Back
Home » ಆರೋಗ್ಯ
ಮಾನವ ದೇಹದ ಬಗ್ಗೆ ಇನ್ನೂ ರಹಸ್ಯವಾಗಿಯೇ ಉಳಿದಿರುವ ಒಂಭತ್ತು ಅಚ್ಚರಿಯ ಸಂಗತಿಗಳು
Boldsky | 13th Dec, 2019 12:03 PM
 • ನಮಗೆ ಬೆರಳಚ್ಚುಗಳೇಕೆ ಇವೆ?

  ಪ್ರತಿ ವ್ಯಕ್ತಿಯ ಬೆರಳಚ್ಚುಗಳು ಬೇರೆಬೇರೆಯಾಗಿರುತ್ತವೆ. ಅಷ್ಟೇ ಅಲ್ಲ, ಪ್ರತಿ ಬೆರಳಿನ ಅಚ್ಚು ಸಹಾ ಭಿನ್ನವೇ ಆಗಿರುತ್ತದೆ. ಎಲ್ಲಾ ತರದಲ್ಲಿ ತದ್ರೂಪು ಹೊಂದಿರುವ ಅವಳಿಗಳ ಬೆರಳಚ್ಚುಗಳೂ ಬೇರೆಬೇರೆಯೇ ಆಗಿರುತ್ತವೆ. ಅಷ್ಟಕ್ಕೂ, ಈ ಬೆರಳಚ್ಚುಗಳನ್ನು ನಿಸರ್ಗ ನಮಗೇಕೆ ನೀಡಿದೆ? ಈ ಬಗ್ಗೆ ಶತಮಾನಗಳಿಂದ ನಮ್ಮ ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಈ ಪ್ರಶ್ನೆಗೆ ಅತಿ ಸಾಮಾನ್ಯ ಉತ್ತರವೆಂದರೆ ನಾವು ಹಿಡಿದುಕೊಳ್ಳುವ ವಸ್ತುಗಳ ಮೇಲೆ ಹಿಡಿತ ಸಾಧಿಸುವುದಾಗಿದೆ. ಆದರೆ ವಾಸ್ತವದಲ್ಲಿ ನಾವು ಹಿಡಿದುಕೊಳ್ಳುವ ವಸ್ತುವನ್ನು ನಮ್ಮ ಹಸ್ತದ ಕೆಲವು ಭಾಗಗಳು ಮಾತ್ರವೇ ತಾಕುತ್ತವೆ. ಹಾಗಾದರೆ ಈ ಗೆರೆಗಳು ಇಡಿಯ ಹಸ್ತವನ್ನೇಕೆ ಆವರಿಸಿವೆ, ಮತ್ತು ಪಾದಗಳಲ್ಲೇಕಿವೆ? ಹಾಗಾಗಿ, ಇವುಗಳ ಮುಖ್ಯ ಉದ್ದೇಶ ಹಿಡಿತ ಅಲ್ಲ ಎಂದಾಯಿತು. ಈ ಬಗ್ಗೆ ನಡೆಸಿದ ಹೆಚ್ಚಿನ ಸಂಶೋಧನೆಗಳಲ್ಲಿ, ಈ ಭಾಗದ ಚರ್ಮದಲ್ಲಿ ಅತಿ ಹೆಚ್ಚಿನ ಸೂಕ್ಷ್ಮಸಂವೇದಿ ನರಗಳ ತುದಿಗಳಿರುವುದು ಕಂಡು ಬಂದಿದ್ದು ಸ್ಪರ್ಶ ಸಂವೇದನೆಯನ್ನು ಹೆಚ್ಚಿಸುತ್ತವೆ ಎಂದು ತಿಳಿಸಿವೆ. ಆದರೂ, ವಿಜ್ಞಾನಿಗಳಿಗೆ ಈ ತರ್ಕವೂ ಅತಿ ಸಮರ್ಪಕ ಎಂದು ಅನ್ನಿಸುತ್ತಿಲ್ಲ. ಹಾಗಾಗಿ, ಇವುಗಳ ನಿಜವಾದ ಕಾರ್ಯ ಇನ್ನೂ ನಿಗೂಢವಾಗಿಯೇ ಉಳಿದಿದೆ.


 • ನಮ್ಮ ಕರುಳಿನ ತುದಿಯಲ್ಲಿ ಕರುಳವಾಲ (ಅಪೆಂಡಿಕ್ಸ್) ಏಕಿದೆ?

