ರಿಯಾಲಿಟಿಯಲ್ಲಿ ಹೆಚ್ಚಿನವರು ಗೂಗಲ್ ಕ್ರೋಮ್ ನ್ನೇ ಇತ್ತೀಚೆಗೆ ಬಳಕೆ ಮಾಡುತ್ತಿರುತ್ತೇವೆ. ಮೂರರಲ್ಲಿ ಇಬ್ಬರಂತೂ ಗೂಗಲ್ ಕ್ರೋಮ್ ಬಳಸುತ್ತಾರೆ. ಆದರೆ ಬ್ರೌಸರ್ ಬಳಕೆದಾರರ ಡಾಟಾವನ್ನು ಹೇಗೆ ಕಲೆಹಾಕುತ್ತದೆ ಮತ್ತು ವೆಬ್ ನ ಮುಕ್ತತೆಯನ್ನು ಹೇಗೆ ಬಳಸಿಕೊಳ್ಳುತ್ತಿರುತ್ತದೆ ಎಂಬುದನ್ನು ತಿಳಿಸುವುದಿಲ್ಲ. ಇದರ ಬಗ್ಗೆ ಒಂದು ಸಂಸ್ಥೆ ಮಾತ್ರ ಯಾವಾಗಲೂ ತಕರಾರು ತೆಗೆಯುತ್ತದೆ. ಬಳಕೆದಾರರ ಸುರಕ್ಷತೆಯ ಬಗ್ಗೆ ಚರ್ಚಿಸುತ್ತದೆ. ಅದ್ಯಾವ ಸಂಸ್ಥೆ ಎಂದು ಕೇಳುತ್ತಿದ್ದೀರಾ? ಅದುವೇ ಮಾಝಿಲಾ!
ಫೈಯರ್ ಫಾಕ್ಸ್ ಬ್ರೌಸರ್ ಇಂದಿಗೂ ಹೆಸರುವಾಸಿಯಾಗಿರುವುದು ಇದೇ ಕಾರಣಕ್ಕೆ. ಲಾಭರಹಿತ ಫೌಂಡೇಷನ್ ಆಗಿರುವ ಇದು, ಅಂತರ್ಜಾಲದಲ್ಲಿ ಮುಕ್ತತೆ,ನಾವೀನ್ಯತೆ ಮತ್ತು ಭಾಗವಹಿಸುವಿಕೆಯ ಪ್ರಚಾರವನ್ನು ಇದು ಹೊಂದಿದೆ. 2003 ರಲ್ಲಿ ಇದರ ಅಭಿವೃದ್ಧಿಗಳು ಆರಂಭಗೊಂಡವು.1998 ರಲ್ಲೇ ಮೊಝಿಲ್ಲಾ ಸಂಸ್ಥೆ ರೂಪುಗೊಂಡಿತ್ತು ಮತ್ತು ಮತ್ತೊಂದು ಬ್ರೌಸರ್ ಆಗಿರುವ ನೆಟ್ಸ್ಕೇಪ್ ಕಮ್ಯುನಿಕೇಟರ್ ನಿಂದ ವೆಬ್ ಟೂಲ್ ಗಳು ಅಭಿವೃದ್ಧಿಗೊಂಡಿದ್ದವು.
ಕಮ್ಯುನಿಕೇಟರ್ ನೆಟ್ ಸ್ಕೇಪ್ ನ ನಾಲ್ಕನೇ ಬ್ರೌಸರ್ ಆಗಿದೆ. 1994 ರಲ್ಲಿ ಮೊದಲ ವಾಣಿಜ್ಯ ವೆಬ್ ಬ್ರೌಸರ್ ನ್ನು ಜಗತ್ತಿಗೆ ಪರಿಚಯಿಸಲಾಗಿತ್ತು. ಈ ಎಲ್ಲಾ ಪ್ರಮುಖ ಅಂಶಗಳು ಮೊಝಿಲ್ಲಾವನ್ನು ವೆಬ್ ಜಗತ್ತಿನ ಹಳೆಯ ಕಂಪೆನಿ ಎಂದು ಗುರುತಿಸುವಂತೆ ಮಾಡಿದೆ.
