Back
Home » ಸಮ್ಮಿಲನ
ವಿಶ್ವ ಆತ್ಮಹತ್ಯಾ ವಿರೋಧಿ ದಿನ 2019: ಭಾರತದಲ್ಲಿ ಆತ್ಮಹತ್ಯೆಗೆ ಕಾರಣ, ಪರಿಹಾರ
Boldsky | 10th Sep, 2019 01:05 PM
 • ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 21ನೇ ಸ್ಥಾನ

  ಜಾಗತಿಕ ಮಟ್ಟದಲ್ಲಿ ಲುಥಿಯಾನ, ರಷ್ಯಾ ಮತ್ತು ದಕ್ಷಿಣ ಅಮೇರಿಕದ ಗುಯಾನ ದೇಶಗಳು ಸರಣಿಯಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದರೆ ಭಾರತ 21ನೇ ರ್ಯಾಂಕ್ ಪಡೆದಿದೆ. ಭಾರತದ ಒಟ್ಟು ಆತ್ಮಹತ್ಯೆಯ ಪ್ರಮಾಣ ಶೇಕಡಾ 16.3 ಆಗಿದ್ದು, ಇದರಲ್ಲಿ ಪುರುಷರ ಪ್ರಮಾಣ ಶೇಕಡಾ 17.8 ಮತ್ತು ಮಹಿಳೆಯರ ಪ್ರಮಾಣ ಶೇಕಡಾ 14.7 ಒಟ್ಟಾರೆ 2,20,481 ಮಂದಿ ಆತ್ಮಹತ್ಯೆಗೆ ಶರಣಾಗುವವರ ಶೇಕಡಾವಾರು ಅಂಕಿಅಂಶವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸುತ್ತದೆ.


 • ಅಗ್ರಪಂಕ್ತಿಯಲ್ಲಿ ಬೆಂಗಳೂರು

  ಅತ್ಯಧಿಕ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮುಖ ನಗರಗಳಲ್ಲಿ ಬೆಂಗಳೂರು ಸಹ ಅಗ್ರಪಂಕ್ತಿಯಲ್ಲಿದೆ. 2018ರ ಜನವರಿಯಿಂದ ಸೆಪ್ಟೆಂಬರ್ ವರೆಗೆ ಬರೋಬ್ಬರಿ 1ಸಾವಿರದ 921ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು 2017ರ ಅನುಪಾತಕ್ಕಿಂತ ಶೇಕಡಾ 50ರಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಅಲ್ಲದೇ ಕಳೆದ ನಾಲ್ಕು ವರ್ಷಗಳಲ್ಲೇ ಅತಿ ಹೆಚ್ಚು ಆತ್ಮಹತ್ಯೆಯ ಸಾವು ದಾಖಲಾದ ವರ್ಷವಾಗಿತ್ತು. ಬೆಂಗಳೂರಿನ ಇಂತಹ ಅನೇಕ ಆತ್ಮಹತ್ಯಾ ಪ್ರಕರಣಗಳು ವರದಿಯಾಗದೇ ಇರುವುದು ಸಹ ಅಚ್ಚರಿಯೇ ಅಂಗತಿಯೇ. ಅಂಕಿ ಅಂಶಗಳ ಪ್ರಕಾರ ಆತ್ಮಹತ್ಯಾ ಪ್ರಕರಣಗಳು ಸಂಖ್ಯೆ ಏರುಪೇರಾದರೂ ಪರಿಣಾಮ ಹಾಗೂ 'ಸೂಸೈಡ್ ಕಾಪಿಟಲ್' ಎಂಬ ಭೂತ ಮಾತ್ರ ಬೆಂಗಳೂರನ್ನು ಬಿಟ್ಟು ಇನ್ನೂ ತೊಲಗಿಲ್ಲ ಎಂಬುದು ವಿಷಾದನೀಯ.


 • ಆತ್ಮಹತ್ಯೆಗೆ ಕಾರಣಗಳು

  ಒತ್ತಡ
  ಬಹುತೇಕ ಆತ್ಮಹತ್ಯೆಗೆ ಒತ್ತಡವೇ ಪ್ರಮುಖ ಕಾರಣ ಎಂಬುದು ಹಲವು ವರದಿ, ದಾಖಲೆಗಳ ಮೂಲಕ ತಿಳಿಯುತ್ತದೆ. ಕೆಲಸ, ಜೀವನ, ಸಂಬಂಧ, ಕ್ಷುಲ್ಲಕ ವಿಷಯಗಳು ಸೇರಿದಂತೆ ಒತ್ತಡಕ್ಕೆ ಯಾವುದೇ ಕಾರಣವಿರಬಹುದು, ಆದರೆ ಒತ್ತಡಕ್ಕೆ ಒಳಗಾದ ವ್ಯಕ್ತಿಗೆ ಇದರಿಂದ ಮುಕ್ತಿ ಪಡೆಯುವುದಕ್ಕೆ ಆತ್ಮಹತ್ಯೆಯೇ ದಾರಿ ಎಂಬ ತಪ್ಪು ಕಲ್ಪನೆಯಿಂದ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಮಾನಸಿಕ ತಜ್ಞರು ಹೇಳಿದ್ದಾರೆ.