  ಸಾಮಾನ್ಯವಾಗಿ ಹೊಟ್ಟೆ ನೋವಾಗಿದ್ದರೆ ಅಪೆಂಡಿಕ್ಸ್ ಆಪರೇಶನ್ ಆಯಿತು ಎಂಬ ಮಾಹಿತಿಯನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಅಪೆಂಡಿಕ್ಸ್ ಅಥವಾ ಕರುಳಬಾಲ ಅಥವಾ ಕರುಳವಾಲ ಎಂಬ ಭಾಗ ನಮ್ಮ ಸಣ್ಣ ಕರುಳು ಮುಗಿದು ದೊಡ್ಡ ಕರುಳು ಪ್ರಾರಂಭವಾದಲ್ಲಿ ಸಣ್ಣ ಕರುಳಿನ ತುದಿಯಲ್ಲಿ ಚಿಕ್ಕ ಬಾಲದಂತಹ ಭಾಗ ಇರುತ್ತದೆ. ಒಂದು ಬೆಲೂನಿನ ಭಾಗವನ್ನು ವಿಸ್ತರಿಸಿ ಇದರಿಂದ ಬೆರಳೊಂದನ್ನು ದೂಡಿದರೆ ಇತ್ತ ಹೇಗೆ ಕಾಣುತ್ತದೆಯೋ ಈ ಕರುಳವಾಲ ಹಾಗೇ ಇರುತ್ತದೆ. ಆದರೆ ಈ ಅಂಗದ ಕಾರ್ಯವೇನು? ಸಾಮಾನ್ಯವಾಗಿ ನಾವು ಸೇವಿಸುವ ಆಹಾರದಲ್ಲಿರುವ ಕಲ್ಲು, ಲೋಹದ ಚೂರುಗಳು ಮೊದಲಾದವು ಇಲ್ಲಿ ಬಂದು ಸಿಕ್ಕಿಕೊಳ್ಳುತ್ತವೆ. ಒಂದು ವೇಳೆ ಇದು ತುಂಬಿಹೋದರೆ ಅಥವಾ ಚುಚ್ಚಿಕೊಂಡು ಸೋಂಕು ಎದುರಾದರೆ ನೋವು ಎದುರಾಗುತ್ತದೆ. ಆಗ ಈ ಬಾಲವನ್ನೇ ಬುಡದಿಂದ ಕತ್ತರಿಸಿ ನಿವಾರಿಸಲಾಗುತ್ತದೆ. ಇದೇ ಅಪೆಂಡಿಕ್ಸ್ ಆಪರೇಶನ್! ಒಂದು ತರ್ಕದ ಪ್ರಕಾರ, ನಮ್ಮ ಪೂರ್ವಜರು ಗಡ್ಡೆಗೆಣಸುಗಳನ್ನು ತಿಂದು ಬದುಕುತ್ತಿದ್ದಾಗ ಈ ಸಸ್ಯಾಹಾರವನ್ನು ಜೀರ್ಣಿಸಿಕೊಳ್ಳಲು ಇದು ಅಗತ್ಯವಾಗಿತ್ತು. ವಿಕಾಸಹಂತದಲ್ಲಿ ದೇಹಗಳು ಬದಲಾವಣೆ ಹೊಂದುತ್ತಿದ್ದಂತೆ ಕೆಲವು ಹಾಗೇ ಉಳಿದವು, ಇದು ಸಹಾ ಒಂದು ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ಈ ಅಂಗ ನಮ್ಮ ದೇಹಕ್ಕೆ ಅಗತ್ಯವಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ ಎಂದು ಕಂಡುಕೊಳ್ಳಲಾಗಿದೆ. ಈ ತರ್ಕ ಎಷ್ಟು ಸರಿ ಎಂಬುದನ್ನು ಸಂಶೋಧನೆಗಳು ಇನ್ನಷ್ಟೇ ಖಚಿತಪಡಿಸಬೇಕಾಗಿದೆ.


 • ನಮಗೆಲ್ಲರಿಗೂ ಪ್ರಮುಖವಾದ ಕೈ ಏಕಿದೆ?

