Back
Home » ಆರೋಗ್ಯ
ನೀವು ವೈದ್ಯರನ್ನು ಭೇಟಿ ಮಾಡುತ್ತಿದ್ದರೆ ಕಡ್ಡಾಯವಾಗಿ ಈ ಕೆಲಸಗಳನ್ನು ಮಾಡಲೇಬೇಡಿ
Boldsky | 25th Oct, 2019 10:50 AM
 • ರಕ್ತದೊತ್ತಡ ಪರೀಕ್ಷೆ ಮಾಡುವ ಮುನ್ನ ಕಾಫಿ ಕುಡಿಯದಿರಿ

  ಸಾಮಾನ್ಯವಾಗಿ ಪ್ರತಿ ಭೇಟಿಯಲ್ಲಿಯೂ ವೈದ್ಯರು ಅಥವಾ ದಾದಿಯರು ರೋಗಿಯ ಪ್ರಮುಖ ಆರೋಗ್ಯದ ಅಂಶಗಳನ್ನು ಪಡೆದುಕೊಳ್ಳುತ್ತಾರೆ. ಇದರಲ್ಲಿ ಪ್ರಮುಖವಾದುದು ರಕ್ತದೊತ್ತಡ. ಹಾಗಾಗಿ ಯಾವಾಗ ಭೇಟಿ ಮಾಡಬೇಕಿದ್ದರೂ ಭೇಟಿಗೂ ಮುನ್ನ ಕಾಫಿ ಕುಡಿಯದಿರಿ. ಏಕೆಂದರೆ ಕಾಫಿ ಕುಡಿದ ಕೆಲವೇ ಕ್ಷಣಗಳಲ್ಲಿ ರಕ್ತದೊತ್ತಡ ಸಾಮಾನ್ಯ ಸ್ಥಿತಿಗಿಂತ ಭಿನ್ನವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಕೆಫೀನ್! ಹಾಗಾಗಿ ಕೆಫೀನ್ ಇರುವ ಯಾವುದೇ ಪಾನೀಯ, ಕೋಲಾ ಅಥವಾ ಎನರ್ಜಿ ಡ್ರಿಂಕ್ ಮೊದಲಾದ ಪೇಯಗಳನ್ನಾಗಲೀ, ಔಷಧಿ-ಆಹಾರವನ್ನಾಗಲೀ ಸೇವಿಸಿದರೆ ರಕ್ತದೊತ್ತಡದ ಮಾಪನ ಸರಿಯಾಗಿ ಇರುವುದಿಲ್ಲ. ಸಾಮಾನ್ಯವಾಗಿ ಇದು ಇರಬೇಕಾದುದಕ್ಕಿಂತಲೂ ಹೆಚ್ಚೇ ಇರುತ್ತದೆ. ಅದರಲ್ಲೂ ತಂಬಾಕು ಅಥವಾ ವೈದ್ಯರು ಸೂಚಿಸದ ಔಷಧಿಗಳ ಸೇವನೆಯಿಂದ ರಕ್ತದೊತ್ತಡ ವಿಪರೀತ ಹೆಚ್ಚುತ್ತದೆ. ಈ ಮಾಪನ ವೈದ್ಯರಿಗೆ ಗೊಂದಲ ತರಿಸಬಹುದು.


 • ರಕ್ತಪರೀಕ್ಷೆ ಇದ್ದರೆ ಇದಕ್ಕೂ ಮುನ್ನ ಅಧಿಕ ಕೊಬ್ಬಿನ ಆಹಾರ ಸೇವಿಸದಿರಿ

  ರಕ್ತಪರೀಕ್ಷೆ ಬರೆದುಕೊಟ್ಟರೆ ಪ್ರಯೋಗಾಲಯಕ್ಕೆ ಹೋಗುವ ಮುನ್ನ ಅಧಿಕ ಕೊಬ್ಬಿರುವ ಯಾವುದೇ ಆಹಾರ ಸೇವಿಸದಿರಿ. ಒಂದು ವೇಳೆ ಸೇವಿಸಿದ್ದರೆ ಕನಿಷ್ಟ ಎಂಟರಿಂದ ಹತ್ತು ಘಂಟೆಗಳ ನಂತರವೇ ಹೋಗಿ. ಏಕೆಂದರೆ ಕೊಬ್ಬಿನ ಅಹಾರ ಸೇವನೆಯಿಂದ ರಕ್ತದಲ್ಲಿಯೂ ಕೊಬ್ಬಿನ ಅಂಶ ಸೇರುತ್ತದೆ ಹಾಗೂ ಪರೀಕ್ಷೆಯ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಅತ್ಯುತ್ತಮವೆಂದರೆ ಖಾಲಿ ಹೊಟ್ಟೆಯಲ್ಲಿದ್ದಾಗ ರಕ್ತ ಕೊಡುವುದು, ಅಂದರೆ ಬೆಳಿಗ್ಗೆ ಎದ್ದ ಬಳಿಕ ಉಪಾಹಾರ ಸೇವಿಸುವ ಮುನ್ನ. ಇದೇ ಕ್ರಮ ಅಧಿಕ ಸಕ್ಕರೆ ಇರುವ ಅಹಾರಕ್ಕೂ ಅನ್ವಯವಾಗುತ್ತದೆ. ಹೆಚ್ಚಿನ ಕೊಬ್ಬು ಇರುವ ಆಹಾರದಿಂದ ರಕ್ತದಲ್ಲಿ ಟ್ರೈಗ್ಲಿಸರೈಡುಗಳು ಹೆಚ್ಚುತ್ತವೆ. ಅರಿವಿಲ್ಲದೇ ಊಟದ ಬಳಿಕ ಹೋಗಿ ರಕ್ತಕೊಟ್ಟು ಬಂದರೂ ಇದರ ಫಲಿತಾಂಶ ಸೂಕ್ತವಾಗಿ ಬರದಿದ್ದರೆ ಮತ್ತೊಮ್ಮೆ ಖಾಲಿಹೊಟ್ಟೆಯಲ್ಲಿ ಬರಲು ಹೇಳುತ್ತಾರೆ. ಆಗ ಮೊದಲು ಮಾಡಿದ ಪರೀಕ್ಷೆ ವ್ಯರ್ಥವಾಗುತ್ತದೆ. ವಿನಾಕಾರಣ ನಿಮ್ಮ ಮತ್ತು ಪ್ರಯೋಗಶಾಲೆಯ ಸಿಬ್ಬಂದಿಯ ಅಮೂಲ್ಯ ಸಮಯವೂ ನಷ್ಟವಾಗುತ್ತದೆ.

