Back
Home » ಸಮ್ಮಿಲನ
ವಿದ್ಯಾರ್ಥಿಗಳು ಅರ್ಧಕ್ಕೆ ಶಾಲೆ ಬಿಡಲು ಕಾರಣವೇನು ಗೊತ್ತೇ?
Boldsky | 10th Sep, 2019 04:00 PM
 • ಭಾರತದಲ್ಲಿ ಏರುತ್ತಲೇ ಇದೆ ಪ್ರಮಾಣ

  ಭಾರತದಲ್ಲಿ ಶಾಲೆ ಅರ್ಧದಲ್ಲೇ ಬಿಟ್ಟು ಹೋಗುವ ಮಕ್ಕಳ ಸಂಖ್ಯೆಯು ಗಣನೀಯವಾಗಿ ಏರುತ್ತಿದ್ದು, ಇದು ಸರ್ಕಾರಕ್ಕೆ ಕೂಡ ತಲೆನೋವಾಗಿದೆ. ವಿದ್ಯಾರ್ಥಿಗಳು ಶಾಲೆ ಬಿಡಲು ಪ್ರಮುಖ ಕಾರಣವೆಂದರೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಸಿಗದೆ ಇರುವಂತಹ ಮೂಲಭೂತ ಸೌಲಭ್ಯಗಳು ಹಾಗೂ ಅಲ್ಲಿನ ದುಸ್ಥಿತಿ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಂಕಿಅಂಶದ ಪ್ರಕಾರ 2014-15ರಲ್ಲಿ ಪ್ರಾಥಮಿಕ ಶಾಲೆ ಬಿಟ್ಟವರ ಸಂಖ್ಯೆಯು ಶೇ.4.34 ಇದೆ ಮತ್ತು ಪ್ರೌಢ ಶಿಕ್ಷಣ ಪೂರ್ತಿಗೊಳಿಸದೆ ಬಿಟ್ಟವರ ಸಂಖ್ಯೆಯು ಶೇ.17.86ರಷ್ಟಿದೆ.
  ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬಿಡುಗಡೆ ಮಾಡಿರುವಂತಹ ಅಂಕಿಅಂಶದ ಪ್ರಕಾರ ಭಾರತದಲ್ಲಿ 2018ರಲ್ಲಿ ಶೇ.30ರಷ್ಟು ಬಾಲಕಿಯರು 9ನೇ ತರಗತಿ ತಲುಪುವ ಮೊದಲೇ ಶಾಲೆಗೆ ಗುಡ್ ಬೈ ಹೇಳಿದ್ದಾರೆ ಮತ್ತು 11ನೇ ತರಗತಿ ತಲುಪುವ ವೇಳೆಗೆ ಇದು ಶೇ.57ರಷ್ಟಾಗಿದೆ.

  ಭಾರತದಲ್ಲಿ ವಿದ್ಯಾರ್ಥಿಗಳು ಅರ್ಧದಲ್ಲೇ ಶಾಲೆ ಬಿಡಲು ಹಲವಾರು ಕಾರಣಗಳಿದ್ದು, ಪ್ರಮುಖ ಸಮಸ್ಯೆಗಳನ್ನು ಇಲ್ಲಿ ತಿಳಿಸಲಾಗಿದೆ.


 • ಕೌಟುಂಬಿಕ ಮತ್ತು ಸಾಮಾಜಿಕ-ಆರ್ಥಿಕ ಸಮಸ್ಯೆ

  ಕಡಿಮೆ ಶಿಕ್ಷಣ ಹೊಂದಿರುವ, ಆರ್ಥಿಕವಾಗಿ ಹಿಂದುಳಿದವರ ಮಕ್ಕಳು ಹೆಚ್ಚಾಗಿ ಅರ್ಧದಲ್ಲೇ ಶಾಲೆ ಬಿಡುತ್ತಾರೆ. ಮಕ್ಕಳು ಮನೆಯಲ್ಲೇ ಕುಳಿತು ತಮ್ಮ ತಂದೆ ತಾಯಿಗೆ ನೆರವಾಗಲು ಕೆಲಸಕ್ಕೆ ಸೇರುವರು. ಇದರಿಂದಾಗಿ ಅವರ ಶಿಕ್ಷಣದ ಮೇಲೆ ಪ್ರಭಾವ ಬೀರುವುದು

