Back
Home » ಆರೋಗ್ಯ
ಮನಸ್ಸಿಗಿಂತ ದೇಹಕ್ಕೆ ಹೆಚ್ಚು ವಯಸ್ಸಾಗುತ್ತಿದೆ ಎಂದು ಸೂಚಿಸುವ ಸಂಕೇತಗಳು ಯಾವವು ಗೊತ್ತೆ?
Boldsky | 29th Oct, 2019 11:16 PM
 • 1. ತೂಕ ಎತ್ತುವ ಸಾಮರ್ಥ್ಯ ಕುಗ್ಗುತ್ತದೆ

  ಒಮ್ಮೆ ಸುಮಾರು ಮೂವತ್ತು ನಲವತ್ತು ಕೆ.ಜಿ ತೂಕದ ವಸ್ತುವನ್ನು ನಿರಾಯಾಸವಾಗಿ ಎತ್ತುತ್ತಿದ್ದ ನಿಮಗೆ ಈಗ ಇದರ ಅರ್ಧದಷ್ಟು ತೂಕವನ್ನೂ ಹೊರಲು ಆಗುತ್ತಿಲ್ಲವೆಂದರೆ ಇದಕ್ಕೆ ನಿಮ್ಮ ಸ್ನಾಯುಗಳು ತಮ್ಮ ಕ್ಷಮತೆಯನ್ನು ಕಳೆದುಕೊಂಡಿರುವುದೇ ಕಾರಣವಾಗಿದೆ. ವಯಸ್ಸಾದಂತೆ ಸ್ನಾಯುಗಳ ಅಂಗಾಂಶಗಳು ಮರುಹುಟ್ಟು ಪಡೆಯುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದೇ ಇದಕ್ಕೆ ಕಾರಣ. ಆದರೆ ಸೂಕ್ತ ವ್ಯಾಯಾಯ, ಭಾರ ಎತ್ತುತ್ತಾ ಇರುವ ಅಭ್ಯಾಸ ಹಾಗೂ ಸ್ನಾಯುಗಳನ್ನು ಹುರಿಗಟ್ಟಿಸುವ ವ್ಯಾಯಾಮಗಳನ್ನು ಜೀವನಕ್ರಮದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ಕ್ರಿಯೆಯನ್ನು ಆದಷ್ಟೂ ತಡವಾಗಿಸಬಹುದು.


 • 2. ಕೊಂಚ ತುರಿಸಿಕೊಂಡರೂ ಸುಲಭವಾಗಿ ಆಗುವ ಗಾಯಗಳು

  ಆಗಾಗ, ಅಲ್ಲಲ್ಲಿ ಚಿಕ್ಕದಾಗಿ ತುರಿಸಿಕೊಂಡರೂ ಉಗುರಿನ ಅಲ್ಪ ಒತ್ತಡಕ್ಕೇ ಚರ್ಮ ಹಿಸಿದು ಸೂಕ್ಷ್ಮಗೀರುಗಳು ಮೂಡುತ್ತವೆ. ಅಲ್ಲದೇ ಈ ಗಾಯಗಳು ಹಿಂದಿನಷ್ಟು ಬೇಗನೇ ಮಾಗದೇ ಬಹಳ ತಡವಾಗಿ ಮಾಗತೊಡಗುತ್ತವೆ. ಅದರಲ್ಲೂ ಬಿಸಿಲಿಗೆ ಹೆಚ್ಚು ಒಡ್ಡಿದ್ದ ಭಾಗದ ಚರ್ಮ ಅತಿ ಶೀಘ್ರವಾಗಿ ಗಾಯವಾಗುತ್ತದೆ. ಈ ಸ್ಥಿತಿಗೆ solar purpura ಎಂದು ಕರೆಯುತ್ತಾರೆ. ಸತತವಾಗಿ ಬಿಸಿಲಿಗೆ ಒಡ್ಡಿದ್ದ ಕಾರಣ ತ್ವಚೆ ವಿಪರೀತ ಒಣಗಿ ಚರ್ಮದ ಹೊರಪದರ ಅತಿ ತೆಳು ಮತ್ತು ಶಿಥಿಲವಾಗಿ ಚರ್ಮದಡಿಯ ನರಗಳು ಸುಲಭವಾಗಿ ಸೀಳುವುದೇ ಇದಕ್ಕೆ ಕಾರಣ.


