Back
Home » ಆರೋಗ್ಯ
ಕೋವಿಡ್-19 ಲಾಕ್‌ಡೌನ್‌: ಮನಸ್ಸಿನ ಆತಂಕ ಹೋಗಲಾಡಿಸುವುದು ಹೇಗೆ?
Boldsky | 4th Apr, 2020 09:31 AM
 • ಗೃಹಬಂಧನದ ಹಿಂದೆ ಇರುವ ಕಾರಣ

  ಗೃಹಬಂಧನದ ಸಮಯದಲ್ಲಿ ಆತಂಕಕ್ಕೆ ಒಳಗಾಗದಿರಲು ಉತ್ತಮ ಮಾರ್ಗವೆಂದರೆ ಅದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳುವುದು. ಸಾಂಕ್ರಾಮಿಕ ಸಮಯದಲ್ಲಿ ಎದುರಾಗುವ ಒತ್ತಡಗಳೆಂದರೆ ನಿದ್ದೆಯ ಸಮಯದಲ್ಲಿ ಬದಲಾವಣೆ, ಆಹಾರಕ್ರಮದಲ್ಲಿ ಬದಲಾವಣೆ, ಸ್ವಂತ ಆರೋಗ್ಯ ಮತ್ತು ಇತರರ ಆರೋಗ್ಯದ ಬಗ್ಗೆ ಭಯ, ಏಕಾಗ್ರತೆಗೆ ತೊಂದರೆ, ಆಲ್ಕೊಹಾಲ್ ಅಥವಾ ಧೂಮಪಾನದ ಬಳಕೆಯಲ್ಲಿ ಹೆಚ್ಚಳ ಮತ್ತು ದೀರ್ಘಕಾಲದ ಕಾಯಿಲೆಯ ಸಂದರ್ಭದಲ್ಲಿ ಆರೋಗ್ಯ ಇನ್ನಷ್ಟು ಬಿಗಡಾಯಿಸುವುದು.

  ವೈರಸ್ ಹರಡುವುದನ್ನು ನಿಯಂತ್ರಿಸಲು ಮತ್ತು ಮನುಷ್ಯರನ್ನು ರಕ್ಷಿಸುವ ಎಲ್ಲಾ ವಿಧಾನಗಳಲ್ಲಿ ಗೃಹಬಂಧನೆಯ ಕ್ರಮ ಅತ್ಯುತ್ತಮವಾಗಿದೆ. ವೈರಸ್ ಮುಖ್ಯವಾಗಿ ಮಾನವನಿಂದ ಮಾನವರಿಗೆ ಹರಡುವ ರೋಗವಾಗಿದೆ. ಈ ಹರಡುವಿಕೆಯ ಸಮಯದಲ್ಲಿ ಯಾವುದೇ ರೀತಿಯ ಜನರನ್ನು ಒಟ್ಟುಗೂಡಿಸುವುದನ್ನು ನಿರ್ಬಂಧಿಸುವುದು ಅದರ ಹರಡುವಿಕೆಯನ್ನು ತಡೆಯುವ ಏಕೈಕ ಮಾರ್ಗವಾಗಿದೆ. ಜನರು ಮನೆಗಳಲ್ಲಿ ಉಳಿದಿದ್ದರೆ, ಮಾನರು ಪರಸ್ಪರ ಬೆರೆಯುವುದನ್ನು ತಡೆಯುವ ಮೂಲಕ COVID-19 ಹರಡುವುದನ್ನು ಸೀಮಿತಗೊಳಿಸುತ್ತದೆ. ಆದ್ದರಿಂದ, ವೈದ್ಯಕೀಯ ಸಹಾಯ ಪಡೆಯಲು ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಹೊರಗೆ ಹೋಗಿ. ಹೊರಗಿನ ಪ್ರವಾಸಗಳು, ಕುಟುಂಬ ಸದಸ್ಯರನ್ನು ಅಥವಾ ಇತರ ಕೂಟಗಳಿಗೆ ಭೇಟಿ ನೀಡುವುದನ್ನು ಕಡ್ಡಾಯವಾಗಿ ನಿಲ್ಲಿಸಿ.


 • ಗೃಹಬಂಧನದ ಸಮಯದಲ್ಲಿ ಧನಾತ್ಮಕ ಧೋರಣೆ ತಡೆಯಲು ಮತ್ತು ಸಾಮಾಜಿಕ ಪ್ರತ್ಯೇಕತೆಯನ್ನು ಹೇಗೆ ನಿರ್ವಹಿಸುವುದು?

  1. ಒಂದು ಅಥವಾ ಇನ್ನೊಂದು ಚಟುವಟಿಕೆಗಳಲ್ಲಿ ನಿಮ್ಮನ್ನು ವ್ಯಸ್ತರಾಗಿಸಿಕೊಳ್ಳಿ.

  2. ನಿಯಮಿತ ವೇಳಾಪಟ್ಟಿಯೊಂದನ್ನು ತಯಾರಿಸಿ ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿ

  3. ಕೆಲವು ಮನೆಕೆಲಸಗಳನ್ನು ಮಾಡುವುದನ್ನು ಪರಿಗಣಿಸಿ. ನಿಮ್ಮ ಪೋಷಕರಿಗೆ ಸಹಾಯ ಮಾಡಲು ಇದು ಅತ್ಯುತ್ತಮ ಮಾರ್ಗವಾಗಿದೆ.

  4. ನೃತ್ಯ, ಚಿತ್ರಕಲೆ, ಹೊಲಿಗೆ ಅಥವಾ ತೋಟಗಾರಿಕೆ ಅಥವಾ ಬೇರೆ ಯಾವುದೋ ನಿಮ್ಮ ನೆಚ್ಚಿನ ಹವ್ಯಾಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಆ ಸಮಯದಲ್ಲಿ ನಿಮಗೆ ಗೊತ್ತಿಲ್ಲದೇ ಇದ್ದ ಹೊಸ ಹವ್ಯಾಸವನ್ನೂ ಕಂಡುಕೊಳ್ಳಬಹುದು.

  5. ಪ್ರತಿದಿನ ಬೆಳಿಗ್ಗೆ ವ್ಯಾಯಾಮ ಮಾಡಿ ಅಥವಾ ಧ್ಯಾನ ಮಾಡಿ ಅದು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿರಿಸುತ್ತದೆ.

  6. ದೇಹ ನಿರ್ಜಲೀಕರಣಕ್ಕೆ ಒಳಗಾಗದಂತೆ ಕಾಪಾಡುತ್ತದೆ.

  7. ಗೃಹಬಂಧನವನ್ನು ನಿಭಾಯಿಸಲು ಇತರರಿಗೆ ಸಹಾಯ ಮಾಡಲು ಆಹಾರ ಅಥವಾ ಇತರ ಅಗತ್ಯ ವಸ್ತುಗಳನ್ನು ದಾನ ಮಾಡಿ.

  8. ವೃದ್ಧಾಪ್ಯದಲ್ಲಿ ಪ್ರತ್ಯೇಕತೆ ಅತಿ ಅಪಾಯಕಾರಿ. ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನಿಮ್ಮ ಅಜ್ಜ ಅಜ್ಜಿಯರೊಂದಿಗೆ ಸಂಪರ್ಕ ಸಾಧಿಸಿ ಮತ್ತು ಅವರ ಮಾನಸಿಕ ನೆಮ್ಮದಿಯನ್ನು ಕಾಪಾಡಿ.

  9. ಹೊಸ ಕೌಶಲ್ಯವನ್ನು ಪಡೆಯಲು ನಿಮ್ಮ ಮಕ್ಕಳನ್ನು ಪ್ರೋತ್ಸಾಹಿಸಿ.

  10. COVID-19 ಕುರಿತು ಯಾವುದೇ ಸಲಹೆ ಅಗತ್ಯವಿದ್ದರೆ ಇತರರಿಗೆ ಫೋನ್ ಅಥವಾ ವಿಡಿಯೋ ಕರೆಗಳ ಮೂಲಕ ಶಿಕ್ಷಣ ನೀಡಿ.


 • ಭಾವನಾತ್ಮಕ ಸಮಸ್ಯೆಗಳನ್ನು ಹೇಗೆ ನಿರ್ವಹಿಸುವುದು?

  ಧನಾತ್ಮಕವಾಗಿ ಯೋಚಿಸಿ ಮತ್ತು ನಿಮ್ಮನ್ನು ಆತಂಕಕ್ಕೊಳಗಾಗಿಸುವ ಜನರಿಂದ ಮತ್ತು ಸುದ್ದಿಗಳಿಂದ ದೂರವಿರಿ.

  ಆತಂಕ ಅಥವಾ ಒತ್ತಡದ ಸಮಯದಲ್ಲಿ ನಿಧಾನವಾಗಿ ಉಸಿರಾಡುವ ವ್ಯಾಯಾಮವನ್ನು ಅಭ್ಯಾಸ ಮಾಡಿ.

  ನಿಮಗೆ ಕಿರಿಕಿರಿಯಾದಾಗ ಅಥವಾ ದುಃಖ ಎದುರಾದಾಗಲೆಲ್ಲಾ ನಿಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಿ. 10 ರಿಂದ 1 ರ ವರೆಗೆ ಇಳಿಕೆಯ ಕ್ರಮದಲ್ಲಿ ಎಣಿಕೆ ಮಾಡುವುದು ಸರಳ ಮತ್ತು ಸುಲಭವಾದ ಮಾರ್ಗವಾಗಿದೆ.

  ಪರಿಸ್ಥಿತಿಯಿಂದ ನೀವು ಭಯಭೀತರಾಗಿದ್ದರೆ, ಅದನ್ನು ಸಕಾರಾತ್ಮಕ ರೀತಿಯಲ್ಲಿ ವ್ಯವಹರಿಸಿ. ಈ ಹಿಂದೆ ನೀವು ಒತ್ತಡವನ್ನು ಹೇಗೆ ನಿರ್ವಹಿಸಿದ್ದೀರಿ ಅಥವಾ ನಿಮಗೆ ಸಕಾರಾತ್ಮಕ ಭಾವನೆ ಮೂಡಿಸುವಂತಹ ವಿಷಯಗಳ ಬಗ್ಗೆ ಯೋಚಿಸಿ.

  ಪರ್ಯಾಯ ವಿಧಾನಗಳ ಮೂಲಕ ಕುಟುಂಬ ಸದಸ್ಯರೊಂದಿಗೆ ಅಥವಾ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ. ಆಗಾಗ ಎಲ್ಲರೊಂದಿಗೂ ಮಾತನಾಡುತ್ತಿರಿ.ನಿಮ್ಮ ಹೊಸ ಹವ್ಯಾಸ, ನಿಮ್ಮ ನೆಚ್ಚಿನ ಸಂಗೀತದ ಬಗ್ಗೆ ಅವರೊಂದಿಗೆ ಮಾತನಾಡಿ ಅಥವಾ ಕೆಲವು ಅಡುಗೆ ಸಲಹೆಗಳನ್ನು ವಿನಿಮಯ ಮಾಡಿಕೊಳ್ಳಿ. ಒಟ್ಟಾರೆ, ವಿಷಯವೊಂದನ್ನು ಪಡೆದು ಹೊಸತನ್ನೇನಾದರೂ ಕಲಿಯಲು ಯತ್ನಿಸಿ.

  ನೀವು ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿದ ಬಳಿಕವೂ ಒತ್ತಡ ಅಥವಾ ಒಂಟಿತನ ಅನುಭವಿಸುತ್ತಿದ್ದರೆ, ಮಾನಸಿಕ ಆರೋಗ್ಯ ವೃತ್ತಿಪರರನ್ನು (080-46110007) ಕರೆ ಮಾಡಿ ಸಹಾಯ ಪಡೆಯಿರಿ.


 • ವದಂತಿಗಳಿಂದ ದೂರವಿರಿ

  • ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಉತ್ತಮ ಮಾಹಿತಿ ಮತ್ತು ಮಾಹಿತಿಗಳನ್ನು ಮಾತ್ರವೇ ನಂಬಿರಿ.
  • ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಸಾಮಾಜಿಕ ಮಾಧ್ಯಮದ ಸುಳ್ಳು ಪೋಸ್ಟ್‌ಗಳು ಅಥವಾ ಸುದ್ದಿ ಚಾನೆಲ್‌ಗಳಿಂದ ದೂರವಿರಿ.
  • ಪರಿಶೀಲಿಸದ ಸುದ್ದಿಗಳನ್ನು ನಂಬುವುದನ್ನು ತಪ್ಪಿಸಿ ಮತ್ತು ಅವುಗಳನ್ನು ಇತರರಿಗೆ ಹಂಚಿಕೊಳ್ಳದಿರಿ
  • ಸರ್ಕಾರದ ಸಲಹೆಗಾಗಿ ಗಮನಹರಿಸಿ ಮತ್ತು ಉತ್ತಮ ನೈರ್ಮಲ್ಯ ಮತ್ತು ದೈಹಿಕ ದೂರವನ್ನು ಕಾಪಾಡಿಕೊಳ್ಳಿ. ಸೀನುವುದು, ಕೆಮ್ಮುವುದು ಅಥವಾ ಸಾರ್ವಜನಿಕವಾಗಿ ಉಗುಳುವುದು ಕಡ್ಡಾಯವಾಗಿ ತಪ್ಪಿಸಿ.
  • ಚೇತರಿಸಿಕೊಂಡ ಜನರ ಬಗ್ಗೆ ಓದುವ ಮೂಲಕ ಧನಾತ್ಮಕ ಅಂಶವನ್ನು ನೋಡಲು ಪ್ರಯತ್ನಿಸಿ.
  • ನೆನಪಿಡಿ, ಪ್ರತಿಯೊಂದು ಸಾಮಾನ್ಯ ಶೀತದ ರೋಗಲಕ್ಷಣವೂ COVID-19 ಆಗಿರಬೇಕಾಗಿಲ್ಲ. COVID-19 ರೋಗಲಕ್ಷಣಗಳ ಪರಿಸ್ಥಿತಿಗಳನ್ನು ಪರಿಶೀಲಿಸಿ ಮತ್ತು ನಂತರ ಪರಿಸ್ಥಿತಿಗೆ ಪ್ರತಿಕ್ರಿಯಿಸಿ.
  • ನೀವು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದರೂ ಮತ್ತು ನೀವು ಕರೋನವೈರಸ್ ಹೊಂದಿರಬಹುದೆಂದು ಅನುಮಾನವಿದ್ದರೂ, ವೈದ್ಯಕೀಯ ತಜ್ಞರನ್ನು ಸಂಪರ್ಕಿಸಿ ಈ ಸೂಚನೆಗಳ ಬಗ್ಗೆ ವೈದ್ಯರು ಕೇಳುವ ಪ್ರಶ್ನೆಗಳನ್ನು ಸೂಕ್ತವಾಗಿ ಉತ್ತರಿಸಿ ಮತ್ತು ನೇರವಾಗಿ ಆಸ್ಪತ್ರೆಗೆ ಹೋಗದಿರಿ. ನಿಮ್ಮ ಆರೋಗ್ಯ ಲಕ್ಷಣಗಳನ್ನು ಪರಿಶೀಲಿಸಿದ ವೈದ್ಯರೇ ನಿಮಗೆ ಮುಂದೇನು ಮಾಡಬೇಕೆಂದು ವಿವರಿಸುತ್ತಾರೆ. ಇದರಲ್ಲಿ ಆಸ್ಪತ್ರೆಗೆ ಹೋಗಬೇಕೆಂದು ಹೇಳಿದರೆ ತಕ್ಷಣ ಸಾಗಬೇಕು.

 • ನೀವು ಯಾವುದನ್ನೆಲ್ಲಾ ತಪ್ಪಿಸಬೇಕು?

  • ನಿಮ್ಮ ಮಾನಸಿಕ ಸ್ಥಿತಿಗಳನ್ನು ನಿಭಾಯಿಸಲು ಮಧ್ಯ ಅಥವಾ ಇತರ ಯಾವುದೇ ಔಷಧಿಗಳನ್ನು ಸೇವಿಸಬೇಡಿ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ದೈಹಿಕ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ನೀವು ಈಗಾಗಲೇ ಇತರ ಆರೋಗ್ಯ ಅಥವಾ ಅಲರ್ಜಿ ಸಂಬಂಧಿತ ಸಮಸ್ಯೆಗಳನ್ನು ಹೊಂದಿದ್ದರೆ ವೃತ್ತಿಪರ ಸಹಾಯವನ್ನು ಪಡೆಯಿರಿ.
  • ಯಾರಾದರೂ COVID-19 ಹೊಂದಿದ್ದಾರೆಂದು ನಿಮಗೆ ಅನುಮಾನ ಎದುರಾದರೆ, ಅವರನ್ನು ದೂರವಿಡಬೇಡಿ ಅಥವಾ ನಿರ್ಲಕ್ಷಿಸದಿರಿ. ವೈರಸ್ ಹರಡುವುದನ್ನು ತಡೆಗಟ್ಟಲು ಮತ್ತು ವೈದ್ಯಕೀಯ ಸಹಾಯವನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅವರಿಗೆ ತಿಳಿಸಿ.
  • ನೀವು ಸೋಂಕಿಗೆ ಒಳಗಾಗಿದ್ದರೆ, ಭಯಪಡಬೇಡಿ ಮತ್ತು ನೀವು ಸಾಯುತ್ತೀರಿ ಎಂದು ಯೋಚಿಸಬೇಡಿ. ಶೇಖಡಾ 80 ರಷ್ಟು ಸೋಂಕಿತ ವ್ಯಕ್ತಿಗಳು ಈಗಾಗಲೇ ಚೇತರಿಸಿಕೊಂಡಿದ್ದಾರೆ ಎಂಬುದನ್ನು ನೆನಪಿಡಿ. ಆದ್ದರಿಂದ, ನಿಮ್ಮ ಸ್ಥಿತಿಯನ್ನು ಎದುರಿಸಲು ಸರಿಯಾದ ಔಷಧಿ ಮತ್ತು ಸಲಹೆ ಮಾತ್ರವೇ ನಿಮಗೆ ಬೇಕಾಗಿರುವುದು.

 • ಚೇತರಿಕೆಯ ನಂತರ ಎದುರಾಗುವ ಭಾವನಾತ್ಮಕ ತೊಂದರೆಗಳು

  • ಚೇತರಿಕೆಯ ನಂತರವೂ, ನಿಮ್ಮಿಂದ ಇನ್ನೂ ಸೋಂಕು ಹರಡುತ್ತದೆಯೇ ಎಂಬ ನಿಮಗೆ ಎದುರಾಗಬಹುದು.
  • ಕೆಲವು ಜನರು ನೀವು ಎದುರಾಗುತ್ತಿದ್ದಂತೆಯೇ ನಿಮ್ಮನ್ನು ತಪ್ಪಿಸಿಕೊಳ್ಳಲು ಯತ್ನಿಸಬಹುದು. ಇದು ಭಾರೀ ಮಾನಸಿಕ ಒತ್ತಡ ನೀಡಬಹುದು ಮತ್ತು ನಿಮ್ಮನ್ನು ಪ್ರತ್ಯೇಕವಾಗಿಸಿದ ಅನುಭವ ನೀಡಬಹುದು.
  • ಒಂದು ವೇಳೆ ನೀವು ಸ್ವಯಂಪ್ರೇರಣೆಯಿಂದ ಪ್ರತ್ಯೇಕತೆಯಲ್ಲಿದ್ದರೆ ಅಥವಾ ದೀರ್ಘಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ನಿಮ್ಮ ಪ್ರೀತಿಪಾತ್ರರನ್ನು ಕಾಣದಿರುವ ಕಾರಣದಿಂದ ನೀವು ನಿಮ್ಮನ್ನೇ ತಪ್ಪಿತಸ್ಥರೆಂದು ಭಾವಿಸಿಕೊಳ್ಳಲೂ ಕಾರಣ ಇಲ್ಲದಿಲ್ಲ. ವಾಸ್ತವವಾಗಿ, ನಿಮ್ಮನ್ನು ಇತರರಿಂದ ದೂರವಿರಿಸುವ ಮೂಲಕ, ನೀವು ಅವರನ್ನು ಸೋಂಕಿನಿಂದ ರಕ್ಷಿಸಿದ್ದೀರಿ ಎಂಬ ಭಾವನೆ ನಿಮ್ಮಲ್ಲಿರಬೇಕು ಹಾಗೂ ಇದೊಂದು ಸಾರ್ಥಕ ಭಾವನೆಯೂ ಹೌದು.
  • ಪ್ರತ್ಯೇಕತೆಯಾಗಿರಬೇಕಾದ ಸಂದರ್ಭಗಳನ್ನು ಎದುರಿಸಲು, ನೀವು ಮೇಲೆ ತಿಳಿಸಿದ ಮಾರ್ಗಗಳನ್ನು ಅನುಸರಿಸಬೇಕು. ಈ ನಡುವೆ ನಿಮ್ಮ ಕಥೆಯನ್ನು ಸಹ ನೀವು ಆತ್ಮೀಯರಲ್ಲಿ ಹಂಚಿಕೊಳ್ಳಬಹುದು ಇದರಿಂದ ಇತರರೂ ನಿಮ್ಮಿಂದ ಅಗತ್ಯ ಮಾಹಿತಿಗಳನ್ನು ಪಡೆಯಬಹುದು.

 • ಅಂತಿಮವಾಗಿ

  ಈ ಸಮಯದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಆದರೂ, ಒಬ್ಬರು ಅವುಗಳನ್ನು ಎದುರಿಸಲು ಸೂಕ್ತ ಮಾರ್ಗಗಳನ್ನು ಕಂಡುಕೊಳ್ಳಲು ಮತ್ತು ಅನುಸರಿಸುವುದನ್ನು ಕಲಿಯಬೇಕು.

  ಪರಿಸ್ಥಿತಿಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡಲು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಅನೇಕ ಬೆಂಬಲ ಸೌಲಭ್ಯಗಳನ್ನು ಒದಗಿಸಿವೆ. ಉತ್ತಮ ಹೆಚ್ಚೂ ಕಡಿಮೆ ಯುದ್ದದ ಪರಿಸ್ಥಿತಿ ಇರುವ ಈ ಸಮಯದಲ್ಲಿ ಪ್ರತಿಯೊಬ್ಬರೂ ವಿವೇಚನೆಯಿಂದ ವರ್ತಿಸಿದಾಗ ಮಾತ್ರವೇ ಮಾರಕ ಕೊರೋನಾ ವಿರುದ್ದ ಸಾರಿರುವ ಸಮರವನ್ನು ಗೆಲ್ಲಲು ಸಾಧ್ಯ.

  ಹಕ್ಕುಸ್ವಾಮ್ಯ

  ಮೇಲೆ ತಿಳಿಸಲಾದ ಎಲ್ಲಾ ಮಾಹಿತಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ಪ್ರಕಾರ ಮತ್ತು ಸಾಮಾನ್ಯ ಮಾರ್ಗದರ್ಶನದ ಉದ್ದೇಶದಿಂದ ನೀಡಲಾಗಿದೆ.
ಕೊರೋನಾ ವೈರಸ್ ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿದ್ದು ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಜೀವನವನ್ನು ಜರ್ಝರಿತಗೊಳಿಸಿದೆ. ಜಗತ್ತಿನ ಇತಿಹಾಸದಲ್ಲಿಯೇ ಕಂಡರಿಯದಷ್ಟು ಭೀಕರ ಸಾಂಕ್ರಾಮಿಕ ರೋಗ ಹಬ್ಬುತ್ತಿರುವ ಕಾರಣ ಅನಿವಾರ್ಯವಾಗಿ ಜಗತ್ತಿಗೆ ಜಗತ್ತೇ ಸ್ತಬ್ಧಗೊಳ್ಳಬೇಕಾದ ಸಂದರ್ಭ ಎದುರಾಗಿದೆ.