  ALSO READ: ನಿಂತುಕೊಂಡು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ಉತ್ತರ


 • ದೈಹಿಕ ಪರೀಕ್ಷೆ ಇದ್ದರೆ ಸಾಕಷ್ಟು ನೀರು ಕುಡಿದೇ ಹೋಗಿ

  ಕೆಲವೊಮ್ಮೆ ವೈದ್ಯರು ಸಾಕಷ್ಟು ದೈಹಿಕ ಶ್ರಮದ ಬಳಿಕ ಆರೋಗ್ಯದ ಅಂಕಿ ಅಂಶಗಳನ್ನು ಪಡೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ದೇಹದಲ್ಲಿ ಸಾಕಷ್ಟು ನೀರು ಇರುವಂತೆ ನೋಡಿಕೊಂಡರೆ ಈ ಪರೀಕ್ಷೆಯಲ್ಲಿ ಸುಸ್ತಾಗುವುದನ್ನು ಆದಷ್ಟೂ ತಪ್ಪಿಸಬಹುದು. ಒಂದು ವೇಳೆ ನೀರು ಕುಡಿಯದೇ ತುಂಬಾ ಹೊತ್ತಾದ ಬಳಿಕ ದೈಹಿಕ ವ್ಯಾಯಾಮದ ಬಳಿಕ ಸಂಗ್ರಹಿಸಿದ ಮೂತ್ರದ ಪರೀಕ್ಷೆ ನಡೆಸಿದರೆ ಇದರ ವಿವರಗಳಲ್ಲಿ ಅಸಹಜತೆ ಕಂಡುಬರುತ್ತದೆ ಹಾಗೂ ಇದು ವೈದ್ಯರಿಗೆ ಗೊಂದಲವುಂಟು ಮಾಡಬಹುದು. ಹಾಗಾಗಿ, ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲವೆಂದು ವೈದ್ಯರು ಕಂಡುಹಿಡಿಯುವ ಮುನ್ನ ಪರೀಕ್ಷೆಗಾಗಿ ಮಾತ್ರವಲ್ಲ, ನಿತ್ಯದ ಅಭ್ಯಾಸದಂತೆ ಸಾಕಷ್ಟು ನೀರು ಕುಡಿಯುತ್ತಿರಿ.


 • ಸಾಮಾನ್ಯ ತಪಾಸಣೆಯ ದಿನ ಎಂದಿನಂತೆಯೇ ಊಟ ಮಾಡಿ

  ವರ್ಷಕ್ಕೊಮ್ಮೆ ನಡೆಸುವ ಸಾಮಾನ್ಯ ಆರೋಗ್ಯ ತಪಾಸಣೆಯ ಸಂದರ್ಭದಲ್ಲಿಯೂ ವೈದ್ಯರ ಭೇಟಿಯ ಮುನ್ನ ಎಂದಿನಂತೆಯೇ ಆಹಾರ ಸೇವಿಸಿ. ಇದರಿಂದ ನಿಮ್ಮ ನಿತ್ಯದ ಆರೋಗ್ಯ ಹೇಗಿರುತ್ತದೆ ಎಂಬ ಮಾಹಿತಿಯನ್ನು ವೈದ್ಯರು ಗುರುತಿಸಬಲ್ಲರು ಹಾಗೂ ನಿಮ್ಮ ಜೀವನಕ್ರಮ ಮತ್ತು ಆಹಾರಕ್ರಮದಲ್ಲಿ ಏನಾದರೂ ತೊಂದರೆ ಇದ್ದರೆ ಇದನ್ನು ಸರಿಪಡಿಸುವಂತೆ ಹೇಳಲು ಅವರಿಗೆ ಸುಲಭವಾಗುತ್ತದೆ. ಅಷ್ಟಕ್ಕೂ ತಪಾಸಣೆ ಇದೆ ಎಂದು ಹಿಂದಿನ ದಿನಗಳಲ್ಲಿ ಮಾತ್ರವೇ ಆರೋಗ್ಯಕರ ಆಹಾರ ಸೇವಿಸಿದರೆ ಇದರಿಂದ ದೀರ್ಘಾವಧಿಗೆ ಪ್ರಯೋಜನವೇನೂ ಆಗದು. ಬದಲಾವಣೆಗಳು ಆಗಬೇಕಿದ್ದರೆ ಇದು ದೀರ್ಘಾವಧಿಯದ್ದೇ ಆಗಬೇಕು.


