Back
Home » ಆರೋಗ್ಯ
ಓವರ್‌ ಕ್ಲೀನಿಂಗ್‌ನಿಂದ ಆರೋಗ್ಯಕ್ಕಾಗುವ ಅಪಾಯಗಳಿವು
Boldsky | 22nd Feb, 2020 06:00 PM
 • 1. ಹತ್ತಿಯ ಉಂಡೆಗಳಿಂದ ನಿಮ್ಮ ಕಿವಿಗಳನ್ನು ಸ್ವತ: ನೀವೇ ಸ್ವಚ್ಛಗೊಳಿಸಿಕೊಳ್ಳುವುದು

  ಕೆಲವು ಮಂದಿಗೆ ಇದೊಂದು ಅಭ್ಯಾಸ; ಹತ್ತಿಯ ಉಂಡೆಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಕಿವಿಗಳೊಳಗೆ ತುರುಕಿಸಿ, ಕಿವಿಯೊಳಗಿನ ಕಶ್ಮಲ (ಗುಗ್ಗಿ) ವನ್ನು ತೆಗೆಯಲು ಶತಾಯಗತಾಯ ಪ್ರಯತ್ನಿಸುವುದು.

  ಆದರೆ ನೀವು ಹೀಗೆ ಮಾಡುವುದು ಸುತಾರಾಂ ಸರಿಯಲ್ಲ ಎಂದು ತಜ್ಞ ವೈದ್ಯರು ಎಚ್ಚರಿಸುತ್ತಾರೆ ಗೊತ್ತೇ? ಯಾಕೆಂದರೆ, ಮೇಲ್ನೋಟಕ್ಕೆ ಹಾನಿಕಾರಕವಲ್ಲವೆಂದು ಕಂಡುಬರುವ ಆ ಹತ್ತಿಯ ಉಂಡೆಗಳನ್ನು ನೀವು ಸದುದ್ದೇಶದಿಂದಲೇ ಕಿವಿಗಳೊಳಗೆ ತುರುಕಿರಬಹುದು; ಆದರೆ ಅಂತಹ ಪ್ರಯತ್ನಗಳು ಅಸಂಖ್ಯ ಅನಾಹುತಗಳಿಗೆ ದಾರಿಮಾಡಿಕೊಟ್ಟ ಉದಾಹರಣೆಗಳಿವೆ.

  ಕಿವಿತಮಟೆಗಳು ತೂತಾಗುವುದರಿಂದ ಮೊದಲ್ಗೊಂಡು ಕಿವಿಯ ಸೋಂಕುಗಳವರೆಗೆ, ಅಷ್ಟೇ ಏಕೆ, ಶಾಶ್ವತವಾದ ಕಿವುಡಿಗೂ ಅಂತಹ ಪ್ರಯತ್ನಗಳು ದಾರಿಮಾಡಿಕೊಟ್ಟಿವೆ. ತಜ್ಞ ವೈದ್ಯರು ಹೇಳುವ ಪ್ರಕಾರ, ಕಿವಿಯ ನಾಳವನ್ನು ಹೀಗೆ ಪ್ರಯತ್ನಪೂರ್ವಕವಾಗಿ "ಸ್ವಚ್ಛಗೊಳಿಸಿಕೊಳ್ಳುವ" ಅಗತ್ಯವೇ ಇಲ್ಲವಂತೆ!!

  ಕಿವಿಯೊಳಗೆ ಜಮೆಯಾಗಿರಬಹುದಾದ ಹೆಚ್ಚುವರಿ ಗುಗ್ಗಿಯನ್ನು ಸಹಜವಾಗಿಯೇ ನಿವಾರಿಸುವ ದಿಶೆಯಲ್ಲಿ, ನೀವು ಸ್ನಾನ ಮಾಡುವಾಗ ಕಿವಿಯ ನಾಳದೊಳಗೆ ಪ್ರವೇಶಿಸುವ ಸಾಕಷ್ಟು ಪ್ರಮಾಣದ ನೀರೇ ಸಾಕಾಗುತ್ತದೆ.


 • 2. ಟಬ್‌ ಬಾತ್‌/ ಬುರುಗು (ನೊರೆ) ಸ್ನಾನಗಳು

  ದಿನವಿಡಿಯ ಒತ್ತಡಭರಿತ ಕೆಲಸಕಾರ್ಯಗಳ ಬಳಿಕ, ದೇಹವನ್ನು ಸುಗಂಧಯುಕ್ತವಾದ ಸಾಬೂನು-ಮಿಶ್ರಿತ ನೀರಿನ ನೊರೆಯಲ್ಲಿ ಮುಳುಗುವುದು ಮೇಲ್ನೋಟಕ್ಕೆ ಹಿತಕಾರಿಯೆಂದೆನಿಸೀತು, ಆದರೆ ಇದೇ ಅಭ್ಯಾಸವನ್ನು ಹಲದಿನಗಳವರೆಗೆ ಮುಂದುವರೆಸಿದಲ್ಲಿ, ಕಟ್ಟಕಡೆಗೆ ಉರಿಯುಕ್ತ ತ್ವಚೆ ಮತ್ತು ಕಿರಿಕಿರಿಯನ್ನುಂಟು ಮಾಡುವ ಯೀಸ್ಟ್ ನ ಸೋಂಕನ್ನು ನೀವು ಪಡೆದುಕೊಳ್ಳುವುದಂತೂ ಖಚಿತವೇ.

