Back
Home » ಸಮ್ಮಿಲನ
ಈ 6 ರಾಶಿಯ ವ್ಯಕ್ತಿಗಳು ಅತ್ಯದ್ಭುತ ದೂರದೃಷ್ಟಿಯನ್ನು ಹೊಂದಿರುತ್ತಾರೆ
Boldsky | 8th Oct, 2019 02:46 PM
 • ಸಿಂಹ ರಾಶಿ

  ಸಿಂಹ ರಾಶಿಯ ವ್ಯಕ್ತಿಗಳಲ್ಲಿ ನಾಯಕತ್ವ ಗುಣವು ಸ್ವಾಭಾವಿಕವಾಗಿಯೇ ಇರುತ್ತದೆ. ಎಲ್ಲರ ಸಮೂಹದಲ್ಲಿಯೂ ಕೇಂದ್ರ ವ್ಯಕ್ತಿಗಳಾಗಿ ಹಾಗೂ ಎಲ್ಲರ ಚಿತ್ತವನ್ನು ಸೆಳೆಯುವಂತಹ ಮನೋಭಾವವನ್ನು ಹೊಂದಿರುತ್ತಾರೆ. ಉತ್ಸಾಹ ಭರಿತವಾದ ವರ್ತನೆಯಿಂದ ಕೂಡಿರುವ ಇವರಲ್ಲಿ ದೂರದೃಷ್ಟಿಯಂತ ಅದ್ಭುತ ಕಲ್ಪನೆಯ ಶಕ್ತಿಗಳಿರುತ್ತವೆ. ಇವರು ಮೇಲ್ನೋಟಕ್ಕೆ ಸೂಕ್ಷ್ಮ ಪ್ರವೃತ್ತಿಯವರಂತೆ ತೋರದೆ ಇರಬಹುದು. ಆದರೆ ಕೈಗೊಳ್ಳುವ ಕೆಲಸ ಕಾರ್ಯಗಳ ಫಲಿತಾಂಶ ಹೇಗಿರಬಹುದು? ತಾವು ಯಾವ ರೀತಿಯಲ್ಲಿ ಸಿದ್ಧತೆಗಳನ್ನು ಹೊಂದಿರಬೇಕು? ಭವಿಷ್ಯದಲ್ಲಿ ಬದಲಾಗುವ ಪರಿಸ್ಥಿತಿಯನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಚಾಣಾಕ್ಷತನ ಇವರಲ್ಲಿ ಇರುತ್ತದೆ.


 • ಮೇಷ ರಾಶಿ

  ಉತ್ಸಾಹಿಗಳು ಹಾಗೂ ಶ್ರಮ ಜೀವಿಗಳು ಆದ ಇವರಲ್ಲಿ ದೂರದೃಷ್ಠಿ ಎನ್ನುವುದು ನೈಸರ್ಗಿಕವಾಗಿಯೇ ಇರುತ್ತದೆ. ತಮಗೆ ಹಾಗೂ ತಮ್ಮಿಂದ ಸಹಾಯ ಯಾಚಿಸುವವರಿಗೆ ಸೂಕ್ತ ಯೋಜನೆ ಹಾಗೂ ಸಲಹೆಯನ್ನು ನೀಡುತ್ತಾರೆ. ಭವಿಷ್ಯದಲ್ಲಿ ಬದಲಾಗಬಹುದಾದ ಸಂಗತಿಗಳನ್ನು ಮೊದಲೇ ಊಹಿಸುತ್ತಾರೆ. ಇವರು ಎಂತಹ ಒತ್ತಡವನ್ನಾದರೂ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಕುಟುಂಬದ ವಿಷಯದಲ್ಲಿ ಅಥವಾ ಉದ್ಯೋಗದ ಕ್ಷೇತ್ರದಲ್ಲಿ ಉಂಟಾಗುವ ಕ್ಲಿಷ್ಟಕರವಾದ ಸಂಗತಿಯನ್ನು ಸುಲಭವಾಗಿ ನಿಯಂತ್ರಿಸುತ್ತಾರೆ. ಜೊತೆಗೆ ಅವುಗಳಿಗೆ ಹೇಗೆ ಪರಿಹಾರ ಕಂಡು ಹಿಡಿಯಬೇಕು ಎನ್ನುವಂತಹ ದೂರದೃಷ್ಟಿಯನ್ನು ಹೊಂದಿರುತ್ತಾರೆ. ತಮ್ಮ ತೀಕ್ಷ್ಣ ಬುದ್ಧಿಯಿಂದ ಪರಿಹಾರವನ್ನು ಕಂಡುಕೊಳ್ಳುವರು. ಸೈನ್ಯದ ಮುಖ್ಯಸ್ಥರಂತೆ ಯಶಸ್ವಿ ಯೋಜನೆಯನ್ನು ಹೇಗೆ ಕೈಗೊಳ್ಳಬೇಕು? ಯಾವ ಅವಕಾಶಗಳು ನಮಗೆ ಯಶಸ್ಸನ್ನು ತಂದುಕೊಡುತ್ತದೆ ಎನ್ನುವುದನ್ನು ಬಲು ಸುಲಭವಾಗಿ ಚಿಂತನೆ ನಡೆಸಿರುತ್ತಾರೆ.


