Back
Home » ಇತ್ತೀಚಿನ
ಬೆಂಗಳೂರಿನಲ್ಲಿ ದೇಶದ ಮೊದಲ ಸೂಪರ್-ಎಫಿಶಿಯೆಂಟ್ ಏರ್ ಕಂಡೀಶನರ್ ಬಿಡುಗಡೆ!
Gizbot | 14th Aug, 2019 09:01 AM

ಭಾರತ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಕ್ಷೇತ್ರದ ನಾಲ್ಕು ಸಂಸ್ಥೆಗಳ ಸಹಭಾಗಿತ್ವದ ಎನರ್ಜಿ ಎಫಿಶಿಯನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್‍ಎಲ್) ಸಂಸ್ಥೆಯು ಬೆಂಗಳೂರು ಮತ್ತು ಇತರೆ ಐದು ನಗರಗಳಲ್ಲಿ ತನ್ನ ಸೂಪರ್-ಎಫಿಶಿಯೆಂಟ್ ಏರ್ ಕಂಡೀಶನರ್ ಪ್ರೋಗ್ರಾಂ ಅನ್ನು ವಿಸ್ತರಣೆ ಮಾಡಲಿದೆ. ಪ್ರಸ್ತುತ ದೆಹಲಿ-ಎನ್‍ಸಿಆರ್‍ಗೆ ಈ ಹೊಸ ಸೇರ್ಪಡೆಯಾಗಿದ್ದು, ಇಇಎಸ್‍ಎಲ್ ಇದೀಗ ಬೆಂಗಳೂರು, ಮುಂಬೈ, ಕೋಲ್ಕತ್ತಾ, ಹೈದ್ರಾಬಾದ್, ಚೆನ್ನೈ ಮತ್ತು ಜೈಪುರ ನಗರಗಳಲ್ಲಿ ಈ ಸೂಪರ್ ಎಫಿಶಿಯೆಂಟ್ ಎಸಿಗಳನ್ನು ಮಾರಾಟ ಮಾಡಲಿದೆ.

ಹೌದು, ಎನರ್ಜಿ ಎಫಿಶಿಯನ್ಸಿ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯು ಬೆಂಗಳೂರಿನ ದೇಶೀಯ ಗ್ರಾಹಕರು ಮತ್ತು ಸರ್ಕಾರದ ಸಂಸ್ಥೆಗಳು ಸೇರಿದಂತೆ ಇತರೆ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ಮುಂದಿನ ಎರಡು ವರ್ಷಗಳಲ್ಲಿ 20,000 ಕ್ಕೂ ಹೆಚ್ಚು ಸೂಪರ್ ಎಫಿಶಿಯೆಂಟ್ ಎಸಿಗಳನ್ನು ಮಾರಾಟ ಮಾಡುವ ಉದ್ದೇಶ ಇಟ್ಟುಕೊಂಡಿದೆ. ಈ ಸೂಪರ್-ಎಫಿಶಿಯೆಂಟ್ 1.5 ಟಿಆರ್ ಇನ್ವರ್ಟರ್ ಸ್ಪ್ಲಿಟ್ ಎಸಿಗಳು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಿಇಇ 5-ಸ್ಟಾರ್ ಎಸಿಗಳಿಗಿಂತ ಶೇ.20 ರಷ್ಟು ಮತ್ತು ಬಿಇಇ 3-ಸ್ಟಾರ್ ಎಸಿಗಳಿಗಿಂತ ಶೇ.50 ರಷ್ಟು ಇಂಧನ ಉಳಿತಾಯ ಕಾರ್ಯದಕ್ಷತೆಯನ್ನು ಹೊಂದಿವೆ ಎಂದು ಕಂಪೆನಿ ತಿಳಿಸಿದೆ.

