Back
Home » ಆರೋಗ್ಯ
ವಿಶ್ವ ರೇಬೀಸ್ ದಿನ: ರೇಬೀಸ್ ರೋಗದ ಲಕ್ಷಣಗಳು, ಕಾರಣಗಳು, ಚಿಕಿತ್ಸೆ ಮತ್ತು ತಡೆಗಟ್ಟುವಿಕೆ
Boldsky | 28th Sep, 2019 12:03 PM
 • ರೇಬೀಸ್ ಎಂದರೇನು?

  ರೇಬೀಸ್ ಎನ್ನುವುದು ಒಂದು ಮಾರಣಾಂತಿಕ ವೈರಸ್ ಆಗಿದ್ದು, ಇದು ಸೋಂಕು ಬಾಧಿತ ಪ್ರಾಣಿಗಳ ಜೊಲ್ಲಿನಿಂದ ಹರಡುವುದು. ಯಾವುದೇ ಪ್ರಾಣಿಯು ಕಚ್ಚಿದಾಗ ರೇಬೀಸ್ ವೈರಸ್ ಹರಡುತ್ತದೆ. ಅಮೆರಿಕಾದಲ್ಲಿ ಹೆಚ್ಚಾಗಿ ಬಾವಲಿಗಳು, ಗುಳ್ಳೆ ನರಿಗಳು ಮತ್ತು ನರಿಗಳಿಂದಾಗಿ ಈ ಕಾಯಿಲೆಯು ಹರಡುತ್ತದೆ. ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಂತಹ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ರೇಬೀಸ್ ಕಾಯಿಲೆಯನ್ನು ಬೀದಿ ನಾಯಿಗಳಿಂದ ಮನುಷ್ಯರಿಗೆ ಹರಡುತ್ತಿವೆ. ಯಾವುದೇ ವ್ಯಕ್ತಿಯು ರೇಬೀಸ್ ಲಕ್ಷಣಗಳನ್ನು ತೋರಿಸಲು ಆರಂಭಿಸಿದ ವೇಳೆ ಅದಾಗಲೇ ಆತನ ಮರಣಶಯ್ಯೆಗೆ ತಲುಪಿರುತ್ತಾನೆ. ರೇಬೀಸ್ ಹರಡುತ್ತದೆ ಎಂದು ಭೀತಿ ಹೊಂದಿರುವಂತಹ ಜನರು ರೇಬೀಸ್ ಚುಚ್ಚು ಮದ್ದನ್ನು ತೆಗೆದುಕೊಂಡು ರಕ್ಷಣೆ ಪಡೆಯಬೇಕು.


 • ರೇಬೀಸ್ ಲಕ್ಷಣಗಳು

  ರೇಬೀಸ್ ನ ಕೆಲವೊಂದು ಸಾಮಾನ್ಯ ಲಕ್ಷಣಗಳು ಜ್ವರದಂತೆ ಇರುತ್ತದೆ ಮತ್ತು ಇದು ಕೆಲವು ದಿನಗಳ ಕಾಲ ಇರಬಹುದು. ರೇಬೀಸ್ ತೀವ್ರಗೊಂಡಾಗ ಕಾಣಿಸಿಕೊಳ್ಳುವ ಕೆಲವೊಂದು ಲಕ್ಷಣಗಳು ಈ ರೀತಿಯಾಗಿ ಇದೆ.

  ಜ್ವರ, ತಲೆನೋವು, ವಾಕರಿಕೆ, ವಾಂತಿ, ತಳಮಳ, ಆತಂಕ, ಗೊಂದಲ, ಅತೀ ಚಟುವಟಿಕೆ, ನುಂಗಲು ಕಷ್ಟವಾಗುವುದು, ಅತಿಯಾಗಿ ಜೊಲ್ಲು ಸುರಿಸುವುದು, ನೀರು ಕಂಡರೆ ಭೀತಿ ಪಡುವುದು, ಭ್ರಮೆ, ನಿದ್ರಾಹೀನತೆ, ಅಂಶಿಕ ಪಾರ್ಶ್ವವಾಯು.


