ಕಲೆ ನೋಡುಗರ ಜತೆಗೆ ಕಲಾವಿದನ ಮನಸ್ಸನ್ನು ಅರಳಿಸುತ್ತದೆ. ಕಲೆ ನಮ್ಮಲ್ಲಿ ಸಮಚಿತ್ತ, ಸೃಜನಶೀಲತೆ, ಸಹಕಾರತ್ವವನ್ನು ಬಯಸುತ್ತದೆ, ಈ ಅಂಶಗಳು ನೇರವಾಗಿ ಮೆದುಳಿಗೆ ಕೆಲಸ ನೀಡುವುದರಿಂದ ಖಿನ್ನತೆ ದೂರವಾಗಿಸಲು ಕಲೆ ಪರಿಣಾಮಕಾರಿ. ನೀವು ಖಿನ್ನತೆಗೆ ಒಳಗಾದಾಗ ಕಲೆಯ ವಿವಿಧ ಪ್ರಾಕಾರಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಖಿನ್ನತೆಯಿಂದ ಹೊರಬರಲು ಸಾಧ್ಯವಾಗಿಸುತ್ತದೆ. ಇಂಥ ಪ್ರಭಾವಿ ಕಲಾಚಿಕಿತ್ಸೆಯ ಮೂಲಕ ಸಕಾರಾತ್ಮಕವಾಗಿ, ಶೀಘ್ರವಾಗಿ ಖಿನ್ನತೆಯನ್ನು ಶಮನಗೊಳಿಸಬಹುದು. ಒಬ್ಬ ವ್ಯಕ್ತಿಯ ಪ್ರೀತಿ ನೀಡಬಹುದಾದ ಮಾನಸಿಕ ಪ್ರೇರಣೆ, ಸಂತೋಷವನ್ನು ಕಲೆಗೆ ನೀಡಲು ಸಾಧ್ಯ ಎನ್ನುತ್ತಾರೆ ಲಂಡನ್ ನ ನ್ಯೂರೋಬಯಾಲಜಿ ಪ್ರೊಫೆಸರ್ ಸೆಮಿರ್ ಜೆಕಿ.
ಬಣ್ಣ ಮನಸ್ಸಿನ ಭಾವನೆಗಳನ್ನು ತಿಳಿಸುತ್ತದೆ ಎನ್ನುತ್ತಾರೆ ಮನೋಶಾಸ್ತ್ರಜ್ಞರು. ಖಿನ್ನತೆಯ ಸಂದರ್ಭದಲ್ಲಿ ನಕಾರಾತ್ಮಕ ಅಂಶಗಳನ್ನು ಚಿತ್ರಕಲೆಯ ಮೂಲಕ ಹೊರಹಾಕುವ ಮೂಲಕ ಮಾನಸಿಕವಾಗಿ ನಿರಾಳವಾಗಬಹುದು, ಇದು ದೈಹಿಕವಾಗಿ, ಮಾನಸಿಕವಾಗಿ ನಿಮ್ಮನ್ನು ಸಮಚಿತ್ತವಾಗಿಸುತ್ತದೆ. ಪ್ರಾಯೋಗಿಕವಾಗಿ ಹಲವು ದೇಶಗಳಲ್ಲಿ ಚಿತ್ರಕಲಾ ಚಿಕಿತ್ಸೆ ಯಶಸ್ವಿಯಾಗಿರುವ ಪ್ರಕಾರವಾಗಿದೆ. ಖಿನ್ನತೆಗೆ ಒಳಗಾದ ವ್ಯಕ್ತಿ ತನ್ನ ನೋವುಗಳನ್ನು ಮತ್ತೊಬ್ಬರ ಜತೆ ಹಂಚಿಕೊಂಡು ಇನ್ನಷ್ಟು ಮಾನಸಿಕವಾಗಿ ಕುಗ್ಗುವುದಕ್ಕಿಂತ, ಚಿತ್ರಕಲೆಯ ಮೂಲಕ ಅದನ್ನು ಹೊರಹಾಕಿ ನಿರಾಳವಾಗಿಸುವುದು ಸೂಕ್ತ ಎನ್ನುತ್ತಾರೆ ನುರಿತ ಮನೋಶಾಸ್ತ್ರಜ್ಞರು.