 • ಆತ್ಮಹತ್ಯೆಗೆ ಕಾರಣಗಳು

  ಆಘಾತಕಾರಿ ಘಟನೆಗಳು
  ಬಾಲ್ಯದಲ್ಲಿ ಅಥವಾ ತನ್ನ ಜೀವನದ ಯಾವುದೇ ಹಂತದಲ್ಲಿ ನಡೆದ ಆಘಾತಕಾರಿ ಘಟನೆಗಳು ಎಡೆಬಿಡದೆ ಮಾನಸಿಕವಾಗಿ ಅಥವಾ ಬಾಹ್ಯವಾಗಿ ಕಾಡಿದಾಗ ಮನುಷ್ಯ ಜೀವನವನ್ನು ಅಂತ್ಯಗೊಳಿಸಲು ಚಿಂತಿಸುತ್ತಾನೆ.


 • ಆತ್ಮಹತ್ಯೆಗೆ ಕಾರಣಗಳು

  ವ್ಯಸನಿಗಳು
  ಡ್ರಗ್ಸ್, ಮದ್ಯಪಾನ ದಂಥ ಚಟಕ್ಕೆ ದಾಸರಾಗುವವರಿಗೆ ಆತ್ಮಹತ್ಯೆಯಂಥ ಕೆಟ್ಟ ಆಲೋಚನೆಗಳು ಬರುತ್ತದೆ ಹಾಗೂ ಮತ್ತಿನಲ್ಲಿರುವ ವೇಳೆ ಇವರು ಅನಿಸಿದ್ದನ್ನು ಮಾಡುವ ಮನಸ್ಥಿತಿ ಉಳ್ಳವರಾಗಿರುತ್ತಾರೆ. ಈ ಸಂದರ್ಭದಲ್ಲಿ ಇವರಿಗೆ ತಾವು ಏನು ಮಾಡುತ್ತಿದ್ದೇವೆ ಎನ್ನುವ ಜ್ಞಾನವೂ ಇರುವುದಿಲ್ಲ. ಇಂತಹ ಪ್ರಕರಣಗಳಿಂದಲೇ ಹೆಚ್ಚಾಗಿ ಆತ್ಮಹತ್ಯೆಗಳು ನಡೆಯುತ್ತಿದೆ ಎನ್ನಲಾಗಿದೆ.


 • ಆತ್ಮಹತ್ಯೆಗೆ ಕಾರಣಗಳು

  ನಂಬಿಕೆ ಇಲ್ಲದಿರುವುದು
  ತನ್ನ ಮೇಲೆ ತನಗೆ ನಂಬಿಕೆ ಇಲ್ಲದೆ ಅಂತಿಮವಾಗಿ ಆತ್ಮಹತ್ಯೆಯ ಮೂಲಕ ಜೀವನನ್ನು ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಅಥವಾ ದೈಹಿಕ ಸವಾಲುಗಳು ಎದುರಾದಾಗ ಅದನ್ನು ಹೇಗೆ ಎದುರಿಸಬೇಕು ಎನ್ನುವ ಭಯದಲ್ಲಿ, ತನ್ನಿಂದ ಇದನ್ನು ಎದುರಿಸಲು ಸಾಧ್ಯವಿಲ್ಲ ಎಂದು ಕೆಟ್ಟ ನಿರ್ಧಾರಗಳಿಗೆ ಮುಂದಾಗುತ್ತಾರೆ.


 • ಆತ್ಮಹತ್ಯೆಗೆ ಕಾರಣಗಳು

  ಆಕಸ್ಮಿಕ ಆತ್ಮಹತ್ಯೆಗಳು
  ಆಕಸ್ಮಿಕ ಆತ್ಮಹತ್ಯೆ ನಿಜಕ್ಕೂ ಆಘಾತಕಾರಿ ಅಂಶ. ತಮಗೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಇಲ್ಲದಿದ್ದರೂ, ಯಾರನ್ನೋ ಹೆದರಿಸುವ ಸಲುವಾಗಿ ನಡೆಸುವ ಆತ್ಮಹತ್ಯೆಯ ಯತ್ನ ಹಲವು ಬಾರಿ ಪ್ರಾಣವನ್ನೆ ಬಲಿಪಡೆದಿದೆ.


