Back
Home » Business
ಸೋಲಿಗೆ ಹೆದರಬೇಡಿ ಎಂದಿದ್ದ ಸಿದ್ಧಾರ್ಥ ಮರೆತ ಮಾತು
Good Returns | 11th Aug, 2019 04:07 PM

ಬೆಂಗಳೂರು, ಆಗಸ್ಟ್ 11 : ಕನಸುಗಳ ಬೆನ್ನತ್ತಿದ್ದ ಉದ್ಯಮಿ, ಕೆಫೆ ಕಾಫಿ ಡೇ ಖ್ಯಾತಿಯ ಉದ್ಯಮಿ ಸಿದ್ಧಾರ್ಥ ಸಾವು ಆರ್ಥಿಕ ವಲಯದಲ್ಲಿ ಎಬ್ಬಿಸಿದ ಕಂಪನಗಳು ಇನ್ನೂ ತಗ್ಗಿಲ್ಲ. ಅಪಾರ ಕನಸು, ಅದನ್ನು ನನಸುಮಾಡಿಕೊಳ್ಳುವ ಹಾದಿಯಲ್ಲಿ ಬಹುದೂರ ಸಾಗಿದ್ದ ಸಿದ್ಧಾರ್ಥ ಅವರ ಸ್ಮರಣಾರ್ಥ ಕಾರ್ಯಕ್ರಮಗಳು ಜರಗುತ್ತಲೇ ಇವೆ. ನಮ್ಮ ಆರ್ಥಿಕ ವ್ಯವಸ್ಥೆಯ ಸ್ಥರಗಳಲ್ಲಿ ಬಹು ಎತ್ತರ ಮುಟ್ಟಿದ್ದ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆಗೆ ಇವುಗಳಿಂದ ಉತ್ತರ ಸಿಗಬಹುದಾ? ಗೊತ್ತಿಲ್ಲ.

ಆದರೆ ಐಐಟಿ ಖಾನ್ಪುರದಲ್ಲಿ ಹಿಂದೊಮ್ಮೆ ಜಿ. ವಿ. ಸಿದ್ಧಾರ್ಥ 'ಕನಸುಗಳನ್ನು ಬೆನ್ನತ್ತುವುದು ಹೇಗೆ?' ಎಂಬ ವಿಷಯದ ಮೇಲೆ ಆಡಿದ ಮಾತುಗಳಲ್ಲಿ ಉತ್ತರವಿದೆ. ತಮಗೆ ನೀಡಿರುವ ವಿಷಯಕ್ಕೆ ತದ್ವಿರುದ್ಧ ನೆಲೆಯಲ್ಲೇ ಅವತ್ತು ಮಾತು ಆರಂಭಿಸಿದ್ದ ಸಿದ್ಧಾರ್ಥ ತಮ್ಮ ಬದುಕಿನ ಹಲವು ಮಜಲುಗಳನ್ನು ಬಿಚ್ಚಿಟ್ಟಿದ್ದರು.

ಬೆಂಗಳೂರಿನ ಐಟಿ ಪಾರ್ಕ್ ಮಾರಾಟ ಮಾಡಲಿದೆ ಕೆಫೆ ಕಾಫಿ ಡೇ

"20 ವರ್ಷಕ್ಕೇ ಭಾರತೀಯ ಮಿಲಿಟರಿ ಸೇರುವ ಬಯಕೆಯಿಂದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆ ಬರೆದಿದ್ದೆ. ಅದು ಪಾಸಾಗಲಿಲ್ಲ. ಅದು ನನ್ನ ಜೀವನದಲ್ಲಿ ಅತ್ಯಂತ ಹೆಚ್ಚು ಬೇಜಾರಿ ವಿಚಾರ," ಎಂದ ಸಿದ್ಧಾರ್ಥ ಅಚಾನಕ್‌ ಆಗಿ ಉದ್ಯಮಿಯಾದೆ ಎಂದಿದ್ದರು.

ಸುಮಾರು 23 ನಿಮಿಷಗಳ ತಮ್ಮ ಭಾಷಣದಲ್ಲಿ ವಿ. ಜಿ. ಸಿದ್ಧಾರ್ಥ, ತಾವು ಈ ತಲೆಮಾರಿನ ಕಮ್ಯುನಿಸ್ಟ್ ಪಕ್ಷದ ಸದಸ್ಯನಾಗಿದ್ದೆ ಎಂಬಲ್ಲಿಂದ ಹಿಡಿದು ಕಾರ್ಲ್‌ಮಾರ್ಕ್ಸ್‌ವರೆಗೆ ಮಾತನಾಡಿದ್ದರು. ರಾಬಿನ್‌ ಹುಡ್ ಆಗುವ ಬಯಕೆ ಹೇಗಿತ್ತು ಎಂಬುದನ್ನು ಪ್ರಸ್ತಾಪಿಸಿದರು.

ತಾವು ಉದ್ಯಮ ಶುರುಮಾಡುವ ಹೊತ್ತಿನಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ ಹೇಗಿತ್ತು, ತಾವು ಕಾಫಿ ಇಟ್ಟುಕೊಂಡು ಕಮಾಡಿಟಿ ಮಾರ್ಕೆಟ್‌ಗೆ ಇಳಿದಾಗ ಸಾಂಪ್ರದಾಯಿಕ ಬೆಳೆಯಿಂದ ಆದಾಯ ಹೇಗಿತ್ತು? ಹೇಗೆ ಮನಮೋಹನ್ ಸಿಂಗ್ ಸರಕಾರದ ಒಂದು ಆರ್ಥಿಕ ನಿರ್ಧಾರ ತಮ್ಮ ಬದುಕನ್ನು ಬದಲಿಸಿತು ಎಂಬುದನ್ನು ಅಂಕಿ ಅಂಶಗಳ ಮೂಲಕ ವಿವರಿಸಿದರು.