ಮೊಝಿಲ್ಲಾವು ಕಳೆದ ಹಲವು ವರ್ಷಗಳಲ್ಲಿ ಬಹಳಷ್ಟು ಏರಿಳಿತಗಳನ್ನು ಕಂಡಿದೆ. ಎರಡೆರಡು ಬಾರಿ ಪ್ರಸಿದ್ಧ ಬ್ರೌಸರ್ ಎಂಬ ಖ್ಯಾತಿ ಪಡೆಯಲು ಹೊರಟಾಗ ಕಠಿಣ ಸ್ಪರ್ಧೆಯನ್ನು ಎದುರಿಸಿದೆ. 90 ರ ದಶಕದ ಮಧ್ಯಭಾಗದಲ್ಲಿ ಮೈಕ್ರೋಸಾಫ್ಟ್ ನ ಇಂಟರ್ನೆಟ್ ಎಕ್ಸ್ ಪ್ಲೋರರ್ ನಿಂದ ಸ್ಪರ್ಧೆಯಾದರೆ, 2000 ದ ನಂತರದ ದಿನಗಳಲ್ಲಿ ಗೂಗಲ್ ಕ್ರೋಮ್ ನಿಂದ ಬಹಳ ಕಠಿಣ ಸ್ಪರ್ಧೆ ಎದುರಿಸುವಂತಾಯಿತು. ಇದೀಗ ಪುನಃ ಆಶಾದಾಯಕವಾಗಿರುವ ಏರಿಕೆಯೊಂದು ಮೊಝಿಲ್ಲಾದಿಂದ ಕಂಡುಬರುತ್ತಿದೆ.
ಮೊಜಿಲ್ಲಾ ತನ್ನ ಬ್ರೌಸರ್ ಮಾರುಕಟ್ಟೆಯ ಪಾಲಿಗಾಗಿ ಇನ್ನು ಮುಂದೆ ಹೋರಾಟ ಮಾಡುವುದಿಲ್ಲ. ಇದು ವೆಬ್ ನ ಭವಿಷ್ಯಕ್ಕಾಗಿ ಹೋರಾಡುತ್ತದೆ ಎಂದು ಮೋಜಿಲ್ಲಾದ ಕಾರ್ಯನಿರ್ವಾಹಕ ಅಧ್ಯಕ್ಷೆ ಬೇಕರ್ ಹೇಳುತ್ತಾರೆ.
ವಿಶ್ವದ ಅತ್ಯಂತ ಜನಪ್ರಿಯ ಬ್ರೌಸರ್ನ ಕ್ರೋಮ್ ಅನ್ನು ವಿಶ್ವದ ನಾಲ್ಕನೇ ಅತ್ಯಮೂಲ್ಯ ಕಂಪನಿ, ಗೂಗಲ್ನ ಮೂಲ ಕಂಪನಿಯಾದ ಆಲ್ಫಾಬೆಟ್ ತಯಾರಿಸಿದೆ. ವಿಶ್ವದ ಎರಡನೇ ಅತ್ಯಂತ ಪ್ರಸಿದ್ಧ ಬ್ರೌಸರ್ ಸಫಾರಿಯನ್ನು ವಿಶ್ವದ ಎರಡನೇ ಅತ್ಯಂತ ಮಹತ್ವಪೂರ್ಣ ಕಂಪೆನಿ ಆಪಲ್ ನಿರ್ಮಿಸಿದೆ. ಮೂರನೇ ಸ್ಥಾನದಲ್ಲಿ ಫೈಯರ್ ಫಾಕ್ಸ್ ಇದೆ.
ಬೇಕರ್ ಅವರ ಉದ್ದೇಶವೇನೆಂದರೆ ವೆಬ್ ನ ಆಹ್ಲಾದಕರ ಅನುಭವವನ್ನು ಬಳಕೆದಾರರಿಗೆ ಕೇವಲ ಮೊಝಿಲ್ಲಾ ಮಾತ್ರವೇ ನೀಡುತ್ತದೆ ಎಂಬಂತ ವಾತಾವರಣವನ್ನು ವೆಬ್ ನಲ್ಲಿ ಸೃಷ್ಟಿಸುವುದಾಗಿದೆ. ಗೂಗಲ್ ನ ಉದ್ದೇಶ ಬಳಕೆದಾರರ ಡಾಟಾ ಬಳಸಿ ತನ್ನ ಜಾಹೀರಾತು ಜಗತ್ತಿನ ಮೂಲಕ ಆದಾಯ ಹೆಚ್ಚಿಸಿಕೊಳ್ಳುವುದಾಗಿದೆ. ಆಪಲ್ ನ ಉದ್ದೇಶವೇನೆಂದರೆ ಪ್ರತಿ ವರ್ಷವೂ ಬಳಕೆದಾರರು ಆಪಲ್ ಆಂಡ್ರಾಯ್ಡ್ ಫೋನ್ ನ್ನೇ ಖರೀದಿಸುವಂತೆ ಮಾಡುವುದು ಮತ್ತು ಗ್ರಾಹಕರು ಆಂಡ್ರಾಯ್ಡ್ ಫೋನ್ ಗೆ ಬದಲಾಗದಂತೆ ನೋಡಿಕೊಳ್ಳುವುದಾಗಿದೆ. ಆದರೆ ಮೊಝಿಲ್ಲಾ ವೆಬ್ ಬ್ರೌಸರ್ ನ ಉದ್ದೇಶವೇ ಬೇರೆ ಆಗಿದೆ ಎನ್ನುತ್ತಾರೆ ಬೇಕರ್.
