Back
Home » ಇತ್ತೀಚಿನ
ಬೆಂಗಳೂರಿಗೆ ಮತ್ತೊಂದು ಗುರಿ..! ರಾಜಧಾನಿಯಲ್ಲಿ ಸ್ಥಾಪನೆಯಾಗಲಿದೆ ಗೂಗಲ್‌ ಎಐ ಲ್ಯಾಬ್‌..!
Gizbot | 21st Sep, 2019 03:01 PM
 • ಗೂಗಲ್

  ಕೇವಲ ಭಾರತಕ್ಕಾಗಿ ಅಷ್ಟೇ ಅಲ್ಲದೇ ಬೇರೆ ದೇಶಗಳಿಗೂ ಇಲ್ಲಿ ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗುವುದು ಎಂದು ಗೂಗಲ್‌ ಹೇಳಿದೆ. ಪ್ರಯೋಗಾಲಯವನ್ನು ಬೆಂಗಳೂರಿನಲ್ಲಿ ಆರಂಭಿಸುವುದಾಗಿ ಮಾಹಿತಿ ತಂತ್ರಜ್ಞಾನ ದಿಗ್ಗಜ ಗೂಗಲ್ ಗುರುವಾರ ದೆಹಲಿಯಲ್ಲಿ ನಡೆದ ಗೂಗಲ್‌ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ಘೋಷಿಸಿತು.


 • ಹಲವು ಕ್ಷೇತ್ರಗಳಲ್ಲಿ ಸಂಶೋಧನೆ

  ಈ ನಿರ್ಧಾರವನ್ನು ಗೂಗಲ್​ನ ಕೃತಕ ಬುದ್ಧಿಮತ್ತೆ ವಿಭಾಗದ ಉಪಾಧ್ಯಕ್ಷ ಹಾಗೂ ಬೆಂಗಳೂರಿನ ಭಾರತೀಯ ಐಐಎಸ್​ಸಿಯ ಹಳೇ ವಿದ್ಯಾರ್ಥಿ ಜೈ ಯಾಜ್ಞಿಕ್ ತಮ್ಮ ಬ್ಲಾಗ್​ನಲ್ಲಿ ತಿಳಿಸಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿರುವ ರಾಜ್ಯ ಹಾಗೂ ದೇಶದ ಸ್ಥಳೀಯ ಪ್ರತಿಭೆಗಳನ್ನೂ ಒಳಗೊಂಡು ಆರೋಗ್ಯ, ಕೃಷಿ, ಶಿಕ್ಷಣ ಸೇರಿ ಅನೇಕ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲಿದೆ ಎಂದು ಹೇಳಿದ್ದಾರೆ.


 • ಜಾಗತಿಕ ನೆಟ್​ವರ್ಕ್

  ಎಐ ಸಂಶೋಧನೆಗೆ ವಿಶ್ವದ ಅನೇಕ ಭಾಗಗಳಲ್ಲಿ ಗೂಗಲ್‌ ಈಗಾಗಲೇ ಪ್ರಯೋಗಾಲಯಗಳನ್ನು ಸ್ಥಾಪಿಸಿದೆ. ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಪ್ರಯೋಗಾಲಯ ಎರಡು ಮುಖ್ಯ ಉದ್ದೇಶ ಹೊಂದಿದ್ದು, ಸದೃಢ ತಂಡದ ಮೂಲಕ ಮೂಲ ಕಂಪ್ಯೂಟರ್ ವಿಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಸಂಶೋಧನೆ ಮತ್ತು ಭಾರತದ ಸಂಶೋಧನಾ ಸಮುದಾಯದ ಜತೆಗೆ ಸಹಭಾಗಿತ್ವ ವಹಿಸುವುದು. ಮತ್ತು ಈ ಸಂಶೋಧನೆಗಳ ಮೂಲಕ ಆರೋಗ್ಯ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವುದರ ಜತೆಗೆ ಕೋಟ್ಯಂತರ ಜನರು ಬಳಸಬಹುದಾದ ಆಪ್ ಹಾಗೂ ಸೇವೆಗಳನ್ನು ರೂಪಿಸುವುದು ಮತ್ತೊಂದು ಉದ್ದೇಶವಾಗಿದೆ. ವಿಶ್ವದಾದ್ಯಂತ ಇರುವ ಜಾಲದ ಜತೆಗೆ ಈ ಕೇಂದ್ರ ನಿರಂತರ ಸಂಪರ್ಕ ಹೊಂದಿರುತ್ತದೆ.


