Back
Home » Business
ಪಿಪಿಎಫ್ ಖಾತೆ ತೆರೆಯುವವರು ಇಲ್ಲೊಮ್ಮೆ ನೋಡಿ..
Good Returns | 12th Aug, 2019 01:52 PM
  • ಖಾತೆ ತೆರೆಯಲು ಕನಿಷ್ಠ ಮೊತ್ತ ಸಾಕು

    ಪಿಪಿಎಫ್ ಖಾತೆಯನ್ನು ರೂ. 100 ಕನಿಷ್ಠ ಠೇವಣಿಯೊಂದಿಗೆ ಪ್ರಾರಂಭಿಸಬಹುದು. ಇದನ್ನು ಸಂಬಳ ಪಡೆಯುವ ಉದ್ಯೋಗಿಗಳು ಮತ್ತು ಸ್ವಯಂ ಉದ್ಯೋಗಿಗಳು ಪಿಪಿಎಫ್ ಖಾತೆ ತೆರೆಯಬಹುದು. ಪಿಪಿಎಫ್ ಖಾತೆಯನ್ನು ಯಾವುದೇ ಬ್ಯಾಂಕ್ ಶಾಖೆಯಲ್ಲಿ ಅಥವಾ ಅಂಚೆ ಕಚೇರಿ ಮೂಲಕ ತೆರೆಯಬಹುದು. ಅಪ್ರಾಪ್ತ ಮಗುವಿನ ಪರವಾಗಿ ಗಾರ್ಡಿಯನ್ ಅಥವಾ ಪೋಷಕರು ಪಿಪಿಎಫ್ ಖಾತೆಯನ್ನು ತೆರೆಯಲು ಅವಕಾಶವಿದೆ.


  • ಗರಿಷ್ಠ ಮತ್ತು ಕನಿಷ್ಠ ಠೇವಣಿ ಮಿತಿ

    ಹಣಕಾಸು ವರ್ಷದಲ್ಲಿ ಮಾಡಬೇಕಾದ ಕನಿಷ್ಠ ಠೇವಣಿ ರೂ. 500, ಗರಿಷ್ಠ ಠೇವಣಿ ರೂ. 1.5 ಲಕ್ಷ ಒಂದೇ ಸಮಯದಲ್ಲಿ ಅಥವಾ ಹೊಂದಿಕೊಳ್ಳುವ ಕಂತುಗಳಲ್ಲಿ ಪಾವತಿ ಮಾಡಬಹುದು. ಅನುಕೂಲಕ್ಕೆ ಅನುಗುಣವಾಗಿ, ಒಂದು ಹಣಕಾಸು ವರ್ಷದಲ್ಲಿ 12 ಕಂತುಗಳು ಮೀರದಂತೆ ಮೊತ್ತ ಮತ್ತು ಕಂತುಗಳ ಸಂಖ್ಯೆಯನ್ನು ಬದಲಾಯಿಸಬಹುದು. ಬಡ್ಡಿದರ ಹೆಚ್ಚಾಗುತ್ತಿದ್ದರೂ ಸಹ, ಅಗತ್ಯವಿರುವ ಕನಿಷ್ಠ ಮೊತ್ತ ಠೇವಣಿ ಇಡಲು ವಿಫಲವಾದರೆ ನಿಮ್ಮ ಖಾತೆಯನ್ನು ನಿಲ್ಲಿಸಬಹುದು. ಚಂದಾದಾರಿಕೆ ಬಾಕಿ ಇರುವ ನಿಗದಿತ ಡೀಫಾಲ್ಟ್ ಶುಲ್ಕವನ್ನು ಪಾವತಿಸಿ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು.


  • ಬಡ್ಡಿ ಲೆಕ್ಕಾಚಾರ

    ಪಿಪಿಎಫ್ ಖಾತೆಯಲ್ಲಿನ ಬಡ್ಡಿ ಲೆಕ್ಕಾಚಾರವು ವಿಭಿನ್ನವಾಗಿರುತ್ತದೆ. ಬಡ್ಡಿದರವನ್ನು ತಿಂಗಳ 5ನೇ ಮತ್ತು ಕೊನೆಯ ದಿನದ ನಡುವಿನ ಕಡಿಮೆ ಸಮತೋಲನದಲ್ಲಿ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ ನಿಮ್ಮ ಗಳಿಕೆಯನ್ನು ಗರಿಷ್ಠಗೊಳಿಸಲು, ತಿಂಗಳ 1 ಮತ್ತು 5 ರ ನಡುವೆ ಠೇವಣಿ ಇಡಬೇಕು. ಬಡ್ಡಿಯನ್ನು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ ಹಾಗು ಪ್ರತಿ ವರ್ಷ ಮಾರ್ಚ್ 31 ರಂದು ಕ್ರೆಡಿಟ್ ಆಗುತ್ತದೆ.