 • 3. ಚರ್ಮದಲ್ಲಿ ನಿಮ್ಮ ಸಹವಯಸ್ಕರಿಗಿಂತಲೂ ಹೆಚ್ಚು ನೆರಿಗೆಗಳು ಮೂಡತೊಡಗುತ್ತವೆ

  ಚರ್ಮದಲ್ಲಿ ನೆರಿಗೆಗಳು ಮೂಡುವುದು ಕೇವಲ ವೃದ್ದಾಪ್ಯದ ಚಿಹ್ನೆಯಾಗಬೇಕಿಲ್ಲ, ಸೂಕ್ತ ಆರೈಕೆಯಿಲ್ಲದ ತ್ವಚೆಗೂ ಎದುರಾಗಬಹುದು. ಆದರೆ ಕೆಲವರಿಗೆ ತಮ್ಮ ಸಮವಯಸ್ಕರಿಗಿಂತಲೂ ಮುನ್ನವೇ ನೆರಿಗೆಗಳು ಕಾಣತೊಡಗುತ್ತವೆ. ಇದಕ್ಕೆ ಅನುವಂಶಿಕ ಕಾರಣಗಳಿರಬಹುದು, ಆದರೆ ಮುಖ್ಯವಾಗಿ ಜೀವನಕ್ರಮ ಮತ್ತು ಆಹಾರಕ್ರಮ ಇದನ್ನು ನಿಯಂತ್ರಿಸುತ್ತವೆ. ತಮ್ಮ ಆಹಾರದಲ್ಲಿ ಸಾಕಷ್ಟು ಹಸಿರು ಆಹಾರ, ತರಕಾರಿ, ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ಧವಾದ ಆಹಾರ ಮತ್ತು ಹಣ್ಣುಗಳನ್ನು ಅಳವಡಿಸಿಕೊಂಡಿರುವವರ ತ್ವಚೆ ಹೆಚ್ಚು ವಯಸ್ಸಿನವರೆಗೂ ಆರೋಗ್ಯಕರವಾಗಿರುತ್ತದೆ ಮತ್ತು ಕಡಿಮೆ ನೆರಿಗೆಗಳು ಮೂಡುತ್ತವೆ. ಅಲ್ಲದೇ ತಮ್ಮ ಅಹಾರದಲ್ಲಿ ಆದಷ್ಟೂ ಕಡಿಮೆ ಪ್ರಮಾಣದಲ್ಲಿ ಸಂತೃಪ್ತ ಕೊಬ್ಬು, ಸಂಸ್ಕರಿತ ಆಹಾರ ಮತ್ತು ಸಕ್ಕರೆಭರಿತ ಆಹಾರಗಳನ್ನು ಅಳವಡಿಸಿಕೊಳ್ಳಬೇಕು. ಮದ್ಯಪಾನ, ಧೂಮಪಾನಗಳೂ ನೆರಿಗೆ ಮೂಡಿಸುವ ಗತಿಯನ್ನು ತೀವ್ರಗೊಳಿಸುತ್ತವೆ ಎಂದು ಅಮೇರಿಕದ ಚರ್ಮಶಾಸ್ತ್ರ ವಿಭಾಗ ತಿಳಿಸಿದೆ.


 • 4. ಸಹವರ್ತಿಗಳೊಂದಿಗೆ ಹೊರಹೋಗಲು ಹಿಂಜರಿಕೆ

  ವರ್ಷಗಳಾಗುತ್ತಿದ್ದಂತೆ ಹುಮ್ಮಸ್ಸು ಕಳೆದುಕೊಳ್ಳಲು ಖಿನ್ನತೆಯೇ ಕಾರಣವಾಗಬೇಕಿಲ್ಲ, ಬದಲಿಗೆ ಸಹವರ್ತಿಗಳೊಂದಿಗೆ ಬೆರೆಯಲು ಹಿಂಜರಿತ ಮತ್ತು ಮಾನಸಿಕವಾಗಿ ಇತರರಿಂದ ಬೇರ್ಪಡಿರುವಿಕೆಯೂ ವೃದ್ದಾಪ್ಯವನ್ನು ಹೆಚ್ಚಿಸಬಹುದು. ಮಾನಸಿಕವಾಗಿ ಇತರರೊಂದಿಗೆ ಬೆರೆಯಲು ಇಚ್ಛಿಸದವರು ಸಹವರ್ತಿಗಳೊಂದಿಗೆ ಹೊರಹೋಗಲೂ ಹಿಂಜರಿಯುತ್ತಾರೆ. ಹಿಂದಿನಷ್ಟು ಒಡನಾಟವನ್ನು ಈಗ ಇಟ್ಟುಕೊಳ್ಳಲು ಸಾಧ್ಯವೋ ಅಲ್ಲವೋ ಎಂಬ ಕಳವಳ ಇವರಿಗಿರುತ್ತದೆ. ಇತರರ ಬಗ್ಗೆ ನೀವು ಯಾವ ಭಾವನೆಯನ್ನು ಹೊಂದಿದ್ದೀರಿ ಎಂಬುದರ ಬಗ್ಗೆ ಸತ್ಯವನ್ನು ಹೇಳುವುದು, ನೀವು ನಂಬುವ ಜನರೊಂದಿಗೆ ಸಮಯ ಕಳೆಯುವ ಮೂಲಕ ಪ್ರತ್ಯೇಕತೆ ಮತ್ತು ಖಿನ್ನತೆಯ ಭಾವನೆಯನ್ನು ಇಲ್ಲವಾಗಿಸಬಹುದು.


