Back
Home » ಆರೋಗ್ಯ
ವಿಶ್ವ ಹೃದಯ ದಿನ 2019 : ದಿನಾಂಕ, ಥೀಮ್ ಮತ್ತು ಮಹತ್ವ
Boldsky | 29th Sep, 2019 08:00 AM
 • ವಿಶ್ವ ಹೃದಯ ದಿನದ ಮಹತ್ವ

  ವಿಶ್ವ ಹೃದಯ ಒಕ್ಕೂಟದ ಪ್ರಕಾರ, ಅನಾರೋಗ್ಯಕರ ಆಹಾರ, ತಂಬಾಕು ಬಳಕೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಆಲ್ಕೋಹಾಲ್ ಬಳಕೆಯಂತಹ ನಾಲ್ಕು ಪ್ರಮುಖ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ ಕನಿಷ್ಠ 80% ಅಕಾಲಿಕ ಮರಣಗಳನ್ನು (ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ) ರಕ್ಷಿಸಬಹುದು. ವಿಶ್ವ ಹೃದಯ ದಿನದ ಅಭಿಯಾನದಲ್ಲಿ ಜನಸಾಮಾನ್ಯರೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹೃದಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಪಡೆಯುತ್ತಾರೆ ಹಾಗೂ ಅಕಾಲಿಕವಾಗಿ ಸಂಭವಿರುವ ಸಾವು ಎದುರಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಾರೆ. ಸಿವಿಡಿ (ಕಾರ್ಡಿಯೋ ವ್ಯಾಸ್ಕುಲರ್ ಡಿಸೀಸ್ ಅಥವಾ ಹೃದಯ ನಾಳಗಳ ಕಾಯಿಲೆ-ವಿಶ್ವದಲ್ಲಿ ಅತಿ ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ) ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಸರ್ಕಾರೇತರ ಸಂಸ್ಥೆಗಳೂ ಸೇರಿದಂತೆ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.


 • ವಿಶ್ವ ಹೃದಯ ದಿನದ ಇತಿಹಾಸ

  2000 ಇಸವಿಯಲ್ಲಿ ಪ್ರಾರಂಭವಾದಾಗ ಈ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರದಂದು ಆಚರಿಸಲಾಗುತ್ತಿತ್ತು. ಈ ಕ್ರಮ ಸುಮಾರು 2010ರ ವರೆಗೂ ಮುಂದುವರೆಯಿತು. 2011 ರಿಂದ ಈ ದಿನವನ್ನು ಕೊನೆಯ ಭಾನುವಾರದ ಕಟ್ಟುಪಾಡಿನಿಂದ ಮುಕ್ತಗೊಳಿಸಿ ಖಚಿತ ದಿನವಾಗಿ 29 ತಾರೀಖಿಗೆ ನಿಗದಿಗೊಳಿಸಲಾಯಿತು.


 • ವಿಶ್ವ ಹೃದಯ ದಿನದ ಆಚರಣೆ ಏಕೆ?

  ವಿಶ್ವದಲ್ಲಿ ಹೃದಯಸಂಬಂಧಿ ತೊಂದರೆಗಳಿಂದ ಸಂಭವಿಸುತ್ತಿರುವ ಅತಿ ಹೆಚ್ಚಿನ ಸಂಖ್ಯೆಯ ಸಾವುಗಳನ್ನು ತಡೆಗಟ್ಟುವುದು ಹಾಗೂ ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಿ ಆದಷ್ಟೂ ಸಾವುಗಳಾಗದಂತೆ ತಡೆಯುವುದು ಈ ಅಭಿಯಾನದ ಉದ್ದೇಶವಾಗಿದೆ. ಕೇವಲ ಸಾವನ್ನು ತಡೆಯುವುದು ಮಾತ್ರವಲ್ಲ, ಹೃದಯದ ಆರೋಗ್ಯ ಉತ್ತಮಗೊಳಿಸಿ ಆರೋಗ್ಯಕರ ಜೀವನ ನಡೆಸುವಂತಾಗಿಸುವುದೂ ಉದ್ದೇಶದ ಭಾಗವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದ ಒಟ್ಟು ಸಾವುಗಳಲ್ಲಿ ಶೇಕಡಾ ಮೂವತ್ತರಷ್ಟು ಸಾವುಗಳು ಹೃದಯ ವೈಫಲ್ಯದಿಂದ ಸಂಭವಿಸುತ್ತವೆ. ಈ ವೈಫಲ್ಯಕ್ಕೆ ಪ್ರಮುಖ ಕಾರಣಗಳೆಂದರೆ ಅಧಿಕ ರಕ್ತದೊತ್ತಡ, ಅಧಿಕ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್, ಧೂಮಪಾನದ ದುರಭ್ಯಾಸ, ಆಹಾರದಲ್ಲಿ ಸಾಕಷ್ಟು ಹಣ್ಣು-ತರಕಾರಿಗಳು ಇಲ್ಲದಿರುವುದು, ಸ್ಥೂಲಕಾಯ, ಅನಾರೋಗ್ಯಕರ ಆಹಾರಕ್ರಮ ಇತ್ಯಾದಿ.