 • ಅನಾರೋಗ್ಯವಿದ್ದು ವೈದ್ಯರಲ್ಲಿ ಭೇಟಿ ನೀಡಿದ್ದರೆ ಇದಕ್ಕೂ ಮುನ್ನ ನಿಮ್ಮದೇ ಔಷಧಿ ತೆಗೆದುಕೊಳ್ಳದಿರಿ

  ಅನಾರೋಗ್ಯವಿದ್ದಾಗ ಮೊದಲಾಗಿ ವೈದ್ಯರು ರೋಗದ ಲಕ್ಷಣಗಳನ್ನು ಪರಿಶೀಲಿಸಿ ಇದಕ್ಕೆ ಕಾರಣವನ್ನು ಹುಡುಕುತ್ತಾರೆ. ಹಾಗಾಗಿ ವೈದ್ಯರ ಭೇಟಿಗೂ ಮುನ್ನ ನಿಮ್ಮ ಮನಸ್ಸಿಗೆ ಬಂದ ಅಥವಾ ನೀವೇ ನಿರ್ಧರಿಸಿದ ಔಷಧಿಗಳನ್ನು ಸೇವಿಸದಿರಿ. ಅನಿವಾರ್ಯವಾಗದ ಹೊರತು ನೀವಾಗಿ ಯಾವುದೇ ಔಷಧಿ ತೆಗೆದುಕೊಳ್ಳದಿರಿ. ಇದರಿಂದ ರೋಗ ಸಾಮಾನ್ಯ ಲಕ್ಷಣಗಳು ಬದಲಾಗಬಹುದು ಹಾಗೂ ಇರುವ ರೋಗಕ್ಕೂ ಭಿನ್ನವಾದ ರೋಗದ ಇರುವಿಕೆಯನ್ನು ಈ ಲಕ್ಷಣಗಳು ತೋರಬಹುದು. ಕೆಲವು ಔಷಧಿಗಳು ರಕ್ತದ ಬಡಿತವನ್ನು ಹೆಚ್ಚಿಸಿದರೆ ಕೆಲವು ದೇಹದ ಬಿಸಿಯನ್ನು ಹೆಚ್ಚಿಸುತ್ತವೆ. ಹಾಗಾಗಿ ವೈದ್ಯರ ಸಲಹೆ ಇಲ್ಲದೇ ಯಾವುದೇ ಔಷಧಿ ಸೇವಿಸದಿರಿ. ವಿಪರೀತ ಸಂದರ್ಭಗಳಲ್ಲಿ ಈ ಪರಿಯ ಲಕ್ಷಣಗಳಿವೆ, ತಮ್ಮ ಬಳಿ ಬರುತ್ತಿದ್ದೇವೆ ಎಂದು ವೈದ್ಯರಲ್ಲಿ ದೂರವಾಣಿಯ ಮೂಲಕ ವಿವರಿಸಿದರೆ ಈ ಲಕ್ಷಣಗಳನ್ನು ಆಧರಿಸಿ ವೈದ್ಯರೇ ಯಾವ ಔಷಧ ನಿಮ್ಮ ಬಳಿ ಇದೆ ಎಂದು ವಿಚಾರಿಸಿ ಅದನ್ನು ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ, ಆ ಪ್ರಕಾರವೇ ಸೇವಿಸಿ. ಒಂದು ವೇಳೆ ನೀವು ಈಗಾಗಲೇ ಬೇರೆ ಯಾವುದೋ ಕಾಯಿಲೆಗೆ ಔಷಧಿಗಳನ್ನು ಸೇವಿಸುತ್ತಿದ್ದರೆ ಇದರ ಬಗ್ಗೆ ವೈದ್ಯರಿಗೆ ಮಾಹಿತಿ ನೀಡುವುದು ಅವಶ್ಯ. ಇದರಿಂದ ಈ ಔಷಧಿಯ ಅಡ್ಡಪರಿಣಾಮಗಳೇನಾದರೂ ಈಗಿನ ತೊಂದರೆಗೆ ಕಾರಣವೇ ಎಂದು ಊಹಿಸಲು ಸಾಧ್ಯವಾಗುತ್ತದೆ ಹಾಗೂ ಸೂಕ್ತ ಔಷಧಿಗಳನ್ನು ಸೂಚಿಸಲು ಸಾಧ್ಯವಾಗುತ್ತದೆ.