 • 5. ಉಪ್ಪಿನಕಾಯಿ ಭರಣಿ ತೆರೆಯಲು ಸಾಧ್ಯವಾಗದಿದ್ದುದಕ್ಕೆ ತಿನ್ನುವುದನ್ನೇ ಬಿಡುವುದು

  ಖಿನ್ನತೆ ಮತ್ತು ಅಸಹಾಯಕತೆಯ ಭಾವನೆ ಸ್ವಾತಂತ್ರ್ಯದ ಭಾವನೆ ಇಲ್ಲವಾಗಲು ಪ್ರಮುಖ ಕಾರಣವಾಗಿದ್ದು ಪ್ರಾಯಶಃ ಸಾವಿಗೂ ಕಾರಣವಾಗಬಹುದು. ಲ್ಯಾನ್ಸೆಟ್ ನಲ್ಲಿ ನಡೆಸಿದ ಸಂಶೋಧನೆಯೊಂದರ ಪ್ರಕಾರ, ತಮ್ಮ ಹಿಡಿತವನ್ನು ಕಳೆದುಕೊಂಡಿರುವವರು ಸಾವನ್ನಪ್ಪುವ ಸಾಧ್ಯತೆ ಈ ಹಿಡಿತ ಉಳಿಸಿಕೊಂಡಿರುವ ಇತರರಿಗಿಂತ 16% ಹೆಚ್ಚು. ಆದರೆ ಸ್ನಾಯುಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುವುದಕ್ಕೂ ಸಾವಿಗೆ ಪ್ರೇರಣೆಯಾಗುವುದಕ್ಕೂ ನಿಕಟ ಸಂಬಂಧವನ್ನು ನಿರೂಪಿಸಲು ಇನ್ನೂ ಸಂಶೋಧನೆಗಳು ನಡೆಯಬೇಕಾಗಿದೆ. ಹಾಗಾಗಿ, ನಿಮ್ಮ ಸ್ನಾಯುಗಳು ತಮ್ಮ ಶಕ್ತಿಯನ್ನು ಉಡುಗಿಸಿಕೊಳ್ಳುವವರೆಗೂ ಕಾಯದೇ ಉತ್ತಮ ಆರೋಗ್ಯ ಉಳಿಸಿಕೊಳ್ಳಲು ಆದಷ್ಟು ಮಟ್ಟಿಗೆ ವ್ಯಾಯಾಮವನ್ನು ಮಾಡಿ. ಸರಳ ವ್ಯಾಯಾಮಗಳಾದ ಮೃದುವಾದ ಚೆಂಡನ್ನು ಹಿಸುಕುವುದು, ಭಾರದೊಂದಿಗೆ ಮುಂಗೈಯನ್ನು ಮಡಚುವ ವ್ಯಾಯಾಮ ಇತ್ಯಾದಿ ಸರಳ ವ್ಯಾಯಾಮಗಳೇ ಸಾಕಾಗುತ್ತವೆ. ವಯಸ್ಸಿಗನುಗುಣವಾದ ವ್ಯಾಯಾಮವನ್ನು ತಜ್ಞರು ಸೂಚಿಸಬಲ್ಲರು. ಅಂಗೈಯ ಹಿಡಿತ ಕಳೆದುಕೊಳ್ಳುವುದು ವೃದ್ದಾಪ್ಯದ ಮಾತ್ರವಲ್ಲ, ನಿಮ್ಮ ಒಟ್ಟಾರೆ ಆರೋಗ್ಯ ಕ್ಷೀಣಿಸಿರುವ ಲಕ್ಷಣವೂ ಆಗಿದೆ.


 • 6. ನಿಮ್ಮ ನೆಚ್ಚಿನ ಪ್ಯಾಂಟ್ ಸೊಂಟದಲ್ಲಿ ಬಿಗಿಯಾಗಿದ್ದರೂ ಕಾಲುಗಳಲ್ಲಿ ಸಡಿಲವಾಗಿರುತ್ತವೆ

  ಸೊಂಟದ ಕೊಬ್ಬು ಹೆಚ್ಚುವುದು ವೃದ್ದಾಪ್ಯದ ಸೂಚನೆಯಾಗಿದೆ. ವಯಸ್ಸಿನೊಂದಿಗೆ ಸ್ನಾಯುಗಳ ಜೊತೆಗೇ ಮೂಳೆಗಳೂ ಶಿಥಿಲವಾಗತೊಡಗುತ್ತವೆ. ಪರಿಣಾಮವಾಗಿ ಎತ್ತರ ಕೊಂಚ ಕಡಿಮೆಯೂ ಆಗುತ್ತದೆ. ಇವೆಲ್ಲದರ ಒಟ್ಟಾರೆ ಪರಿಣಾಮವೆಂದರೆ ಹಿಂದೆ ಸರಿಯಾಗಿ ತೊಡಲು ಬರುತ್ತಿದ್ದ ಪ್ಯಾಂಟ್ ಈಗ ಸೊಂಟದಲ್ಲಿ ಬಿಗಿಯಾಗಿ ಕಾಲುಗಳಲ್ಲಿ ಸಡಿಲವಾಗುತ್ತದೆ. ಇದು ಇತರ ಅನಾರೋಗ್ಯದ ಸೂಚನೆಯೂ ಆಗಿರಬಹುದು. ವಿಶೇಷವಾಗಿ ಸಂಧಿವಾತ ಮತ್ತು ಮೆಟಬಾಲಿಕ್ ಸಿಂಡ್ರೋಮ್. ಈ ಬಗೆಯ ಸೂಚನೆಯನ್ನು ಸೂಚಿಸುವ ಮಹಿಳೆಯರಲ್ಲಿ ಹೃದಯದ ತೊಂದರೆ ಕಾಣಿಸಿಕೊಳ್ಳುವುದು ಇತರರಿಗಿಂತ ನಾಲ್ಕು ಪಟ್ಟು ಹೆಚ್ಚು. ಆದರೆ ಸೂಕ್ತ ವ್ಯಾಯಾಮ ಮತ್ತು ಆಹಾರಕ್ರಮ ಮತ್ತು ಜೀವನಕ್ರಮದಲ್ಲಿ ಬದಲಾವಣೆ ಪಡೆಯುವ ಮೂಲಕ ಈ ತೊಂದರೆಯನ್ನು ಇಲ್ಲವಾಗಿಸಿ ಹಿಂದಿನ ಕಾಯವನ್ನು ಪಡೆಯಲು ಸಾಧ್ಯ.


 • 7. ಚರ್ಮದ ಪ್ರಸಾದನಗಳ ಬಳಕೆ ಹೆಚ್ಚುವುದು

  ಹಿಂದಿನಷ್ಟು ನಿಮ್ಮ ತ್ವಚೆ ಸುಂದರವಾಗಿಲ್ಲ ಹಾಗೂ ತೀರಾ ಒಣ ಮತ್ತು ಪಕಳೆಯೇಳುತ್ತಿದ್ದಂತೆ ಅನ್ನಿಸಿ ಹೆಚ್ಚು ಹೆಚ್ಚು ಲೋಶನ್ ಹಚ್ಚುತ್ತಿದ್ದರೆ ಇದು ವೃದ್ದಾಪ್ಯದ ಸೂಚನೆಯಾಗಿದೆ. ವಯಸ್ಸಾದಂತೆ ತ್ವಚೆಯ ಹೊರಪದರದಲ್ಲಿ ಒಳ್ಳೆಯ ಪ್ರೋಟೀನ್ ಮತ್ತು ಕೊಬ್ಬುಗಳು ಘನಗೊಳ್ಳುತ್ತವೆ. ಇದಕ್ಕೆ stratum corneum ಎಂದು ಕರೆಯುತ್ತಾರೆ. ಈಗ ಸೂಕ್ಷ್ಮರಂಧ್ರಗಳು ಮುಚ್ಚಿ ಹೋಗಿ ಚರ್ಮದೊಳಗಿನ ಆರ್ದ್ರತೆ ಇಲ್ಲವಾಗತೊಡಗುತ್ತದೆ. ಈ ಚರ್ಮ ಬಿಸಿಲಿಗೆ ಒಡ್ಡಿದಷ್ಟೂ ಚರ್ಮ ಒಣಗುವ ಗತಿ ಹೆಚ್ಚುತ್ತದೆ. ಅಲ್ಲದೇ ಸೂಕ್ತ ಆರೈಕೆ ಒದಗಿಸದ, ಆರ್ದ್ರತೆ ಯಿಲ್ಲದ ಅಥವಾ ಅತಿ ಹೆಚ್ಚು ತೊಳೆಯುವಿಕೆಯಿಂದಲೂ ಇದು ಹೆಚ್ಚಬಹುದು. ಅತಿ ಒಣ ಮತ್ತು ಅತಿ ಶೀತಲ ವಾತಾವರಣವೂ ಇದಕ್ಕೆ ಕಾರಣವಾಗಿರಬಹುದು. ಮಧುಮೇಹ ಮತ್ತು ಅತಿ ಥೈರಾಯ್ಡ್ ಪ್ರಕ್ರಿಯೆ ಮೊದಲದ ಕೆಲವು ಅನಾರೋಗ್ಯದ ಲಕ್ಷಣವೂ ಆಗಿರಬಹುದು. ಆದರೆ ಸೂಕ್ತ ಆರೈಕೆ ಮತ್ತು ತಜ್ಞರಲ್ಲಿ ಕಾಲಕಾಲಕ್ಕೆ ಪರೀಕ್ಷಿಸಿಕೊಂಡು ಸೂಕ್ತ ಔಷಧಿ ಮತ್ತು ಪ್ರಸಾದನಗಳನ್ನು ಬಳಸುವ ಮೂಲಕ ಈ ಪ್ರಕ್ರಿಯೆಯನ್ನು ಆದಷ್ಟೂ ತಡವಾಗಿಸಬಹುದು.


