Back
Home » ಆರೋಗ್ಯ
ಈ ಯೋಗಾಸನಗಳನ್ನು ಮಾಡಿದರೆ ಮೂಲವ್ಯಾಧಿ ಸಮಸ್ಯೆ ಕಾಡಲ್ಲ
Boldsky | 19th Nov, 2019 05:05 PM
 • ಪಶ್ಚಿಮತ್ತೋಸನ

  ಜಮಖಾನೆ ಮೇಲೆ ಅಂಗಾತ ಮಲಗಿ, ನಂತರ ನಿಧಾನಕ್ಕೆ ಎದ್ದು ಕೂತುಕೊಳ್ಳಿ, ಕಾಲುಗಳು ಮುಂದಕ್ಕೆ ಚಾಚಿಕೊಂಡಂತೆ ಇರಲಿ. ಈಗ ನಿಧಾನಕ್ಕೆ ಉಸಿರನ್ನು ತೆಗೆದುಕೊಂಡು ಎರಡು ಕೈಗಳನ್ನು ಮೇಲಕ್ಕೆ ಎತ್ತಿ, ನಿಧಾನಕ್ಕೆ ಮುಂದೆಕ್ಕೆ ಬಾಗಿ ಕಾಲಿನ ಮಣಿಗಂಟನ್ನು ಹಿಡಿಯಿರಿ, ಹಣೆ ಮೊಣಕಾಲಿಗೆ ತಾಗುವಂತಿರಲಿ. 5 ಸೆಕೆಂಡ್‌ ಇದೇ ಭಂಗಿಯಲ್ಲಿ ಇದ್ದು ನಂತರ ತಲೆಯನ್ನು ನಿಧಾನಕ್ಕೆ ಮೇಲಕ್ಕೆ ಎತ್ತಿ.

  ಪ್ರಯೋಜನಗಳು

  ಈ ಆಸನ ಮಾಡುವುದರಿಂದ ಸ್ನಾಯುಗಳು ಬಲವಾಗುತ್ತವೆ ಹಾಗೂ ಜಠರದ ಕೆಳಭಾಗದಲ್ಲಿರುವ ಎಲ್ಲಾ ತರಹದ ವಾಯುವು ಹೊರದೂಡಲ್ಪಡುತ್ತದೆ, ಇದನ್ನು ದಿನಾ ಅಭ್ಯಾಸ ಮಾಡುವುದರಿಂದ ಮೂಲವ್ಯಾಧಿ ಸಮಸ್ಯೆ ಗುಣವಾಗುವುದು.


 • ವಜ್ರಾಸನ

  ವಜ್ರಾಸನ ಮಾಡಲು ಮೊದಲು ಸುಖಾಸನ ಸ್ಥಿತಿಯಲ್ಲಿ ನೇರವಾಗಿ ಕುಳಿಕೊಳ್ಳಬೇಕು, , ಕಾಲುಗಳನ್ನು ಒಂದಾದ ಬಳಿಕ ಒಂದರಂತೆ ಮುಂದಕ್ಕೆ ಚಾಚಿ, ನಂತರ ಮಡಚಿ, ತೊಡೆಗಳು ಕಾಲಿನ ಮೇಲೆ ಬರುವಂತೆ ಕೂತು ಕೊಳ್ಳಿ, ಈಗ ಕೈಗಳನ್ನು ತೊಡೆಯ ಮೇಲಿಟ್ಟು ನಿಧಾನಕ್ಕೆ ಉಸಿರು ತೆಗೆದು, ನಿಧಾನಕ್ಕೆ ಬಿಡಿ. ಮಡಚಿ, ಕೈಯಗಳನ್ನು ತೊಡೆಯ ಮೇಲೆ ಇಟ್ಟು ಕುಳಿತು ನಿಧಾನಕ್ಕೆ ಉಸಿರು ಎಳೆದು ಬಿಡಿ.