ಒಟ್ಟಿನಲ್ಲಿ ಬಳಕೆದಾರರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿ ಅವರ ಡಾಟಾಗಳು ಸೋರಿಕೆಯಾಗದಂತೆ ನೋಡಿಕೊಳ್ಳುವ ಉದ್ದೇಶವನ್ನು ಮೊಝಿಲ್ಲಾ ಹೊಂದಿದೆ ಎನ್ನಲಾಗುತ್ತಿದೆ. ಆ ಮೂಲಕ ವೆಬ್ ನಲ್ಲಿ ಜನರು ಸುರಕ್ಷಿತವಾಗಿರುವ ಭಾವನೆಯನ್ನು ಹೊಂದುವಂತಾಗಬೇಕು ಎಂಬುದು ಮೊಝಿಲ್ಲಾದ ಉದ್ದೇಶ. ಆ ನಿಟ್ಟಿನಲ್ಲಿ ಇತರೆ ಯಾವುದೇ ವೆಬ್ ಬ್ರೌಸರ್ ಗಳು ಕೆಲಸ ಮಾಡುತ್ತಿಲ್ಲ ಮತ್ತು ಮೊಝಿಲ್ಲಾ ಮಾತ್ರವೇ ಆ ನಿಟ್ಟಿನಲ್ಲಿ ತಲೆಕೆಡಿಸಿಕೊಂಡಿದ್ದು ವೆಬ್ ನ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದೆ ಎಂಬುದು ಇದೀಗ ತಿಳಿದುಬಂದಿರುವ ಮಾಹಿತಿ.
ನೀವು ಬಳಸುವ ಬ್ರೌಸರ್ ನ್ನು ಯಾಕಾಗಿ ಆರಿಸುತ್ತೀರಿ? ಬಹುಶ್ಯಃ ಪೇಜ್ ಗಳು ಬೇಗನೆ ಲೋಡ್ ಆಗುತ್ತದೆ ಎಂಬ ಕಾರಣಕ್ಕೆ ಇರಬಹುದು ಅಲ್ವೇ? ಅಥವಾ ನಿಮ್ಮ ಡಿವೈಸಿನ ಸಂಸ್ಥೆಯಿಂದಲೇ ಮಾಡಲ್ಪಟ್ಟಿದೆ ಎಂಬ ಕಾರಣಕ್ಕಾಗಿಯೂ ಇರಬಹುದು ಮತ್ತು ನಿಮಗೆ ಹೆಚ್ಚು ಹೊಂದಿಕೆಯಾಗುತ್ತಿದೆ ಎಂಬ ಕಾರಣಕ್ಕಾಗಿಯೂ ಇರಬಹುದು ಅಥವಾ ನಿಮ್ಮ ಡಿವೈಸ್ ನಲ್ಲಿ ಪ್ರಿಇನ್ಸ್ಟಾಲ್ ಆಗಿದೆ ಅದಕ್ಕಾಗಿ ಬಳಸುತ್ತಿದ್ದೇವೆ ಎಂದು ಬಳಸುವವರೂ ಇದ್ದಾರೆ. ಕೆಲವರಿಗೆ ಬ್ರೌಸರ್ ನಲ್ಲಿ ಆಯ್ಕೆಗಳಿವೆ ಎಂಬ ವಿಚಾರವೇ ತಿಳಿದಿಲ್ಲವೋ ಏನೋ?