Back
Home » ಆರೋಗ್ಯ
ಹೃದಯ ಸಮಸ್ಯೆಯ ಈ ಮುನ್ಸೂಚನೆ ಕಡೆಗಣಿಸಿದ್ದೀರಾ ಜೋಕೆ!
Boldsky | 12th Mar, 2020 05:00 PM
 • ನಿದ್ದೆಯಲ್ಲಿ ತಡವರಿಸುವ ಉಸಿರಾಟ (Sleep Apnea)

  ಗಾಢ ನಿದ್ದೆ ಆವರಿಸಿದ್ದಾಗ ಗೊರಕೆ ತೀವ್ರಗೊಳ್ಳುವುದು ಮತ್ತು ಒಂದು ಕ್ಷಣದಲ್ಲಿ ಉಸಿರಾಟ ನಿಂತಂತಾಗಿ ಎಚ್ಚರಾಗುವ ಸ್ಥಿತಿಗೆ ಸ್ಲೀಪ್ ಆಪ್ನಿಯಾ ಎಂದು ಕರೆಯುತ್ತಾರೆ. ಗೊರಕೆಯ ಸಮಯದಲ್ಲಿ ಮೆದುಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ದೊರಕದೇ ಇದ್ದರೆ ಹೃದಯಕ್ಕೆ ಇದು ಹೆಚ್ಚಿನ ರಕ್ತ ಪೂರೈಕೆ ಮಾಡಲು ಸೂಚನೆ ನೀಡುತ್ತದೆ. ಪರಿಣಾಮವಾಗಿ ಹೃದಯ ಅಗತ್ಯಕ್ಕೂ ಹೆಚ್ಚಿನ ಒತ್ತಡದಿಂದ ರಕ್ತವನ್ನು ಒತ್ತಿ ಕೊಡಬೇಕಾಗುತ್ತದೆ. ಅಂದರೆ, ಈ ಮೂಲಕ ಹೃದಯದ ಬಡಿತದ ಗತಿ ಹೆಚ್ಚು ಕಡಿಮೆಯಾಗುವುದು, ಹೃದಯದ ಸ್ತಂಭನ ಮತ್ತು ಹೃದಯಾಘಾತ ಎದುರಾಗಬಹುದು. ಒಳ್ಳೆಯ ಸಂಗತಿ ಎಂದರೆ ಈ ತೊಂದರೆಗೆ ಚಿಕಿತ್ಸೆ ಲಭ್ಯವಿದೆ.


 • ಬೆರಳುಗಳ ಸಂಧುಗಳ ಬಳಿ ಚರ್ಮ ಉಬ್ಬಿರುವುದು

  ಒಂದು ವೇಳೆ ನಿಮ್ಮ ರಕ್ತದಲ್ಲಿ ಅತಿ ಹೆಚ್ಚೇ ಪ್ರಮಾಣದ ಟ್ರೈಗ್ಲಿಸರೈಡುಗಳು ಸಂಗ್ರಹಗೊಂಡಿದ್ದರೆ ಇದು ಕೆಲವು ಸೂಕ್ಷ್ಮಭಾಗಗಳ ಮೂಲಕ ಹೊರಚೆಲ್ಲುವ ಪ್ರಯತ್ನದಲ್ಲಿ ಚರ್ಮವನ್ನು ಹೊರದೂಡಬಹುದು. ರಕ್ತದಲಿ ಹೆಚ್ಚಾಗಿರುವ ಕೊಬ್ಬು ದೇಹದ ತುದಿಭಾಗಗಳಾದ ಕೈಬೆರಳು ಮತ್ತು ಕಾಲು ಬೆರಳುಗಳ ಸಂಧುಗಳಲ್ಲಿ ನರಗಳನ್ನು ಪೆಡಸಾಗಿಸಿ ಚರ್ಮದಲ್ಲಿ ಉಬ್ಬಿದಂತೆ ಕಾಣಿಸಿಕೊಳ್ಳುತ್ತವೆ. ಈ ಉಬ್ಬಿದ ಭಾಗಗಳು ಎಷ್ಟು ಹೆಚ್ಚಿರುತ್ತವೆಯೋ ಅಷ್ಟೂ ಹೃದಯದ ಮೇಲಿನ ಒತ್ತಡ ಹಾಗೂ ಅಪಾಯ ಹೆಚ್ಚು ಎಂದು ಸೂಚಿಸುತ್ತವೆ.


