Back
Home » ಆರೋಗ್ಯ
ಸಂಗೀತ ಕೇಳುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Boldsky | 23rd Oct, 2019 03:05 PM
 • ಮೆದುಳು ಸಂಗೀತವನ್ನು ಸ್ವೀಕರಿಸುವ ರೀತಿ

  ನಮ್ಮ ಮೆದುಳಿಗೆ ಮ್ಯೂಸಿಕ್ ನ ಮೆಲೊಡಿ, ತಾಳ, ರಾಗ, ಏರಿಳಿತ ಎಲ್ಲವನ್ನೂ ಸ್ವೀಕರಿಸುವುದಕ್ಕಾಗಿ ಬೇರೆಬೇರೆ ಮಡಿಕೆಗಳಿರುತ್ತದೆ. ಈಗ ನಾವು ಹುಟ್ಟಿದಾಗಿನಿಂದಲೇ ಅತಿಯಾದ ಕರ್ಕಶ ಶಬ್ದ ಮತ್ತು ಮ್ಯೂಸಿಕ್ ಎರಡನ್ನೂ ಸ್ವೀಕರಿಸುವ ರೀತಿಯೇ ಬೇರೆಯಾಗಿರುತ್ತದೆಯಲ್ಲ ಅದಕ್ಕೆ ಕಾರಣ ಮೆದುಳು.


 • ಪ್ರಮುಖ ಪರಿಣಾಮಗಳು

  ವೇಗವಾದ ಮ್ಯೂಸಿಕ್ ಗಳು ನಿಮ್ಮ ಹಾರ್ಟ್ ರೇಟ್, ಉಸಿರಾಟ ಪ್ರಕ್ರಿಯೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತವೆಯಂತೆ. ಅದೇ ಕಡಿಮೆ ಶಬ್ದದ ಮೆಲೊಡಿ ಮ್ಯೂಸಿಕ್ ಗಳು ಇದರ ವಿರುದ್ಧ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.


 • ಹಾಡು ಕೇಳುವುದರಿಂದ ಮೆದುಳಿನಲ್ಲಿ ರಾಸಾಯನಿಕ ಬಿಡುಗಡೆ

  ಮನುಷ್ಯನ ಮೇಲೆ ಸಂಗೀತ ಬೀರುವ ಪರಿಣಾಮದ ಬಗ್ಗೆ ಸರಿಯಾಗಿ ಯಾರಿಗೂ ಅರ್ಥ ಮಾಡಿಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ. ಆದರೆ ಅಧ್ಯಯನವೊಂದು ತಿಳಿಸುವ ಪ್ರಕಾರ ನಿಮ್ಮ ಮನಸ್ಸು ಇಷ್ಟ ಪಡುವ ಮ್ಯೂಸಿಕ್ ಅನ್ನು ನೀವು ಕೇಳಿಸಿಕೊಂಡು ಅಹ್ಲಾದಿಸಿದಾಗ ಮೆದುಳಿನಲ್ಲಿ ಡೊಪಮೈನ್ ಅನ್ನುವ ರಾಸಾಯಿಕವೊಂದು ಬಿಡುಗಡೆಗೊಳ್ಳುತ್ತದೆಯಂತೆ, ಇದು ನಿಮ್ಮ ಮನಸ್ಥಿತಿಯ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟುಮಾಡಲಿದೆ ಎಂದು ತಿಳಿದುಬಂದಿದೆ.


 • ಆರೋಗ್ಯ ಮತ್ತು ಯೋಗಕ್ಷೇಮದ ವೃದ್ಧಿ

  ಸಂಗೀತವು ಸಂತೋಷ, ದುಃಖ ಅಥವಾ ಭಯ ಇತ್ಯಾದಿ ಬಲವಾದ ರೀತಿಯ ಭಾವನೆಗಳಿಗೂ ಕಾರಣವಾಗಬಹುದು. ಜೀವನದಲ್ಲಿ ಯಾವುದೋ ಭಾವನೆಯ ನಿರ್ವಹಣೆಯನ್ನು ಮಾಡಿಕೊಂಡು ಮುಂದುವರಿಯುವುದಕ್ಕೆ ಸಂಗೀತ ಪ್ರೇರಣಾಶಕ್ತಿಯನ್ನು ನೀಡುತ್ತದೆ ಎಂದು ಕೆಲವರು ನಂಬಿದ್ದಾರೆ. ಕೆಲವು ಅಧ್ಯಯನದ ಪ್ರಕಾರ ನಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ವೃದ್ಧಿಸುವ ಸಾಮರ್ಥ್ಯ ಸಂಗೀತಕ್ಕಿದೆ ಎಂದು ಹೇಳುತ್ತಾರೆ.