 • ರೇಬೀಸ್ ಹರಡಬಲ್ಲ ಪ್ರಾಣಿಗಳು

  ಕಾಡು ಪ್ರಾಣಿಗಳು, ಅದೇ ರೀತಿಯಾಗಿ ಸಾಕು ಪ್ರಾಣಿಗಳು ಕೂಡ ರೇಬೀಸ್ ಹಬ್ಬಿಸುತ್ತದೆ. ಈ ಕೆಳಗಿನ ಪ್ರಾಣಿಗಳು ರೇಬೀಸ್ ವೈರಸ್ ನ್ನು ಮನುಷ್ಯರಿಗೆ ಹಬ್ಬುವುದು. ಇವುಗಳಲ್ಲಿ ಮುಖ್ಯವಾಗಿ ನಾಯಿ, ಬಾವಲಿ, ಬೆಕ್ಕು, ದನ, ಆಡು, ಕುದುರೆ, ನೀರ್ನಾಯಿಗಳು, ನರಿ, ಮಂಗ ಇತ್ಯಾದಿಗಳು.


 • ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

  ಇದರಲ್ಲಿ ಯಾವುದೇ ಪ್ರಾಣಿಯು ನಿಮಗೆ ಕಚ್ಚಿದ್ದರೆ ಆಗ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ. ಗಾಯದ ತೀವ್ರತೆ ನೋಡಿಕೊಂಡು ವೈದ್ಯರು ನಿಮಗೆ ರೇಬೀಸ್ ವಿರೋಧಿ ಚುಚ್ಚು ಮದ್ದು ಸ್ವೀಕರಿಸಬೇಕೇ ಅಥವಾ ಬೇಡವೇ ಎಂದು ತಿಳಿಸುತ್ತಾರೆ.

  ನಿಮಗೆ ಪ್ರಾಣಿ ಕಚ್ಚಿದೆಯಾ ಅಥವಾ ಇಲ್ಲವಾ ಎನ್ನುವ ಬಗ್ಗೆ ಗೊಂದಲವಿದ್ದರೂ ನೀವು ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಕೆಲವೊಂದು ಸಂದರ್ಭದಲ್ಲಿ ಬಾವಲಿಯು ನೀವು ಮಲಗಿದ ಕೋಣೆಗೆ ಗೊತ್ತಿಲ್ಲದಂತೆ ಪ್ರವೇಶ ಮಾಡಿ ನಿಮಗೆ ಅರಿವಿಲ್ಲದಂತೆ ಕಚ್ಚಿ ಹೋಗಬಹುದು. ಕೋಣೆಯಲ್ಲಿ ಇರುವ ಬಾವಲಿಯನ್ನು ನೀವು ನೋಡಿದರೆ ಆಗ ನಿಮಗೆ ಕಚ್ಚಿರಬಹುದು ಎನ್ನುವ ಭಾವನೆ ಆಗಬಹುದು. ಮಗು ಅಥವಾ ಯಾವುದೇ ವಿಕಲತೆ ಹೊಂದಿರುವ ವ್ಯಕ್ತಿಯ ಬಳಿ ಬಾವಲಿ ಕಂಡುಬಂದರೆ ಆಗ ನೀವು ಬಾವಲಿ ಕಡಿದಿದೆ ಎಂದು ತಿಳಿಯಿರಿ.