 • 8. ನಿದ್ರಾ ಭಂಗ

  ವೃದ್ದಾಪ್ಯದಲ್ಲಿ ನಿದ್ರಾರಾಹಿತ್ಯವೂ ಎದುರಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಒತ್ತಡದ ರಸದೂತವಾದ ಕಾರ್ಟಿಸೋಲ್. ವಯಸ್ಸಾದಂತೆ ಕಾರ್ಟಿಸೋಲ್ ಸಹಾ ಹೆಚ್ಚುತ್ತದೆ ಹಾಗೂ ಅತಿಹೆಚ್ಚು ಮಟ್ಟದ ಕಾರ್ಟಿಸೋಲ್ ವೃದ್ದಾಪ್ಯವನ್ನು ಅತಿ ಶೀಘ್ರವಾಗಿಸುತ್ತದೆ ಹಾಗೂ ತೂಕವನ್ನೂ ಹೆಚ್ಚಿಸುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿ ಉಡುಗುವುದು ಮತ್ತು ಇತರ ತೊಂದರೆಗಳಿಗೂ ಕಾರಣವಾಗುತ್ತದೆ.


 • 9. ನಿಮ್ಮ ಮುಖ ಗುಳಿಬಿದ್ದು ಸುಕ್ಕುಸುಕ್ಕಾಗುತ್ತದೆ

  ವಯಸ್ಸಾಗುತ್ತಾ ಹೋದಂತೆ ಮೂಳೆಗಳ ಸಾಂದ್ರತೆ ಕುಗ್ಗತೊಡಗುತ್ತದೆ ಹಾಗೂ ಕೆಲವೆಡೆ ಹೆಚ್ಚೇ ಇರುತ್ತದೆ. ಮುಖದಲ್ಲಿ, ಕೆನ್ನೆಯ ಭಾಗದ ಮೂಳೆ ಒಳಧಾವಿಸುವ ಮೂಲಕ ಕೆನ್ನೆಯಲ್ಲಿ ಗುಳಿ ಬೀಳುವುದು ವೃದ್ದಾಪ್ಯದ ಸ್ಪಷ್ಟ ಸೂಚನೆಯಾಗಿದೆ. ಅಷ್ಟೇ ಅಲ್ಲ, ತುಟಿಗಳು ತೆಳುವಾಗುವುದು, ಹಣೆಯ ಎಡಭಾಗ ವಿಸ್ತಾರಗೊಳ್ಳುವುದು ಸಹಾ ಕಂಡುಬರುತ್ತದೆ. ಕೆಲವರಲ್ಲಿ ಧೂಮಪಾನ, ಅಸಮರ್ಪಕ ಆಹಾರಕ್ರಮ, ಅನಾರೋಗ್ಯಕರ ಹೃದಯದ ಕಾಳಜಿ ಅಥವಾ ಅತಿಯಾಗಿ ತೂಕ ಕಳೆದುಕೊಳ್ಳುವುದು ಮೊದಲಾದವುಗಳಿಂದ ಬೇಗನೇ ಈ ಸ್ಥಿತಿ ಎದುರಾಗಬಹುದು. ಇದಕ್ಕಾಗಿ ಮೂಳೆಗಳು ಶಿಥಿಲಗೊಳ್ಳದಂತೆ ಕಾಪಾಡಿಕೊಳ್ಳಲು ಉತ್ತಮ ಮತ್ತು ಪೂರಕ ಆಹಾರವನ್ನು ಸೇವಿಸುವುದು ಹಾಗೂ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.


