Back
Home » ಆರೋಗ್ಯ
ವಿಶ್ವ ಸೆಪ್ಸಿಸ್ ದಿನ 2019: ರೋಗ ಲಕ್ಷಣ, ಪರಿಣಾಮ, ಚಿಕಿತ್ಸೆ ಮತ್ತು ತಡೆಗಟ್ಟುವ ಕ್ರಮ
Boldsky | 13th Sep, 2019 03:06 PM
 • ಸೆಪ್ಸಿಸ್ ಎಂದರೇನು?

  ರಕ್ತದ ಕಣಗಳಲ್ಲಿ ವಿಷಾಣುಗಳು ಸೇರಿ ಬರುವ ಮಾರಕ ಕಾಯಿಲೆ ಸೆಪ್ಸಿಸ್ ಅಥವಾ ರಕ್ತವಿಷ ಕಾಯಿಲೆ ಅಥವಾ ತೀವ್ರವಾದ ನಂಜು. ನಿಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯು ಹಲವು ಕಾಯಿಲೆಗಳು, ಸೋಂಕುಗಳಿಂದ ನಿಮ್ಮನ್ನು ಪಾರು ಮಾಡುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಸೋಂಕು ಈ ರೋಗನಿರೋಧಕ ಶಕ್ತಿಯನ್ನೂ ಮೀರಿ ದೇಹಕ್ಕೆ ನುಗ್ಗುವ ಸಾಧ್ಯತೆ ಇರುತ್ತದೆ. ಹೀಗೆ ದೇಹಕ್ಕೆ ನುಸುಳುವ ಸೋಂಕು ಇಡೀ ದೇಹದ ರಕ್ತದ ಕಣಗಳಿಗೆ ಹರಡಿ ಜೀವಕ್ಕೆ ಮಾರಕವಾಗುತ್ತದೆ, ಅಂಗಾಂಗಳ ವೈಫಲ್ಯವಾಗುತ್ತದೆ. ನಿಮ್ಮ ದೇಹ ರೋಗನಿರೋಧಕ ಶಕ್ತಿಗೆ ರಕ್ತದ ಕಣದಲ್ಲಿ ರಾಸಾಯನಿಕ ಬಿಡುಗಡೆ ಮಾಡುವ ವೇಳೆ ಈ ಸೋಂಕು ಹೆಚ್ಚಾಗುತ್ತದೆ. ಸೋಂಕು ದೇಹಕ್ಕೆ ಸೇರಿದ ನಂತರ ದೇಹದಲ್ಲಿ ತನ್ನ ವಿಷವನ್ನು ರಕ್ತದ ಕಣಗಳಿಗೆ ಹರಡಲಾರಂಭಿಸುತ್ತದೆ. ಈ ವೇಳೆ ವಿಷ ದೇಹದ ರಕ್ತದ ಕಣಗಳಲ್ಲಿ ಬೆರೆತು ಪ್ರತಿ ಅಂಗಾಂಗಗಳ ಜೀವಕೋಶಗಳನ್ನು ತಿನ್ನುತ್ತಾ ಅದರ ವೈಫಲ್ಯಕ್ಕೆ ಕಾರಣವಾಗುತ್ತದೆ. ಇದನ್ನು ಸೆಪ್ಟಿಕ್ ಶಾಕ್ ಅಥವಾ ಸೆಪ್ಸಿಸ್ ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯ.


 • ಸೆಪ್ಸಿಸ್ ಲಕ್ಷಣಗಳು

  ಮಾರಕ ಸೋಂಕು ದೇಹವನ್ನು ತಲುಪಿದ ನಂತರ ನಮ್ಮಲ್ಲಿ ಕೆಲವು ಸೂಕ್ಷ್ಮ ಲಕ್ಷಣಗಳು ಕಂಡುಬರುತ್ತದೆ ಆದರೆ ಹಲವು ಬಾರಿ ನಾವು ಅದನ್ನು ತಪ್ಪಾಗಿಯೆ ಗ್ರಹಿಸಿರುತ್ತೇವೆ. ಆರಂಭಿಕ ಸೋಂಕಿಗೆ ಒಳಗಾದ ವ್ಯಕ್ತಿಗಳಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬರುತ್ತದೆ ಹಾಗೂ ಇದು ಕೂಡಲೇ ಕಂಡುಬರುವ ಲಕ್ಷಣಗಳಾಗಿದೆ. ಇಂತಹ ಲಕ್ಷಣಗಳು ನಿಮ್ಮಲ್ಲೂ ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