  ನೀವು ಬಹಳ ಇಷ್ಟಪಡುವ ಆ ಸ್ನಾನದುಂಡೆಗಳಲ್ಲಿ ಇರಬಹುದಾದ ಸುಗಂಧಕಾರಕಗಳು ಮತ್ತು ಕಠಿಣ ಮಾರ್ಜಕಗಳು ನಿಮ್ಮ ಯೋನಿಯಿಂದ ದೇಹದ ರಕ್ಷಣಾತ್ಮಕ ತೈಲಗಳನ್ನು ಹಿಂಡಿ ತೆಗೆದಾವು ಮತ್ತು ನಿಮ್ಮ ತ್ವಚೆಯ ನೈಸರ್ಗಿಕ pH ಮಟ್ಟವನ್ನೇ ಏರುಪೇರುಗೊಳಿಸಿಯಾವು.

  ಜೆನ್ ಗುಂಟರ್, ಎಂ.ಡಿ. ಇವರು ಸೇಫ಼್ ಬೀ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿರುವ ಪ್ರಕಾರ, ಸುವಾಸಿತ ನೊರೆಸ್ನಾನವು ಕಿರಿಕಿರಿಯನ್ನುಂಟು ಮಾಡುವ ತ್ವಚೆಯ ಆರ್ದ್ರತೆ, ಯೋನಿಯ ಸೋಂಕುಗಳು, ಹಾಗೂ ಜೊತೆಗೆ ಮೂತ್ರಕೋಶದ ಸೋಂಕಿಗೂ ದಾರಿಮಾಡಿಕೊಡುತ್ತದೆ.


 • 3. ಯೋನಿಗೆ ರಾಸಾಯನಿಕ ಮಿಶ್ರಿತ ನೀರು

  ರಾಸಾಯನಿಕ ವಸ್ತುಗಳನ್ನು ಮಿಶ್ರಗೊಳಿಸಿದ ನೀರಿನ್ನು ಯೋನಿಯೊಳಗೆ ಬಿಟ್ಟು ತೊಳೆದುಕೊಳ್ಳುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಅಷ್ಟೇನೂ ಹಿತಕರವಲ್ಲ ಎಂದು ಎಲ್ಲೆಡೆಯಲ್ಲಿನ ಸ್ತ್ರೀರೋಗ ತಜ್ಞರು ಒಪ್ಪಿಕೊಳ್ಳುತ್ತಾರೆ.

  ಕೆನಡಾದ ರೀಡರ್ಸ್ ಡೈಜೆಸ್ಟ್ ಗೆ ಹೇಳಿರುವ ಪ್ರಕಾರ, ರಾಸಾಯನಿಕಯುಕ್ತ ನೀರನ್ನು ಯೋನಿಯೊಳಗೆ ಬಿಟ್ಟುಕೊಂಡು ಯೋನಿಯನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿದಲ್ಲಿ, ಅದು ದೇಹದ ನೈಸರ್ಗಿಕ pH ಮಟ್ಟವನ್ನು ಏರುಪೇರಾಗಿಸುತ್ತದೆ ಹಾಗೂ ದೇಹದ ಪ್ರಯೋಜನಕಾರೀ ಬ್ಯಾಕ್ಟೀರಿಯಾಗಳನ್ನು ತೊಳೆದು ಹಾಕುವುದರ ಮೂಲಕ, ಸೋಂಕುಗಳ ಸರಮಾಲೆಗೇ ದಾರಿಮಾಡಿಕೊಡುತ್ತದೆ.

  ಪಾರಿಸಾರಿಕ ಆರೋಗ್ಯದ ಅಧ್ಯಯನವೊಂದು ಕಂಡುಕೊಂಡಿರುವ ಪ್ರಕಾರ, ರಾಸಾಯನಿಕಯುಕ್ತ ನೊರೆ ಉತ್ಪನ್ನಗಳು ಪ್ತಾಲೇಟ್ಸ್ ಎಂದು ಕರೆಯಲ್ಪಡುವ ಹಾನಿಕಾರಕ ರಾಸಾಯನಿಕಗಳಿಗೆ ನಿಮ್ಮ ದೇಹವು ತೆರೆದುಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಈ ರಾಸಾಯನಿಕಗಳು ನಿಮ್ಮ ಶರೀರದ ಹಾರ್ಮೋನುಗಳ ವ್ಯವಸ್ಥಿತಿಯನ್ನು ಹದಗೆಡಿಸುತ್ತವೆ, ದೀರ್ಘಕಾಲೀನ ರೋಗದ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ, ಹಾಗೂ ಕಾಲಕ್ರಮೇಣ ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತವೆ.


