Back
Home » ಆರೋಗ್ಯ
ಸ್ಕಾರ್ಲೆಟ್ ಜ್ವರ: ಲಕ್ಷಣಗಳು, ಕಾರಣಗಳು, ಪತ್ತೆ ಹಚ್ಚುವಿಕೆ, ಅಪಾಯದ ಸಾಧ್ಯತೆ ಮತ್ತು ಚಿಕಿತ್ಸೆ
Boldsky | 8th Aug, 2019 03:31 PM

ಸ್ಕಾರ್ಲೆಟ್ ಜ್ವರ ಅಥವಾ ಸ್ಕಾರ್ಲೇಟಿನಾ ಎಂಬ ಹೆಸರಿನ ಈ ವ್ಯಾಧಿ ಗ್ರೂಪ್ ಎ ಸ್ಟ್ರೆಪ್ಟೋಕಾಕ್ಕಸ್ ಐ ಅಥವಾ Streptococcus pyogenes ಎಂಬ ಬ್ಯಾಕ್ಟೀರಿಯಾದ ಸೋಂಕಿನಿಂದ ಎದುರಾಗುತ್ತದೆ. ಸಾಮಾನ್ಯವಾಗಿ ಐದರಿಂದ ಹದಿನೈದು ವಯಸ್ಸಿನ ಮಕ್ಕಳಿಗೆ ಹೆಚ್ಚು ಆವರಿಸುತ್ತದೆ. ಒಂದು ವೇಳೆ ಸಕಾಲದಲ್ಲಿ ಚಿಕಿತ್ಸೆ ದೊರಕದೇ ಇದ್ದರೆ ಇದು ಉಲ್ಬಣಾವಸ್ಥೆಗೆ ತಲುಪಬಹುದು.

ಸಾಮಾನ್ಯವಾಗಿ ಎಂಭತ್ತು ಶೇಖಡಾಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈ ವ್ಯಾಧಿ ಹತ್ತು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಇವರಲ್ಲಿ ಕೆಲವು ವ್ಯಕ್ತಿಗಳಲ್ಲಿ ಮಾತ್ರ streptococcal pharyngitis infection (ಗಂಟಲಕುಳಿಯ ಸೋಂಕು) ಅಥವಾ strep throat ಅಥವಾ streptococcal skin infections ಎಂಬ ಸ್ಥಿತಿ ಎದುರಾಗುತ್ತದೆ ಹಾಗೂ ಇದು ಸ್ಕಾರ್ಲೆಟ್ ಜ್ವರವಾಗಿ ಕೆಲವೊಮ್ಮೆ ಬೆಳವಣಿಗೆ ಪಡೆಯುತ್ತದೆ.

ಸ್ಕಾರ್ಲೆಟ್ ಜ್ವರ:

ಇಪ್ಪತ್ತೆಯನ ಶತಮಾನದ ಪ್ರಾರಂಭದಲ್ಲಿ ಈ ಜ್ವರದ ಕಾರಣದಿಂದಾಗಿ ಹಲವಾರು ಮಕ್ಕಳ ಸಾವು ಸಂಭವಿಸಿತ್ತು. ಕಾಲಕ್ರಮೇಣ ಈ ವ್ಯಾಧಿಗೂ ಸೂಕ್ತ ಪ್ರತಿರೋಧ ಔಷಧಿಗಳನ್ನು ಕಂಡುಹಿಡಿದು ಈ ಜ್ವರವನ್ನು ನಿಯಂತ್ರಿಸಲಾಗಿದೆ. ಸಮಯಕ್ಕೆ ಸರಿಯಾಗಿ ಜ್ವರವನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವ ಮೂಲಕ ಈ ಜ್ವರ ಶೀಘ್ರವೇ ಗುಣವಾಗುತ್ತದೆ. ಬನ್ನಿ, ಈ ಜ್ವರದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮುಂದೆ ಓದಿ:

ಸ್ಕಾರ್ಲೆಟ್ ಜ್ವರದ ಲಕ್ಷಣಗಳು:

