Back
Home » ಆರೋಗ್ಯ
ಯೌವ್ವನದ ಬದಲು ವೃದ್ಧಾಪ್ಯದತ್ತ ದೂಡುವ ಈ ಆರು ವ್ಯಾಯಾಮದ ತಪ್ಪುಗಳು
Boldsky | 5th Oct, 2019 01:45 PM
 • 1 ಬೆನ್ನಿನ ಭಂಗಿಯ ಬಗ್ಗೆ ಅಗತ್ಯ ಗಮನ ನೀಡದಿರುವುದು

  ನೀವು ಎಷ್ಟೇ ಕಠಿಣವಾದ ವ್ಯಾಯಾಮಗಳನ್ನು ಮಾಡಿದರೂ ನಿಮ್ಮ ಬೆನ್ನಿನ ಭಂಗಿ ಸರಿಯಾಗದೇ ಇದ್ದರೆ ಹೊಳೆಯಲ್ಲಿ ಹುಣಸೆಹಣ್ಣು ಕಿವಿಚಿದಷ್ಟೇ ಪ್ರಯೋಜನ ದೊರಕಲಿದೆ. ಅಸಮರ್ಪಕ ಬೆನ್ನಿನ ಭಂಗಿ ಅಥವಾ ಅತಿಯಾದ ಬಿಗಿತನ ವ್ಯಾಯಾಮದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ವ್ಯಾಯಮದಲ್ಲಿ ಬೆನ್ನಿನ ಭಂಗಿಯನ್ನು ಸರಿಪಡಿಸುವ ಹಾಗೂ ಪ್ರತಿ ವ್ಯಾಯಮದಲ್ಲಿಯೂ ಬೆನ್ನಿನ ಭಂಗಿ ಸರಿಯಾಗಿ ಇರಿಸುವಂತೆ ನಿರ್ವಹಿಸಬೇಕು.


 • 2 ಹೃದಯದ ಬಡಿತವನ್ನು ಹೆಚ್ಚಿಸುವ ವ್ಯಾಯಾಮ ಮಾತ್ರವೇ ಮಾಡುವುದು

  ಈ ಬಗೆಯ ವ್ಯಾಯಾಮಗಳಿಂದ ತೂಕ ಇಳಿಸುವ ಗುರಿಗಳನ್ನು ಶೀಘ್ರವಾಗಿ ಸಾಧಿಸಬಹುದಾದರೂ, ಹೃದಯವನ್ನು ಅಗತ್ಯಕ್ಕೂ ಹೆಚ್ಚೇ ದಂಡಿಸುವ ಮೂಲಕ ದೇಹಕ್ಕೆ ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ಮಾಡಿದಂತಾಗುತ್ತದೆ. ಸಾಮಾನ್ಯವಾಗಿ ನಡುವಯಸ್ಸು ದಾಟಿದ ಬಳಿಕ ಸ್ನಾಯುಗಳು ಮತ್ತು ಮೂಳೆಗಳಿಗೆ ಸಾಕಷ್ಟು ವ್ಯಾಯಾಮ ದೊರಕದೇ ಇದ್ದರೆ ಇವು ಹೆಚ್ಚು ಹೆಚ್ಚು ಸವೆತಕ್ಕೊಳಗಾಗುತ್ತವೆ ಹಾಗೂ ದೈಹಿಕ ಚಟುವಟಿಕೆಯನ್ನು ನಿಧಾನಗೊಳಿಸತೊಡಗುತ್ತವೆ. ದೇಹದಾರ್ಢ್ಯ ತಜ್ಞರ ಪ್ರಕಾರ 18 ರಿಂದ 50 ವರ್ಷ ವಯಸ್ಸಿನ ವ್ಯಕ್ತಿಗಳು ವಾರಕ್ಕೆರಡು ಬಾರಿ ಮಾತ್ರವೇ ಹೆಚ್ಚು ತೂಕವನ್ನು ಎತ್ತುವ ಅಥವಾ ಸ್ನಾಯುಗಳನ್ನು ದೃಢಗೊಳಿಸುವ ವ್ಯಾಯಾಮವನ್ನು ಮಾಡಿದರೆ ಸಾಕು. ಈ ಮೂಲಕ ಸ್ನಾಯುಗಳು ಹುರಿಗಟ್ಟುತ್ತವೆ ಹಾಗೂ ಇತರ ದಿನಗಳಲ್ಲಿಯೂ ದೇಹದಲ್ಲಿದ್ದ ಕ್ಯಾಲೋರಿಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.