 • 4. ಹಸ್ತ ಸ್ವಚ್ಛಕಾರಕ (ಹ್ಯಾಂಡ್ ಸಾನಿಟೈಜ಼ರ್)

  ಅಡಿಗಡಿಗೆ ಎಂಬಂತೆ ನೀವು ಮೇಲಿಂದ ಮೇಲೆ ಹಸ್ತ ಸ್ವಚ್ಛಕಾರಕವನ್ನು ಕೈಗಳಿಗೆ ಸಿಂಪಡಿಸಿಕೊಂಡು, ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಹವ್ಯಾಸಿಗರಾಗಿದ್ದರೆ, ನಿಜಕ್ಕೂ ನೀವು ನಿಮ್ಮ ಆರೋಗ್ಯಕ್ಕೆ ಒಳಿತಿಗಿಂತಲೂ ಕೆಡುಕನ್ನೇ ಮಾಡುತ್ತಿರುವಿರಿ ಎಂದು ಹೇಳದೇ ನಮಗೆ ಬೇರೆ ವಿಧಿಯಿಲ್ಲ!


  ಹಸ್ತ ಸ್ವಚ್ಛಕಾರಕದಲ್ಲಿರಬಹುದಾದ ಟ್ರೈಕ್ಲೋಸಾನ್ ಎಂಬ ಹೆಸರಿನ ಸಂಶ್ಲೇಷಿತ ರಾಸಾಯನಿಕವೊಂದು, ಸಾಬೂನು ಮತ್ತು ನೀರಿಗೆ ಹೋಲಿಸಿದಲ್ಲಿ, ದುರ್ಬಲ ಹಾಗೂ ಅಪಾಯಕಾರೀ ಗುಣಮಟ್ಟದ್ದಾಗಿದೆ ಎಂದು ಅಮೇರಿಕಾ ಸಂಯುಕ್ತ ಸಂಸ್ಥಾನಗಳ ಆಹಾರ ಮತ್ತು ಜೌಷಧ ಉಸ್ತುವಾರಿ ಸಂಸ್ಥೆಯು ಎಚ್ಚರಿಸುತ್ತದೆ.


  ಹಸ್ತ ಸ್ವಚ್ಛಕಾರಕಗಳಲ್ಲಿ ಅಡಕವಾಗಿರುವ ಕೆಲನಿರ್ಧಿಷ್ಟವಾದ ಸಕ್ರಿಯ ಘಟಕಗಳಿಗೆ ದೀರ್ಘಕಾಲದವರೆಗೆ ತೆರೆದುಕೊಂಡಲ್ಲಿ ಅದು ಬ್ಯಾಕ್ಟೀರಿಯಾ ಪ್ರತಿರೋಧಕ ಅಥವಾ ಹಾರ್ಮೋನು ಏರುಪೇರಾಗುವಿಕೆಯಂತಹ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ.


 • 5. ಏರ್‌ ಡ್ರೈಯರ್ ಗಳು

  ಪರಿಸರದ ದೃಷ್ಟಿಯಿಂದ ಹೇಳುವುದಾದರೆ, ಖಂಡಿತವಾಗಿಯೂ ಏರ್‌ ಡ್ರೈಯರ್ ಗಳು ಕಾಗದದ ಟವೆಲ್ ಗಳಿಗಿಂತ ಉತ್ತಮವೇ, ಆದರೆ ಮೆಯೋ ಕ್ಲಿನಿಕ್ ಕೈಗೊಂಡಿರುವ ಸಂಶೋಧನೆಯೊಂದು ಪ್ರಚುರಪಡಿಸಿರುವ ಪ್ರಕಾರ, ವೈಯಕ್ತಿಕ ನೈರ್ಮಲ್ಯದ ವಿಚಾರಕ್ಕೆ ಬಂದಾಗ, ಪೇಪರ್ ಟವಲ್ ಗಳು ವಿದ್ಯುತ್ ಡ್ರೈಯರ್ ಗಳಿಗಿಂತ ಅದೆಷ್ಟೋ ಮೇಲು ಎಂದು ಸುಲಭವಾಗಿ ಸಾಬೀತಾಗುತ್ತದೆ.

  ಬಳಕೆಯ ನಂತರವೂ ಕೈಗಳಲ್ಲಿ ಉಳಿದುಕೊಂಡಿರಬಹುದಾದ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕುವಲ್ಲಿ ಈ ವಿದ್ಯುತ್ ಡ್ರೈಯರ್ ಗಳು ಸೋಲುತ್ತವೆ. ಅಷ್ಟೇ ಅಲ್ಲ; ಇದಕ್ಕಿಂತಲೂ ಕೆಟ್ಟ ಸಂಗತಿಯೇನೆಂದರೆ ಈ ವಿದ್ಯುತ್ ಡ್ರೈಯರ್ ಗಳು ಬ್ಯಾಕ್ಟೀರಿಯಾಗಳನ್ನು ಅಕ್ಷರಶ: ಸಂಪೂರ್ಣ ಕೊಠಡಿಯಲ್ಲೆಲ್ಲಾ ಹರಡಿಬಿಡುತ್ತವೆ ಹಾಗೂ ಆ ಮೂಲಕ ಮಲದಲ್ಲಿರಬಹುದಾದ ಬಗೆಬಗೆಯ ಬ್ಯಾಕ್ಟೀರಿಯಾಗಳನ್ನೆಲ್ಲಾ ಒಳಗೊಂಡಿರುವ ಒಂದು ರೋಗಕಾರಕ ಮಂಜನ್ನೇ ಕೊಠಡಿಯಲ್ಲಿ ಸೃಷ್ಟಿಸಿಬಿಡುತ್ತವೆ.

