Back
Home » ಸುದ್ದಿ
ಕೊಡಗಿನಲ್ಲಿ ಸಹಜ ಸ್ಥಿತಿಯತ್ತ ಜನಜೀವನ; ಆದರೆ ನಿಲ್ಲುವುದೇ ಬವಣೆ?
Oneindia | 14th Aug, 2019 10:50 AM

ಮಡಿಕೇರಿ, ಆಗಸ್ಟ್ 14: ಕೊಡಗಿನಲ್ಲಿ ನಿನ್ನೆಯಿಂದ ಆಶ್ಲೇಷ ಮಳೆಯ ಅಬ್ಬರ ಕಡಿಮೆಯಾಗಿ ಪ್ರವಾಹ ಇಳಿಮುಖವಾಗಿದೆ. ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೆ ಪ್ರವಾಹದಿಂದ ಬದುಕು ಕಳೆದುಕೊಂಡವರು ಮಾತ್ರ ಕಣ್ಣೀರಲ್ಲೇ ಕಾಲ ಕಳೆಯುವಂತಾಗಿದೆ.

ವೀರಾಜಪೇಟೆಯ ತಾಲೂಕಿನ ಕೆದಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರ ಗ್ರಾಮದ ಚೂರಿಕೆಂದುಟಿ ಎಂಬಲ್ಲಿನ ಬೆಟ್ಟ ಕುಸಿತದಿಂದ ನಾಲ್ಕು ದಿನಗಳ ಹಿಂದೆ ಜೀವಂತ ಸಮಾಧಿಯಾಗಿದ್ದವರ ಪೈಕಿ ಮೂವರ ಶವ ದೊರೆತಿದ್ದು, ಉಳಿದ ಏಳು ಮಂದಿಗೆ ಹುಡುಕಾಟ ನಡೆದಿದೆ. ಇದರ ನಡುವೆ ಕಟ್ಟೆಮಾಡು ಎಂಬಲ್ಲಿ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವುದು ಬೆಳಕಿಗೆ ಬಂದಿದ್ದು, ಒಟ್ಟಾರೆ ಇದುವರೆಗೆ ಭೂಕುಸಿತದಿಂದ 9 ಮಂದಿ ಸಾವನ್ನಪ್ಪಿದ್ದಾರೆ.

ಕೊಡಗಿನಲ್ಲಿ ಕೊಂಚ ತಗ್ಗಿದೆ ಮಳೆ; ಮಣ್ಣಿನಡಿ ಸಿಲುಕಿದ್ದ ಎರಡು ಮೃತದೇಹ ಪತ್ತೆ

ಪ್ರವಾಹ ಇಳಿಮುಖವಾಗಿದ್ದರೂ ಮರಳಿ ಹಿಂದಿನ ಬದುಕನ್ನು ಕಟ್ಟಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಪ್ರವಾಹದಿಂದಾಗಿ ಕುಶಾಲನಗರ ಬಳಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತೂಗು ಸೇತುವೆ ದುರಸ್ತಿಗೀಡಾಗಿದೆ. ಇದರಿಂದ ಕೊಡಗು ಮತ್ತು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸುಮಾರು 13 ಗ್ರಾಮಗಳ ಸಂಪರ್ಕ ಕಡಿತವಾಗಿದೆ.

ಕಾವೇರಿ-ಹಾರಂಗಿ ನದಿಗಳ ಪ್ರವಾಹದಿಂದ ಜಲಾವೃತಗೊಂಡಿದ್ದ ಮನೆಗಳ ನೀರು ನಿಧಾನವಾಗಿ ಇಳಿಮುಖವಾಗುತ್ತಿದ್ದು, ಮನೆಯೊಳಗೆ ತುಂಬಿರುವ ಕೆಸರು ಮಣ್ಣನ್ನು ತೆಗೆದು ಸ್ವಚ್ಛಗೊಳಿಸುವುದೇ ಸವಾಲಾಗಿದೆ. ಮನೆಯೊಳಗಿದ್ದ ಗೃಹೋಪಯೋಗಿ ವಸ್ತುಗಳು, ವಿದ್ಯುತ್ ವಸ್ತುಗಳು, ಎಲ್ಲಾ ಸಾಮಗ್ರಿಗಳು ಸಂಪೂರ್ಣ ಹಾನಿಯಾಗಿವೆ.