 • 3 ಹೈಟ್ ವ್ಯಾಯಾಮ ಮಾಡದಿರುವುದು

  ಇತ್ತೀಚಿನ ಅಧ್ಯಯನಗಳ ಪ್ರಕಾರ HIIT (High-Intensity Interval Training) ಎಂಬ ಬಗೆಯ ವ್ಯಾಯಾಮ ಕಷ್ಟಕರವೇ ಆದರೂ ಜೀವಕೋಶಗಳ ಮಟ್ಟದಿಂದ ವೃದ್ದಾಪ್ಯ ಆವರಿಸುವುದನ್ನು ತಡವಾಗಿಸುತ್ತದೆ. ಈ ಹೈಟ್ ವ್ಯಾಯಾಮದಿಂದ ದೇಹದ ಶಕ್ತಿ ಹೆಚ್ಚುತ್ತದೆ ಮತ್ತು ಜೀವರಾಸಾಯನಿಕ ಕ್ರಿಯೆಯ ಗತಿ ಹೆಚ್ಚುತ್ತದೆ ಹಾಗೂ ದೇಹ ಇನ್ಸುಲಿನ್ ಅನ್ನು ತಾಳಿಕೊಳ್ಳುವ ಕ್ಷಮತೆಯೂ ಹೆಚ್ಚುತ್ತದೆ. ಒಟ್ಟಾರೆಯಾಗಿ, ದೇಹದಾರ್ಢ್ಯವನ್ನು ಹೆಚ್ಚಿಸಿ ವೃದ್ದಾಪ್ಯ ಆವರಿಸುವುದನ್ನು ತಡವಾಗಿಸುತ್ತದೆ.


 • 4 ಕಿಬ್ಬೊಟ್ಟೆಯ ವ್ಯಾಯಮಕ್ಕೆ ಹೆಚ್ಚಿನ ಆದ್ಯತೆ ನೀಡದಿರುವುದು

  ಕಿಬ್ಬೊಟ್ಟೆಗೆ ಮಾಡಬೇಕಾದ ವ್ಯಾಯಾಮಗಳು ಕಷ್ಟಕರವಲ್ಲದಿದ್ದರೂ ಹೆಚ್ಚಿನ ಜನರಿಗೆ ಇಷ್ಟವಾಗದ ವ್ಯಾಯಾಮವಾಗಿದೆ. ಆದರೆ ಆರೋಗ್ಯದ ನಿಟ್ಟಿನಲ್ಲಿ ಇದು ತುಂಬಾ ಅಗತ್ಯವಾಗಿದೆ. ವಯಸ್ಸಾಗುತ್ತಾ ಹೋದಂತೆ ಈ ಸ್ನಾಯುಗಳು ಶಿಥಿಲಗೊಳ್ಳುತ್ತಾ ಹೋಗುತ್ತವೆ ಹಾಗೂ ಗಮನ ನೀಡದೇ ಅಥವಾ ಸೂಕ್ತ ವ್ಯಾಯಾಮ ದೊರಕಿಸದೇ ಹೋದರೆ ಹೆಚ್ಚಿನ ತೊಂದರೆ ಎದುರಾಗಬಹುದು. ವಿಶೇಷವಾಗಿ ಮೂತ್ರಪಿಂಡಗಳ ತೊಂದರೆ, ಮೂತ್ರವಿಸರ್ಜನೆ ಅಸಮರ್ಪಕವಾಗುವುದು ಮೊದಲಾದವು ಎದುರಾಗುತ್ತವೆ. ಅತ್ಯುತ್ತಮ ವ್ಯಾಯಾಮವೆಂದರೆ ಕೆಗೆಲ್ ವ್ಯಾಯಾಮ, ಇದನ್ನು ಆದಷ್ಟೂ ನಿತ್ಯವೂ ಅನುಸರಿಸುವುದು ಉತ್ತಮ.