 • ಕನ್ಯಾ ರಾಶಿ

  ಕನ್ಯಾ ರಾಶಿಯವರು ಪ್ರತಿಯೊಂದು ವಿಷಯದಲ್ಲೂ ಪರಿಪೂರ್ಣತೆಯನ್ನು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಭವಿಷ್ಯದ ಬಗ್ಗೆ ಸೂಚನೆಯನ್ನು ಪಡೆಯಲು ಹಾಗೂ ಕೈಗೊಂಡ ಯೋಜನೆಯ ಫಲಿತಾಂಶವನ್ನು ರೂಪಿಸಿಕೊಳ್ಳಲು ಇವರ ಈ ಗುಣ ಅತ್ಯಂತ ಸಹಾಯಕಾರಿಯಾಗುತ್ತದೆ. ಸೂಕ್ಷ್ಮ ಹಾಗೂ ಭಾವನಾತ್ಮಕ ಜೀವಿಗಳಾದ ಇವರು ತಮ್ಮ ಜೀವನ ಹಾಗೂ ಆತ್ಮೀಯರ ಬದುಕಿಗಾಗಿ ಸಾಕಷ್ಟು ಮುಂದಾಲೋಚನೆಯನ್ನು ಗೈಯುತ್ತಾರೆ. ಇವರ ಯೋಚನೆಯಂತೆಯೇ ಭವಿಷ್ಯವನ್ನು ಸುಂದರವಾಗಿ ಕಟ್ಟಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರ ಈ ಗುಣಗಳು ರಾಶಿಗೆ ಅನುಗುಣವಾಗಿ ಹುಟ್ಟಿನಿಂದಲೇ ಬಂದಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು.


 • ಮೀನ ರಾಶಿ

  ಮೀನ ರಾಶಿಯವರು ಸದಾ ಕಲ್ಪನಾ ಲೋಕದಲ್ಲಿಯೇ ಇರುತ್ತಾರೆ. ಇವರು ಜೀವನದಲ್ಲಿ ಹೆಚ್ಚು ಕನಸು ಕಾಣುವ ವ್ಯಕ್ತಿಗಳು ಎಂದು ಸಹ ಗುರುತಿಸಲಾಗುತ್ತದೆ. ಇವರ ಕನಸುಗಳು ಹಾಗೂ ಯೋಜನೆಗಳು ಅವರಲ್ಲಿರುವ ದೂರದೃಷ್ಟಿಯ ಶಕ್ತಿಯಿಂದಲೇ ಯೋಜಿತಗೊಂಡಿರುತ್ತದೆ. ಹಾಗಾಗಿ ಅವರು ಕೈಗೊಂಡ ಕೆಲಸದಲ್ಲಿ ಸೋಲು ಅಥವಾ ವಿಫಲತೆ ಎನ್ನುವುದು ತೀರಾ ಕಡಿಮೆ ಎಂದು ಹೇಳಲಾಗುತ್ತದೆ. ಈ ರಾಶಿಯ ಗ್ರಹಗತಿ ಹಾಗೂ ರಾಶಿಚಕ್ರದ ಪ್ರಭಾವದಿಂದ ವ್ಯಕ್ತಿಯು ಸಾಕಷ್ಟು ವಿಶಾಲವಾದ ದೃಷ್ಟಿಕೋನವನ್ನು ಹೊಂದಿರುತ್ತಾನೆ. ತಮ್ಮ ವೈಯಕ್ತಿಕ ಹಾಗೂ ಕುಟುಂಬದ ಸಂಗತಿಗಳು ಎದುರಾದಾಗ ತಮ್ಮ ಬುದ್ಧಿಯನ್ನು ಉಪಯೋಗಿಸುತ್ತಾರೆ. ದೂರದೃಷ್ಟಿಯ ಮೂಲಕ ಸಾಕಷ್ಟು ಜಾಗರೂಕರಾಗಿರುತ್ತಾರೆ.