  ALSO READ: ನಿಮ್ಮ ಮುಖ ಲಕ್ಷಣಗಳನ್ನು ಗಮನಿಸಿ ನಿಮಗಿರುವ ರೋಗಗಳ ಬಗ್ಗೆ ತಿಳಿದುಕೊಳ್ಳಿ


 • ಚರ್ಮವೈದ್ಯರ ಬಳಿ ಹೋಗುವ ಮುನ್ನ ಪ್ರಸಾದನಗಳನ್ನು ಬಳಸದಿರಿ

  ಚರ್ಮವೈದ್ಯರು ರೋಗಿಯ ಇಡಿಯ ದೇಹವನ್ನು ಕೂಲಂಕಶವಾಗಿ ಗಮನಿಸುತ್ತಾರೆ. ಇದರಲ್ಲಿ ಉಗುರುಗಳೂ ಸೇರಿವೆ. ಹಾಗಾಗಿ ಇವುಗಳಲ್ಲಿ ಪಾಲಿಶ್ ಇರದಂತೆ ನೋಡಿಕೊಳ್ಳಿ. ಉಗುರುಗಳಿಗೆ ಬಣ್ಣ ಅಥವಾ ಅಕ್ರಿಲಿಕ್ ಉಗುರು ಮೊದಲಾದವುಗಳನ್ನು ಹಚ್ಚದಿರಿ. ಏಕೆಂದರೆ ಉಗುರುಗಳ ಬಣ್ಣದಲ್ಲಿ ಆಗಿರುವ ಅತಿಸೂಕ್ಷ್ಮ ಬದಲಾವಣೆಯೂ ದೊಡ್ಡ ತೊಂದರೆಯ ಲಕ್ಷಣವಾಗಿದ್ದು ವೈದ್ಯರಿಗೆ ಗುರುತಿಸಲು ಸುಲಭವಾಗುತ್ತದೆ. ವಿಶೇಷವಾಗಿ ರಕ್ತಹೀನತೆ, ಮಧುಮೇಹ ಹಾಗೂ ಹೃದಯದ ತೊಂದರೆಗಳು ಉಗುರುಗಳ ಬಣ್ಣದ ಮೇಲೆ ಪ್ರಭಾವ ಬೀರುತ್ತವೆ. ಅಲ್ಲದೇ ಶಿಲೀಂಧ್ರದ ಸೋಂಕು ಇದ್ದರೆ ಇದು ಮೊತ್ತ ಮೊದಲಾಗಿ ಉಗುರುಗಳಲ್ಲಿ ವ್ಯಕ್ತಗೊಳ್ಳುತ್ತದೆ. ಅಷ್ಟೇ ಅಲ್ಲ, ಮುಖದ-ಕಣ್ಣಿನ ಮೇಕಪ್ ಸಹಾ ಬೇಡ, ಇದರಿಂದ ವೈದ್ಯರಿಗೆ ನಿಮ್ಮ ಚರ್ಮದ ನಿಜವಾದ ತೊಂದರೆಗಳು ಕಾಣದೇ ಹೋಗಬಹುದು. ಸಾಧ್ಯವಾದರೆ ವೈದ್ಯಶಾಲೆಯಲ್ಲಿಯೇ ಮೇಕಪ್ ನಿವಾರಿಸಿಕೊಳ್ಳಿ. ಆದರೆ ಬಿಸಿಲಿನ ರಕ್ಷಣೆಗೆ ಸನ್ ಸ್ಕ್ರೀನ್ ಮತ್ತು ತೇವಕಾರಕ ಲೋಶನ್ ಗಳನ್ನು ಹಚ್ಚುವುದರಿಂದ ಏನೂ ತೊಂದರೆಯಾಗದು.


 • ಕೊಲೆಸ್ಟ್ರಾಲ್ ಪರೀಕ್ಷೆಗೂ ಮುನ್ನ ಮದ್ಯ ಸೇವಿಸದಿರಿ

  ಕೊಲೆಸ್ಟ್ರಾಲ್ ಪರೀಕ್ಷೆಯಲ್ಲಿ ಗಮನಿಸುವ ನಾಲ್ಕು ಅಂಶಗಳಲ್ಲಿ ಟ್ರೈಗ್ಲಿಸರೈಡ್ ಅಂಶವೂ ಒಂದು. ಈ ಅಂಶವನ್ನು ಏರುಪೇರುಗೊಳಿಸುವ ಯಾವುದೇ ಪದಾರ್ಥವನ್ನು ಪರೀಕ್ಷೆಗೂ ಮುನ್ನ ಸೇವಿಸಿದರೆ ರಕ್ತಪರೀಕ್ಷೆಯೂ ಏರುಪೇರಾಗುವುದು ಖಚಿತ. ಮದ್ಯ ಇದರಲ್ಲಿ ಪ್ರಮುಖವಾದ ಪದಾರ್ಥವಾಗಿದೆ. ಅಲ್ಲದೇ ಇದು ದೀರ್ಘಕಾಲದವರೆಗೆ ತನ್ನ ಪ್ರಭಾವವನ್ನು ಉಳಿಸಿಕೊಳ್ಳುವ ಕಾರಣ ಮದ್ಯ ಸೇವನೆಯ ಕನಿಷ್ಟ ಇಪ್ಪತ್ತನಾಲ್ಕು ಘಂಟೆಗಳ ಕಾಲವಾದರೂ ಈ ಪರೀಕ್ಷೆಗೆ ಒಳಪಡಬಾರದು. ಅದರಲ್ಲೂ ಮದ್ಯ ಸೇವನೆಯ ಅಮಲಿನಲ್ಲಿದ್ದಾಗ ಪಡೆದ ರಕ್ತದ ಪರೀಕ್ಷೆಯಲ್ಲಿ ಟ್ರೈಗ್ಲಿಸರೈಡ್ ಮಟ್ಟ ಆತಂಕಕಾರಿಯಾಗಿರುತ್ತದೆ. ಕೇವಲ ಮದ್ಯ ಮಾತ್ರವಲ್ಲ, ಸಕ್ಕರೆ ಅಧಿಕವಿರುವ ಆಹಾರ, ಅಧಿಕ ಕೊಬ್ಬಿನಾಂಶವಿರುವ ಆಹಾರಗಳು ಹಾಗೂ ಪರೀಕ್ಷೆಗೂ ಮುನ್ನ ಭಾರೀ ಪ್ರಮಾಣದ ಆಹಾರಸೇವನೆಯೂ ಸಲ್ಲದು. ಆದರೆ ಅಚ್ಚರಿ ಎಂಬಂತೆ ನಿಯಮಿತವಾಗಿ ದಿನದಲ್ಲಿ ಒಂದು ಅಥವಾ ಎರಡು ಬಾರಿ ಅತಿ ಚಿಕ್ಕ ಪ್ರಮಾಣದಲ್ಲಿ ಸೇವಿಸಿದ ಮದ್ಯದಿಂದ ಕೊಲೆಸ್ಟ್ರಾಲ್ ಮಟ್ಟದಲ್ಲಿ ಕೊಂಚ ಮಟ್ಟಿಗಿನ ಸುಧಾರಣೆ ಕಂಡುಬರುತ್ತದೆ. ಹಾಗಾಗಿ ರಕ್ತಪರೀಕ್ಷೆ ಇರದ ಸಮಯದಲ್ಲಿ ನಿಮ್ಮ ಮದ್ಯದ ಸೇವನೆಯನ್ನು ಅತಿ ಚಿಕ್ಕ ಪ್ರಮಾಣಕ್ಕಿಳಿಸಿ, ಆರೋಗ್ಯವಂತರಾಗಿ.