ಅಜ್ಜನ ಅಂತ್ಯಕ್ರಿಯೆಗೂ ಹೋಗದೆ ಸಂತ್ರಸ್ತರಿಗಾಗಿ ಮಿಡಿದ ಡಿಸಿ

ದಕ್ಷಿಣ ಕೊಡಗಿನ ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಕೂರು ಗ್ರಾಮದಲ್ಲಿ ಹರಿಯುತ್ತಿರುವ ರಾಮತೀರ್ಥ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಕೋಟ್ರಂಗಡ ಕುಟುಂಬಸ್ಥರಿಗೆ ಸೇರಿದ ನೂರಾರು ಎಕರೆ ನಾಟಿ ಮಾಡಿದ ಗದ್ದೆ ಮುಳುಗಡೆಯಾಗಿ ಲಕ್ಷಾಂತರ ಮೌಲ್ಯದ ಕೃಷಿ ನಷ್ಟ ಉಂಟಾಗಿದೆ. ಭತ್ತದ ಸಸಿ ಕೊಳೆತು ಹೋಗಿದೆ.

ಮಾಕುಟ್ಟ -ಕೇರಳ ಅಂತರಾಜ್ಯ ಹೆದ್ದಾರಿಯ ಆಸು ಪಾಸಿನ ಮಾಕುಟ್ಟ ರಸ್ತೆಯಲ್ಲಿ ಸಿಗುವ ಹನುಮಾನ್ ದೇವಾಲಯ ಮುಂಭಾಗದ ರಸ್ತೆ ಸಮೀಪದ ಬೆಟ್ಟವೊಂದು ಎರಡು ದಿನಗಳ ಹಿಂದೆ ಸ್ಫೋಟಗೊಂಡು ಭಾರೀ ಬಂಡೆಕಲ್ಲುಗಳು ರಸ್ತೆ ಉದ್ದಕ್ಕೂ ಉರುಳಿವೆ. ಬೆಟ್ಟ ಕುಸಿತದ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದು ಇದೀಗ ವೀರಾಜಪೇಟೆ ಲೋಕೋಪಯೋಗಿ ಇಲಾಖೆ ಜೆಸಿಬಿ ಮೂಲಕ ರಸ್ತೆ ಮೇಲೆ ಬಿದ್ದ ಮಣ್ಣು, ಬಂಡೆಯನ್ನು ತೆರವುಗೊಳಿಸಲಾಗಿದೆ.

ಒಂದೇ ವಾರದಲ್ಲಿ ಕುಂಭದ್ರೋಣ ಮಳೆಯಾಗಿದ್ದು, ಪ್ರವಾಹದಿಂದ ಹಲವು ರೀತಿಯ ಸಂಕಷ್ಟಗಳು ಎದುರಾಗಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣ ಕಡಿಮೆಯೇ ಎನ್ನಬಹುದು. ಜನವರಿಯಿಂದ ಇಲ್ಲಿವರೆಗೆ ಸುರಿದ ಮಳೆಯ ಪ್ರಮಾಣವನ್ನು ನೋಡಿದರೆ ಈ ವರ್ಷ 1961.03 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 2970.51 ಮಿ.ಮೀ ಮಳೆಯಾಗಿತ್ತು.

ಕುಸಿಯುತ್ತಿದೆ ಕಸದ ರಾಶಿ, ಮಂದಾರದ 23 ಕುಟುಂಬ ಸ್ಥಳಾಂತರ

ಇದುವರೆಗೆ ಜಿಲ್ಲೆಯಲ್ಲಿ ಸುಮಾರು 1507ಕ್ಕೂ ಹೆಚ್ಚು ಜನರು ಹಾಗೂ 19ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ. ಒಟ್ಟು 45 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯ ಒಟ್ಟು 6 ರಸ್ತೆಗಳು ಭೂಕುಸಿತ ಹಾಗೂ ಪ್ರವಾಹದಿಂದ ಬಂದ್ ಆಗಿವೆ.

ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಮೊಕ್ಕಾಂ ಹೂಡಿದ್ದು, ತುರ್ತು ಸಂದರ್ಭಗಳಲ್ಲಿ ನೆರವಿಗೆ ಬರಲಿದೆ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ದಿನದ 24 ಗಂಟೆ ಅವಧಿಯಲ್ಲಿ ನಿಯಂತ್ರಣಾ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ.

   
 
ಹೆಲ್ತ್