Back
Home » ಚಿತ್ರವಿಮರ್ಶೆ
'ಕಾಣದಂತೆ ಮಾಯವಾದನು' Review: ಫ್ಯಾಂಟಸಿಯೊಳಗೆ ಹಲವು ಮುಖ
Oneindia | 7th Mar, 2020 02:59 PM
 • ಒಳ್ಳೆಯ ದೆವ್ವದ ಪ್ರಯಾಣ

  ದೆವ್ವ ಭೂತಗಳು ಸಿನಿಮಾಗಳಲ್ಲಿ ಹೊಸತಲ್ಲ. ಆದರೆ 'ಒಳ್ಳೆಯ' ದೆವ್ವಗಳ ಸಂಖ್ಯೆ ಕಡಿಮೆ. ಬದುಕಿದ್ದಾಗ ಕೆಟ್ಟವನಾಗಿದ್ದ ಮನುಷ್ಯ ಒಳ್ಳೆಯನಾಗುವ ಪ್ರಯತ್ನದಲ್ಲಿದ್ದಾಗ ಸತ್ತರೆ ಆತ ಕೆಟ್ಟ ದೆವ್ವವಾಗುತ್ತಾನೋ? ಒಳ್ಳೆಯ ದೆವ್ವವಾಗುತ್ತಾನೋ? ಈ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ, ಅದಕ್ಕೆ ಸೊಗಸಾದ ಉತ್ತರವನ್ನು 'ಕಾಣದಂತೆ ಮಾಯವಾದನು' ಚಿತ್ರ ನೀಡುತ್ತದೆ.


 • ವಿವಿಧ ಆಯಾಮಗಳ ಕಥನ

  ಹಾಗೆಂದು ಇದು ಹಾರರ್ ಚಿತ್ರವಲ್ಲ. ದೆವ್ವ ಕಂಡು ಪ್ರೇಕ್ಷಕ ಬೆಚ್ಚಿ ಬೀಳುವುದಿಲ್ಲ. ಬದಲಾಗಿ ದೆವ್ವವನ್ನು ಪ್ರೀತಿಸುತ್ತಾನೆ. ಸಿನಿಮಾಗಳಲ್ಲಿ ದೆವ್ವಗಳ ಪರಿಕಲ್ಪನೆಯ ಕಥೆಗಳಿಗೆ ಅದರದ್ದೇ ಪರಂಪರೆಯಿದೆ. ಇದರಲ್ಲಿ ಒಂದಷ್ಟು ಫ್ಯಾಂಟಸಿ, ಸಸ್ಪೆನ್ಸ್ ಹಾಗೂ ಎಂದಿನ ದುಷ್ಟರ ಆರ್ಭಟದ ಕಥನಗಳನ್ನು ಸೇರಿಸುವ ಮೂಲಕ ಬೇರೆ ಆಯಾಮ ನೀಡಿದ್ದಾರೆ ನಿರ್ದೇಶಕ ರಾಜ್ ಪತ್ತಿಪಾಟಿ. ದ್ವಿತೀಯಾರ್ಧದಲ್ಲಿ ತುಂಬಿ ತುಳುಕುವ ಹಾಸ್ಯ ಸನ್ನಿವೇಶಗಳು ಅಂತ್ಯದವರೆಗೂ ಮುದಗೊಳಿಸುತ್ತವೆ.

  ಕಷ್ಟಪಟ್ಟು ಮಾಡಿದ ಸಿನಿಮಾಕ್ಕೆ ಬುಕ್‌ ಮೈ ಶೋ ಇಟ್ಟ ಗುನ್ನಾ


 • ನಾಯಕನ ಬದುಕಿನ ದುರಂತ

  ಸಿನಿಮಾ ಆರಂಭವಾಗುವುದೇ ನಾಯಕನ ಕೊಲೆಯಿಂದ. ಮಂಡಿಯೂರಿ ಕುಳಿತಿರುವ ನಾಯಕನ

  ಬೆನ್ನಿನ ಮೂಲಕ ಎದೆಯಿಂದ ಹೊರಬಂದ ಚಾಕು, ಗಹಗಹಿಸುತ್ತಿರುವ ಖಳನಾಯಕ, ಹಸಿದು ಕುಳಿತಂತೆ ಕಾದ ನಾಯಿ ಇವೆಲ್ಲವೂ ನಾಯಕನ ಬದುಕಲ್ಲಿ ದುರಂತ ನಡೆದಿದೆ ಎಂಬ ಊಹೆಯನ್ನು ಕಟ್ಟಿಕೊಡುತ್ತದೆ.


