Back
Home » ಆರೋಗ್ಯ
ಡಾರ್ಕ್ ಚಾಕೊಲೇಟ್ ತಿನ್ನುವ ಜನರು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಕಡಿಮೆ: ಅಧ್ಯಯನ ವರದಿ
Boldsky | 6th Sep, 2019 03:05 PM
 • ಚಾಕೊಲೇಟ್ ಮತ್ತು ಖಿನ್ನತೆಯ ಅಧ್ಯಯನ ಏಕೆ?

  ಜಾಗತಿಕವಾಗಿ ದಿನದಿಂದ ದಿನಕ್ಕೆ ಜನರು ಹೆಚ್ಚು ಖಿನ್ನತೆ ಹಾಗೂ ಮಾನಸಿಕ ಒತ್ತಡದ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಔಷಧವನ್ನು ಹೊಂದಿರದ ಖಿನ್ನತೆಯ ಸಮಸ್ಯೆಗೆ ಮಾನಸಿಕವಾಗಿ ಆದಷ್ಟು ಧೈರ್ಯ ಹಾಗೂ ಸಾಂತ್ವನವನ್ನು ತಂದುಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂದು ನಾವಿದ್ದೇವೆ. ಪ್ರತಿಯೊಬ್ಬರೂ ಎಲ್ಲರಿಗಿಂತ ಮೇಲಿರಲು ಬಯಸುತ್ತಾರೆ. ಇದರ ಪರಿಣಾಮ ತುಳಿತ, ದಬ್ಬಾಳಿಕೆ ಹಾಗೂ ನಿರ್ಲಕ್ಷ್ಯದ ವರ್ತನೆಯನ್ನು ಹೆಚ್ಚಾಗಿ ತೋರುತ್ತಾರೆ. ಇದರ ಪರಿಣಾಮ ಜನರಲ್ಲಿ ಖಿನ್ನತೆ ಉಂಟಾಗುವುದು. ಯಾರು ಡಾರ್ಕ್ ಚಾಕಲೇಟ್ ತಿನ್ನುವರೋ ಅಂತಹವರಲ್ಲಿ ಖಿನ್ನತೆಯ ಸಮಸ್ಯೆ ವಿರಳವಾಗಿರುತ್ತದೆ ಎಂದು ಹೇಳಲಾಗುವುದು.


 • ಖಿನ್ನತೆ ನಿವಾರಣೆಯಲ್ಲಿ ಡಾರ್ಕ್ ಚಾಕೊಲೇಟ್ ಪಾತ್ರ

  ತಜ್ಞರ ಪ್ರಕಾರ ಡಾರ್ಕ್ ಚಾಕೊಲೇಟ್ ಖಿನ್ನತೆಯನ್ನು ಹಾಗೂ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತದೆ. ಚಾಕೊಲೇಟ್ ಎರಡು ರೀತಿಯ ಆನಾಂಡಮೈಡ್ ಸೇರಿದಂತೆ ಹಲವಾರು ಮನೋಕ್ರಿಯಾತ್ಮಕ ಅಂಶಗಳನ್ನು ಒಳಗೊಂಡಿದೆ. ಇದು ಗಾಂಜಾವನ್ನು ಹೋಲುವ ಯೂಫೋರಿಯಾ ಭಾವನೆಗಳನ್ನು ಉಂಟುಮಾಡುತ್ತದೆ. ಡಾರ್ಕ್ ಚಾಕೊಲೇಟ್ ಹೆಚ್ಚು ಉತ್ಕರ್ಷಣ ನಿರೋಧಕ ಗುಣವನ್ನು ಒಳಗೊಂಡಿದೆ. ಖಿನ್ನತೆಗೆ ಒಳಗಾದ ಜನರು ಕಡಿಮೆ ಚಾಕೊಲೆಟ್ ತಿನ್ನುತ್ತಾರೆ ಎಂದು ಹೇಳಲಾಗುವುದು.


 • ಡಾರ್ಕ್ ಚಾಕಲೇಟ್ ಗಳ ಇತರ ಆರೋಗ್ಯದ ಪ್ರಯೋಜನಗಳು

  ಮಾನವನ ಅನುವಂಶದ ಮೇಲೆ ಕೂಡ ಡಾರ್ಕ್ ಚಾಕಲೇಟ್ ಗಳು ಪ್ರಭಾವ ಬೀರುತ್ತವೆ. ಇದು ಸೆಲ್ಯುಲರ್ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ನಿಯಂತ್ರಿಸುವುದಲ್ಲದೆ ನರ ಸಂಕೇತ ಮತ್ತು ಸಂವೇದನಾತ್ಮಕ ಗ್ರಹಿಕೆ ಮೇಲೆ ಪರಿಣಾಮ ಬೀರುತ್ತದೆ ಕೂಡ. ಕೊಕೊದ ಅಂಶ ಡಾರ್ಕ್ ಚಾಕಲೇಟ್ ಗಳಲ್ಲಿ ಹೆಚ್ಚಾಗಿ ಇರುವುದರಿಂದ ಸಂವೇದನೆ, ಸ್ಮರಣೆ, ಮನಸ್ಥಿತಿ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