  ನಾವು ಪ್ರಮುಖ ಕೆಲಸಗಳಿಗೆ ಯಾವ ಕೈಯನ್ನು ಬಳಸುತ್ತೇವೋ ಆ ಆಭ್ಯಾಸದ ಮೇಲ ಬಲಗೈಯವರು ಅಥವಾ ಎಡಗೈಯವರು ಎಂದು ಗುರುತಿಸಲಾಗುತ್ತದೆ. ಆದರೆ ಈ ಬಗ್ಗೆ ಯೋಚಿಸಿದರೆ ನಾವು ಪ್ರಮುಖ ಕೈಯಿಂದ ಮಾಡುವಷ್ಟು ಸಲೀಸಾಗಿ ಅದೇ ಕೆಲಸವನ್ನು ಇನ್ನೊಂದು ಕೈಯಿಂದ ನಿರ್ವಹಿಸಲು ಆಗುವುದಿಲ್ಲ. ಆದರೆ ಉಳಿದ ಜೀವಿಗಳು ತಮ್ಮ ಎರಡೂ ಕೈಗಳನ್ನು ಏಕಪ್ರಕಾರವಾಗಿ ಬಳಸುತ್ತವೆ. ಈ ಬಗ್ಗೆ ಇದುವರೆಗೆ ಪಡೆದಿರುವ ವಿವರಣೆ ಎಂದರೆ ವಿಕಾಸಹಂತದಲ್ಲಿ 'ಅತ್ಯುತ್ತಮವಾಗಿರುವುದೇ ಉಳಿದುಕೊಳ್ಳುತ್ತದೆ' ಎಂಬ ಸೂತ್ರ ಇಲ್ಲಿ ಅನ್ವಯವಾಗುತ್ತದೆ. ಅಂದರೆ, ಒಂದು ಕೆಲಸವನ್ನು ಒಂದು ಕೈಗೆ ಮಾತ್ರವೇ ನಿರ್ವಹಿಸುವಂತೆ ಮಾಡಿ ಅತ್ಯುತ್ತಮವಾಗಿ ಕೆಲಸ ಮಾಡುವಂತೆ ತರಬೇತಿ ನೀಡಲಾಗುತ್ತದೆ. ಆದರೆ ವಾಸ್ತವವಾಗಿ, ಕೆಲವರು ಒಂದೇ ಕೆಲಸವನ್ನು ಎರಡೂ ಕೈಗಳಿಂದ ಸಮನಾದ ಕ್ಷಮತೆಯಲ್ಲಿ ನಿರ್ವಹಿಸುವುದನ್ನು ಕಾಣಬಹುದು. ಹಾಗಾಗಿ ಇದು ಮನಸ್ಸಿನ ತರಬೇತಿಯದ್ದೇ ಹೊರತು ವಿಕಾಸದ ಪಾತ್ರವಿಲ್ಲ ಎಂದು ಇನ್ನೊಂದು ತರ್ಕ ಹೇಳುತ್ತದೆ. ಈ ಬಗ್ಗೆ ಇನ್ನೂ ಗೊಂದಲ ಪರಿಹಾರವಾಗಿಲ್ಲ.


 • ನಾವೇಕೆ ಆಕಳಿಸುತ್ತೇವೆ?

  ಆಕಳಿಕೆ ನಾವು ತಾಯಗರ್ಭದಲ್ಲಿದ್ದಾಗಿನಿಂದಲೇ ಬರುವಂತಹ ನೈಸರ್ಗಿಕ ಕ್ರಿಯೆಯಾಗಿದೆ. ಅಷ್ಟಕೂ ಇದು ಸಾಂಕ್ರಾಮಿಕ, ಇನ್ನೊಬ್ಬರು ಆಕಳಿಸುವುದನ್ನು ಕಂಡಾಗ ನಮಗೆ ಅನೂಚಾನವಾಗಿ ಆಕಳಿಕೆಯೇಕೆ ಬರುತ್ತದೆ? ಈ ಬಗ್ಗೆ ತರ್ಕಗಳಿಗೇನೂ ಕೊರತೆಯಿಲ್ಲ. ಹಾಗಾಗಿ ಇವುಗಳಲ್ಲಿ ನಿಜವಾದುದು ಯಾವುದು ಎಂಬುದೇ ದೊಡ್ಡ ರಹಸ್ಯ. ಅತಿ ನಂಬಲರ್ಹ ತರ್ಕ ಎಂದರೆ ಹೀಗೆ ಮಾಡುವ ಮೂಲಕ ನಮ್ಮ ಮೆದುಳಿನ ತಾಪಮಾನವನ್ನು ನಿಯಂತ್ರಿಸಲಾಗುತ್ತದೆ ಎಂಬುದು. ನಿದ್ದೆ ಇಲ್ಲದಿರುವಾಗ ಅಥವಾ ಮೆದುಳಿಗೆ ಇಷ್ಟವಾಗದ ಕೆಲಸಗಳಿಂದಾಗಿ ಬೋರು ಹೊಡೆದಾಗಲೂ ಆಕಳಿಕೆ ಎದುರಾಗುತ್ತದೆ. ಆಕಳಿಕೆಯಿಂದ ಮೆದುಳಿನ ತಾಪಮಾನ ಕೊಂಚವೇ ಕಡಿಮೆಯಾಗುತ್ತದೆ. ಇನ್ನೊಂದು ತರ್ಕದ ಪ್ರಕಾರ, ಆಕಳಿಕೆಯಿಂದ ಜೋಮು ಹಿಡಿದ ಮನ ಮತ್ತು ಶರೀರಕ್ಕೆ ಕೊಂಚ ಅಲುಗಾಟ ದೊರಕಿದಂತಾಗುತ್ತದೆ, ಏಕೆಂದರೆ ಈ ಸಮಯದಲ್ಲಿ ನಮ್ಮ ಹೃದಯದ ಬಡಿತ ಕೊಂಚ ಕಾಲ ಹೆಚ್ಚುತ್ತದೆ ಮತ್ತು ಕಣ್ಣಿನ ಸ್ನಾಯುಗಳು ಸೆಡೆತ ಪಡೆಯುತ್ತವೆ. ಹೆಚ್ಚಿನಾಂಶದಲ್ಲಿ ಇವೆರೆಡೂ ತರ್ಕಗಳು ಸರಿಯಾಗಿಯೇ ಇವೆ.