  ಕೆಟ್ಟ ಅಭ್ಯಾಸಗಳ ಪ್ರಭಾವ
  ಕೆಟ್ಟ ಅಭ್ಯಾಸಗಳು ಶಾಲೆ ಅರ್ಧದಲ್ಲೇ ಬಿಡಲು ಮತ್ತೊಂದು ಕಾರಣವಾಗಿದೆ. ಮುಖ್ಯವಾಗಿ ಡ್ರಗ್ಸ್, ಆಲ್ಕೋಹಾಲ್, ಟಿವಿ ಮತ್ತು ಇಂಟರ್ನೆಟ್ ಮಕ್ಕಳನ್ನು ಶಿಕ್ಷಣದಿಂದ ವಿಮುಖಗೊಳಿಸುವುದು


 • ಶಾಲೆಯಲ್ಲಿ ಮೂಲಭೂತ ಸೌಲಭ್ಯದ ಕೊರತೆ

  ಶೌಚಾಲಯವಿಲ್ಲದೆ ಇರುವುದು, ಕುಡಿಯಲು ಸರಿಯಾಗಿ ನೀರು ಇಲ್ಲದಿರುವುದು, ಶಾಲಾ ವಾತಾವರಣ ಮತ್ತು ತರಗತಿ ಕಳಪೆ ಆಗಿರುವುದು, ಶಿಕ್ಷಕರ ನಿರ್ಲಕ್ಷ್ಯ ಮತ್ತು ಭದ್ರತೆಯ ಕಾರಣದಿಂದಾಗಿ ವಿಶೇಷವಾಗಿ ಬಾಲಕಿಯರು ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸುವರು.

  ಸ್ಯಾನಿಟರಿ ಪ್ಯಾಡ್ ಕೊರತೆ
  ಬಾಲಕಿಯರಿಗೆ ಶಾಲೆಯಲ್ಲಿ ಸಚ್ಛತೆ ಕೊರತೆ ಇರುವ ಕಾರಣದಿಂದಾಗಿ ಅವರು ಪ್ರತೀ ತಿಂಗಳು ಮನೆಯಲ್ಲೇ ಕುಳಿತುಕೊಳ್ಳುವರು. ಅದರಲ್ಲೂ ಹೆಣ್ಣುಮಕ್ಕಳ ಮುಟ್ಟಿನ ದಿನಗಳಲ್ಲಿ ಅವರಿಗೆ ಸ್ಯಾನಿಟರಿ ಪ್ಯಾಡ್ ಸೇರಿದಂತೆ ಅಗತ್ಯ ಸಲಹೆ ಸೂಚನೆಗಳ ಕೊರತೆ ಶಾಲೆಗಳಲ್ಲಿದೆ. ಇದರಿಂದಾಗಿ ಅವರು ಶಾಲೆಗೆ ಗೈರಾಗುವರು ಮತ್ತು ಮುಂದೊಂದು ದಿನ ಶಾಲೆಯನ್ನು ಸಹ ಬಿಟ್ಟುಬಿಡುವರು.