  ಡಾರ್ಕ್ ಚಾಕೋಲೇಟ್ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತದ ಹರಿತವನ್ನು ಸುಗಮಗೊಳಿಸುವುದರ ಜೊತೆಗೆ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಚಾಕೋಲೇಟ್ ಆಧಾರಿತ ಔಷಧಿ ಸೇವಿಸಿದರೆ, ಎರಡು ದಿನದಲ್ಲಿ ನೆಗಡಿಗೆ ಗುಡ್ ಬಾಯ್ ಹೇಳಬಹುದು. ಚಾಕೊಲೇಟ್ ನಲ್ಲಿ ಕೋಕೋ ಅಂಶ ಅಧಿಕವಾಗಿ ಇರುವುದರಿಂದ ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ರಕ್ತನಾಳಗಳನ್ನು ಆರೋಗ್ಯವಾಗಿರುಸುವುದರ ಜೊತೆಗೆ ಟೈಪ್ 2 ಮಧುಮೇಹದ ವಿರುದ್ದ ಹೋರಾಡುತ್ತದೆ.


 • ಡಾರ್ಕ್ ಚಾಕೊಲೇಟ್ ತಿನ್ನುವ ಮಾರ್ಗಗಳು

  ಚಾಕೊಲೇಟ್ ಮಿತವಾಗಿ ಸೇವಿಸಿದರೆ ಅದು ಆರೋಗ್ಯಕ್ಕೆ ಅತ್ಯುತ್ತಮವಾದದ್ದು. ಅದನ್ನು ನಿಯಮಿತವಾಗಿ ನಮ್ಮ ಆಹಾರದ ಕ್ರಮದಲ್ಲಿ ಸೇರಿಸಿಕೊಳ್ಳಬಹುದು.

  * ಮುಂಜಾನೆ ನೀವು ಓಟ್ ಮೀಲ್ ಸೇವಿಸುತ್ತೀರಿ ಎಂದಾದರೆ ಅವುಗಳ ಜೊತೆಗೆ ಕೆಲವು ಡಾರ್ಕ್ ಚಾಕೊಲೇಟ್ ಚೂರುಗಳನ್ನು ಸೇರಿಸಿಕೊಳ್ಳಿ.

  * ಹಣ್ಣುಗಳ ಸಲಾಡ್ ಗಳ ಜೊತೆಗೆ ಡಾರ್ಕ್ ಚಾಕೊಲೇಟ್ ತುಣುಕುಗಳನ್ನು ಸೇರಿಸಿಕೊಳ್ಳಬಹುದು.

  * ಎರಡು ಊಟಗಳ ನಡುವೆ ಸಿಗುವ ಮಧ್ಯದ ವಿರಾಮದ ಅವಧಿಯಲ್ಲಿ ಕೆಲವು ತುಣುಕು ಡಾರ್ಕ್ ಚಾಕೊಲೇಟ್ ಸೇವಿಸಬಹುದು.

  * ನೀವು ಸೇವಿಸುವ ಜ್ಯೂಸ್, ಹಣ್ಣುಗಳ ಸಲಾಡ್, ತರಕಾರಿಗಳ ಸಲಾಡ್ ಹಾಗೂ ಬೀಜಗಳ ಸಲಾಡ್ ಜೊತೆಗೆ ಸೇರಿಸಿಕೊಳ್ಳಬಹುದು.


