Back
Home » ಸುದ್ದಿ
ಗುಜರಾತ್ ಗಡಿಯಲ್ಲಿ ಉಗ್ರರ ದಾಳಿ ಎಚ್ಚರಿಕೆ: ತೀವ್ರ ಕಟ್ಟೆಚ್ಚರ
Oneindia | 14th Aug, 2019 07:25 AM

ಅಹಮದಾಬಾದ್, ಆಗಸ್ಟ್ 14: ಜಮ್ಮು ಕಾಶ್ಮೀರದ ವಿಷಯ ಸ್ವಲ್ಪ ತಣ್ಣಗಾಗುತ್ತಿದ್ದಂತೆ ಇದೀಗ ಗುಜರಾತ್ ಗಡಿಯಲ್ಲಿ ಆತಂಕ ಆರಂಭವಾಗಿದೆ.

ಗುಜರಾತ್ ಗಡಿ ಮೂಲಕ ಉಗ್ರರು ನುಸುಳುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ತೀವ್ರ ಕಟ್ಟೆಚ್ಚರವಹಿಸಲಾಗಿದೆ.

ಗುಜರಾತ್ ಸಮುದ್ರ ಮಾರ್ಗವಾಗಿ ಪಾಕಿಸ್ತಾನದ ಮೂಲದ ಉಗ್ರರು ಭಾರತ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಅಂತೆಯೇ ಪ್ರತೀ 2 ಗಂಟೆಗೆ ಒಮ್ಮೆ ಸಮುದ್ರ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೀತಿಯ ಪ್ರಯಾಣಿಕ ಮತ್ತು ಸರಕು ಸಾಗಾಣಿಕಾ ಹಡಗುಗಳನ್ನು ತೀವ್ರ ಶೋಧ ನಡೆಸಿದ್ದಾರೆ. ಈ ಸಂಬಂಧ ನೌಕೆ ಮತ್ತು ಗಡಿ ಭದ್ರತಾ ಪಡೆಗಳು ಜಂಟಿಯಾಗಿ ಶೋಧ ಕಾರ್ಯದಲ್ಲಿ ತೊಡಗಿವೆ ಎಂದು ತಿಳಿದುಬಂದಿದೆ.

ಗುಜರಾತ್ ಕಚ್ ಬಂದರು ಪ್ರದೇಶದ ಮೂಲಕವಾಗಿ ಪಾಕಿಸ್ತಾನ ಮೂಲದ ಸುಮಾರು 8-10 ಮಂದಿ ಉಗ್ರರು ಪ್ರತ್ಯೇಕ ತಂಡಗಳಾಗಿ ಭಾರತ ಪ್ರವೇಶ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಗುಜರಾತ್ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಪೂರ್ವ ಕಚ್ ಭಾಗದ ಎಸ್ ಪಿ ಪರೀಕ್ಷಿತಾ ರಾಥೋಡ್ ಅವರು, ಉಗ್ರರು ಕಚ್ ಮೂಲಕ ಭಾರತ ಪ್ರವೇಶಿಸುವ ಕುರಿತು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ನಾವು ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ.

ಬಂದರು ಪ್ರದೇಶದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದ್ದು, ಯಾವುದೇ ರೀತಿಯ ಶಂಕಿತ ವ್ಯಕ್ತಿ, ಬೋಟ್ ಕಾಣಿಸಿಕೊಂಡರೆ ಕೂಡಲೇ ಮಾಹಿತಿ ನೀಡುವಂತೆ ಸ್ಥಳೀಯ ಮೀನುಗಾರರಿಗೆ ಸಂದೇಶ ಕೂಡ ರವಾನಿಸಿದ್ದೇವೆ ಎಂದು ಹೇಳಿದ್ದಾರೆ.

ಗುಜರಾತ್ ತೀರದಾದ್ಯಂತ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ ಹಗಲೆನ್ನದೆ ಭದ್ರತೆಯಲ್ಲಿ ತೊಡಗಲಾಗಿದೆ.

   
 
ಹೆಲ್ತ್