  ಈ ದಿನವನ್ನು ವಿಶ್ವ ಹೃದಯ ಒಕ್ಕೂಟ ಸಂಸ್ಥೆ ಪ್ರಾರಂಭಿಸಿದ್ದು ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಹಕಾರ ನೀಡುತ್ತಿದೆ. ಇವೆರಡೂ ದಿಗ್ಗಜ ಸಂಸ್ಥೆಗಳು ವಿಶ್ವಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೂಲಕ ಈ ಅಭಿಯಾನವನ್ನು ವಿಶ್ವಮಟ್ಟದಲ್ಲಿ ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತಿದೆ. ಈ ಮೂಲಕ ಜನಸಾಮಾನ್ಯರಲ್ಲಿ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅರಿವು ಮೂಡಿಸಲಾಗುತ್ತಿದೆ.

  ಈ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಸಾಕಷ್ಟು ಮಾಹಿತಿಯನ್ನು ಪಡೆದುಕೊಳ್ಳಲು ಜನರನ್ನು ಪ್ರೇರೇಪಿಸುತ್ತದೆ, ಇದೊಂದು ಇಡಿಯ ದಿನ ನಡೆಯುವ ಕಾರ್ಯಕ್ರಮವಾಗಿದ್ದು ಹೃದಯ ಮೇಲೆ ಒತ್ತಡ ಹೇರುವ ಅಭ್ಯಾಸಗಳಾದ ಅತಿಯಾದ ಪ್ರಮಾಣದ ಆಹಾರ ಸೇವನೆ, ಅನಾರೋಗ್ಯಕರ ಆಹಾರ ಸೇವನೆ, ವ್ಯಾಯಾಮದ ಕೊರತೆ, ಅನಾರೋಗ್ಯಕರ ಜೀವನಕ್ರಮ ಮೊದಲಾದವುಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡಲಾಗುತ್ತದೆ. ಅಲ್ಲದೇ ಜನಸಾಮಾನ್ಯರಿಂದ ಹೃದಯಸಂಬಂಧಿ ತೊಂದರೆಗಳ ಮಾಹಿತಿಯನ್ನು ಪಡೆದು ಇದಕ್ಕೆ ಕಾರಣವನ್ನು ಕಂಡುಕೊಂಡು ಮುಂದೆ ಕೈಗೊಳ್ಳಬೇಕಾದ ಕ್ರಮ ಹಾಗೂ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗುತ್ತದೆ.


 • ವಿಶ್ವ ಆರೋಗ್ಯ ದಿನದ ಉದ್ದೇಶ

  ಜೀವನಶೈಲಿಯ ಬದಲಾವಣೆಗಳಿಗೆ ಜನರನ್ನು ಪ್ರೋತ್ಸಾಹಿಸುವ ಮೂಲಕ ಜಾಗತಿಕ ಹೃದಯದ ಆರೋಗ್ಯವನ್ನು ಸುಧಾರಿಸುವುದು ಮತ್ತು ಹೃದಯಕ್ಕೆ ಒಳ್ಳೆಯದಾಗುವ ಮಾರ್ಗಗಳ ಬಗ್ಗೆ ಜ್ಞಾನವನ್ನು ಪಡೆಯುವುದು ವಿಶ್ವ ಹೃದಯ ದಿನದ ಮುಖ್ಯ ಉದ್ದೇಶವಾಗಿದೆ. 2025 ಇಸವಿಯಲ್ಲಿ ಈ ಸಾವುಗಳ ಸಂಖ್ಯೆಯನ್ನು ಗಣನೀಯ ಮಟ್ಟಕ್ಕೆ ಇಳಿಸುವುದು ಈ ಅಭಿಯಾನದ ಧ್ಯೇಯೋದ್ದೇಶವಾಗಿದೆ.