ಈ ಜ್ವರದ ಮುಖ್ಯ ಲಕ್ಷಣವೆಂದರೆ ಕಡುಗೆಂಪು ಬಣ್ಣದ ಚರ್ಮದ ಗೆರೆಗಳು. ಪ್ರರಂಭದಲ್ಲಿ ಈ ಗೆರೆಗಳು ಅತಿ ಸೂಕ್ಷ್ಮವಾಗಿ ಕಾಣಿಸಿಕೊಂಡು ಬಳಿಕ ನಿಧಾನಕ್ಕೆ ಈ ಗೆರೆಗಳು ದೊರಗಾಗುತ್ತಾ ಚರ್ಮ ಉಪ್ಪುಕಾಗದದಂತೆ ಗಡಸಾಗುತ್ತದೆ. ಈ ಗಡಸು ಚರ್ಮದಿಂದಲೇ ಈ ಲಕ್ಷಣವನ್ನು "scarlatiniform" ಎಂದು ಕರೆಯಲಾಗುತ್ತದೆ. ಪ್ರಮುಖ ಲಕ್ಷಣಗಳು ಮೊದಲು ಸೋಂಕು ಎದುರಾದ ದಿನದಿಂದ ನಾಲ್ಕು ದಿನಗಳಲ್ಲಿ ಸ್ಪಷ್ಟಗೊಳ್ಳುತ್ತಾ ಹೋಗುತ್ತದೆ. ಚರ್ಮದ ಗೀರುಗಳು ಈ ಲಕ್ಷಣಗಳು ಕಂಡುಬಂದ ಹನ್ನೆರಡರಿಂದ ನಲವತ್ತೆಂಟು ಘಂಟೆಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಲಕ್ಷಣಗಳು ಮತ್ತು ಚಿಹ್ನೆಗಳು ಈ ಕೆಳಗೆ ವಿವರಿಸಿದವುಗಳಲ್ಲಿ ಒಂದಕ್ಕಿಂತ ಹೆಚ್ಚಿರಬಹುದು.
 • ಕೆಂಪಗಾದ, ಕೆರೆತವುಳ್ಳ ಗಂಟಲು, ಹಾಗೂ ಬಿಳಿ ಅಥವಾ ಹಳದಿ ಮಚ್ಚೆಗಳು ಕಾಣಿಸಿಕೊಳ್ಳುವುದು
 • 101ºF (38.3ºC)ಕ್ಕೂ ಹೆಚ್ಚಿನ ತಾಪಮಾನದ ಜ್ವರ
 • ಚುಕ್ಕೆ ಚುಕ್ಕೆಯಾಗಿ ಕೆಂಪಗಾದ ನಾಲಿಗೆ ಅಥವಾ 'Strawberry tongue'ಮತ್ತು ಬಿಳಿಯಾದ ಪದರ ಕಾಣಿಸಿಕೊಳ್ಳುವುದು.
 • ನಡುಕ
 • ತಲೆನೋವು
 • ಕುತ್ತಿಗೆಯ ಗ್ರಂಥಿಗಳು ಅಥವಾ ದುಗ್ಧಗ್ರಂಥಿಗಳು ಊದಿಕೊಳ್ಳುವುದು
 • ಕೆಳಹೊಟ್ಟೆಯಲ್ಲಿ ನೋವು
 • ವಾಕರಿಕೆ ಮತ್ತು ವಾಂತಿ
 • ಹಸಿವಿಲ್ಲದಿರುವುದು
 • ಗಲಗ್ರಂಥಿ ಅಥವಾ ಟಾನ್ಸಿಲ್ ಗಳು ಊದಿಕೊಳ್ಳುವುದು
 • ಕಂಕುಳ ಭಾಗ, ಮೊಣಕೈ, ತೊಡೆಸಂಧು ಮತ್ತು ಮೊಣಕಾಲುಗಳಲ್ಲಿ ರಕ್ತನಾಳಗಳು ಒಡೆದಿರುವುದು. (ಇವುಗಳಿಗೆ Pastia's lines ಎಂದೂ ಕರೆಯುತ್ತಾರೆ)
ಸ್ಕಾರ್ಲೆಟ್ ಜ್ವರಕ್ಕೆ ಕಾರಣಗಳು:

