Back
Home » ಆರೋಗ್ಯ
ಶಿಶುಗಳಿಗೆ ಎದುರಾಗುವ ನ್ಯುಮೋನಿಯಾದ ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆ
Boldsky | 12th Nov, 2019 03:19 PM
  • ಮಗುವಿಗೆ ನ್ಯುಮೋನಿಯ ಎದುರಾಗಲು ಕಾರಣಗಳೇನು?

    ಹೆಚ್ಚಿನ ಸಂದರ್ಭದಲ್ಲಿ ಇದು ಬ್ಯಾಕ್ಟೀರಿಯಾ ಅಥವಾ ವೈರಸ್‌ನ ಸೋಂಕಿನಿಂದ ಎದುರಾಗುತ್ತದೆ. ಈ ವೈರಸ್‌ಗಳನ್ನು ಹೊಂದಿರುವ ವ್ಯಕ್ತಿ ಮಗುವನ್ನು ಎತ್ತಿಕೊಂಡಾಗ ಮಗು ಈ ಸೋಂಕಿಗೆ ಸುಲಭವಾಗಿ ತುತ್ತಾಗುತ್ತದೆ.


  • ಸೋಂಕು ಹರಡುವ ಸಾಮಾನ್ಯ ಬ್ಯಾಕ್ಟೀರಿಯಾಗಳೆಂದರೆ:

    * ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ

    * ಮೈಕೋಪ್ಲಾಸ್ಮಾ ನ್ಯುಮೋನಿಯಾ. ಇದರ ಸೋಂಕಿನಿಂದ ವಾಕಿಂಗ್ ನ್ಯುಮೋನಿಯಾ ಎಂಬ ಸೌಮ್ಯ ರೂಪದ ಅನಾರೋಗ್ಯ ಎದುರಾಗುತ್ತದೆ.

    * ಗ್ರೂಪ್ ಬಿ ಬಿ ಸ್ಟ್ರೆಪ್ಟೋಕೊಕಸ್

    * ಸ್ಟ್ಯಾಫಿಲೋಕೊಕಸ್ ಆರೆಯಸ್

    * ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್ (RSV) 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.

    * ಪ್ಯಾರಾ ಇನ್‍ಫ್ಲುಯೆಂಜಾ ವೈರಸ್

    * ಇನ್‍ಫ್ಲುಯೆಂಜಾ ವೈರಸ್

    * ಅಡೆನೊವೈರಸ್

    * ಕೆಲವು ಸಂದರ್ಭಗಳಲ್ಲಿ ಶಿಲೀಂಧ್ರದ ಸೋಂಕಿನಿಂದಲೂ ನ್ಯುಮೋನಿಯಾ ಎದುರಾಗಬಹುದು.


  • ಈ ತೊಂದರೆ ಎದುರಾಗುವ ಸಾಧ್ಯತೆ ಮಕ್ಕಳಿಗೇ ಹೆಚ್ಚು ಏಕೆ?

    * ಮಗುವಿನಲ್ಲಿ ಇನ್ನೂ ರೋಗ ನಿರೋಧಕ ಶಕ್ತಿ ರೂಪುಗೊಂಡಿರದೇ ಇರುವುದು ಅಥವಾ ಕಡಿಮೆ ಶಕ್ತಿಯುತವಾಗಿರುವುದು

    * ಕ್ಯಾನ್ಸರ್ ಮೊದಲಾದ ಕಾರಣಗಳಿಂದ ರೋಗ ನಿರೋಧಕ ಶಕ್ತಿ ಕುಂಠಿತಗೊಂಡಿರುವುದು

    * ಈಗಾಗಲೇ ಇರುವ ಬೇರೊಂದು ಕಾಯಿಲೆ, ಉದಾಹರಣೆಗೆ ಅಸ್ತಮಾ ಅಥವಾ ಸಿಸ್ಟಿಕ್ ಫೈಬ್ರೋಸಿಸ್.

