Back
Home » Business
ಮಾರುಕಟ್ಟೆಯಲ್ಲಿ ಈರುಳ್ಳಿ ಡಬಲ್ ಸೆಂಚುರಿ; ಕೌನ್ ಬನೇಗಾ ಕೋಟ್ಯಧಿಪತಿ?
Good Returns | 9th Dec, 2019 01:29 PM
 • ಗ್ರಾಹಕ ಶಾಪ, ರೈತರಿಗೆ ಇಲ್ಲ ಲಾಭ

  ಸದ್ಯ ಸದರಿ ರೈತರ ಮನೆಗಳಲ್ಲೇ ಬಳಕೆಗೆ ಈರುಳ್ಳಿ ಉಳಿದಿಲ್ಲ! ಮಾರುಕಟ್ಟೆಯ ದುಬಾರಿ ಬೆಲೆ ಹಾಗೂ ಹೊಲದಲ್ಲಿ ಮೊಳೆಯುತ್ತಿರುವ ಈರುಳ್ಳಿಯನ್ನು ನೋಡಿಕೊಂಡು ನಿಟ್ಟುಸಿರುವ ಬಿಡುವ ಸರದಿ ರೈತರದ್ದಾಗಿದೆ. ಮಾರುಕಟ್ಟೆಯಲ್ಲಿ ಶಪಿಸುತ್ತಲೇ ಈರುಳ್ಳಿ ಕೊಳ್ಳುವ ಗ್ರಾಹಕರಿಗೆ ತಾವು ಕೊಡುತ್ತಿರುವ ದುಬಾರಿ ಹಣ ರೈತರಿಗೆ ಸಿಗುತ್ತಿಲ್ಲ ಎಂಬ ಮಾಹಿತಿ ಇಲ್ಲ. ಇತ್ತ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವ ಈರುಳ್ಳಿ ಬೆಲೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬುದನ್ನು ಅಧ್ಯಯನಗಳು ಹೇಳುತ್ತಿವೆ. ಉದಾಹರಣೆಗೆ, ಇತ್ತೀಚೆಗೆ ಹೊರಬಿದ್ದಿರುವ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ಸಂಸ್ಥೆ(ಐಸೆಕ್) ಈರುಳ್ಳಿ ಕುರಿತು ನೀಡಿರುವ ವರದಿ. 2013ರಿಂದ ಈಚೆಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಈರುಳ್ಳಿ ಬೆಲೆಯಲ್ಲಿ ಇಂತಹದ್ದೇ ಕೃತಕ ಏರಿಕೆಯಾಗಿರುವುದನ್ನು ವಿವರಿಸಿದೆ. ಯಾಕೆ ಹೀಗೆ? ವರದಿ ಸರ್ಕಾರಕ್ಕೂ ಸಲ್ಲಿಕೆಯಾಗಿದೆ. ಉತ್ತರ ನೀಡಬೇಕಾದವರು, ಕಡಿವಾಣ ಹಾಕಬೇಕಾದವರು 'ನಮ್ಮ ಮನೆಯಲ್ಲಿ ಈರುಳ್ಳಿ ಬಳಕೆ ಮಾಡುವುದಿಲ್ಲ' ಎಂದು ಕೈ ಚೆಲ್ಲುತ್ತಿದ್ದಾರೆ.