Streptococcus pyogenes ಎಂಬ ಬ್ಯಾಕ್ಟೀರಿಯಾ ಈ ಜ್ವರಕ್ಕೆ ಪ್ರಮುಖ ಕಾರಣವಾಗಿದ್ದು ಸೋಂಕುಪೀಡಿದ ವ್ಯಕ್ತಿಯ ಜೊಲ್ಲು, ಸಿಂಬಳ, ಸೀನುವಿಕೆ ಅಥವಾ ಕೆಮ್ಮಿನ ಮೂಲಕ ಇತರ ವ್ಯಕ್ತಿಗಳಿಗೆ ಹರಡುತ್ತದೆ. ಕೆಲವೊಮ್ಮೆ ಈ ವ್ಯಕ್ತಿಯ ಬಾಯಿ ಅಥವಾ ಮೂಗನ್ನು ಸ್ಪರ್ಶಿಸುವ ಅಥವಾ ಈ ಬ್ಯಾಕ್ಟೀರಿಯಾ ಇರುವ ದ್ರವ ಯಾವುದಾದರೂ ವಸ್ತುವಿನ ಮೇಲೆ ತಗುಲಿ ಈ ವಸ್ತುವನ್ನು ಮುಟ್ಟಿದ ವ್ಯಕ್ತಿಗೂ ಹರಡಬಹುದು.

ಸೋಂಕುಪೀಡಿತ ವ್ಯಕ್ತಿ ಉಪಯೋಗಿಸುವ ತಟ್ಟೆ-ಲೋಟ-ಪಾತ್ರೆಗಳು ಸಹಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿಸುತ್ತವೆ

ಈ ಬ್ಯಾಕ್ಟೀರಿಯಾ ಉತ್ಪಾದಿಸುವ ವಿಷವಸ್ತುವೇ ಚರ್ಮದಲ್ಲಿ ಗೆರೆಗಳು ಮೂಡಲು ಕಾರಣವಾಗಿವೆ. ಹಾಗಾಗಿ ಈ ಭಾಗವನ್ನು ಸ್ಪರ್ಶಿಸುವುದರಿಂದ ಸೋಂಕು ಹರಡುವುದಿಲ್ಲ. ಏಕೆಂದರೆ ಈ ಗೆರೆಗಳು ಬ್ಯಾಕ್ಟೀರಿಯಾದ ವಿಷದಿಂದಾಗಿದೆಯೇ ಹೊರತು ಬ್ಯಾಕ್ಟೀರಿಯಾದಿಂದ ನೇರವಾಗಿ ಅಲ್ಲ.

ಸ್ಕಾರ್ಲೆಟ್ ಜ್ವರದ ಪತ್ತೆಹಚ್ಚುವಿಕೆ:

ವೈದ್ಯರು ರೋಗಿಯ ಗಂಟಲ ಒಳಗಿನ ತೇವಭಾಗವನ್ನು ಪರಿಶೀಲಿಸುತ್ತಾರೆ . ಅಲ್ಲದೇ ಗಂಟಲು, ನಾಲಿಗೆ, ಗಲಗ್ರಂಥಿ ಮೊದಲಾದ ಭಾಗಗಳನ್ನು ಸೂಕ್ಷ್ಮವಾಗಿ ಬೆಳಕಿನಲ್ಲಿ ಪರಿಶೀಲಿಸುತ್ತಾರೆ ಹಾಗೂ ಚರ್ಮ ಮತ್ತು ದುಗ್ಧಗ್ರಂಥಿಗಳಲ್ಲಿ ಯಾವುದಾದರೂ ಕೆಂಪುಗೆರೆಗಳಿವೆಯೇ ಎಂದು ಪರಿಶೀಲಿಸುತ್ತಾರೆ.

ಎರಡನೆಯ ಹಂತದಲ್ಲಿ ವೈದ್ಯರು ಮಗುವಿನ ಗಂಟಲ ಹಿಂಭಾಗದಲ್ಲಿರುವ ದ್ರವವನ್ನು ಸೂಕ್ತ ಉಪಕರಣ ಬಳಸಿ ಸಂಗ್ರಹಿಸುತ್ತಾರೆ. ಈ ದ್ರವವನ್ನು ಪ್ರಯೋಗಶಾಲೆಗೆ ಕಳುಹಿಸಲಾಗುತ್ತದೆ. ಈ ದ್ರವದಲ್ಲಿಗ್ರೂಪ್ ಎ ಸ್ಟ್ರೆಪ್ಟೋಕಾಕ್ಕಸ್ ಬ್ಯಾಕ್ಟೀರಿಯಾ ಇದೆಯೇ ಎಂದು ಪರೀಕ್ಷಿಸಲಾಗುತ್ತದೆ.