 • ಕೈಹಿಡಿತದ ಬಿಗಿ ಕಡಿಮೆಯಾಗುವುದು

  ಒಂದು ವೇಳೆ ಹಸ್ತದಲ್ಲಿ ಹಿಡಿಯುವ ಒತ್ತಡ ಕಡಿಮೆಯಾದರೆ ಇದು ಹೃದಯದ ಕ್ಷಮತೆ ಕುಂದಿರುವುದನ್ನು ಸೂಚಿಸುತ್ತದೆ. ಈ ಬಗ್ಗೆ ನಡೆದ ಸಂಶೋಧನೆಗಳ ಮೂಲಕ ಒಂದು ವೇಳೆ ಏನನ್ನಾದರೂ ಹಿಂಡುವ ಸಾಮರ್ಥ್ಯ ಕಡಿಮೆಯಾದರೆ ಅಥವಾ ಲೇಖನಿಯನ್ನು ಒತ್ತಿ ಬರೆಯುವ ಕ್ಷಮತೆ ಕುಂದಿದರೆ ನಿಮಗೆ ಅಗೋಚರವಾದ ಹೃದ್ರೋಗ ಇರಬಹುದು. ಸಾಮಾನ್ಯವಾಗಿ ಈ ತೊಂದರೆ ಎದುರಾದರೆ ಬಿಗಿತವನ್ನು ಹೆಚ್ಚಿಸಲು ಯತ್ನಿಸುವುದರಿಂದ ಹೃದ್ರೋಗವೇನೂ ಕಡಿಮೆಯಾಗುವುದಿಲ್ಲ.


 • ಉಗುರುಗಳ ಅಡಿಯಲ್ಲಿ ಕಪ್ಪು ಕಲೆಗಳು

  ಪೆಟ್ಟಿನ ಹೊರತಾಗಿಯೂ ಬೆರಳುಗಳ ಉಗುರುಗಳ ಅಡಿಯಲ್ಲಿ ಕಪ್ಪುಕಲೆಗಳಿದ್ದರೆ ಇದು ಈ ಭಾಗದಲ್ಲಿ ರಕ್ತ ಒಸರಿರುವುದನ್ನು ಸೂಚಿಸುತ್ತದೆ. ಇದು ನಿಮ್ಮ ಹೃದಯದ ಒಳಭಾಗ ಅಥವಾ ಕವಾಟಗಳಲ್ಲಿ ಇರುವ ಸೋಂಕಿನ ಸೂಚನೆಯಾಗಿರಬಹುದು. ಈ ಸ್ಥಿತಿಗೆ endocarditis ಎಂದು ಕರೆಯುತ್ತಾರೆ. ವಿಶೇಷವಾಗಿ ಮಧುಮೇಹಿಗಳಲ್ಲಿ ಈ ಸೂಚನೆ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣ ಇರುವ ವ್ಯಕ್ತಿಗಳಲ್ಲಿ ಹೃದ್ರೋಗ ಇರುವ ಸಾಧ್ಯತೆ ಉಳಿದವರಿಗಿಂತ ನಾಲ್ಕು ಪಟ್ಟು ಹೆಚ್ಚಿರುತ್ತದೆ.


 • ತಲೆ ಸುತ್ತುವಿಕೆ

  ಕಾರಣವಿಲ್ಲದೇ ಎದುರಾಗುವ ತಲೆ ಸುತ್ತುವಿಕೆ ನಿಮ್ಮ ಹೃದಯದ ತೊಂದರೆಯ ಸೂಚನೆಯಾಗಿರಬಹುದು. ಅಂದರೆ ನಿಮ್ಮ ಹೃದಯ ಅಗತ್ಯವಿದ್ದಷ್ಟು ಒತ್ತಡರಿಂದ ರಕ್ತವನ್ನು ದೂಡಿ ಕೊಡುತ್ತಿಲ್ಲ ಎಂದು ಅರ್ಥ. ಹೃದಯದ ಬಡಿತ ಏಕಪ್ರಕಾರವಾಗಿಲ್ಲದಿದ್ದರೂ ಇದು ಎದುರಾಗಬಹುದು. ಈ ಸ್ಥಿತಿಗೆ arrhythmia ಎಂದು ಕರೆಯುತ್ತಾರೆ. ಹೃದಯದ ಸ್ನಾಯುಗಳು ತಮ್ಮ ಶಕ್ತಿ ಕಳೆದುಕೊಳ್ಳುವುದರಿಂದಲೂ ಇದು ಎದುರಾಗಬಹುದು. ನಡೆಯುವಾಗ ಓಲಾಟ ಅಥವಾ ಮಾತನಾಡುವಾಗ ತೊದಲುವಿಕೆಯೂ ಹೃದ್ರೋಗ ಇರುವ ಸೂಚನೆಯಾಗಿದೆ.