  ಪ್ರಯೋಜನಗಳು

  ಅಜೀರ್ಣ ಸಮಸ್ಯೆ ಮಲಬದ್ಧತೆಗೆ ಮೂಲ ಕಾರಣ, ಮಲಬದ್ಧತೆ ಉಂಟಾದರೆ ಮೂಲವ್ಯಾಧಿನ ಸಮಸ್ಯೆ ಕಾಡುತ್ತದೆ, ಅಜೀರ್ಣ ಇರುವವರು ಊಟವಾದ ಬಳಿಕ ಸ್ವಲ್ಪ ಹೊತ್ತು ವಜ್ರಾಸನದಲ್ಲಿ ಕೂತರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದರಿಂದ ಮಲಬದ್ಧತೆ ಕಾಡುವುದಿಲ್ಲ. ಇನ್ನು ಈ ವ್ಯಾಯಾಮ ಮಾಡುವುದರಿಂದ ಕಿಬ್ಬೊಟ್ಟೆ ಸ್ನಾಯುಗಳು ಬಲವಾಗುತ್ತದೆ. ಕಾಲಿನ ಸ್ನಾಯುಗಳು ಹಾಗೂ ಮಣಿಗಂಟು ಬಲವಾಗುತ್ತದೆ. ಆದರೆ ಮಂಡಿಗೆ ಏನಾದರೂ ಪೆಟ್ಟಾಗಿದ್ದರೆ ಈ ಅಸನ ಮಾಡಬೇಡಿ.


 • ಮಯೂರಾಸನ

  ಮಯೂರ ಎಂದರೆ ನವಿಲು ಎಂದರ್ಥ, ತನ್ನ ಕಾಲುಗಳನ್ನು ನೆಲಕ್ಕೆ ಊರಿ, ಇಡೀ ಶರೀರವನ್ನು ಭೂಮಿಗೆ ಸಮನಾಂತರವಾಗಿ ಇಟ್ಟುಕೊಳ್ಳುವ ನವಿಲಿನ ಒಂದು ಭಂಗಿಯ ಆಸನ ಇದಾಗಿದೆ. ಈ ಆಸನ ಮಾಡಲು ಎರಡು ಹಸ್ತಗಳನ್ನು ನೆಲಕ್ಕೆ ತಾಗಿಸಬೇಕು, ಕೈ ಬೆರಳುಗಳನ್ನು ಮುಂದೆಕ್ಕೆ ಇಡಬೇಕು, ಈಗ ಅಂಗೈಯನ್ನು ನೆಲೆಕ್ಕೆ ಒತ್ತಿ, ಮೊಣಕೈಗಳು ಹೊಟ್ಟೆಗೆ ತಾಗುವಂತಿರಲಿ, ಈಗ ಎರಡು ಕಾಲುಗಳನ್ನು ಮೇಲಕ್ಕೆ ಎತ್ತಿ, ಪಾದಗಳು ಹಿಂದಕ್ಕೆ ಚಾಚಿರಲಿ, ಎದೆಯ ಭಾಗ ನೆಲಕ್ಕೆ ಮುಟ್ಟಬಾರದು, ಇಡೀ ಶರೀರದ ಭಾರ ಹಸ್ತಗಳ ಮೇಲೆ ಬೀಳುವಂತೆ ನಿಂತುಕೊಳ್ಳುವುದು.

  ಪ್ರಯೋಜನಗಳು

  ಇದು ಮಧುಮೇಹಕ್ಕೆ ಉತ್ತಮ ಆಸನವಾಗಿದ್ದು, ಮೂಲವ್ಯಾಧಿ ಗುಣಪಡಿಸುವಲ್ಲಿಯೂ ಸಹಕಾರಿ. ಈ ಆಸನ ಮಾಡುವುದರಿಂದ ಜೀರ್ಣಕ್ರಿಯೆ ಸರಾಗವಾಗಿವಾಗುವುದು, ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ಇನ್ನು ಈ ಆಸನ ಮಾಡುವುದರಿಂದ ತೋಳುಗಳಿಗೆ ಹೆಚ್ಚು ಬಲ ಸಿಗುತ್ತದೆ. ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವಲ್ಲಿಯೂ ಇದು ಸಹಕಾರಿ.