  * ವಿಪರೀತ ಜ್ವರ ಅಥವಾ ಚಳಿ ಜ್ವರ

  * ಹೃದಯದ ಬಡಿತ ಹೆಚ್ಚಾಗುವುದು

  * ಉಸಿರಾಡುವ ವೇಗ ತೀವ್ರವಾಗುವುದು

  * ಅತಿಯಾಗಿ ಬೆವರುವುದು

  * ತುಟಿಯ ಬಣ್ಣ ಬದಲಾಗುವುದು


 • ಸೆಪ್ಸಿಸ್ ಗಂಭೀರ ಸ್ವರೂಪಕ್ಕೆ ತಲುಪಿದ್ದರೆ ಈ ಲಕ್ಷಣಗಳು ಕಂಡುಬರುತ್ತದೆ

  * ತಲೆತಿರುಗುವಿಕೆ, ಮಂಕಾಗುವುದು

  * ಗೊಂದಲ, ಸಾವಿನ ಭಯ ಅಥವಾ ಮಾಸಿಕವಾಗಿ ವಿಚಿತ್ರ ಅನುಭವವಾಗುವುದು

  * ಅಸ್ಪಷ್ಟ ಮಾತು

  * ಅತಿಸಾರ, ವಾಕರಿಕೆ ಅಥವಾ ವಾಂತಿ

  * ಅತಿಯಾದ ಮೂಳೆ ನೋವು ಮತ್ತು ನಿಶ್ಯಕ್ತತೆ

  * ಉಸಿರಾಡಲು ಸಮಸ್ಯೆಯಾಗುವುದು

  * ಕಡಿಮೆ ಮೂತ್ರ ಉತ್ಪಾದನೆ

  * ಚರ್ಮ ತಂಪಾಗುವುದು ದೇಹದಲ್ಲಿ ಕಳಪೆ ಸಂಚಾರದ ಸೂಚನೆ

  * ಪ್ರಜ್ಞಾಹೀನವಾಗುವುದು

  * ಅಸಹಜವಾಗಿ ತ್ವರಿತ ಉಸಿರಾಟ

  * ಅತಿಯಾದ ಸಿ-ರಿಯಾಕ್ಟಿವ್ ಪ್ರೋಟೀನ್ (ಸಿಆರ್ಪಿ)

  * ತೀವ್ರ ಮೂತ್ರಪಿಂಡ ವೈಫಲ್ಯ


 • ಸೆಪ್ಸಿಸ್ ಗೆ ಕಾರಣಗಳು

  ವಿಶ್ವದಲ್ಲಿ ಸೆಪ್ಸಿಸ್ ಸೋಂಕಿಗೆ ಪ್ರಮುಖ ಕಾರಣ ಶಿಲೀಂದ್ರ ಸೋಂಕು. ದೇಹದ ಯಾವುದೇ ಭಾಗಕ್ಕೆ, ಅದರಲ್ಲೂ ಶ್ವಾಸಕೋಶ, ಮೂತ್ರಪಿಂಡ ಅಥವಾ ಕಿಬ್ಬೊಟ್ಟೆಯ ಪ್ರದೇಶಕ್ಕೆ ತಗುಲುವ ಸೋಂಕು ಗಂಭೀರ ಸೆಪ್ಸಿಸ್ ಗೆ ಕಾರಣವಾಗುತ್ತದೆ. ವಯಸ್ಸಾದವರು ಈ ಕಾಯಿಲೆಗೆ ಹೆಚ್ಚು ತುತ್ತಾಗುತ್ತಿದ್ದಾರೆ. ವಯಸ್ಸಾದಂತೆ ಅವರಲ್ಲಿ ರೋಗನಿರೋಧಕ ಶಕ್ತಿ ಕುಗ್ಗುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

  * ನ್ಯುಮೋನಿಯಾ

  * ಕಿಬ್ಬೊಟ್ಟೆಯ ಸೋಂಕು

  * ಮೂತ್ರಪಿಂಡದ ಸೋಂಕು

  * ರಕ್ತಪ್ರವಾಹದ ಸೋಂಕು

  ಸೆಪ್ಸಿಸ್ ಗೆ ಪ್ರಮುಖ ಕಾರಣಗಳಾಗಿದೆ.