  ಏರ್ ಡ್ರೈಯರ್ ಬಳಕೆದಾರನ ಸುತ್ತಲಿನ ಸುಮಾರು 2 ಮೀಟರ್ ಗಳಷ್ಟರ ಒಳಗಿನ ವ್ಯಾಪ್ತಿಯಲ್ಲೇ ಗಾಳಿಯಿಂದ ಹರಡುವ ಗಮನಾರ್ಹ ಸಂಖ್ಯೆಯ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಅಧ್ಯಯನಗಳು ಕಂಡುಕೊಂಡಿವೆ.


 • 6. ಬಿಸಿನೀರಿನ ಸ್ನಾನದಲ್ಲಿ ಮೈಮರೆಯುವುದು

  ಬೆಳಗ್ಗೆ ಎದ್ದೊಡನೆಯೇ ಮೊಟ್ಟಮೊದಲು ದೀರ್ಘಕಾಲದವರೆಗೆ ಬಿಸಿಬಿಸಿ ನೀರಿನ ಸ್ನಾನ ಮಾಡುತ್ತಾ ಮೈಮರೆಯುವುದರಲ್ಲಿ ಸಿಗುವ ಮಜಾ ಇನ್ಯಾವುದರಲ್ಲಿ ತಾನೇ ಸಿಕ್ಕೀತು ಅಲ್ಲವೇ ? ಆದರೆ, ನಿಜಕ್ಕೂ ಈ ಅಭ್ಯಾಸ ನಿಮ್ಮ ತ್ವಚೆಗೆ ಹಿತಕಾರಿಯೇ?.


  ಬಿಸಿನೀರಿನ ಸ್ನಾನವು ನಿಮ್ಮ ತ್ವಚೆಯ ರಕ್ಷಣಾತ್ಮಕ ತೈಲಾಂಶವನ್ನು ನಿವಾರಿಸಿ ತೆಗೆದುಬಿಡುತ್ತದೆ. ಹಾಗಾಗಿ, ಬಿಸಿನೀರಿನ ಸ್ನಾನದ ಅವಧಿಯನ್ನು ನೀವು ಎಷ್ಟು ಕಿರಿದಾಗಿಸಿಕೊಳ್ಳುತ್ತೀರೋ ಅಷ್ಟು ಒಳ್ಳೆಯದು.


  ಅಂದಹಾಗೆ, ಈ ಬಿಸಿನೀರಿನ ಸ್ನಾನವನ್ನು ರಾತ್ರಿಯ ವೇಳೆ ಕೈಗೊಳ್ಳುವುದು ಅತ್ಯಂತ ಪ್ರಯೋಜನಕಾರಿ ಎಂದು ವಿಜ್ಞಾನವು ಹೇಳುತ್ತದೆ. ಸ್ನಾನದ ಬಳಿಕ ದೇಹದೊಳಗೆ ಜರುಗುವ ತಂಪುಗೊಳಿಸುವ ಪ್ರಕ್ರಿಯೆಯು, ದೇಹದ ಚಯಾಪಚಯ ಚಟುವಟಿಕೆಗಳನ್ನು ನಿಧಾನಗೊಳಿಸುತ್ತದೆ (ಜೀರ್ಣಕ್ರಿಯೆ, ಉಸಿರಾಟ, ಮತ್ತು ಹೃದಯ ಬಡಿತದ ದರ ಇತ್ಯಾದಿ) ಹಾಗೂ ಆ ಮೂಲಕ, ಸುಲಭವಾಗಿ ನಿದ್ರೆಗೆ ಜಾರಿಕೊಳ್ಳಲು ನೆರವಾಗುತ್ತದೆ.


 • 7. ಪ್ರತಿದಿನವೂ ನಿಮ್ಮ ಕೇಶರಾಶಿಯನ್ನು ಸ್ವಚ್ಛಗೊಳಿಸಿಕೊಳ್ಳುವುದು

  ನಮ್ಮಲ್ಲಿ ಬಹುತೇಕ ಮಂದಿಗೆ ಕೇಶರಾಶಿಯನ್ನು ಅದೆಷ್ಟು ತೊಳೆದು ಸ್ವಚ್ಛಗೊಳಿಸಿಕೊಂಡರೂ ತೃಪ್ತಿಯೇ ಇರದು. ಆದರೆ, ಕೇಶರಾಶಿಯ ಕುರಿತಂತೆ ಈ ನಿಮ್ಮ ಅತಿಯಾದ ಕಾಳಜಿಗೆ ಬೆಲೆ ತೆರಬೇಕಾಗಿ ಬರುವುದು ಮತ್ತದೇ ಕೇಶರಾಶಿಗೆಯೇ.

  ಪ್ರತಿದಿನವೂ ಎಂಬಂತೆ, ನಿಮ್ಮ ಕೇಶರಾಶಿಯನ್ನು ಹಾಗೆ ಅತಿಯಾಗಿ ತೊಳೆಯುತ್ತಾ ಬಂದಲ್ಲಿ, ಅದು ಕೇಶರಾಶಿಗೆ ಅತ್ಯಗತ್ಯವಾಗಿರುವ ನೈಸರ್ಗಿಕ ತೈಲಾಂಶಗಳನ್ನೂ ತೊಳೆದುಹಾಕಿಬಿಡುತ್ತದೆ ಹಾಗೂ ಈ ಪರಿಸ್ಥಿತಿಯು ಶುಷ್ಕವಾದ ಹಾಗೂ ಸುಲಭವಾಗಿ ತುಂಡಾಗುವ ಕೇಶರಾಶಿಗೆ ದಾರಿಮಾಡಿಕೊಡುತ್ತದೆ (ಜಿಡ್ಡುಜಿಡ್ಡಾದ ಕೂದಲಿದ್ದರೂ ಸಹ).


 • 8. ಮಾಯ್ಶ್ಚರೈಸರ್ (ತೇವಕಾರಕ) ನ ಅತಿಯಾದ ಬಳಕೆ

  ಶುಷ್ಕವಾದ, ತುರಿಕೆಯನ್ನುಂಟುಮಾಡುವ ತ್ವಚೆಯು ನಿಮ್ಮದಾಗಿದ್ದರೆ, ಹೇಗಾದರೂ ಸರಿಯೇ, ಯಾವುದಾದರೊಂದು ಲೋಶನ್ ಅನ್ನು ಮೈಗೆ ತಿಕ್ಕಿಕೊಳ್ಳುವ ತುಡಿತಕ್ಕೊಳಗಾಗುವುದು ಸಹಜವೇ. ಆದರೆ, ಎಲ್ಲಾ ಸಂದರ್ಭಗಳಲ್ಲಿಯೂ ಇದು ಯೋಗ್ಯ ಪರಿಹಾರವೆಂದೆನಿಸಿಕೊಳ್ಳಲಾರದು.


  ಗಾರ್ನಿಯರ್ ನ ತಜ್ಞರು ಹೇಳುವ ಪ್ರಕಾರ, ರಾತ್ರಿಯ ವೇಳೆ ಅಧಿಕ ಪ್ರಮಾಣದಲ್ಲಿ ತ್ವಚೆಗೆ ತೇವಕಾರಕವನ್ನು ಲೇಪಿಸಿಕೊಳ್ಳುವುದರಿಂದ, ಅದು ತ್ವಚೆಗೆ ಒಂದು ಬಗೆಯ ಅನಾರೋಗ್ಯಕರ ಸಹಿಷ್ಣುತೆಯನ್ನು ಕೊಡುತ್ತದೆ. ಈ ಸಹಿಷ್ಣುತೆಯು ದೀರ್ಘಕಾಲೀನವಾದಾಗ, ಅದು ತ್ವಚೆಯನ್ನು ಮತ್ತಷ್ಟು ಒಣಕಲಾಗಿಸುತ್ತದೆ.


  ಇದೊಂದು ವಿಷವರ್ತುಲಕ್ಕೆ ದಾರಿಮಾಡಿಕೊಟ್ಟು ನಿಮ್ಮ ತ್ವಚೆಯು ಮುಂದೆಂದೂ ಅತ್ಯಗತ್ಯ ಪೋಷಕಾಂಶಗಳನ್ನು ಉತ್ಪತ್ತಿ ಮಾಡದ ಸ್ಥಿತಿಗೆ ತ್ವಚೆಯನ್ನು ತಲುಪಿಸುವುದರ ಮೂಲಕ, ನೀವು ತೇವಕಾರಕದ ಮೇಲೆ ಇನ್ನಷ್ಟು ಅವಲಂಬಿತರಾಗುವಂತೆ ಮಾಡಿಬಿಡುತ್ತದೆ.
  ಈ ಪರಿಸ್ಥಿತಿಯನ್ನು ತಡೆಗಟ್ಟಲು, ತೇವಕಾರಕವನ್ನು ತೆಳುವಾಗಿ ಮಾತ್ರವೇ ಲೇಪಿಸಿಕೊಳ್ಳಿರಿ ಅಥವಾ ಬದಲಿಗೆ ತೈಲ-ಮುಕ್ತ ಬಾಮ್ ಅನ್ನು ಹಚ್ಚಿಕೊಳ್ಳುವುದನ್ನು ರೂಢಿಸಿಕೊಳ್ಳಿರಿ.


 • 9 . ಊಟವಾದ ಕೂಡಲೇ ಹಲ್ಲುಜ್ಜುವುದು

  ಪ್ರತಿಬಾರಿಯೂ ಊಟವಾದ ಬಳಿಕ, ಹಲ್ಲುಗಳೆಡೆಗಳಲ್ಲಿ, ಆಹಾರದ ಕಣಗಳು ಸಿಲುಕಿಕೊಳ್ಳುವುದು ಸರ್ವೇಸಾಮಾನ್ಯವಾಗಿದ್ದು ಇವು ಬಾಯಿಯ ನೈರ್ಮಲ್ಯಕ್ಕೆ ತೊಡಕಾಗುತ್ತವೆ.