 • 5 ಸೆಳೆತನದ ವ್ಯಾಯಾಮಗಳನ್ನು ನಿರ್ಲಕ್ಷಿಸುವುದು

  ಮುಖ್ಯ ವ್ಯಾಯಾಮಕ್ಕೂ ಮುನ್ನ ಮತ್ತು ಬಳಿಕ ಸಾಕಷ್ಟು ಸೆಳೆತದ ವ್ಯಾಯಾಮಗಳನ್ನು ಮಾಡುವುದು ತುಂಬಾ ಅಗತ್ಯವಾಗಿದ್ದು ಹೆಚ್ಚಿನವರು ಸೋಮಾರಿತನದಿಂದ ಇವನ್ನು ನಿರ್ಲಕ್ಷಿಸಿಬಿಡುತ್ತಾರೆ. ಆದರೆ ವಾಸ್ತವದಲ್ಲಿ ಈ ವ್ಯಾಯಾಮಗಳು ಇಲ್ಲವಾದರೆ ಸ್ನಾಯುಗಳು ಪ್ರಮುಖ ವ್ಯಾಯಾಮಕ್ಕೆ ಇನ್ನೂ ಸಿದ್ಧವಾಗದೇ ಇದ್ದು ತೀವ್ರ ಸೆಳೆತಕ್ಕೆ ಒಳಗಾಗಬಹುದು ಮತ್ತು ಜೀವಕೋಶಗಳ ಮಟ್ಟದಲ್ಲಿ ವೃದ್ದಾಪ್ಯವನ್ನು ಆಹ್ವಾನಿಸಬಹುದು. ಸೆಳೆತದ ವ್ಯಾಯಾಮದಿಂದ ದೇಹದ ಬಳುಕುವಿಕೆ ಉತ್ತಮಗೊಳ್ಳುತ್ತದೆ ಹಾಗೂ ವ್ಯಾಯಾಮಗಳನ್ನು ಪರಿಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗಿಸುತ್ತದೆ.