 • ಅಲ್ಪಾವಧಿ ಬೆಳೆ, ಲಾಭದ ನಿರೀಕ್ಷೆ

  ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಹಾಗೂ ಕರ್ನಾಟಕ ಈರುಳ್ಳಿ ಉತ್ಪಾದನೆಯಲ್ಲಿ ಮುಂದಿರುವ ರಾಜ್ಯಗಳು. ಕಡಿಮೆ ನೀರನ್ನು ಆಶ್ರಯಿಸಿಕೊಂಡು ಮೂರು- ಮೂರೂವರೆ ತಿಂಗಳಿಗೆ ಫಲ ನೀಡುವ ಈರುಳ್ಳಿ ಕೃಷಿ ಯಾವ ಕಾಲಕ್ಕೂ ರೈತರಿಗೆ ದೊಡ್ಡ ಮಟ್ಟದ ಇಳುವರಿಯನ್ನು ತಂದುಕೊಟ್ಟ ಉದಾಹರಣೆಗಳು ದೇಶದಲ್ಲಿ ಸಿಗುವುದಿಲ್ಲ. ಹಾಗಂತ ದೊಡ್ಡ ಮಟ್ಟದ ನಷ್ಟವನ್ನೂ ಇದು ರೈತರ ತಲೆಯ ಮೇಲೆ ಹೊರಿಸುವುದಿಲ್ಲ. ದೇಶದ ಒಟ್ಟಾರೆ ಈರುಳ್ಳಿ ಬೆಳೆಯುವ ಪ್ರದೇಶದ ಪೈಕಿ ಕರ್ನಾಟಕದ ಪಾಲು ಶೇ. 20ರಷ್ಟಿದೆ. ಒಟ್ಟಾರೆ ಉತ್ಪಾದನೆಯಲ್ಲಿ ಶೇ. 13ರಷ್ಟು ಕರ್ನಾಟಕದಿಂದಲೇ ಮಾರುಕಟ್ಟೆ ಪ್ರವೇಶಿಸುತ್ತದೆ. ಈರುಳ್ಳಿ ಬೆಳೆ, ಮಾರುಕಟ್ಟೆ ಬೆಲೆ ಎಲ್ಲವನ್ನೂ ಗಮನಕ್ಕೆ ಇಟ್ಟುಕೊಂಡು ನೋಡಿದರೆ ನ್ಯಾಯವಾಗಿ ಈರುಳ್ಳಿ ಬೆಳೆಯುವ ರೈತರು ಇಷ್ಟೊತ್ತಿಗೆ ಕೋಟ್ಯಧಿಪತಿಗಳೇ ಆಗಿರಬೇಕಿತ್ತು. ಆದರೆ ಹಾಗಾಗುತ್ತಿಲ್ಲ.


 • ಲಾಭ ನಷ್ಟದ ಲೆಕ್ಕಾಚಾರಗಳು

  ಒಂದು ಎಕರೆ ಈರುಳ್ಳಿ ಬೆಳೆದು ಅದನ್ನು ಮಾರುಕಟ್ಟೆಗೆ ತಲುಪಿಸಲು ಸುಮಾರು 30-35 ಸಾವಿರ ವೆಚ್ಚ ಮಾಡಬೇಕಿದೆ. ಎಲ್ಲವೂ ಸರಿಯಾಗಿದ್ದರೆ ರೈತ ಒಂದು ಎಕರೆಯಲ್ಲಿ 8-10 ಟನ್ ಈರುಳ್ಳಿ ಬೆಳೆಯಬಹುದು. ಮಾರುಕಟ್ಟೆಯಲ್ಲಿ 10-20 ರುಪಾಯಿ ಬೆಲೆ ಸಿಕ್ಕರೂ ಒಂದು ಎಕರೆಗೆ 1. 5 ಲಕ್ಷ ಉಳಿಸಬಹುದು. ಇನ್ನು ಕೆಜಿಗೆ ನೂರು ರುಪಾಯಿ ಸಿಕ್ಕರೆ ಒಂದು ಎಕರೆ ಈರುಳ್ಳಿ ಬೆಳೆಯುವ ರೈತರಿಗೆ ಕೋಟಿಗಳ ಲೆಕ್ಕದಲ್ಲಿ ಲಾಭವಾಗಬೇಕಿತ್ತು. ಆದರೆ ವಾಸ್ತವದಲ್ಲಿ ಈ ಯಾವ ದುಬಾರಿ ಬೆಲೆಯೂ ಈರುಳ್ಳಿ ಬೆಳೆದ ರೈತರಿಗೆ ಸಿಗುವುದಿಲ್ಲ.