 • ಒಂದು ಸಿನಿಮಾ-ಹಲವು ಭಾವ

  ಸಿನಿಮಾದ ಕಥೆಯ ಮೇಲೆ ಪ್ರೇಕ್ಷಕ ತನ್ನದೇ ಕಲ್ಪನೆ ಕಟ್ಟಿಕೊಳ್ಳಲು ಆರಂಭಿಸುತ್ತಿದ್ದಂತೆಯೇ ಹಠಾತ್ತನೆ ಫ್ಯಾಂಟಸಿ ಜಗತ್ತು ತೆರೆದುಕೊಳ್ಳುತ್ತದೆ. ನಿರ್ದೇಶಕರು ಜಾಣ್ಮೆಯಿಂದ ಸಿನಿಮಾದೊಳಗಿನ ಆಯಾಮಗಳ ಬಗ್ಗೆ ಕುತೂಹಲ ಮೂಡಿಸುತ್ತಾರೆ. ಆಕ್ಷನ್, ಪ್ರೇಮ, ಹಾಸ್ಯ, ಸಸ್ಪೆನ್ಸ್, ಕಣ್ಣೀರು ಹೀಗೆ ಹಲವು ಭಾವಗಳನ್ನು 'ಕಾಣದಂತೆ ಮಾಯವಾದನು' ಕಟ್ಟಿಕೊಡುತ್ತದೆ.


 • ಹಾಸ್ಯ, ಆಕ್ಷನ್, ಪ್ರೀತಿ

  ಖಳನಾಯಕನಿಂದ ಸಾಯುವ ನಾಯಕನಲ್ಲೊಂದು ಫ್ಲ್ಯಾಶ್‌ಬ್ಯಾಕ್ ಇದೆ. ಅದರಲ್ಲಿ ಹಲವು ಸಿನಿಮಾಗಳಲ್ಲಿ ನೋಡಿರುವ ಪ್ರೇಮಾಲಾಪ, ಖಳನ ಅಟ್ಟಹಾಸವಿದೆ. ಸ್ವಾಮೀಜಿಯ ಹೆಸರಿನಲ್ಲಿ ಆಟಾಟೋಪಗಳನ್ನಾಡುವ ವಾಸ್ತವದ ಗಂಭೀರ ಮುಖವಾಡಗಳಿಗೆ ಹಾಸ್ಯದ ಲೇಪವಿದೆ. ಆದರೆ ಅವುಗಳ ನಡುವೆ ಗಮನ ಸೆಳೆಯುವುದು ನಾಯಕ-ನಾಯಕಿಯ ಪಾತ್ರಗಳಲ್ಲಿನ ಸಮಾಜಮುಖಿ ವ್ಯಕ್ತಿತ್ವ. ಅವರ ನಡುವಿನ ಒಲವಿಗೂ ಅದುವೆ ಸೇತು.


 • ಧರ್ಮಣ್ಣ ಕಡೂರು ಕಚಗುಳಿ

  ಮೊದಲಾರ್ಧದಲ್ಲಿ ತುಸು ನಿಧಾನ ಎನಿಸುವ ಚಿತ್ರ ದ್ವಿತೀಯಾರ್ಧದಲ್ಲಿ ಧರ್ಮಣ್ಣ ಕಡೂರು ಪಾತ್ರದ ಆಗಮನದ ಮೂಲಕ ಚುರುಕು ಪಡೆದುಕೊಳ್ಳುತ್ತದೆ. ತನ್ನ ಕಣ್ಣಿಗೆ ಮಾತ್ರ ಕಾಣಿಸುವ ನಾಯಕನೊಂದಿಗೆ ಸಂಭಾಷಿಸುವ ಧರ್ಮಣ್ಣ ಕಚಗುಳಿ ಇಡುತ್ತಾರೆ. ಒಂದು ರೀತಿ ನಾಯಕನ ಪಾತ್ರವನ್ನೂ ಅವರು ಆವರಿಸಿಕೊಳ್ಳುತ್ತಾರೆ. ಇದಕ್ಕೆ ಮತ್ತಷ್ಟು ಶಕ್ತಿಮದ್ದು ತುಂಬುವುದು ಸ್ವಾಮೀಜಿ ಪಾತ್ರದ ಸುಚೇಂದ್ರ ಪ್ರಸಾದ್.