 • ಅನಾರೋಗ್ಯ

  ಮಗುವಿನ ಅನಾರೋಗ್ಯವು ಶಾಲೆಯಲ್ಲಿ ಅದಕ್ಕೆ ಸರಿಯಾಗಿ ಕಲಿಯಲು ಮತ್ತು ಪ್ರದರ್ಶನ ನೀಡಲು ಸಾಧ್ಯವಾಗದೆ ಇರಬಹುದು. ದೀರ್ಘಕಾಲಿಕ ಅನಾರೋಗ್ಯವು ಮಗುವಿನ ಶೈಕ್ಷಣಿಕ ಪ್ರಗತಿ ಮೇಲೆ ಪರಿಣಾಮ ಬೀರುವುದು.
  ತಂದೆ ಅಥವಾ ತಾಯಿಯ ಸಾವು
  ತಂದೆ ಅಥವಾ ತಾಯಿ, ಇವರಿಬ್ಬರು ಸಾವನ್ನಪ್ಪಿದ ವೇಳೆ ಹೆಚ್ಚಾಗಿ ಮನೆಯ ಹಿರಿಯ ಮಕ್ಕಳು ಜವಾಬ್ದಾರಿ ತೆಗೆದುಕೊಳ್ಳುವರು. ಇದರಿಂದಾಗಿ ಅವರು ಶಾಲೆ ಅರ್ಧಕ್ಕೆ ನಿಲ್ಲಿಸುವರು.


 • ಆಸಕ್ತಿ ಇಲ್ಲದಿರುವುದು

  ಹೆಚ್ಚಿನ ಮಕ್ಕಳಿಗೆ 9 ಮತ್ತು 10ನೇ ತರಗತಿಗೆ ಹೋದ ವೇಳೆ ಕಲಿಯುವುದರಲ್ಲಿ ಆಸಕ್ತಿ ಇಲ್ಲದಂತೆ ಆಗುವುದು ಮತ್ತು ಇದರಿಂದ ತರಗತಿಗೆ ಹೋಗದಿರಬಹದು ಅಥವಾ ತಡವಾಗಿ ಬರುವರು. ಶಿಕ್ಷಕರೊಂದಿಗಿನ ಸಂವಹನ ಕೊರತೆಯಿಂದಾಗಿ ಕೆಲವು ಮಕ್ಕಳಿಗೆ ಪ್ರೇರಣೆ ಸಿಗದೆ ಇರುವುದು ಮತ್ತು ಇದರಿಂದಾಗಿ ಶಾಲೆ ಅರ್ಧಕ್ಕೆ ನಿಲ್ಲಿಸುವರು.

  ಧಾರಣ ಶಕ್ತಿ
  ಮಕ್ಕಳು ಕಲಿಯುವುದರಲ್ಲಿ ಹಿಂದೆ ಇದ್ದರೆ ಆಗ ಇತರ ಮಕ್ಕಳ ಮುಂದೆ ಅವರಿಗೆ ಅವಮಾನ ಆಗುತ್ತದೆ. ಇದರಿಂದಾಗಿ ಅವರ ಸ್ವಾಭಿಮಾನಕ್ಕೆ ಧಕ್ಕೆ ಆಗುವುದು ಮತ್ತು ಅವಮಾನದಿಂದಾಗಿ ಶಾಲೆ ಬಿಡುವರು.


 • ಶಾಲೆಯ ಶುಲ್ಕ ಭರಿಸಲಾಗದೆ ಇರುವುದು

  ಭಾರತದಲ್ಲಿ ಹೆಚ್ಚಾಗಿ ಮಕ್ಕಳಿಗೆ ಶಿಕ್ಷಣ ಶುಲ್ಕ ಭರಿಸಲು ಪೋಷಕರಿಗೆ ಸಾಧ್ಯವಾಗುವುದಿಲ್ಲ. ಒಂದಕ್ಕಿಂತ ಹೆಚ್ಚು ಮಕ್ಕಳಿದ್ದರೆ ಆಗ ಒಂದು ಮಗುವಿಗೆ ಶಿಕ್ಷಣ ನೀಡಿ, ಮತ್ತೊಂದನ್ನು ಮನೆಯಲ್ಲೇ ಇರಿಸಿಕೊಳ್ಳುವರು.


 • ಸರಿಯಾದ ಮಾರ್ಗದರ್ಶನ ಇಲ್ಲದಿರುವುದು

  ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಯಾವುದೇ ಆಸಕ್ತಿ ಮತ್ತು ಮಾರ್ಗದರ್ಶನ ನೀಡದೆ ಇದ್ದಾಗ ಸ್ವಾಭಾವಿಕವಾಗಿ ಮಕ್ಕಳಿಗೆ ಕಲಿಯಲು ಪ್ರೇರಣೆ ಸಿಗುವುದಿಲ್ಲ. ಇದರಿಂದಾಗಿ ಅವರು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು, ಅಂತಿಮವಾಗಿ ಶಾಲೆ ಬಿಡುವರು.


