Back
Home » ಆರೋಗ್ಯ
ಸೀನುವಿಕೆಯನ್ನು ತಡೆದು ಹಿಡಿದಷ್ಟೂ ಅಪಾಯಕಾರಿ!
Boldsky | 14th Mar, 2020 09:31 AM
 • ಸೀನುವಿಕೆಯ ಕ್ಷಣದಲ್ಲಿ ಹೃದಯದ ಬಡಿತ ನಿಲ್ಲುವುದು ನಿಜವೇ?

  ಯು.ಎ.ಎಂ ಸಂಸ್ಥೆಯ ಕಿವಿ ಮತ್ತು ಗಂಟಲ ಚಿಕಿತ್ಸಾ ವಿಭಾಗದ ಪ್ರಕಾರ ಸೀನುವಿಕೆಯ ಸಮಯದಲ್ಲಿ ನಿಜವಾಗಿ ಹೃದಯದ ಬಡಿತವೇನೂ ಸ್ತಭ್ದಗೊಳ್ಳುವುದಿಲ್ಲ. ಬಾಹ್ಯ ಕಣಗಳು ದೇಹವನ್ನು ಸೇರಿದಾಗ ಬಾಯಿಯಲ್ಲಿರುವ ಅಧಿಕ ಒತ್ತಡ ಮೆದುಳಿಗೆ ಪ್ರಚೋದನೆ ನೀಡಿ ಮೂಗಿನ ಒಳಗೆ ಹೆಚ್ಚಿನ ಕಫವನ್ನು ಸ್ರವಿಸುವಂತೆ ಸೂಚನೆ ನೀಡುತ್ತದೆ ಹಾಗೂ ಬಾಹ್ಯ ಕಣಗಳು ಶ್ವಾಸಕೋಶಗಳಿಗೆ ಧಾವಿಸದಂತೆ ತಡೆಯುತ್ತದೆ.

  ಯಾವಾಗ ಸೀನುವಿಕೆ ಎದುರಾಗುತ್ತದೆಯೋ ಶ್ವಾಸಕೋಶ ಮತ್ತು ಎದೆಗೂಡಿನ ನಡುವಣ ಸ್ಥಳದಲ್ಲಿರುವ ದ್ರವದ ಒತ್ತಡ (intrathoracic pressure) ಅತಿ ಕ್ಶಿಪ್ರ ಕಾಲಕ್ಕೆ ಹೆಚ್ಚುತ್ತದೆ. ಈ ಕ್ಷಿಪ್ರ ಕಾಲದವರೆಗೆ ಶ್ವಾಸಕೋಶದಿಂದ ಹೃದಯಕ್ಕೆ ಹರಿಯುವ ರಕ್ತ ಕೊಂಚ ಕಡಿಮೆಯಾಗುತ್ತದೆ. ಹೀಗಾಗಾದ ಹೃದಯ ತನ್ನ ಎಂದಿನ ಬಡಿತದ ವೇಗವನ್ನು ಈ ಬದಲಾವಣೆಗೆ ಅನುಸಾರವಾಗಿ ಕೊಂಚವೇ ಮುಂದೆ ಹಾಕುತ್ತದೆ ಅಷ್ಟೇ ಹೊರತು ಆ ಸಮಯದಲ್ಲಿ ಹೃದಯದ ಬಡಿತ ನಿಂತೇ ಹೋಗುವುದಿಲ್ಲ.

  ಒಂದರ್ಥದಲ್ಲಿ ಹೇಳಬಹುದೆಂದರೆ ನೀವು ನಡೆಯುತ್ತಿರುವಾಗ ನಿಮ್ಮ ಹೆಜ್ಜೆಗಳು ಹೃದಯದ ಬಡಿತದ ಪ್ರಕಾರವೇ ಇದ್ದರೆ ನಡುವಿನಲ್ಲಿ ಒಂದು ಕಲ್ಲು ಇದ್ದಾಗ ಆ ಹೆಜ್ಜೆಯನ್ನು ಮಾತ್ರ ಕಲ್ಲಿಗಿಂತಲೂ ಮುಂದೆ ಇರಿಸಲು ಕಾಲನ್ನು ಹಿಂದಿನ ಹೆಜ್ಜೆಗಳಿಗೆ ನೀಡುವ ಸಮಯಕ್ಕಿಂತಲೂ ಕ್ಶಣಮಾತ್ರದ ಹೆಚ್ಚು ಸಮಯ ತೆಗೆದುಕೊಳ್ಳುತ್ತೀರಲ್ಲವೇ. ಹಾಗೇ ಹೃದಯದ ಬಡಿತವೂ ಅತ್ಯಲ್ಪ ಸಮಯಕ್ಕೆ ಮುಂದೆ ಹೋಗಿರುತ್ತದೆ ಅಷ್ಟೇ.


 • ಆದರೆ, ನೀವು ಸೀನುವಿಕೆಯನ್ನು ನಿಯಂತ್ರಿಸಲು ಏಕೆ ಸಾಧ್ಯವಿಲ್ಲ?

  160 ಕಿ.ಮೀ ವೇಗದಲ್ಲಿ ಗಾಳಿ ನಮ್ಮ ಮೂಗಿನಿಂದ ಹೊರಬರುತ್ತದೆ. ಇಷ್ಟು ವೇಗದಲ್ಲಿ ಗಾಳಿ ಹೊರಬರಬೇಕಾದರೆ ಅತಿ ಹೆಚ್ಚಿನ ಒತ್ತಡವನ್ನು ಒಮ್ಮೆಲೇ ಬಿಡುಗಡೆ ಮಾಡಬೇಕಾಗುತ್ತದೆ. ಒಂದು ವೇಳೆ ಸೀನುವಿಕೆಯನ್ನು ತಡೆಯಲು ಯತ್ನಿಸಿದರೆ ಈ ಅಪಾರ ಒತ್ತಡ ದೇಹದ ಇತರ ಭಾಗಕ್ಕೆ ವರ್ಗಾವಣೆಯಾಗುತ್ತದೆ.

  ಇದರ ಪ್ರಭಾವ ದೇಹದ ಸೂಕ್ಷ್ಮ ಭಾಗಗಳ ಮೇಲೆ ಬೀಳುತ್ತದೆ. ವಿಶೇಷವಾಗಿ ಕಿವಿಗಳು. ಈ ಒತ್ತಡ ಕಿವಿಯ ತಮ್ಮಟೆಗಳನ್ನು ಹರಿದು ಹಾಕಲು ಸಾಕು! ಇದು ಕಿವಿಯ ಶ್ರವಣಶಕ್ತಿಯನ್ನು ಉಡುಗಿಸಬಹುದು.

  ಸೀನುವಿಕೆಯ ಮುನ್ನ ಉಸಿರನ್ನು ಒಳಗೆಳೆದುಕೊಳ್ಳುವುದು ತೀವ್ರಗತಿ ಪಡೆಯುತ್ತದೆ. ಹೀಗಾಗುತ್ತಲೇ ಇತರರು ಸೀನು ಬರುತ್ತದೆ ಎಂಬ ಮುನ್ಸೂಚನೆಯನ್ನು ಪಡೆಯುತ್ತಾರೆ. ಉಸಿರು ಒಳಹೋದಂತೆಲ್ಲಾ ಶ್ವಾಸನಾಳದಲ್ಲಿ ಗಾಳಿ ತುಂಬಿಕೊಂಡು ಒತ್ತಡ ಹೆಚ್ಚುತ್ತದೆ.

  ಕೆಲವರು ಈ ಹಂತದಲ್ಲಿಯೇ ಸೀನುವಿಕೆಯನ್ನು ನಿಯಂತ್ರಿಸುತ್ತಾರೆ. ಇದರಿಂದ ಶ್ವಾಸನಾಳ ಪಡೆದಿರುವ ಒತ್ತಡ ಬಿಡುಗಡೆ ಪಡೆಯಲು ಸಾಧ್ಯವಾಗದೇ ಇತರ ಅಂಗಗಳ ಮೇಲೂ ಒತ್ತಡವನ್ನು ವರ್ಗಾಯಿಸಬಹುದು.

  ಆದ್ದರಿಂದ ಸೀನುವಿಕೆಯನ್ನು ತಡೆಯುವ ಪ್ರಯತ್ನದಲ್ಲಿ ಸಾಮಾನ್ಯ ಸ್ಥಿತಿಯಲ್ಲಿರುವಾಗ ಇದುವ ಒತ್ತಡಕ್ಕಿಂತಲೂ ಐದರಿಂದ ಇಪ್ಪತ್ತೈದು ಪಟ್ಟು ಹೆಚ್ಚಿನ ಒತ್ತಡವನ್ನು ತಡೆಹಿಡಿದಂತಾಗುತ್ತದೆ ಹಾಗೂ ಈ ಅಪಾರ ಒತ್ತಡ ದೇಹದ ಒಳ ಅಂಗಗಳನ್ನು ಘಾಸಿಗೊಳಿಸುವಷ್ಟು ಪ್ರಬಲವಾಗಿರುತ್ತದೆ ಹಾಗೂ ಗಂಭೀರ ಸಮಸ್ಯೆಗಳು ಎದುರಾಗುತ್ತವೆ.


 • ಸೀನುವಿಕೆ ತಡೆಹಿಡಿದರೆ ಯಾವ ಅಡ್ಡ ಪರಿಣಾಮಗಳು ಎದುರಾಗುತ್ತವೆ?

  ನಡು ಕಿವಿಯ ಸೋಂಕು
  ಸೀನುವಿಕೆಯಿಂದ ಮೂಗಿನಲ್ಲಿರುವ ಬ್ಯಾಕ್ಟೀರಿಯಾಗಳೆಲ್ಲಾ ಹೊರಹೋಗುತ್ತವೆ. ಇದು ಹೋಗದೇ ಇದ್ದರೆ ಈ ದ್ರವ ಒತ್ತಡದಿಂದ ನೇರವಾಗಿ ಕಿವಿಯತ್ತ ನುಗುತ್ತದೆ. ಇದನ್ನು ಅನುಭವಿಸಲು ಎರಡೂ ಮೂಗುಗಳನ್ನು ಬೆರಳುಗಳಿಂದ ಒತ್ತಿ ಮೂಗಿನ ಮೂಲಕ ಉಸಿರನ್ನು ಹೊರಬಿಡಲು ಯತ್ನಿಸಿ. ಈಗ ಕಿವಿಯಿಂದ ಗಾಳಿ ಹೊರಬರಲು ಯತ್ನಿಸುತ್ತಿದೆಯಲ್ಲವೇ? ಹಾಗೇ ಈ ಸೋಂಕುಪೀಡಿತ ದ್ರವ ಕಿವಿಯ ಮಧ್ಯಭಾಗಕ್ಕೆ ಅಪಾರವಾದ ಒತ್ತಡದಲ್ಲಿ ಧಾವಿಸುತ್ತದೆ. ಪರಿಣಾಮವಾಗಿ ಒಳಗಿವಿಯಲ್ಲಿ ಸೋಂಕು ಪ್ರಾರಂಭವಾಗುತ್ತದೆ.


 • ಕಿವಿ ತಮ್ಮಟೆ ಹರಿಯುವುದು

  ಗಾಳಿಯ ಒತ್ತಡವನ್ನು ತಡೆಹಿಡಿದರೆ ಇದು ಇನ್ನೊಂದು ಕಡೆಯಿಂದ ಬಿಡುಗಡೆ ಪಡೆಯಬೇಕಲ್ಲವೇ? ಸ್ವಾಭಾವಿಕವಾಗಿ ಇದು ದುರ್ಬಲ ಮತ್ತು ತೆರೆದಿರುವ ಸ್ಥಳಗಳ ಮೂಲಕವೇ ಹಾದು ಹೋಗುತ್ತದೆ. ಒತ್ತಡ ಹೊರಹೋಗುವುದು ಕಿವಿಗಳ ಮೂಲಕ ಹಾಗೂ ಕಿವಿಗಳ ಒಳಗಣ ಭಾಗಗಳು ಸೂಕ್ಷ್ಮ ಮತ್ತು ದುರ್ಬಲವಾಗಿವೆ. ಪರಿಣಾಮವಾಗಿ ಕಿವಿ ತಮ್ಮಟೆ ಹರಿಯಬಹುದು.


 • ಕಣ್ಣಿನ ನರಕ್ಕೆ ಆಗಬಹುದಾದ ಘಾಸಿ

  ಸೀನುವಿಕೆ ತಡೆಯುವ ಪ್ರಯತ್ನದಲ್ಲಿ ಗಾಳಿಯ ಒತ್ತಡ ಒಳಗೇ ಉಳಿದು ಕಿವಿಯ ಜೊತೆಗೇ ಕಣ್ಣಿನ ನರದ ಮೇಲೂ ಬೀಳಬಹುದು. ಪರಿಣಾಮವಾಗಿ ದೃಷ್ಟಿಯ ತೊಂದರೆ ಮತ್ತು ಶ್ರವಣ ಸಾಮರ್ಥ್ಯ ಕುಸಿಯಬಹುದು.


 • ಅನ್ಯೂರಿಸಂ (Aneurysm)

  ಈ ಒತ್ತಡ ರಕ್ತನಾಳಗಳ ಮೂಲಕ ಮೆದುಳನ್ನೂ ತಲುಪಬಹುದು ಹಾಗೂ ಮೆದುಳನ್ನು ಸಂಪರ್ಕಿಸಿರುವ ಸೂಕ್ಷ್ಮ ಭಾಗ ಹರಿಯಬಹುದು. ಪರಿಣಾಮವಾಗಿ ಮೆದುಳಿನ ಸುತ್ತ, ತಲೆಬುರುಡೆಯ ಒಳಗೆ ರಕ್ತಸ್ರಾವ ಕಂಡುಬರಬಹುದು.


 • ಎದೆ ಮೂಳೆ ಮುರಿತ

  ಕೆಲ ವ್ಯಕ್ತಿಗಳಲ್ಲಿ, ವಿಶೇಷವಾಗಿ ವೃದ್ದರಲ್ಲಿ ಹೀಗೆ ಸೀನುವಿಕೆಯನ್ನು ತಡೆಯುವ ಪ್ರಯತ್ನದಿಂದ ಎದೆಗೂಡಿನ ಮೂಳೆಗಳು ಮುರಿದಿರುವ ಪ್ರಕರಣಗಳು ಕಂಡುಬಂದಿವೆ.


 • ಇತರ ತೊಂದರೆಗಳು ಎಂದರೆ

  • ಗಂಟಲು ಹಾನಿಗೊಳಗಾಗುವುದು
  • ಧ್ವನಿ ಪೆಟ್ಟಿಗೆಗೆ ಹಾನಿ ಆಗುವುದು
  • ಕಣ್ಣು, ಮೂಗು, ಕಿವಿಗಳಲ್ಲಿರುವ ಸೂಕ್ಷ್ಮ ನರಗಳು ಹಾನಿಗೊಳಗಾಗುವುದು

 • ಸಾರ್ವಜನಿಕ ಸ್ಥಳಗಳಲ್ಲಿ ಸೀನುವಿಕೆ

  ಇಂದು ಕೊರೋನಾ ವೈರಸ್ (ಕೋವಿಡ್‌ 19) ಜಗತ್ತಿನ ಎಲ್ಲೆಡೆ ಮಹಾಮಾರಿಯಂತೆ ಹಬ್ಬುತ್ತಿರುವಾಗ ಇದರ ಸೋಂಕು ಹರಡಲು ಸೋಂಕುಪೀಡಿತ ವ್ಯಕ್ತಿಯ ಸೀನುವಿಕೆ ಪ್ರಮುಖವಾಗಿ ಕಾರಣವಾಗಿದೆ. ಹಾಗಾಗಿ, ಸಾರ್ವಜನಿಕ ಸ್ಥಳದಲ್ಲಿದ್ದಾರ ಪ್ರತಿಯೊಬ್ಬರೂ ತಮ್ಮ ಸೀನುವಿಕೆಯನ್ನು ಆದಷ್ಟೂ ಸುರಕ್ಷಾ ಕ್ರಮಗಳನ್ನು ಅನುಸರಿಸಿಯೇ ನಿರ್ವಹಿಸಬೇಕು (ಸರ್ವಥಾ ತಡೆಯಲು ಯತ್ನಿಸಬಾರದು)..


 • ನಿರ್ಜನ ಸ್ಥಳಕ್ಕೆ ಹೋಗಿ

  ಸೀನು ಎದುರಾಗುವ ಮುನ್ನವೇ ಇದಕ್ಕೆ ತಯಾರಾಗಿ ಇರುವುದೇ ಅತ್ಯಂತ ಸೂಕ್ತ ಕ್ರಮವಾಗಿದೆ. ಮೊತ್ತ ಮೊದಲಾಗಿ ನಿಮ್ಮ ಕೈಗೆ ಥಟ್ಟನೇ ಸಿಗುವಂತೆ ಕರವಸ್ತ್ರ ಅಥವಾ ಟಿಶ್ಯೂ ಕಾಗದವನ್ನು ಇರಿಸಿಕೊಳ್ಳಬೇಕು. ಸೀನು ಬಂದಾಕ್ಷಣ ಆದಷ್ಟೂ ನಿರ್ಜನ ಸ್ಥಳಕ್ಕೆ ಹೋಗಿ ಗೋಡೆ ಅಥವಾ ಬೇರಾವುದೋ ವಸ್ತುವಿಗೆ ಅಡ್ಡ ಬರುವಂತೆ, ಒಟ್ಟಾರೆ ಆದಷ್ಟೂ ಇತರರಿಂದ ದೂರಾಗಿ ಕರವಸ್ತ್ರವನ್ನು ಅಡ್ಡಹಿಡಿದು ಸೀನಬೇಕು. ಬಳಿಕ ಈ ಕಾಗದವನ್ನು ಮಡಚಿ ವಿಸರ್ಜಿಸಬೇಕು. ಆದಷ್ಟೂ ಬೇಗನೇ ಕೈ, ಮುಖಗಳನ್ನು ತೊಳೆದುಕೊಳ್ಳಬೇಕು. ಈ ಸಂದರ್ಭಕ್ಕೆ ತಯಾರಾಗಿರಲು ಸ್ಯಾನಿಟೈಸರ್ ದ್ರವವನ್ನು ಸದಾ ಜೊತೆಯಲ್ಲಿ ಇರಿಸಿಕೊಂಡಿದ್ದು ಇದರಿಂದ ತಕ್ಷಣವೇ ಕೈಗಳನ್ನು ಶುಚಿಗೊಳಿಸಬೇಕು.


 • ಮೊಣಕೈ ಅಡ್ಡ ಹಿಡಿಯಿರಿ

  ಅಕಸ್ಮಾತ್, ನಿಮಗೆ ಸೀನು ಬರುವ ಸಮಯದಲ್ಲಿ ನಿಮ್ಮ ಬಳಿ ಯಾವುದೇ ಕಾಗದ ಅಥವಾ ಕರವಸ್ತ್ರ ಇಲ್ಲದೇ ಇದ್ದಲ್ಲಿ ನಿಮ್ಮ ಮೊಣಕೈಯನ್ನೇ ಮೂಗಿನ ಬಳಿ ತಂದು ಬಟ್ಟೆಯ ಮೇಲೆ ಸೀನು ಸಿಡಿಯುವಂತೆ ಸೀನಬೇಕು. ಆ ಸಮಯದಲ್ಲಿ ಅರ್ಧ ತೋಳಿನ ಉಡುಪು ತೊಟ್ಟಿದ್ದರೆ ಈ ಉಡುಪಿನ ಕೈ ಭಾಗವನ್ನೇ ಮೂಗಿನ ಮುಂದೆ ಸೆಳೆದು ಇದರಲ್ಲಿ ಸೀನಬೇಕು. ಬಳಿಕ ಆದಷ್ಟೂ ಬೇಗನೇ ಈ ಉಡುಪುಗಳನ್ನೂ ತೊಳೆಯಲು ಹಾಕಬೇಕು.
ಸೀನುವಿಕೆ, ಇದೊಂದು ರೋಗವಲ್ಲ ಅಥವಾ ರೋಗದ ಲಕ್ಷಣವೂ ಅಲ್ಲ. ಬದಲಿಗೆ ನಮ್ಮ ರೋಗ ನಿರೋಧಕ ವ್ಯವಸ್ಥೆಯ ಒಂದು ಕ್ರಮವೇ ಹೌದು. ನಮ್ಮ ದೇಹದಲ್ಲಿ ಮೂಗಿನ ಮೂಲಕ ಯಾವುದಾದರೂ ವೈರಾಣುಗಳು ಪ್ರವೇಶ ಪಡೆಯುತ್ತಿದ್ದರೆ ಇವನ್ನು ಭಾರೀ ಒತ್ತಡದಿಂದ ದೇಹದಿಂದ ಹೊರಹಾಕುವ ಪ್ರಕ್ರಿಯೆಯೇ ಸೀನುವಿಕೆ. ಕೇವಲ ವೈರಾಣುಗಳು ಮಾತ್ರವಲ್ಲ, ಉಸಿರಾಟದ ಸಮಯದಲ್ಲಿ ಒಳಬರುವ ಧೂಳು, ಹೊಗೆ, ಬ್ಯಾಕ್ಟೀರಿಯಾ, ಹೂವಿನ ಪರಾಕ ಮೊದಲಾದ ಸೂಕ್ಷ್ಮ ಕಣಗಳು ಕೂದಲು ಮೊದಲಾದವುಗಳನ್ನು ನಿವಾರಿಸಲೂ ಸೀನುವಿಕೆ ಅಗತ್ಯವಾಗಿದೆ.

ಸೀನುವಿಕೆಯ ಸಮಯದಲ್ಲಿ ನಮ್ಮ ದೇಹದಿಂದ ಹೊರಬರುವ ದ್ರವ ಸಿಡಿಯಲು ಕಾರಣವೇನು ಗೊತ್ತೇ? ಈ ಪ್ರಕ್ರಿಯೆಯಲ್ಲಿ ಅತಿ ಕ್ಷಿಪ್ರವಾಗಿ ಸಂಕುಚಿಸಿ ವಿಕಸಿಸುವ ಸ್ನಾಯುಗಳು ಒಳಗಿನ ಗಾಳಿಯನ್ನು ಘಂಟೆಗೆ ನೂರಾ ಅರವತ್ತು ಕಿಲೋಮೀಟರ್ ವೇಗದಲ್ಲಿ ಹೊರಬಿಡುತ್ತದೆ. ಈ ವೇಗದಲ್ಲಿ ಒಳಗಿದ್ದ ಅಷ್ಟೂ ಕ್ರಿಮಿ ಮತ್ತು ಧೂಳು ಹೊರಹೋಗುತ್ತವೆ. ಗಂಭೀರ ಸೋಂಕಿನಿಂದ ರಕ್ಷಣೆ ಪಡೆಯಲು ದೇಹ ಪಡೆಯುವ ಕ್ರಮವೇ ಸೀನುವಿಕೆ.

ಸಾಮಾನ್ಯವಾಗಿ ಎದುರಿನ ವ್ಯಕ್ತಿ ಸೀನಿದಾಗ 'ಬ್ಲೆಸ್ ಯೂ' ಅಥವಾ ದೇವರು ನಿಮ್ಮನ್ನು ಕಾಪಾಡಲಿ ಎಂದು ಇತರರು ಹೇಳುತ್ತಾರೆ. ಇದಕ್ಕೆ ಕಾರಣವೇನು ಗೊತ್ತೇ? ಸೀನುವಿಕೆಯ ಸಮಯದ ಒಂದು ಕ್ಷಣದ ಅತ್ಯಲ್ಪ ಸಮಯದಲ್ಲಿ ನಮ್ಮ ಹೃದಯದ ಬಡಿತ ನಿಲ್ಲುತ್ತದೆ ಮತ್ತು ಮುಂದುವರೆಯುತ್ತದೆ. ಕಣ್ಣುಗಳು ಅರಿವಿಲ್ಲದೇ ಮುಚ್ಚಿಕೊಳ್ಳುತ್ತದೆ. ಅಂದರೆ ಸೀನುವಿಕೆಯ ಅತ್ಯಲ್ಪ ಸಮಯದಲ್ಲಿ ನಾವು ಸತ್ತಿರುತ್ತೇವೆ.

ಕೆಲವು ನೂರು ವರ್ಷಗಳ ಹಿಂದೆ ಪ್ರಬಲ ಸೋಂಕು ಎದುರಾದರೆ ಇದಕ್ಕೆ ಸತತ ಸೀನುವಿಕೆ ಕಾಣಿಸಿಕೊಳ್ಳುತ್ತಿತ್ತು ಹಾಗೂ ಆ ಸಮಯದಲ್ಲಿ ಈ ಸೋಂಕುಗಳಿಗೆ ಚಿಕಿತ್ಸೆ ಇಲ್ಲವಾಗಿದ್ದರಿಂದ ನಿಧಾನವಾಗಿ ಸೋಂಕು ಉಲ್ಬಣಿಸಿ ಸಾಯುತ್ತಿದ್ದರು. ಹಾಗಾಗಿ ಯಾರಿಗೆ ಸೀನು ಕಾಣಿಸಿಕೊಂಡಿತೋ, ಇವರಿಗೆ ಸೋಂಕು ಎದುರಾಗಿದೆ ಇನ್ನು ದೇವರೇ ಕಾಪಾಡಬೇಕು ಎಂಬುದನ್ನೇ ಸೂಚ್ಯವಾಗಿ 'ಬ್ಲೆಸ್ ಯೂ' ಎಂದು ಹೇಳುತ್ತಿದ್ದುದು ಇಂದಿಗೂ ವಾಡಿಕೆಯಾಗಿ ಮುಂದುವರೆಯುತ್ತಿದೆ ಅಷ್ಟೇ!

 
ಹೆಲ್ತ್