 • ಅಗಲಿದ ನಟ ರಾಘವ ಉದಯ್ ಸ್ಮರಣೆ

  ನಾಯಕ ನಟ ವಿಕಾಸ್ ತಮ್ಮ ಮೊದಲ ಪ್ರಯತ್ನದಲ್ಲಿ ಗಮನ ಸೆಳೆಯುತ್ತಾರೆ. ನಾಯಕಿಯಾಗಿ ಸಿಂಧು ಲೋಕನಾಥ್ ಕಣ್ಣ ಮಿಂಚಿನಲ್ಲಿಯೇ ಮಾತನಾಡುತ್ತಾರೆ. ದುರಂತದಲ್ಲಿ ಅಗಲಿದ ನಟ ರಾಘವ ಉದಯ್ ಖಳನಾಯಕನಾಗಿ ಮೊದಲ ಅರ್ಧದಲ್ಲಿ ನಟಿಸಿದ್ದಾರೆ. ದ್ವಿತೀಯಾರ್ಧದಲ್ಲಿ ಭಜರಂಗಿ ಲೋಕಿ ಅದಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿನ ಬದಲಾಗುವ ಕಥಾಹಂದರಕ್ಕೆ ಅನುಗುಣವಾಗಿ ಸುಜ್ಞಾನ್ ಛಾಯಾಗ್ರಹಣದ ಕಲೆಯೂ ಬೆರೆತಿದೆ. ಗುಮ್ಮಿನೇನಿ ವಿಜಯ್ ಬಾಬು ಸಂಗೀತದಲ್ಲಿ ಹಾಡುಗಳು ಹಿತವಾಗಿವೆ.
ಜನವರಿಯಲ್ಲಿ ಬಿಡುಗಡೆಯಾಗಿದ್ದ 'ಕಾಣದಂತೆ ಮಾಯವಾದನು' ಮತ್ತೆ ತೆರೆಗೆ ಬಂದಿದೆ. ಚಿತ್ರಮಂದಿರಗಳ ಕೊರತೆಯಿಂದ ಪ್ರೇಕ್ಷಕರಿಂದ ದೂರವಾಗಿದ್ದ ಸಿನಿಮಾವನ್ನು ಚಿತ್ರತಂಡ ಕತ್ತರಿ ಹಾಕಿದ್ದ ಒಂದಷ್ಟು ಹಾಸ್ಯ ಸನ್ನಿವೇಶಗಳನ್ನು ಸೇರಿಸಿಕೊಂಡು ಪುನಃ ಬಿಡುಗಡೆ ಮಾಡಿದೆ. ಫ್ಯಾಂಟಸಿ, ಸಸ್ಪೆನ್ಸ್, ಕೌತುಕತೆಗಳನ್ನು ಒಳಗೊಂಡ ಈ ಚಿತ್ರ ಹೊಸ ಅನುಭವ ಕಟ್ಟಿಕೊಡುತ್ತದೆ. ಚಿತ್ರದ ಸಂಪೂರ್ಣ ವಿಮರ್ಶೆಯನ್ನು ಮುಂದೆ ಓದಿ...

ಚಿತ್ರ: ಕಾಣದಂತೆ ಮಾಯವಾದನು

ನಿರ್ದೇಶಕ: ರಾಜ್ ಪತ್ತಿಪಾಟಿ

ನಿರ್ಮಾಣ: ಚಂದ್ರಶೇಖರ್ ನಾಯ್ಡು

ಹೊಸ ಹುಮ್ಮಸ್ಸಿನೊಂದಿಗೆ ಮತ್ತೆ ಬರುತ್ತಿದೆ 'ಕಾಣದಂತೆ ಮಾಯವಾದನು'

ಕಲಾವಿದರು: ವಿಕಾಸ್, ಸಿಂಧು ಲೋಕನಾಥ್, ಧರ್ಮಣ್ಣ ಕಡೂರು, ರಾಘವ್ ಉದಯ್, ಭಜರಂಗಿ ಲೋಕಿ, ಅಚ್ಯುತ್ ಕುಮಾರ್ ಮತ್ತು ಇತರರು.

   
 
ಹೆಲ್ತ್