 • ರಕ್ತದೊತ್ತಡದ ಪರೀಕ್ಷೆಗಳಿಗೂ ಮುನ್ನ ಕೆಫೀನ್ ಬೇಡ

  ಕೆಲವೊಮ್ಮೆ ಹೃದಯದ ಪರೀಕ್ಷೆ ನಡೆಸಲು ಸತತ ದೈಹಿಕ ವ್ಯಾಯಾಮಗಳನ್ನು ಮಾಡಲು ಹೇಳಲಾಗುತ್ತದೆ. ಉದಾಹರಣೆಗೆ ಟ್ರೆಡ್ ಮಿಲ್ ಮೇಲೆ ನಡೆಯುವುದು, ನಿಂತಲ್ಲೇ ಇರುವ ಸೈಕಲ್ ತುಳಿಯುವುದು ಇತ್ಯಾದಿ. ಈ ಪರೀಕ್ಷೆಯಲ್ಲಿ ಹೆಚ್ಚಿನ ಶ್ರಮದ ಸಂದರ್ಭದಲ್ಲಿ ಹೃದಯದ ಒತ್ತಡ ಹೇಗಿರುತ್ತದೆ ಎಂಬುದನ್ನು ಒರೆಹಚ್ಚಲಾಗುತ್ತದೆ. ಕೆಲವೊಮ್ಮೆ ಈ ಸಂದರ್ಭದಲ್ಲಿ ಕೆಲವು ಔಷಧಿಗಳನ್ನೂ ರಕ್ತಕ್ಕೆ ಸೇರಿಸಲಾಗುತ್ತದೆ. ಆದರೆ ಒಂದು ವೇಳೆ ಈ ಪರೀಕ್ಷೆಗೂ ಮುನ್ನ ಕೆಫೀನ್ ಸೇವಿಸಿದ್ದರೆ, ಇದು ಈ ಔಷಧಿಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟುಮಾಡುತ್ತದೆ ಹಾಗೂ ಇರುವುದಕ್ಕಿಂತಲೂ ಹೆಚ್ಚಿನ ಒತ್ತಡ ಇರುವಂತೆ ಪರೀಕ್ಷೆಯಲ್ಲಿ ಕಂಡುಬರುತ್ತದೆ.


 • ಮೂತ್ರಪರೀಕ್ಷೆಗೂ ಮುನ್ನ ತೀರಾ ಬಾಯಾರಿಕೆಯಿಂದಿರದಿರಿ

  ಒಂದು ವೇಳೆ ಮೂತ್ರಪರೀಕ್ಷೆಗೆ ಹೋಗುವುದಿದ್ದರೆ ಇದಕ್ಕೂ ಮುನ್ನ ದೇಹದಲ್ಲಿ ಸಾಕಷ್ಟು ನೀರು ಇರುವಂತೆ ನೋಡಿಕೊಳ್ಳಿ. ಒಂದು ವೇಳೆ ನೀವು ವ್ಯಾಯಾಮ ಮಾಡಿ ಹೊರಬಂದಿದ್ದರೆ ಕೊಂಚ ಹೊತ್ತಿನ ಬಳಿಕ ಸಾಕಷ್ಟು ನೀರು ಕುಡಿಯಬೇಕು. ಒಂದು ವೇಳೆ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯದೇ ಇದ್ದರೆ ಮೂತ್ರ ಹೆಚ್ಚು ಸಾಂದ್ರೀಕೃತವಾಗುತ್ತದೆ ಹಾಗೂ ಇದು ಮೂತ್ರಪರೀಕ್ಷೆಯ ವಿವರಗಳನ್ನು ಏರುಪೇರುಗೊಳಿಸಬಲ್ಲುದು. ಅಲ್ಲದೇ ಒಂದು ವೇಳೆ ಈ ವ್ಯಾಯಾಮ ನಿಮ್ಮ ನಿತ್ಯದ ಕ್ರಮವಾಗಿರದೇ ಇದ್ದರೆ ಈ ದಿನ ವಿಶೇಷವಾಗಿ ಮಾಡುವುದೇನೂ ಅಗತ್ಯವಿಲ್ಲ.


 • ಮಹಿಳೆಯರಿಗೆ: ಒಂದು ವೇಳೆ ಇದು ನಿಮ್ಮ ಮಾಸಿಕ ದಿನವಾಗಿದ್ದರೂ ಸ್ರೀತಜ್ಞೆಯೊಂದಿಗಿನ ಭೇಟಿ ತಿರಸ್ಕರಿಸದಿರಿ