 • ಕರ್ಕ ರಾಶಿ

  ಅತ್ಯುತ್ತಮ ದೂರ ದೃಷ್ಟಿ ಹೊಂದಿರುವ ರಾಶಿ ಚಕ್ರಗಳಲ್ಲಿ ಒಂದು. ಅಪಾಯಗಳನ್ನು ಎಳೆದುಕೊಳ್ಳಲು ಇಷ್ಟ ಪಡದ ವ್ಯಕ್ತಿಗಳು ಇವರು. ಸಾಮಾನ್ಯವಾಗಿ ಎಲ್ಲಾ ಸಂಗತಿಗಳಲ್ಲೂ ಸೂಕ್ತ ಲೆಕ್ಕಾಚಾರವನ್ನು ಕೈಗೊಳ್ಳುವರು. ಉತ್ತಮ ಲೆಕ್ಕಾಚಾರದ ಮೂಲಕವೇ ಪ್ರತಿಯೊಂದು ನಿರ್ಧಾರ ಅಥವಾ ತೀರ್ಮಾನಗಳನ್ನು ಕೈಗೊಳ್ಳುವರು. ತಾವು ನಡೆಯುವ ಹಾದಿ, ಕೈಗೊಳ್ಳುವ ವಿಷಯ ಹಾಗೂ ತಮ್ಮವರಿಗೆ ಉಂಟಾಗಬಹುದಾದ ಪರಿಸ್ಥಿತಗಳ ಬಗ್ಗೆ ಸಾಕಷ್ಟು ಚಿಂತನೆ ಹಾಗೂ ಮುತುವರ್ಜಿಯನ್ನು ವಹಿಸುತ್ತಾರೆ. ಕೈಗೊಂಡ ಕೆಲಸವನ್ನು ಉತ್ತಮ ಫಲಿತಾಂಶದಿಂದಲೇ ಪಡೆಯಬೇಕು ಎನ್ನುವ ಧೋರಣೆ ಹೊಂದುವುದರಿಂದ ತಮ್ಮ ದೂರದೃಷ್ಟಿಯ ಚಿಂತನೆಯ ಮೂಲಕವೇ ನಿರ್ಧಾರಗಳನ್ನು ಕೈಗೊಂಡಿರುತ್ತಾರೆ. ತಮ್ಮ ಅದ್ಭುತ ಬುದ್ಧಿ ಶಕ್ತಿಯಿಂದ ಅಂದುಕೊಂಡಿರುವುದನ್ನು ಸಾಧಿಸದೆ ಇರುವುದಿಲ್ಲ. ಒಮ್ಮೆ ವಿಫಲವಾದರೂ, ಗುರಿ ಸಾಧಿಸುವ ತನಕ ನಿರಂತರ ಪ್ರಯತ್ನವನ್ನು ಮುಂದುವರಿಸುತ್ತಲೇ ಇರುತ್ತಾರೆ.


