Back
Home » ಆರೋಗ್ಯ
ಜೀರ್ಣಕ್ರಿಯೆ ಸಮಸ್ಯೆಯಿಂದ ಹಿಡಿದು-ಸೌಂದರ್ಯ ಹೆಚ್ಚಿಸುವವರೆಗೆ-ತುಪ್ಪವನ್ನು ಮನೆಮದ್ದುಗಳ ರೂಪದಲ್ಲಿ ಬಳಸಿ
Boldsky | 19th Mar, 2019 10:43 AM
 • ಜೀರ್ಣಕ್ರಿಯೆ ಉತ್ತಮಗೊಳಿಸಲು ಸುಲಭ ಮನೆಮದ್ದು

  ತಜ್ಞರ ಪ್ರಕಾರ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿನಲ್ಲಿ ಒಂದು ಅಥವಾ ಎರಡು ಚಿಕ್ಕ ಚಮಚ ತುಪ್ಪವನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆ ಸುಲಭವಾಗಿ ಜರುಗುತ್ತದೆ ಹಾಗೂ ಮಲಬದ್ದತೆಯಾಗದಂತೆ ತಡೆಯುತ್ತದೆ. ತುಪ್ಪದಲ್ಲಿರುವ ಬ್ಯೂಟೈರಿಕ್ ಆಮ್ಲ ಕರುಳುಗಳ ಒಳಭಾಗದ ಗೋಡೆಗಳ ಆರೋಗ್ಯವನ್ನು ವೃದ್ದಿಸುವ ಗುಣ ಹೊಂದಿದೆ. ಈ ಪುಸ್ತಕದಲ್ಲಿ ವಿವರಿಸಿರುವ ಪ್ರಕಾರ ತುಪ್ಪ ಜಠರಾಗ್ನಿಯನ್ನು ಉಜ್ವಲ ಗೊಳಿಸುತ್ತದೆ ಹಾಗೂ ಆಹಾರದಲ್ಲಿರುವ ಪೋಷಕಾಂಶ ಗಳನ್ನು ಪರಿಪೂರ್ಣವಾಗಿ ಹೀರಿಕೊಳ್ಳಲು ಮತ್ತು ದೇಹ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.


 • ಕಟ್ಟಿಕೊಂಡ ಮೂಗನ್ನು ತೆರೆಯಲು ಸುಲಭ ಮನೆಮದ್ದು

  ಶೀತದ ಕಾರಣದಿಂದಾಗಿ ಮೂಗು ಕಟ್ಟಿಕೊಂಡಿದ್ದರೆ ಉಸಿರಾಟ ಕಷ್ಟಕರವಾಗುತ್ತದೆ. ಪರಿಣಾಮವಾಗಿ ಸತತವಾದ ಸೀನು, ಉಸಿರಾಡಲು ತಡೆ ಒಡ್ಡುವುದು, ತಲೆ ಸಿಡಿತ ಮೊದಲಾದವು ಎದುರಾಗುತ್ತವೆ. ಅಷ್ಟೇ ಅಲ್ಲ, ಇದರಿಂದ ವಾಸನಾಗ್ರಹಣ ಶಕ್ತಿಯೂ ಸ್ಥಗಿತಗೊಳ್ಳುತ್ತದೆ. ಶೀತದಿಂದ ಎದುರಾಗುವ ತಲೆನೋವು ಶತ್ರುವಿಗೂ ಬೇಡ ಎನಿಸುತ್ತದೆ. ಮೂಗನ್ನು ತೆರೆಯಲು ಅತಿ ಸುಲಭವಾದ ವಿಧಾನವೆಂದರೆ ಕೆಲವು ತೊಟ್ಟು ಹದವಾಗಿ ಬಿಸಿಮಾಡಿ ಈಗಷ್ಟೇ ಕರಗಿದ ತುಪ್ಪದ ಕೆಲವು ಹನಿಗಳನ್ನು ಬೆಳಿಗ್ಗೆದ್ದ ತಕ್ಷಣವೇ ಮೂಗಿನ ಒಳಭಾಗಕ್ಕೆ ಬಿಟ್ಟುಕೊಳ್ಳಬೇಕು. ಈ ಮೂಲಕ ತಕ್ಷಣವೇ ಮೂಗು ತೆರೆಯುತ್ತದೆ ಹಾಗೂ ತೆರೆದ ಮೂಗಿನಿಂದ ಇಳಿದ ತುಪ್ಪ ಮೂಗಿನ ನಾಳದಿಂದ ಗಂಟಲಿಗೆ ಇಳಿದು ಸೋಂಕನ್ನು ನಿವಾರಿಸುತ್ತದೆ. ಆದರೆ ತುಪ್ಪವನ್ನು ಬಿಸಿಮಾಡುವಾಗ ಕೇವಲ ಕರಗುವಷ್ಟು ಮಾತ್ರವೇ ಕರಗಿಸಬೇಕು, ವಿನಃ ಬಿಸಿಯಾಗಬಾರದು. ಏಕೆಂದರೆ ಈ ಬಿಸಿ ಮೂಗಿನ ಒಳಭಾಗವನ್ನು ಸುಡಬಹುದು.