 • ಮನುಷ್ಯರ ದೇಹವೆಲ್ಲಾ ಒಂದೇ ತೆರನಾಗಿದ್ದರೂ ರಕ್ತದ ಗುಂಪುಗಳೇಕೆ ಇವೆ?

  ಇದು ಸಹಾ ಮಾನವ ವಿಕಾಸ ಹಂತವನ್ನು ಅವಲಂಬಿಸಿದೆ ಎಂದು ಕೆಲವು ತರ್ಕಗಳು ವಿವರಿಸುತ್ತವೆ. ಸುಮಾರು ಇಪ್ಪತ್ತು ಮಿಲಿಯನ್ ವರ್ಷಗಳ ಹಿಂದಿನಿಂದಲೇ ನಮ್ಮ ಪೂರ್ವಜರ ದೇಹದಲ್ಲಿ ರಕ್ತ ಹಲವು ಬಗೆಯ ಸೋಂಕುಗಳನ್ನು ಎದುರಿಸುವ ಸಲುವಾಗಿ ಭಿನ್ನ ರೂಪಗಳನ್ನು ಪಡೆದವು ಎಂದು ವಿಜ್ಞಾನಿಗಳು ಅನುಮಾನಿಸುತ್ತಾರೆ. "ಕೆಲವು ಬಗೆಯ ಸೋಂಕುಗಳನ್ನು ಎದುರಿಸಲು ಕೆಲವು ನೈಸರ್ಗಿಕ ಸಂಯೋಜನೆಗಳನ್ನು ಅಳವಡಿಸುವ ಮೂಲಕ ಈ ರಕ್ತದ ಗುಂಪುಗಳ ಏರ್ಪಟ್ಟಿವೆ. ವಿಕಾಸ ಹಂತದಲ್ಲಿ ಈ ಅದ್ಭುತ ಬದಲಾವಣೆ ಪಡೆಯುತ್ತಾ ಈಗ ರಕ್ತದ ಸ್ಪಷ್ಟವಾದ ಭಿನ್ನ ಗುಂಪುಗಳನ್ನು ಪಡೆದಿವೆ" ಎಂದು ಪ್ರೋಮೀಡಿಯಾ ಹೆಮಟಾಲಜಿ/ಆಂಕಾಲಜಿ ಅಸೋಸಿಯೇಟ್ಸ್ ಸಂಸ್ಥೆಯ ಡಾ. ಮೊಹಮ್ಮದ್ ಮೊಬಾಯೆದ್ ರವರು ತಿಳಿಸುತ್ತಾರೆ. ಆದರೆ ಏಕೆ ಎಂಬ ಪ್ರಶ್ನೆಗೆ ವಿಜ್ಞಾನಿಗಳಲ್ಲಿ ಸ್ಪಷ್ಟ ಉತ್ತರವಿಲ್ಲ. ನಾಯಿ ಬೆಕ್ಕುಗಳ ರಕ್ತದಲ್ಲಿ ಇನ್ನೂ ಹೆಚ್ಚಿನ ವಿಧದ ರಕ್ತದ ಗುಂಪುಗಳನ್ನು ಗುರುತಿಸಲಾಗಿದೆ. ಹಾಗಾಗಿ, ಮನುಷ್ಯರಲ್ಲಿ ರಕ್ತದ ಗುಂಪುಗಳೇಕೆ ಇವೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಇನ್ನೂ ನಿಗೂಢವಾಗಿದೆ.


 • ನಮಗೇಕೆ ಕನಸುಗಳು ಬೀಳುತ್ತವೆ?

