ಹೌದು, ಕಾರ್ಯದರ್ಶಿಗಳ ಸಮಿತಿಯ (ಕೋಸ್) ಶಿಫಾರಸುಗಳ ಅನುಸಾರವಾಗಿ, ಟೆಲಿಕಾಂ ಸೇವಾ ಪೂರೈಕೆದಾರರು ಪಾವತಿಸಬೇಕಾದ ಸ್ಪೆಕ್ಟ್ರಮ್ ಹರಾಜು ಕಂತುಗಳ ರಶೀದಿಗಳನ್ನು ಮುಂದೂಡಲು ನಿರ್ಧರಿಸಲಾಗಿದ್ದು, 2020-21 ಮತ್ತು 2021-2022 ವರ್ಷಗಳಲ್ಲಿ ಸ್ಪೆಕ್ಟ್ರಮ್ ಬಾಕಿ ಮೊತ್ತ ಪಾವತಿಸಲು ಕಾಲಾವಕಾಶ ನೀಡಲಾಗಿದೆಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಕ್ಯಾಬಿನೆಟ್ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಇದರಿಂದ ನಷ್ಟದಲ್ಲಿರುವ ಟೆಲಿಕಾಂ ಸಂಸ್ಥೆಗಳು ನಿಟ್ಟುಸಿರು ಬಿಟ್ಟಿವೆ.
ಟೆಲಿಕಾಂ ಸಂಸ್ಥೆಗಳು ತರಂಗಗುಚ್ಚ ಬಾಕಿ ಮೊತ್ತವಾಗಿ 42 ಸಾವಿರ ಕೋಟಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ. ಇದಕ್ಕಾಗಿ ಕೇಂದ್ರವು ಎರಡು ವರ್ಷಗಳ ಕಾಲಾವಕಾಶ ಒದಗಿಸಿದೆ. ಆದರೆ ಅ.24ರಂದು ಸುಪ್ರೀಂ ಕೋರ್ಟ್ ನೀಡಿದ್ದ ತಿರ್ಪಿನನ್ವಯ ಉದ್ಭವಿಸಿರುವ 1.47 ಲಕ್ಷ ಕೋಟಿ ರೂ. ಹೊಂದಾಣಿಕೆ ಮಾಡಲಾಗದ ಒಟ್ಟು ಆದಾಯದಲ್ಲಿ ಯಾವ ರಿಯಾಯಿತಿ ಇಲ್ಲ. ಆದರೆ,ಈ ವಿಚಾರದಲ್ಲಿ ರಿಯಾಯಿತಿ ನೀಡಲು ಸುಪ್ರೀಂ ಕೋರ್ಟ್ ಗೆ ಮಾತ್ರವೇ ಅವಕಾಶವಿದೆ ಎಂದು ದೂರಸಂಪರ್ಕ ಕಂಪನಿಗಳು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಿಸಿವೆ.
ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಋಣಾತ್ಮಕ ಮುಕ್ತ ಹಣದ ಹರಿವಿನೊಂದಿಗೆ 51,000 ಕೋಟಿ ರೂ.ಗಳ ನಷ್ಟವನ್ನು ದಾಖಲಿಸಿದ ವೊಡಾಫೋನ್ ಐಡಿಯಾಗೆ 23,920 ಕೋಟಿ ರೂ.ಗಳ ಪಾವತಿಯನ್ನು ಮುಂದೂಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 23,000 ಕೋಟಿ ರೂ.ಗಳ ತ್ರೈಮಾಸಿಕ ನಷ್ಟವನ್ನು ದಾಖಲಿಸಿದ ಏರ್ಟೆಲ್ಗೆ 11,746 ಕೋಟಿ ರೂ. ಹಾಗೂ ಈ ವರ್ಷ ಭಾರತದಲ್ಲಿ ಏಕೈಕ ಲಾಭ ಗಳಿಕೆಯಲ್ಲಿರುವ ಟೆಲ್ಕೊ ಜಿಯೋ ಸರ್ಕಾರಕ್ಕೆ 6,670 ಕೋಟಿ ರೂ. ಪಾವತಿಯನ್ನು ಮುಂದಿನ ಎರಡು ವರ್ಷಗಳ ನಂತರ ಪಾವತಿಸಬಹುದಾಗಿದೆ.
ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ತರಂಗಗುಚ್ಚ (ಸ್ಪೆಕ್ಟ್ರಮ್) ಬಾಕಿ ಮೊತ್ತ ಪಾವತಿಗೆ ಎರಡು ವರ್ಷಗಳ ಹೆಚ್ಚುವರಿ ಕಾಲಾವಕಾಶ ನೀಡಿರುವುದರಿಂದ ಮೊಬೈಲ್ ಕರೆ ಮತ್ತು ಡೇಟಾ ದರಗಳಲ್ಲಿ ಪ್ರಸ್ತಾವಿತ ಸುಂಕ ಹೆಚ್ಚಳದ ಒತ್ತಡ ಕಡಿಮೆಯಾಗಲಿದೆ ಎಂದು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಸಿಒಎಐ) ಡಿಜಿ ರಾಜನ್ ಮ್ಯಾಥ್ಯೂಸ್ ಅವರು ಹೇಳಿದ್ದಾರೆ. ದೂರಸಂಪರ್ಕ ಸೇವಾ ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿದ್ದ ಕಾರಣ ಈ ನೆರವು ಒದಗಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ದೇಶದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರು ಎದುರಿಸುತ್ತಿರುವ ಪ್ರಸ್ತುತ ಆರ್ಥಿಕ ಒತ್ತಡದದಿಂದಾಗಿ, ತೀವ್ರ ಆರ್ಥಿಕ ಸಂಕಷ್ಟ ಎದುರಿಸುತಿರುವ ದೇಶದ ಟೆಲಿಕಾಂ ವಲಯಕ್ಕೆ ನೆರವಾಗಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆಗಳಾದ ಭಾರ್ತಿ ಏರ್ಟೆಲ್, ರಿಲಯನ್ಸ್ ಜಿಯೋ, ವೊಡಾಪೋನ್ ಐಡಿಯಾ ಸೇರಿದಂತೆ ಅನೇಕ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ತರಂಗಗುಚ್ಚ (ಸ್ಪೆಕ್ಟ್ರಮ್) ಬಾಕಿ ಮೊತ್ತ ಪಾವತಿಗೆ ಎರಡು ವರ್ಷಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ.