Back
Home » ಆರೋಗ್ಯ
ನೀವು ತಿಳಿಯಲೇ ಬೇಕಾದ ಆನ್​ಲೈನ್​ ಗೇಮ್​ 'ಪಬ್​ಜಿ' ಆಟದ ಋಣಾತ್ಮಕ ಪರಿಣಾಮಗಳು
Boldsky | 20th Mar, 2019 05:06 PM
 • ಖತರ್ನಾಕ್ ಪಬ್‍ಜಿ ಗೇಮ್

  ಇತ್ತೀಚೆಗೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆಕರ್ಷಿಸುತ್ತಿರುವ ಉಪಕರಣ ಎಂದರೆ ಮೊಬೈಲ್. ಕಾರಣ ಪ್ರಪಂಚದ ಎಲ್ಲಾ ಮಾಹಿತಿಯನ್ನು ಅಂಗೈ ಅಗಲದಷ್ಟು ಗಾತ್ರದ ಒಂದು ಉಪಕರಣ ತೋರಿಸಿಕೊಡುತ್ತದೆ. ಜೊತೆಗೆ ಎಷ್ಟೋ ರೀತಿಯ ಮನರಂಜನೆ ಯನ್ನು ಪಡೆದುಕೊಳ್ಳಬಹುದು. ಅದರಲ್ಲೂ ಸಮಯವನ್ನು ಕಳೆಯಲು ಸಹಾಯ ಮಾಡುವ ಅನೇಕ ಗೇಮ್‍ಗಳು ಆಕರ್ಷಿ ಸುತ್ತವೆ. ಅಂತಹ ಗೇಮ್‍ಗಳಲ್ಲಿ ಒಂದಾಗಿರುವುದು ಪಬ್‍ಜಿ. ಇಂದು ಪಬ್‍ಜಿ ಎನ್ನುವ ಗೇಮ್ ಅನ್ನು ಆಡಲು ಸಾಕಷ್ಟು ಮಕ್ಕಳು, ಯುವಕರು ಹಾಗೂ ವಯಸ್ಕರು ಸಹ ಆಡಲು ಬಯಸುತ್ತಾರೆ. ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಈ ಆಟವನ್ನು ಆಡಲು ಸಮಯವನ್ನು ಹೊಂದಿಸಿಕೊಳ್ಳುತ್ತಾರೆ.


 • ಖತರ್ನಾಕ್ ಪಬ್‍ಜಿ ಗೇಮ್

  ಪಬ್‍ಜಿ ಎನ್ನುವುದು ಅಜ್ಞಾತ ಯುದ್ಧಭೂಮಿ ಹೋರಾಡುವ ಹೋರಾಟ ಗಾರ ಎನ್ನುವ ಅರ್ಥವನ್ನು ನೀಡುತ್ತದೆ. ಇಂದು ಸಾಕಷ್ಟು ಯುವಕರನ್ನು ಹಾಗೂ ಮಕ್ಕಳನ್ನು ಆಕರ್ಷಿಸಿರುವ ಆಟ ಎನಿಸಿಕೊಂಡಿದೆ. ಇದನ್ನು ಆಡುವುದು ಹಾಗೂ ಆಡುವುದನ್ನು ನೋಡುವುದು ಸಹ ಒಂದು ಹೆಮ್ಮೆಯ ಸಂಗತಿ ಎಂದು ಕೊಂಡಿದ್ದಾರೆ. ಅಲ್ಲದೆ ಈ ಆಟವನ್ನು ಆಡುವುದರ ಮೂಲಕ ಹೆಚ್ಚಿನ ಸಂತೋಷ ಹಾಗೂ ಆನಂದವನ್ನು ಅನುಭವಿಸುತ್ತಾರೆ ಎಂದು ಹೇಳಲಾಗುವುದು. ಖುಷಿಯನ್ನು ನೀಡುವ ಈ ಆಟವು ಇಂದು ಬಹುತೇಕ ಮಂದಿಯನ್ನು ವ್ಯಸನಿಗಳನ್ನಾಗಿ ಪರಿವರ್ತಿ ಸುತ್ತಿದೆ. ಈ ಆಟವನ್ನು ಆಡುವುದರಿಂದ ಯುವಕರಿಗೆ ಹಾಗೂ ಮಕ್ಕಳಿಗೆ ಮೆದುಳಿನ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತವೆ. ನೀವು ಪಬ್‍ಜಿ ಆಟದ ಅಭಿಮಾನಿಗಳು, ಆ ಆಟದಿಂದ ನೀವು ಆಕರ್ಷಿತರಾಗಿದ್ದೀರಿ, ಅದನ್ನು ಆಡುವುದು ಎಂದರೆ ಎಲ್ಲಿಲ್ಲದ ಸಂತೋಷವಾಗುತ್ತದೆ ಎನ್ನುವ ಭಾವನೆಯಲ್ಲಿದ್ದರೆ ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ. ಏಕೆಂದರೆ ಈ ರೀತಿಯ ಆಟದಿಂದ ನಮಗೆ ಅರಿವಿಲ್ಲದೆ ಯಾವ ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತೇವೆ? ನಮ್ಮ ಆರೋಗ್ಯದ ಸ್ಥಿತಿ ಏನಾಗುವುದು? ಯಾವೆಲ್ಲಾ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ ಎನ್ನುವುದನ್ನು ತಿಳಿಯಬಹುದು.