  ಮನುಷ್ಯರು ತಮ್ಮ ಜೀವಿತಾವಧಿಯ ಸುಮಾರು ಮೂರರಲ್ಲಿ ಒಂದು ಭಾಗವನ್ನು ನಿದ್ದೆಯಲ್ಲಿ ಕಳೆಯುತ್ತಾರೆ. ಆದರೆ ನಿದ್ದೆಯಲ್ಲಿ ಕಾಣುವ ಕನಸುಗಳ ಬಗ್ಗೆ ವಿಜ್ಞಾನಿಗಳು ಇನ್ನೂ ಸ್ಪಷ್ಟವಾಗಿ ಹೇಳಲಾರರಾಗಿದ್ದಾರೆ ಎಂದು ಮೇಪಲ್ ಹಾಲಿಸ್ಟಿಕ್ಸ್ ಸಂಸ್ಥೆಯ ಆರೋಗ್ಯತಜ್ಞ ಕ್ಯಾಲೆಬ್ ಬ್ಯಾಕೆಯವರು ತಿಳಿಸುತ್ತಾರೆ. ನಮಗೆ ಗಾಢನಿದ್ದೆ ಆವರಿಸಿದ ಬಳಿಕ ನಮ್ಮ ಕಣ್ಣುಗುಡ್ಡೆಗಳು ತೀವ್ರಗತಿಯ ಚಲನೆಯನ್ನು ಪಡೆಯುತ್ತವೆ, (REM sleep -Ramdon eyem movement). ಈ ಸಮಯದಲ್ಲಿಯೇ ಕನಸುಗಳು ಬೀಳುತ್ತವೆ ಹಾಗೂ ಹೃದಯದ ಬಡಿತ ಹೆಚ್ಚುತ್ತದೆ. ಆದರೆ ಕನಸಿನಿಂದ ಯಾವ ಕಾರ್ಯ ಸಿದ್ಧಿಸುತ್ತದೆ ಎಂದು ಇನ್ನೂ ನಿಗೂಢವಾಗಿಯೇ ಇರುವ ಪ್ರಶ್ನೆಯಾಗಿದೆ. ಒಂದು ಜನಪ್ರಿಯ ತರ್ಕದ ಪ್ರಕಾರ, ನಿಮ್ಮ ಮೆದುಳು ದಿನದ ಅವಧಿಯಲ್ಲಿ ಸಂಗ್ರಹಿಸಿದ್ದ ಮಾಹಿತಿಯನ್ನು ಹೇಗೆ ಸಂಸ್ಕರಿಸುತ್ತದೆ ಹಾಗೂ ಇವುಗಳಲ್ಲಿ ಅಗತ್ಯವಾದುದು ಯಾವುದು ಮತ್ತು ಯಾವುದು ಅನಗತ್ಯ ಎಂಬುದನ್ನು ನಿರ್ಧರಿಸುತ್ತದೆ ಎಂಬುದಾಗಿದೆ. ಇನ್ನೊಂದು ತರ್ಕದಲ್ಲಿ ವಿಜ್ಞಾನಿಗಳು ಕನಸು ಕಾಣುವಿಕೆಗೆ ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲ ಹಾಗೂ ಇದು ನಮ್ಮ ಸುಪ್ತಾವಸ್ಥೆಯ ಮನಸ್ಸು ಎಚ್ಚರಿದ್ದಾಗಿನ ಹೊತ್ತಿನಲ್ಲಿ ಸಂಗ್ರಹಿಸಿದ್ದ ಮಾಹಿಯನ್ನೇ ಕಲಸುಮೇಲೋಗರವಾಗಿ ಒದಗಿಸುತ್ತದೆ ಎಂದು ವಿವರಿಸುತ್ತಾರೆ.


 • ನಮ್ಮ ದೇಹಗಳ ಒಳಗೆ ವೈರಸ್ಸುಗಳೇಕಿವೆ?