  ಒಂದು ವೇಳೆ ಸ್ರೀತಜ್ಞೆಯೊಂದಿಗೆ ನಿಮ್ಮ ಭೇಟಿ ನಿಗದಿಯಾಗಿದ್ದು ಅಂದೇ ಮಾಸಿಕ ದಿನವೂ ಎದುರಾದರೆ ಇದಕ್ಕೆ ಮುಜುಗರ ಪಡದೇ ವೈದ್ಯರಲ್ಲಿ ತೆರಳಿ ನಿಜಸಂಗತಿಯನ್ನು ತಿಳಿಸಿ. ವಾಸ್ತವದಲ್ಲಿ ವೈದ್ಯರು ಈ ಸ್ಥಿತಿಗಿಂತಲೂ ಎಷ್ಟೋ ಕ್ಲಿಷ್ಟಕರವಾದ ಸಂದರ್ಭವನ್ನು ನೋಡಿರುತ್ತಾರೆ ಅಥವಾ ಎದುರಿಸಿರುತ್ತಾರೆ. The liquid Pap smear test ಮೊದಲಾದ ಪರೀಕ್ಷೆಗಳು ಇಂದು ಸಾಮಾನ್ಯವಾಗಿದ್ದು ಮಾಸಿಕ ದಿನಗಳ ಸಹಿತ ಯಾವುದೇ ದಿನಗಳಲ್ಲಿ ನಿರ್ವಹಿಸಬಹುದು. ಕೆಲವು ಮಹಿಳೆಯರಿಗೆ ಈ ದಿನಗಳಲ್ಲಿ ವೈದ್ಯರೊಂದಿಗಿನ ಭೇಟಿ ಇಷ್ಟವಾಗುವುದಿಲ್ಲ ಹಾಗೂ ಇದೇ ಕಾರಣ ನೀಡಿ ಅವರು ಭೇಟಿಯ ದಿನವನ್ನು ಮುಂದೂಡುತ್ತಾರೆ. ಆದರೆ ವೈದ್ಯಕೀಯವಾಗಿ ಈ ಮುಂದೂಡುವಿಕೆಯ ಅಗತ್ಯವಿಲ್ಲ. ಆದರೆ ಕೆಲವು ಪರೀಕ್ಷೆಗಳನ್ನು ಮಾತ್ರ ಈ ದಿನಗಳಂದೇ ನಡೆಸಬೇಕಾಗಿರುವ ಕಾರಣ ಈ ದಿನ ಬರಲು ವೈದ್ಯರೇ ಸೂಚಿಸುತ್ತಾರೆ. ಈಗಂತೂ ಮಹಿಳೆಯರ ಗರ್ಭಕೋಶದ ಅಂಶವನ್ನು ಸಂಗ್ರಹಿಸಿ ಈ ಪರೀಕ್ಷೆ ನಡೆಸಬಹುದಾದುದರಿಂದ ಈ ಕಟ್ಟುಪಾಡು ಸಹಾ ಅಗತ್ಯವಿಲ್ಲ.


 • ಮಹಿಳೆಯರಿಗೆ: ಮ್ಯಾಮ್ಮೋಗ್ರಾಮ್ ಪರೀಕ್ಷೆಗೂ ಮುನ್ನ ಸುಗಂಧ ಹಚ್ಚದಿರಿ

  ಸ್ತನಗಳಲ್ಲಿ ಗಡ್ಡೆಯ ಇರುವಿಕೆಯನ್ನು ಪರೀಕ್ಷಿಸಲು ಮಾಡಲಾಗುವ ಮ್ಯಾಮ್ಮೋಗ್ರಾಮ್ ಪರೀಕ್ಷೆಯಲ್ಲಿ ಆ ದಿನ ದೇಹದ ಮೇಲೆ ಯಾವುದೇ ಬಗೆಯ ಸುಗಂಧ, ಪೌಡರ್ ಅಥವಾ ಬೆವರುನಿವಾರಕ ದ್ರವನ್ನು ಬಳಸದಂತೆ ಸೂಚಿಸಲಾಗುತ್ತದೆ. ಏಕೆಂದರೆ ಈ ಪೌಡರು ಮತ್ತು ಸುಗಂಧಗಳಲ್ಲಿ ಅಲ್ಪ ಪ್ರಮಾಣದಲ್ಲಿ ಅಲ್ಯೂಮಿನಿಯಂ ಪುಡಿಯನ್ನು ಬೆರೆಸಿರಲಾಗುತ್ತದೆ. ಈ ಅಂಶ ಮ್ಯಾಮ್ಮೋಗ್ರಾಂ ಪರೀಕ್ಷೆಯ ವಿವರಗಳಲ್ಲಿ ಸ್ತನದಲ್ಲಿ ಕ್ಯಾಲ್ಸಿಯಂ ಕಣಗಳಿರುವಂತೆ ಕಾಣಿಸುತ್ತದೆ. ಪರಿಣಾಮವಾಗಿ ಇಲ್ಲದ ಅಂಶ ಸ್ತನಗಳಲ್ಲಿದೆ ಎಂದು ತಪ್ಪಾಗಿ ಅರ್ಥೈಸಬಹುದು. ಒಂದು ವೇಳೆ ಅರಿವಿಲ್ಲದೇ ಸುಗಂಧ ಹಚ್ಚಿಕೊಂಡು ಹೋಗಿದ್ದರೆ, ಪರೀಕ್ಷೆಗೂ ಮುನ್ನ ಪ್ರಯೋಗಾಲಯದಲ್ಲಿ ಒದಗಿಸಿರುವ ಸೌಕರ್ಯವನ್ನು ಬಳಸಿ ವಕ್ಷಭಾಗವನ್ನು ಸ್ವಚ್ಛಗೊಳಿಸಿಕೊಂಡೇ ಪರೀಕ್ಷೆಗೊಳಪಡಿ. ಉತ್ತಮವೆಂದರೆ ಪರೀಕ್ಷೆಗೆ ಬರುವ ಮುನ್ನ ಸ್ನಾನ ಮಾಡಿ ಸ್ವಚ್ಛರಾಗಿ ಬರುವುದು.