 • ಪರಿಹಾರ ಏನು

  ಭಾವನೆಗಳನ್ನು ನಿರ್ಲಕ್ಷಿಸಬೇಡಿ
  ನಿಮ್ಮ ಬಳಿ ಅವರ ಸಮಸ್ಯೆ ಅಥವಾ ನೋವನ್ನು ಹೇಳಿಕೊಂಡಾದ ಅದನ್ನು ಕಡೆಗಣಿಸಬೇಡಿ. ಇದು ಆತ್ಮಹತ್ಯೆ ಮಾಡಿಕೊಳ್ಳುವಂಥ ಗಂಭೀರ ಸಮಸ್ಯೆ ಏನಲ್ಲ ಎಂದ ಭಾವಿಸಬೇಡಿ. ನಿಮಗೆ ಅದು ಗಭೀರವಲ್ಲದಿದ್ದರೂ ಅವರು ಅದನ್ನು ಹೇಗೆ ಸ್ವೀಕರಿಸಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಜೀವನಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗುವವರಿಗೆ ಜೀವನ ಬೆಲೆ ತಿಳಿದಿರುವುದಿಲ್ಲ. ಅವರಿಗೆ ಸಣ್ಣ ವಿಷಯವೂ ದೊಡ್ಡದಾಗೇ ಕಾಣುತ್ತದೆ.


 • ಪರಿಹಾರ ಏನು

  ಸಹಾಯ ಅಗತ್ಯ ಅರಿಯಿರಿ
  ಆತ್ಮಹತ್ಯೆಗೆ ಶರಣಾಗುವ ಮನಸ್ಥಿತಿ ಹೊಂದಿದ್ದಾರೆ ಎಂದರೆ ಅವರಿಗೆ ನಿಮ್ಮ ಸಹಾಯದ ಅಗತ್ಯವಿದೆ ಎಂದರ್ಥ. ತಮಗಿರುವ ಸಮಸ್ಯೆಗೆ ಪರಿಹಾರ ಹುಡುಕುವ ಎಲ್ಲಾ ಮಾರ್ಗಗಳು ಅವರ ಪಾಲಿಗೆ ಮುಚ್ಚಿರುತ್ತದೆ. ಆ ಬಗ್ಗೆ ನೀವು ಅವರಿಗೆ ನೆರವಾಗಬೇಕಿರುತ್ತದೆ.


 • ಪರಿಹಾರ ಏನು

  ಉತ್ತಮ ಕೇಳುಗರಾಗಿ
  ಇಂತಹ ಪರಿಸ್ಥಿತಿಯಲ್ಲಿ ಮೊದಲಾಗಿ ಅವರ ಸಮಸ್ಯೆಯನ್ನು ಆಲಿಸುವ ಉತ್ತಮ ಕೇಳುಗರಾಗಿ, ಇದಕ್ಕೆ ಬೇಕಿರುವುದು ನಿಮ್ಮ ತಾಳ್ಮೆ ಮಾತ್ರ. ಹಲವು ಬಾರಿ ಸಮಸ್ಯೆಯನ್ನು ಕೇಳುವುದರಿಂದಲೇ ಅವರ ಅರ್ಧ ಸಮಸ್ಯೆ ಪರಿಹಾರವಾಗಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ಆ ವಿಷಯದ ಬಗ್ಗೆ ಅವರ ಜತೆ ವಾದ ಮಾಡಬೇಡಿ, ಸಾಧ್ಯವಾದರೆ ಸಲಹೆ ನೀಡಿ.


 • ಪರಿಹಾರ ಏನು

  ಸಮಸ್ಯೆಯಲ್ಲಿ ಸಿಲುಕಿದ್ದರೆ ಏಕಾಂಗಿಯಾಗಿ ಬಿಡಬೇಡಿ
  ವ್ಯಕ್ತಿ ಖಿನ್ನತೆ, ಒತ್ತಡ ಅಥವಾ ಯಾವುದೇ ಸಮಸ್ಯೆಯಲ್ಲಿ ಸಿಲುಕಿದ್ದರೆ ಅವರನ್ನು ಆದಷ್ಟು ಏಕಾಂಗಿಯಾಗಿ ಬಿಡಬೇಡಿ. ಅವರು ತಮಗೆ ತಾವೇ ನೋವು ತಂದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಒಬ್ಬ ಉತ್ತಮ ಸ್ನೇಹಿತ ಅಥವಾ ಸಹೋದರ/ರಿಯ ಅಗತ್ಯವಿರುತ್ತದೆ.