 • ಹೊಟ್ಟೆಯ ಕೊಬ್ಬನ್ನು ಕರಗಿಸಲು ಸುಲಭ ಮನೆಮದ್ದು

  ಕೊಬ್ಬಿನಲ್ಲಿ ಅವಶ್ಯಕ ಅಮೈನೋ ಆಮ್ಲಗಳು ಕೊಬ್ಬಿನ ಕಣಗಳ ಚಲನೆಯನ್ನು ಸ್ಥಗಿತಗೊಳಿಸಲು ನೆರವಾಗುತ್ತದೆ ಹಾಗೂ ಈ ಮೂಲಕ ಕೊಬ್ಬಿನ ಕಣಗಳು ಇನ್ನಷ್ಟು ಸಂಕುಚಿತಗೊಳಿಸುತ್ತದೆ. ತುಪ್ಪದಲ್ಲಿರುವ ಒಮೆಗಾ 3 ಮತ್ತು 6 ಕೊಬ್ಬಿನ ಆಮ್ಲಗಳು ಕೊಬ್ಬಿನ ಕಣಗಳನ್ನು ಬಳಸಿಕೊಳ್ಳುವ ಮೂಲಕ ಸೊಂಟದ ಸುತ್ತಳತೆ
  ಕಡಿಮೆಗೊಳಿಸಲು ನೆರವಾಗುತ್ತವೆ. ಇದಕ್ಕಾಗಿ ಒಂದು ಚಿಕ್ಕ ಚಮಚದಷ್ಟು ತುಪ್ಪವನ್ನು ನಿಮ್ಮ ನಿತ್ಯದ ಆಹಾರದಲ್ಲಿ ಬೆರೆಸಿಕೊಂಡರೆ ಸಾಕು. ಈ ಮೂಲಕ ತೂಕ ಇಳಿಕೆಯ ಜೊತೆಗೇ ಪೋಷಕಾಂಶಗಳು ಗರಿಷ್ಟವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.


 • ಮಧುಮೇಹ ನಿಯಂತ್ರಿಸಲು ಸುಲಭ ಮನೆಮದ್ದು

  ಒಂದು ವೇಳೆ ನೀವು ಮಧುಮೇಹಿಯಾಗಿದ್ದರೆ ನಿಮಗೆ ಅಕ್ಕಿ ಮತ್ತು ಗೋಧಿಯ ರೊಟ್ಟಿಗಳು ಅಷ್ಟೊಂದು ಆರೋಗ್ಯಕಾರಿಯಾಗಲಾರವು. ಏಕೆಂದರೆ ಇವೆರಡೂ ಆಹಾರಗಳು ಅಧಿಕ ಗ್ಲೈಸೆಮಿಕ್ ಕೋಷ್ಟಕ ಹೊಂದಿರುವ ಆಹಾರಗಳಾಗಿವೆ. ಹಾಗಾಗಿ ಈ ರೊಟ್ಟಿಗಳ ಮೇಲೆ ಕೊಂಚ ತುಪ್ಪವನ್ನು ಸವರಿಕೊಳ್ಳುವ ಮೂಲಕ ಇವುಗಳ ಗ್ಲೈಸೆಮಿಕ್ ಕೋಷ್ಟಕ ಇಳಿಯುತ್ತದೆ. ತನ್ಮೂಲಕ ಇವುಗಳು ಹೆಚ್ಚು ಮೃದು ಮತ್ತು ಸುಲಭವಾಗಿ ಜೀರ್ಣಗೊಳ್ಳುವ ಆಹಾರಗಳಾಗಿ ಪರಿಣಮಿಸುತ್ತವೆ.