 • ಶೀತಲಾಗಾರ ಸೇರಿದ ದಾಸ್ತಾನು

  "ನಮಗಿರುವ ಅನುಮಾನ ಏನು ಅಂದರೆ, ನಾಲ್ಕು ಐದು- ತಿಂಗಳ ಹಿಂದೆಯೇ ಈರುಳ್ಳಿ ಶೀತಲಾಗಾರಗಳನ್ನು ಸೇರಿದೆ. ಮಧ್ಯವರ್ತಿಗಳು ದಾಸ್ತಾನು ಮಾಡಿಕೊಂಡು ಈಗ ಮಾರುಕಟ್ಟೆಗೆ ಪ್ರವೇಶಿಸಿದ್ದಾರೆ. ಇದು ಯಾವುವೂ (ಮಾರುಕಟ್ಟೆಯಲ್ಲಿರುವ ಈರುಳ್ಳಿ) ರೈತರು ಈಗ ಬೆಳೆದ ಈರುಳ್ಳಿ ಅಲ್ಲ. ಯಾಕೆಂದರೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ, ಚಿತ್ರದುರ್ಗದಲ್ಲಿ ಅನಾವೃಷ್ಟಿಯಿಂದ ಈರುಳ್ಳಿ ಬೆಳೆಯಲ್ಲಿ ವ್ಯತ್ಯಯವಾಗಿದೆ. ಈಗ ನಾಟಿ ಮಾಡಿರುವ ಈರುಳ್ಳಿ ಮಾರುಕಟ್ಟೆಗೆ ಪ್ರವೇಶಿಸಲು ಇನ್ನೂ ಮೂರು ತಿಂಗಳ ಅಗತ್ಯವಿದೆ,'' ಎನ್ನುತ್ತಾರೆ ಈರುಳ್ಳಿ ಬೆಳೆಯುವ ರೈತರು, ರೈತ ಸಂಘದ ಪ್ರಮುಖರೂ ಆಗಿರುವ ಕಸವನಹಳ್ಳಿ ರಮೇಶ್. ಇದು ತಳಮಟ್ಟದ ವಾಸ್ತವ. ಮೂರು ತಿಂಗಳ ಹಿಂದೆ ನೀರಿನ ಕೊರತೆಯ ಕಾರಣಕ್ಕೆ ಈರುಳ್ಳಿ ಬೆಳೆಯುವ ಪ್ರಮುಖ ಜಿಲ್ಲೆಗಳ ಪೈಕಿ ಒಂದಾದ ಚಿತ್ರದುರ್ಗದ ರೈತರು ನಾಟಿಗೆ ಇಳಿಯಲಿಲ್ಲ. ನಿಧಾನವಾಗಿ ಬೆಲೆ ಏರಿಕೆ ಕಾಣುತ್ತ ಬಂದ ಈರುಳ್ಳಿಯನ್ನು ಈಗ ನಾಟಿ ಮಾಡಿದ್ದಾರೆ. ಅದು ಮಾರಾಟಕ್ಕೆ ಬರಲು ಇನ್ನೂ 3 ತಿಂಗಳ ಅಗತ್ಯವಿದೆ. ಒಂದು ವೇಳೆ ರೈತರು ಈರುಳ್ಳಿ ಜೊತೆ ಮಾರುಕಟ್ಟೆಗೆ ಬಂದರೆ ಅಷ್ಟೊತ್ತಿಗೆ ಬೆಳೆ ಮತ್ತೆ ಪಾತಾಳ ಕಂಡಿರುತ್ತದೆ.