ಸ್ಕಾರ್ಲೆಟ್ ಜ್ವರ ಉಲ್ಬಣಗೊಂಡರೆ ಎದುರಾಗುವ ಅಪಾಯಗಳು

ಸಾಮಾನ್ಯವಾಗಿ ಈ ಜ್ವರ ವಿಷಮಸ್ಥಿತಿಗೆ ತಲುಪುವುದಿಲ್ಲ. ಆದರೂ ಕೆಲವು ಪ್ರಕರಣಗಳಲ್ಲಿ ಈ ಜ್ವರ ಉಲ್ಬಣಗೊಂಡು ಕೆಳಗಿನ ಲಕ್ಷಣಗಳನ್ನು ಪ್ರಕಟಿಸಬಹುದು.

 • ರ್‍ಹೂಮಾಟಿಕ್ ಜ್ವರ
 • ಮೂತ್ರಪಿಂಡಗಳಿಗೆ ಎದುರಾಗುವ ಉರಿಯೂತ
 • ಕಿವಿಗಳಲ್ಲಿ ಸೋಂಕು
 • ಚರ್ಮದಲ್ಲಿ ಸೋಂಕು
 • ನ್ಯುಮೋನಿಯಾ
 • ಸೈನುಸೈಟಿಸ್ (ಅಥವಾ ಕುಹರದ ಸೋಂಕು)
 • ಸಂಧಿವಾತ ಹಾಗೂ
 • ಗಂಟಲಿನಲ್ಲಿ ಕೀವು
ಸ್ಕಾರ್ಲೆಟ್ ಜ್ವರಕ್ಕೆ ಚಿಕಿತ್ಸೆ:

ಸಾಮಾನ್ಯವಾಗಿ ಜ್ವರ ಆವರಿಸಿದ ಬಳಿಕ ರೋಗ ನಿರೋಧಕ ಶಕ್ತಿಯೇ ಈ ಬ್ಯಾಕ್ಟೀರಿಯಾದ ಮೇಲೆ ನಿಯಂತ್ರಣ ಸಾಧಿಸಲು ಒಂದು ವಾರ ಸಾಕಾಗುತ್ತದೆ. ಆದರೂ, ವೈದ್ಯರು ಒಂದು ಅವಧಿಗೆ ಸೇವಿಸಲು ಪ್ರತಿಜೀವಕ ಔಷಧಿಗಳನ್ನು ನೀಡುತ್ತಾರೆ. ಹಾಗಾಗಿ ಪಾಲಕರು ಮಗು ಈ ಅವಧಿಗೆ ನೀಡಲಾದ ಔಷಧಿಗಳನ್ನು ಕಾಲಕಾಲಕ್ಕೆ ತಪ್ಪದೇ ಸೇವಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಮೂಲಕ ಈ ಸೋಂಕು ಭವಿಷ್ಯದಲ್ಲಿ ಮತ್ತೆ ಎದುರಾಗದಂತೆ ತಡೆಗಟ್ಟಬಹುದು.

ಈ ಜ್ವರಕ್ಕೆ ಸಾಮಾನ್ಯವಾಗಿ ಪೆನಿಸಿಲಿನ್ ಪ್ರತಿಜೀವಕ ಔಷಧಿಯನ್ನು ನೀಡಲಾಗುತ್ತದೆ. ಆದರೆ ಈ ಔಷಧಿಗೆ ಅಲರ್ಜಿ ಹೊಂದಿರುವ ವ್ಯಕ್ತಿಗಳಿಗೆ erythromycin ಅಥವಾ ಇತರ ಪ್ರತಿಜೀವಕ ಔಷಧಿಗಳನ್ನು ಸಲಹೆ ಮಾಡಲಾಗುತ್ತದೆ. ಒಂದು ವೇಳೆ ಈ ಜ್ವರದ ಲಕ್ಷಣಗಳು ಪ್ರತಿಜೀವಕ ಔಷಧಿ ಪ್ರಾರಂಭಿಸಿದ ಬಳಿಕ ಒಂದರಿಂದ ಎರಡು ದಿನಗಳಲ್ಲಿ ಕಡಿಮೆಯಾಗಲು ತೊಡಗದಿದ್ದರೆ ವೈದ್ಯರನ್ನು ಮತ್ತೊಮ್ಮೆ ಸಂಪರ್ಕಿಸಬೇಕು.