    * ಶ್ವಾಸನಾಳ ಮತ್ತು ಶ್ವಾಸಕೋಶದಲ್ಲಿ ತೊಂದರೆ

    * ಮಗುವಿನ ಸುತ್ತಮುತ್ತಲಿರುವವರು ಧೂಮಪಾನ ಮಾಡಿದರೆ ನ್ಯುಮೋನಿಯಾ ಆವರಿಸುವ ಸಾಧ್ಯತೆ ಅತಿ ಹೆಚ್ಚು. ಅದರಲ್ಲೂ ಮಗುವಿನ ತಾಯಿ ಧೂಮಪಾನಿಯಾಗಿದ್ದರೆ ಇದು ಗರಿಷ್ಟವಾಗಿರುತ್ತದೆ.


  • ಮಕ್ಕಳಲ್ಲಿ ಎದುರಾಗುವ ನ್ಯುಮೋನಿಯಾದ ಲಕ್ಷಣಗಳು

    ಪ್ರತಿ ಮಗುವಿನಲ್ಲೂ ಈ ಲಕ್ಷಣಗಳು ಭಿನ್ನವಾಗಿರಬಹುದು, ಕಾರಣವನ್ನು ಅವಲಂಬಿಸಿ ಇವು ಬೇರೆಬೇರೆಯಾಗಿರುತ್ತವೆ. ಸಾಮಾನ್ಯವಾಗಿ ಬ್ಯಾಕ್ಟೀರಿಯಾದಿಂದಲೇ ಹೆಚ್ಚಾಗಿ ಆವರಿಸುವಾಗ ಈ ಲಕ್ಷಣಗಳು ಕಂಡುಬರುತ್ತವೆ.

    * ಕೆಮ್ಮು ಮತ್ತು ಕಫ

    * ಕೆಮ್ಮುವಾಗ ನೋವು

    * ವಾಂತಿ ಮತ್ತು ಅತಿಸಾರ

    * ಹಸಿವಿಲ್ಲದಿರುವಿಕೆ

    * ಅತಿಯಾದ ಸುಸ್ತು

    * ಜ್ವರ

    ವೈರಸ್ ಮೂಲಕ ಎದುರಾದ ನ್ಯುಮೋನಿಯಾದ (ವೈರಲ್ ನ್ಯುಮೋನಿಯಾ) ಲಕ್ಷಣಗಳೂ ಸುಮಾರಾಗಿ ಬ್ಯಾಕ್ಟೀರಿಯಾದ ಸೋಂಕಿನಿಂದ ಎದುರಾದ ನ್ಯುಮೋನಿಯಾದಂತೆಯೇ ಇರುತ್ತವೆ. ಆದರೆ ವೈರಲ್ ನ್ಯುಮೋನಿಯಾದಲ್ಲಿ ಉಸಿರಾಟದ ತೊಂದರೆ ನಿಧಾನವಾಗಿ ಆವರಿಸತೊಡಗುತ್ತದೆ. ಕೆಲವೊಮ್ಮೆ ಉಸಿರಾಟದಲ್ಲಿ ಸೀಟಿ ಹೊಡೆದಂತೆ ಸದ್ದು ಮತ್ತು ಕೆಮ್ಮು ಅತಿ ಹೆಚ್ಚಾಗಬಹುದು. ವೈರಲ್ ನ್ಯುಮೋನಿಯಾ ಎದುರಾದರೆ ಈ ಮಗುವಿಗೆ ಬ್ಯಾಕ್ಟೀರಿಯಾದ ನ್ಯುಮೋನಿಯಾ ಎದುರಾಗುವ ಸಾಧ್ಯತೆಗಳೂ ಹೆಚ್ಚುತ್ತವೆ.