 • ನಿರಂತರ ವೈಫಲ್ಯ

  ಕೆಲವು ಮಕ್ಕಳು ತರಗತಿ ಪರೀಕ್ಷೆ ಅಥವಾ ಸೆಮಿಸ್ಟರ್ ಆಗಿರಲಿ ಪ್ರತಿಯೊಂದರಲ್ಲೂ ವಿಫಲವಾಗುವರು. ನಿರಂತರ ವಿಫಲವಾದರೆ ಆಗ ಅವರಲ್ಲಿ ಆತ್ಮವಿಶ್ವಾಸದ ಕೊರತೆಯಾಗುವುದು. ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದರೆ ಆಗ ಖಂಡಿತವಾಗಿಯೂ ಆತ್ಮವಿಶ್ವಾಸ ಬರುವುದು. ಗಮನಹರಿಸದೆ ಇರುವುದು ಇದಕ್ಕಿಂತಲೂ ದೊಡ್ಡ ಮಟ್ಟದ ಶತ್ರುವಾಗಿದೆ. ಯಾವುದೇ ವ್ಯಕ್ತಿಗೆ ಒಂದು ವಿಚಾರದಲ್ಲಿ ಆಸಕ್ತಿಯು ಕಳೆದುಕೊಂಡರೆ ಅವರು ಬೇರೆ ಯಾವುದಾದರೂ ಹೊಸ ವಿಚಾರಗಳತ್ತ ದೃಷ್ಟಿ ಹರಿಸುವರು.
ಸರ್ಕಾರ ಹಲವಾರು ಅಭಿಯಾನ, ಬಿಸಿಯೂಟ, ಹಾಲು... ಹೀಗೆ ನಾನಾ ರೀತಿಯಲ್ಲಿ ಮಕ್ಕಳನ್ನು ಶಾಲೆಗೆ ಸೆಳೆಯಲು ಪ್ರಯತ್ನಿಸುತ್ತಲೇ ಇದೆ. ಆದರೆ ಸರ್ಕಾರ ಶಾಲೆಗಳಲ್ಲಿ ಮಧ್ಯದಲ್ಲೇ ಶಾಲೆ ಬಿಟ್ಟು ಹೋಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಾಗುತ್ತಲಿದೆ. ಶಾಲೆ ಬಿಟ್ಟು ಹೋದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ತರುವಂತಹ ಕಾರ್ಯಕ್ರಮಗಳು ಕೂಡ ಇದೆ. ಆದರೂ ಇದು ಅಷ್ಟರ ಮಟ್ಟಿಗೆ ಫಲಪ್ರದವಾಗಿಲ್ಲ.

ಕಾರಣಗಳು ಏನೇ ಆಗಿದ್ದರೂ ಮಕ್ಕಳು ಶಾಲೆ ಬಿಟ್ಟು ಹೋಗುವುದು ಒಳ್ಳೆಯ ವಿಚಾರವಲ್ಲ. ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯು ಪ್ರತೀ ವರ್ಷವೂ ಹೆಚ್ಚಾಗುತ್ತಲೇ ಇದೆ. ಶಾಲೆ ಬಿಟ್ಟು ಹೋಗುವಂತಹ ಮಕ್ಕಳು ಮುಂದೆ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಅವರಿಗೆ ಬಾಲ್ಯದ ಶಿಕ್ಷಣದ ಕೊರತೆಯು ಖಂಡಿತವಾಗಿಯೂ ಕಾಡುವುದು. ಪ್ರಾಥಮಿಕ ಶಿಕ್ಷಣ ಸಿಕ್ಕಿದರೆ ಆಗ ಸರಿಯಾದ ಶಿಸ್ತು ಮತ್ತು ಜೀವನದ ಪಾಠ ಸಿಗುವುದು.

   
 
ಹೆಲ್ತ್