Back
Home » ಸುದ್ದಿ
ಟಗರು ಡಿಚ್ಚಿಗೆ ಮೂಲ ಕಾಂಗ್ರೆಸ್ಸಿಗರು ಸೈಲೆಂಟ್: ಸಿದ್ದರಾಮಯ್ಯ ಆಯ್ಕೆಗೆ ಕಾರಣವಾದ 6 ಅಂಶಗಳು
Oneindia | 10th Oct, 2019 09:14 AM
 • ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಅಸೆಂಬ್ಲಿ ಚುನಾವಣೆ

  ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಪಕ್ಷದ ಪಾಲಿಗೆ ಅತ್ಯಂತ ನಿರ್ಣಾಯಕವಾದ ರಾಜ್ಯಗಳಿವು. ಈ ರಾಜ್ಯದಲ್ಲಿನ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಹೆಚ್ಚಿನ ಆದ್ಯತೆ ನೀಡಬೇಕಾಗಿರುವುದರಿಂದ, ಕರ್ನಾಟಕದಿಂದ ಇನ್ನೊಂದು ರಗಳೆಗಳು ಸೋನಿಯಾ ಗಾಂಧಿಗೆ ಬೇಕಾಗಿಲ್ಲ. ಹಾಗಾಗಿ, ಮೂಲ ಕಾಂಗ್ರೆಸ್ಸಿಗರನ್ನು ಹೇಗಾದರೂ ಸಮಾಧಾನ ಪಡಿಸಬಹುದು ಎಂದು ಸಿದ್ದರಾಮಯ್ಯನವರನ್ನು ಆರಿಸಿರಬಹುದು.


 • ಮೋದಿ ಸರಕಾರದ ವೈಫಲ್ಯವನ್ನು ಎತ್ತಿಎತ್ತಿ ತೋರಿಸುತ್ತಿದ್ದ ಸಿದ್ದರಾಮಯ್ಯ

  ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಮೋದಿ ಹವಾ ಹೆಚ್ಚಾಗಿರುವ ಈ ಹೊತ್ತಿನಲ್ಲಿ, ರಾಜ್ಯದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ನಾಯಕರೊಬ್ಬರು ಕಾಂಗ್ರೆಸ್ಸಿಗೆ ಬೇಕಾಗಿದೆ. ಮೋದಿ ಸರಕಾರದ ವೈಫಲ್ಯವನ್ನು ಸಮರ್ಥವಾಗಿ ಎತ್ತಿಎತ್ತಿ ತೋರಿಸುತ್ತಿದ್ದ/ ತೋರಿಸುತ್ತಿರುವ ಸಿದ್ದರಾಮಯ್ಯನವರಲ್ಲಿ, ಕಾಂಗ್ರೆಸ್ ಹೊಸ ಆಶಾಕಿರಣವನ್ನು ಕಂಡಿರಬಹುದು.


 • ಎಚ್.ಕೆ.ಪಾಟೀಲ್ ವರ್ಸಸ್ ಸಿದ್ದರಾಮಯ್ಯ

  ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಇನ್ನೊಬ್ಬರು ತೀವ್ರ ಲಾಬಿ ನಡೆಸುತ್ತಿದ್ದದ್ದು ಉತ್ತರ ಕರ್ನಾಟಕ ಭಾಗದ, ಎಲ್ಲರೂ ಒಪ್ಪುವ, ಮೆಚ್ಚುವ ಎಚ್.ಕೆ.ಪಾಟೀಲ್. ಕಾಂಗ್ರೆಸ್ಸಿನ ಅತ್ಯಂತ ನಿಷ್ಟರಾಗಿರುವ ಇವರದ್ದು ಮಾಸ್ ವರ್ಚಸ್ಸು ಅಲ್ಲ. ಕಡ್ಡಿಮುರಿದ ಹಾಗೇ, ನಡೆದುಕೊಳ್ಳುವ ವ್ಯಕ್ತಿತ್ವವೂ ಅಲ್ಲ. ಸದ್ಯಕ್ಕೆ ಕಾಂಗೆಸ್ಸಿಗೆ ಇಷ್ಟೊಂದು ಸೌಜನ್ಯತೆ ಬೇಕಾಗಿಲ್ಲ. ಹಾಗಾಗಿ, ಪಾಟೀಲ್ ಬದಲಿಗೆ, ಸಿದ್ರಾಮಣ್ಣನ ಅವಶ್ಯಕತೆಯನ್ನು ಸೋನಿಯಾ ಹೆಚ್ಚಾಗಿ ಕಂಡಿರಬಹುದು.