  • ಈ ಲಕ್ಷಣಗಳ ಜೊತೆಗೇ ಮಗುವಿಗೆ ಕೆಳಗಿನ ಲಕ್ಷಣಗಳೂ ಕಾಣಿಸಿಕೊಳ್ಳಬಹುದು

    * ನಡುಕ

    * ಉಸಿರಾಟ ತೀವ್ರಗತಿಯಲ್ಲಿ ಮತ್ತು ಕಷ್ಟಕರವಾಗುವುದು

    * ತಲೆನೋವು

    * ಗೊಂದಲದಲ್ಲಿರುವುದು

    ಈ ಲಕ್ಷಣಗಳು ಬೇರೆ ಕಾಯಿಲೆಯ ಲಕ್ಷಣಗಳಿಗೂ ಹೋಲುವ ಕಾರಣ ವೈದ್ಯರಲ್ಲಿ ಸರಿಯಾದ ಕಾರಣವನ್ನು ಕಂಡುಕೊಳ್ಳಲು ಆದಷ್ಟೂ ಬೇಗನೇ ಕರೆದೊಯ್ಯಬೇಕು.


  • ನ್ಯುಮೋನಿಯಾದ ಪತ್ತೆ ಹಚ್ಚುವಿಕೆ

    ವೈದ್ಯರು ಮಗುವಿನ ಆರೋಗ್ಯದ ಇತಿಹಾಸ ಪಡೆಯುವ ಜೊತೆಗೇ ಮೂಲ ಆರೋಗ್ಯ ಪರೀಕ್ಷೆಯನ್ನು ನಡೆಸುತ್ತಾರೆ. ಅನುಮಾನಗಳನ್ನು ಪರಿಹರಿಸಿಕೊಳ್ಳಲು ಕೆಲವು ಪರೀಕ್ಷೆಗಳನ್ನು ಬರೆದು ನೀಡುತ್ತಾರೆ. ಅವೆಂದರೆ:

    * ಎದೆಯ ಎಕ್ಸ್ ರೇ: ಇದರಿಂದ ಎದೆಯ ಭಾಗದ ಮೂಳೆ, ಅಂಗಗಳು ಮತ್ತು ಶ್ವಾಸಭಾಗದಲ್ಲಿ ಎದುರಾಗಿರುವ ತೊಂದರೆಗಳು ಗೊತ್ತಾಗುತ್ತವೆ.

    * ರಕ್ತ ಪರೀಕ್ಷೆ: ಮಗುವಿಗೆ ಎದುರಾದ ಸೋಂಕಿನ ಮೂಲ ಗೊತ್ತಾಗುತ್ತದೆ. ವಿಶೇಷವಾಗಿ ಅಪಧಮನಿಯ ಗ್ಯಾಸ್ ರಕ್ತಪರೀಕ್ಷೆಯಿಂದ ರಕ್ತದಲ್ಲಿ ಎಷ್ಟು ಇಂಗಾಲದ ಡೈ ಆಕ್ಸೈಡ್ ಇರಬೇಕು ಎಂಬುದು ತಿಳಿದುಬರುತ್ತದೆ.

    * ಕಫಪರೀಕ್ಷೆ: ಶ್ವಾಸಕೋಶದಿಂದ ಕೆಮ್ಮಿನ ಮೂಲಕ ಹೊರದಬ್ಬಲ್ಪಟ್ಟ ಕಫದ ಪರೀಕ್ಷೆಯಿಂದ ಮಗುವಿಗೆ ಸೋಂಕು ಇದೆಯೇ? ಇದ್ದರೆ ಎಷ್ಟು ಮಟ್ಟಿಗಿದೆ, ಇದಕ್ಕೆ ಕಾರಣವಾದ ವೈರಸ್ ಅಥವಾ ಬ್ಯಾಕ್ಟೀರಿಯಾ ಯಾವುದು ಎಂದು ತಿಳಿದುಬರುತ್ತದೆ. ಆದರೆ ಮಗುವಿನ ಕಫ ಸಂಗ್ರಹಿಸುವುದು ಅಷ್ಟು ಸುಲಭವಲ್ಲದ ಕಾರಣ, ಅನಿವಾರ್ಯವಲ್ಲದ ಹೊರತು ಈ ಪರೀಕ್ಷೆಯನ್ನು ಮಾಡುವುದಿಲ್ಲ.

