Back
Home » ಆರೋಗ್ಯ
ಪೋಷಕಾಂಶ ಹೆಚ್ಚಲು ಬಳಸುವ ಔಷಧಿಗಳನ್ನು ಹೀಗೆ ಸೇವಿಸಿ
Boldsky | 25th Nov, 2019 03:32 PM

ದೇಹದ ಕ್ಷಮತೆ ಕುಂದಲು ಕೆಲವು ಪೋಷಕಾಂಶಗಳ ಅಥವಾ ಖನಿಜಗಳ ಕೊರತೆ ಕಾರಣವಾಗಿರಬಹುದು. ಇವುಗಳನ್ನು ಪೂರೈಸಲು ವೈದ್ಯರು ಹೆಚ್ಚುವರಿ ಔಷಧಿಗಳನ್ನು (supplements) ಸೇವಿಸುವಂತೆ ಸಲಹೆ ಮಾಡಬಹುದು. ಇವುಗಳು ನಿಜವಾಗಿ ಔಷಧಿಗಳಲ್ಲ, ಬದಲಿಗೆ ನಿಮ್ಮ ದೇಹದಲ್ಲಿ ಯಾವ ಅಂಶದ ಕೊರತೆಯಿದೆಯೋ ಅದನ್ನು ಮಾತ್ರವೇ ಪೂರೈಸಿ ಒಟ್ಟಾರೆ ಆರೋಗ್ಯವನ್ನು ಸರಿಪಡಿಸಿ ಉತ್ತಮಗೊಳಿಸುವ ವಿಧಾನವೇ ಆಗಿದೆ.

ಈ ಔಷಧಿಗಳು ದೇಹದ ಕೊರತೆಯನ್ನು ತುಂಬುವ ಮೂಲಕ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು, ಗಾಯಗಳು ಶೀಘ್ರವಾಗಿ ಮಾಗುವಂತೆ ಮಾಡುವುದು ಹಾಗೂ ಮೂಳೆಗಳು ಹೆಚ್ಚು ಗಟ್ಟಿಯಾಗುವಂತೆ ಮಾಡುವಲ್ಲಿ ನೆರವಾಗುತ್ತವೆ. ಸಾಮಾನ್ಯವಾಗಿ ಹೆಚ್ಚುವರಿ ಔಷಧಿಗಳನ್ನು ಸೇವಿಸುವುದು ಸುಲಭ ಎಂದೆನಿಸಬಹುದು. ಆದರೆ ಈ ಔಷಧಿಗಳನ್ನೂ ಮನಬಂದಂತೆ ಸೇವಿಸುವಂತಿಲ್ಲ. ವೈದ್ಯರೂ ನಿಮ್ಮ ಆರೋಗ್ಯದ ಮಾಹಿತಿಗಳು, ನೀವು ಈಗ ಸೇವಿಸುತ್ತಿರುವ ಔಷಧಿಗಳು, ಜೀವನಕ್ರಮ ಮೊದಲಾದ ಹಲವು ಅಂಶಗಳನ್ನು ಪರಿಗಣಿಸಿ, ಸೂಕ್ತ ಪರೀಕ್ಷೆಗಳ ಬಳಿಕವೇ ಮತ್ತು ಅಗತ್ಯವಿದ್ದರೆ ಮಾತ್ರವೇ ಈ ಹೆಚ್ಚುವರಿ ಔಷಧಿಗಳನ್ನು ಸೇವಿಸಲು ಸಲಹೆ ಮಾಡುತ್ತಾರೆಯೇ ವಿನಃ ಅನಗತ್ಯವಾಗಿ ಇವುಗಳ ಸೇವನೆ ತೊಂದರೆಗೆ ಕಾರಣವಾಗಬಹುದು.