 • ಎಐ ಕೇಂದ್ರಕ್ಕೆ ಇಬ್ಬರ ನೇಮಕ

  ಬೆಂಗಳೂರು ಕೇಂದ್ರಕ್ಕೆ ಕಂಪ್ಯೂಟರ್ ವಿಜ್ಞಾನಿ ಹಾಗೂ ಐಐಐಟಿಯಲ್ಲಿನ ಇನ್ಪೋಸಿಸ್ ಪ್ರತಿಷ್ಠಾನ ಪೀಠದ ಪ್ರೊಫೆಸರ್ ಮನೀಶ್ ಗುಪ್ತಾ ಮುಖ್ಯಸ್ಥರಾಗಿದ್ದಾರೆ. ಹಾರ್ವರ್ಡ್ ವಿವಿ ಪ್ರೊಫೆಸರ್ ಮಿಲಿಂದ್ ತಂಬೆ ಸಾಮಾಜಿಕ ಒಳಿತಿಗೆ ಕೃತಕ ಬುದ್ಧಿಮತ್ತೆ ವಿಭಾಗದ ನಿರ್ದೇಶಕರಾಗಿದ್ದಾರೆ. ಆರೋಗ್ಯ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಕೃತಕ ಬುದ್ಧಿಮತ್ತೆಯ ಆಧಾರದಲ್ಲಿ ಸಂಶೋಧನೆ ನಡೆಯಲಿದೆ.


 • ಬಿಎಸ್‌ಎನ್‌ಎಲ್ ಜೊತೆ ಒಪ್ಪಂದ

  ಗುಜರಾತ್, ಬಿಹಾರ ಮತ್ತು ಮಹಾರಾಷ್ಟ್ರದ ಹಳ್ಳಿಗಳಲ್ಲಿ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ವಿಸ್ತರಿಸಲು ಕೇಂದ್ರದ ಬಿಎಸ್‌ಎನ್‌ಎಲ್ ಜೊತೆಗೆ ಗೂಗಲ್‌ ಒಪ್ಪಂದ ಮಾಡಿಕೊಂಡಿದೆ. ದೇಶದ 500 ರೈಲ್ವೆ ನಿಲ್ದಾಣಗಳಲ್ಲಿ ವೈಫೈಯನ್ನು ಸ್ಥಾಪಿಸಿರುವ ಗೂಗಲ್‌, ನಾಲ್ಕು ಖಂಡಗಳಲ್ಲಿ ಸುಮಾರು 5000 ಸ್ಥಳಗಳನ್ನು ಸಂಪರ್ಕಿಸಿಲಾಗಿದೆ ಎಂದು ಕಂಪನಿ ಹೇಳಿದೆ. ಇನ್ನು, ವಿಚಾರಣೆ ಮತ್ತು ಪ್ರಶ್ನೆಗಳಿಗಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಉತ್ತರಿಸಲು ಗೂಗಲ್ ಸಹಭಾಗಿತ್ವದಲ್ಲಿ ವೊಡಾಫೋನ್, ಐಡಿಯಾ ಫೋನ್ ಲೈನ್ ಪ್ರಾರಂಭಿಸಿವೆ. ಸಂಸ್ಥೆಯು ತನ್ನ ಉತ್ಪನ್ನಗಳಾದ ಸರ್ಚ್, ಬೊಲೊ, ಡಿಸ್ಕವರ್ ಮತ್ತು ಗೂಗಲ್ ಅಸಿಸ್ಟೆಂಟ್‌ನಲ್ಲಿ ಭಾರತೀಯ ಪ್ರಾದೇಶಿಕ ಭಾಷೆಗಳನ್ನು ಸೇರಿಸಿದೆ.