 • ಲೈಂಗಿಕ ಅಸಾಮರ್ಥ್ಯತೆ

  ಲೈಂಗಿಕ ನಿಃಶಕ್ತಿಯೂ ನಿಮಗೆ ಹೃದ್ರೋಗ ಇರುವ ಸೂಚನೆಯಾಗಿರಬಹುದು. ಈ ವ್ಯಕ್ತಿಗಳಿಗೆ ಹೃದಯ ಸ್ತಂಭನ ಅಥವಾ ಹೃದಯಾಘಾತ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಲೈಂಗಿಕ ನಿಃಶಕ್ತಿ ಅಧಿಕ ರಕ್ತದೊತ್ತಡ ಅಥವಾ ನರಗಳು ಅತಿ ಸಪೂರವಾಗಿರುವುದು ಅಥವಾ ಕೊಲೆಸ್ಟ್ರಾಲ್ ಸಂಗ್ರಹ ಅತಿಯಾಗಿರುವ ಸೂಚನೆಯಾಗಿದೆ. ಲೈಂಗಿಕ ನಿಃಶಕ್ತಿ ಮಾತ್ರವಲ್ಲ, ಮಹಿಳೆಯರಲ್ಲಿ ಎದುರಾಗುವ ನಿರಾಸಕ್ತಿಯೂ ರಕ್ತ ಪರಿಚಲನೆಯ ತೊಂದರೆಗಳಿಂದ ಎದುರಾಗಬಹುದು.


 • ತ್ವಚೆಯ ವರ್ಣದ ಬದಲಾವಣೆಗಳು

  ಬೆರಳುಗಳ ತ್ವಚೆಯ ಬಣ್ಣ ಹೆಚ್ಚು ನೀಲಿಗಟ್ಟಿದ್ದರೆ ಅಥವಾ ಬೂದು ಬಣ್ಣ ಪಡೆದಿದ್ದರೆ ರಕ್ತದಲ್ಲಿ ಆಮ್ಲಜನಕದ ಕೊರತೆಯನ್ನು ಸೂಚಿಸುತ್ತದೆ. ಆಮ್ಲಜನಕದ ಕೊರತೆ ಹೃದಯದ ಎಡ-ಬಲ ಭಾಗಗಳ ನಡುವೆ ತೂತು ಇರುವ ಸ್ಥಿತಿಯೊಂದಿಗೆ ಹುಟ್ಟಿರುವ ಮಕ್ಕಳು (blue baby) ಅಥವಾ ನರಗಳು ಕಿರಿದಾಗಿರುವ ಅಥವಾ ಒಳಗೆಲ್ಲೋ ಮುಚ್ಚಿಹೋಗಿರುವ ನಾಳಗಳ ಕಾರಣದಿಂದ ಎದುರಾಗಬಹುದು. ಚರ್ಮದ ಅಡಿಯಲ್ಲಿ ಕೆಂಪು ವೃತ್ತಾಕಾರದ ಕಲೆಗಳು ಕಾಣಿಸಿಕೊಳ್ಳಬಹುದು. ವಿಶೇಷವಾಗಿ endocarditis ಎಂಬ ಕಾಯಿಲೆ ಇದ್ದರೆ ಹಸ್ತ ಮತ್ತು ಪಾದಗಳಲ್ಲಿ ಈ ಬದಲಾವಣೆ ಗಮನಾರ್ಹವಾಗಿರುತ್ತದೆ.