  Most Read: ಪಕ್ಕಾ ದೇಸಿ ತುಪ್ಪ, ಆರೋಗ್ಯದ ಲವಲವಿಕೆಯ ಕೀಲಿಕೈ


 • ತ್ವಚೆಯ ಆರೋಗ್ಯವನ್ನು ವೃದ್ದಿಸಲು: ಸುಲಭ ಮನೆಮದ್ದು

  ಹಲವಾರು ಸೌಂದರ್ಯವರ್ಧಕ ವಿಧಾನಗಳಲ್ಲಿ ತುಪ್ಪ ಒಂದು ಅವಿಭಾಜ್ಯ ಅಂಗವಾಗಿದೆ. ಇದರಲ್ಲಿರುವ ಪ್ರಮುಖ ಕೊಬ್ಬಿನಾಮ್ಲಗಳು ತ್ವಚೆಗೆ ಪೋಷಣೆ ನೀಡುವ ಪೋಷಕಾಂಶ ಗಳಾಗಿವೆ ಹಾಗೂ ಇವು ಕಳೆಗುಂದಿದ ತ್ವಚೆಗೆ ಅದ್ಭುತವಾದ ಪೋಷಣೆಯನ್ನು ನೀಡುತ್ತದೆ. ಅಲ್ಲದೇ ತುಪ್ಪ ಎಲ್ಲಾ ಬಗೆಯ ತ್ವಚೆಗಳಿಗೂ ಸೂಕ್ತವಾಗಿದೆ. ಈ ಗುಣವನ್ನು ಬಳಸಿ ತ್ವಚೆಯನ್ನು ಸೌಮ್ಯ ಮತ್ತು ಮೃದುವಾಗಿಸಲು ತುಪ್ಪವನ್ನು ಬಳಸಿಕೊಳ್ಳುವ ಸುಲಭ ಮನೆಮದ್ದನ್ನು ಹೇಗೆ ತಯಾರಿಸಿ ಕೊಳ್ಳಬಹುದು ಎಂಬುದನ್ನು ನೋಡೋಣ...


 • ಸಾಮಾಗ್ರಿಗಳು

  *ಎರಡು ದೊಡ್ಡ ಚಮಚ ತುಪ್ಪ
  *ಎರಡು ದೊಡ್ಡ ಚಮಚ ಕಡ್ಲೆಹಿಟ್ಟು
  *ಒಂದು ಚಿಕ್ಕ ಚಮಚ ಅರಿಶಿನ
  *ಕೊಂಚ ನೀರು


 • ವಿಧಾನ

  ಈ ಎಲ್ಲಾ ಸಾಮಾಗ್ರಿಗಳನ್ನು ಕೊಂಚ ನೀರಿನೊಂದಿಗೆ ಚೆನ್ನಾಗಿ ಬೆರೆಸಿ. ಈ ಮಿಶ್ರಣ ದಪ್ಪನಾಗಿ ಹಚ್ಚಿಕೊಳ್ಳುವಂತಿರಬೇಕು. ತೀರಾ ಒಣಗಿಯೂ ಇರಬಾರದು ಮತ್ತು ನೀರು ನೀರಾಗಿಯೂ ಇರಬಾರದು. ಈ ಲೇಪವನ್ನು ಈಗತಾನೇ ತೊಳೆದು ಒತ್ತಿ ಒರೆಸಿಕೊಂಡ ಮುಖಕ್ಕೆ ದಪ್ಪನಾಗಿ ಹಚ್ಚಿ ಇಪ್ಪತ್ತು ನಿಮಿಷಗಳ ಕಾಲ ಹಾಗೇ ಬಿಡಬೇಕು. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ನಿರ್ವಹಿಸುತ್ತಾ ಅಪೇಕ್ಷಿತ ಪರಿಣಾಮ ದೊರಕುವವರೆಗೂ
  ಮುಂದುವರೆಸಿ.

