Back
Home » ಸುದ್ದಿ
ಕಾಶ್ಮೀರ ವಿಷಯದಲ್ಲಿ ತಲೆಹಾಕಬೇಡಿ: ಚೀನಾಕ್ಕೆ ಭಾರತದ ವಾರ್ನಿಂಗ್
Oneindia | 10th Oct, 2019 06:44 AM

ಚೆನ್ನೈ, ಅಕ್ಟೋಬರ್ 10: ಕಾಶ್ಮೀರದ ವಿಷಯದಲ್ಲಿ ಭಾರತದ ನಿಲುವು ಬದಲಾಗುವುದಿಲ್ಲ. ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ಬೇರೆ ಯಾವ ದೇಶಗಳೂ ತಲೆತೂರಿಸುವುದು ನಮಗೆ ಇಷ್ಟವಿಲ್ಲ ಎಂಬ ಮಾತಿಗೆ ನಾವು ಯಾವತ್ತಿಗೂ ಬದ್ಧರಾಗಿದ್ದೇವೆ ಎಂದು ಭಾರತ ಚೀನಾಕ್ಕೆ ಟಾಂಗ್ ನೀಡಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭೇಟಿಯ ಸಂದರ್ಭದಲ್ಲಿ ನಡೆದ ಮಾತುಕತೆಗೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್, "ನಾವು ಮತ್ತೊಮ್ಮೆ ಚೀನಾಕ್ಕೆ ನೆನಪಿಸುತ್ತೇವೆ, ಕಾಶ್ಮೀರ ವಿಷಯದಲ್ಲಿ ಬೇರೆ ಯಾವ ದೇಶಗಳೂ ತಲೆತೂರಿಸುವುದು ಬೇಡ. ಇದು ಭಾರತದ ಆಂತರಿಕ ವಿಷಯ" ಎಂದರು.

ಇಮ್ರಾನ್ ಖಾನ್ ಜೊತೆ ಮಾತುಕತೆ ನಡೆಸಿದ್ದ ಜಿನ್ಪಿಂಗ್, ಎಲ್ಲಾ ಮುಖ್ಯ ವಿಷಯಗಳಲ್ಲೂ ನಾವು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಭರವಸೆ ನೀಡಿದ್ದರು.

ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಸಿದ ನಂತರ ಪಾಕಿಸ್ತಾನ ದಿಗ್ಭ್ರಮೆಗೊಳಗಾಗಿದ್ದು, ಜಗತ್ತಿನ ಬಹುಪಾಲು ರಾಷ್ಟ್ರಗಳು ಭಾರತದ ಪಾಲಿಗಿದ್ದರೆ, ಚೀನಾ ಮಾತ್ರ ತನ್ನ ಬೆಂಬಲವನ್ನು ಪಾಕಿಸ್ತಾನಕ್ಕೆ ಸೂಚಿಸಿತ್ತು.

ಇದೇ ಅಕ್ಟೋಬರ್ 11 ಮತ್ತು 12 ರಂದು ಜಿನ್ಪಿಂಗ್ ಭಾರತಕ್ಕೆ ಭೇಟಿ ನೀಡಲಿದ್ದು,

ಚೆನ್ನೈನ ಮಾಮಲ್ಲಪುರಂನಲ್ಲಿ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚೀನಾ ಕಾಶ್ಮೀರದ ವಿಷಯ ಮಾತನಾಡಕೂಡದು ಎಂಬ ಕಾರಣಕ್ಕೆ ಈಗಲೇ ಪರೋಕ್ಷ ವಾರ್ನಿಂಗ್ ನೀಡಲಾಗಿದೆ.

   
 
ಹೆಲ್ತ್