  Most Read: ಪಬ್‪‌ ಜಿ ಗೇಮ್‌ನ ಭಾರತೀಯ ವರ್ಷನ್! ಸಖತ್ ಇಂಟರೆಸ್ಟಿಂಗ್ ಆಗಿದೆ...


 • ಹಿಂಸಾತ್ಮಕ ನಡವಳಿಕೆಯನ್ನು ಪ್ರೇರೇಪಿಸುತ್ತದೆ ಅಥವಾ ಬೆಳೆಸುತ್ತದೆ

  ಪಬ್‍ಜಿಯಲ್ಲಿ ಎದುರಾಳಿಗಳಿಗೆ ಶೂಟ್ ಮಾಡುವುದರ ಮೂಲಕ ಆಟವನ್ನು ಆಡಲು ಪ್ರಾರಂಭಿಸಲಾಗುತ್ತದೆ. ಹಾಗೆ ದಾಳಿಯಲ್ಲಿ ಎಷ್ಟರ ಮಟ್ಟಿಗೆ ಗೆಲುವನ್ನು ಸಾಧಿಸುತ್ತಾರೆ ಎನ್ನುವುದು ನಮಗೆ ಸವಾಲಾಗಿರುತ್ತದೆ. ಹಾಗಾಗಿ ಈ ಆಟವನ್ನು ಆಡುವವರು ಸಾಮಾನ್ಯವಾಗಿ ಹೆಚ್ಚಿನ ಸ್ಕೋರ್ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಇದು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಈ ಭಾವನೆಗಳು ನಿಧಾನವಾಗಿ ನಿತ್ಯದ ಬದುಕಿನ ಮೇಲೆ ಪ್ರಭಾವ ಬೀರುವುದು. ಜೊತೆಗೆ ಆಕ್ರಮಣಶೀಲ ಪ್ರವೃತ್ತಿಯನ್ನು ಪ್ರಚೋದಿಸುವುದು. ಇದರ ಪ್ರಭಾವವು ಕುಟುಂಬ ಸದಸ್ಯರ ನಡುವೆ ಹಾಗೂ ಸಮಾಜದಲ್ಲಿಯೂ ಆಕ್ರಮಣ ಶೀಲ ಪ್ರವೃತ್ತಿಯಿಂದಲೇ ಎಲ್ಲವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಹೇಳಲಾಗುವುದು.


 • ಇದು ಒತ್ತಡ ಮತ್ತು ಆತಂಕದ ಭಾವನೆಯನ್ನು ಉತ್ತೇಜಿಸುತ್ತದೆ

  ಈ ಆಟವನ್ನು ದೀರ್ಘ ಸಮಯಗಳ ಕಾಲ ಆಡಬೇಕಾಗುತ್ತದೆ. ಇದನ್ನು ಮುಂದುವರಿಸಿಕೊಂಡು ಹೋದಂತೆ ಸಮಾಜಿಕವಾಗಿ ಹಾಗೂ ಇನ್ನಿತರ ಕೆಲಸ ಕಾರ್ಯಗಳಲ್ಲಿ ನಿಷ್ಕ್ರಿಯಗೊಳ್ಳುವಂತೆ ಮಾಡುವುದು. ನಿಧಾನವಾಗಿ ಆತಂಕ ಹಾಗೂ ಒತ್ತಡದ ಭಾವನೆಯು ಕಾಡಲು ಪ್ರಾರಂಭಿಸುತ್ತದೆ. ಜೊತೆಗೆ ಮತ್ತೆ
  ಮತ್ತೆ ಆ ಆಟವನ್ನು ಆಡುವಂತೆ ಮನಸ್ಸು ಪ್ರೇರೇಪಿಸುವುದು. ಇದು ವ್ಯಕ್ತಿಯ ನಿತ್ಯದ ಕೆಲಸ ಅಥವಾ ಚಟುವಟಿಕೆಯ ಮೇಲೂ ಪ್ರಭಾವ ಬೀರುವುದು.


 • ನಿದ್ರಾ ಮಾದರಿಯನ್ನು ತಪ್ಪಿಸುವುದು

  ಈ ಆಟದ ಗುಂಗಲ್ಲಿ ಇರುವವನು ಅಥವಾ ದಾಸನಾದವನು ಆಳವಾದ ನಿದ್ರೆಯನ್ನು ತ್ಯಾಗ ಮಾಡುತ್ತಾನೆ. ಆಟಗಾರನ ನಿದ್ರಾವಸ್ಥೆಯನ್ನು ಅಸ್ವಸ್ಥಗೊಳಿಸುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯವು ಉತ್ತಮ ನಿದ್ರೆಯನ್ನು ಅವಲಂಬಿಸಿರುತ್ತದೆ. ಅನುಚಿತವಾದ ನಿದ್ರಾ ವಸ್ಥೆಯು ಅನಾರೋಗ್ಯಗಳನ್ನು ಸೃಷ್ಟಿಸುತ್ತದೆ. ದಣಿವು, ತಲೆ ಸುತ್ತ, ರಕ್ತದೊತ್ತಡ, ಮಾನಸಿಕ ಕಿರಿಕಿರಿ, ವಧುಮೇಹ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಸುಲಭವಾಗಿ ಆವರಿಸಿಕೊಳ್ಳುತ್ತವೆ.


 • ಇದು ದೈಹಿಕ ಆರೋಗ್ಯವನ್ನು ಹಾಳುಮಾಡುತ್ತದೆ

  ಪಬ್‍ಜಿ ಎನ್ನುವ ಆಟ ವ್ಯಕ್ತಿಯ ಮಾನಸಿಕ ಆರೋಗ್ಯವನ್ನಷ್ಟೇ ಅಲ್ಲ ದೈಹಿಕ ಆರೋಗ್ಯದ ಮೇಲೂ ಸಾಕಷ್ಟು ಪ್ರಭಾವವನ್ನು ಬೀರುತ್ತದೆ. ಆಟಗಾರ ಸಾಕಷ್ಟು ಗಂಟೆಗಳ ಕಾಲ ಒಂದೆಡೆಯಲ್ಲಿಯೇ ಕುಳಿತು ಆಡುವುದರಿಂದ ದೈಹಿಕವಾಗಿ ಸಾಕಷ್ಟು ತೊಂದರೆಗೆ ಒಳಗಾಗುತ್ತಾರೆ. ಬೊಜ್ಜು, ಸೋಮಾರಿತನ, ಚಟುವಟಿಕಾ ರಹಿತರಾಗಿ ಇರುವುದು, ನಿತ್ಯದ ಕೆಲಸಕ್ಕೂ ಇತರರನ್ನು ಅವಲಂಬಿಸುತ್ತಾರೆ. ಕೆಲಸಕ್ಕೆ ಬಾರದ ವ್ಯಕ್ತಿಗಳಾಗಿ ಹಾಗೂ ಶಕ್ತಿಹೀನರಾಗಿ ಉಳಿದುಕೊಳ್ಳುವರು.