 • 10. ಸುತ್ತಮುತ್ತಲಿನವರು ನಿಮ್ಮ ನಿಜವಯಸ್ಸಿಗೂ ಹೆಚ್ಚು ವಯಸ್ಸನ್ನು ಊಹಿಸತೊಡಗುವುದು

  ವ್ಯಕ್ತಿಯ ನಿಜವಯಸ್ಸನ್ನು ಊಹಿಸಲು ಆತನ ದೇಹದ ಲಕ್ಷಣಗಳನ್ನು ಗಮನಿಸಬೇಕಾಗುತ್ತದೆ. ಹಾಗಾಗಿ ದೇಹದ ಲಕ್ಷಣಗಳು ಎಷ್ಟೂ ಬಾರಿ ತಪ್ಪು ಮಾಹಿತಿ ನೀಡುವ ಮೂಲಕ ವಯಸ್ಸನ್ನು ತಪ್ಪಾಗಿ ಸೂಚಿಸಬಹುದು. ಆದರೆ ಮೆದುಳು ಮಾತ್ರ ತನ್ನ ನಿಜವಾದ ವಯಸ್ಸಿಗೆ ತಕ್ಕಂತೆ ಲಕ್ಷಣಗಳನ್ನು ಪ್ರಕಟಿಸುತ್ತದೆ. ಅಚ್ಚರಿ ಎಂಬಂತೆ ಓರ್ವ ವ್ಯಕ್ತಿಯ ವಯಸ್ಸನ್ನು ಹಲವಾರು ಜನರಿಂದ ಊಹಿಸಿ ಇವರೆಲ್ಲರ ಊಹೆಯ ಸರಾಸರಿಯನ್ನು ಪರಿಗಣಿಸಿದಾಗ ವ್ಯಕ್ತಿಯ ನಿಜ ವಯಸ್ಸಿಗೆ ಹತ್ತಿರವೇ ಆಗಿರುತ್ತದೆ.


 • 11. ಎಲ್ಲರೂ ನಿಮಗೆ ತ್ವರೆ ಮಾಡಲು ಅವಸರಿಸುತ್ತಾರೆ

  ನಿಮ್ಮ ಸ್ನೇಹಿತರೊಂದಿಗೆ ನಡೆಯತೊಡಗಿದಾಗ ನೀವು ಹಿಂದೆ ಬೀಳುತ್ತಿದ್ದೀರಾ? ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ನಡಿಗೆಯ ವೇಗವೂ ಕುಂಠಿತಗೊಳ್ಳತೊಡಗುತ್ತದೆ. ಕಾಲುಗಳ ಸ್ನಾಯುಗಳು ಉಡುಗುವುದು ಮತ್ತು ನರಗಳ ಸಂವಹನೆ ನಿಧಾನಗೊಳ್ಳುವುದು ಇದಕ್ಕೆ ಪ್ರಮುಖ ಕಾರಣ. ಇದಕ್ಕೊಂದು ಸುಲಭ ಪರಿಹಾರವಿದೆ. ನಿಮ್ಮ ನಡಿಗೆಯ ಪ್ರಮಾಣವನ್ನು ಹೆಚ್ಚಿಸಿ ಹಾಗೂ ವ್ಯಾಯಾಮವನ್ನೂ ಹೆಚ್ಚಿಸಿ ದೇಹದಾರ್ಢ್ಯವನ್ನು ಹೆಚ್ಚಿಸಿಕೊಳ್ಳಿ. ವೇಗ ತನ್ನಿಂತಾನೇ ಸರಿಹೋಗುತ್ತದೆ.


 • 12. ಚರ್ಮದಲ್ಲಿ ಚಿರತೆಯಂತೆ ಚುಕ್ಕೆಗಳು ಬೀಳುತ್ತವೆ

  ಸೂರ್ಯನ ಬೆಳಕಿಗೆ ಅತಿ ಹೆಚ್ಚು ಒಡ್ಡಿಕೊಳ್ಳುವ ಪರಿಣಾಮ ವೃದ್ದಾಪ್ಯದಲ್ಲಿ ಸ್ಪಷ್ಟವಾಗತೊಡಗುತ್ತದೆ. ನೆರಿಗೆ, ಚರ್ಮ ಜೋತುಬೀಳುವುದು, ಅಲ್ಲಲ್ಲಿ ಕಂದು ಬಣ್ಣದ ಚುಕ್ಕೆಗಳು ಮತ್ತು ಮಚ್ಚೆಗಳು ಮೂಡುವುದು ಪ್ರಾರಂಭವಾಗುತ್ತದೆ. ಯೌವನದಲ್ಲಿ ಬಿಸಿಲಿಗೆ ಒಡ್ಡಬೇಕಾಗಿದ್ದಾಗ ಸನ್ ಸ್ಕ್ರೀನ್ ಪ್ರಸಾದನ ಬಳಸದಿದ್ದ ತಪ್ಪು ಈಗ ಸಾಕ್ಷಾತ್ಕಾರವಾಗುತ್ತದೆ. ಈಗ ತಡಮಾಡದೇ ಬಿಸಿಲಿಗೆ ಹೋಗುವಾಗ ತಪ್ಪದೇ ಸನ್ ಸ್ಕ್ರೀನ್ ಹಚ್ಚಿಕೊಂಡೇ ಹೋಗಿ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸೂಕ್ತ ಉಡುಪು ಧರಿಸಿ ಹಾಗೂ ಚರ್ಮವೈದ್ಯರಲ್ಲಿ ಇತರ ಪರ್ಯಾಯಗಳ ಬಗ್ಗೆ ಸಲಹೆ ಪಡೆಯಿರಿ.