ತಮ್ಮ ಭಾಷಣದ ಉದ್ದಕ್ಕೂ ಹಲವು ಖ್ಯಾತನಾಮರ ಜತೆ ತಮ್ಮ ಒಡನಾಟ, ಅವರು ಹೇಳಿದ ಮಾತುಗಳಿಂದ ಪ್ರಭಾವಿತರಾದ ಸನ್ನಿವೇಶ, ಬದಲಾದ ಕಾಲಮಾನ ಹೀಗೆ ವಿಸ್ತಾರವಾಗಿ ತಮ್ಮ ಬದುಕಿನ ಹಾದಿಯನ್ನು ಕಟ್ಟಿಕೊಡುತ್ತಾ, "ತಾವು ಫ್ಲೂಕ್‌ನಲ್ಲಿ ಉದ್ಯಮಿಯಾದೆ," ಎಂದಿದ್ದರು.

"ಹಾಗಂತ ಹಣ ಮಾಡುವ ಕಾರಣಕ್ಕಾಗಿ ಉದ್ಯಮಿಯಾಗಬೇಡಿ. ಹಣ ಮಾತ್ರವೇ ಖುಷಿಯನ್ನು ಕೊಡುವುದಿಲ್ಲ,'' ಎಂಬ ಕಿವಿಮಾತೂ ಹೇಳಿದರು.

ಹೀಗೆ ಸಿದ್ಧಾರ್ಥ ಭವಿಷ್ಯದ ಉದ್ಯಮಿಗಳನ್ನು ಉದ್ದೇಶಿಸಿ ಸಾಕಷ್ಟು ಅಂಶಗಳನ್ನು ಮುಂದಿಟ್ಟರು. ಕೊನೆಯಲ್ಲಿ ನಡೆದ ಪ್ರಶ್ನೋತ್ತರದ ವೇಳೆ, ಯುವಕನೊಬ್ಬ, "ಉದ್ಯಮ ನಡೆಸುವುದು ಸುಲಭ ಅಲ್ಲ. ಎಷ್ಟೋ ಜನ ಗಳಿಸಿದ್ದು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ನೀವು ನಿಮ್ಮ ಈವರೆಗಿನ ಬದುಕಿನಲ್ಲಿ ಇಂತಹ ಸನ್ನಿವೇಶ ಎದುರಿಸಿದ್ದೀರಾ?" ಎಂದು ಪ್ರಶ್ನಿಸಿದ.

ಇದಕ್ಕೆ ಉತ್ತರ ನೀಡಿದ ಸಿದ್ಧಾರ್ಥ 'ಸ್ಮಶಾನ ವೈರಾಗ್ಯ'ವನ್ನು ನೆನಪಿಸಿಕೊಂಡರು. "ನಿಮ್ಮಂತಹ ವಯಸ್ಸಿನಲ್ಲಿ ಕಳೆದುಕೊಳ್ಳುವುದು ಏನೂ ಇಲ್ಲ. ಸಾವಿನ ನಂತರ ಏನೂ ಇರಲಿಲ್ಲ. ಸಮಸ್ಯೆ ಬಂದಾಗ ಅದನ್ನು ಎದುರಿಸಬೇಕು. ಸೋಲಿಗಾಗಿ ಎಂದಿಗೂ ಹೆದರಬೇಡಿ,'' ಎಂದು ಭರವಸೆಯ ಮಾತುಗಳನ್ನು ಆಡಿದ್ದರು. ವಿಪರ್ಯಾಸ ಏನೆಂದರೆ, ತಮ್ಮ ಭರವಸೆಯ ಮಾತುಗಳಿಗೆ ಸಾಕ್ಷಿಯಾಗಿ ನಷ್ಟದಿಂದ ಲಾಭದ ಕಡೆಗೆ ಜಿಗಿದ ತಮ್ಮ ನೆಚ್ಚಿನ ಉದ್ಯಮಿಗಳ ಕತೆಯನ್ನು ಮುಂದಿಟ್ಟಿದ್ದರು.

ಇದೀಗ ಸಿದ್ದಾರ್ಥ ಅವರ ಸಾವಿನ ಮೂಲಕ ಆರ್ಥಿಕ ವ್ಯವಸ್ಥೆ ಭರವಸೆಯ ಕಳೆದುಕೊಂಡ ಮಾತುಗಳನ್ನು ಆಡುತ್ತಿದೆ. ಯುವ ಉದ್ಯಮಿಗಳಿಗೆ, ಅದರಲ್ಲೂ ಕರ್ನಾಟಕದ ನೆಲದಿಂದ ಬಂದು ಬಂಡವಾಳವಾದ ಆರ್ಥಿಕ ವ್ಯವಸ್ಥೆಯಲ್ಲಿ ಮೇಲ್ತರವನ್ನು ನೋಡುವವರಿಗೆ ಆದರ್ಶವಾಗಿದ್ದವರಿಗೆ ನಿರಾಸೆ ಮೂಡಿದೆ. ಸಾವಿಗೂ ಮುನ್ನ ಸಿದ್ಧಾರ್ಥ, ತಮ್ಮದೇ ಐಐಟಿ ಖಾನ್‌ಪುರದ ಮಾತುಗಳನ್ನು ನೆನಪಿಸಿಕೊಂಡಿದ್ದರೆ ಇಂತಹದೊಂದು ವಾತಾವರಣ ನಿರ್ಮಾಣವಾಗುವುದನ್ನು ತಪ್ಪಿಸಬಹುದಿತ್ತು.

   
 
ಹೆಲ್ತ್