  • ಅಕಾಲಿಕ ಹಿಂತೆಗೆದುಕೊಳ್ಳುವಿಕೆ

    ಮೆಚುರಿಟಿ ಅವಧಿ ಮುಕ್ತಾಯಗೊಂಡ ನಂತರ ಮಾತ್ರ, ನಿಮ್ಮ ಖಾತೆಯಿಂದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಆದಾಗ್ಯೂ, ಹಣಕಾಸಿನ ಬಿಕ್ಕಟ್ಟಿನ ಸಮಯದಲ್ಲಿ ಭಾಗಶಃ ಹಿಂಪಡೆಯಲು ಕೆಲ ಮಿತಿಗಳನ್ವಯ ಅವಕಾಶವಿರುತ್ತದೆ. 7ನೇ ವರ್ಷದ ನಂತರದಲ್ಲಿ ವರ್ಷಕ್ಕೊಮ್ಮೆ ಮೊತ್ತ ಹಿಂತೆಗೆದುಕೊಳ್ಳಬಹುದು. ಸಾವಿನ ಸಂದರ್ಭದಲ್ಲಿ ಮಾತ್ರ ಪಿಪಿಎಫ್ ಖಾತೆಯ ಪೂರ್ವ-ಪ್ರಬುದ್ಧ ಮುಚ್ಚುವಿಕೆ ಅನುಮತಿಸಲಾಗಿದೆ.


  • ತೆರಿಗೆ ಪ್ರಯೋಜನ

    ಸಾರ್ವಜನಿಕ ಭವಿಷ್ಯ ನಿಧಿಯ ಠೇವಣಿಗಳು ಆದಾಯ ತೆರಿಗೆ 80ಸಿ ಕಡಿತಕ್ಕೆ ಅರ್ಹತೆ ಪಡೆಯುತ್ತವೆ. ಇದಲ್ಲದೆ, ಬಡ್ಡಿ ಸೇರಿದಂತೆ ಸಂಪೂರ್ಣ ಮುಕ್ತಾಯ ಮೊತ್ತವು ತೆರಿಗೆಗೆ ಒಳಪಡುವುದಿಲ್ಲ.


  • ಪಿಪಿಎಫ್ ಮೇಲೆ ಸಾಲ

    ಕೆಲವು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಪಿಪಿಎಫ್ ಠೇವಣಿ ಮೇಲೆ ಸಾಲ ಪಡೆಯಬಹುದು. 3ನೇ ವರ್ಷದಿಂದ 6ನೇ ವರ್ಷದವರೆಗೆ ಸಾಲ ತೆಗೆದುಕೊಳ್ಳಬಹುದು. ತಕ್ಷಣದ ಹಿಂದಿನ 2ನೇ ವರ್ಷದ ಕೊನೆಯಲ್ಲಿ ಗರಿಷ್ಠ ಶೇ. 25ರಷ್ಟು ಸಾಲಕ್ಕೆ ಅವಕಾಶವಿದೆ. ಸಾಲದ ಮೊತ್ತವನ್ನು 24 ತಿಂಗಳೊಳಗೆ ಮರುಪಾವತಿಸಬೇಕಾಗುತ್ತದೆ. ಅಲ್ಲದೆ ನಿಷ್ಕ್ರಿಯ ಖಾತೆಗಳು ಅಥವಾ ಸ್ಥಗಿತಗೊಂಡ ಖಾತೆಗಳು ಸಾಲಕ್ಕೆ ಅರ್ಹತೆ ಪಡೆದಿರುವುದಿಲ್ಲ.


  • ಪಿಪಿಎಫ್ ಮುಂದುವರಿಸುವುದು

    ಒಬ್ಬ ವ್ಯಕ್ತಿಯು 15 ವರ್ಷಗಳ ಅವಧಿಯ ನಂತರ ತಮ್ಮ ಪಿಪಿಎಫ್ ಖಾತೆಯನ್ನು ವಿಸ್ತರಿಸುವ ಆಯ್ಕೆ ಹೊಂದಿರುತ್ತಾನೆ.




ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಪೋಸ್ಟ್ ಆಫೀಸ್ ನೀಡುವ ಉಳಿತಾಯ ಯೋಜನೆಗಳಲ್ಲಿ ಪ್ರಮುಖವಾದುದ್ದಾಗಿದೆ. ಈ ಯೋಜನೆಯನ್ನು ನಿಯಮಿತ ಠೇವಣಿಯಾಗಿ ಆಯ್ಕೆ ಮಾಡಬಹುದಾಗಿದ್ದು, ಕನಿಷ್ಠ ಹೂಡಿಕೆಯ ಮೊತ್ತದಿಂದ ಪ್ರಾರಂಭಿಸಬಹುದು. ಪಿಪಿಎಫ್ 15 ವರ್ಷಗಳ ಮುಕ್ತಾಯದ ಲಾಕಿಂಗ್ ಅವಧಿ ಹೊಂದಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ. ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿದರಗಳನ್ನು ನಿರ್ಧರಿಸುತ್ತದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಅನ್ವಯವಾಗುವ ಪಿಪಿಎಫ್ ಬಡ್ಡಿದರವನ್ನು ಶೇ. 7.9 ಕ್ಕೆ ನಿಗದಿಪಡಿಸಲಾಗಿದೆ. ಜನವರಿ-ಮಾರ್ಚ್ ಮತ್ತು ಏಪ್ರಿಲ್-ಜೂನ್ 2019 ಕ್ಕೆ ಬಡ್ಡಿದರ ಶೇ. 8 ರಷ್ಟಿತ್ತು.

ಪಿಪಿಎಫ್ ಯೋಜನೆಯ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಸಂಗತಿಗಳು ಇಲ್ಲಿವೆ:

   
 
ಹೆಲ್ತ್