 • ದೃಷ್ಟಿ ದೋಷ

  ಹಲವಾರು ಗಂಟೆಗಳ ಕಾಲ ಗೇಮ್ ಆಡುವುದು ಅಥವಾ ದೀರ್ಘ ಸಮಯಗಳ ಕಾಲ ಮೊಬೈಲ್ ಬೆಳಕನ್ನು ನೋಡುತ್ತಾ ಕುಳಿತುಕೊಳ್ಳುವುದರಿಂದ ಕಣ್ಣು ಮತ್ತು ಮೆದುಳಿನ ಮೇಲೆ ಗಂಭೀರವಾದ ಪ್ರಭಾವ ಬೀರುತ್ತದೆ. ನಿಧಾನವಾಗಿ ತಲೆ ನೋವು, ಕಣ್ಣುಗಳಲ್ಲಿ ಉರಿ, ಹೆಚ್ಚು ಬೆಳಕನ್ನು ನೋಡಲು ಕಷ್ಟ ವಾಗುವುದು. ಬಹು ಬೇಗ ದೃಷ್ಟಿ ದೋಷಕ್ಕೆ ಒಳಗಾಗುವರು. ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ದೋಷ ಅನುಭವಿಸಿದರೆ ದಿನಕಳೆದಂತೆ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುವುದು.


 • ಅಧ್ಯಯನ ಹಾಗೂ ಸಂಶೋಧನೆಯ ಪ್ರಕಾರ

  ಇತ್ತೀಚೆಗೆ ನಡೆಸಿದ ಕೆಲವು ಅಧ್ಯಯನ ಹಾಗೂ ಸಂಶೋಧನೆಯ ಪ್ರಕಾರ ಆನ್ ಲೈನ್ ಆಟಗಳು ವ್ಯಕ್ತಿಯನ್ನು ವ್ಯಸನಕಾರನನ್ನಾಗಿ ತಿರುಗಿಸುತ್ತವೆ. ಇಂತಹ ವ್ಯಸನಗಳಿಂದ ದೂರ ಉಳಿಯಬೇಕು, ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎನ್ನುವ ಮನಸ್ಸು ನಿಮ್ಮದಾಗಿದ್ದರೆ ಆದಷ್ಟು ಉತ್ತಮ ದೈಹಿಕ ಚಟುವಟಿಕೆಯನ್ನು ನಡೆಸಿ. ಅಧಿಕ ಕ್ರಿಯಾಶೀಲತೆಯನ್ನು ತೋರಿಸುವುದರ ಮೂಲಕ ಸಂತೋಷದ ಜೀವನವನ್ನು ಪಡೆದುಕೊಳ್ಳಿ. ಆಟ ಹಾಗೂ ಉತ್ತಮ ಹವ್ಯಾಸಗಳು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಡುತ್ತವೆ. ಕೆಲಸದ ಒತ್ತಡ ಅಥವಾ ಇನ್ಯಾವುದೋ ಒತ್ತಡದ ಸಂಗತಿಗಳ ನಡುವೆ ಕೊಂಚ ಸಮಯ ವಿರಾಮವನ್ನು ಪಡೆದುಕೊಳ್ಳುವುದು ಇಲ್ಲವೇ ಮೊಬೈಲ್ ಗೇಮ್‍ಗಳಿಂದ ಮಾನಸಿಕವಾಗಿ ಸಂತೋಷ ಹಾಗೂ ಮನರಂಜನೆಯನ್ನು ಪಡೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ಆ ಮನರಂಜನೆ ಅಥವಾ ಹವ್ಯಾಸವೇ ಸಮಸ್ಯೆಗಳನ್ನು ಸೃಷ್ಟಿಸುವಂತಾಗಬಾರದು. ಜೊತೆಗೆ ನೋಡುವ ಸಂಗತಿ ಹಾಗೂ ಆಯ್ದುಕೊಳ್ಳುವ ವಿಷಯವು ಮನಸ್ಸಿಗೆ ಧನಾತ್ಮಕ ಪರಿಣಾಮ ಬೀರುವಂತಿರಬೇಕು ಎನ್ನುವುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.
ಕೆಲವೊಂದು ಹವ್ಯಾಸ ಹಾಗೂ ಅಭ್ಯಾಸಗಳು ಬಹು ಬೇಗ ಜನರನ್ನು ಆಕರ್ಷಿಸುತ್ತವೆ. ಅವುಗಳ ಮೇಲೆ ಆಸೆ ಹಾಗೂ ಮೋಹ ಹೆಚ್ಚಾಗುತ್ತಾ ಹೋದಂತೆ ಅದೊಂದು ಚಟವಾಗಿ ಪರಿವರ್ತನೆ ಆಗುವುದು. ನಂತರ ಅವುಗಳನ್ನು ಒಮ್ಮೆ ಬಿಟ್ಟರೂ ಸಹಿಸಿಕೊಳ್ಳಲಾಗದಂತಹ ಬೇಸರ ಉಂಟಾಗುವುದು. ಜೊತೆಗೆ ಅದನ್ನು ಪದೇ ಪದೇ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಚಟವಾಗಿ ಪರಿವರ್ತನೆ ಆದ ಬಳಿಕ ವ್ಯಕ್ತಿಯ ಮೆದುಳು ಆ ವಸ್ತುವನ್ನು ಪದೇ ಪದೇ ಹಂಬಲಿಸುತ್ತಲೇ ಇರುತ್ತದೆ. ನಿಧಾನವಾಗಿ ವ್ಯಕ್ತಿಯು ಚಟದ ದಾಸನಾಗಿ, ಅದಿಲ್ಲದೆಯೇ ಬದುಕಿಲ್ಲ ಎನ್ನುವ ರೀತಿಯಲ್ಲಿ ಮಾನಸಿಕ ಬದಲಾವಣೆಯನ್ನು ಕಂಡುಕೊಳ್ಳುತ್ತಾರೆ.

