Back
Home » ಆರೋಗ್ಯ
ಮೊಟ್ಟೆಗಳನ್ನು ಫ್ರೀಜ್‌ ಮಾಡುವುದು ಸುರಕ್ಷಿತವೇ?
Boldsky | 14th Mar, 2020 03:10 PM
 • ಫ್ರಿಡ್ಜ್‌ನಲ್ಲಿ ಮೊಟ್ಟೆ

  ನಾವು ನಮ್ಮ ಮನೆಯಲ್ಲಿ ತಯಾರು ಮಾಡಿದ ಯಾವುದೇ ಆಹಾರಗಳನ್ನು ತಿಂದು ರುಚಿ ನೋಡಿದ ಮೇಲೆ ಅದು ಅಪ್ಪಿ ತಪ್ಪಿ ಚೆನ್ನಾಗಿದ್ದರೆ ನಾಳೆಗೂ ಆಗಲಿ ಎಂದು ಅದನ್ನು ರೆಫ್ರಿಜರೇಟರ್ ನಲ್ಲಿ ಭದ್ರವಾಗಿ ಎತ್ತಿಡುತ್ತೇವೆ. ಮಾರನೇ ದಿನ ಅದನ್ನು ಬಿಸಿ ಮಾಡಿಕೊಂಡು ಉಪಯೋಗಿಸುತ್ತೇವೆ. ಇದು ಪ್ರತಿ ಮನೆಯಲ್ಲೂ ನಡೆಯುವ ಸಂಗತಿ.

  ಕೋಳಿ ಮೊಟ್ಟೆಗಳು ಜನರಿಗೆ ಅಷ್ಟೇ ರೀತಿಯಲ್ಲಿ ಪ್ರಿಯವಾಗಿವೆ. ಅವುಗಳಿಂದ ತಯಾರು ಮಾಡಿದ ಯಾವುದೇ ಆಹಾರಗಳ ಆದರೂ ಸರಿ ತಿನ್ನಲು ಬಹಳ ರುಚಿ ಕೊಡುತ್ತವೆ. ಅಂದ ಮೇಲೆ ಅವುಗಳನ್ನು ರೆಫ್ರಿಜರೇಟರ್ ನಲ್ಲಿ ಇಡದೇ ಬಿಡುತ್ತೇವೆಯೇ? ಆದರೆ ರೆಫ್ರಿಜರೇಟರ್ ನಲ್ಲಿ ಸಹ ಯಾವುದೇ ಆಹಾರವನ್ನು ಬಹಳಷ್ಟು ದಿನಗಳ ಕಾಲ ಇಡುವುದಕ್ಕೆ ಸಾಧ್ಯವಿಲ್ಲ ಎಂಬುದು ನಿಮಗೂ ಗೊತ್ತು.


 • ಫ್ರಿಡ್ಜ್‌ನಲ್ಲಿ ಮೊಟ್ಟೆ ಎಷ್ಟು ದಿನ ಚೆನ್ನಾಗಿರುತ್ತದೆ?

  ಕೇವಲ 3 ರಿಂದ 5 ವಾರಗಳು ಮಾತ್ರ ಚೆನ್ನಾಗಿರುತ್ತವೆ. ಆದರೆ ತಿಂಗಳುಗಟ್ಟಲೆ ಅಥವಾ ಇಡೀ ವರ್ಷ ನಮ್ಮ ನೆಚ್ಚಿನ ಆಹಾರ ಪದಾರ್ಥವನ್ನು ಕೆಡದಂತೆ ಇಡಬೇಕೆಂದರೆ, ಅದಕ್ಕೆ ಇರುವುದು ಒಂದೇ ದಾರಿ. ಫ್ರೀಜ್ ಮಾಡುವುದು. ಹಾಗಾದರೆ ನಮಗೆ ಬಹಳ ಪ್ರಿಯವಾದ ಮೊಟ್ಟೆಗಳನ್ನು ಫ್ರೀಜ್ ಮಾಡಬಹುದೇ? ಎಂಬ ಪ್ರಶ್ನೆ ನಿಮ್ಮಲ್ಲಿ ಈಗಾಗಲೇ ಉದ್ಭವಿಸಬಹುದು. ಹೌದು ಖಂಡಿತ. ಮೊಟ್ಟೆಗಳನ್ನು ಅಥವಾ ಮೊಟ್ಟೆಯಿಂದ ತಯಾರು ಮಾಡಿದ ಆಹಾರಗಳನ್ನು ಫ್ರೀಜ್ ಮಾಡಬಹುದು. ಅದು ಹೇಗೆ ಮತ್ತು ಯಾವ ವಿಧಾನದಲ್ಲಿ ಎಂದು ಮುಂದೆ ಓದಿ.