 • ಹದಿನೈದು ಅಸೆಂಬ್ಲಿ ಕ್ಷೇತ್ರಗಳಿಗೆ ಉಪಚುನಾವಣೆ

  ಹದಿನೈದು ಅಸೆಂಬ್ಲಿ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಇದರ ಫಲಿತಾಂಶದ ಮೇಲೆ, ಯಡಿಯೂರಪ್ಪನವರ ಸರಕಾರ ನಿಂತಿದೆ. ಸಿದ್ದರಾಮಯ್ಯನವರನ್ನು ಬಿಟ್ಟು, ಬೇರೊಬ್ಬರನ್ನು ಆಯ್ಕೆಮಾಡಿದರೆ, ಪಕ್ಷದೊಳಗಿನ ಭಿನ್ನಮತ ಇನ್ನೊಂದು ಮಜಲಿಗೆ ಹೋಗುವ ಸಾಧ್ಯತೆಯಿಲ್ಲದಿಲ್ಲ. ಯಾಕೆಂದರೆ, ಸಿದ್ದರಾಮಯ್ಯನವರಿಗೆ ಇರುವ ಫಾಲೋವರ್ಸ್. ಇದು ಉಪಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು. ಹಾಗಾಗಿ, ಸಿದ್ದು ಆಯ್ಕೆಯ ಹಿಂದೆ, ಇದೂ ಒಂದು ಕಾರಣವಿರಬಹುದು.


 • ಸಿದ್ದರಾಮಯ್ಯನವರಿಗೆ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಅನುಭವ

  ಸಿದ್ದರಾಮಯ್ಯನವರಿಗೆ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಅನುಭವವಿದೆ. ಹಾಗಾಗಿ, ಆಡಳಿತ ಯಂತ್ರ ಯಾವರೀತಿ ಕೆಲಸ ಮಾಡುತ್ತದೆ ಎನ್ನುವ ಸಂಪೂರ್ಣ ಅರಿವು ಸಿದ್ದರಾಮಯ್ಯನವರಿಗಿದೆ. ಇದರಿಂದ, ಯಡಿಯೂರಪ್ಪನವರ ಸರಕಾರದ ಹುಳುಕನ್ನು ಸಮರ್ಥವಾಗಿ ಹೆಕ್ಕಿ ಜನರ ಮುಂದಿಡಲು ಸಿದ್ದರಾಮಯ್ಯನವರೇ ಸೂಕ್ತ ಎನ್ನುವ ನಿರ್ಧಾರಕ್ಕೆ ಸೋನಿಯಾ ಮೇಡಂ ಬಂದಿರಬಹುದು.