 • ಸೆಪ್ಸಿಸ್ ಗೆ ತುತ್ತಾಗುವವರು ಯಾರು?

  ಸೆಪ್ಸಿಸ್ ರೋಗನಿರೋದಕ ಶಕ್ತಿ ಕಡಿಮೆ ಇರುವ, ವಯಸ್ಸಿನ ಮಿತಿ ಇಲ್ಲದೆ ಯಾರಿಗೆ ಬೇಕಾದರು ಬರುವ ಸೋಂಕಿನ ಕಾಯಿಲೆಯಾಗಿದೆ. ಸೆಪ್ಸಿಸ್ ಸಾಮಾನ್ಯವಾಗಿ ಈ ಲಕ್ಷಣಗಳಿರುವ ವ್ಯಕ್ತಿಗಳಿಗೆ ಶೀಘ್ರ ಬರುತ್ತದೆ.

  * ಚಿಕ್ಕ ಮಕ್ಕಳು ಅಥವಾ ಹಿರಿಯ ವಯಸ್ಕರು

  * ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ (ಮಧುಮೇಹ, ಕರುಳು ಸಮಸ್ಯೆ, ಏಡ್ಸ್, ಅಥವಾ ಕ್ಯಾನ್ಸರ್ ನಿಂದ ಬಳಲುತ್ತಿರುವವರು)

  * ಗಂಭೀರ ಸ್ವರೂಪದ ಗಾಯ, ಸುಟ್ಟಿರುವ ಗಾಯ ಆಗಿರುವವರು

  * ಅಂಗಾಂಗಗಳ ಕಸಿ, ಕೀಮೋಥರಪಿ ಅಥವಾ ಆಕ್ರಮಣಕಾರಿ ವಿಧಾನದಲ್ಲಿ ಚಿಕಿತ್ಸೆ ಪಡೆಯುವವರಿಗೆ ಇದು ಗಂಭೀರವಾಗಬಹುದು

  * ತೀವ್ರ ನಿಗಾ ಕೊಠಡಿ (ಐಸಿಯು)ಗಳಲ್ಲಿ ಬಳಲುತ್ತಿರುವ ರೋಗಿಗಳಿಗೆ

  * ಇಂಟ್ರಾವೆನಸ್ ಕ್ಯಾತಿಟರ್ ಅಥವಾ ಉಸಿರಾಟದ ಕೊಳವೆಗಳಂಥ ಆಕ್ರಮಣಕಾರಿ ಸಾಧನಗಳ ಜತೆ ಕೆಲಸ ಮಾಡುವವರಿಗೆ

  * ಗರ್ಭಿಣಿಯರಿಗೆ, ನವಜಾತ ಶಿಶುವಿಗೆ


 • ಸೆಪ್ಸಿಸ್ ಪರಿಣಾಮ

  ಸೆಪ್ಸಿಸ್ ಸೋಂಕಿಗೆ ತುತ್ತಾದ ಪ್ರತಿ ಮೂವರಲ್ಲಿ ಒಬ್ಬರು ಮೃತಪಡುತ್ತಿದ್ದಾರೆ. ಸೆಪ್ಸಿಸ್ ಗೆ ಸಾಮಾನ್ಯ ಲಕ್ಷಣಗಳು ಒತ್ತಡ, ಗೊಂದಲ, ಉಸಿರಾಟದ ಸಮಸ್ಯೆಗಳು, ಚರ್ಮದ ಬಣ್ಣ ಬದಲಾಗುವುದು ಲಕ್ಷಣಗಾಳದರೆ ಇದರ ಪರಿಣಾಮ ಇನ್ನೂ ಗಂಭೀರವಾಗಿದೆ. ಈ ಕಾಯಿಲೆ ನ್ಯುಮೋನಿಯಾ, ಹೃದಯ ಸೋಂಕು ಮತ್ತು ಮೂಳೆ ಸೋಂಕಿಗೆ ಕಾರಣವಾಗುತ್ತದೆ.