  ಅಧ್ಯಯನಗಳ ಪ್ರಕಾರ

  ಸಂಗೀತದಿಂದ ಆಗಲಿರುವ ಆರೋಗ್ಯದ ಪ್ರಯೋಜನಗಳ ಕುರಿತ ಅಧ್ಯಯನದ ಅಗತ್ಯತೆ ಇನ್ನೂ ಇರುವುದು ದಿಟವಾಗಿದ್ದರೂ, ಈಗಾಗಲೇ ನಡೆದಿರುವ ಕೆಲವು ಸಂಶೋಧನೆಗಳು ಈ ಕೆಳಗಿನ ಆರೋಗ್ಯದ ಸಕಾರಾತ್ಮಕ ಪರಿಣಾಮವು ಸಂಗೀತದಿಂದ ಆಗಲಿದೆ ಎಂಬುದನ್ನು ದೃಷ್ಟೀಕರಿಸಿವೆ.


 • ಮನಸ್ಥಿತಿಯನ್ನು ಸುಧಾರಿಸುತ್ತದೆ

  ಒಟ್ಟಾರೆ ಆರೋಗ್ಯದ ಅಭಿವೃದ್ಧಿಗೆ ಮ್ಯೂಸಿಕ್ ಕೇಳುವುದು ಬಹಳ ಒಳ್ಳೆಯದು ಎಂಬುದನ್ನು ಅಧ್ಯಯನವು ಸಾಬೀತುಪಡಿಸಿದೆ. ಭಾವನೆಗಳನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ದೈನಂದಿನ ಜೀವನದಲ್ಲಿ ಸಂತೋಷ ಮತ್ತು ವಿಶ್ರಾಂತಿಯನ್ನು ಸೃಷ್ಟಿಸುವ ಸಾಮರ್ಥ್ಯ ಸಂಗೀತಕ್ಕಿದೆ.


 • ಒತ್ತಡವನ್ನು ಕಡಿಮೆ ಮಾಡುತ್ತದೆ

  ಆರೋಗ್ಯವಂತರಲ್ಲಿ ಮತ್ತು ಯಾವುದಾದರೂ ಚಿಕಿತ್ಸೆಗೆ ಒಳಗಾಗಿರುವ ವ್ಯಕ್ತಿಗಳಲ್ಲಿ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಿ ರಿಲ್ಯಾಕ್ಸ್ ಆಗುವುದಕ್ಕಾಗಿ ಮ್ಯೂಸಿಕ್ ಕೇಳುವುದು ಒಳ್ಳೆಯ ಅಭ್ಯಾಸ ಎಂದು ಹೇಳಲಾಗುತ್ತದೆ. ಅದರಲ್ಲೂ ಪ್ರಮುಖಾಗಿ ನಿಧಾನಗತಿಯ,ಕಡಿಮೆ ಪಿಚ್ ಮತ್ತು ಸಾಹಿತ್ಯವಿಲ್ಲದ ಶಾಂತವಾಗಿರುವ ಮ್ಯೂಸಿಕ್ ಗಳು ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ ಎಂದು ನಂಬಲಾಗಿದೆ.


 • ಆತಂಕವನ್ನು ಕಡಿಮೆ ಮಾಡುತ್ತದೆ

  ಕ್ಯಾನ್ಸರ್ ಇರುವ ವ್ಯಕ್ತಿಗಳಿಗೆ ಸಂಗೀತ ಕೇಳಿಸುವುದರ ಜೊತೆಗೆ ಸಾಮಾನ್ಯ ಕೇರ್ ತೆಗೆದುಕೊಳ್ಳುವುದರಿಂದಾಗಿ, ಕೇವಲ ಸಾಮಾನ್ಯ ಆರೈಕೆ ತೆಗೆದುಕೊಂಡ ರೋಗಿಗಳಿಗಿಂತ ಹೆಚ್ಚು ಆತಂಕ ರಹಿತರಾಗಿರುವುದು ಅಧ್ಯಯನದಿಂದ ಸಾಬೀತಾಗಿದೆ. ಅಂದರೆ ಯಾವ ಕ್ಯಾನ್ಸರ್ ರೋಗಿಯು ಸಂಗೀತದ ಜೊತೆಗೆ ಸಾಮಾನ್ಯವಾಗಿ ಕಾಯಿಲೆಗೆ ಚಿಕಿತ್ಸೆ ಪಡೆದರೋ ಅವರ ಆತಂಕ ಸಂಗೀತ ಕೇಳದೇ ಚಿಕಿತ್ಸೆ ಪಡೆದ ವ್ಯಕ್ತಿಗಳಿಗಿಂತ ಕಡಿಮೆ ಇರುವುದು ತಿಳಿದು ಬಂದಿದೆ.


 • ವ್ಯಾಯಾಮವನ್ನು ಸುಧಾರಿಸುತ್ತದೆ

  ಸಂಗೀತವು ಏರೋಬಿಕ್ ವ್ಯಾಯಾಮವನ್ನು ಹೆಚ್ಚಿಸುತ್ತದೆ. ಮಾನಸಿಕ ಮತ್ತು ದೈಹಿಕ ಪ್ರಚೋದನೆಯನ್ನು ಮಾಡುತ್ತದೆ ಮತ್ತು ಒಟ್ಟಾರೆ ದೇಹ ಹಾಗೂ ಮನಸ್ಸಿನ ಕಾರ್ಯಕ್ಷಮತೆಯನ್ನು ಅಭಿವೃದ್ಧಿಗೊಳಿಸುತ್ತದೆ.


 • ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ

  ಲಯ ಮತ್ತು ಮಧುರವಾಗಿರುವ ಸಂಗೀತವು ನಮ್ಮ ಮೆದುಳಿನ ಸ್ಮರಣಾ ಶಕ್ತಿಯನ್ನು ರೂಪಿಸಲು ಸಹಾಯ ಮಾಡುತ್ತದೆ. ಪಾರ್ಶ್ವವಾಯು ಪೀಡಿತ ವ್ಯಕ್ತಿಗಳಲ್ಲಿ ಸಂಗೀತ ಆಲಿಸುವುದರಿಂದಾಗಿ ಮೌಖಿಕ ಸ್ಮರಣೆ, ಕಡಿಮೆ ಗೊಂದಲಕ್ಕೊಳಗಾಗುವುದು, ಉತ್ತಮ ಗಮನದ ಕೇಂದ್ರೀಕರಣಕ್ಕೆ ನೆರವಾಗಿದೆ ಎಂದು ತಿಳಿದುಬಂದಿದೆ.


 • ನೋವನ್ನು ದೂರ ಮಾಡುತ್ತದೆ

  ನೋವನ್ನು ಸಹ ಮರೆಸುವ ಶಕ್ತಿ ಅಥವಾ ಕಡಿಮೆ ಮಾಡುವ ಶಕ್ತಿ ಸಂಗೀತಕ್ಕಿದೆ ಎನ್ನಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಗಳಲ್ಲಿ ಯಾರು ಸಂಗೀತವನ್ನು ಆಲಿಸುತ್ತಾರೋ ಅವರಲ್ಲಿನ ನೋವು ಶಮನವಾಗುವಿಕೆಯು ಶಸ್ತ್ರಚಿಕಿತ್ಸೆ ಮಾಡಿಡಿಕೊಂಡು ಸಂಗೀತ ಆಲಿಸದ ವ್ಯಕ್ತಿಗಳಿಗಿಂತ ವೇಗವಾಗಿರುತ್ತದೆ.


 • ಆರಾಮದಾಯಕ ಅನುಭವ ನೀಡುತ್ತದೆ

  ಗಂಭೀರ ಆರೋಗ್ಯ ಸಮಸ್ಯೆಯನ್ನು ದೀರ್ಘಾವಧಿಯಿಂದ ಎದುರಿಸುತ್ತಿರುವವವರಿಗೆ ಸಂಗೀತ ಚಿಕಿತ್ಸೆಯ ಮೂಲಕ ಕಾಯಿಲೆಯನ್ನು ನಿಧಾನಗತಿಯಲ್ಲಿ ಶಮನ ಮಾಡಲಾಗುತ್ತದೆ. ಜೀವಿತಾವಧಿಯ ಕಾಯಿಲೆ ಇರುವ ರೋಗಿಗಳಲ್ಲಿ ಭಯ, ಒಂಟಿತನ ಮತ್ತು ಕೋಪದಂತಹ ಭಾವನೆಗಳ ಅಭಿವ್ಯಕ್ತಿಪಡಿಸಲು ಸಂಗೀತ ಚಿಕಿತ್ಸೆ ನೀಡುವುದು ವಿದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.


 • ಅರಿವನ್ನು ಜಾಗೃತಗೊಳಿಸುತ್ತದೆ

  ಅಲ್ಜೈಮೈರ್ ಸಮಸ್ಯೆ ಅಂದರೆ ಕಳೆದು ಹೋದ ನೆನಪಿನ ಶಕ್ತಿಯನ್ನು ಮರಳಿ ಪಡೆಯುವ ಸದುದ್ದೇಶದಿಂದ ಸಂಗೀತ ಆಲಿಸುವಿಕೆಯ ನೆರವು ಪಡೆಯಲಾಗುತ್ತದೆ. ಇದು ಒಟ್ಟಾರೆ ಮಾನಸಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ನೆರವು ನೀಡುತ್ತದೆ. ಮಕ್ಕಳಲ್ಲಿ ಕಂಡುಬರುವ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ಸಮಸ್ಯೆಯ ನಿವಾರಣೆಗೆ ಸಂಗೀತ ಸಹಾಯ ಮಾಡುತ್ತದೆ. ಯಾವ ಮಕ್ಕಳು ಈ ಸಮಸ್ಯೆಯಲ್ಲಿರುತ್ತಾರೋ ಅವರಿಗೆ ಸಂಗೀತ ಕೇಳಿಸುವುದರಿಂದ ಅವರ ಸಾಮಾಜಿಕ ಪ್ರತಿಕ್ರಿಯೆಗಳು, ಸಂವಹನ ಕೌಶಲ್ಯಗಳು, ಗಮನ ಕೌಶಲ್ಯಗಳಲ್ಲಿ ಅಭಿವೃದ್ಧಿಯಾಗಿರುವುದು ತಿಳಿದುಬಂದಿದೆ.