ಜ್ವರವನ್ನು ತಡೆಗಟ್ಟುವ ವಿಧಾನ:

ಈ ಜ್ವರವನ್ನು ಬರದಂತೆ ಮಾಡುವ ಯಾವುದೇ ಲಸಿಕೆಯನ್ನು ಇದುವರೆಗೆ ಕಂಡುಹಿಡಿಯಲಾಗಿಲ್ಲ. ಆದರೂ, ಈ ಜ್ವರವನ್ನು ಬಾರದಂತೆ ತಡೆಯಲು ನೈರ್ಮಲ್ಯವನ್ನು ಕಾಪಾಡುವುದು ಪ್ರಮುಖ ವಿಧಾನವಾಗಿದೆ. ನಿಮ್ಮ ಮಕ್ಕಳು ತಪ್ಪದೇ ಅನುಸರಿಸಬೇಕಾದ ಕೆಲವು ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ:

* ಊಟಕ್ಕೂ ಮೊದಲು ಮತ್ತು ನಂತರ ಹಾಗೂ, ಶೌಚಾಲಯ ಉಪಯೋಗಿಸಿದ ಬಳಿಕ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು

* ಸೀನುವಾಗ ಅಥವಾ ಕೆಮ್ಮುವಾಗ ಬಾಯಿಯನ್ನು ಮುಚ್ಚಿಕೊಳ್ಳಲು ಹಾಗೂ ಬಳಿಕ ಕೈಗಳನ್ನು ತೊಳೆದುಕೊಳ್ಳುವುದನ್ನು ಪಾಲಕರು ಕಲಿಸಬೇಕು

* ಶಾಲೆಯಲ್ಲಿ ನೀರು ಕುಡಿಯುವ ಲೋಟವನ್ನು ಇತರ ಮಕ್ಕಳೊಂದಿಗೆ ಹಂಚಿಕೊಳ್ಳಬಾರದು.

ಸ್ಕಾರ್ಲೆಟ್ ಜ್ವರ ಪೀಡಿತ ಮಗುವಿನ ಆರೈಕೆ ಹೇಗೆ?

ಸೂಕ್ತ ಔಷಧಿಯನ್ನು ಕಾಲಕಾಲಕ್ಕೆ ಸೇವಿಸುವಂತೆ ಮಾಡುವ ಜೊತೆಗೇ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಜ್ವರದ ತೊಂದರೆಯನ್ನು ಆದಷ್ಟೂ ಮಟ್ಟಿಗೆ ಕಡಿಮೆ ಮಾಡಬಹುದು.

* ಇಡಿಯ ದಿನ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುತ್ತಿರುವುದು ಅವಶ್ಯಕ

* ಬಿಸಿಬಿಸಿಯಾದ ಹಾಗೂ ಮಾಂಸಾಹಾರ ಆಧಾರಿತ ಸೂಪ್, ಬಿಸಿಬಿಸಿ ಟೀ ಕುಡಿಯುವುದು, ಉಪ್ಪುನೀರಿನಲ್ಲಿ ಬಾಯಿ ಗಂಟಲನ್ನು ಗಳಗಳ ಮಾಡುವುದು ಹಾಗೂ ಸಾಧ್ಯವಾದರೆ ಹ್ಯೂಮಿಡಿಫೈಯರ್ ಉಪಕರಣ ಬಳಸಿ ಗಂಟಲಭಾಗವನ್ನು ತಣ್ಣಗಾಗಿಸುವುದು ಮೊದಲಾದವು ಗಂಟಲ ಬೇನೆಯನ್ನು ತಗ್ಗಿಸುತ್ತವೆ.

* ಮಗುವಿನ ಆದಷ್ಟೂ ಮೆದುವಾದ ಆಹಾರಗಳನ್ನು, ಹೆಚ್ಚು ಹೆಚ್ಚಾಗಿ ದ್ರವಾಹಾರವನ್ನೇ ನೀಡಬೇಕು.

* ನಾಲ್ಕು ವರ್ಷ ದಾಟಿದ ಮಕ್ಕಳಿಗೆ ಕೆಮ್ಮಿನ ಗುಳಿಗೆಗಳು (ಲಾಜೆಂಜಸ್) ನೀಡುವುದು ಉಪಯುಕ್ತವಾಗಬಹುದು.

* ಪ್ರದೂಷಿತ ಗಾಳಿಯಿಂದ ಮಗುವನ್ನು ದೂರವಿರಿಸಿ.

 
ಹೆಲ್ತ್