ಒಂದು ವೇಳೆ ನಿಮಗೆ ಹೆಚ್ಚುವರಿ ಔಷಧಿಗಳನ್ನು ಸೇವಿಸಲು ಸಲಹೆ ಮಾಡಿದ್ದರೆ ಇವುಗಳಿಂದ ಪಡೆಯಬಹುದಾದ ಪ್ರಯೋಜನವನ್ನು ಗರಿಷ್ಟವಾಗಿಸಲು ಇಂದಿನ ಲೇಖನದಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ, ಬನ್ನಿ ನೋಡೋಣ:

ಕೊಬ್ಬಿನಲ್ಲಿ ಕರಗುವ ವಿಟಮಿನ್ನುಗಳು (Fat-soluble vitamins)

ವಿಟಮಿನ್ನುಗಳಲ್ಲಿ ಎರಡು ವಿಧಗಳಿವೆ. ಮೊದಲನೆಯದು ಕೊಬ್ಬಿನಲ್ಲಿ ಕರಗುವ ವಿಟಮಿನ್ನುಗಳು. ಎರಡನೆಯದು ನೀರಿನಲ್ಲಿ ಕರಗುವ ವಿಟಮಿನ್ನುಗಳು. ಮೊದಲನೆಯ ವಿಧದ ವಿಟಮಿನ್ನುಗಳು ಜಠರದಲ್ಲಿ ಕರಗದೇ ನಮ್ಮ ಸಣ್ಣ ಕರುಳಿನಲ್ಲಿ ದೇಹದ ಕೊಬ್ಬುಗಳನ್ನು ಬಳಸಿ ಕರಗುತ್ತವೆ. ಬಳಿಕ ಇವು ಕೊಬ್ಬಿನ ಅಂಗಾಂಶ ಮತ್ತು ಯಕೃತ್ ನಲ್ಲಿ ಸಂಗ್ರಹಗೊಂಡು ನಂತರದ ಬಳಕೆಗೆ ಕಾಯ್ದಿರಿಸಲಾಗುತ್ತದೆ. ಈ ವಿಟಮಿನ್ನುಗಳೆಂದರೆ ವಿಟಮಿನ್ ಎ, ಡಿ, ಇ ಮತ್ತು ಕೆ.

ಈ ವಿಟಮಿನ್ನುಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು ಹೇಗೆ?

ಇವು ಕೊಬ್ಬಿನಲ್ಲಿ ಕರಗುವ ಕಾರಣ ಇವುಗಳನ್ನು ಕೊಬ್ಬಿನೊಂದಿಗೆ ಸೇವಿಸಿದಾಗ ಹೆಚ್ಚು ಫಲ ನೀಡುತ್ತವೆ. ಹಾಗಾಗಿ, ಈ ಅಂಶಗಳನ್ನು ಹೆಚ್ಚುವರಿ ಔಷಧಿಯಾಗಿ ವೈದ್ಯರು ನೀಡಿದ್ದರೆ ನಿಮ್ಮ ಆಹಾರದಲ್ಲಿ ಹೆಚ್ಚು ಕೊಬ್ಬುಗಳಿರುವುದು ಅವಶ್ಯ. ಉದಾಹರಣೆಗೆ, ಮೊಟ್ಟೆಗಳು, ಡ್ರೈಫ್ರೂಟ್ಸ್ ಇತ್ಯಾದಿ. ಈ ಮೂಲಕ ಹೆಚ್ಚು ಪ್ರಮಾಣದ ವಿಟಮಿನ್ನುಗಳು ಬಳಕೆಯಾಗುತ್ತವೆ.

ನೀರಿನಲ್ಲಿ ಕರಗುವ ವಿಟಮಿನ್ನುಗಳು( Water-soluble vitamins):

ಈ ವಿಟಮಿನ್ನುಗಳು ದೇಹದಲ್ಲಿ ಸಂಗ್ರಹಗೊಳ್ಳುವುದಿಲ್ಲ, ಬದಲಿಗೆ ಜೀರ್ಣಗೊಂಡು ಅಂದೇ ಬಳಸಲ್ಪಡುತ್ತದೆ ಹಾಗೂ ಬಳಸಲ್ಪಡದ ಅಥವಾ ಹೆಚ್ಚುವರಿ ಪ್ರಮಾಣ ಮೂತ್ರದಲ್ಲಿ ಹೊರಹೋಗುತ್ತದೆ. ಹಾಗಾಗಿ, ಈ ಅವಶ್ಯಕತೆ ಇರುವ ಔಷಧಿಗಳನ್ನು ನಿಯಮಿತವಾಗಿ ಸೇವಿಸುತ್ತಿರಬೇಕಾಗುತ್ತದೆ. ಇವುಗಳಲ್ಲಿ ಪ್ರಮುಖವಾದ ವಿಟಮಿನ್ನುಗಳೆಂದರೆ ಬಿ ವಿಟಮಿನ್ ಗಳಾದ ಥಿಯಾಮಿನ್ (B1), ರೈಬೋಫ್ಲೋವಿನ್(B2), ನಿಯಾಸಿನ್(B3) ಮತ್ತು ವಿಟಮಿನ್ ಸಿ.