  ಹಾಗಂತ ಪ್ರತಿಬಾರಿಯೂ ಊಟವಾದ ಕೂಡಲೇ ಹಲ್ಲುಜ್ಜುವ ಅಭ್ಯಾಸ ಒಳ್ಳೆಯದೇನೂ ಅಲ್ಲ ಎಂದರೆ ನಿಮಗಚ್ಚರಿಯಾದೀತು! ಏಕೆಂದರೆ, ವಿಶೇಷವಾಗಿ ಸಿಟ್ರಿಕ್ ಆಮ್ಲವುಳ್ಳ ಕೆಲವು ಆಹಾರಪದಾರ್ಥಗಳ ಸೇವನೆಯ ಬಳಿಕ, ಅವುಗಳಲ್ಲಿನ ಸಿಟ್ರಿಕ್ ಆಮ್ಲದ ಅಂಶವು, ಹಲ್ಲುಗಳ ಎನಾಮಲ್ ಅನ್ನು ದುರ್ಬಲಗೊಳಿಸುವ ಸಾಧ್ಯತೆಯಿರುತ್ತದೆ ಹಾಗೂ ಊಟವಾದ ಕೂಡಲೇ ಹಲ್ಲುಜ್ಜಲು ಮುಂದಾದರೆ, ಸಿಟ್ರಿಕ್ ಆಮ್ಲದ ಕಾರಣದಿಂದ ಈಗಾಗಲೇ ದುರ್ಬಲಗೊಂಡಿರುವ ಎನಾಮಲ್, ನಿಮ್ಮ ಹಲ್ಲುಜ್ಜುವಿಕೆಯ ಕ್ರಿಯೆಯಿಂದ ಸಂಪೂರ್ಣ ಎದ್ದುಹೋಗುವ ಸಾಧ್ಯತೆ ಇರುತ್ತದೆ.

  ಊಟವಾದ ಬಳಿಕ ಕನಿಷ್ಟ ಅರ್ಧಘಂಟೆಯ ಕಾಲ ಹಲ್ಲುಜ್ಜದೇ ಹಾಗೆಯೇ ಬಿಟ್ಟಲ್ಲಿ, ಲಾಲಾರಸವು ಬಾಯಿಯಲ್ಲಿನ ಆಮ್ಲೀಯ ಅಂಶವನ್ನು ತಟಸ್ಥಗೊಳಿಸುತ್ತದೆ ಹಾಗೂ ಹಲ್ಲಿನ ಎನಾಮಲ್ ಬಲವನ್ನು ಮರಳಿತರುತ್ತದೆ. ಇದಾದ ಬಳಿಕ, ಅಗತ್ಯವಿದ್ದಲ್ಲಿ ಹಲ್ಲುಜ್ಜಲು ಮುಂದಾಗಬಹುದು.


 • 10. ತ್ವಚೆಯ ನಿರ್ಜೀವಕೋಶಗಳ ನಿವಾರಣೆಗಾಗಿ ತ್ವಚೆಯನ್ನು ವಿಪರೀತ ಉಜ್ಜಿಕೊಳ್ಳುವುದು

  "ತ್ವಚೆಯನ್ನು ಆಗಾಗ್ಗೆ ಉಜ್ಜಿಕೊಳ್ಳುವುದರ ಮೂಲಕ, ತ್ವಚೆಯನ್ನು ನಿರ್ಮಲಗೊಳಿಸಿಕೊಂಡು, ತನ್ಮೂಲಕ ತ್ವಚೆಯನ್ನು ಚೆನ್ನಾಗಿ ಕಾಪಾಡಿಕೊಳ್ಳುತ್ತಿದ್ದೇನೆ" ಎಂಬ ಭಾವನೆಯು ನಿಮ್ಮದಾಗಿರಬಹುದು.

  ಆದರೆ ನೆನಪಿಟ್ಟುಕೊಳ್ಳಿ, ಹೀಗೆ ಅತಿಯಾಗಿ ತ್ವಚೆಯನ್ನು ಉಜ್ಜುವುದರ ಮೂಲಕ ವಾಸ್ತವವಾಗಿ ನೀವು ತ್ವಚೆಯ ಹೊರತೊಗಟೆಯನ್ನು ಹಾಳುಗೆಡವಿಕೊಳ್ಳುತ್ತಿರುವಿರಿ.
  ಏಕೆಂದರೆ, ಹೀಗೆ ಮಾಡಿದಾಗ ಧೂಳು ಮುಂತಾದ ಬಾಹ್ಯ ಮಾಲಿನ್ಯಕಾರಕಗಳು ನಿಮ್ಮ ತ್ವಚೆಯ ರಂಧ್ರಗಳನ್ನು ಪ್ರವೇಶಿಸದಂತೆ ತಡೆಗಟ್ಟುವ ಪದರವನ್ನೇ ನೀವು ಕಿತ್ತುಹಾಕಿದಂತಾಗುತ್ತದೆ.

  ಚರ್ಮಶಾಸ್ತ್ರಕ್ಕೆ ಸಂಬಂಧಿಸಿದ ಸಂಸ್ಥೆಯೊಂದು ಹೇಳಿರುವ ಪ್ರಕಾರ, ನೀವು ತ್ವಚೆಯನ್ನು ಹೆಚ್ಚು ಹೆಚ್ಚು ಉಜ್ಜಿಕೊಂಡಂತೆಲ್ಲಾ, ಅದಕ್ಕೆ ಪರಿಹಾರೋಪಾಯವಾಗಿ ನಿಮ್ಮ ಸ್ವೇಧಗ್ರಂಥಿಗಳು ಹೆಚ್ಚು ಹೆಚ್ಚು ತೈಲಗಳನ್ನು ಉತ್ಪಾದಿಸಲಾರಂಭಿಸುತ್ತವೆ, ಹಾಗೂ ಇದರ ಪರಿಣಾಮವಾಗಿ ನಿಮ್ಮ ತ್ವಚೆಯು ತೀರಾ ಶುಷ್ಕತೆಯ ಮತ್ತು ತೀರಾ ತೈಲಯುಕ್ತ ಸ್ಥಿತಿಗಳ ನಡುವೆ ಓಲಾಡಲಾರಂಭಿಸುತ್ತದೆ.