ನೀವು ಮಾನಸಿಕವಾಗಿ ನೊಂದಿರುವಾಗ, ಖಿನ್ನತೆ ನಿಮ್ಮನ್ನು ಅತಿಯಾಗಿ ಕಾಡುವ ಸಂದರ್ಭಗಳಲ್ಲಿ ಏಕಾಂಗಿಯಾಗಿ ನಿಮ್ಮಿಷ್ಟ ಸಂಗೀತ ಆಲಿಸಿ, ಇಷ್ಟವಾದ ವಾದ್ಯಗಳನ್ನು ನುಡಿಸಿ, ಸಂಗೀತ ಕಾರ್ಯಕ್ರಮಗಳಿಗೆ ಹೋಗಿ. ಹೆಚ್ಚಿನ ಸಮಯ, ಗಮನವನ್ನು ಸಂಗೀತದತ್ತ ಹರಿಸಿ. ಸಂಗೀತ ಮೂಲಕ ನಿಮ್ಮ ಭಾವನೆಗಳನ್ನು ಹೊರಹಾಕಿ. ಉಳಿದ ಸಂದರ್ಭಗಳಲ್ಲಿ ನಿಮಗೆ ಹಿತವೆನಿಸುವ ಗೆಳೆಯ/ಗೆಳತಿಯರ ಜತೆ ಸಮಯ ಕಳೆಯಿರಿ. ಖಿನ್ನತೆ ದೂರವಾಗಿಸುವಲ್ಲಿ ಸಂಗೀತ ಬಹಳ ಪ್ರಭಾವಿ ಮಾಧ್ಯಮವಾಗಿದೆ. ಒಂದು ಉತ್ತಮ ಸಾಹಿತ್ಯ ಹಾಗೂ ಸಂಗೀತ ಮನುಷ್ಯನ ಜೀವನವನ್ನೆ ಬಸಲಿಸುವ ಸಾಮರ್ಥ್ಯವನ್ನು ಹೊಂದಿದೆ.
ನೀವು ಖಿನ್ನತೆಗೆ ಒಳಗಾಗಿದ್ದರೆ ಜತೆಗೆ ನೃತ್ಯ ನಿಮ್ಮಿಷ್ಟ ಕಲಾ ಪ್ರಕಾರವಾಗಿದ್ದರೆ ನೃತ್ಯದ ಮೂಲಕ ಮಾನಸಿಕ ಅಸ್ಥಿರತೆಯನ್ನು ಹೊರಹಾಕಲು ಇದು ಪರಿಣಾಮಕಾರಿ ಸಾಧನ. ನೃತ್ಯ ಚಿಕಿತ್ಸೆ ಪಡೆಯಲು ನೀವು ನೃತ್ಯ ಕಲಿತಿರಲೇಬೇಕಾದ ಅವಶ್ಯವಿಲ್ಲ. ನೃತ್ಯ ಮಾನಸಿಕ ಸಮಚಿತ್ತದ ಜೊತೆಗೆ ದೈಹಿಕ ಶ್ರಮವನ್ನು ಬಯಸುತ್ತದೆ. ನೃತ್ಯಚಿಕಿತ್ಸೆಯಿಂದ ಬೌದ್ಧಿಕ, ಭಾವನಾತ್ಮಕ ಮತ್ತು ದೈಹಿಕ ಕ್ರಿಯೆಗಳಿಗೆ ಕಸರತ್ತು ನೀಡುತ್ತದೆ ಅಲ್ಲದೇ, ನೃತ್ಯ ನಿಮ್ಮ ಭಾವನೆಯನ್ನು ವ್ಯಕ್ತಪಡಿಸುವ ಒಂದು ಪ್ರಕಾರವೂ ಹೌದು. ಹೆಚ್ಚಿನ ಚಿಕಿತ್ಸೆಗೆ ಮನೋಶಾಸ್ತ್ರಜ್ಞರನ್ನು ಸಂಪರ್ಕಿಸಬಹುದಾಗಿದ್ದು, ಅವರು ನೃತ್ಯ ಥೆರಪಿ ಮೂಲಕ ವ್ಯಕ್ತಿಯ ಭಾವನೆಗಳನ್ನು ಹೊರಹಾಕಲು ವಿವಿಧ ಹಂತದಲ್ಲಿ ಚಿಕಿತ್ಸೆ ನೀಡುತ್ತಾರೆ.
ಖಿನ್ನತೆ ಪ್ರತಿಯೊಬ್ಬರ ಜೀವನದಲ್ಲೂ ಒಂದಿಲ್ಲೊಂದು ಹಂತದಲ್ಲಿ ಎದುರಾಗುವ ಮಾನಸಿಕ ಸಮಸ್ಯೆ. ಆದರೆ ಉತ್ತಮ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಖಿನ್ನತೆಯಿಂದ ಶೀಘ್ರವಾಗಿ ದೂರಾಗಬಹುದು, ಹಾಗೆಯೇ ಖಿನ್ನತೆ ದೂರವಾಗಿಸುವಲ್ಲಿ ಕಲಾತ್ಮಕ ಚಿಕಿತ್ಸೆ ಸಹ ಸಾಕಷ್ಟು ಪ್ರಭಾವ ಬೀರುತ್ತದೆ.