 • ದಸರಾ ಸಮಯದಲ್ಲಿ ಸಿಕ್ಕಿದ್ದೇ ಕೊನೆ

  ಹಾಗೆ ನೋಡಿದರೆ, ಈ ಭಾಗದ ರೈತರು ಕೊನೆಯ ಬಾರಿ ಈರುಳ್ಳಿ ಕಿತ್ತು ಮಾರುಕಟ್ಟೆಗೆ ಬಂದಿದ್ದು ಕಳೆದ ದಸರಾ ಸಮಯದಲ್ಲಿ. "ದಸರಾ ಸಮಯದಲ್ಲಿ ಒಮ್ಮೆ ಈರುಳ್ಳಿ ಕಿತ್ತು ಮಾರುಕಟ್ಟೆಗೆ ತಂದಿದ್ದೆವು. ಅದರ ನಂತರ ಮತ್ತೆ ನಾಟಿ ಮಾಡಲು ಹೆಚ್ಚು ರೈತರು ಹೋಗಲಿಲ್ಲ. ನೀರಿನ ಸಮಸ್ಯೆ ಅದಕ್ಕೆ ಕಾರಣ. ಆ ಸಮಯದಲ್ಲಿ ಕೆಜಿಗೆ 10-15 ರುಪಾಯಿ ಸಿಕ್ಕಿತ್ತು. ಈಗ ಮಾರುಕಟ್ಟೆಯಲ್ಲಿ 200 ರುಪಾಯಿಗೆ ಈರುಳ್ಳಿಯನ್ನು ಕೊಳ್ಳುತ್ತಿದ್ದಾರೆ. ಇದರಿಂದ ಬೆಳೆದ ರೈತರಿಗೆ ಲಾಭ ಆಗುತ್ತಿಲ್ಲ,'' ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷರೂ ಆಗಿರುವ ಆಗಿರುವ ರೈತ ಮಂಜುನಾಥ್. ಇಂತಹ ಲೆಕ್ಕಾಚಾರಗಳನ್ನು ಎದುರಿಗೆ ಇಟ್ಟುಕೊಂಡು ನೋಡಿದರೆ, ಈ ದೇಶದ ಕೃಷಿ ಬಿಕ್ಕಟ್ಟಿನ ಆಯಾಮವೊಂದು ನಿಚ್ಚಳವಾಗುತ್ತದೆ. ಯಾರು ಬೆಳೆಯುತ್ತಾರೋ ಅವರಿಗೆ ಲಾಭ ಸಿಗುತ್ತಿಲ್ಲ. ಗ್ರಾಹಕರಿಗೆ ಕಣ್ಣಿರು ತರಿಸುತ್ತಿರುವ ಈರುಳ್ಳಿ ಕೋಟ್ಯಧಿಪತಿಗಳನ್ನು ಮೂರು ತಿಂಗಳ ಅಂತರದಲ್ಲಿ ಸೃಷ್ಟಿಸುತ್ತಿದೆ. ಆದರೆ ಅವರು ತೆರೆಮರೆಯಲ್ಲೇ ಉಳಿಯಲಿದ್ದಾರೆ.
ಬೆಂಗಳೂರು, ಡಿಸೆಂಬರ್ 9: ಒಂದು ದೊಡ್ಡ ಸಮುದಾಯದ ನಿತ್ಯ ಬಳಕೆಯ ಅಗತ್ಯಗಳಲ್ಲಿ ಒಂದಾದ ಈರುಳ್ಳಿ ಮಾರುಕಟ್ಟೆಯಲ್ಲಿ ಡಬಲ್ ಸೆಂಚುರಿ ಬಾರಿಸಿದೆ. ಬೆಂಗಳೂರಿನ ಕೆ. ಆರ್‌. ಮಾರುಕಟ್ಟೆಯಲ್ಲಿ ಭಾನುವಾರದ ಹೊತ್ತಿಗೆ 200 ರುಪಾಯಿ ದಾಟಿರುವ ಈರುಳ್ಳಿ ಬೆಲೆ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳಿಲ್ಲ. ಮುಂದಿನ ವರ್ಷದ ಮಾರ್ಚ್‌ವರೆಗೂ ಇದೇ ಪರಿಸ್ಥಿತಿ ಇರಲಿದೆ ಎಂದು ಅಧ್ಯಯನಗಳು ಹೇಳುತ್ತಿವೆ.

ರಾಜ್ಯದ ಉಳಿದ ಭಾಗಗಳಲ್ಲಿಯೂ ಈರುಳ್ಳಿ ಗ್ರಾಹಕರ ಜೇಬಿಗೆ ದೊಡ್ಡ ಮಟ್ಟದಲ್ಲಿ ಕತ್ತರಿ ಹಾಕುತ್ತಿದೆ. ಹಾಗಂತ, ಆಳಕ್ಕಿಳಿದು ನೋಡಿದರೆ ಇದರಲ್ಲಿ ನಯಾಪೈಸೆ ಈರುಳ್ಳಿ ಬೆಳೆಯುವ ರೈತರಿಗೆ ಸಿಗುತ್ತಿಲ್ಲ. ಅತಿಯಾದ ಮಳೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಗಾರರಿಗೆ ಕೈಕೊಟ್ಟರೆ, ಚಿತ್ರದುರ್ಗದಂತಹ ಜಿಲ್ಲೆಯಲ್ಲಿ ಕಡಿಮೆ ಮಳೆ ಈರುಳ್ಳಿ ಬೆಳೆಗೆ ಸಮಸ್ಯೆ ತಂದೊಡ್ಡಿದ್ದು ಮೂರು ತಿಂಗಳ ಹಿಂದೆ.

   
 
ಹೆಲ್ತ್