 • ರೇಬೀಸ್ ಕಾರಣಗಳು

  ರೇಬೀಸ್ ಸೋಂಕು ರೇಬೀಸ್ ವೈರಸ್ ನಿಂದಾಗಿ ಬರುವುದು. ಸೋಂಕಿತ ಪ್ರಾಣಿಯ ಜೊಲ್ಲಿನಿಂದ ರೇಬೀಸ್ ವೈರಸ್ ಹರಡುವುದು. ಸೋಂಕಿತ ಪ್ರಾಣಿಯು ಮತ್ತೊಂದು ಪ್ರಾಣಿಗೆ ಅಥವಾ ಮನುಷ್ಯನಿಗೆ ಕಚ್ಚಿದ ವೇಳೆ ಈ ವೈರಸ್ ಹರಡುವುದು. ಕೆಲವೊಂದು ಸಲ ಮೈಯಲ್ಲಿ ಇರುವಂತಹ ಯಾವುದೇ ತೆರೆದ ಗಾಯದ ಮೇಲೆ ಸೋಂಕಿತ ಪ್ರಾಣಿಯ ಜೊಲ್ಲು ಬಿದ್ದರೆ ಆಗ ರೇಬೀಸ್ ಹರಡುವುದು. ಆದರೆ ಇದು ತುಂಬಾ ಅಪರೂಪವಾಗಿರುವುದು. ಸೋಂಕಿತ ಪ್ರಾಣಿಯು ನಿಮ್ಮ ಕೈಯಲ್ಲಿರುವ ಗಾಯವನ್ನು ನೆಕ್ಕಿದರೆ ಹೀಗೆ ಆಗುವುದೂ ಇದೆ.


 • ರೇಬೀಸ್ ಸೋಂಕು ಹರಡುವ ಕೆಲವೊಂದು ಅಪಾಯಗಳು

  ಅಭಿವೃದ್ಧಿ ಹೊಂದುತ್ತಿರುವಂತಹ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾಗೆ ಪ್ರಯಾಣ ಮಾಡಿದರೆ ಅಥವಾ ಅಲ್ಲಿ ನೀವು ನೆಲೆಸಿದರೆ ಆಗ ಬಾವಲಿಗಳು ಇರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅತ್ಯಗತ್ಯ.

  ವೈರಸ್ ಇರುವಂತಹ ಪ್ರಯೋಗಾಲಯದಲ್ಲಿ ಕೆಲಸ ಮಾಡುವುದು ಹಾಗೂ ತಲೆ ಅಥವಾ ಕುತ್ತಿಗೆ ಭಾಗದಲ್ಲಿ ಇರುವಂತಹ ಯಾವುದೇ ಗಾಯದಿಂದಾಗಿ ರೇಬೀಸ್ ವೈರಸ್ ಬಲು ಬೇಗನೆ ಮೆದುಳಿನೊಳಗೆ ಪ್ರವೇಶ ಮಾಡಬಹುದು.


 • ರೇಬೀಸ್ ತಡೆಯುವುದು ಹೇಗೆ?

  ರೇಬೀಸ್ ಸೋಂಕಿತ ಪ್ರಾಣಿಗಳ ಜತೆಗೆ ಸಂಪರ್ಕದಿಂದ ದೂರ ಉಳಿಯುವುದು ಹೇಗೆ?

  * ಸಾಕು ಪ್ರಾಣಿಗಳಿಗೆ ಆಗಾಗ ಚುಚ್ಚು ಮದ್ದು ಕೊಡುತ್ತಲಿರಿ. ನಾಯಿ, ಬೆಕ್ಕು ಮತ್ತು ಮೊಲಗಳಿಗೆ ನೀವು ರೇಬೀಸ್ ಚುಚ್ಚು ಮದ್ದು ನೀಡಿ.

  * ಪ್ರಾಣಿಗಳಿಗೆ ಎಷ್ಟು ಸಲ ಚುಚ್ಚು ಮದ್ದು ನೀಡಬೇಕು ಎಂದು ಪಶು ವೈದ್ಯರಲ್ಲಿ ಕೇಳಿ.

  * ಸಾಕು ಪ್ರಾಣಿಗಳನ್ನು ಆದಷ್ಟು ಕಟ್ಟಿಹಾಕಿ. ಅದರನ್ನು ಹೊರಗಡೆ ಬಿಟ್ಟ ವೇಳೆ ಅದರ ಕಡೆ ಗಮನ ನೀಡಿ. ಇದರಿಂದ ಬೇರೆ ಪ್ರಾಣಿಗಳ ಜತೆಗೆ ಅದು ಸಂಪರ್ಕಕ್ಕೆ ಬರುವುದು ತಪ್ಪುತ್ತದೆ.

