Back
Home » ಸುದ್ದಿ
ಸೆ.30ರಂದು ಹೈಕೋರ್ಟಿನಲ್ಲಿ ಪ್ರಜ್ವಲ್ ರೇವಣ್ಣಗೆ ಅನರ್ಹತೆ ಅಗ್ನಿಪರೀಕ್ಷೆ
Oneindia | 11th Sep, 2019 10:01 PM
 • ಹೈಕೋರ್ಟ್ ಸಮನ್ಸ್ ಆದೇಶದಲ್ಲಿ ಏನಿದೆ?

  ಲೋಕಸಭೆ ಚುನಾವಣೆ ವೇಳೆ ನಾಮಪತ್ರದ ಜೊತೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ನಮೂದಿಸಿರುವ ಆಸ್ತಿ ವಿವರಗಳು ಸುಳ್ಳು ಮಾಹಿತಿ‌ ಎಂಬ ಆರೋಪ ಕುರಿತಂತೆ ಸೆ.03ರಂದು ವಿಚಾರಣೆ ನಡೆಸಿದ ಹೈಕೋರ್ಟ್, ಆರೋಪಿಯ ವಿಳಾಸಕ್ಕೆ ಸಮನ್ಸ್ ಕಳಿಸುವಂತೆ ಸೂಚಿಸಿತ್ತು. ಆದರೆ, ಪ್ರಜ್ವಲ್ ಅಫಿಡವಿಟ್ ನಲ್ಲಿ ನೀಡಿದ್ದ ಪಡುವಲಹಿಪ್ಪೆ ಗ್ರಾಮದ ವಿಳಾಸದಲ್ಲಿ ಯಾರೂ ಇಲ್ಲದ ಕಾರಣ, ಹಾಸನ ಸಂಸದರ ಕೈಗೆ ಸಮನ್ಸ್ ತಲುಪಿರಲಿಲ್ಲ. ಮಂಜು ಕೋರಿಕೆಯಂತೆ ನಂತರ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಮೂಲಕ ಸಮನ್ಸ್ ಜಾರಿ ಮಾಡಲಾಗಿದೆ. ಸೆ. 30ರಂದು ಖುದ್ದು ಅಥವಾ ವಕೀಲರ ಮೂಲಕ ಕೋರ್ಟಿಗೆ ಹಾಜರಾಗಿ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.


 • ಅರಕಲಗೂಡು ಮಂಜು ವಾದ

  "ಪ್ರಜ್ವಲ್​ ರೇವಣ್ಣ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿ ಸುಳ್ಳು ಮಾಹಿತಿ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಘೋಷಣೆ ಮಾಡಿದ್ದಾರೆ. ಹಲವು ಕಂಪೆನಿಗಳಲ್ಲಿ ಪಾಲುದಾರಿಕೆ ಹೊಂದಿದ್ದರೂ ಅದನ್ನು ಪ್ರಮಾಣ ಪತ್ರದಲ್ಲಿ ನಮೂದಿಸಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಜೊತೆಗಿನ ಸಾಲದ ವ್ಯವಹಾರವನ್ನು ಮುಚ್ಚಿಟ್ಟಿದ್ದಾರೆ. ಸುಮಾರು 6 ಕೋಟಿ ಮೌಲ್ಯದ ಆಸ್ತಿ ಬಗ್ಗೆ ವಿವರ ನೀಡಿಲ್ಲ. ಈ ಬಗ್ಗೆ ಈ ಮುಂಚೆ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿತ್ತು" ಎಂದು ಮಂಜು ಹೇಳಿದ್ದಾರೆ.


 • ಅಪ್ಪ ಮಗನ ಅಫಿಡವಿಟ್ ನಲ್ಲಿ ವ್ಯತ್ಯಾಸವಿದೆ

  ಹೊಳೆನರಸೀಪುರದಲ್ಲಿರುವ ಚೆನ್ನಕಾಂಬ ಕನ್ವೆನ್ಶನ್ ಹಾಲ್‌ಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆಯೋಗಕ್ಕೆ ನೀಡಿರುವ ಮಾಹಿತಿಯಲ್ಲಿ ವಾಣಿಜ್ಯ ಕಟ್ಟಡಗಳನ್ನು ತಾವು ಹೊಂದಿಲ್ಲವೆಂದು ರೇವಣ್ಣ ಹೇಳಿದ್ದಾರೆ. ಆದರೆ ಚೆನ್ನಕಾಂಬಾ ಕನ್ವೆನ್ಶನ್ ಹಾಲ್‌ ರೇವಣ್ಣ ಅವರದ್ದೇ ಆಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ದೇವೇಗೌಡ ಅವರ ನಾಮಪತ್ರದಲ್ಲಿ ಪ್ರಜ್ವಲ್ ರೇವಣ್ಣಗೆ 23 ಲಕ್ಷ ಕೊಟ್ಟಿರುವುದಾಗಿ ನಮೂದು ಮಾಡಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ಅವರ ನಾಮಪತ್ರದಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖಗಳು ಇಲ್ಲ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.