 • ಪವನ ಮುಕ್ತಾಸನ

  ಪವನ ಅಂದರೆ ವಾಯು ಎಂದರ್ಥ, ದೇಹದಲ್ಲಿನ ವಾಯು ಹೊರ ಹಾಕುವಲ್ಲಿ ಈ ಆಸನ ಸಹಾಯ ಮಾಡುತ್ತದೆ. ಈ ಆಸನ ಮಾಡಲು ಬೆನ್ನ ಮೇಲೆ ನೇರವಾಗಿ ಮಲಗಬೇಕು, ನಂತರ ಎರಡು ಕಾಲುಗಳನ್ನು ಮಂಡಿಗಳು ಹೊಟ್ಟೆಗೆ ತಾಗುವಂತೆ ಮಡಚಬೇಕು. ಕೈಗಳಿಂದ ಕಾಲುಗಳನ್ನು ಹಿಡಿದುಕೊಂಡಿರಬೇಕು. ಈಗ ತಲೆಯನ್ನು ಮೇಲಕ್ಕೆ ಎತ್ತಿ ಮಂಡಿಗೆ ತಾಗಿಸಲು ಪ್ರಯತ್ನಿಸಿ, ಈ ಸಂದರ್ಭದಲ್ಲಿ ವಾಯು ಬಂದರೆ ತಡೆ ಹಿಡಿಯಲು ಪ್ರಯತ್ನಿಸಬೇಡಿ.

  ಪ್ರಯೋಜನಗಳು

  ಈ ಆಸನ ಮಾಡಿದಾಗ ಶರೀರದಲ್ಲಿರುವ ಗಾಳಿಯನ್ನು ಹೊರ ಹಾಕತ್ತದೆ, ಮಲಬದ್ಧತೆ, ಅಜೀರ್ಣ ಸಮಸ್ಯೆ ಇಲ್ಲವಾಗಿಸುತ್ತದೆ, ಆದ್ದರಿಂದ ಮೂಲವ್ಯಾಧಿ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ.


 • ಹಾಲಾಸನ

  ಹಾಲಾಸನ ಶಿರಸಾನ ಅಥವಾ ಸರ್ವಾಂಗಾಸನ ಭಂಗಿಯನ್ನು ಹೋಲುವ ಆಸನವಾಗಿದೆ. ಈ ಆಸನದಲ್ಲಿ ಮೊದಲು ನೇರವಾಗಿ ಅಂಗಾತ ಮಲಗಬೇಕು, ಈಗ ಮೆಲ್ಲನೆ ಕಾಲುಗಳನ್ನು ಮೇಲಕ್ಕೆ ಎತ್ತಿ ಮುಖದ ಕಡೆಯಿಂದ ಬಾಗುತ್ತಾ, ಕಾಲುಗಳನ್ನು ನೆಲಕ್ಕೆ ಮುಟ್ಟಿಸಬೇಕು, ಕೈಗಳು ಬೆನ್ನಿಗೆ ಬೆಂಬಲ ನೀಡುವಂತಿರಬೇಕು. ಈ ರೀತಿ 30 ಸೆಕೆಂಡ್‌ ಇದ್ದು ನಂತರ ನಿಧಾನಕ್ಕೆ ಶವಾಸನ ಸ್ಥಿತಿಗೆ ಮರಳಬೇಕು.

  ಪ್ರಯೋಜನಗಳು

  ಈ ಆಸನ ಮಾಡುವುದರಿಂದ ಅಜೀರ್ಣ ಸಮಸ್ಯೆ ಇಲ್ಲವಾಗುವುದು, ಅಸಿಡಿಟಿ, ಮೂಲವ್ಯಾಧಿ ಸಮಸ್ಯೆ ಗುಣಪಡಿಸುವಲ್ಲಿ ಈ ಆಸನ ತುಂಬಾ ಸಹಕಾರಿಯಾಗಿದೆ.