 • ಕರುಳುಗಳ ಪರೀಕ್ಷೆ ಇದ್ದರೆ ಕೆಂಪು ಮಾಂಸದ ಪದಾರ್ಥ ಸೇವಿಸದಿರಿ

  ಕೆಂಪು ಮಾಂಸ ಅಥವಾ ಇದರಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸಿದರೆ ಕರುಳುಗಳ ಒಳಭಾಗದ ಬಣ್ಣ ಬದಲಾಗುತ್ತದೆ. ಅಷ್ಟೇ ಅಲ್ಲ, ಈ ಪರೀಕ್ಷೆಗೆ ಒಳಪಡುವ ಮುನ್ನ ಸೇವಿಸಿದ ಐಸ್ ಕ್ರೀಂ ಸಹಾ ಕರುಳುಗಳ ಬಣ್ಣವನ್ನು ಬದಲಿಸುತ್ತದೆ. ಇದು ಕೆಂಪು ಅಥವಾ ನೇರಳೆ ಬಣ್ಣದಲ್ಲಿದ್ದರೂ ವೈದ್ಯರಿಗೆ ಈ ಬಣ್ಣ ಮುಖ್ಯವಲ್ಲ. ಇದು ಕರುಳಿನ ಸಹಜ ಬಣ್ಣವನ್ನು ಮಸುಕುಗೊಳಿಸುವುದರಿಂದ ಕರುಳಿನ ಪರೀಕ್ಷೆ ನಡೆಸಲು ಸಾಧ್ಯವಾಗುವುದಿಲ್ಲ. ಅಚ್ಚರಿ ಎಂಬಂತೆ, ಕೆಲವು ಹೆಚ್ಚುವರಿ ಕಬ್ಬಿಣದ ಅಂಶವನ್ನು ಒದಗಿಸುವ ಮಾತ್ರೆಗಳ ಸೇವನೆಯಿಂದಲೂ ಈ ಪರಿಯ ಬಣ್ಣ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಕೆಲವು ವ್ಯಕ್ತಿಗಳಿಗೆ ಕಬ್ಬಿಣದ ಅಂಶ ಅತಿಸಾರಕ್ಕೆ ಕಾರಣವಾಗುತ್ತದೆ. ಹಾಗಾಗಿ ಪರೀಕ್ಷೆಗೂ ಮುನ್ನ ಕರುಳುಗಳನ್ನು ಸಂಪೂರ್ಣವಾಗಿ ಖಾಲಿಯಾಗಿಸುವುದು ಕಷ್ಟವಾಗುತ್ತದೆ. ಹಾಗಾಗಿ ನಿಮ್ಮ ಕರುಳುಗಳು ಸಂಪೂರ್ಣವಾಗಿ ಸ್ವಚ್ಛಕರಗೊಳ್ಳಲು ಈ ಆಹಾರ ಮತ್ತು ಮಾತ್ರೆಗಳನ್ನು ಕನಿಷ್ಟ ಒಂದು ವಾರದವರೆಗಾದರೂ ತ್ಯಜಿಸಲೇಬೇಕಾಗುತ್ತದೆ. ಕರುಳುಗಳಿಂದ ಪರಿಪೂರ್ಣವಾಗಿ ನಿವಾರಿಸಲು ಕಷ್ಟವಾಗಿರುವ ಅಂಶಗಳೆಂದರೆ ಅಧಿಕ ನಾರಿನಂಶವಿರುವ ಆಹಾರಗಳು, ಉದಾಹರಣೆಗೆ ಹಣ್ಣು ಮತ್ತು ತರಕಾರಿಗಳು ಮತ್ತು ಬೀನ್ಸ್. ಹಾಗಾಗಿ ಒಂದು ವಾರಕ್ಕೂ ಮುನ್ನ ಈ ಆಹಾರಗಳನ್ನೂ ಸೇವಿಸಬಾರದು.

  ALSO READ: ಆಹಾರ ಸಂರಕ್ಷಣೆ: ಹಿಂದಿನ ಕಾಲದಿಂದ ಇಂದಿನವರೆಗು ಅನುಸರಿಸಿಕೊಂಡು ಬರುತ್ತಿರುವ ಹತ್ತು ವಿಧಾನಗಳ ಪಕ್ಷಿನೋಟ


 • ಸ್ತ್ರೀರೋಗ ಅಥವಾ ಮೂತ್ರಶಾಸ್ತ್ರಜ್ಞರ ಬಳಿ ಹೋಗುವ ಮುನ್ನ ಮಿಲನ? ಹೌದು, ಮುನ್ನಡೆಯಿರಿ

  ಮಹಿಳೆಯರು ಸ್ತ್ರೀರೋಗತಜ್ಞೆಯ ಅಥವಾ ಪುರುಷರು ಮೂತ್ರಶಾಸ್ತ್ರಜ್ಞರ ಬಳಿ ತಪಾಸಣೆಗೆ ಹೋಗುವ ಮುನ್ನ ಮಿಲನಕ್ಕೆ ಮನಸ್ಸಾದರೆ ಇದನ್ನು ನಿಗ್ರಹಿಸುವುದು ಸರಿಯೇ? ಬೇಡ ಎನ್ನುತ್ತಾರೆ ತಜ್ಞರು. ಆದರೂ ಈ ಬಗ್ಗೆ ಆತಂಕವಿದ್ದೇ ಇರುತ್ತದೆ. ಹಾಗಾಗಿ ನಿಮ್ಮ ಮನೋಕಾಮನೆಗಳನ್ನು ಈ ಪರೀಕ್ಷೆಗಾಗಿ ನಿಗ್ರಹಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇದು ನಿಮ್ಮ ಪರೀಕ್ಷೆಯ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡುವುದಿಲ್ಲ. ಮೂತ್ರ, ವೃಷಣ ಅಥವಾ ಪ್ರಾಸ್ಟೇಟ್ ಗ್ರಂಥಿಯ ಪರೀಕ್ಷೆಗಳಿಗೆ ಮಿಲನಕ್ರಿಯೆ ಅಡ್ಡಿಯಾಗದು. ಸಹಜ ಲೈಂಗಿಕ ಚಟುವಟಿಕೆಯಿಂದೇನೋ ತೊಂದರೆ ಇಲ್ಲ ಹಾಗೂ ಪರೀಕ್ಷೆಯ ವಿವರಗಳಲ್ಲಿ ಯಾವುದೇ ಏರುಪೇರು ಕಾಣಿಸುವುದಿಲ್ಲ.