 • ಧನು ರಾಶಿ

  ಬೆಂಕಿಯ ಚಿಹ್ನೆಯನ್ನು ಹೊಂದಿರುವ ಧನು ರಾಶಿಯ ವ್ಯಕ್ತಿಗಳು ಅದ್ಭುತವಾದ ದೂರದೃಷ್ಟಿಯ ಶಕ್ತಿಯನ್ನು ಹೊಂದಿರುತ್ತಾರೆ. ಸಾಕಷ್ಟು ಸಮಯಗಳ ಕಾಲ ಒಂಟಿಯಾಗಿ ಇರಲು ಬಯಸುವ ಇವರು ಸಾಕಷ್ಟು ಚಿಂತನೆಗಳ ಬಗ್ಗೆ ಹಾಗೂ ಯೋಜನೆಗಳ ಬಗ್ಗೆ ಗುನುಗುತ್ತಲೇ ಇರುತ್ತಾರೆ. ಯಾವ ಕೆಲಸವು ಯಾವ ಬಗೆಯ ಫಲಿತಾಂಶ ನೀಡಬಹುದು ಎನ್ನುವ ಸೂಕ್ತ ಲೆಕ್ಕಾಚಾರ ಇವರದ್ದಾಗಿರುವುದು. ಈ ರಾಶಿಯಲ್ಲಿ ಜನಿಸುವ ವ್ಯಕ್ತಿಗಳಿಗೆ ಹುಟ್ಟಿನಿಂದಲೇ ಉತ್ತಮವಾದ ದೂರದೃಷ್ಟಿಯ ಚಿಂತನೆ, ಗಟ್ಟಿ ಮನಸ್ಸು ಹಾಗೂ ಚೈತನ್ಯ ಶೀಲತೆ ಇರುತ್ತವೆ. ಅವುಗಳ ಬಳಕೆಯಿಂದಲೇ ಭವಿಷ್ಯದಕ್ಕೆ ಬೇಕಾದ ಸೂಕ್ತ ಯೋಜನೆ ಹಾಗೂ ಕೆಲಸಕಾರ್ಯಗಳನ್ನು ಕೈಗೊಳ್ಳುವರು. ಸಾಹಸಿಗಳು ಹಾಗೂ ಧೈರ್ಯವಂತರೂ ಆದ ಇವರು ಜೀವನದಲ್ಲಿ ಎಂತಹ ಕೆಲಸ ಅಥವಾ ಸಾಧನೆಯನ್ನು ಮಾಡಲು ಮುಂದಾಗುತ್ತಾರೆ. ತಮ್ಮ ನಿಲುವು ಹಾಗೂ ಚಿಂತನೆಗಳೊಂದಿಗೆ ಸೂಕ್ತ ತುಲನೆ ಮತ್ತು ನಿರ್ಧಾರವನ್ನು ಕೈಗೊಳ್ಳುತ್ತಾರೆ.
ಯಾವುದೇ ಒಂದು ಕೆಲಸವನ್ನು ನಿರ್ವಹಿಸುವಾಗ ನಮ್ಮಲ್ಲಿ ಸೂಕ್ತ ನಿರ್ಧಾರ ಹಾಗೂ ಯೋಜನೆಗಳು ಇರಬೇಕು. ಅದಕ್ಕೆ ತಕ್ಕಂತೆ ಶ್ರಮ ಹಾಗೂ ಸಮಯವನ್ನು ವಿನಿಯೋಗಿಸಬೇಕಾಗುತ್ತದೆ. ಎಲ್ಲಾ ಬಗೆಯ ಸಿದ್ಧತೆಯೊಂದಿಗೆ ಕೆಲಸ ನಿರ್ವಹಿಸಿದರೂ ಸಹ ಕೆಲವೊಮ್ಮೆ ಅಂದುಕೊಂಡ ಫಲಿತಾಂಶ ಅಥವಾ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಹೋಗಬಹುದು. ಅದಕ್ಕೆ ಕಾರಣ ನಮ್ಮಲ್ಲಿ ಇರುವ ಒಂದು ಕೊರೆತೆ ಅಥವಾ ಪರಿಸ್ಥಿತಿಯ ಬದಲಾವಣೆ ಆಗಿರಬಹುದು. ನಾವು ತೆಗೆದುಕೊಳ್ಳುವ ನಿರ್ಧಾರ ಅಥವಾ ಯೋಜನೆಗಳು ಎಷ್ಟೇ ಉತ್ತಮವಾಗಿದ್ದರೂ ನಮ್ಮಲ್ಲಿ ಒಂದು ದೂರದೃಷ್ಟಿಯ ಆಗು-ಹೋಗುಗಳ ಚಿಂತನೆ ಇರಬೇಕು. ಭವಿಷ್ಯದಲ್ಲಿ ಉಂಟಾಗಬಹುದಾದ ಪರಿಸ್ಥಿತಿಯ ಕಲ್ಪನೆಗಳು ನಮ್ಮ ಮನಸ್ಸಿಗೆ ಬಂದರೆ ಎಲ್ಲವನ್ನೂ ಸರಿಯಾಗಿ ನಿಭಾಯಿಸಿಕೊಂಡು ಹೋಗುತ್ತೇವೆ. ಆಗ ನಮಗೆ ಯಶಸ್ಸು ಸುಲಭವಾಗಿ ದೊರೆಯುವುದು.