 • ಅಕಾಲಿಕ ಶಿಶುಗಳ ಆರೋಗ್ಯ ಸುಧಾರಣೆ

  ಅಕಾಲಿಕ ಜನನವಾಗಿರುವ ಶಿಶುಗಳ ಎದೆಹಾಲು ಉಣ್ಣುವ ರೀತಿ, ಆಹಾರ ಸೇವಿಸುವ ಕ್ರಮವನ್ನು ಅಭಿವೃದ್ಧಿಯಾಗುವಂತೆ ಸಂಗೀತ ಮಾಡುತ್ತದೆ. ಅದಕ್ಕಾಗಿ ಲೈವ್ ಸಂಗೀತ ಮತ್ತು ಲಾಲಿ ಹಾಡುಗಳು ಪ್ರಮುಖ ಪ್ರಭಾವ ಬೀರುವ ಅಂಶಗಳಾಗಿರುತ್ತದೆ. ಅಕಾಲಿಕವಾಗಿ ಜನನವಾಗಿರುವ ಮಗುವಿನ ಆರೈಕೆ ಒಂದು ಸವಾಲೇ ಸರಿ. ಆ ನಿಟ್ಟಿನಲ್ಲಿ ಸಂಗೀತ ಬಹಳ ಪ್ರೇರಣಾ ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

  ಅಲ್ಲದೇ, ಮಕ್ಕಳನ್ನು ಮಲಗಿಸಲು, ಅವರಿಗೆ ಮನರಂಜನೆ ನೀಡಲು, ಊಟ ಮಾಡಿಸಲು ನಾವು ಲಾಲಿಹಾಡು, ಮಕ್ಕಳ ಗೀತೆಗಳು, ಚಂದಮಾಮ ಹಾಡುಗಳನ್ನು ಹಾಡುವುದು ಸಹ ಸಂಗೀತದ ಮಹಿಮೆ ಹಾಗೂ ಅದಕ್ಕಿರುವ ಸಾಮರ್ಥ್ಯವನ್ನು ಸಾರುತ್ತದೆ.
ನೀವು ಇಯರ್ ಫೋನ್, ಹೆಡ್ ಫೋನ್ ಕಿವಿಗೆ ಹಾಕಿಕೊಂಡು ಯಾವಾಗಲೂ ಸಂಗೀತ ಕೇಳುತ್ತಲೇ ಇರುತ್ತೀರಾ? ಮ್ಯೂಸಿಕ್ ಅಂದರೆ ನಿಮಗೆ ಅಷ್ಟೊಂದು ಇಷ್ಟವೇ? ಒಂದು ವೇಳೆ ನೀವು ಸಂಗೀತ ಪ್ರಿಯರಾಗಿದ್ದು ಹಾಡು, ಮ್ಯೂಸಿಕ್ ಕೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರೆ ಖಂಡಿತ ನಿಮ್ಮ ಆರೋಗ್ಯದಲ್ಲಿ ಈ ಎಲ್ಲಾ ಲಾಭಗಳು ಸಂಗೀತದಿಂದ ಆಗಿರುತ್ತದೆ.

ಹೌದು ಸಂಗೀತಕ್ಕೂ, ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಯಾರು ಸಂಗೀತವನ್ನು ಆಹ್ಲಾದಿಸುತ್ತಾರೋ ಅವರಿಗೆ ಕೆಲವು ಪ್ರಮುಖವಾದ ಆರೋಗ್ಯ ಲಾಭಗಳಾಗುತ್ತವೆ. ಕೆಲವು ಹಾಡುಗಳನ್ನು ಅಥವಾ ಮ್ಯೂಸಿಕ್ ಗಳನ್ನು ಕೇಳಿದಾಗ ಬೇಸರದಲ್ಲಿದ್ದಾಗಲೂ ಮನಸ್ಸಿಗೆ ಸಮಾಧಾನ ಅನ್ನಿಸುತ್ತದೆಯಲ್ಲ ಅದಕ್ಕೆ ಕಾರಣವಿದೆ.

   
 
ಹೆಲ್ತ್