 • 13. ಮೆಟ್ಟಿಲೇರುವುದು ಪರ್ವತ ಹತ್ತಿದಷ್ಟು ಕಠಿಣವಾಗತೊಡಗುವುದು

  ಚಿಕ್ಕ ಮೆಟ್ಟಿಲುಗಳನ್ನು ಏರಲೂ ಸಾಧ್ಯವಾಗದೇ ಮೊಣಕಾಲುಗಳಲ್ಲಿ ನೋವು ಎದುರಾದರೆ (ಇದು ಅವಧಿಗೂ ಮುನ್ನು ವೃದ್ದಾಪ್ಯ ಎದುರಾಗಿರುವ ಸೂಚನೆಯೂ ಹೌದು) ವೃದ್ದಾಪ್ಯದ ಸೂಚನೆಯಾಗಿದೆ. ಆದರೆ ಹೆಚ್ಚಿನ ವೃದ್ದರಲ್ಲಿ ಈ ತೊಂದರೆ ಏಕಾಏಕಿ ಕಾಣಿಸಿಕೊಳುತ್ತದೆ ಹಾಗೂ ಮೆಟ್ಟಿಲೇರುವುದು ಮೊದಲಾದ ಚಟುವಟಿಕೆಗಳನ್ನು ಮೊದಲಿನಷ್ಟು ಸುಲಭವಾಗಿ ನಿರ್ವಹಿಸಲು ಅಸಮರ್ಥರಾಗುತ್ತಾರೆ. ಕಡಿಮೆ ಸ್ನಾಯುವಿನ ದ್ರವ್ಯರಾಶಿ ಸಣ್ಣ ಮತ್ತು ದುರ್ಬಲ ಸ್ನಾಯುಗಳಿಗೆ ಸಮನಾಗಿರುತ್ತದೆ, ನಿಮ್ಮನ್ನು ಮೆಟ್ಟಿಲುಗಳ ಮೇಲೆ ಎತ್ತುವುದು ಕಷ್ಟವಾಗುತ್ತದೆ. ಹೆಚ್ಚು ಹೆಚ್ಚು ನಡೆದಾಡುವ ಮೂಲಕ ಮತ್ತು ಕಡಿಮೆ ಕುಳಿತುಕೊಳ್ಳುವ ಮೂಲಕ ಸಕ್ರಿಯವಾದ್ದರೆ ಈ ತೊಂದರೆ ನಿವಾರಿಸಲು ಸಾಧ್ಯವಾಗುತ್ತದೆ. ಮೆಟ್ಟಿಲುಗಳನ್ನು ಹತ್ತುವುದಕ್ಕೆ ಸಂಬಂಧಿಸಿದ ಒಂದು ಉತ್ತಮ ವ್ಯಾಯಾಮವೆಂದರೆ ಕುರ್ಚಿಯಿಂದ ಎದ್ದೇಳುವುದು. ಈ ಚಲನೆಯನ್ನು ನಿಮ್ಮ ಕೈಗಳ ಸಹಾಯವಿಲ್ಲದೇ ದಿನಕ್ಕೆ 10-20 ಬಾರಿ ಮಿತಿಗೊಳಿಸಲು ಪ್ರಯತ್ನಿಸಿ, ಕೆಲವೊಮ್ಮೆ ವೇಗದೊಂದಿಗೆ ನಿರ್ವಹಿಸಿ. ಈ ಮೂಲಕ ಸ್ನಾಯುಗಳ ಶಕ್ತಿ ಮತ್ತು ಮೆಟ್ಟಿಲುಗಳನ್ನು ಏರುವ ಶಕ್ತಿಯನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.


 • ದೇಹದಿಂದ ಕೂದಲು ಶಾಶ್ವತವಾಗಿ ನಷ್ಟಗೊಳ್ಳುತ್ತದೆ - ಕೇವಲ ತಲೆಯಲ್ಲಿ ಮಾತ್ರವಲ್ಲ

  ವಯಸ್ಸಾಗುವ ಸ್ಪಷ್ಟ ಸೂಚನೆ ಎಂದರೆ ತಲೆಯಲ್ಲಿ ಬಕ್ಕತನದ ಸೂಚನೆ ಕಾಣಿಸಿಕೊಳ್ಳುವುದು. ಆದರೆ ವಯಸ್ಸಿಗನುಗುಣವಾಗಿ ಕೇವಲ ತಲೆಯಲ್ಲಿ ಮಾತ್ರವಲ್ಲ, ಅಚ್ಚರಿ ಎಂಬಂತೆ ದೇಹದ ಇತರ ಭಾಗದ ಕೂದಲು ಕೂಡಾ ಶಾಶ್ವತವಾಗಿ ನಷ್ಟಗೊಳ್ಳುತ್ತದೆ. ಯೌವ್ವನದಲ್ಲಿ ಕಂಕುಳು, ಎದೆಯ ಹರವು, ಬೆನ್ನು ಮತ್ತು ಕುಹರದ ಭಾಗಗಳಲ್ಲಿ ದಟ್ಟವಾಗಿದ್ದ ಕೂದಲು ವಯಸ್ಸಾದಂತೆ ಇಲ್ಲವಾಗತೊಡಗುತ್ತವೆ. ಕೂದಲು ಉದುರದಿದ್ದರೂ ನೆರೆತ ಕಂಡುಬರುವುದೂ ಅಕಾಲಿಕ ವೃದ್ದಾಪ್ಯದ ಕುರುಹಾಗಿದೆ. ಅಷ್ಟಕ್ಕೂ ಯಾವುದೇ ಕೊರತೆ ಇಲ್ಲದಿದ್ದರೂ ಕೂದಲೇಕೆ ಬೆಳ್ಳಗಾಗುತ್ತಿದೆ? ಇದುವರೆಗೆ ಉತ್ತರ ದೊರಕದಿರುವ ಮಿಲಿಯನ್ ಡಾಲರ್ ಪ್ರಶ್ನೆ ಇದು.