  ಈ ಜಗತ್ತಿನಲ್ಲಿ ಕ್ರಿಮಿಗಳಿಲ್ಲದೇ ಇರುವ ಮನುಷ್ಯ ಜೀವಿ ಎಂದರೆ ಈಗ ತಾನೇ ಹುಟ್ಟಿದ ಮಗು ಮಾತ್ರ. ಮರುಕ್ಷಣದಿಂದ ಮಗುವಿನ ದೇಹ ಮುಪ್ಪಿನವರೆಗೂ ಈ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ಜೊತೆಗೇ ತನ್ನ ಜೀವ ಸವೆಸುತ್ತದೆ. ವೈರಸ್ಸುಗಳು ಮತ್ತು ಬ್ಯಾಕ್ಟೀರಿಯಾಗಳು ನಮ್ಮ ಅನಾರೋಗ್ಯಕ್ಕೆ ಕಾರಣ ಎಂದೇ ನಮಗೆ ತಿಳಿಸುತ್ತಾ ಬರಲಾಗಿದೆ. ಆದರೆ ವಾಸ್ತವದಲ್ಲಿ ಇವುಗಳಲ್ಲಿ ನೂರಾರು ವಿಧಗಳಿದ್ದು ಕೆಲವು ಮಾತ್ರ ಅನಾರೋಗ್ಯಕ್ಕೆ ಕಾರಣವಾದರೆ, ಕೆಲವು ನಿಜವಾಗಿಯೂ ನಮ್ಮ ಆರೋಗ್ಯಕ್ಕೆ ಅಗತ್ಯದ್ದೇ ಆಗಿವೆ. ಅತ್ಯಂತ ಸೂಕ್ತ ಉದಾಹರಣೆ ಎಂದರೆ ಮೊಸರು. ಇದು ಈಗಾಗಲೇ ಬ್ಯಾಕ್ಟೀರಿಯಾಗಳಿಂದ ಮುಕ್ಕಾಲು ಪಾಲು ಜೀರ್ಣವಾಗಿದೆ. ಅಂದರೆ ಮೊಸರು ಅಪ್ಪಟ ಬ್ಯಾಕ್ಟೀರಿಯಾಗಳಿಂದ ಕೂಡಿರುವ ಆಹಾರ. ಆದರೆ ಇದು ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ. ಇದನ್ನು ಹೃಸ್ವವಾಗಿ ಪ್ರೋಬಯೋಟಿಕ್ಸ್ (probiotics) ಎಂದು ಕರೆಯಲಾಗುತ್ತದೆ. ನಮ್ಮ ದೇಹದ ಒಳಗೂ ಹಲವಾರು ಭಾಗಗಳಲ್ಲಿ ಹಲವು ಬಗೆಯ ವೈರಸ್ಸುಗಳೂ ಬ್ಯಾಕ್ಟೀರಿಯಾಗಳೂ ಇವೆ. ಇವು ನಮ್ಮ ಜೀರ್ಣಕ್ರಿಯೆಗೆ, ಗಾಯಗಳು ಮಾಗಲು, ಕಲ್ಮಶ ನಿವಾರಣೆ ಹಾಗೂ ಸೋಂಕುಗಳ ವಿರುದ್ದ ಹೋರಾಡಲೂ ನೆರವಾಗುತ್ತವೆ. ನಮ್ಮ ದೇಹದಲ್ಲಿರುವ ಈ ಹಲವಾರು ಬಗೆಯ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳು ಏಕಿವೆ ಎಂಬುದು ಇನ್ನೂ ನಿಗೂಢವಾಗಿದೆ.


 • ನಮ್ಮ ಪೂರ್ವಜರಂತಿರುವ ಇತರ ಪ್ರಾಣಿಗಳು ನಮಗಿಂತಲೂ ಏಕೆ ಹೆಚ್ಚು ಬಲಶಾಲಿಯಾಗಿವೆ?

  ಮಾನವ ದೇಹವನ್ನೇ ಹೋಲುವ ಇತರ ಪ್ರಾಣಿಗಳಾದ ಚಿಂಪಾಂಜಿ, ಗೊರಿಲ್ಲಾ, ಒರಾಂಗುಟಾನ್ ಮೊದಲಾದವು ನಮ್ಮಂತಹದ್ದೇ ಆದ ಸ್ನಾಯುಗಳ ರಚನೆಯನ್ನು ಹೊಂದಿದ್ದರೂ ಇವುಗಳಲ್ಲಿ ನಮಗೆ ಅತಿ ನಿಕಟವಾದ ವಾನರ ನಮಗಿಂತ ಕನಿಷ್ಟ 1.35 ಪಟ್ಟು ಹೆಚ್ಚು ಬಲಯುತವಾಗಿವೆ. ನಮ್ಮ ಸ್ನಾಯುಗಳು ನಿಧಾನವಾಗಿ ಮಡಚಿಕೊಳ್ಳುವ ಸ್ನಾಯುಗಳ ರಚನೆ ಇವೆ. ಇವು ವಾನರಗಳ ಸ್ನಾಯುಗಳಿಗೆ ಹೋಲಿಸಿದರೆ ಕಡಿಮೆ ಪ್ರಬಲವಾಗಿವೆ. ಆದರೆ, ಈ ಸ್ನಾಯುಗಳೇ ಹೆಚ್ಚು ನಾಜೂಕಿನ ಕೆಲಸಗಳನ್ನು ಮಾಡಲು ಅನುವು ಮಾಡಿಕೊಡುತ್ತವೆ. ಆದಿಮಾನವರು ಬೇಟೆ ಮತ್ತು ಗಡ್ಡೆಗೆಣಸುಗಳನ್ನು ಅಗೆಯಲು ಹಾಗೂ ಕೃಷಿಗಾಗಿ ಈ ಸ್ನಾಯುಗಳನ್ನು ಬಳಸಿಕೊಂಡರು. ಇಂದು ಮ್ಯಾರಥಾನ್ ಓಟಗಾರರು ಓಡುವಷ್ಟು ವೇಗವಾಗಿ ಈ ವಾನರರಿಗೆ ಓಡಲು ಸಾಧ್ಯವಿಲ್ಲ. ಆದರೂ, ವಾನರ ಸ್ನಾಯುಗಳ ಬಲ ಮಾನವರ ಸ್ನಾಯುಗಳ ಬಲಕ್ಕಿಂತ ಹೆಚ್ಚೇ ಇದೆ. ಈ ವ್ಯತ್ಯಾಸ ಇನ್ನೂ ವಿಜ್ಞಾನಿಗಳ ತಲೆ ತಿನ್ನುತ್ತಿದೆ. ಆದರೆ ಈ ಬಗ್ಗೆ ನಾವು ಕೀಳರಿಮೆ ಹೊಂದಲು ಯಾವುದೇ ಕಾರಣವಿಲ್ಲ. ಏಕೆಂದರೆ ಈ ದುರ್ಬಲ ಸ್ನಾಯುಗಳಿಂದಲೇ ನಾವು ವಾನರಗಳಿಗೆ ಸಾಧ್ಯವಿಲ್ಲದ ನೂರಾರು ಬಗೆಯ ಸೂಕ್ಷ್ಮ ಕೆಲಸಗಳನ್ನು ನಿರ್ವಹಿಸಬಲ್ಲೆವು.