  * ನೀವು ಮನೆಯಲ್ಲಿ ಸಣ್ಣ ಸಣ್ಣ ಸಾಕು ಪ್ರಾಣಿಗಳಾದ ಮೊಲ, ಗಿನಿ ಹಂದಿ ಸಾಕುತ್ತಲಿದ್ದರೆ ಆಗ ನೀವು ಇದನ್ನು ಒಳಗೆ ಸಾಕಿ ಮತ್ತು ಅದನ್ನು ಬೇರೆ ಪ್ರಾಣಿಗಳು ತಿನ್ನದೆ ಇರುವಂತಹ ಗೂಡಿನೊಳಗೆ ಹಾಕಿ. ಇದರಿಂದ ಅವುಗಳ ಮೇಲೆ ಬೇರೆ ಪ್ರಾಣಿಗಳು ದಾಳಿ ಮಾಡುವುದು ತಪ್ಪುತ್ತದೆ.

  * ಬೀಡಾಡಿ ಪ್ರಾಣಿಗಳಿದ್ದರೆ ಆಗ ಸ್ಥಳೀಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ. ಪ್ರಾಣಿ ನಿಯಂತ್ರಣ ಅಧಿಕಾರಿಗಳು, ಅರಣ್ಯ ಇಲಾಖೆ ಅಥವಾ ಸ್ಥಳೀಯ ಪಾಲಿಕೆ ಅಧಿಕಾರಿಗಳಿಗೆ ದೂರು ಕೊಡಿ.

  * ಕಾಡು ಪ್ರಾಣಿಗಳ ಬಳಿಗೆ ಹೋಗಬೇಡಿ. ರೇಬೀಸ್ ಇರುವಂತಹ ಕಾಡು ಪ್ರಾಣಿಗಳಿಗೆ ಮನುಷ್ಯರ ಭೀತಿ ಇರುವುದಿಲ್ಲ. ಇದರಿಂದ ನೀವು ಆದಷ್ಟು ದೂರವಿರಿ.

  * ಮನೆಯಲ್ಲಿ ಬಾವಲಿಗಳು ಇದ್ದರೆ ಅದನ್ನು ಹೊರಗೆ ಓಡಿಸಿ. ಮನೆಯ ಒಳಗಡೆ ಬಾವಲಿ ಬರುವಂತಹ ದಾರಿಗಳನ್ನು ಮುಚ್ಚಿಬಿಡಿ. ಮನೆಯಲ್ಲಿ ಬಾವಲಿ ಇದ್ದರೆ ಆಗ ನೀವು ಸ್ಥಳೀಯ ತಜ್ಞರ ನೆರವು ಪಡೆದುಕೊಂಡು ಅದನ್ನು ಹೊರಗೆ ಹಾಕಿ.

  * ದೂರದ ಊರಿಗೆ ಪ್ರಯಾಣಿಸುತ್ತಿದ್ದರೆ ರೇಬೀಸ್ ಚುಚ್ಚು ಮದ್ದು ಹಾಕಿಸಿಕೊಳ್ಳಿ.


 • ರೇಬೀಸ್ ಚಿಕಿತ್ಸೆ

  ರೇಬೀಸ್ ಇರುವಂತಹ ಪ್ರಾಣಿಯು ನಿಮಗೆ ಕಚ್ಚಿದೆ ಎಂದು ನಿಮಗೆ ಅನಿಸಿದ್ದರೆ ರೇಬೀಸ್ ನಿರೋಧಕ ಚುಚ್ಚು ಮದ್ದನ್ನು ತೆಗೆದುಕೊಳ್ಳಬೇಕು. ಕಚ್ಚಿದ ಪ್ರಾಣಿಯು ನಿಮಗೆ ನೋಡಲು ಸಿಗದೆ ಇದ್ದರೆ ಆಗ ಅದಕ್ಕೆ ರೇಬೀಸ್ ಇದೆ ಎಂದು ತಿಳಿಯಬೇಕು. ಆದರೆ ಇದು ಯಾವ ಸಂದರ್ಭದಲ್ಲಿ ಕಚ್ಚಿದೆ ಮತ್ತು ಯಾವ ರೀತಿಯ ಪ್ರಾಣಿ ಎನ್ನುವುದರ ಮೇಲೆ ಅವಲಂಬಿತವಾಗಿದೆ.