    * ಪಲ್ಸ್ ಆಕ್ಸಿಮೆಟ್ರೆ (Pulse oximetry): ಇದರಿಂದ ರಕ್ತದಲ್ಲಿ ಆಮ್ಲಜನಕ ಎಷ್ಟಿದೆ ಎಂದು ಪರೀಕ್ಷಿಸಲಾಗುತ್ತದೆ. ಇದು ಬಿಸಿ ಅಥವಾ ನೋವುರಹಿತ ಪರೀಕ್ಷೆಯಾಗಿದ್ದು ಉಪಕರನದ ಒಂದು ಭಾಗವನ್ನು ಮಗುವಿನ ಕೈ ಅಥವಾ ಕಾಲುಬೆರಳಿನ ತುದಿಗೆ ಅಳವಡಿಸಿ ಬೆಳಕಿನ ಮೂಲಕ ರಕ್ತದ ಪರೀಕ್ಷೆಯನ್ನು ಮಾಡಲಾಗುತ್ತದೆ.

    * ಎದೆಯ ಸಿಟಿ ಸ್ಕ್ಯಾನ್: ಈ ಮೂಲಕ ಎದೆಯಲ್ಲಿ ಕಟ್ಟಿಕೊಂಡಿರುವ ಕಫ ಮತ್ತು ಇತರ ತೊಂದರೆಗಳನ್ನು ಕಾಣಬಹುದು. ಆದರೆ ಇದು ಅಪರೂಪಕ್ಕೆ ನಡೆಸಲಾಗುತ್ತದೆ.

    * ಬ್ರಾಂಖೋಸ್ಕೋಪಿ: ಈ ಪರೀಕ್ಷೆಯ ಮೂಲಕ ಶ್ವಾಸಕೋಶದ ಒಳಗೆ ಎದುರಾಗಿರುವ ತೊಂದರೆಗಳನ್ನು ಕಾಣಲಾಗುತ್ತದೆ. ಆದರೆ ಇದನ್ನು ಸಹಾ ಅಪರೂಪಕ್ಕೆ ನಡೆಸಲಾಗುತ್ತದೆ.

    * ಪ್ಲೀಯುರಲ್ ಫ್ಲೂಯಿಡ್ ಕಲ್ಚರ್: ಎದೆ ಮತ್ತು ಶ್ವಾಸಕೋಶದ ನಡುವೆ ಇರುವ ಭಾಗದಲ್ಲಿ ನ್ಯುಮೋನಿಯಾ ಮೂಲಕ ಸಂಗ್ರಹಗೊಂಡಿರುವ ದ್ರವವನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತದೆ. ಈ ದ್ರವ ಶ್ವಾಸಕೋಶದ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾದ ಸೋಂಕಿಗೆ ಒಳಗಾಗಿರಬಹುದು ಅಥವಾ ಇದು ಕೇವಲ ಶ್ವಾಸಕೋಶದ ಉರಿಯೂತದಿಂದಲೂ ಎದುರಾಗಿರಬಹುದು.


  • ಮಗುವಿಗೆ ಎದುರಾಗಿರುವ ಚಿಕಿತ್ಸೆ ಹೇಗೆ?

    ಮೊದಲಾಗಿ ಮಗುವಿಗೆ ಎದುರಾದ ನ್ಯುಮೋನಿಯಾಕ್ಕೆ ಕಾರಣವಾಗಿರುವುದು ಏನು ಎಂಬುದನ್ನು ಕಂಡುಕೊಂಡು ಇದಕ್ಕೆ ವಿರುದ್ಧ ಪ್ರಭಾವ ಬೀರುವ ಪ್ರತಿಜೀವಕ ಔಷಧಿಗಳನ್ನು (ಆಂಟಿ ಬಯಾಟಿಕ್) ನೀಡಲಾಗುತ್ತದೆ. ಆದರೆ ಇತರ ವೈರಸ್ಸುಗಳಂತೆ ಈ ವೈರಸ್‌ಗಳಿಗೂ ಯಾವುದೇ ಖಚಿತ ಚಿಕಿತ್ಸೆ ಇಲ್ಲದ ಕಾರಣ ಈ ಲಕ್ಷಣಗಳನ್ನು ಕಡಿಮೆ ಮಾಡಲು ಸೂಕ್ತ ಔಷಧಿಗಳನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಮಗುವಿನ ರೋಗ ನಿರೋಧಕ ಶಕ್ತಿಯೇ ಈ ವೈರಸ್‌ಗಳ ವಿರುದ್ಧ ಸ್ವತಃ ರೂಪುಗೊಂಡು ಸೋಂಕಿನಿಂದ ರಕ್ಷಿಸುತ್ತದೆ. ಇದಕ್ಕೆ ನೆರವಾಗಲು ವೈದ್ಯರು ವೈರಸ್ ನಿರೋಧಕ ಔಷಧಿಗಳನ್ನು ನೀಡುತ್ತಾರೆ.


