Back
Home » ಚಿತ್ರವಿಮರ್ಶೆ
Review: ಅಧ್ಯಕ್ಷನ ಕಾಮಿಡಿ ಕಿಕ್, ಪ್ರೇಕ್ಷಕರು ಫುಲ್ ಖುಷ್
Oneindia | 4th Oct, 2019 04:24 PM
 • ಪಕ್ಕಾ ಶರಣ್ ಸ್ಟೈಲ್ ಸಿನಿಮಾ ಇದು

  'ಅಧ್ಯಕ್ಷ ಇನ್ ಅಮೇರಿಕಾ' ಅಂದಾಕ್ಷಣ ಅಧ್ಯಕ್ಷ ಚಿತ್ರದ ಮುಂದುವರೆದ ಭಾಗವಿರಬಹುದು ಎಂದುಕೊಂಡಿದ್ದರು ಅದು ತಪ್ಪು. ಮಲಯಾಳಂ ಭಾಷೆಯ 'ಟು ಕಂಟ್ರಿಸ್' ಚಿತ್ರದ ರೀಮೇಕ್ ಇದು. ಕನ್ನಡದ ನೇಟಿವಿಟಿಗೆ ತಕ್ಕಂತೆ ಮಾಡುವಲ್ಲಿ ನಿರ್ದೇಶಕ ಯೋಗಾನಂದ್ ಮುದ್ದಾನ್ ಯಶಸ್ಸು ಕಂಡಿದ್ದಾರೆ. ಶರಣ್ ಸಿನಿಮಾಗಳಲ್ಲಿ ಏನೆಲ್ಲ ಇರಬೇಕು ಎನ್ನುವುದನ್ನ ಅರಿತುಕೊಂಡಿರುವ ನಿರ್ದೇಶಕರು, ಪ್ರೇಕ್ಷಕರಿಗೆ ನಿರಾಸೆಯಾಗದಂತೆ ಚಿತ್ರಕತೆ ಮಾಡಿ ಗಮನ ಸೆಳೆದಿದ್ದಾರೆ.


 • ಇಂಡಿಯಾ ಟು ಅಮೇರಿಕಾ

  ದುಡ್ಡಿಗಾಗಿ ಏನೂ ಬೇಕಾದರೂ ಮಾಡುವ ಉಲ್ಲಾಸ್ (ಶರಣ್) ಏರಿಯಾದಲ್ಲಿ ಸಿಕ್ಕಾಪಟ್ಟೆ ಕಾಗೆ ಹಾರಿಸುತ್ತಿರುತ್ತಾನೆ. ಸೇಟು ಮಗಳನ್ನ ಮದುವೆಯಾದರೆ, ಜೀವನ ಪೂರ್ತಿ ಕುಳಿತುಕೊಂಡು ಆಯಾಗಿರಬಹುದು ಎಂಬ ಮನೋಭಾವನೆ ಹೊಂದಿರುವ ಹುಡುಗ. ಮತ್ತೊಂದೆಡೆ ಕುಡಿತದ ಚಟಕ್ಕೆ ಸಿಲುಕಿಕೊಂಡಿರುವ ಅಮೇರಿಕಾ ಮೂಲದ ನಂದಿನಿ (ರಾಗಿಣಿ), ಹಳ್ಳಿ ಹುಡುಗನನ್ನೇ ಮದುವೆಯಾಗಬೇಕು ಎಂಬ ಗುರಿ. ಕಾಕತಾಳೀಯ ಎಂಬಂತೆ ಇವರಿಬ್ಬರ ಜೋಡಿ ಒಂದಾಗುತ್ತೆ. ಅಲ್ಲಿವರೆಗೂ ಆಯಾಗಿದ್ದ ಶರಣ್ ಸಂಕಷ್ಟಕ್ಕೆ ಸಿಲುಕುತ್ತಾನೆ. ಅಮೇರಿಕಾಗೆ ಹೋಗಿ ಅಲ್ಲಿ ಪಡಬಾರದ ಪಾಡು ಬೀಳುತ್ತಾನೆ. ಇದರಿಂದ ಹೇಗೆ ಹೊರಬರುತ್ತಾನೆ, ರಾಗಿಣಿಯ ಕುಡಿತದ ಸಮಸ್ಯೆಯನ್ನ ಹೇಗೆ ಬಗೆಹರಿಸುತ್ತಾನೆ ಎಂಬುದು ಕ್ಲೈಮ್ಯಾಕ್ಸ್.


