲ್ ಪೊಲೀಸ್ ಠಾಣೆ ದಲೋರಿಯಂನಲ್ಲಿ ಎಸ್ಎಚ್ಒ ಕೆಲಸ ಹಸ್ತಾಂತರಿಸಲಾಯಿತು.

ಉತ್ತೇಜನ ಸಿಕ್ಕಿತು

"ಮಹಿಳಾ ಅಧಿಕಾರಿಗಳಿಗೆ ಬಡ್ತಿ ಇಲ್ಲ ಮತ್ತು ಎಎಸ್ಐ ಮತ್ತು ಎಸ್ಐಗಿಂತ ಉನ್ನತ ಸ್ಥಾನದಲ್ಲಿರುವ ಪುರುಷರು ಪ್ರಾಬಲ್ಯ ಹೊಂದಿದ್ದಾರೆ ಎಂಬ ವ್ಯಾಪಕ ತಪ್ಪು ಕಲ್ಪನೆಗಳಿವೆ" ಎಂದು ಸೇರುವ ಸಮಯದಲ್ಲಿ ಫಾತಿಮಾ ಅವರಿಗೆ ಒಂದಿಷ್ಟು ಮಾಹಿತಿ ತಿಳಿಸಿದ್ದರು. ಆದರೆ ಆಕೆಯನ್ನು ನೇಮಿಸುವ ಮೂಲಕ, ಪಾಕ್ಪಟ್ಟನ್ ಡಿಪಿಒ ಮಹಿಳಾ ಅಧಿಕಾರಿಗಳನ್ನು ಮುಂದೆ ಬರುವಂತೆ ಉತ್ತೇಜಿಸುವತ್ತ ಅಭೂತಪೂರ್ವ ಕ್ರಮ ಕೈಗೊಂಡಿತ್ತು.

ಜನರ ಮನದಿಂಗಿತ

ಪಾಕ್ಪಟ್ಟನ್ನಂತಹ ಅಭಿವೃದ್ಧಿಯಾಗದ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುವಲ್ಲಿ ಆಕೆಯ ಸಾಮರ್ಥ್ಯದ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದರು. ಅದೇನೇ ಇದ್ದರೂ, ಅವರ ಗಮನಾರ್ಹ ಪ್ರದರ್ಶನವು ಮಹಿಳಾ ಪೊಲೀಸ್ ಅಧಿಕಾರಿಗಳ ಸಾಮರ್ಥ್ಯದ ಬಗ್ಗೆ ಪ್ರತಿಯೊಬ್ಬರೂ ಯೋಚಿಸುವ ವಿಧಾನವನ್ನು ಬದಲಿಸಿದೆ. ಅವರ ಈ ಉನ್ನತ ಕೆಲಸವು ಹೀಗೆ ನಿರಂತರವಾಗಿ ಸಾಗುತ್ತಿರಲಿ. ಇದರಿಂದ ಮಹಿಳೆಯರ ಮೇಲೆ ನಡೆಯುವ ಸಾಕಷ್ಟು ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳಗಳು ಮುಕ್ತವಾಗುತ್ತವೆ. ಅಲ್ಲದೆ ಅನೇಕ ಮುಗ್ಧ ಬಾಲಕಿಯರು ಕಾಮುಕರ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಿಸುತ್ತಾರೆ.

   
 
ಹೆಲ್ತ್