  • ಇತರ ಚಿಕಿತ್ಸೆಗಳೆಂದರೆ

    * ಸಾಕಷ್ಟು ವಿಶ್ರಾಂತಿ

    * ಹೆಚ್ಚು ದ್ರವಾಹಾರ ನೀಡುವುದು

    * ಮಗುವಿನ ಕೋಣೆಯಲ್ಲಿ ತಂಪಾದ ಆದ್ರತೆ ನೀಡುವ ಉಪಕರಣ ಅಳವಡಿಸುವುದು

    * ಜ್ವರ ಇಳಿಯಲು ಅಸೆಟೋಮೆನೋಫಿನ್ ಔಷಧಿ

    * ಕೆಮ್ಮು ಕಡಿಮೆಯಾಗಲು ಕೆಮ್ಮು ನಿವಾರಣಾ ಔಷಧಿ

    * ಒಂದು ವೇಳೆ ಮಗುವಿಗೆ ಉಸಿರಾಟದ ತೊಂದರೆ ತೀವ್ರವಾಗಿದ್ದರೆ ಮಗುವನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಇವುಗಳೆಂದರೆ:

    ನರಗಳ ಮೂಲಕ ಪ್ರತಿಜೀವಕ ದ್ರವ ನೀಡುವುದು ಹಾಗೂ ಬಾಯಿಯ ಮೂಲಕ ಪ್ರತಿಜೀವಕ ಔಷಧಿ ನೀಡುವುದು

    * ಒಂದು ವೇಳೆ ಮಗುವಿಗೆ ದ್ರವಾಹಾರ ಕುಡಿಯಲು ಕಷ್ಟವಾಗುತ್ತಿದ್ದರೆ ನರಗಳ ಮೂಲಕ ಸೂಕ್ತ ಪೋಷಕಾಂಶಗಳನ್ನು ಒದಗಿಸುವುದು

    * ಆಕ್ಸಿಜನ್ ಮಾಸ್ಕ್ ಮೂಲಕ ಆಮ್ಲಜನಕದ ಪೂರೈಕೆ

    * ಮಗುವಿನ ಮೂಗು ಮತ್ತು ಗಂಟಲಿನಿಂದ ಆದಷ್ಟೂ ಪ್ರಮಾಣದಲ್ಲಿ ಕಫವನ್ನು ಹೊರತೆಗೆಯುವುದು

    * ಉಸಿರಾಟ ಸರಾಗವಾಗಿಸಲು ಸೂಕ್ತ ಉಪಕರಣಗಳನ್ನು ಅಳವಡಿಸುವುದು


  • ನ್ಯುಮೋನಿಯಾ ಉಲ್ಬಣಗೊಂಡರೆ ಮಗುವಿಗೆ ಎದುರಾಗುವ ಅಪಾಯಗಳೇನು?

    ನ್ಯುಮೋನಿಯಾ ಉಲ್ಬಣಾವಸ್ಥೆ ತಲುಪಿದರೆ ಗಂಭೀರ ಸ್ವರೂಪದ ಅನಾರೋಗ್ಯ ಎದುರಾಗಬಹುದು. ಇವುಗಳಲ್ಲಿ ಪ್ರಮುಖವಾದವು:

    ಉಸಿರಾಡಲು ಅತೀವ ಕಷ್ಟವಾಗುವುದು, ಬ್ಯಾಕ್ಟೀರಿಯಾ ಈಗ ರಕ್ತಕ್ಕೆ ದಾಟಿಕೊಂಡಿರುವುದು


  • ಮಕ್ಕಳಲ್ಲಿ ನ್ಯುಮೋನಿಯಾ ಎದುರಾಗದಂತೆ ತಡೆಗಟ್ಟುವ ಕ್ರಮಗಳೇನು?