  Most Read: ನೀವೂ ನಂಬಲೇಬೇಕು, ತುಪ್ಪ ತ್ವಚೆಗೆ ಬಹಳ ಒಳ್ಳೆಯದು!


 • ಕೂದಲ ಆರೋಗ್ಯ ವೃದ್ಧಿಸಲು ಸುಲಭ ಮನೆಮದ್ದು

  ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿನಾಮ್ಲಗಳು ಮತ್ತು ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇವು ಕೂದಲಿಗೆ ಅತ್ಯುತ್ತಮವಾದ ಕಂಡೀಶನರ್ ನಂತೆ ಕಾರ್ಯನಿರ್ವಹಿಸುತ್ತವೆ. ವಿಶೇಷವಾಗಿ ಒಣ ಮತ್ತು ಸಿಕ್ಕುಸಿಕ್ಕಾದ ಕೂದಲಿಗೆ ತುಪ್ಪ ಅತ್ಯುತ್ತಮ ಪರಿಹಾರವಾಗಿದೆ. ಇದಕ್ಕಾಗಿ ಎರಡು ದೊಡ್ಡಚಮದ ತುಪ್ಪವನ್ನು
  ಒಂದು ಚಿಕ್ಕ ಚಮಚ ಆಲಿವ್ ಎಣ್ಣೆಯೊಂದಿಗೆ ಮಿಶ್ರನ ಮಾಡಿ ಕೂದಲ ಉದಕ್ಕೂ ಹಚ್ಚಿಕೊಳ್ಳಿ. ಇಪ್ಪತ್ತು ನಿಮಿಷ ಹಾಗೇ ಬಿಟ್ಟು ಬಳಿಕ ನೀರಿನಿಂದ ತೊಳೆದುಕೊಳ್ಳಿ. ಈ ಮೂಲಕ ಕೂದಲಿಗೆ ಅತ್ಯುತ್ತಮ ಪೋಷಣೆ ದೊರೆತು ಮೃದುವಾಗುತ್ತವೆ ಹಾಗೂ ಸಿಕ್ಕುಗಳನ್ನು ಸುಲಭವಾಗಿ ಬಿಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ವೇಳೆ ತಲೆಯಲ್ಲಿ ತಲೆಹೊಟ್ಟು ಇದ್ದರೆ ತುಪ್ಪ ಮತ್ತು ಲಿಂಬೆರಸಗಳನ್ನು ಬೆರೆಸಿ ನಯವಾದ ಮಸಾಜ್ ನೊಂದಿಗೆ ಹಚ್ಚಿಕೊಳ್ಳಬೇಕು.