 • ಒಸಡುಗಳಲ್ಲಿ ರಕ್ತಸ್ರಾವ

  ಈ ತೊಂದರೆಗೂ ಹೃದ್ರೋಗಕ್ಕೂ ಏಕಾಗಿ ಸಂಬಂಧ ಇದೆ ಎಂಬುದನ್ನು ಇದುವರೆಗೆ ತಜ್ಞರೂ ಬಿಡಿಸಲಾಗದ ಒಗಟಾಗಿದೆ. ಆದರೆ ಅಧ್ಯಯನಗಳ ಮೂಲಕ ಒಸಡುಗಳಲ್ಲಿ ರಕ್ತಸ್ರಾವ ಮತ್ತು ಊದಿಕೊಂಡಿರುವುದಕ್ಕೂ ಹೃದಯಕ್ಕೂ ಸಂಬಂಧ ಇದೆ ಎಂದು ಸಾಬೀತುಪಡಿಸಲಾಗಿದೆ. ಒಂದು ತರ್ಕದ ಪ್ರಕಾರ, ಒಸಡಿನಲ್ಲಿರುವ ಬ್ಯಾಕ್ಟೀರಿಯಾಗಳು ರಕ್ತದ ಮೂಲಕ ಹೃದಯ ತಲುಪಿ ಅಲ್ಲಿ ಉರಿಯೂತವನ್ನು ಪ್ರಾರಂಭಿಸುತ್ತವೆ. ಒಸಡಿನ ಸೋಂಕಿನಿಂದ ಹಲ್ಲು ಸಡಿಲವಾಗಿ ಬೀಳಬಹುದು. ಜೊತೆಗೇ ಇದು ಹೃದ್ರೋಗ ಇರುವ ಸೂಚನೆಯೂ ಹೌದು.


 • ಚರ್ಮದಲ್ಲಿ ಗಾಢ ಮತ್ತು ವೆಲ್ವೆಟ್ ನಂತಹ ಮಚ್ಚೆಗಳು

  acanthosis nigricans ಎಂಬ ಹೆಸರಿನ ಈ ಮಚ್ಚೆಗಳು ನೆರಿಗೆಯಾಗುವ ಚರ್ಮದ ಅಡಿಯಲ್ಲೆಲ್ಲಾ ಕಾಣಿಸಿಕೊಳ್ಳುತ್ತದೆ. ಅಂದರೆ ಕುತ್ತಿಗೆ, ಕಂಕುಳು, ತೊಡೆಸಂಧು ಮೊದಲಾದ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸಾಕಷ್ಟು ಪ್ರಮಾಣದ ಇನ್ಸುಲಿನ್ ಅನ್ನು ಬಳಸಿಕೊಳ್ಳಲು ಆಗದೇ ಇದ್ದಾಗ ಈ ಸ್ಥಿತಿ ಎದುರಾಗುತ್ತದೆ. ಒಂದು ವೇಳೆ ಇನ್ಸುಲಿನ್ ಅಸಹಿಷ್ಣುತೆಗೆ ನೀವು ಚಿಕಿತ್ಸೆ ಪಡೆಯದೇ ಇದ್ದರೆ ಅಥವಾ ಟೈಪ್ 2 ಮಧುಮೇಹವನ್ನು ನಿಯಂತ್ರಿಸದೇ ಇದ್ದರೆ ಇದು ಹೃದಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ತಕ್ಷಣವೇ ವೈದ್ಯರನ್ನು ಕಾಣಬೇಕು.


 • ಉಸಿರಾಟದಲ್ಲಿ ತೊಂದರೆ

  ಉಸಿರಾಡಲು ತೊಂದರೆ ಇದ್ದರೆ ಇದು ಹೃದಯದ ಅಸಮರ್ಪಕ ಬಡಿತ, ಹೃದಯದ ಸ್ತಂಭನ ಅಥವಾ ವೈಫಲ್ಯವನ್ನು ಪ್ರಕಟಿಸಬಹುದು. ಒಂದು ವೇಳೆ ಉಸಿರಾಟ ಸರಾಗವಾಗಿ ಆಗದೇ ಇದ್ದರೆ, ಅದರಲ್ಲೂ ಮಲಗಿದ್ದರೂ ಸುಲಭ ಉಸಿರಾಟ ಸಾಧ್ಯವಾಗದೇ ಇದ್ದರೆ ತಕ್ಷಣವೇ ವೈದ್ಯರ ನೆರವು ಪಡೆಯಬೇಕು.