  ಹಿರಿಯರಲ್ಲಿಮ ಕಂಡು ಬರುವ ನ್ಯುಮೋನಿಯಾ ಸಾಮಾನ್ಯವಾಗಿ ಕರುಳಿನಲ್ಲಿ ಕಂಡು ಬರುತ್ತದೆ. ಈ ಹಂತದಲ್ಲಿ ಆಮ್ಲಜನಕ ರಕ್ತವನ್ನು ತಲುಪಲು ಸಮಸ್ಯನ ಉಂಟಾಗುತ್ತದೆ. ಯುರಿನಟಿ ಟ್ರಾಕ್ಟ ಸೋಂಕು (ಯುಟಿಐ) ಮೂತ್ರಪಿಂಡದಿಂದ ಹರಡುವ ಸೋಂಕಾಗಿದೆ. ಮೂತ್ರಕೋಶ, ಮೂತ್ರನಾಳದ ಮೂಲಕ ಗಂಭೀರವಾಗುತ್ತದೆ. ಇದರಿಂದ ಜನನಾಂಗಳ ಗಂಬೀರ ಸೋಂಕಿಗೂ ಕಾರಣವಾಗುತ್ತದೆ.


 • ಪ್ರಾಥಮಿಕ ಎಚ್ಚರಿಕೆ

  * ಸೆಪ್ಸಿಸ್ ಸೋಂಕು ಇರುವ ವ್ಯಕ್ತಿಗೆ ಕುಟುಂಬದವರು ಆದಷ್ಟು ಸೋಂಕು ಹರಡದಂತೆ ದೂರವಿರಿ

  * ಮನೆಯಲ್ಲೆ ಚಿಕಿತ್ಸೆ ನೀಡುವ ವಿಫಲ ಪ್ರಯತ್ನ ಬೇಡ

  * ಸೆಪ್ಸಿಸ್ ಗಂಭೀರ ಸ್ವರೂಪಕ್ಕೆ ತಲುಪಿದರೆ ಅದರ ಪರಿಣಾಮ ಬಹಳ ಗಂಭೀರವಾಗಿರುತ್ತದೆ


 • ಸೆಪ್ಸಿಸ್ ಪತ್ತೆ ಮಾಡುವ ವಿಧಾನ

  ಈ ರೋಗಕ್ಕೆ ತುತ್ತಾದವರು ತಡಮಾಡದೇ ಚಿಕಿತ್ಸೆ ಪಡೆಯಬೇಕು. ವೈದ್ಯರು ಆರಂಭದಲ್ಲಿ ರೋಗಿಯ ಸಾಂಕ್ರಮಿಕದ ಇತಿಹಾಸ ತಿಳಿದು, ಹಿಂದಿನ ರೋಗಲಕ್ಷಣಗಳ ಬಗ್ಗೆ ತಿಳಿಯುತ್ತಾರೆ. ನಂತರ ಸೋಂಕಿನ ಪತ್ತೆಗೆ ರಕ್ತದಲ್ಲಿರುವ ಬ್ಯಾಕ್ಟಿರಿಯಾ ಪರೀಕ್ಷೆ, ಇತರೆ ಯಾವುದೇ ಆಹಾರದಿಂದ ಉಂಟಾಗಿರುವ ಲಕ್ಷಣವೇ, ಬಿಳಿ ರಕ್ತಕಣ, ರಕ್ತದೊತ್ತಡ, ಕರುಳಿನ ಪರೀಕ್ಷೆಯನ್ನು ಮಾಡುತ್ತಾರೆ.

  ಎಕ್ಸ್ ರೇ, ಸಿಟಿಸ್ಕ್ಯಾನ್, ಅಲ್ಟ್ರಾಸೌಂಡ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಹಂತದಲ್ಲಿ ನಿಮಗೆ ಸೆಪ್ಸಿಸ್ ಇದೆ ಎಂದು ಪತ್ತೆಯಾದರೆ ಕೂಡಲೇ ಐಸಿಯುನಲ್ಲಿ ಚಿಕಿತ್ಸೆ ಆರಂಭಿಸಲಾಗುತ್ತದೆ.


 • ಸೆಪ್ಸಿಸ್ ತಡೆಗಟ್ಟುವುದು ಹೇಗೆ?