 • ನಗು ಏಕೆ ಸಾಂಕ್ರಾಮಿಕ?

  ನೀನು ನಕ್ಕರೆ ಜಗವೂ ನಗುವುದು, ನೀನು ಅತ್ತರೆ ನೀನೊಬ್ಬನೇ ಅಳಬೇಕಾಗುತ್ತದೆ ಎಂಬುದೊಂದು ಆಂಗ್ಲ ನಾಣ್ಣುಡಿ. ಹೌದು, ನಗು ಸಾಂಕ್ರಾಮಿಕ. ಈ ಬಗ್ಗೆ ನಡೆಸಿದ ಸಂಶೋಧನೆಗಳ ಮೂಲಕ ವಿಜ್ಞಾನಿಗಳು ಕಂಡುಕೊಂಡ ಅಂಶವೆಂದರೆ ನಗುವಿನ ಮೂಲಕ ನಗುವಿನ ಸಂವೇದನೆ ಪ್ರಕಟಿಸಲ್ಪಟ್ಟಾಗ ಸುತ್ತಮುತ್ತಲ ಇತರ ವ್ಯಕ್ತಿಗಳ ಮೆದುಳೂ ಈ ಸಂವೇದನೆಗೆ ತಕ್ಕಂತೆ ಪ್ರತಿಕ್ರಿಯಿಸುತ್ತದೆ. "ಸಾಮಾಜಿಕ ಜೀವಿಗಳಲ್ಲಿ ನಗು ಸಾಮಾನ್ಯವಾಗಿರುವುದನ್ನು ಕಂಡುಕೊಳ್ಳಲಾಗಿದೆ. ಅದರಲ್ಲೂ ಮನುಷ್ಯರು ತಮ್ಮ ಇತರ ನಿಕಟ ಸಮಾಜಜೀವಿಗಳಿಗಿಂತಲೂ ಮೂವತ್ತು ಪಟ್ಟು ಹೆಚ್ಚು ನಗುವುದನ್ನು ಪ್ರಕಟಿಸುತ್ತಾರೆ ಎಂದು ಮನಃಶಸ್ತ್ರಜ್ಞರ ಅಭಿಪ್ರಾಯವಾಗಿದೆ" ಎಂದು ಡಾಲ್ ಬ್ಯಾಕೆಯವರು ತಿಳಿಸುತ್ತಾರೆ. ಮಾನವರು ಈ ಜಗತ್ತಿನಲ್ಲಿ ಅತಿ ಹೆಚ್ಚು ಅನುಭೂತಿ ವ್ಯಕ್ತಪಡಿಸುವ ಜೀವಿಗಳಾಗಿದ್ದು ಮನಸ್ಸಿನ ಭಾವನೆಗಳನ್ನು ಹೊಮ್ಮಿಸುವ ಪರಿ ನಗು ಆಗಿದೆ. ಇದೇ ಕಾರಣಕ್ಕೆ ನಗು ಸಾಂಕ್ರಾಮಿಕವಾಗಿದೆ. ನಾವು ನಗುವಾಗ ನಮ್ಮ ಮೆದುಳಿನಲ್ಲಿ ಎಂಡಾರ್ಫಿನ್ ಎಂಬ ರಸದೂತ ಸ್ರವಿಸಲ್ಪಡುತ್ತದೆ ಹಾಗೂ ಇವು ಸುರಕ್ಷತೆ ಮತ್ತು ದುಗುಡವಿಲ್ಲದ ಭಾವನೆಯನ್ನು ಮೂಡಿಸುತ್ತವೆ. ವಾಸ್ತವದಲ್ಲಿ, ನಗು ಭಾವನೆಗಳಲ್ಲಿ ಒಂದು ಮಾತ್ರ. ಉಳಿದ ಭಾವನೆಗಳಾದ ದುಃಖ, ಕ್ರೋಧ ಮೊದಲಾದವೂ ಕೊಂಚ ಮಟ್ಟಿಗೆ ಸಾಂಕ್ರಾಮಿಕವೇ ಆಗಿದ್ದರೂ ನಗುವಿನಷ್ಟು ಹೆಚ್ಚು ಪ್ರಾಬಲ್ಯ ಹೊಂದಿಲ್ಲ. ಇದೇ ನಿಜವಾಗಿ ಇನ್ನೂ ಅರ್ಥವಾಗದ ವಿಚಾರವಾಗಿದೆ. ಹಾಗಾಗಿ, ನಗುವಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ, ನಗುವ ಯಯಾವುದೇ ಸಂದರ್ಭವನ್ನೂ ಕಳೆದುಕೊಳ್ಳದೇ ಮನಸಾರೆ ನಕ್ಕುಬಿಡಿ.
ಈ ಜಗತ್ತಿನಲ್ಲಿರುವ ಪ್ರತಿ ಜೀವಿಯೂ ತನ್ನದೇ ಆದ ಲಕ್ಷಣಗಳನ್ನು ಹೊಂದಿದ್ದು ತನ್ನ ಆಯಸ್ಸನ್ನು ಕಳೆಯುವವರೆಗೂ ಹಲವಾರು ಹಂತಗಳನ್ನು ದಾಟುತ್ತದೆ. ಹುಟ್ಟಿನಿಂದ ಸಾವಿನವರೆಗೆ ಆಯಸ್ಸು ಕಳೆಯಲು ಸಿಸರ್ಗ ನೀಡಿರುವ ಈ ದೇಹ ಹಲವಾರು ಕಾರ್ಯಗಳನ್ನು ನಡೆಸುತ್ತಾ ತನ್ನದೇ ಆದ ಸಂಕುಲವನ್ನು ಸೃಷ್ಟಿಸಿ ತಾನು ಸತ್ತು ಮುಂದಿನ ಪೀಳಿಗೆಯನ್ನು ಮುಂದುವರೆಸುವುದು ಸೃಷ್ಟಿಯ ನಿಯಮ.