 • ಅತಿಯಾದ ಡಾರ್ಕ್ ಚಾಕೊಲೇಟ್ ಸೇವನೆ ಉತ್ತಮವಲ್ಲ

  ಅತಿಯಾಗಿ ಸೇವಿಸಿದರೆ ಅಮೃತವೂ ವಿಷವಾಗುತ್ತದೆ ಎನ್ನುವ ಮಾತಿನಂತೆ ಡಾರ್ಕ್ ಚಾಕೊಲೇಟ್ ಅನ್ನು ಸಹ ಮಿತಿಯಲ್ಲಿ ಸೇವಿಸಬೇಕು. ಮಿತಿ ಮೀರಿ ಸೇವಿಸುವುದು ಅಥವಾ ಡಾರ್ಕ್ ಚಾಕೊಲೇಟ್ ತಿನ್ನುವುದೇ ಚಟವಾಗಿ ಮಾಡಿಕೊಂಡರೆ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುವುದು. ಅಜೀರ್ಣ, ತಲೆನೋವು, ಎದೆಯುರಿ ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾಗುತ್ತವೆ. ಅತಿಯಾದ ಚಾಕಲೇಟ್ ಸೇವನೆಯು ಆಲಸ್ಯ, ದೇಹ ಭಾರ ಎನಿಸುವ ಭಾವನೆಗಳು ಕಾಡುವುದು. ಕೋಕೋ ಬೀಜದ ಪುಡಿ ಹಾಗೂ ಸಕ್ಕರೆಯ ಮಿಶ್ರಣ ಹೊಂದಿರುವುದರಿಂದ ತ್ವರಿತವಾಗಿ ದೇಹದ ತೂಕವನ್ನು ಹೆಚ್ಚಿಸುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಮಿತವಾಗಿ ಹಾಗೂ ಹಿತವಾಗಿ ಸೇವಿಸಿದರೆ ಎಲ್ಲವೂ ಆರೋಗ್ಯವಾಗಿರುತ್ತದೆ. ಇಲ್ಲವಾದರೆ ಸಮಸ್ಯೆಗಳು ಹೆಚ್ಚಾಗುತ್ತವೆ.
ಚಾಕೊಲೇಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಷ್ಟಪಡುವ ಒಂದು ಖಾದ್ಯ. ಸಿಹಿಯಾದ ರುಚಿಯನ್ನು ನೀಡುವ ಚಾಕೊಲೇಟ್ಗಳು ಆರೋಗ್ಯಕ್ಕೂ ಹಿತವನ್ನು ಉಂಟುಮಾಡುವುದು. ಬೇಕರಿಯಲ್ಲಿ ಸಿಗುವ ಸಕ್ಕರೆ ಮಿಶ್ರಿತ ಸಿಹಿ ತಿಂಡಿಗಳಿಗಿಂತ ಚಾಕೊಲೇಟ್ ಅತ್ಯಂತ ಉತ್ತಮವಾದ್ದು. ಹಾಗೊಮ್ಮೆ ನೀವು ಸಿಹಿ ತಿಂಡಿಗಳಿಗಿಂತ ಹೆಚ್ಚು ಡಾರ್ಕ್ ಚಾಕಲೇಟ್ ತಿನ್ನಲು ಬಯಸುತ್ತೀರಿ ಎಂದಾದರೆ ನೀವು ಅದೃಷ್ಟವಂತರು!.

ಲಂಡನ್ ವಿಶ್ವವಿದ್ಯಾಲಯದ ಹೊಸ ಸಂಶೋಧನೆಯ ಪ್ರಕಾರ ಡಾರ್ಕ್ ಚಾಕೊಲೇಟ್ ತಿನ್ನುವವರು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಎಂದು ಹೇಳಿದೆ. ಒಂದು ಸಂಶೋಧನೆಯಲ್ಲಿ ಚಾಕೊಲೇಟ್ ತಿನ್ನುವುದರ ಬಗ್ಗೆ ಹಾಗೂ ಖಿನ್ನತೆಯ ಲಕ್ಷಣಗಳ ಬಗ್ಗೆ 13,000ಕ್ಕೂ ಅಧಿಕ ಜನರಲ್ಲಿ ಪ್ರಶ್ನಿಸಿದರು. ನಂತರ ಡಾರ್ಕ್ ಚಾಕೊಲೇಟ್ ತಿನ್ನುವ ಜನರಲ್ಲಿ ಖಿನ್ನತೆಯ ಚಿಹ್ನೆ ಕಡಿಮೆ ಎನ್ನುವುದನ್ನು ಕಂಡುಕೊಂಡರು. ಹಾಲು ಮತ್ತು ಬಿಳಿ ಬಣ್ಣದ ಚಾಕೊಲೇಟ್ ತಿನ್ನುವವರಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ಡಾರ್ಕ್ ಚಾಕಲೇಟ್ ನಲ್ಲಿ ಕೊಕೊ ಬೀಜದ ಪ್ರಮಾಣ ಹೆಚ್ಚಿರುವುದರಿಂದ ಒತ್ತಡವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕೊಕೊ ಬೀಜದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತವನ್ನು ತಡೆಯುವ ಅಂಶಗಳಿದ್ದು ಅದು ಮೆದುಳು ಹಾಗೂ ಹೃದಯದ ಆರೋಗ್ಯಗಳಿಗೆ ಉತ್ತಮವಾಗಿದೆ ಎಂದು ಸಂಶೋಧನೆ ತಿಳಿಸುತ್ತದೆ. ಮೆದುಳಿನ ಕಾರ್ಯದ ಮೇಲೆ ಡಾರ್ಕ್ ಚಾಕಲೇಟ್ ಗಳ ಪ್ರಭಾವ ಕುರಿತು ವರ್ಷಗಳ ಕಾಲ ಅಧ್ಯಯನ ನಡೆಸಿದ್ದು ಅದರಲ್ಲಿನ ಸಕ್ಕರೆ ಅಂಶಗಳು ಕೂಡ ಮನುಷ್ಯನನ್ನು ಸಂತೋಷವಾಗಿಡುವಲ್ಲಿ ಸಹಕಾರಿಯಾಗಿದೆ ಎನ್ನಲಾಗಿದೆ.

ಚಾಕೊಲೇಟ್ ಹಾಗೂ ಖಿನ್ನತೆಯ ನಡುವೆ ಯಾವ ರೀತಿಯ ಸಂಬಂಧವಿದೆ? ಚಾಕೊಲೇಟ್ ಯಾವ ಬಗೆಯ ಆರೋಗ್ಯಕರ ಗುಣವನ್ನು ನೀಡುತ್ತದೆ? ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಲೇಖನ ನಿಮಗೆ ನೀಡಲಿದೆ.

   
 
ಹೆಲ್ತ್