 • ಕಾಮಿಡಿಗೆ ಕೊರೆತೆ ಇಲ್ಲ

  ನಗಿಸುವುದಕ್ಕೆ ಸಿನಿಮಾ ಮಾಡುವ ಶರಣ್ ಅವರ ಕಾಮಿಡಿ ಟೈಂ ಸಖತ್ ಮಜಾ ಕೊಡುತ್ತೆ. ಅಧ್ಯಕ್ಷನಿಗೆ ಸಾಥ್ ಕೊಟ್ಟಿರುವ ಶಿವರಾಜ್ ಕೆ.ಆರ್ ಪೇಟೆ ಕೂಡ ಪಂಚ್ ಮೇಲೆ ಪಂಚ್ ಕೊಡ್ತಾರೆ. ಸಿನಿಮಾ ಪೂರ್ತಿ ಸಾಧುಕೋಕಿಲಾ ಕಚಗುಳಿ ನಗೆಗಡಲಲ್ಲಿ ತೇಲಿಸುತ್ತೆ. ರಂಗಾಯಣ ರಘು ಹಾಸ್ಯ ಮತ್ತಷ್ಟು ಕಿಕ್ ಕೊಡುತ್ತೆ. ತಬಲಾ ನಾಣಿ ಸಿಗ್ನೇಚರ್ ಪಾತ್ರ ನಿರ್ವಹಿಸಿದ್ದು ನಗು ಹೆಚ್ಚಿಸುತ್ತಾರೆ. ಸುಂದರ್ ವೀಣಾ ಬಂದಾಗೆಲ್ಲ ನಗು ಮೂಡಿಸುತ್ತಾರೆ. ಇವರ ಜೊತೆ ಅವಿನಾಶ್, ಪದ್ಮಜಾ ರಾವ್, ಚಿತ್ರಾ ಶಣೈ, ಅಶೋಕ್, ಪ್ರಕಾಶ್ ಬೆಳವಾಡಿ, ಮಕರಂದ್ ದೇಶಪಾಂಡೆ ಉತ್ತಮ ಸಾಥ್ ನೀಡಿದ್ದಾರೆ. ಯಾವ ಪಾತ್ರವೂ ಬೇಡ ಎನಿಸಲ್ಲ.


 • ಶರಣ್-ರಾಗಿಣಿ ಜೋಡಿ ಸರ್ಪ್ರೈಸ್

  ಲೋಕಲ್ ಹುಡುಗನಾಗಿ ಉಲ್ಲಾಸ್, ದುಡ್ಡಿನ ಹಿಂದೆ ಬೀಳುವ ಉಲ್ಲಾಸ್, ಪ್ರೀತಿಗಾಗಿ ಪರಿತಪಿಸುವ ಉಲ್ಲಾಸ್ ಆಗಿ ಶರಣ್ ಮಿಂಚಿದ್ದಾರೆ. ಮದ್ಯವ್ಯಸನಿ ಪಾತ್ರದಲ್ಲಿ ರಾಗಿಣಿ ಅದ್ಭುತ ಅಭಿನಯ. ಬಹುಶಃ ರಾಗಿಣಿಗಾಗಿಯೇ ಈ ಪಾತ್ರ ಮಾಡಿಸಿದ್ದಾರೆ ಎನ್ನುವಷ್ಟು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸಿದ್ದಾರೆ. ಇವರಿಬ್ಬರ ಜೋಡಿ ಕೂಡ ವರ್ಕೌಟ್ ಆಗಿದೆ.


 • ಕೊನೆಯದಾಗಿ ಹೇಳುವುದೇನು?

  ಎರಡೂವರೆ ಗಂಟೆಯ ಅವಧಿ ಬೇಕಾಗಿರಲಿಲ್ಲ ಅನ್ಸುತ್ತೆ. ಈ ಹಿಂದಿನ ಚಿತ್ರಗಳಂತೆ ಶರಣ್ ಪಾತ್ರ ಇರುವುದರಿಂದ ಅಷ್ಟಾಗಿ ವಾಹ್ ಎನಿಸಲ್ಲ. ಕೆಲವು ದೃಶ್ಯಗಳು ಈ ಹಿಂದೆಯೂ ನೋಡಿರುವ ಫೀಲ್ ಕೊಡುತ್ತೆ. ಹಾಡುಗಳು ಚೆನ್ನಾಗಿದೆ. ಸಿನಿಮಾಟೋಗ್ರಫಿ, ಸಂಕಲನ ಆಕರ್ಷಣೆಯಾಗಿದೆ. ಅಧ್ಯಕ್ಷ ಚಿತ್ರದಷ್ಟು ಕಿಕ್ ಕೊಡದಿದ್ದರೂ, ಪ್ರೇಕ್ಷಕರನ್ನ ರಂಜಿಸಲು ಸಫಲವಾಗಿದೆ. ಆರಾಮಾಗಿ ಒಮ್ಮೆ ಸಿನಿಮಾ ನೋಡಬಹುದು.
ಶರಣ್ ಸಿನಿಮಾ ಅಂದ್ರೆ ಕೊಟ್ಟ ಕಾಸಿಗೆ ಮೋಸ ಆಗಲ್ಲ. ಮನರಂಜನೆಗೆ ಕೊರತೆ ಇರಲ್ಲ. ಕಾಮಿಡಿ ಕಿಕ್ ಪಕ್ಕಾ ಎಂಬ ಮಾತುಗಳಿವೆ. ಈ ಎಲ್ಲ ಅಂಶಗಳನ್ನ ಒಳಗೊಂಡಿರುವ ಚಿತ್ರವೇ ಅಧ್ಯಕ್ಷ ಇನ್ ಅಮೇರಿಕಾ.

   
 
ಹೆಲ್ತ್