  ನಿಮ್ಮ ತ್ವಚೆಯು ಒಂದು ರೀತಿಯ ಅಸಮತೋಲನ ಚಕ್ರಕ್ಕೆ ಸಿಲುಕಿಕೊಂಡಂತಾಗುತ್ತದೆ. ಆದ್ದರಿಂದ ತ್ವಚೆಯನ್ನು ಹೀಗೆ ಉಜ್ಜುವುದರ ಬದಲಿಗೆ, ಪ್ಯಾರಾಬೆನ್ ಗಳಿಂದ ಮುಕ್ತವಾಗಿರುವ ಹಾಗೂ ಬಳಕೆಗೆ ಸುರಕ್ಷಿತವಾಗಿರುವ ರಾಸಾಯನಿಕ ಎಕ್ಸ್ಫ಼ೋಲಿಯೆಂಟ್ ಗಳ ಮೊರೆ ಹೋಗಿರಿ. ಇವುಗಳನ್ನು ವಾರಕ್ಕೊಮ್ಮೆ ಬಳಸಿದರೆ ಸಾಕು.


 • 11. ನಿಮ್ಮ ಕೈಗಳಲ್ಲಿಯೇ ಸೀನುವುದು/ಸೀನಿಕೊಳ್ಳುವುದು

  ಸೀನುವಾಗ ಹೊರವಾತಾವರಣದಲ್ಲಿ ಬಗ್ಗಿ ಸೀನುವುದರ ಬದಲು ಮೂಗನ್ನು ಅಥವಾ ಮುಖವನ್ನು ಮುಚ್ಚಿಕೊಳ್ಳುವುದು ಲೇಸೆಂದು ನಿಮ್ಮ ಅನಿಸಿಕೆಯೇ ?! ಹಾಗಿದ್ದಲ್ಲಿ ಅದು ನಿಮ್ಮ ತಪ್ಪು ಕಲ್ಪನೆ.
  ಸೀನುವಾಗ ಕೈಗಳನ್ನು ಬಳಸಿ, ಬಳಿಕ ಅದೇ ಕೈಗಳಿಂದ ಆಹಾರಪದಾರ್ಥವನ್ನೋ, ಹಣವನ್ನೋ, ಅಥವಾ ಇತರರನ್ನೋ ಸ್ಪರ್ಶಿಸುವುದೆಂದರೆ ಅದು ಸಾಂಕ್ರಾಮಿಕ ವೈರಾಣುಗಳ ಹರಡುವಿಕೆಗೆ ದಾರಿಮಾಡಿಕೊಟ್ಟಂತೆಯೇ.

  ಕಲುಷಿತಗೊಂಡ ಕೈಗಳಿಂದ ವಸ್ತುಗಳನ್ನು ಅಥವಾ ವ್ಯಕ್ತಿಗಳನ್ನು ಸ್ಪರ್ಶಿಸುವುದೇ ಅತ್ಯಂತ ಗಂಭೀರ ಸ್ವರೂಪದ ಶ್ವಾಸಕೋಶ ಸಂಬಂಧೀ ರೋಗಗಳು ಹರಡಲು ಕಾರಣವಾಗಿರುತ್ತದೆ. ಹಾಗಾಗಿ, ನಿಮ್ಮ ಸುತ್ತಮುತ್ತಲಿರುವ ಎಲ್ಲರ ಹಿತದೃಷ್ಟಿಯಿಂದ, ವಿಧೇಯರಾಗಿ ಮ್ಮ ಮಣಿಕಟ್ಟಿನ ಮೇಲೆ ಸೀನಿಕೊಳ್ಳಿರಿ.


 • 12. ಒಳ-ಉಡುಪುಗಳಲ್ಲಿ ಸುಗಂಧದ್ರವ್ಯಗಳನ್ನು ಸಿಂಪಡಿಸಿಕೊಳ್ಳುವುದು

  ಬಹುತೇಕ ಮಂದಿಗೆ ಸುಗಂಧದ್ರವ್ಯಗಳನ್ನು ಶರೀರದ ತಮ್ಮ ಸೊಂಟದ ಕೆಳಗಿನ ಭಾಗಗಳಿಗೆಲ್ಲಾ ಸೋಕಿಸಬಾರದೆಂಬ ಸಾಮಾನ್ಯ ಜ್ಞಾನವಿರುತ್ತದೆಯಾದರೂ ಸಹ, ದೇಹಕ್ಕೆ ನೇರವಾಗಿಯಲ್ಲದಿದ್ದರೂ ತಮ್ಮ ಒಳ-ಉಡುಪುಗಳನ್ನು ದುರ್ಗಂಧಮುಕ್ತಗೊಳಿಸಿಕೊಳ್ಳುವ ಚಪಲ ಕೆಲವರಿಗಿರುತ್ತದೆ.