ಈ ವಿಟಮಿನ್ನುಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು ಹೇಗೆ?

ಈ ವಿಟಮಿನ್ನುಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದಾಗ ಹೆಚ್ಚು ಫಲಕಾರಿಯಾಗುತ್ತವೆ. ಇವು ನಮ್ಮ ಲಾಲಾರಸದಿಂದ ತೊಡಗಿ ಜಠರ ಮತ್ತು ಕರುಳುಗಳಲ್ಲಿರುವ ಎಲ್ಲಾ ಬಗೆಯ ಜೀರ್ಣರಸಗಳಲ್ಲಿ ಸುಲಭವಾಗಿ ಕರಗುತ್ತವೆ. ಇವುಗಳನ್ನು ಪ್ರತ್ಯೇಕವಾಗಿ ಸೇವಿಸಿದರೆ ಗರಿಷ್ಟ ಪ್ರಮಾಣದ ಫಲ ಪಡೆಯಬಹುದು. ಆಹಾರದ ಜೊತೆಗೆ ಸೇವಿಸಿದರೆ ಇವುಗಳನ್ನು ಹೀರಿಕೊಳ್ಳಲು ಕೊಂಚ ತೊಡಕಾಗಬಹುದು. ಹಾಗಾಗಿ ವಿಟಮಿನ್ ಬಿ ಮತ್ತು ಸಿ ಇರುವ ಹೆಚ್ಚುವರಿ ಔಷಧಿಗಳನ್ನು ನಿತ್ಯವೂ ದಿನದ ಪ್ರಥಮ ಆಹಾರದ ರೂಪದಲ್ಲಿ ಸೇವಿಸಬೇಕು. ಬಳಿಕ ಉಪಾಹಾರ ಸೇವಿಸುವಲ್ಲಿ ಸುಮಾರು ನಲವತ್ತೈದು ನಿಮಿಷ ತಡವಾಗಿಸಬೇಕು. ಅತಿ ತುರ್ತು ಅನ್ನಿಸಿದರೆ ಅರ್ಧ ಘಂಟೆಯಾದರೂ ಬಿಡಬೇಕು.

ಖನಿಜಾಂಶ ಇರುವ ಹೆಚ್ಚುವರಿ ಔಷಧಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು ಹೇಗೆ