 • ಐಟಿ, ಜಾರಿ ನಿರ್ದೇಶನಾಲಯದ ತನಿಖೆಗೆ ಆಗ್ರಹ

  "ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಆಸ್ತಿ ವಿವರಗಳನ್ನು ಸರಿಯಾಗಿ ಸಲ್ಲಿಸಿಲ್ಲ" ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು, ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಮತ್ತು ಕಾಂಗ್ರೆಸ್ ಕಾರ್ಯಕರ್ತ, ವಕೀಲ ದೇವರಾಜೇಗೌಡ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ನಂತರ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಕ್ಕೂ ದೂರು ಸಲ್ಲಿಸಿ ತನಿಖೆಗೆ ಆಗ್ರಹಿಸಿದ್ದರು. ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕೂಡಾ ಇದು ಆದಾಯ ತೆರಿಗೆ ಇಲಾಖೆ ತನಿಖೆಗೆ ಸೂಕ್ತವಾದ ಪ್ರಕರಣ ಎಂದು ವರದಿ ನೀಡಿದ್ದರು.


 • ಪ್ರಜ್ವಲ್ ಆರೋಪ ಸಾಬೀತಾದರೆ ಎ ಮಂಜು ಸಂಸದರಾಗುತ್ತಾರೆ.

  ಪ್ರಜಾಪ್ರತಿನಿಧಿ ಕಾಯ್ದೆ 125ಎ ಮತ್ತು 1951ರ ಅಡಿ ಕ್ರಮ ತೆಗೆದುಕೊಂಡರೆ ಪ್ರಜ್ವಲ್ ರೇವಣ್ಣ ಅವರಿಗೆ ಚುನಾವಣಾ ಆಯೋಗ ದಂಡ ವಿಧಿಸಬಹುದು. ಅಥವಾ ಅವರನ್ನು ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಬಹುದು. ಮಿಗಿಲಾಗಿ ಇಷ್ಟು ದೊಡ್ಡ ಅಂತರದಿಂದ ಗೆದ್ದಿದ್ದರೂ ಪ್ರಜ್ವಲ್ ರೇವಣ್ಣ ತಮ್ಮ ಸಂಸದ ಸ್ಥಾನ ಕಳೆದುಕೊಳ್ಳಬಹುದು. ಇದರಿಂದ ಇಡೀ ರಾಜ್ಯದಲ್ಲಿ ಜೆಡಿಎಸ್ ಸಾಧನೆ 'ಶೂನ್ಯ'ವಾಗುತ್ತದೆ. ಚುನಾವಣೆಯಲ್ಲಿ ಎರಡನೆಯ ಸ್ಥಾನ ಪಡೆದ ಎ. ಮಂಜು ಅವರು ಸಂಸದರಾಗುವ ಅರ್ಹತೆ ಪಡೆದುಕೊಳ್ಳುತ್ತಾರೆ.
ಹಾಸನ, ಸೆ. 11: ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಚೊಚ್ಚಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ ಜೆಡಿಎಸ್ ನ ಯುವ ಮುಖಂಡ ಪ್ರಜ್ವಲ್ ರೇವಣ್ಣಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಅಫಿಡವಿಟ್ ನಲ್ಲಿ ಘೋಷಿಸಿದ ಆಸ್ತಿ ವಿವರಗಳ ಕುರಿತು ಖುದ್ದು ಕೋರ್ಟಿಗೆ ಹಾಜರಾಗಿ ಮಾಹಿತಿ ನೀಡಬೇಕಿದೆ.

ಅಫಿಡವಿಟ್​ನಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರಜ್ವಲ್ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಸೋಲು ಕಂಡ ಬಿಜೆಪಿ ಅಭ್ಯರ್ಥಿ ಅರಕಲಗೂಡು ಮಂಜು ಅವರು ಜೂನ್ 26ರಂದು ಹೈಕೋರ್ಟಿನಲ್ಲಿ ಅರ್ಜಿ ಹಾಕಿದ್ದರು.

ಪ್ರಜ್ವಲ್ ರೇವಣ್ಣ ಆಸ್ತಿ, ಸಾಲ ವಿವರ

ವಕೀಲ ಜಿ.ದೇವರಾಜೇಗೌಡ ಅವರು ಕೂಡಾ ಪ್ರತ್ಯೇಕವಾಗಿ ದೂರು ದಾಖಲಿಸಿದ್ದರು. ಎರಡು ಪ್ರಕರಣಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಜಾನ್ ಮೈಕಲ್ ಕುನ್ಹಾ ಸಮನ್ಸ್ ಜಾರಿಗೊಳಿಸಿ, ಪ್ರಜ್ವಲ್ ರೇವಣ್ಣ ವಿರುದ್ಧ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದ್ದಾರೆ.

ಅರಕಲಗೂಡು ಮಂಜು ಆಸ್ತಿ ವಿವರ

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಎ.ಮಂಜು ವಿರುದ್ಧ 1.40 ಲಕ್ಷ ಮತಗಳ ಅಂತರದ ಗೆಲುವು ಸಾಧಿಸುವ ಮೂಲಕ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸತ್ ಪ್ರವೇಶಿಸಿದ್ದಾರೆ. ಲೋಕಸಭೆಗೆ ಪ್ರವೇಶಿಸುತ್ತಿರುವ ಅತಿ ಕಿರಿಯ ಸಂಸದರಲ್ಲಿ ಪ್ರಜ್ವಲ್ ಕೂಡ ಒಬ್ಬರು.

   
 
ಹೆಲ್ತ್