 • ಪರಿಹಾರ ಏನು

  ವೈದ್ಯರ ಭೇಟಿ ಮಾಡಿಸಿ
  ಮಾನಸಿಕವಾಗಿ ತೀರಾ ಕುಗ್ಗಿರುವ ವ್ಯಕ್ತಿಯಾಗಿದ್ದರೆ ಮಾನಸಿಕ ವೈದ್ಯರು ಅಥವಾ ಉತ್ತಮ ಮಾರ್ಗದರ್ಶಕರ ಬಳಿ ಅವರಿಗೆ ತಿಳಿ ಹೇಳಿಸಿ.


 • ಆತ್ಮಹತ್ಯೆ ಸಹಾಯವಾಣಿಗಳು

  ದೇಶಾದ್ಯಂತ ಸರ್ಕಾರಿ ಹಾಗೂ ಹಲವು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಆತ್ಮಹತ್ಯೆ ತಡೆ ನಿಯಂತ್ರಣ ಕೇಂದ್ರಗಳನ್ನು ಆರಂಭಿಸಿದೆ. ಅವರ ಮೂಲ ಉದ್ದೇಶ ಆತ್ಮಹತ್ಯೆಯ ಪ್ರಮಾಣವನ್ನು ತಪ್ಪಿಸುವುದು. ಇಂತಹ ಸಹಾಯವಾಣಿಗಳ ಪಟ್ಟಿ ಇಲ್ಲಿದೆ.

  * ಸ್ನೇಹ ಇಂಡಿಯಾ ಫೌಂಡೇಷನ್- 914424640050
  * ಬೆಂಗಳೂರಿನ SAHAI ಸಹಾಯವಾಣಿ- 080 - 25497777
  * ಹೈದರಾಬಾದ್ ನ ರೋಶ್ನಿ - 914066202000
  * ಕೂಜ್- +918322252525
  * ವಂದ್ರೇವಾಲಾ ಫೌಂಡೇಷನ್- 18602662345
  * ಕನೆಕ್ಟಿಂಗ್- 919922001122
ಇಂದು ವಿಶ್ವ ಆತ್ಮಹತ್ಯಾ ವಿರೋಧಿ ದಿನಾಚರಣೆ. 2019ನೇ ಸಾಲಿನ ಆತ್ಮಹತ್ಯಾ ವಿರೋಧಿ ದಿನವನ್ನು "ಆತ್ಮಹತ್ಯೆಗೆ ಕಾರಣಗಳು ಹಾಗೂ ತಡೆಗಟ್ಟುವ ವಿಧಾನಗಳ'' ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಲ್ಲಿ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ.

ಆತ್ಮಹತ್ಯೆಯ ಭೂತ ಯಾವ ದೇಶವನ್ನು ಬಿಟ್ಟಿಲ್ಲ. ವಿಶ್ವದೆಲ್ಲೆಡೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ವೈಯಕ್ತಿಕ, ಆ ದೇಶದ ಸಾಂಸ್ಕೃತಿಕ, ಧಾರ್ಮಿಕ, ಲಿಂಗ ಅಥವಾ ಜೀವನ ಶೈಲಿಗಳು ಕಾರಣವಾಗಿರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 40ಸೆಕೆಂಡ್ ಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ, ಈ ಹಿನ್ನೆಲೆ ಎಲ್ಲಾ ದೇಶಗಳು ಸಹ ಆತ್ಮಹತ್ಯೆ ತಡೆಗಟ್ಟುವ ತಂತ್ರಗಳನ್ನು ರಾಷ್ಟ್ರೀಯ ಆರೋಗ್ಯ ಮತ್ತು ಶಿಕ್ಷಣ ಯೋಜನೆಯಲ್ಲಿ ಅಳವಡಿಸಲು ಕರೆ ನೀಡಿದೆ. ಆತ್ಮಹತ್ಯೆಯ ಯೋಚನೆ ವ್ಯಕ್ತಿಯಲ್ಲಿ ಮೂಡುವುದು ಒಂದು ಕಾಯಿಲೆ. ಇದಕ್ಕೆ ಸೂಕ್ತ ಸಮಯದಲ್ಲಿ ಉತ್ತಮ ಚಿಕಿತ್ಸೆಯ ಅಗತ್ಯವಿದೆ ಎಂದು ಖ್ಯಾತ ಮಾನಸಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

   
 
ಹೆಲ್ತ್