ಮನೋ ಶಾಸ್ತ್ರ ಹೇಳುವ ಪ್ರಕಾರ ಚಟ ಎನ್ನುವುದು ವ್ಯಕ್ತಿಯ ಮಾನಸಿಕ ಸ್ಥಿತಿಯ ಮೇಲೆ ಹೋಗುತ್ತದೆ. ಅವನು ಯಾವುದನ್ನು ಇಷ್ಟಪಡುತ್ತಾನೆ? ಅದನ್ನು ಎಷ್ಟರ ಮಟ್ಟಿಗೆ ತನಗೆ ಹತ್ತಿರದ ವಸ್ತುವನ್ನಾಗಿ ಮಾಡಿಸಿಕೊಳ್ಳುತ್ತಾನೆ ಎನ್ನುವುದರ ಮೇಲೆ ಹವ್ಯಾಸಗಳು ಹಾಗೂ ವ್ಯಸನವು ಅಂಟಿಕೊಳ್ಳುತ್ತದೆ ಎನ್ನಲಾಗುವುದು. ವ್ಯಸನ ಎನ್ನುವುದು ಕೇವಲ ಮದ್ಯ ಪಾನ, ಧೂಮ ಪಾನ, ಪಾನ್ ಮತ್ತು ಮಾದಕ ವಸ್ತುಗಳ ಸೇವನೆಗೆ ಮಾತ್ರ ಸೀಮಿತವಾಗಿದ್ದಲ್ಲ. ಅದು ಇನ್ನಿತರ ಆಹಾರ ವಸ್ತುಗಳ ಸೇವನೆ ಆಗಿರಬಹುದು ಇಲ್ಲವೇ ಆಟದ ಸಂಗತಿಯೂ ಆಗಿರಬಹುದು. ಪದೇ ಪದೇ ಚಹಾ, ಕಾಫಿ ಕುಡಿಯುವುದು, ಪದೇ ಪದೇ ತಿಂಡಿ, ಊಟವನ್ನು ಸೇವಿಸುವುದು, ಶಾಪಿಂಗ್ ಮಾಡುವುದು, ಕೆಲವು ಮೊಬೈಲ್ ಗೇಮ್‍ಗಳನ್ನು ಆಡುವುದು. ಹೀಗೆ ಯಾವುದು ಒಂದು ಮಿತಿಯಲ್ಲಿ ಇರುವುದಿಲ್ಲವೋ ಅಥವಾ ಮಿತಿಯನ್ನು ಮೀರಿರುತ್ತದೆಯೋ ಅದನ್ನು ಚಟ ಎಂದು ಪರಿಗಣಿಸಲಾಗುವುದು.

   
 
ಹೆಲ್ತ್