 • ರೇಬೀಸ್ ಚುಚ್ಚುಮದ್ದುಗಳು

  ವೇಗವಾಗಿ ಪ್ರತಿಕ್ರಿಯಿಸುವ ಶಾಟ್(ರೇಬೀಸ್ ರೋಗನಿರೋಧಕ ಗ್ಲೋಬ್ಯುಲಿನ್) ನಿಮ್ಮ ದೇಹಕ್ಕೆ ವೈರಸ್ ಬಾಧಿಸದಂತೆ ತಡೆಯುವುದು. ಪ್ರಾಣಿ ಕಚ್ಚಿದ ಕೂಡಲೇ ನೀವು ವೈದ್ಯರ ಬಳಿಗೆ ತೆರಳಿದರೆ ಆಗ ಚುಚ್ಚಿದ ಭಾಗದ ಸಮೀಪವೇ ಇದನ್ನು ನೀಡಲಾಗುತ್ತದೆ.

  ಸರಣಿ ರೇಬೀಸ್ ಚುಚ್ಚು ಮದ್ದಿನಿಂದಾಗಿ ದೇಹವು ಸೋಂಕನ್ನು ಪತ್ತೆ ಮಾಡಲು ಮತ್ತು ಅದರ ವಿರುದ್ಧ ಹೋರಾಡಲು ನೆರವಾಗುವುದು. ರೇಬೀಸ್ ಚುಚ್ಚುಮದ್ದನ್ನು ಕೈಗಳಿಗೆ ನೀಡಲಾಗುತ್ತದೆ. 14 ದಿನಗಳಲ್ಲಿ 4 ಇಂಜೆಕ್ಷನ್ ಚುಚ್ಚಿಸಿಕೊಳ್ಳಬೇಕು.
ಸಾಮಾನ್ಯವಾಗಿ ಪ್ರಾಣಿಗಳ ಕಡಿತದಿಂದಾಗಿ ಬರುವಂತಹ ರೇಬೀಸ್ ಕಾಯಿಲೆಯಿಂದಾಗಿ ಸಾಯುವವರ ಸಂಖ್ಯೆಯು ವಿಶ್ವಮಟ್ಟದಲ್ಲಿ ಹೆಚ್ಚಾಗುತ್ತಿದೆ. ವಿಶ್ವ ಮಟ್ಟದಲ್ಲಿ ರೇಬಿಸ್ ಕಾಯಿಲೆಗೆ ಚುಚ್ಚುಮದ್ದು ಲಭ್ಯವಿದ್ದರೂ ಜನರು ಇದರ ಬಗ್ಗೆ ನಿರ್ಲಕ್ಷ್ಯ ವಹಿಸುವ ಪರಿಣಾಮವಾಗಿ ರೆಬೀಸ್ ಕಾಯಿಲೆಯು ಮಾರಣಾಂತಿಕವಾಗುತ್ತಿದೆ. ವಿಶ್ವ ಮಟ್ಟದಲ್ಲಿ ರೆಬೀಸ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ರೇಬೀಸ್ ದಿನವನ್ನು ಆಚರಿಸಲಾಗುತ್ತದೆ. ಸರ್ಕಾರೇತರ ಸಂಸ್ಥೆಗಳು, ವಿವಿಧ ದೇಶಗಳ ಸರ್ಕಾರಗಳು ವಿಶ್ವ ರೇಬೀಸ್ ದಿನವನ್ನು ಆಚರಿಸುತ್ತವೆ ಮತ್ತು ರೇಬೀಸ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಸೆಪ್ಟೆಂಬರ್ 28ರಂದು 13ನೇ ವಿಶ್ವ ರೇಬೀಸ್ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ವಾಕ್ಯವೆಂದರೆ "ಚುಚ್ಚು ಮದ್ದಿನ ಕಡೆ ಗಮನಹರಿಸುವುದು ರೇಬೀಸ್ ಕಾಯಿಲೆ ನಿಯಂತ್ರಣಕ್ಕೆ ಮೂಲವಾಗಿದೆ''.

 
ಹೆಲ್ತ್