 • ಯಾವ ಬಗೆಯ ಮೊಟ್ಟೆಗಳನ್ನು ಫ್ರೀಜ್ ಮಾಡಬಹುದು?

  ನಿಮ್ಮ ನೆಚ್ಚಿನ ಆಹಾರವಾದ ಮೊಟ್ಟೆಗಳನ್ನು ಫ್ರೀಜ್ ಮಾಡಬಹುದು ಎಂದು ಗೊತ್ತಾಯಿತು ನಿಜ. ಆದರೆ ಯಾವ ಮೊಟ್ಟೆಗಳು ಫ್ರೀಜ್ ಮಾಡಿದರೆ ಉತ್ತಮ ಎಂಬುದು ನಿಮಗೆ ತಿಳಿದಿರಬೇಕು. ಜೊತೆಗೆ ಇನ್ನೊಂದು ಅಂಶ ನಿಮಗೆ ನೆನಪಿರಬೇಕು. ಅದೇನೆಂದರೆ ಮೊಟ್ಟೆಗಳ ಮೇಲಿನ ಬಿಳಿ ಭಾಗದ ತೊಗಟೆಯ ಸಮೇತ ಫ್ರೀಜ್ ಮಾಡಲು ಸಾಧ್ಯವಿಲ್ಲ. ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇದೆ. ಏನೆಂದರೆ ಯಾವುದೇ ವಸ್ತುವನ್ನು ತಂಪಾಗಿಸಲು ಹೊರಟರೆ ಅದು ತನ್ನ ಗಾತ್ರದಲ್ಲಿ ಹಿಗ್ಗುತ್ತದೆ. ಮತ್ತು ಬಿಸಿ ಮಾಡಿದ ಯಾವುದೇ ವಸ್ತು ತನ್ನ ಗಾತ್ರದಲ್ಲಿ ತಗ್ಗುತ್ತದೆ. ಕೋಳಿ ಮೊಟ್ಟೆಯ ವಿಷಯದಲ್ಲೂ ಹೀಗೇ.


 • ಒಳಗಿನ ದ್ರವ ಹಿಗ್ಗುತ್ತದೆ

  ಕೋಳಿ ಮೊಟ್ಟೆಯನ್ನು ಮೇಲಿನ ಶೆಲ್ ಸಮೇತ ಫ್ರೀಜ್ ಮಾಡಲು ಹೊರಟರೆ ಒಳಗಿನ ದ್ರವ ಹಿಗ್ಗಿದಂತಾಗಿ ಮೊಟ್ಟೆಯ ಮೇಲ್ಭಾಗ ಒಡೆದು ಸೀಳು ಬಿಡುತ್ತದೆ. ಇದರಿಂದ ಮೊಟ್ಟೆಯ ಒಳಗಿನ ಹಳದಿ ಭಾಗ ಮತ್ತು ದ್ರವ ಎರಡೂ ಹಾಳಾಗುತ್ತದೆ ಮತ್ತು ಇದರಿಂದ ಬ್ಯಾಕ್ಟೀರಿಯಾಗಳ ಪೋಷಣೆಗೆ ನಾವೇ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಜೊತೆಗೆ ಬೇಯಿಸದ ಹಸಿ ಮೊಟ್ಟೆಗಳನ್ನು ಸಿಪ್ಪೆಯ ಸಮೇತ ರೆಫ್ರಿಜರೇಟರ್ ನಲ್ಲಿ ಅತ್ಯಂತ ಕಡಿಮೆ ತಾಪಮಾನದಲ್ಲಿ ಇಟ್ಟಂತಹ ಸಂದರ್ಭದಲ್ಲಿ ಮೊಟ್ಟೆಯ ಹಳದಿ ಭಾಗ ಗಟ್ಟಿಯಾಗಿ ಮೊಟ್ಟೆಯ ಆಕಾರವನ್ನೇ ಬದಲಾಯಿಸುತ್ತದೆ. ಆದ್ದರಿಂದಲೇ ಯಾವುದೇ ಕಾರಣಕ್ಕೂ ಮೊಟ್ಟೆಗಳನ್ನು ಜಾಸ್ತಿ ಹೊತ್ತು ತುಂಬಾ ಗಟ್ಟಿಯಾಗುವಂತೆ ಅಥವಾ ಸ್ವಲ್ಪ ಬೇಯಿಸಿದ ಮೊಟ್ಟೆಗಳನ್ನು ಫ್ರೀಜ್ ಮಾಡಲು ಇಡಬೇಡಿ. ಇದರಿಂದ ಮೊಟ್ಟೆಯ ಬಿಳಿ ಭಾಗ ರಬ್ಬರ್ ನಂತೆ ಗಟ್ಟಿಯಾಗಬಹುದು


 • ಈ ಕೆಳಗಿನ ವಿಧದ ಮೊಟ್ಟೆಗಳನ್ನು ರೆಫ್ರಿಜರೇಟರ್ ನಲ್ಲಿ ಫ್ರೀಜ್ ಮಾಡಬಹುದು

  1. ಹಸಿಯಾದ ಮೊಟ್ಟೆಯ ಬಿಳಿ ಭಾಗ
  2. ಹಸಿಯಾದ ಮೊಟ್ಟೆಯ ಹಳದಿ ಭಾಗ
  3. ಹಳದಿ ಮತ್ತು ಬಿಳಿ ಭಾಗಗಳನ್ನು ಚೆನ್ನಾಗಿ ಮಿಶ್ರಣ ಮಾಡಿದ ಮೊಟ್ಟೆ
  4. ಮೊಟ್ಟೆಯಿಂದ ಬೆಳಗಿನ ಉಪಹಾರಕ್ಕಾಗಿ ಮಾಡಿದ ಅಡುಗೆಗಳು

 • ನೀವಿಲ್ಲಿ ತಿಳಿಯಲೇಬೇಕಾದ ವಿಷಯ

  ನಿಮಗೆ ಇಲ್ಲಿ ಒಂದು ವಿಷಯ ಗೊತ್ತಿರಬೇಕು. ಏನೆಂದರೆ ಹಸಿ ಮೊಟ್ಟೆಯ ಬಿಳಿ ಭಾಗ ಮತ್ತು ಹಳದಿ ಭಾಗ ಫ್ರೀಜ್ ಮಾಡುವ ಸಮಯದಲ್ಲಿ ಒಂದೊಂದು ರೀತಿಯಲ್ಲಿ ವರ್ತಿಸುತ್ತದೆ. ಫ್ರೀಜ್ ಮಾಡಿದ ಹಸಿ ಮೊಟ್ಟೆಯ ಬಿಳಿ ಭಾಗ ಶೇಕಡ 90 % ರಷ್ಟು ಕೇವಲ ನೀರಿನ ಅಂಶವನ್ನು ಮಾತ್ರ ಹೊಂದಿದ್ದು, ಜೊತೆಗೆ ಅಲ್ಪ ಸ್ವಲ್ಪ ಪ್ರೋಟೀನ್ ಅಂಶ ಇರುವುದರಿಂದ, ಇದರ ಅಡುಗೆ ಮಾಡುವಾಗ ಯಾವುದೇ ಗಮನಾರ್ಹವಾದ ಬದಲಾವಣೆ ಕಾಣಿಸುವುದಿಲ್ಲ. ಬೇಕರಿಯಲ್ಲಿ ತಯಾರು ಮಾಡುವ ಬ್ರೆಡ್, ಕೇಕ್ ಇತ್ಯಾದಿ ಸಣ್ಣ ಸಣ್ಣ ರಂಧ್ರಗಳನ್ನು ಹೊಂದಿರುವ ಬೇಕರಿ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ಹೆಚ್ಚಾಗಿ ಬಳಸುತ್ತಾರೆ.

  ಆದರೆ ಮೊಟ್ಟೆಯ ಹಳದಿ ಭಾಗದ ವಿಷಯ ಹಾಗಲ್ಲ. ರೆಫ್ರಿಜರೇಟರ್ ನಲ್ಲಿ ಹಸಿ ಮೊಟ್ಟೆಯ ಹಳದಿ ಭಾಗವನ್ನು ಫ್ರೀಜ್ ಮಾಡಿದರೆ, ಅದು ಒಂದು ರೀತಿಯ ಗಟ್ಟಿ ತರನಾದ ಜೆಲ್ ರೀತಿಯ ವಸ್ತುವಿನಂತೆ ಸ್ಥಿರತೆ ಕಾಯ್ದುಕೊಳ್ಳುತ್ತದೆ. ಆದ್ದರಿಂದ ಮೊಟ್ಟೆಯ ಹಳದಿ ಭಾಗವನ್ನು ಫ್ರೀಜ್ ಮಾಡುವ ಮೊದಲು, ಅದಕ್ಕೆ ಸ್ವಲ್ಪ ಸಕ್ಕರೆ ಅಥವಾ ಉಪ್ಪು ಹಾಕಿ ನಂತರ ರೆಫ್ರಿಜರೇಟರ್ ನಲ್ಲಿ ಇಟ್ಟು ಫ್ರೀಜ್ ಮಾಡಬೇಕು. ಇದರಿಂದ ಜಿಲಾಟಿನ್ ನಂತಹ ಜೆಲ್ ತರಹದ ಒಂದು ಪದರ ಉಂಟಾಗುವುದು ತಪ್ಪುತ್ತದೆ. ಇತರ ಆಹಾರ ಪದಾರ್ಥಗಳಂತೆ ಮೊಟ್ಟೆಯ ಬಿಳಿ ಭಾಗ ಮತ್ತು ಹಳದಿ ಭಾಗ ರೆಫ್ರಿಜರೇಟರ್ ನಲ್ಲಿ ಇಟ್ಟ ಮೇಲೆ ತಮ್ಮ ರುಚಿಯನ್ನು ಬದಲಾಯಿಸಿಕೊಳ್ಳುವುದಿಲ್ಲ. ಮೊದಲಿನ ಹಾಗೆ ತಿನ್ನಲು ರುಚಿಕರವಾಗಿರುತ್ತವೆ.


 • ರೆಫ್ರಿಜರೇಟರ್ ನಲ್ಲಿ ಮೊಟ್ಟೆಗಳನ್ನು ಹೇಗೆ ಫ್ರೀಜ್ ಮಾಡುವುದು?

  ನಿಮ್ಮಲ್ಲಿ ಹಸಿ ಮೊಟ್ಟೆಗಳಿದ್ದು, ಅವುಗಳನ್ನು ಫ್ರೀಜ್ ಮಾಡಬೇಕೆಂದು ನೀವು ಅಂದುಕೊಂಡರೆ, ಖಂಡಿತ ಒಂದು ವರ್ಷದ ಕಾಲ ಕೆಡದಂತೆ ಕಾಪಾಡಿಕೊಳ್ಳಬಹುದು. ಅದೇ ಬೇಯಿಸಿದ ಮೊಟ್ಟೆಯಿಂದ ತಯಾರು ಮಾಡಿದ ಆಹಾರಗಳನ್ನು ಸುಮಾರು 2 ರಿಂದ 3 ತಿಂಗಳುಗಳ ಕಾಲ ರೆಫ್ರಿಜರೇಟರ್ ನಲ್ಲಿ ಫ್ರೀಜ್ ಮಾಡಬಹುದು. ನೀವು ಸಂಪೂರ್ಣವಾಗಿ ಮೊಟ್ಟೆಗಳನ್ನು ಫ್ರೀಜ್ ಮಾಡಲು ಮುಂದಾದರೆ ಮೊದಲು ಅವುಗಳನ್ನು ಒಡೆದು ಒಳಗಿರುವ ಹಳದಿ ಮತ್ತು ಬಿಳಿ ಭಾಗಗಳನ್ನು ಒಂದು ಪಾತ್ರೆಗೆ ಸುರಿದುಕೊಂಡು ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ರೆಫ್ರಿಜರೇಟರ್ ನಲ್ಲಿ ಫ್ರೀಜ್ ಮಾಡಬಹುದು.

  ಅಡುಗೆ ಮಾಡಲು ನೀವು ಬೇಕಾದರೆ ಒಂದೊಂದೇ ಮೊಟ್ಟೆಯನ್ನು ಬೇರೆ ಬೇರೆಯಾಗಿ ರೆಫ್ರಿಜರೇಟರ್ ನಲ್ಲಿ ಫ್ರೀಜ್ ಮಾಡಲು ಇಡಬಹುದು. ಒಂದು ವೇಳೆ ಮೊಟ್ಟೆಯ ಬಿಳಿ ಭಾಗ ಮತ್ತು ಹಳದಿ ಭಾಗವನ್ನು ಬೇರೆ ಬೇರೆಯಾಗಿ ಫ್ರೀಜ್ ಮಾಡಲು ಬಯಸಿದರೆ, ಎರಡನ್ನೂ ಬೇರೆ ಬೇರೆ ಪಾತ್ರೆಯಲ್ಲಿ ಹಾಕಿ ರೆಫ್ರಿಜರೇಟರ್ ನಲ್ಲಿ ಇಡಬಹುದು. ಬೇಕೆಂದರೆ ಐಸ್ ಕ್ಯೂಬ್ ಟ್ರೇ ನಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಫ್ರೀಜ್ ಮಾಡಬಹುದು. ಆದರೆ ಇದಕ್ಕೆ ಒಂದು ವಿಧಾನವಿದೆ. ಏನೆಂದರೆ ಪ್ರತಿ ನಾಲ್ಕು ಮೊಟ್ಟೆಯ ಹಳದಿ ಭಾಗಗಳಿಗೆ ಫ್ರೀಜ್ ಮಾಡುವ ಮೊದಲು 1/4 ಟೀ ಚಮಚದಷ್ಟು ಉಪ್ಪು ಅಥವಾ 1/2 ಟೀ ಚಮಚದಷ್ಟು ಸಕ್ಕರೆ ಹಾಕಿ ಚೆನ್ನಾಗಿ ಕಲಸಿ ನಂತರ ರೆಫ್ರಿಜರೇಟರ್ ನಲ್ಲಿ ಇಡಬೇಕು. ಯಾವುದೇ ಕಾರಣಕ್ಕೂ ಈ ಪ್ರಮಾಣವನ್ನು ಹೆಚ್ಚು ಕಮ್ಮಿ ಮಾಡಬಾರದು.


 • ಫ್ರೀಜ್ ಮಾಡಿದ ಮೊಟ್ಟೆಗಳನ್ನು ಕರಗಿಸುವುದು ಹೇಗೆ?

  ಯಾವುದೇ ಆಹಾರಗಳನ್ನು ಫ್ರೀಜ್ ಮಾಡಿದರೆ, ಮೊದಲು ಅವುಗಳನ್ನು ನಮ್ಮ ಸಾಮಾನ್ಯ ಕೊಠಡಿ ತಾಪಮಾನಕ್ಕೆ ತಂದು ನಂತರ ಬಿಸಿ ಮಾಡಿಕೊಂಡು ಉಪಯೋಗಿಸಬೇಕು ಎಂಬುದು ನಿಮಗೂ ಗೊತ್ತು. ಮೊಟ್ಟೆಗಳ ವಿಷಯದಲ್ಲೂ ಅಷ್ಟೇ. ನೀವು ಅಡುಗೆ ಮಾಡಲು ಬೇಯಿಸಿದ ಅಥವಾ ಬೇಯಿಸದ ಫ್ರೀಜ್ ಮಾಡಿದ ಮೊಟ್ಟೆಗಳನ್ನು ಬಳಸಲು ಮುಂದಾಗುವ ಮೊದಲು ಅವುಗಳನ್ನು ರೆಫ್ರಿಜರೇಟರ್ ನಿಂದ ಹೊರಗಡೆ ತೆಗೆದು ತಕ್ಷಣ ಮೊದಲು ಕರಗಿಸಬೇಕು.

  ಕರಗಿದ ನಂತರ ಅದು ಬಹಳಷ್ಟು ಚೆನ್ನಾಗಿ ಬೇಯಬೇಕು. ಇದರಿಂದ ಆಹಾರದಿಂದ ಉತ್ಪತ್ತಿಯಾಗುವ ಯಾವುದೇ ಅಸ್ವಸ್ಥತೆ ಉಂಟಾಗುವುದಿಲ್ಲ. ಫ್ರೀಜ್ ಮಾಡಿದ ಅಥವಾ ಬೇಯಿಸಿದ ಮೊಟ್ಟೆಗಳನ್ನು ಕರಗಿಸುವ ಮೊದಲು ಅವುಗಳನ್ನು ಕಂಟೇನರ್ ಸಮೇತ ರೆಫ್ರಿಜರೇಟರ್ ನಲ್ಲಿ ಇಡೀ ರಾತ್ರಿ ಬಿಡಬೇಕು. ಒಂದು ವೇಳೆ ನೀವು ಸೀಲ್ ಮಾಡಿದ ಕಂಟೈನರ್ ನಲ್ಲಿ ಇಟ್ಟಿದ್ದರೆ, ಅವುಗಳನ್ನು ಹರಿಯುವ ನಲ್ಲಿ ನೀರಿನಲ್ಲಿ ಕರಗಿಸಬಹುದು. ಹಸಿ ಮೊಟ್ಟೆಗಳಾಗಲೀ, ಮೊಟ್ಟೆಯ ಬಿಳಿ ಭಾಗಗಳು ಅಥವಾ ಹಳದಿ ಭಾಗಗಳು ಯಾವುದಾದರೂ ಸರಿ ನೀವು ಕರಗಿಸಿದ ದಿನವೇ ಅವುಗಳನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು.
ಕೆಲವರಿಗೆ ಒಂದು ಛಾಳಿ ಇರುತ್ತದೆ. ಏನೆಂದರೆ, ನಾನು ಇಷ್ಟ ಪಟ್ಟ ಆಹಾರವನ್ನು ಇತರರಿಗೆ ಗೊತ್ತಾಗದಂತೆ ಬಹಳ ದಿನಗಳ ಕಾಲ ನಾನೇ ಅಚ್ಚಿಟ್ಟು ಬಚ್ಚಿಟ್ಟು ತಿನ್ನಬೇಕು ಎಂದು. ಅವರು ಅಂದುಕೊಂಡಂತೆ ಮಾಡುತ್ತಾರೆ ಕೂಡ. ಇದು ಕೇವಲ ಮಾತಿಗೆ ಹೇಳಿದೆ ಅಷ್ಟೇ. ಏಕೆ ಹೇಳಿದೆ ಎಂದು ನಿಮಗೆ ಈ ಲೇಖನದಲ್ಲಿ ಮುಂದೆ ತಿಳಿಯುತ್ತದೆ.

ಈಗ ಮೊಟ್ಟೆಯ ವಿಷಯಕ್ಕೆ ಬರೋಣ. ಕೋಳಿ ಮೊಟ್ಟೆ ತನ್ನಲ್ಲಿರುವ ಅನೇಕ ಪೋಷಕಾಂಶಗಳ ಪ್ರಮಾಣದಿಂದ ಹೆಸರಾಗಿದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲು ವೈದ್ಯರೇ ಸೂಚಿಸಿರುತ್ತಾರೆ. ದೊಡ್ಡವರೂ ಸಹ ತಮ್ಮ ಬೆಳಗಿನ ಉಪಹಾರದ ಸಮಯದಲ್ಲಿ ಮೊಟ್ಟೆಯ ಅಥವಾ ಅದರಿಂದ ತಯಾರಾದ ಆಹಾರಗಳ ಸೇವನೆಯನ್ನು ಪ್ರತಿ ದಿನ ಅಭ್ಯಾಸ ಮಾಡಿಕೊಂಡಿರುತ್ತಾರೆ. ಬೇಕರಿಗಳಲ್ಲಿ ಬ್ರೆಡ್ಡು, ಬನ್, ಕೇಕು ಇತ್ಯಾದಿ ಆಹಾರಗಳಿಗೆ ಮೊಟ್ಟೆಗಳ ಉಪಯೋಗ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

 
ಹೆಲ್ತ್