 • ವೈದ್ಯರಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ಬರೆದಿಟ್ಟುಕೊಳ್ಳಿ

  ನೀವು ನಿಮ್ಮ ಆರೋಗ್ಯ ಅಥವಾ ಸಂಬಂಧಿತ ಇತರ ಯಾವುದೇ ವಿಷಯದ ಬಗ್ಗೆ ವೈದ್ಯರಲ್ಲಿ ಏನಾದರೂ ಕೇಳಬೇಕೆಂದಿದ್ದರೆ ಭೇಟಿಗೂ ಮುನ್ನ ಇದನ್ನು ಬರೆದಿಟ್ಟುಕೊಳ್ಳಿ. ಏಕೆಂದರೆ, ಸಾಮಾನ್ಯವಾಗಿ ವೈದ್ಯರ ಪರೀಕ್ಷೆಯ ಸಮಯದಲ್ಲಿ ಎದುರಾಗುವ ಮುಜುಗರ ಹಾಗೂ ಪರೀಕ್ಷೆಯ ಸಮಯದಲ್ಲಿ ಆವರಿಸಿದ್ದ ಆತಂಕ ನೀವು ಕೇಳಬೇಕಾಗಿರುವುದನ್ನು ಮರೆಸಿ ಬಿಟ್ಟಿರುತ್ತದೆ. ಕೊನೆಯಲ್ಲಿ ವೈದ್ಯರು ನಿಮ್ಮ ಪರೀಕ್ಷೆಯ ವಿವರಗಳನ್ನು ಪರಿಶೀಲಿಸಿ ನಿಮಗೆ ಸೂಚನೆ ನೀಡುವಾಗ ನೀವು ಏನು ಕೇಳಬೇಕೆಂದಿದ್ದಿರಿ ಎಂಬುದೇ ಮರೆತು ಹೋಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ನೀವು ಮೊದಲೇ ಬರೆದಿಟ್ಟಿದ್ದ ಅಥವಾ ಮೊಬೈಲಿನ ನೋಟ್ ಪ್ಯಾಡಿನಲ್ಲಿ ಗುರುತು ಹಾಕಿಕೊಂಡಿದ್ದ ಪ್ರಶ್ನೆಗಳು ತುಂಬಾ ಕೆಲಸಕ್ಕೆ ಬರುತ್ತವೆ. ಅದರಲ್ಲೂ ಕೆಲವು ಮಹಿಳೆಯರಿಗೆ ತಮ್ಮ ಅತಿ ಗೋಪ್ಯ ಸಂಗತಿಗಳನ್ನು ವೈದ್ಯರಲ್ಲಿ ಹೇಳಿಕೊಳ್ಳಲು ಸಂಕೋಚವಾಗಿರುತ್ತದೆ. ಹಾಗಾಗಿ ಇದನ್ನು ನೇರವಾಗಿ ಹೇಳುವ ಬದಲು ಬರೆದಿಟ್ಟಿದ್ದನ್ನು ತೋರಿಸಿದರೆ ವೈದ್ಯರು ಖಂಡಿತವಾಗಿಯೂ ಇದನ್ನು ಪರಿಗಣಿಸಿ ಸೂಕ್ತ ಸಲಹೆಯನ್ನು ನೀಡುತ್ತಾರೆ.
ಅನಾರೋಗ್ಯವಿದ್ದಾಗ ಅಥವಾ ನಿಯಮಿತ ತಪಾಸಣೆಗಾಗಿ ನೀವು ವೈದ್ಯರ ಭೇಟಿಯನ್ನು ಮೊದಲೇ ನಿಗದಿಪಡಿಸಿದ್ದರೆ ಆ ಭೇಟಿಗೂ ಮುನ್ನ ಕೆಲವು ಸಂಗತಿಗಳ ಬಗ್ಗೆ ಅರಿವಿರುವುದು ಒಳ್ಳೆಯದು. ಇದರಿಂದ ವೈದ್ಯರಿಗೂ ತಮ್ಮ ಕೆಲಸವನ್ನು ನಿರ್ವಹಿಸಲು ಸುಲಭವಾಗುತ್ತದೆ. ಅರಿವಿಲ್ಲದೇ ಮಾಡುವ ಕೆಲವು ಕೆಲಸಗಳು ಅಥವಾ ಸೇವಿಸುವ ಆಹಾರ ವೈದ್ಯರ ತಪಾಸಣೆ ಮತ್ತು ಪರೀಕ್ಷೆಗಳ ಮೇಲೆ ಪ್ರಭಾವ ಬೀರಿ ಸೂಕ್ತ ಫಲಿತಾಂಶ ಪಡೆಯಲು ಸಾಧ್ಯವಾಗದೇ ಹೋಗಬಹುದು ಅಥವಾ ತದ್ವಿರುದ್ದವಾಗಿ ಇಲ್ಲದ ಕಾಯಿಲೆಯ ಲಕ್ಷಣಗಳ ಬಗ್ಗೆ ವೈದ್ಯರಿಗೆ ಅನುಮಾನವುಂಟಾಗಿ ಇದನ್ನು ಇದೆ ಅಥವಾ ಇಲ್ಲ ಎಂದು ಸಾಧಿಸಲು ಇನ್ನಷ್ಟು ಹೆಚ್ಚಿನ ಪರೀಕ್ಷೆಗಳು ಮತ್ತು ಸಮಯ ಮತ್ತು ಮುಖ್ಯವಾಗಿ ಹಣ ವ್ಯಯವಾಗುವುದು ತಪ್ಪುತ್ತದೆ. ಆದ್ದರಿಂದ ಮುಂದಿನ ಬಾರಿ ನಿಮ್ಮ ವೈದ್ಯರ ಭೇಟಿಗೂ ಮುನ್ನ ನೀವು ಗಮನ ಹರಿಸಬೇಕಾದ ಹತ್ತು ಪ್ರಮುಖ ಸಂಗತಿಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

ALSO READ:ಈ ಸೂಚನೆಗಳು ನಿಮ್ಮಲ್ಲಿ ಕಂಡು ಬಂದ್ರೆ ನಿಮ್ಮನ್ನು ನೀವು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದರ್ಥ

   
 
ಹೆಲ್ತ್