ಸೂಪರ್-ಎಫಿಶಿಯೆಂಟ್ ಎಸಿಗಳ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಇಇಎಸ್‍ಎಲ್ ವ್ಯವಸ್ಥಾಪಕ ನಿರ್ದೇಶಕ ಸೌರಭ್ ಕುಮಾರ್ ಅವರು, ನಮ್ಮ ಸೂಪರ್ ಎಫಿಶಿಯೆಂಟ್ ಎಸಿಗಳ ಲಭ್ಯತೆ ಬಗ್ಗೆ ಬೆಂಗಳೂರು ಮತ್ತು ಇತರೆ ನಗರಗಳಲ್ಲಿ ಸಾಕಷ್ಟು ವಿಚಾರಣೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಮ್ಮ ಎಸಿಗಳಿಗೆ ಹೆಚ್ಚು ಬೇಡಿಕೆ ಇರುವುದನ್ನು ಗಮನಿಸಿದ್ದೇವೆ. ಈ ವಿಸ್ತರಣೆಯಿಂದಾಗಿ ಗ್ರಾಹಕರು ಹೆಚ್ಚು ಸುದ್ಥಿರ ಮತ್ತು ಕೈಗೆಟುಕುವ ದರದಲ್ಲಿ ಕೂಲಿಂಗ್ ಆಯ್ಕೆಯನ್ನು ಹೊಂದಲಿದ್ದಾರೆ. ಈ ಸೂಪರ್ ಎಫಿಶಿಯೆಂಟ್ ಎಸಿಗಳು ಕೇವಲ ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಅಪಾಯವನ್ನು ತಪ್ಪಿಸಲಿವೆಯಷ್ಟೇ ಅಲ್ಲದೇ, ವಿದ್ಯುತ್ ಬಿಲ್ ಉಳಿತಾಯದೊಂದಿಗೆ ಗಣನೀಯ ಪ್ರಮಾಣದ ಮೌಲ್ಯವನ್ನು ಹೆಚ್ಚಿಸಲಿವೆ'' ಎಂದು ತಿಳಿಸಿದ್ದಾರೆ.

ಈ ಸೂಪರ್-ಎಫಿಶಿಯೆಂಟ್ ಎಸಿ(ಎಸ್‍ಇಎಸಿ)ಗಳನ್ನು ವೋಲ್ಟಾಸ್ ಕಂಪನಿ ತಯಾರು ಮಾಡುತ್ತಿದ್ದು, ಇಇಎಸ್‍ಎಲ್‌ನ ಇ-ಕಾಮರ್ಸ್ ಪೋರ್ಟಲ್ ಇಇಎಸ್‍ಎಲ್‍ಮಾರ್ಟ್.ಇನ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ತಮ್ಮ ಸ್ಮಾರ್ಟ್‍ಫೋನ್‍ಗಳಲ್ಲಿ ಈ ಪೋರ್ಟಲ್‍ಗೆ ಹೋಗಿ ಸುಲಭವಾಗಿ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಈ ಎಸಿಗಳ ಸ್ಪರ್ಧಾತ್ಮಕ ಬೆಲೆಯಾದ 41,300 ರೂಪಾಯಿಗಳಿಗೆ ಲಭ್ಯವಿದ್ದು(ಜಿಎಸ್‍ಟಿ ಮತ್ತು ಡೆಲಿವರಿ ಚಾರ್ಜ್ ಸೇರಿ), ಒಂದು ವರ್ಷದ ವಾರಂಟಿ ಇದೆ.