 • 6 ಸದಾ ವ್ಯಾಯಾಮ ಶಾಲೆಯಲ್ಲಿಯೇ ಇರುವುದು

  ಕೆಲವರಿಗೆ ವ್ಯಾಯಾಮದ ಹುಚ್ಚು ಹಿಡಿದ ಬಳಿಕ ಹೆಚ್ಚಿನ ಹೊತ್ತು ವ್ಯಾಯಾಮಶಾಲೆಯಲ್ಲಿಯೇ ಕಳೆಯಲು ತೊಡಗುತ್ತಾರೆ. ಶೀಘ್ರವೇ ತನ್ನ ದೇಹ ಹುರಿಗಟ್ಟಬೇಕು ಮತ್ತು ವೃದ್ದಾಪ್ಯ ಆವರಿಸಲೇಬಾರದು ಎನ್ನುವ ಹುಮ್ಮಸ್ಸಿನಿಂದ ಹೆಚ್ಚು ಹೆಚ್ಚು ವ್ಯಾಯಮಗಳನ್ನು ಮಾಡಲು ಘಂಟೆಗಟ್ಟಲೇ ವ್ಯಾಯಾಮಶಾಲೆಯಲ್ಲಿಯೇ ಇರುತ್ತಾರೆ. ಆದರೆ ವ್ಯಾಯಾಮ ಎಷ್ಟು ಮುಖ್ಯವೋ ಅಷ್ಟೇ ವ್ಯಾಯಾಮದ ಬಳಿಕ ವಿಶ್ರಾಂತಿಯೂ ಅಗತ್ಯ. ವ್ಯಾಯಾಮದಿಂದ ಬಳಲಿದ ಅಂಗಗಳು ಪುನಃಶ್ಚೇತನ ಪಡೆಯಲು ವಿಶ್ರಾಂತಿ ಅಗತ್ಯ. ಅಲ್ಲದೇ ಅತಿಯಾದ ವ್ಯಾಯಾಮದಿಂದ ಮೆದುಳಿಗೆ ಹರಿಯುವ ಕಾರ್ಟಿಸೋಲ್ ರಸದೂತದ ಮಟ್ಟವೂ ತಗ್ಗುತ್ತದೆ ಈ ಮೂಲಕ ಮಾನಸಿಕ ಒತ್ತಡವನ್ನು ಎದುರಿಸಲು ಹಾಗೂ ದೇಹವನ್ನು ಶಿಥಿಲಗೊಳಿಸುವ ತೊಂದರೆಗಳು ಎದುರಾಗದೇ ಇರುವಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ವ್ಯಾಯಾಮದ ಮಹತ್ವ, ಅದರಲ್ಲೂ ನಿತ್ಯವೂ ತಪ್ಪದೇ ಅನುಸರಿಸುವ ವ್ಯಾಯಾಮದ ಅಭ್ಯಾಸ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ನಮ್ಮೆಲ್ಲರಿಗೂ ಗೊತ್ತು. ವ್ಯಾಯಾಮದ ಮಹತ್ವ ಅರಿತಿರುವವರು ಸೋಮಾರಿತನವನ್ನು ತಪ್ಪದೇ ಬದಿಗಿಟ್ಟು ತಮ್ಮ ಆರೋಗ್ಯಕ್ಕಾಗಿ ವ್ಯಾಯಾಮಾ ಮಾಡುತ್ತಾರೆ. ಆದರೆ ಈ ಹುರುಪಿನ ಭರದಲ್ಲಿ ಮಾಡುವ ಕೆಲವು ತಪ್ಪುಗಳು ವಾಸ್ತವದಲ್ಲಿ ಮಾಡಬೇಕಾದ ಒಳ್ಳೆಯದಕ್ಕಿಂತಲೂ ವಿರುದ್ದವಾದ ಪರಿಣಾಮವನ್ನುಂಟುಮಾಡಬಹುದು. ಒಂದರ್ಥದಲ್ಲಿ ಗಿಡಕ್ಕೆ ಅಗತ್ಯಕ್ಕೂ ಹೆಚ್ಚೇ ಗೊಬ್ಬರ ಹಾಕಿದರೆ ಗಿಡವೇ ಕೊಳೆತು ಹೋಗುವಂತೆ.

ವ್ಯಾಯಾಮ ಮಾಡುವವರಲ್ಲಿ ಹೆಚ್ಚಿನವರ ಉದ್ದೇಶ ಹೊಟ್ಟೆ ಕರಗಿಸುವುದೇ ಆಗಿರುತ್ತದೆ ಹಾಗೂ ಕೆಲದಿನಗಳ ವ್ಯಾಯಾಮದ ಬಳಿಕ ಇವರಿಗೆ ಹೊಟ್ಟೆ ಕರಗುವ ಬದಲು ಇನ್ನಷ್ಟು ಹೆಚ್ಚಾದಂತೆ ಕಂಡರೆ ಇದಕ್ಕೆ ಇವರ ತಪ್ಪು ವ್ಯಾಯಾಮದ ಕ್ರಮ ಕಾರಣವೆಂದು ತಿಳಿದುಕೊಳ್ಳಬೇಕು. ನಮ್ಮ ದೇಹಕ್ಕೆ ವ್ಯಾಯಾಮದ ಅಗತ್ಯವಿದ್ದರೂ, ಇದು ಮಿತಿಯಲ್ಲಿದ್ದರೆ ಮಾತ್ರವೇ ಆರೋಗ್ಯಕರ. ಹುಮ್ಮಸ್ಸಿನಲ್ಲಿ ಸಾಮರ್ಥ್ಯಕ್ಕೂ ಮೀರಿದ ವ್ಯಾಯಾಮ ಮಾಡಿದರೆ ಇದು ವಿರುದ್ದ ಪ್ರತಿಫಲವನ್ನು ನೀಡಬಹುದು. ಅಷ್ಟೇ ಅಲ್ಲ, ಆರೋಗ್ಯವನ್ನೂ ಬಾಧಿಸಬಹುದು. ಇಂತಹ ಆರು ಪ್ರಮುಖ ವ್ಯಾಯಾಮದ ತಪ್ಪುಗಳನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ, ಬನ್ನಿ, ನೋಡೋಣ:

 
ಹೆಲ್ತ್