 • ದೇಹದಿಂದ ಕೂದಲು ಶಾಶ್ವತವಾಗಿ ನಷ್ಟಗೊಳ್ಳುತ್ತದೆ - ಕೇವಲ ತಲೆಯಲ್ಲಿ ಮಾತ್ರವಲ್ಲ

  ವಯಸ್ಸಾಗುವ ಸ್ಪಷ್ಟ ಸೂಚನೆ ಎಂದರೆ ತಲೆಯಲ್ಲಿ ಬಕ್ಕತನದ ಸೂಚನೆ ಕಾಣಿಸಿಕೊಳ್ಳುವುದು. ಆದರೆ ವಯಸ್ಸಿಗನುಗುಣವಾಗಿ ಕೇವಲ ತಲೆಯಲ್ಲಿ ಮಾತ್ರವಲ್ಲ, ಅಚ್ಚರಿ ಎಂಬಂತೆ ದೇಹದ ಇತರ ಭಾಗದ ಕೂದಲು ಕೂಡಾ ಶಾಶ್ವತವಾಗಿ ನಷ್ಟಗೊಳ್ಳುತ್ತದೆ. ಯೌವ್ವನದಲ್ಲಿ ಕಂಕುಳು, ಎದೆಯ ಹರವು, ಬೆನ್ನು ಮತ್ತು ಕುಹರದ ಭಾಗಗಳಲ್ಲಿ ದಟ್ಟವಾಗಿದ್ದ ಕೂದಲು ವಯಸ್ಸಾದಂತೆ ಇಲ್ಲವಾಗತೊಡಗುತ್ತವೆ. ಕೂದಲು ಉದುರದಿದ್ದರೂ ನೆರೆತ ಕಂಡುಬರುವುದೂ ಅಕಾಲಿಕ ವೃದ್ದಾಪ್ಯದ ಕುರುಹಾಗಿದೆ. ಅಷ್ಟಕ್ಕೂ ಯಾವುದೇ ಕೊರತೆ ಇಲ್ಲದಿದ್ದರೂ ಕೂದಲೇಕೆ ಬೆಳ್ಳಗಾಗುತ್ತಿದೆ? ಇದುವರೆಗೆ ಉತ್ತರ ದೊರಕದಿರುವ ಮಿಲಿಯನ್ ಡಾಲರ್ ಪ್ರಶ್ನೆ ಇದು.
ವಯಸ್ಸಾಗುತ್ತಾ ಹೋದಂತೆ ದೇಹವೂ ಜರ್ಝರಿತವಾಗುತ್ತಾ ಹೋಗುತ್ತದೆ ಹಾಗೂ ಮುಪ್ಪಿನ ಸೂಚನೆಗಳು ಕಾಣಿಸತೊಡಗುತ್ತವೆ. ಕೆಲವು ಸೂಚನೆಗಳು ನಡುವಯಸ್ಸಿನಲ್ಲಿಯೇ ಕಾಣಿಸತೊಡಗುತ್ತವೆ. ಇದರಲ್ಲಿ ಪ್ರಮುಖವಾದುದೆಂದರೆ ನೆರೆಯುವ ಕೂದಲು. ಇದೇ ರೀತಿಯ ಇತರ ಸೂಚನೆಗಳು ನಿಮ್ಮ ದೇಹಕ್ಕೆ (ಮನಸ್ಸಿಗಲ್ಲ) ವಯಸ್ಸಾಗುತ್ತಿದೆ ಎಂಬುದನ್ನು ಸೂಚಿಸುತ್ತಿದ್ದು ಸೂಕ್ತ ಕಾಳಜಿ ವಹಿಸುವ ಎಚ್ಚರಿಕೆ ನೀಡುತ್ತಿವೆ. ಬನ್ನಿ, ಇವು ಯಾವುವು ಎಂಬುದನ್ನು ನೋಡೋಣ:

   
 
ಹೆಲ್ತ್