 • ವಿಶ್ವ ಆರೋಗ್ಯ ದಿನದ ಆಚರಣೆ

  ಈ ದಿನದಂದು ಪ್ರಮುಖ ಸ್ಥಳದ ವಿಶಾಲ ಪ್ರಾಂಗಣದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಹೃದಯದ ಕಾಳಜಿಯ ಬಗ್ಗೆ ಕುತೂಹಲ ಕೆರಳಿಸುವ ಈ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ರೂಪಿಸಲಾಗಿರುತ್ತದೆ. ಹೃದಯದ ಆರೋಗ್ಯದ ಬಗ್ಗೆ ಜನರು ತಾವಾಗಿಯೇ ಕಾಳಜಿ ವಹಿಸಲು ಪ್ರೇರಣೆ ಪಡೆಯುವಂತೆ ಮಾಡುವುದು ಈ ಚಟುವಟಿಕೆಗಳ ಮುಖ್ಯ ಉದ್ದೇಶವಾಗಿದ್ದು ವಿಶ್ವವನ್ನು ಹೃದಯರೋಗ ಮುಕ್ತವಾಗಿಸುವತ್ತ ಪ್ರತಿಯೊಬ್ಬರೂ ತಮ್ಮ ಪಾಲಿನ ಅಳಿಲುಸೇವೆ ಸಲ್ಲಿಸುವಂತೆ ಮನವಿ ಮಾಡಲಾಗುತ್ತದೆ. ಈ ಚಟುವಟೆಕೆಯಲ್ಲಿ ಪಾಲ್ಗೊಳ್ಳುವ ಜನರು ತಮಗೆ ಇಷ್ಟವಾಗುವ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಹಲವಾರು ಆಯ್ಕೆಗಳನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲ, ತಮ್ಮ ಭಾಗವಹಿಸುವಿಕೆಯನ್ನು ಟ್ವಿಟ್ಟರ್ ಫೇಸ್ಬುಕ್ ಮೊದಲಾದ ಸಾಮಾಜಿಕ ತಾಣದಲ್ಲಿ ಪ್ರಚುರಗೊಳಿಸಿ ಇತರರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಪ್ರೇರಣೆ ನೀಡಲಾಗುತ್ತದೆ. ವಿಶ್ವ ಹೃದಯ ಒಕ್ಕೂಟ ಹಲವು ಅಮೂಲ್ಯ ಮಾಹಿತಿಯನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸುತ್ತಾ ಇರುತ್ತದೆ ಹಾಗೂ ಈ ಮಾಹಿತಿಯನ್ನು ಹೆಚ್ಚು ಹೆಚ್ಚಾಗಿ ಜನರು ಪಡೆದುಕೊಳ್ಳುವಂತಾಗಬೇಕು ಎಂಬುದೂ ಈ ಅಭಿಯಾನದ ಇತರ ಉದ್ದೇಶಗಳಾಗಿವೆ.

  ಹಲವಾರು ದೇಶಗಳ ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು, ದತ್ತಕ ಸಂಸ್ಥೆಗಳು ಹಾಗೂ ಇತರ ಖಾಸಗಿ ಸಂಸ್ಥೆಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತವೆ. ಅಭಿಯಾನದ ಸ್ಥಳದಲ್ಲಿ ಮೋಜಿನ ಓಟಗಳು, ಸಂಗೀತ ಕಚೇರಿಗಳು, ಸಾರ್ವಜನಿಕ ಮಾತುಕತೆಗಳು, ಹೃದಯ ತಪಾಸಣೆ ಶಿಬಿರಗಳು, ಒಟ್ಟಾರೆ ಆರೋಗ್ಯ ತಪಾಸಣೆ, ಕ್ರೀಡಾಕೂಟಗಳು, ನಡಿಗೆಗಳು, ವಿಜ್ಞಾನ ವೇದಿಕೆಗಳು, ಫಿಟ್ ನೆಸ್ ಸೆಷನ್ ಗಳು, ಸ್ಟೇಜ್ ಶೋಗಳು, ಪ್ರದರ್ಶನಗಳು ಮೊದಲಾದವುಗಳನ್ನು ಆಯೋಜಿಸಲಾಗಿರುತ್ತದೆ. ಹೃದಯರಕ್ತನಾಳದ ಕಾಯಿಲೆಯ ವಿರುದ್ಧ ವಿಶ್ವಮಟ್ಟದ ಅತಿದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಇದು ಜಗತ್ತಿನಾದ್ಯಂತದ ಜನರಿಗೆ ಒಂದು ದೊಡ್ಡ ಅವಕಾಶವನ್ನು ಒದಗಿಸುತ್ತದೆ.
ಹೃದಯದ ಆರೋಗ್ಯದ ಕಾಳಜಿಯ ಅರಿವನ್ನು ಜನಸಾಮಾನ್ಯರಿಗೆ ಮೂಡಿಸಲು ಹಲವಾರು ಕಾರ್ಯಾಗಾರಗಳನ್ನು ವಿಶ್ವದಾದ್ಯಂತ ಏರ್ಪಡಿಸಲಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಅತಿ ಪ್ರಮುಖವಾದುದು ಎಂದರೆ ವಿಶ್ವಮಟ್ಟದಲ್ಲಿ ನಡೆಯುವ ವಿಶ್ವ ಹೃದಯ ದಿನ. ಈ ವರ್ಷ ಈ ದಿನವನ್ನು ಸೆಪ್ಟೆಂಬರ್ 29ನೇ ಭಾನುವಾರದಂದು ಆಚರಿಸಲಾಗುತ್ತಿದೆ.

