Back
Home » ಇತ್ತೀಚಿನ
ವಾಟ್ಸ್ಆಪ್‌ನಲ್ಲಿ ಹರಿದಾಡುವ ಸುಳ್ಳುಸುದ್ದಿಗಳನ್ನು ಹತ್ತಿಕ್ಕಲು ಜಾಹಿರಾತು!!
Gizbot | 5th Dec, 2018 09:35 AM

ಭಾರತದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ದೇಶದ ಅತ್ಯಂತ ಜನಪ್ರಿಯ ಮೆಸೆಂಜರ್​​ ವಾಟ್ಸ್​ಆಪ್ ಕಾರ್ಯೋನ್ಮುಖವಾಗಿ ಸುಳ್ಳು ಸುದ್ದಿ ಹರಡುವುದನ್ನು ನಿಯಂತ್ರಣದ ಹೊಸದೊಂದು ಹೆಜ್ಜೆಯನ್ನಿಟ್ಟಿದೆ. ಫೇಸ್‌ಬುಕ್ ಒಡೆತನದ ​​ವಾಟ್ಸ್​ಆಪ್ ಸಂಸ್ಥೆ ತನ್ನ ಆಪ್ ಮೂಲಕ ಸುಳ್ಳು ಸುದ್ದಿಗಳು ಹರಿದಾಡದಂತೆ ತಡೆಯಲು ಈಗ ಸಾಂಪ್ರದಾಯಿಕ ಜಾಹಿರಾತುವಿನ ಮೊರೆಹೋಗಿದೆ.

ವಾಟ್ಸ್​ಆಪ್ ಮಾತೃ ಸಂಸ್ಥೆ ಫೇಸ್‌ಬುಕ್ ಯಶಸ್ವಿ ಡಿಜಿಟಲ್ ಮಾಧ್ಯಮಗಳಾಗಿದ್ದರೂ ಸಹ, ಇದೇ ಸೋಮವಾರದಂದು ವಾಟ್ಸ್‌ಆಪ್ ಸಂಸ್ಥೆ ಭಾರತದಲ್ಲಿ ಪತ್ರಿಕೆ ಹಾಗೂ ಟಿವಿಗಳಲ್ಲಿ ಜಾಹೀರಾತನ್ನು ನೀಡಿದೆ. ಸಾಂಪ್ರದಾಯಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಯ ಅಪಾಯ ಹಾಗೂ ಪರಿಣಾಮಗಳ ಕುರಿತು ಬಳಕೆದಾರರಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದೆ.

ಸಾಂಪ್ರದಾಯಿಕ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ಜಾಹೀರಾತನ್ನು ನೀಡಿ, ಬಳಕೆದಾರರು ಸುಳ್ಳು ಸುದ್ದಿಗಳನ್ನು ನಂಬಿಕೊಳ್ಳದಂತೆ ತಡೆಯುವ ಗುರಿಯನ್ನು ಸಂಸ್ಥೆ ಹೊಂದಿದೆ. ಹಾಗಾಗಿ, ಬಳಕೆದಾರರ ಮೇಲೆ ಹೆಚ್ಚು ಪರಿಣಾಮ ಬೀರುವಂತೆ ಮಾಡಲು ಟಿವಿ ಜಾಹೀರಾತಿಗಾಗಿ ಸಿನಿಮಾ ನಿರ್ದೇಶಕ ಶ್ರಿಶಾ ಗುಹಾ ತಕುರ್ತಾರೊಂದಿಗೆ ವಾಟ್ಸ್​ಆಪ್ ಸಂಸ್ಥೆ ಜೊತೆಯಾಗಿದೆ.

ಇನ್ನು ಪತ್ರಿಕೆ ಹಾಗೂ ಟಿವಿಗಳಲ್ಲಿ ಮಾತ್ರವಲ್ಲದೆ, ದೇಶಾದ್ಯಂತ 46 ರೇಡಿಯೋ ಸ್ಟೇಷನ್​ಗಳಲ್ಲಿ ಸುಳ್ಳು ಸುದ್ದಿಯ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸಹ ಈಗಾಗಲೇ ನೀಡಿದೆ. ಬಿಹಾರ್​​, ಜಾರ್ಖಂಡ್, ಮಧ್ಯ ಪ್ರದೇಶ, ಛತ್ತೀಸ್​ಗಡ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಈ ರೇಡಿಯೋ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗಿದೆ.

ದೇಶದಲ್ಲಿ ವಾಟ್ಸ್ಆಪ್ ಬಳಕೆಯ ಪ್ರಮಾಣ ಹೆಚ್ಚಿರುವುದರಿಂದ ಪ್ರತಿ ದಿನ ಕೋಟ್ಯಾಂತರ ಸಂದೇಶಗಳು ಹರಿದಾಡುತ್ತಿವೆ. ಇವುಗಳಲ್ಲಿ ಸುಳ್ಳು ಸುದ್ದಿಗಳು ಸಹ ಹರಿದಾಡಿ ದೇಶದಲ್ಲಿ ಹಲವು ದುರ್ಘಟನೆಗಳು ಜರುಗಿದ್ದವು. ಹಾಗಾಗಿ, ಇನ್ನಿತರ ಮಾರ್ಗಗಳಲ್ಲಿ ಸುಳ್ಳು ಸುದ್ದಿಗಳನ್ನು ತಡೆಯಲು ವಿಫಲವಾಗಿದ್ದ ಸಂಸ್ಥೆ ಈಗ ಸಾಂಪ್ರದಾಯಿಕ ಮಾಧ್ಯಮಗಳ ಜಾಹಿರಾತುವಿನ ಹಿಂದೆ ಬಿದ್ದಿದೆ.

   
 
ಹೆಲ್ತ್