ಒಂದು ವೇಳೆ ನೀವು ಕ್ಯಾಲ್ಸಿಯಂ ಗುಳಿಗೆಗಳನ್ನು ಸೇವಿಸುತ್ತಿದ್ದರೆ, ನೀವು ಕಾಫಿ ಸೇವನೆಯನ್ನು ಮಿತಗೊಳಿಸಬೇಕಾಗುತ್ತದೆ. ಏಕೆಂದರೆ ಕ್ಯಾಲ್ಸಿಯಂ ಹೀರಿಕೊಳ್ಳುವುದನ್ನು ಕಾಫಿಯಲ್ಲಿರುವ ಕೆಫೇನ್ ತಡೆಯುತ್ತದೆ. ಅಷ್ಟೇ ಅಲ್ಲ, ಕೆಫೀನ್ ಈಗಾಗಲೇ ನಿಮ್ಮ ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಿ ತೆಗೆಯಬಹುದು. ಉಳಿದಂತೆ ಕೆಫೀನ್ ಯುಕ್ತ ಪೇಯಗಳಾದ ಕೋಲಾ, ಎನರ್ಜಿ ಡ್ರಿಂಕ್ ಮೊದಲಾದವುಗಳನ್ನೂ ಸೇವಿಸಬಾರದು. ಮೆಗ್ನೀಶಿಯಂ ಇರುವ ಹೆಚ್ಚುವರಿ ಔಷಧಿಗಳು ದೇಹಕ್ಕೆ ಆರಾಮ ನೀಡುವ ಮೂಲಕ ಶೀಘ್ರ ನಿದ್ದೆಗೆ ಜಾರುವಂತೆ ಮಾಡುವುದರಿಂದ ಇವುಗಳನ್ನು ರಾತ್ರಿ ಮಲಗುವ ಮುನ್ನ ಸೇವಿಸಬೇಕು. ಸತು ಮತ್ತು ತಾಮ್ರದ ಅಂಶವಿರುವ ಗುಳಿಗೆಗಳನ್ನು ಸೇವಿಸುವುದಾದರೆ ಇವುಗಳ ಪ್ರಭಾವ ಪರಸ್ಪರ ವಿರುದ್ದವಾಗಿರುವಂತೆ ನೋಡಿಕೊಳ್ಳಬೇಕು. ಅಂದರೆ ಇವೆರಡನ್ನೂ ದಿನದ ಒಂದೇ ಅವಧಿಯಲ್ಲಿ ಸೇವಿಸಬಾರದು, ಬದಲಿಗೆ ಒಂದನ್ನು ಬೆಳಿಗ್ಗೆ ಮತ್ತು ಇನ್ನೊಂದನ್ನು ರಾತ್ರಿ ಸೇವಿಸಬೇಕು. ಇದೇ ಪ್ರಕಾರ ಕಬ್ಬಿಣ ಮತ್ತು ಕ್ಯಾಲ್ಸಿಯಂ ಗುಳಿಗೆಗಳನ್ನೂ ಜೊತೆಯಾಗಿ ಸೇವಿಸಬಾರದು. ಇವನ್ನೂ ದಿನದ ವಿರುದ್ದ ಸಮಯಗಳಲ್ಲಿ ಸೇವಿಸಬೇಕು.

ಹೆಚ್ಚುವರಿ ಔಷಧಿಗಳನ್ನು ಪರಿಣಾಮಕಾರಿಯಾಗಿಸುವ ಇತರ ಕ್ರಮಗಳು

ಹೆಚ್ಚುವರಿ ಔಷಧಿಗಳನ್ನು ಸೇವಿಸುವ ಜೊತೆಗೇ ಜೀರ್ಣಕ್ರಿಯೆಯನ್ನು ಸುಲಭವಾಗಿಸುವ ಬ್ಯಾಕ್ಟೀರಿಯಾಗಳು ಇರುವ ಆಹಾರಗಳನ್ನು ಸೇವಿಸಬೇಕು. ಉದಾಹರಣೆಗೆ ಮೊಸರು, ಹುದುಗು ಬರಿಸಿದ ಆಹಾರಗಳಾದ ಇಡ್ಲಿ, ದೋಸೆ ಇತ್ಯಾದಿಗಳು ಜೀರ್ಣಕ್ರಿಯೆಯಲ್ಲಿ ನೆರವಾಗುತ್ತವೆ ಹಾಗೂ ಈ ಔಷಧಿಗಳನ್ನು ಪರಿಪೂರ್ಣವಾಗಿ ಹೀರಿಕೊಳ್ಳಲು ನೆರವಾಗುತ್ತವೆ. ಕೆಲವು ವಿಟಮಿನ್ನುಗಳನ್ನು ಜೊತೆಜೊತೆಯಾಗಿ ಸೇವಿಸುವುದೂ ಇನ್ನೊಂದು ಕ್ರಮವಾಗಿದೆ. ಉದಾಹರಣೆಗೆ ವಿಟಮಿನ್ ಡಿ ಮತ್ತು ವಿಟಮಿನ್ K2 ಗಳನ್ನು ಕ್ಯಾಲ್ಸಿಯಂ ಗುಳಿಗೆಗಳ ಜೊತೆಗೇ ಸೇವಿಸಿದಾಗ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಉತ್ತಮವಾಗುತ್ತದೆ. ಇದೇ ಪ್ರಕಾರ ಕಬ್ಬಿಣದ ಅಂಶ ಇರುವ ಗುಳಿಗೆ ಸೇವಿಸುವ ಜೊತೆಗೇ ವಿಟಮಿನ್ ಸಿ ಸೇವಿಸಿದರೆ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವ ಪ್ರಮಾಣ ಹೆಚ್ಚುತ್ತದೆ.

 
ಹೆಲ್ತ್