    Pneumococcal pneumonia ಎಂಬ ಸೋಂಕನ್ನು ತಡೆಯಲು ಲಸಿಕೆ ಲಭ್ಯವಿದ್ದು ಇದು ಸುಮಾರು ಹದಿಮೂರು ಬಗೆಯ Pneumococcal pneumoniaದಿಂದ ರಕ್ಷಣೆ ಒದಗಿಸುತ್ತದೆ. ಮಗುವಿಗೆ ಎರಡು ತಿಂಗಳಾಗುತ್ತಿದ್ದಂತೆಯೇ ಲಸಿಕೆಗಳನ್ನು ಕಾಲಕಾಲಕ್ಕೆ ಒದಗಿಸುವಂತೆ ವೈದ್ಯರು ಸಲಹೆ ಮಾಡುತ್ತಾರೆ. ಈ ಬಗ್ಗೆ ನಿಮ್ಮ ವೈದ್ಯರಲ್ಲಿ ಸಲಹೆ ಪಡೆದು ಅಗತ್ಯವಿರುವ ಲಸಿಕೆಗಳನ್ನು ಹಾಕಿಸಬೇಕು. ಎರಡು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆ ನ್ಯುಮೋನಿಯಾ ತಗಲುವ ಸಾಧ್ಯತೆ ಹೆಚ್ಚಿದ್ದರೆ ಇದಕ್ಕೂ ಒಂದು ಲಸಿಕೆ ಲಭ್ಯವಿದ್ದು ಹಾಕಿಸುವುದು ಒಳ್ಳೆಯದು. ಅಲ್ಲದೇ ಮಗುವಿನ ಆರೋಗ್ಯಕ್ಕೆ ಅಗತ್ಯವಿರುವ ಇತರ ಎಲ್ಲಾ ಲಸಿಕೆಗಳನ್ನು ಸಮಯ ಸಮಯಕ್ಕೆ ಸರಿಯಾಗಿ ಹಾಕಿಸಿಕೊಳ್ಳುವುದನ್ನು ಮರೆಯಬಾರದು. ಇದರಲ್ಲಿ ವಾರ್ಷಿಕ ಫ್ಲೂ ಲಸಿಕ ಅತ್ಯಂತ ಮುಖ್ಯವಾಗಿದೆ. ಕೆಲವೊಮ್ಮೆ ಫ್ಲೂ ಅಥವಾ ವ್ಹೂಪಿಂಗ್ ಕಫ್ ಎಂಬ ಕೆಮ್ಮಿನಿಂದಲೂ ಎದುರಾಗಬಹುದು.

    ಮನೆಯಲ್ಲಿ ಸೂಕ್ತ ಸ್ವಚ್ಛತೆ ಕಾಪಾಡುವ ಮೂಲಕ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮಕ್ಕಳಲ್ಲಿ ಆರೋಗ್ಯದ ಬಗೆಗಿನ ಕೆಲವು ಅಭ್ಯಾಸಗಳನ್ನು ಮೂಡಿಸಿಕೊಳ್ಳಲು ಕಲಿಸಬೇಕು. ಸೀನುವಾಗ ಕೈಗಳನ್ನು ಮೂಗು ಮತ್ತು ಬಾಯಿಗೆ ಅಡ್ಡ ಹಿಡಿಯುವುದು, ಬಳಿಕ ಕೈಗಳನ್ನು ತೊಳೆದುಕೊಳ್ಳುವುದು, ಆಗಾಗ ಕೈಗಳನ್ನು ತೊಳೆದುಕೊಳ್ಳುತ್ತಾ ಇರುವುದು, ಎಲ್ಲಾ ಬಗೆಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮೊದಲಾದವುಗಳನ್ನು ಮಕ್ಕಳಿಗೆ ಕಲಿಸಬೇಕು.

    pneumococcal pneumonia ಬಾರದಂತೆ ತಡೆಯುವ ಎರಡು ಲಸಿಕೆಗಳು ಲಭ್ಯವಿದ್ದು ಮಕ್ಕಳ ವಯಸ್ಸಿಗನುಗುಣವಾಗಿ ಮತ್ತು ಇತರ ಆರೋಗ್ಯದ ಮಾಹಿತಿಯನ್ನು ಆಧರಿಸಿ ನೀಡಲಾಗುತ್ತದೆ. ಈ ಬಗ್ಗೆ ಮಕ್ಕಳ ತಜ್ಞರಲ್ಲಿ ಸಲಹೆ ಪಡೆದು ಸೂಕ್ತ ಲಸಿಕೆಗಳನ್ನು ಹಾಕಿಸಬೇಕು.


  • ಮಕ್ಕಳ ತಜ್ಞರಲ್ಲಿ ಯಾವಾಗ ಭೇಟಿ ಮಾಡಬೇಕು?

    ಒಂದು ವೇಳೆ ಮಕ್ಕಳಿಗೆ ಎದುರಾಗಿರುವ ಅನಾರೋಗ್ಯದ ಯಾವುದೇ ಲಕ್ಷಣಗಳು ಹೆಚ್ಚುತ್ತಿದೆ ಎನಿಸಿದರೆ ತಕ್ಷಣವೇ ಭೇಟಿ ಮಾಡಬೇಕು. ಅಥವಾ ಕೆಳಗಿನವುಗಳಲ್ಲಿ ಯಾವುದೇ ಕಂಡುಬಂದರೂ ಭೇಟಿ ಮಾಡಿ:

    ಕೆಲವು ದಿನಗಳಾದರೂ ಜ್ವರ ಇಳಿಯದೇ ಇದ್ದರೆ, ಉಸಿರಾಟ ಕಷ್ಟಕರವಾಗಿದ್ದರೆ, ಇದುವರೆಗೆ ಗಮನಿಸದಿದ್ದ ಲಕ್ಷಣಗಳು ಕಂಡುಬಂದರೆ, ಉದಾಹರಣೆಗೆ ಕುತ್ತಿಗೆ ಪೆಡಸಾಗುವುದು ಅಥವಾ ಮೂಳೆಗಳ ಗಂಟುಗಳು ಊದಿಕೊಳ್ಳುವುದು, ಸಾಕಷ್ಟು ದ್ರವಾಹಾರ ಸೇವಿಸಲು ಕಷ್ಟವಾಗುವುದು ಅಥವಾ ಕುಡಿಯದೇ ಇರುವುದು.


  • ಮಕ್ಕಳ ನ್ಯುಮೋನಿಯಾ ಬಗ್ಗೆ ಕೆಲವು ಅಗತ್ಯ ಮಾಹಿತಿಗಳು:

    ನ್ಯುಮೋನಿಯಾ ಶ್ವಾಸಕೋಶದ ಸೋಂಕಿಗೆ ಸಂಬಂಧಿಸಿದ್ದು ಇದು ಸೌಮ್ಯ ಅಥವಾ ಗಂಭೀರವಾಗಿರಬಹುದು

    ನ್ಯುಮೋನಿಯಾ ಬ್ಯಾಕ್ಟೀರಿಯಾ, ವೈರಸ್ ಅಥವಾ ಶಿಲೀಂಧ್ರದ ಸೋಂಕಿನಿಂದ ಎದುರಾಗಬಹುದು

    ಪ್ರಮುಖ ಲಕ್ಷಣಗಳೆಂದರೆ ಜ್ವರ, ಕೆಮ್ಮು, ಸುಸ್ತು ಮತ್ತು ಎದೆಯಲ್ಲಿ ನೋವು

    ನ್ಯುಮೋನಿಯಾದ ಕಾರಣವನ್ನು ಆಧರಿಸಿ ಚಿಕಿತ್ಸೆ ನಿರ್ಧರಿಸಲಾಗುತ್ತದೆ.