2032 ರ ವೇಳೆಗೆ ಕಟ್ಟಡ ಮತ್ತು ಕೂಲಿಂಗ್ ಅಪ್ಲೈಯನ್ಸ್‍ಗಳ ವಿದ್ಯುತ್ ಬಳಕೆ ನಾಲ್ಕು ಪಟ್ಟು ಹೆಚ್ಚಲಿದ್ದು, ಇದರಿಂದ ಎದುರಾಗುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಕಾರ್ಯಕ್ರಮವನ್ನು ಆರಂಭಿಸಿದ ಒಂದು ತಿಂಗಳಲ್ಲಿ ವೆಬ್‍ಸೈಟ್ ಮೂಲಕ 7500 ಎಸಿಗಳಿಗೆ ನೋಂದಣಿ ಮಾಡಲಾಗಿದೆ. ಇಇಎಸ್‍ಎಲ್ ಗ್ರಾಹಕರಿಗೆ ತಡೆ ರಹಿತವಾದ ಸೇವಾ ಅನುಭವವನ್ನು ನೀಡಲಿದೆ. ಇದರಲ್ಲಿ ಪ್ರಮುಖವಾಗಿ ದೂರು ಪರಿಹಾರ ಸೇವೆ, ಆಯ್ದ ಬ್ಯಾಂಕುಗಳ ಮೂಲಕ ಆಕರ್ಷಕವಾದ ಇಎಂಐ ಆಯ್ಕೆ, ಖರೀದಿ ನಂತರ 72 ಗಂಟೆಯೊಳಗೆ ಇನ್‍ಸ್ಟಾಲೇಶನ್ ಮತ್ತು ತಮ್ಮ ಎಸಿಗಳನ್ನು ಉನ್ನತೀಕರಕ್ಕೆ ಬಯಸುವವರಿಗೆ ಬೈಬ್ಯಾಕ್ ಸೌಲಭ್ಯವನ್ನೂ ನೀಡಲಾಗುತ್ತಿದೆ.

ಡಿಲೀಟ್ ಆದ ವಾಟ್ಸ್ಆಪ್ ಸಂದೇಶಗಳನ್ನು ವಾಪಸ್ ಓದುವುದು ಹೇಗೆ?

ಈ ಸೂಪರ್-ಎಫಿಶಿಯೆಂಟ್ ಎಸಿ ಕಾರ್ಯಕ್ರಮದಡಿ ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದಲ್ಲಿ ಇಇಎಸ್‍ಎಲ್ ಮೊದಲ ಹಂತದಲ್ಲಿ 50,000 ಎಸಿಗಳನ್ನು ಮಾರಾಟ ಮಾಡಲಿದೆ. ಈ 50,000 ಎಸಿಗಳು ವಾರ್ಷಿಕ 145.5 ದಶಲಕ್ಷ ಕೆಡಬ್ಲ್ಯೂಎಚ್ (ವಾರ್ಷಿಕ 120 ಕೋಟಿ ರೂಪಾಯಿ) ವಿದ್ಯುತ್ ಅನ್ನು ಉಳಿತಾಯ ಮಾಡಲಿವೆ. ವಾರ್ಷಿಕವಾಗಿ 1,20,000 ಟನ್‍ನಷ್ಟು ಸಿಒ2 ಅನ್ನು ತಗ್ಗಿಸಲಿದೆ. ಈ ಯೋಜನೆಗೆ ಸುಮಾರು 190 ಕೋಟಿ ರೂಪಾಯಿಗಳ ಬಂಡವಾಳ ತೊಡಗಿಸುತ್ತಿದ್ದು, ಈ ಪೈಕಿ ಗ್ಲೋಬಲ್ ಎನ್‍ವಾಯರ್‍ನ್ಮೆಂಟ್ ಫೆಸಿಲಿಟಿ (ಜಿಇಎಫ್) ಭಾಗಶಃ ಅನುದಾನವನ್ನು ನೀಡಲಿದೆ. ಅದೇರೀತಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್(ಎಡಿಬಿ) ಯುನೈಟೆಡ್ ನೇಷನ್ಸ್ ಎನ್‍ವಾಯರ್‍ನ್ಮೆಂಟ್ ಪ್ರೋಗ್ರಾಂ(ಯುಎನ್‍ಇಪಿ) ಜತೆ ಸೇರಿ ಅಗತ್ಯ ಹಣಕಾಸು ನೆರವು ಮತ್ತು ಸಾಲವನ್ನು ಹಾಗೂ ತಾಂತ್ರಿಕ ನೆರವು ನೀಡಲಿದೆ.

   
 
ಹೆಲ್ತ್