  * ಜ್ವರ, ನ್ಯಮೋನಿಯಾ, ಹೆಚ್1ಎನ್1, ಹೆಚ್ ಐವಿ ಕಾಯಿಲೆಗಳು ಬರದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಚುಚ್ಚುಮದ್ದುಗಳನ್ನು ಪಡೆಯಬೇಕು.

  * ನಿತ್ಯ ಶುದ್ಧವಾಗಿ ಸ್ನಾನ, ಕೆಲಸದಿಂದ ಬಂದ ಕೂಡಲೇ ಬಟ್ಟೆಗಳನ್ನು ಬದಲಿಸುವುದು, ಮನೆಯನ್ಉ ಸ್ವಚ್ಚವಾಗಿಡುವುದು ಮುಖ್ಯವಾಗುತ್ತದೆ

  * ಮನೆಯಲ್ಲಿ ಪ್ರಾಣಿಗಳನ್ನು ಸಾಕಿದ್ದರೆ ನಿತ್ಯ ಅದರ ಕಾಲುಗಳನ್ನು ಶುದ್ದ ಮಾಡಬೇಕು

  * ನೀವು ಆಗಾಗ್ಗೆ ಬ್ಯಕ್ಟಿರಿಯಾ ಸೋಂಕಿನಿಂದ ಬಳಲುತ್ತಿದ್ದರೆ, ವೈದ್ಯರ ಸಲಹೆಯಂತೆ ರೋಗನಿರೋಧಕ ಶಕ್ತಿ ವೃಧ್ಧಿಸುವ ಮಾತ್ರೆಗಳನ್ನು ಸೇವಿಸಿ


 • ಸೆಪ್ಸಿಸ್ ಚಿಕಿತ್ಸಾ ವಿಧಾನ

  ಸೆಪ್ಸಿಸ್ ಇರುವ ರೋಗಿಗೆ ಐಸಿಯು ನಲ್ಲಿ ಹಲವು ವಿಧಾನದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಬ್ರಾಡ್ ಸ್ಪೆಕ್ಟ್ರಮ್ ಆಂಟಿಬಯಾಟಿಕ್ ಚಿಕಿತ್ಸೆ. ಇಲ್ಲಿ ಔಷಧಿಗಳನ್ನು ಅಭಿದಮನಿಯ ಮೂಲಕ ನೀಡಲಾಗುತ್ತದೆ. ಅಭಿದಮನಿ ಚಿಕಿತ್ಸೆ ನಂತರವೂ ನಿಮ್ಮ ರಕ್ತದೊತ್ತಡ ಅಸಹಜವಾಗಿ ಕಡಿಮೆಯಾಗಿದ್ದರೆ, ನಿಮಗೆ ರಕ್ತನಾಳಗಳನ್ನು ನಿರ್ಬಂಧಿಸುವ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುವ ವ್ಯಾಸೊಪ್ರೆಶರ್ ಔಷಧಿಗಳನ್ನು ನೀಡಲಾಗುತ್ತದೆ. ಮೂತ್ರಪಿಂಡಗಳು ಸಹ ಹಾನಿಯಾಗಿದ್ದರೆ ಡಯಾಲಿಸಿಸ್ ಗೆ ಒಳಗಾಗಬೇಕಾಗುತ್ತದೆ. ಅಲ್ಲದೇ ರೋಗಿಯ ಉಸಿರಾಟಕ್ಕೆ ಅನುಕೂಲವಾಗಲು, ಕಾರ್ಟಿಕೊಸ್ಟಿರಾಯ್ಡ ಗಳು ಮತ್ತು ಮೆಕಾನಿಕಲ್ ವೆಂಟಿಲೇಷನ್ ಚಿಕಿತ್ಸೆ ನೀಡಲಾಗುತ್ತದೆ.