 • ಸಮರ್ಥ ವ್ಯಕ್ತಿ ಸಿದ್ದರಾಮಯ್ಯ ಎನ್ನುವ ಮುಂದಾಲೋಚನೆ ಸೋನಿಯಾ ಮೇಡಂದ್ದು

  ಉಪಚುನಾವಣೆಯಲ್ಲಿ ಒಂದು ವೇಳೆ, ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಸ್ಥಾನವನ್ನು ಗೆದ್ದರೆ, ಬಿಜೆಪಿ, ಸರಕಾರ ಉಳಿಸಿಕೊಳ್ಳಲು, ಮತ್ತೊಂದು ಸುತ್ತಿನ ಆಪರೇಶನ್ ಕಮಲ ಮಾಡುವ ಸಾಧ್ಯತೆಯಿಲ್ಲದಿಲ್ಲ. ಡಿ.ಕೆ.ಶಿವಕುಮಾರ್ ಜೈಲು ಪಾಲಾಗಿರುವುದರಿಂದ, ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಮರ್ಥ ವ್ಯಕ್ತಿ ಸಿದ್ದರಾಮಯ್ಯ ಎನ್ನುವ ಮುಂದಾಲೋಚನೆಯೂ, ಹೈಕಮಾಂಡಿದ್ದು ಆಗಿರಬಹುದು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗಲೂ, ಮಾಜಿ ಸಿಎಂ ಸಿದ್ದರಾಮಯ್ಯನವರ ಈ ನಡೆಯನ್ನು ತುಂಬಾ ಜನ ಗಮನಿಸಿರಲಿಕ್ಕಿಲ್ಲ. ರಾಜ್ಯ ರಾಜಕಾರಣದಲ್ಲಿ ಸೀನಿಯರ್ ಆಗಿದ್ದರೂ, ಸಿದ್ದರಾಮಯ್ಯ ಸದನದಲ್ಲಿ ಲಾಸ್ಟ್ ಬೆಂಚ್ ನಲ್ಲಿ ಕೂರುತ್ತಿದ್ದರು.

ಇದಕ್ಕೆ ಕಾರಣ, ಒಂದೋ ಸಿಎಂ ಆಗಿ, ಇಲ್ಲವೋ ವಿರೋಧ ಪಕ್ಷದ ನಾಯಕನಾದರೆ ಮಾತ್ರ ಮೊದಲ ಸಾಲಿನಲ್ಲಿ ಕೂರುವುದು ಎನ್ನುವ ಸಿದ್ದರಾಮಯ್ಯನವರ ಹಠ, ಅದರಲ್ಲಿ ಅವರು ಗೆದ್ದಿದ್ದಾರೆ. ಎಲ್ಲಾ ಅಡೆತಡೆಗೋಡೆಗಳನ್ನು ಮೀರಿ, ತಮ್ಮವರ ಮುಂದೆಯೇ ತೊಡೆ ತಟ್ಟಿದ್ದಾರೆ.

ಇಂದಿನಿಂದ ಅಧಿವೇಶನ: ಬಿಎಸ್ವೈ ಸರಕಾರವನ್ನು ರುಬ್ಬಲು ವಿಪಕ್ಷಗಳ 'ಪಂಚಸೂತ್ರ' ರೆಡಿ

ಅದೂ, ರಾಜ್ಯ ಕಾಂಗ್ರೆಸ್ಸಿನ ಎಂತಹ ಕಾಲಘಟ್ಟದಲ್ಲಿ? ಬಹಿರಂಗವಾಗಿಯೇ ಸಿದ್ದರಾಮಯ್ಯನವರ ವಿರುದ್ದ ಕಿಡಿಕಾರುತ್ತಿದ್ದವರು, ಈಗ ಕೈಕೈಹಿಸುಕಿಕೊಳ್ಳುವಂತಾಗಿದೆ. ಸೊರಗುತ್ತಿರುವ ಪಕ್ಷದ ಚರಿಸ್ಮಾವನ್ನು ಮೇಲೆತ್ತಲು, ಸಿದ್ದರಾಮಯ್ಯನವರೇ ಸೂಕ್ತ ವ್ಯಕ್ತಿ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್ ಬಂದಂತಿದೆ.

ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

ತನ್ನೆಲ್ಲಾ ರಾಜಕೀಯ ಅನುಭವವನ್ನು ಧಾರೆ ಎರೆದು ಎಐಸಿಸಿ (ಹಂಗಾಮಿ) ಅಧ್ಯಕ್ಷೆ ಸೋನಿಯಾ ಗಾಂಧಿ ವೃತ್ತಿಪರ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಂದು ವ್ಯಾಖ್ಯಾನಿಸಲಾಗುತ್ತಿದೆ. ಇನ್ನೇನಿದ್ದರೂ, ಓವರ್ ಟು ಸಿದ್ದರಾಮಯ್ಯ ಟು ಡೆಲಿವರ್.. ಸಿದ್ದರಾಮಯ್ಯ ಆಯ್ಕೆಗೆ ಕಾರಣವಾದ 6 ಅಂಶಗಳು:

   
 
ಹೆಲ್ತ್