Back
Home » ಸುದ್ದಿ
ಅಜ್ಜನ ಅಂತ್ಯಕ್ರಿಯೆಗೂ ಹೋಗದೆ ಸಂತ್ರಸ್ತರಿಗಾಗಿ ಮಿಡಿದ ಡಿಸಿ
Oneindia | 13th Aug, 2019 11:36 PM

ವಿಜಯಪುರ, ಆಗಸ್ಟ್ 13: ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದ ವಿಜಯಪುರ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಅವರು ಅಜ್ಜ ವಿಧಿವಶರಾದ ಸುದ್ದಿ ತಿಳಿದ ಬಳಿಕವೂ ವಿಚಲಿತರಾಗದೆ ತಮ್ಮ ಕರ್ತವ್ಯ ಮುಂದುವರಿಸಿ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಅವರ ತಾಯಿಯ ತಂದೆ ಮಲ್ಲಪ್ಪ ನಾಯ್ಕರ್ (91) ಅವರು ಕಳೆದ ಶುಕ್ರವಾರ ರಾತ್ರಿ ಬೈಲಹೊಂಗಲ ತಾಲ್ಲೂಕಿನ ನಾಗನೂರಿನಲ್ಲಿ ನಿಧನರಾಗಿದ್ದರು. ವೈಎಸ್ ಪಾಟೀಲ್ ಅವರನ್ನು ಬಾಲ್ಯದಿಂದಲೂ ಅವರೇ ಸಾಕಿ ಬೆಳೆಸಿದ್ದರು.

ಉಕ್ಕಿ ಹರಿಯುತ್ತಿರುವ ಕಾವೇರಿ: ರಸ್ತೆ ಬದಿಯಲ್ಲೇ ನಡೆದಿದೆ ಶ್ರಾದ್ಧ ಕಾರ್ಯ

ವೈಎಸ್ ಪಾಟೀಲ್ ಅವರಿಗೆ ಅಜ್ಜನ ಅಗಲುವಿಕೆಯ ಸುದ್ದಿ ತಿಳಿದರೂ ಕೌಟುಂಬಿಕ ಕಾರ್ಯಕ್ಕಿಂತ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ನೆರವು ನೀಡುವುದು ತಮ್ಮ ಮುಖ್ಯ ಕರ್ತವ್ಯ ಎಂದು ವೃತ್ತಿಬದ್ಧತೆ ಮೆರೆದಿದ್ದಾರೆ.

ತಾತನ ನಿಧನದ ಸುದ್ದಿ ಬಂದ ಸಂದರ್ಭದಲ್ಲಿ ಕೃಷ್ಣಾ ಮತ್ತು ಭೀಮಾನದಿ ಅಪಾಯದ ಮಟ್ಟ ಮೀರಿ ಹರಿದು ಅನೇಕ ಗ್ರಾಮಗಳಿಗೆ ನೀರು ನುಗ್ಗಿ ನಿರಾಶ್ರಿತರಾಗಿದ್ದರು. ಹೀಗಾಗಿ ಅಜ್ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅವರನ್ನು ಕೊನೆಯ ಬಾರಿ ನೋಡುವುದಕ್ಕಿಂತಲೂ ಜನರ ನೆರವಿಗೆ ಧಾವಿಸುವುದಕ್ಕೆ ಜಿಲ್ಲಾಧಿಕಾರಿ ಆದ್ಯತೆ ನೀಡಿದ್ದಾರೆ.

ಹೇಗಿತ್ತು ನಮ್ಮ ಉತ್ತರ ಕನ್ನಡ..! ಈಗ ಹೇಗಾಗಿದೆ ನೋಡಿ...

2009ರಲ್ಲಿ ಕೂಡ ಉತ್ತರ ಕರ್ನಾಟಕದಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದಾಗ ವೈಎಸ್ ಪಾಟೀಲ್ ಅವರು ವಿಜಯಪುರದಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದರು. ವಿಜಯಪುರ ತಾಲ್ಲೂಕಿನ ಸಾರವಾಡದಲ್ಲಿ ಡೋಣಿ ಪ್ರವಾಹದಲ್ಲಿ ಸಿಲುಕಿದ್ದ ಇದ್ದಿಲು ತಯಾರಿಕಾ ಕಾರ್ಮಿಕರನ್ನು ಪ್ರಾಣದ ಹಂಗು ತೊರೆದು ತಾವೇ ನೀರಿಗಿಳಿದು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡು ರಕ್ಷಿಸಿದ್ದರು. ಅವರ ಮಾನವೀಯ ನಡೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು.

ಜಿಲ್ಲೆಯ ಎಲ್ಲ ಅಧಿಕಾರಿಗಳಿಗೂ ರಜೆ ನೀಡದೆ, ಪ್ರವಾಹ ಸಂತ್ರಸ್ತರ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಾಟೀಲ್ ಅವರು ಸೂಚನೆ ನೀಡಿದ್ದಾರೆ. ಅವರ ವೃತ್ತಿಪರತೆ ಸಮೆಚ್ಚುಗೆಗೆ ಪಾತ್ರವಾಗಿದೆ.

   
 
ಹೆಲ್ತ್