ವೈರಸ್ ನ ಭೀತಿ ಪ್ರತಿಯೊಬ್ಬರಿಗೂಇದೆ. ವಿಶೇಷವಾಗಿ ಈ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಿರುವ ಪ್ರದೇಶಗಳಲ್ಲಿರುವ ಜನತೆ ಈ ಸೋಂಕು ಅಪ್ಪಿ ತಪ್ಪಿ ತಮ್ಮ ತಪ್ಪಿಲ್ಲದೇ ಯಾರಿಂದಲೂ ತಮಗೂ ಎದುರಾಗಿರಬಹುದು ಎಂಬ ಭೀತಿಯನ್ನು ಸದಾ ಎದುರಿಸುತ್ತಿದ್ದಾರೆ. ಕೊಂಚ ಮಟ್ಟಿಗೆ ಹರಡಿರುವ ಪ್ರದೇಶಗಳಲ್ಲಿರುವ ಜನರು ಇದು ಯಾವಾಗ ವ್ಯಾಪಿಸುತ್ತದೋ ಎಂಬ ಭೀತಿಯಲ್ಲಿದ್ದಾರೆ. ಅಲ್ಲದೇ ಮಾಧ್ಯಮಗಳ ಸುಳ್ಳು ಸುದ್ದಿಗಳೂ ಈ ರೋಗ ಹರಡಿಸುವ ದೇಶಗಳ ಆಕ್ರಂದನಗಳ ಸುದ್ದಿಗಳೂ ಎದುರಾಗುತ್ತಿದ್ದಂತೆ ಮಾನಸಿಕವಾಗಿಯೂ ಜನರು ಧೃತಿಗೆಡುತ್ತಿದ್ದಾರೆ. ಮಾನಸಿಕ ಒತ್ತಡ, ಉದ್ವೇಕ ಮತ್ತು ಆತಂಕ ಎಲ್ಲರಲ್ಲೂ ಮಡುಗಟ್ಟಿದೆ.

ಇಡೀ ವಿಶ್ವಕ್ಕೇ ಇದು ಕಷ್ಟಕರ ಸಮಯ ಎಂದು ನಮಗೆ ತಿಳಿದಿದೆ, ಏಕೆಂದರೆ ಅದು ಇನ್ನೂ ಎಷ್ಟು ವಿಷಮಸ್ಥಿತಿಗೆ ತಲುಪಬಹುದು ಎಂಬುದು ನಮಗೆ ಇನ್ನೂ ತಿಳಿದಿಲ್ಲ. ಆದಾಗ್ಯೂ, ನಾವು ದೃಢವಾಗಿರಲು ಮತ್ತು ಒಂದಾಗಿ ಇದರ ವಿರುದ್ದ ಹೋರಾಡಲು ಒಂದು ಸಮಯವಾಗಿದೆ. ನಾವೆಲ್ಲರೂ ಒಂದಾಗಿ ಸಹಕರಿಸಿದಾಗ ಮಾತ್ರ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಎದುರಾಗಬಹುದಾದ ಭಯ ಮತ್ತು ಆತಂಕವನ್ನು ನಿವಾರಿಸಲು ಈ ಸಮಯದಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಬಹುದು.

ಜನರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಶೀಲಿಸಿದ ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಇದನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಹಲವಾರು ಮಾರ್ಗಸೂಚಿಗಳನ್ನು ತಂದಿದೆ. ಈ ಮಾರ್ಗಸೂಚಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ.

   
 
ಹೆಲ್ತ್