 • ಒಣಗಿ ಒಡೆದಿರುವ ತುಟಿಗಳಿಗೆ ಸುಲಭ ಮನೆಮದ್ದು

  ನಮ್ಮ ದೇಹದ ಅತಿ ನಿರ್ಲಕ್ಷಿತ ಅಂಗಗಳಲ್ಲಿ ಒಂದಾದ ತುಟಿಗಳು ಅತಿ ತೆಳುವಾದ ಮತ್ತು ವಿಸ್ತಾರವಾದ ಹೊರಚರ್ಮವನ್ನು ಹೊಂದಿದೆ. ಬಾಯಿಯನ್ನು ತೆರೆಯುವಾಗ ಹೆಚ್ಚು ಅಗಲಿಸ ಬೇಕಾದುದರಿಂದ ಈ ವಿಸ್ತಾರ ಅಗತ್ಯವಾಗಿದ್ದು ಸಮಾನ್ಯ ಸ್ಥಿತಿಯಲ್ಲಿ ಈ ಚರ್ಮ ಅತಿಹೆಚ್ಚು ನೆರಿಗೆಗಳನ್ನು ಪಡೆದಿರುತ್ತದೆ. ಹಾಗಾಗಿ ಈ ತೆಳುಚರ್ಮ ಉಳಿದ ಚರ್ಮದ ಭಾಗಕ್ಕಿಂತ ಸುಲಭವಾಗಿ ಪ್ರದೂಷಣೆ, ಬಿಸಿಲು, ಧೂಳು ಮತ್ತು ಹೊಗೆಯ ಧಾಳಿಗೆ ತುತ್ತಾಗುತ್ತದೆ. ಪರಿಣಾಮವಾಗಿ ಹೊರಚರ್ಮ ಒಣಗಿ ಪಕಳೆಯೇಳಲು ತೊಡಗುತ್ತದೆ. ಹೀಗಾದಾಗ ರಾತ್ರಿ ಮಲಗುವ ಮುನ್ನ ಕೊಂಚ ಉಗುರುಬೆಚ್ಚನೆಯ ತುಪ್ಪವನ್ನು ತುಟಿಗಳಿಗೆ ಹಚ್ಚಿಕೊಂಡು ಮಲಗಬೇಕು. ಬೆಳಗ್ಗೆದ್ದಾಗ ಈ ಪಕಳೆಗಳು ಒಣಗಿ ಅಂಟಿಕೊಂಡಿರುತ್ತವೆ. ಈ ಪಕಳೆಗಳನ್ನು ಅಲ್ಪ ಒತ್ತಡದೊಂದಿಗೆ ಕೊಂಚ ಬಿಸಿನೀರಿನಿಂದ ಕೆರೆದು ತೆಗೆಯಬೇಕು. ಅಡಿಯಲ್ಲಿ ಹೊಸ ಚರ್ಮ ಬೆಳೆದು ಚರ್ಮ ಹರಿಯುವುದನ್ನು ತಪ್ಪಿಸಿರುತ್ತದೆ. ಆದರೆ ಹೊಸಚರ್ಮ ಪರಿಪೂರ್ಣವಾಗಿ ಬೆಳೆಯುವವರೆಗೂ ಈ ವಿಧಾನವನ್ನು ನಿತ್ಯವೂ ಮುಂದುವರೆಸಬೇಕು. ಈ ಮೂಲಕ ಹಿಂದೆಂದೂ ಇಲ್ಲದಂತಹ ಸುಂದರ ಮತ್ತು ಆರೋಗ್ಯಕರ ತುಟಿಗಳನ್ನು ಪಡೆಯಬಹುದು.