 • ಸರ್ವಾಂಗಾಸನ

  ಸರ್ವಾಂಗ ಅಸನ ಮಾಡಲು ಬೆನ್ನ ಮೇಲೆ ನೇರವಾಗಿ ಮಲಗಬೇಕು, ನಂತರ 90 ಡಿಗ್ರಿ ನೇರಕ್ಕೆ ಕಾಲುಗಳನ್ನು ಮೇಲಕ್ಕೆ ತ್ತಬೇಕು, ಈಗ ನಿಧಾನವಾಗಿ ಸೊಂಟವನ್ನು ಮೇಲಕ್ಕೆ ಎತ್ತುತ್ತಾ ಕಾಲುಗಳನ್ನು ಸಂಪೂರ್ಣವಾಗಿ ಮೇಲಕ್ಕೆ ತಗೊಂಡು ಸರ್ವಾಂಗಾಸನ ಸ್ಥಿತಿಗೆ ಬರಬೇಕು. ಈ ಸ್ಥಿತಿಯಲ್ಲಿ ಉಸಿರಾಟ ಸಹಜವಾಗಿರಲಿ.

  ಪ್ರಯೋಜನಗಳು

  ಈ ಆಸನ ಥೈರಾಯ್ಡ್ ಸಮಸ್ಯೆ ಹೋಗಲಾಡಿಸಲು ತುಂಬಾ ಸಹಕಾರಿ, ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಮೂಲವ್ಯಾಧಿ ಸಮಸ್ಯೆ ಇಲ್ಲವಾಗುವುದು.
ಮೂಲವ್ಯಾಧಿ ಬಂದರೆ ಆ ಸಮಸ್ಯೆ ಬಗ್ಗೆ ಬೇರೆಯವರ ಬಳಿ ಹೇಳಿಕೊಳ್ಳಲು ಸಂಕೋಚ, ಆದರೆ ಅದು ಕೊಡುವ ನೋವು ಸಹಿಸಲು ಅಸಾಧ್ಯ. ಕೂರಲು ಸಾಧ್ಯವಾಗದೆ ಒದ್ದಾಡಬೇಕಾಗುತ್ತದೆ. ಮಲವಿಸರ್ಜನೆಗೆ ಹೋದಾಗ ಉಂಟಾಗುವ ನೋವಿನಿಂದ ತಲೆಸುತ್ತು ಬಂದ ಅನುಭವ ಉಂಟಾಗುವುದು. ಈ ಸಮಸ್ಯೆ ವಂಶಪಾರಂಪರ್ಯವಾಗಿ ಬರಬಹುದು, ಇನ್ನು ಕೆಲವರಲ್ಲಿ ಲೈಂಗಿಕ ತೊಂದರೆ, ಮಲಬದ್ಧತೆ ಸಮಸ್ಯೆಯಿಂದಾಗಿ ಉಂಟಾಗುತ್ತದೆ.

ದೇಹದ ಗುದಧ್ವಾರದ ಬಳಿ ಇರುವ ನರದ ಮೇಲೆ ಒತ್ತಡ ಬಿದ್ದಾಗ ಮಾಂಸದ ಚಿಕ್ಕ ಮುದ್ದೆ ಗುದಭಾಗದಲ್ಲಿ ಕಂಡು ಬರುತ್ತದೆ, ಇದರಿಂದ ರಕ್ತಸ್ರಾವ ಕೂಡ ಉಂಟಾಗುತ್ತದೆ. ಮೂಲವ್ಯಾಧಿ ಸಮಸ್ಯೆ ಅನೇಕ ಚಿಕಿತ್ಸಾ ವಿಧಾನಗಳಿವೆ. ಈ ಸಮಸ್ಯೆ ಸಂಪೂರ್ಣವಾಗಿ ಇಲ್ಲವಾಗಿಸುವಲ್ಲಿ ಯೋಗಾಸನಗಳು ಸಹಕಾರಿಯಾಗಿದೆ. ಇಲ್ಲಿ ನಾವು ಮೂಲವ್ಯಾಧಿ ಸಮಸ್ಯೆ ಇಲ್ಲವಾಗಿಸಲು ಯಾವ ಯೋಗಾಸನಗಳು ಒಳ್ಳೆಯದೆಂಬ ಮಾಹಿತಿ ನೀಡಿದ್ದೇವೆ ನೋಡಿ:

 
ಹೆಲ್ತ್