    ಕೆಲವು ಬಗೆಯ ನ್ಯುಮೋನಿಯಾ ಬಾರದಂತೆ ಲಸಿಕೆಗಳನ್ನು ಹಾಕಿಸಿಕೊಳ್ಳಬಹುದು.

    ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕವೂ ಹಲವಾರು ಸೋಂಕುಗಳಿಂದ ರಕ್ಷಣೆ ಪಡೆಯಬಹುದು.




ಈಗತಾನೇ ಹುಟ್ಟಿದ ಮಗು ಮಾತ್ರವೇ ಈ ಜಗತ್ತಿನಲ್ಲಿ ಅತ್ಯಂತ ನಿಷ್ಕಲ್ಮಶ, ಸೋಂಕುರಹಿತ ಜೀವಿಯಾಗಿದೆ. ಈ ಜಗತ್ತಿನಲ್ಲಿ ಮೊದಲ ಉಸಿರು ತೆಗೆದುಕೊಂಡ ಕ್ಷಣದಿಂದ ಮಗು ಹೊಸ ಹೊಸ ರೋಗಕಾರಕಗಳನ್ನು ಎದುರಿಸಬೇಕಾಗುತ್ತದೆ. ಗಾಳಿ, ನೀರು, ಆಹಾರ ಮೊದಲಾದ ಎಲ್ಲಾ ಮಾಧ್ಯಮಗಳಿಂದ ಮಗುವಿಗೆ ಹೊಸದಾಗಿರುವ ಬ್ಯಾಕ್ಟೀರಿಯಾ, ಕ್ರಿಮಿಗಳು ಹಾಗೂ ಇತರ ಸೋಂಕುಕಾರಕ ವೈರಸ್‌ ಗಳು ಧಾಳಿಯಿಡುತ್ತವೆ. ಈ ಕ್ಷಣದಿಂದಲೇ ಮಗುವಿನ ರೋಗ ನಿರೋಧಕ ವ್ಯವಸ್ಥೆಯೂ ಈ ನಿಟ್ಟಿನಲ್ಲಿ ಹೋರಾಡಲು ಪ್ರಾರಂಭಿಸುತ್ತದೆ.

ಇದೇ ಕಾರಣಕ್ಕೆ ಬಾಣಂತಿ ಮತ್ತು ಮಗು ಇರುವ ಕೋಣೆಗೆ ಪ್ರಾರಂಭದ ದಿನಗಳಲ್ಲಿ ಹೆಚ್ಚಿನ ಜನರಿಗೆ ನೋಡಲು ವೈದ್ಯರು ಅನುಮತಿ ನೀಡುವುದಿಲ್ಲ. ರೋಗ ನಿರೋಧಕ ವ್ಯವಸ್ಥೆ ಈ ದಿನದಿಂದ ಹಿಡಿದು ಹೆಚ್ಚೂ ಕಡಿಮೆ ವೃದ್ದಾಪ್ಯದವರೆಗೂ ಬಲಗೊಳ್ಳುತ್ತಲೇ ಇರುತ್ತದೆ. ಅಂದರೆ, ಪ್ರತಿಬಾರಿಯೂ ಹೊಸ ಕ್ರಿಮಿಯ ಧಾಳಿಯಿಂದ ಆ ಕ್ರಿಮಿಗೆ ನಮ್ಮ ರೋಗ ನಿರೋಧಕ ಶಕ್ತಿ ಪ್ರತಿರೋಧ ಗುಣವನ್ನು ಉತ್ಪಾದಿಸಿಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಸುಮಾರು ಐದು ವರ್ಷದವರೆಗೂ ಮಕ್ಕಳಿಗೆ ವಿವಿಧ ಬಗೆಯ ರೋಗಗಳು ಎದುರಾಗುತ್ತಾ ಇರುತ್ತವೆ. ನ್ಯುಮೋನಿಯಾ ಈ ಬಗೆಯ ಕಾಯಿಲೆಗಳಲ್ಲೊಂದು. ಈ ರೋಗದಿಂದ ಮಗುವಿನ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ.

   
 
ಹೆಲ್ತ್