 • ಕಾಲಿನ ಕೆಳಭಾಗ ಊದಿಕೊಳ್ಳುವುದು

  ಹೆಚ್ಚು ಹೊತ್ತು ನಿಂತಿದ್ದಾಗ ಅಥವಾ ಕುಳಿತಿದ್ದಾಗ ಪಾದಗಳು ಮತ್ತು ಮಣಿಕಟ್ಟಿನ ಭಾಗದಲ್ಲಿ ಊತ ಕಂಡುಬಂದರೆ ಇದು ಹೃದ್ರೋಗದ ತೊಂದರೆಯನ್ನು ಸೂಚಿಸುತ್ತದೆ. ಸರಿಸುಮಾರು ಇದೇ ಸೂಚನೆಯನ್ನು ಗರ್ಭಾವಸ್ಥೆಯಲ್ಲಿಯೂ ಗಮನಿಸಬಹುದು. ರಕ್ತ ಅಗತ್ಯ ಮಟ್ಟದಲ್ಲಿ ದೇಹದ ಕೆಳತುದಿಯನ್ನು ತಲುಪಿದರೂ ಅಲ್ಲಿಂದ ಮಲಿನರಕ್ತವನ್ನು ಹಿಂದಿರುಗಿ ಪಡೆಯಲು ಹೃದಯದ ಕ್ಷಮತೆ ಉಡುಗಿರುವ ಕಾರಣದಿಂದ ಈ ರಕ್ತ ಪೂರ್ಣ ಪ್ರಮಾಣದಲ್ಲಿ ಹಿಂದಿರುಗದೇ ಅಲ್ಲೇ ಉಳಿದು ಹೆಪ್ಪುಗಟ್ಟಲು ಕಾರಣವಾಗುತ್ತದೆ. ಒಂದು ವೇಳೆ ಈ ಊತ ಏಕಾ ಏಕಿ ಎದುರಾಗಿದ್ದರೆ ತಕ್ಷಣವೇ ವೈದ್ಯರನ್ನು ಕಾಣಬೇಕು.


 • ಬಳಲಿಕೆ

  ಯಾವುದೇ ದೈಹಿಕ ಚಟುವಟಿಕೆ ಇಲ್ಲದಿದ್ದರೂ ಬಳಲಿಕೆ ಇದ್ದರೆ ಇದಕ್ಕೆ ನಿದ್ದೆಯ ಕೊರತೆ ಎಂದು ಏಕಾಏಕಿ ನಿರ್ಧರಿಸಬಾರದು. ಹೃದಯದ ವೈಫಲ್ಯದ ಕಾರಣದಿಂದ ಅತೀವ ಸುಸ್ತು ಮತ್ತು ಶಕ್ತಿ ಉಡುಗಿದಂತಾಗುತ್ತದೆ. ಏಕೆಂದರೆ ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದ ರಕ್ತವನ್ನು ಈಗ ಹೃದಯಕ್ಕೆ ನೀಡಲು ಸಾಧ್ಯವಾಗದೇ ಹೋಗುವುದು ಇದಕ್ಕೆ ಕಾರಣ. ಇದರ ಜೊತೆಗೇ ಕೆಮ್ಮು, ದೇಹವಿಡೀ ಊದಿಕೊಳ್ಳುವುದು ಸಹಾ ಎದುರಾಗಬಹುದು. ಆದರೆ ಬಳಲಿಕೆ ಕೇವಲ ಹೃದ್ರೋಗದ ಸೂಚನೆ ಮಾತ್ರವಲ್ಲ, ರಕ್ತಹೀನತೆ, ಕ್ಯಾನ್ಸರ್, ಖಿನ್ನತೆ ಮೊದಲಾದ ಕಾರಣಗಳಿಂದಲೂ ಎದುರಾಗಿರಬಹುದು. ಹಾಗಾಗಿ ಇದೊಂದು ಸೂಚನೆ ಇದ್ದ ಮಾತ್ರಕ್ಕೇ ಹೃದ್ರೋಗ ಇದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಆರೋಗ್ಯಕರ ಎಂದು ಕಾಣಿಸಿಕೊಳ್ಳುವ ವ್ಯಕ್ತಿಗಳಿಗೂ ಹೃದ್ರೋಗ ಇದ್ದು ಇನ್ನೂ ಗಂಭೀರ ರೂಪವನ್ನು ಪಡೆಯದೇ ಇರುವ ಕಾರಣ ಇದುವರೆಗೆ ಅಗೋಚರವಾಗಿಯೇ ಇರಬಹುದು. ಆದರೆ ದೇಹ ಇದರ ಇರುವಿಕೆಯನ್ನು ಕೆಲವು ಸೂಚನೆಗಳ ಮೂಲಕ ಪ್ರಕಟಿಸುತ್ತದೆ. ಬನ್ನಿ, ಇಂತಹ ಹನ್ನೆರಡು ಸೂಚನೆಗಳ ಬಗ್ಗೆ ಅರಿಯೋಣ:

 
ಹೆಲ್ತ್