 • ಭಾರತೀಯರಿಗಾಗಿ ಗೂಗಲ್‌

  ಗೂಗಲ್ ಟೆಕ್ನಾಲಜಿಗೆ ಹೊಂದಿಕೊಳ್ಳುವಂತೆ ಭಾರತೀಯರನ್ನು ಕೇಳುವ ಬದಲು, ನಾವು ನಮ್ಮ ಉತ್ಪನ್ನಗಳನ್ನು ಭಾರತೀಯರಿಗಾಗಿ ಅಳವಡಿಸಿಕೊಳ್ಳಲು ಬಯಸುತ್ತೇವೆ ಎಂದು ಗೂಗಲ್ ನೆಕ್ಸ್ಟ್ ಬಿಲಿಯನ್ ಬಳಕೆದಾರರು ಮತ್ತು ಪಾವತಿಗಳ ಉಪಾಧ್ಯಕ್ಷ ಸೀಸರ್ ಸೆನ್‌ಗುಪ್ತಾ ಹೇಳಿದ್ದಾರೆ.


 • ಭಾರತದಲ್ಲಿ ಯಶಸ್ಸು

  ಕಳೆದ ವಾರ ಮೌಂಟೇನ್ ವ್ಯೂನಲ್ಲಿ ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಅವರ ಜೊತೆಗಿನ ಭೇಟಿಯಲ್ಲಿ ಗೂಗಲ್‌ ಉತ್ಪನ್ನಗಳಿಗೆ ಭಾರತವನ್ನು ಲಾಂಚ್ ಪ್ಯಾಡ್ ಮಾಡುವಂತೆ ಕೇಳಿಕೊಂಡಿದ್ದರು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು. ಯಾವ ಉತ್ಪನ್ನವು ಭಾರತದಲ್ಲಿ ಯಶಸ್ವಿಯಾಗುತ್ತದೆಯೋ ಅದು ಜಾಗತಿಕವಾಗಿಯೂ ಯಶಸ್ವಿಯಾಗುತ್ತದೆ ಎಂದು ಪಿಚ್ಚೈಗೆ ಹೇಳಿದ್ದೆ ಎಂದು ತಮ್ಮ ಮಾತುಕತೆಯನ್ನು ರವಿಶಂಕರ್‌ ಪ್ರಸಾದ್‌ ನೆನಪಿಸಿಕೊಂಡರು.
ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಮತ್ತೊಂದು ಗರಿ ಸಿಕ್ಕಿದೆ. ವಿಶ್ವದ ಐಟಿ ಹಬ್‌ ಎಂದೇ ಕರೆಸಿಕೊಳ್ಳುವ ರಾಜ್ಯ ರಾಜಧಾನಿಯಲ್ಲಿ ಗೂಗಲ್‌ ತನ್ನ ಎಐ ಲ್ಯಾಬ್‌ ಸ್ಥಾಪಿಸಲು ಮುಂದಾಗಿದೆ. ಈ ಪ್ರಯೋಗಾಲಯ ಭಾರತದಲ್ಲಿಯೇ ಮೊದಲನೆಯದಾಗದ್ದು, ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮೈಲಿಗಲ್ಲು ಎನ್ನಲಾಗುತ್ತಿರುವ ಕೃತಕ ಬುದ್ಧಿಮತ್ತೆ ಸಂಶೋಧನೆ ಕೈಗೊಳ್ಳಲು ಸ್ಥಾಪನೆಯಾಗಲಿದೆ.

   
 
ಹೆಲ್ತ್