ಆಂತರಿಕ ಒಳನೋಟ ವ್ಯಕ್ತಿಗಿರುವ ಒಂದು ಅದ್ಭುತ ಬುದ್ಧಿ ಶಕ್ತಿ. ಯಾರು ದೂರದೃಷ್ಟಿಯ ಚಿಂತನೆಯನ್ನು ನಡೆಸುತ್ತಾರೋ ಅವರು ಜೀವನದಲ್ಲಿ ಎಡಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಬಹುದು. ದೂರ ದೃಷ್ಟಿ ಅಥವಾ ಉತ್ತಮ ಚಿಂತನೆಯ ಕಲ್ಪನೆಗಳು ಎಲ್ಲರಲ್ಲೂ ಇರುವುದಿಲ್ಲ. ಹಾಗಾಗಿ ಬಹುತೇಕ ಸಂದರ್ಭದಲ್ಲಿ ಅಂದುಕೊಂಡ ಕೆಲಸ ಅಥವಾ ಯೋಜನೆಗಳು ಗುರಿ ತಲುಪುವಲ್ಲಿ ಎಡವುತ್ತವೆ. ಯಾರಲ್ಲಿ ಸೂಕ್ಷ್ಮ ಸಂಗತಿಗಳನ್ನು ಗುರುತಿಸುವ ಹಾಗೂ ಅದರ ಪರಿಣಾಮವನ್ನು ಅಂದಾಜಿಸಬಹುದಾದ ಸಾಮರ್ಥ್ಯ ಇರುತ್ತದೆಯೋ ಅಂತಹವರು ಭವಿಷ್ಯದ ನಿರ್ಧಾರಗಳನ್ನು ಬಹಳ ಸುಂದರವಾಗಿ ಕೈಗೊಳ್ಳುತ್ತಾರೆ. ಅಂತೆಯೇ ಮುಂದೆ ಆಗುವ ಅನಾಹುತ ಅಥವಾ ಯಶಸ್ಸಿನ ಸಂಗತಿಗಳಿಗೆ ಪೂರ್ವ ತಯಾರಿಯನ್ನು ಮಾಡಿಕೊಂಡಿರುತ್ತಾರೆ.

ಇಂತಹ ಒಂದು ಅದ್ಭುತವಾದ ಶಕ್ತಿಯನ್ನು ವ್ಯಕ್ತಿ ಹೊಂದಿರಬೇಕು ಎಂದರೆ ಅದು ಅವರ ಕುಂಡಲಿಯಲ್ಲಿರುವ ಗ್ರಹಗತಿಗಳು ಹಾಗೂ ನಕ್ಷತ್ರಗಳ ಪ್ರಭಾವ ಅತಿ ಮುಖ್ಯ. ವ್ಯಕ್ತಿ ಬುದ್ಧಿಶಕ್ತಿಯಲ್ಲಿ ತೀಕ್ಷ್ಣತೆ ಹಾಗೂ ದೂರದೃಷ್ಟಿಯ ಶಕ್ತಿಯನ್ನು ರಾಶಿ ಚಕ್ರಗಳ ಪ್ರಭಾವದಿಂದ ಪಡೆದುಕೊಳ್ಳುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ದ್ವಾದಶ ರಾಶಿಚಕ್ರಗಳಲ್ಲಿ ಕೆಲವು ರಾಶಿಚಕ್ರದವರು ದೂರದೃಷ್ಟಿಯ ಗುಣವನ್ನು ಅತ್ಯುತ್ತಮವಾಗಿ ಹೊಂದಿರುತ್ತಾರೆ. ಅವರು ಮುಂದೆ ನಡೆಯಬಹುದಾದ ಸಂಗತಿಗಳ ಬಗ್ಗೆ ಮೊದಲೇ ಊಹಿಸಿರುತ್ತಾರೆ. ಮುಂದೆ ಉಂಟಾಗಬಹುದಾದ ಪರಿಸ್ಥಿತಿಯ ಕುರಿತು ಸಾಕಷ್ಟು ವಿಷಯಗಳನ್ನು ತಿಳಿದಿರುತ್ತಾರೆ ಎನ್ನಲಾಗುವುದು. ಹಾಗಾದರೆ ಆ ದೂರ ದೃಷ್ಟಿ ಹೊಂದಿರುವ ರಾಶಿಚಕ್ರಗಳು ಯಾವವು? ಆ ರಾಶಿ ಚಕ್ರದ ವ್ಯಕ್ತಿಗಳ ಚಿಂತನಾ ಶೀಲ ಹೇಗಿರುತ್ತದೆ ಎನ್ನುವುದನ್ನು ಮುಂದಿನ ವಿವರಣೆಯಲ್ಲಿ ಪರಿಶೀಲಿಸಿ.

   
 
ಹೆಲ್ತ್