 • ಶಸ್ತ್ರಚಿಕಿತ್ಸೆ

  ಸೆಪ್ಸಿಸ್ ತೀವ್ರ ಹಂತಕ್ಕೆ ತಲುಪಿ ದೇಹದ ಯಾವುದೇ ಭಾಗದಲ್ಲಿ ಇದರ ಪರಿಣಾಮ ಕೀವು ತುಂಬಿದ್ದರೆ ಅದನ್ನು ಶಸಕ್ರಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ. ಇದನ್ನು ಕಡೆಗಣಿದರೆ ಇಡೀ ದೇಹಕ್ಕೆ ಹರಡುವ ಸಾಧ್ಯತೆ ಹೆಚ್ಚು.
ಸೆಪ್ಸಿಸ್ ಎಂಬ ಭಯಾನಕ ಪದ ಈಜಿಪ್ಟ್ ದೇಶದ ಪಪೈರಿಯಲ್ಲಿ ಸುಮಾರು 3500 ವರ್ಷಗಳ ಹಿಂದೆ ಮೊದಲಿಗೆ ಕೇಳಿಬಂದಿತ್ತು. ಈ ಪದದ ಮೂಲ ಕೃರ್ತೃ ಗ್ರೀಕ್ ದೇಶವಾಗಿದ್ದು, ಇಲ್ಲಿ ಪ್ರಾಣಿಗಳ ಕೊಳೆತ ದೇಹವನ್ನು ಸೆಪ್ಸಿಸ್ ಎಂದು ಕರೆಯುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಗ್ರೀಕ್ ಭಾಷೆಯಲ್ಲಿ ಕೊಳೆಯುವ ಅಥವಾ ಕೀವುಗಟ್ಟುವ ಎಂಬ ಅರ್ಥಕ್ಕೆ ಅನ್ವರ್ಥವಾಗಿ ಸೆಪ್ಸಿಸ್ ಪದವನ್ನು ಬಳಸಲಾಗುತ್ತದೆ. 2500 ವರ್ಷಗಳ ಇತಿಹಾಸವಿರುವ ಈ ಪದ ಇದೀಗ ಹಲವು ದೇಶಗಳಲ್ಲಿ ಮನುಷ್ಯನಿಗೆ ಬರುವ ಒಂದು ಕಾಯಿಲೆಯ ಹೆಸರಾಗಿ ಪ್ರಖ್ಯಾತಿ ಪಡೆದಿದೆ. ಮಾನವನ ದೇಹಕ್ಕೆ ಬರುವ ಉರಿಯೂತ, ಸೋಂಕಿನ ಕಾಯಿಲೆ, ಅಂಗಾಗಳ ಸೋಂಕಿನ ಕಾಯಿಲೆಗೆ ಸೆಪ್ಸಿಸ್ ಎಂದು ಪ್ರಚಲಿತದಲ್ಲಿದೆ.

ಇಂದು ವಿಶ್ವ ಸೆಪ್ಸಿಸ್ ಕಾಯಿಲೆ ದಿನ. ರೋಗದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ರೋಗವನ್ನು ತಡೆಗಟ್ಟುವ ಉದ್ದೇಶದಿಂದ ಆಚರಿಸುವ ಈ ದಿನದ ವಿಶೇಷ ಸೆಪ್ಸಿಸ್ ಕಾಯಿಲೆ ಎಂದರೇನು, ಲಕ್ಷಣಗಳು, ಪರಿಣಾಮ, ಚಿಕಿತ್ಸೆ ಕುರಿತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ.

ಇದೊಂದು ವಿಚಿತ್ರ ಕಾಯಿಲೆಯಾಗಿದ್ದು, ಸೋಂಕಿಗೆ ನಿಮ್ಮ ದೇಹ ಪ್ರತಿಕ್ರಿಯಿಸುವ ಅನ್ವಯ ಈ ಸೋಂಕು ದೇಹವನ್ನು ಆವರಿಸುತ್ತದೆ. ವಿಶ್ವದಲ್ಲಿ ಪ್ರತಿ ವರ್ಷ ಅಂದಾಜು 1.5 ದಶಲಕ್ಷ ಮಂದಿ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ಅಂದಾಜು ಒಂದು ದಶಲಕ್ಷ ಮಂದಿ ಈ ಕಾಯಿಲೆಯಿಂದ ಪ್ರಸ್ತುತ ಬಳಲುತ್ತಿದ್ದಾರೆ. ಅಲ್ಲದೇ, ವಾರ್ಷಿಕ ಶೇಕಡಾ 63ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ತಿಳಿಸುತ್ತದೆ.

   
 
ಹೆಲ್ತ್