ಆ ಪ್ರಕಾರ, ಸಾಯುವವರೆಗೂ ದೇಹವನ್ನು ಕಾಪಾಡುವುದು ಆರೋಗ್ಯ! ಮಾನವ ದೇಹವೂ ಸಾವಿರಾರು ಲಕ್ಷಣಗಳ ಆಗರ, ನಿಸರ್ಗ ನೀಡಿರುವ ಈ ಅದ್ಭುತ ಸೃಷ್ಟಿಯ ಕಾರ್ಯವೈಖರಿಯನ್ನು ಅರಿತು ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಭಗವಂತ ನಮಗೆ ನೀಡಿರುವ ಈ ದೇಹವನ್ನು ಉತ್ತಮವಾಗಿ ಬಳಸಿಕೊಳ್ಳಬಹುದು.

ವೈದ್ಯವಿಜ್ಞಾನ ಈ ದೇಹದ ಬಹಳಷ್ಟನ್ನು ಅರಿತಿದೆ ಎಂದು ತಿಳಿದಿದ್ದರೂ, ನಿಸರ್ಗ ತನ್ನ ಗುಟ್ಟುಗಳಲ್ಲಿ ಎಲ್ಲವನ್ನೂ ಇನ್ನೂ ಬಿಟ್ಟುಕೊಟ್ಟಿಲ್ಲ. ಇವುಗಳಲ್ಲಿ ಕೆಲವು ನೋಡಲಿಕ್ಕೆ ಸ್ಪಷ್ಟವಾಗಿ ಕಂಡರೂ ಇದರ ನಿಜವಾದ ಕಾರ್ಯವೇನೆಂದು ನಮಗೆ ಇನ್ನೂ ಸ್ಪಷ್ಟವಾಗಿ ಅರಿಯದೇ ಅಚ್ಚರಿ ಮೂಡಿಸುತ್ತದೆ. ಬನ್ನಿ ಇಂತಹ ಒಂಭತ್ತು ರಹಸ್ಯದ ಸಂಗತಿಗಳನ್ನು ಅರಿಯೋಣ:

 
ಹೆಲ್ತ್