 • ನೆನಪಿಡಿ ಅತಿಯಾದರೆ ಅಮೃತವೂ ವಿಷ

  ತುಪ್ಪದ ಗುಣಗಳು ಮತ್ತು ಇವುಗಳನ್ನು ಒಟ್ಟಾರೆ ಆರೋಗ್ಯ ಮತ್ತು ಸೌಂದರ್ಯವೃದ್ಧಿಗಾಗಿ ಹೇಗೆ ಬಳಸಿಕೊಳ್ಳಬಹುದು ಎಂದು ಈಗ ಅರಿತಿದ್ದೇವೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಗಾದೆಮಾತಿನಂತೆ ತುಪ್ಪವೂ ನಮಗೆ ಅತಿಯಾದರೆ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಏಕೆಂದರೆ ಇದರಲ್ಲಿರುವ ಕೊಬ್ಬುಗಳು ಸಂತೃಪ್ತ ಕೊಬ್ಬುಗಳಾಗಿದ್ದು ಹೆಚ್ಚಿನ ಪ್ರಮಾಣದ ಸೇವನೆ ಇದರ ಎಲ್ಲಾ ಒಳ್ಳೆಯ ಗುಣಗಳನ್ನು ವಿರುದ್ದ ದಿಕ್ಕಿನತ್ತ ತಿರುಗಿಸಬಹುದು. ಹಾಗಾಗಿ ತುಪ್ಪದ ಸೇವನೆಯ ಪ್ರಮಾಣ ಕನಿಷ್ಟವಾಗಿರಬೇಕು. ಒಂದು ವೇಳೆ ನಿಮ್ಮಲ್ಲಿ ಭಿನ್ನವಾದ ತುಪ್ಪವನ್ನು ಬಳಸಿದ ಮನೆಮದ್ದುಗಳಿದ್ದರೆ ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ತಿಳಿಸಿ, ಇದರ ಪ್ರಯೋಜನವನ್ನು ಹೆಚ್ಚು ಜನರು ಪಡೆಯಲು ಸಹಕರಿಸಿ.
ಭಾರತದ ಆಹಾರಗಳಲ್ಲಿ 'ಶ್ರೀಮಂತ' ಎಂದು ಪರಿಗಣಿಸಲ್ಪಡುವ ತುಪ್ಪ ಅಥವಾ ಬೆಣ್ಣೆ ಕಾಯಿಸಿದ ಬಳಿಕ ಲಭ್ಯವಾದ ಕೊಬ್ಬು ಕೇವಲ ರುಚಿಕಾರಕ ಮಾತ್ರವಲ್ಲ ಔಷಧೀಯ ಮತ್ತು ಸೌಂದರ್ಯವರ್ಧಕ ಗುಣಗಳನ್ನು ಹೊಂದಿರುವ ಅಧ್ಬುತ ಸಾಮಾಗ್ರಿಯೂ ಆಗಿದೆ. ಹಾಲಿನಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲಗಳು, ವಿಟಮಿನ್ಎ , ಬ್ಯೂಟೈರಿಕ್ ಆಮ್ಲ ಮತ್ತು ಆರೋಗ್ಯಕರ ಕೊಬ್ಬು ಎಲ್ಲವೂ ಹಾಲಿನಿಂದ ತಯಾರಿಸಿದ ಮೊಸರಿನಲ್ಲೂ, ಮೊಸರಿನಿಂದ ತಯಾರಿಸಿದ ಬೆಣ್ಣೆಯಲ್ಲಿಯೂ ಉಳಿದುಕೊಳ್ಳುವ ಮೂಲಕ ಹಾಲಿನ ಒಟ್ಟಾರೆ ಗುಣಗಳೆಲ್ಲವೂ ತುಪ್ಪದಲ್ಲಿಯೂ ಲಭ್ಯವಾಗುತ್ತವೆ ಹಾಗೂ ಇವು ಒಟ್ಟಾರೆ ಆರೋಗ್ಯಕ್ಕೆ ಪೂರಕವೂ ಆಗಿವೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು ಹಾಗೂ ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವ ವಿಟಮಿನ್ನುಗಳನ್ನು ಒದಗಿಸುವುದು, ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುವುದು ಮೊದಲಾದ ಪ್ರಯೋಜನಗಳನ್ನು ನೀಡುತ್ತದೆ. ತ್ವಚೆ, ಕೂದಲ ತೊಂದರೆ, ಜೀರ್ಣಕ್ರಿಯೆಯ ತೊಂದರೆ ಮೊದಲಾದವುಗಳನ್ನು ಸರಿಪಡಿಸುವ ಹಲವಾರು ಮನೆಮದ್ದುಗಳಲ್ಲಿ ತುಪ್ಪವನ್ನು ಪ್ರಮುಖ ಸಾಮಾಗ್ರಿಯನ್ನಾಗಿ ಬಳಸಲಾಗುತ್ತದೆ. ಇವುಗಳಲ್ಲಿ ಪ್ರಮುಖವಾದವುಗಳನ್ನು ಇಂದಿನ ಲೇಖನದಲ್ಲಿ ನೀಡಲಾಗಿದ್ದು ತುಪ್ಪದ ಉಪಯುಕ್ತತೆಯ ಗರಿಷ್ಟ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಬಹುದು.

 
ಹೆಲ್ತ್