  ಸತ್ಯ ಸಂಗತಿಯೇನೆಂದರೆ, ಗುಪ್ತಾಂಗಗಳ ಸಂಪರ್ಕಕ್ಕೆ ಬಂದ ಯಾವುದೇ ರಾಸಾಯನಿಕವು ಶರೀರದ ನೈಸರ್ಗಿಕ pH ಮಟ್ಟದೊಂದಿಗೆ ಚೆಲ್ಲಾಟವಾಡುತ್ತದೆ ಹಾಗೂ ಇದರ ಪರಿಣಾಮವಾಗಿ ನೀವು ಯೀಸ್ಟ್ ಸೋಂಕಿಗೆ ಅಥವಾ ಬ್ಯಾಕ್ಟೀರಿಯಾ ಪ್ರೇರಿತ ಯೋನಿಯ ಉರಿಯೂತಕ್ಕೆ ಅಥವಾ ಮೂತ್ರನಾಳದ ಸೋಂಕಿಗೆ ಈಡಾಗುವ ಸಾಧ್ಯತೆಯೇ ಅಧಿಕವಾಗಿರುತ್ತದೆ

  (ವಿಪರ್ಯಾಸವೆಂದರೆ, ನೀವೇನಾಗಬಾರದೆಂದು ಈ ಸುಗಂಧದ್ರವ್ಯವನ್ನು ಗುಪ್ತಾಂಗಭಾಗಗಳಿಗೆ ಸಿಂಪಡಿಸಿಕೊಂಡಿರೋ, ಅದಕ್ಕೆ ವ್ಯತಿರಿಕ್ತವಾಗಿ, ಇಲ್ಲಿ ಹೆಸರಿಸಿರುವ ಸೋಂಕುಗಳ ಸಾಧ್ಯತೆಯಿಂದ ಅವು ಇನ್ನಷ್ಟು ದುರ್ಗಂಧ ಬೀರುವ ಸಾಧ್ಯತೆಯೇ ಅಧಿಕವಾಗುತ್ತದೆ).


  ಗುಪ್ತಾಂಗಗಳಿಗೆ ತಮ್ಮನ್ನು ತಾವೇ ನೈಸರ್ಗಿಕವಾಗಿ ಹೇಗೆ ಸ್ವಚ್ಛವಾಗಿರಿಸಿಕೊಳ್ಳಬೇಕೆಂದು ಗೊತ್ತಿರುತ್ತದೆಯಾದ್ದರಿಂದ, ನೀವು ಈ ವಿಚಾರದಲ್ಲಿ ಹೀಗೆಲ್ಲಾ ಅನವಶ್ಯಕವಾಗಿ ಹಸ್ತಕ್ಷೇಪ ಮಾಡದೇ ಅವುಗಳ ಗೊಡವೆಗೆ ಹೋಗದೇ ಇರುವುದರ ಮೂಲಕ ನಿಮಗೆ ನೀವೇ ಉಪಕಾರ ಮಾಡಿಕೊಳ್ಳಿರಿ.

  ಏಕೆಂದರೆ, ತಮ್ಮ ನೈರ್ಮಲ್ಯಕ್ಕೆ ತಾವೇನು ಮಾಡಿಕೊಳ್ಳಬೇಕೆಂದು ಪ್ರಕೃತಿಯೇ ಅವುಗಳಿಗೆ ತರಬೇತಿ ನೀಡಿರುತ್ತದೆ!
"ನನ್ನ ಆರೋಗ್ಯ ಹಾಗೂ ನನ್ನ ಬಾಹ್ಯ ಸೌಂದರ್ಯವನ್ನು ಸುಧಾರಿಸಿಕೊಳ್ಳುವುದಕ್ಕೆ ಏನೇನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ನಾನು ಮಾಡಿಕೊಳ್ಳುತ್ತಿದ್ದೇನೆ" ಎಂಬುದು ನಿಮ್ಮ ಅನಿಸಿಕೆಯಾಗಿರಬಹುದು.

ಆದರೆ "ಒಳ್ಳೆಯ ಅಭ್ಯಾಸಗಳು"ಎಂದು ನೀವು ಅಂದುಕೊಂಡಿರುವ, ನೈರ್ಮಲ್ಯಕ್ಕೆ ಸಂಬಂಧಿಸಿದ, ಸರ್ವೇಸಾಮಾನ್ಯವಾಗಿರುವ ಈ ಹವ್ಯಾಸಗಳು, ಒಳ್ಳೆಯದನ್ನು ಮಾಡುವುದಕ್ಕಿಂತ ನಿಮಗೆ ಕೆಟ್ಟದ್ದನ್ನೇ ಮಾಡುವ ಸಾಧ್ಯತೆಯೇ ಹೆಚ್ಚು ಎಂದು ನಾವು ಹೇಳಿದರೆ ನಿಮಗೆ ಅಚ್ಚರಿಯಾದೀತು!!

ಹಾಗಾದಾರೆ ಅಂತಹ ಆ ಹವ್ಯಾಸಗಳು ಯಾವುದಿರಬಹುದು ಎಂದು ಯೋಚಿಸುತ್ತಿರುವಿರೇನು ?!! ಬನ್ನಿ ನೋಡೋಣ!!

   
 
ಹೆಲ್ತ್