ಹೃದಯದ ಕಾಳಜಿಯ ಕಾರ್ಯಕ್ರಮಗಳು ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದ್ದರೂ 2000ನೇ ಇಸವಿಯಲ್ಲಿ ಮೊದಲ ಬಾರಿಗೆ ವಿಶ್ವಮಟ್ಟದ ಬೃಹತ್ ಅಭಿಯಾನದ ರೂಪದಲ್ಲಿ ವಿಶ್ವ ಆರೋಗ್ಯ ದಿನವನ್ನು ಪ್ರಾರಂಭಿಸಲಾಯಿತು. ಹೆಸರೇ ತಿಳಿಸುವಂತೆ ಸಮಾಜದಲ್ಲಿರುವ ಎಲ್ಲಾ ವರ್ಗಗಳ ಜನತೆಗೆ ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮೂಡಿಸುವುದು ಹಾಗೂ ಹೃದಯಸ್ತಂಭನ, ಹೃದಯಾಘಾತ ಮೊದಲಾದವುಗಳ ಬಗ್ಗೆ ಸೂಕ್ತ ಮಾಹಿತಿ ಒದಗಿಸುವುದು ಹಾಗೂ ಇವುಗಳಿಂದ ರಕ್ಷಣೆ ಪಡೆಯಲು ಸೂಕ್ತ ಕ್ರಮ ಹಾಗೂ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಜನತೆಗೆ ಶಿಕ್ಷಣ ನೀಡುವುದೂ ಈ ದಿನಾಚರಣೆಯ ಉದ್ದೇಶವಾಗಿದೆ.

ಪ್ರತಿವರ್ಷ ಸೆಪ್ಟೆಂಬರ್ ತಿಂಗಳ 29ರಂದು ನಡೆಯಲಾಗುವ ಈ ಅಭಿಯಾನಕ್ಕೆ ಪ್ರತಿವರ್ಷವೂ ಪ್ರತ್ಯೇಕ ಥೀಮ್ ಅಥವಾ ನಿರೂಪಣೆಯನ್ನು ವಿನ್ಯಾಸಗೊಳಿಸಲಾಗುತ್ತದೆ. ಈ ಅಭಿಯಾನದ ಮುಖ್ಯ ವಿಷಯವನ್ನು ಆಧರಿಸಿ ಈ ನಿರೂಪಣೆಯನ್ನೂ ವಿನ್ಯಾಸಗೊಳಿಸಲಾಗುತ್ತದೆ ಹಾಗೂ ವಿಷಯಕ್ಕೆ ಹೆಚ್ಚಿನ ಗಮನ ಪಡೆಯುವಂತೆ ಪ್ರಯತ್ನಿಸಲಾಗುತ್ತದೆ. ಈ ನಿರೂಪಣೆಯನ್ನು ವಿನ್ಯಾಸಗೊಳಿಸುವಾಗ ಹೃದಯದ ಆರೋಗ್ಯದ ಬಗ್ಗೆ ತಕ್ಷಣಕ್ಕೆ ನೋಡುವವರ ಗಮನ ಹೋಗುವಂತೆ ಆಕರ್ಷಕವಾಗಿಸಲಾಗುತ್ತದೆ.

 
ಹೆಲ್ತ್