Back
Home » ಸೌಂದರ್ಯ
ಮೇಕಪ್ ಇಲ್ಲದೆಯೇ ಸೌಂದರ್ಯವತಿಯಾಗಿ ಕಾಣಿಸಿಕೊಳ್ಳಲು ಸರಳ ಸಲಹೆಗಳು
Boldsky | 9th Jul, 2019 05:06 PM

ಸಹಜಸೌಂದರ್ಯಕ್ಕೂ ಮೇಕಪ್ ಮೂಲಕ ಪ್ರಜ್ವಲಿಸುವ ಸೌಂದರ್ಯಕ್ಕೂ ಆಗಾಧವಾದ ವ್ಯತ್ಸಾಸವಿದೆ. ನೈಸರ್ಗಿಕ ಸೌಂದರ್ಯವೇ ನಿಜವಾದ ಸೌಂದರ್ಯವೆಂದು ನಮಗೆಲ್ಲಾ ಗೊತ್ತು ಹಾಗೂ ಇದನ್ನು ಪಡೆಯಲು ನಾವೆಲ್ಲಾ ಹಾತೊರೆಯುತ್ತೇವೆ. ಆದರೆ ಸಂದರ್ಭಾನುಸಾರ ಮೇಕಪ್ ಧರಿಸಲೇಬೇಕಾದ ಅನಿವಾರ್ಯತೆಯೂ ನಮಗಿರುತ್ತದೆ ಹಾಗೂ ಹಲವು ಬಗೆಯ ಬಣ್ಣ ಮತ್ತು ಪ್ರಸಾದನಗಳನ್ನು ಪ್ರಯತ್ನಿಸಲೂ ಮನ ಬಯಸುತ್ತದೆ.

ಆದರೆ ಉಳಿದ ಸಮಯದಲ್ಲಿ ಈ ಮೇಕಪ್ಪುಗಳ ಸಹವಾಸವೇ ಬೇಡವೆನಿಸಿ ನಮ್ಮ ಸಹಜಸೌಂದರ್ಯವೇ ಪ್ರಜ್ವಲಿಸುವಂತಿದ್ದರೆ ಸಾಕು ಎನಿಸುತ್ತದೆ. ಒಂದು ವೇಳೆ ಮೇಕಪ್ ಇಲ್ಲದೆಯೇ ಸಹಜಸೌಂದರ್ಯವನ್ನೇ ಉತ್ತಮಗೊಳಿಸಿ ಆತ್ಮವಿಶ್ವಾಸವನ್ನೂ ಹೆಚ್ಚಿಸಿಕೊಳ್ಳುವ ಇರಾದೆ ನಿಮಗಿದ್ದರೆ ಇಂದಿನ ಲೇಖನದಲ್ಲಿ ನೀಡಿರುವ ಕೆಲವು ಸಲಹೆಗಳು ನಿಮಗೆ ಅತ್ಯುತ್ತಮವಾದ ನೆರವನ್ನು ನೀಡಲಿವೆ. ಈ ಸಲಹೆಗಳನ್ನು ಪಾಲಿಸುವ ಮೂಲಕ ದೇಹ ಮತ್ತು ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಮೇಕಪ್ ನ ಹೊರತಾಗಿಯೂ ಸಹಜಸೌಂದರ್ಯವನ್ನು ಪಡೆಯಬಹುದು. ಬನ್ನಿ, ನೋಡೋಣ...

ಸಾಕಷ್ಟು ನಿದ್ರಿಸಿ

ದೇಹದ ಆರೋಗ್ಯದ ಸಹಿತ ತ್ವಚೆ, ಕಣ್ಣುಗಳ ಆರೋಗ್ಯಕ್ಕೂ ಸಾಕಷ್ಟು ನಿದ್ದೆಯ ಅಗತ್ಯವಿದೆ. ಪ್ರತಿದಿನವೂ ಸುಮಾರು ಆರರಿಂದ ಎಂಟು ಗಂಟೆಗಳ ಅವಧಿಯ ಗಾಢ ನಿದ್ದೆ ನಿಮಗೆ ಅವಶ್ಯವಾಗಿದ್ದು ಈ ಅವಧಿಯಲ್ಲಿ ದೇಹ ಹಲವಾರು ಅನೈಚ್ಛಿಕ ಕ್ರಿಯೆಗಳಿಗೆ ಒಳಗಾಗುತ್ತದೆ. ಇದರಲ್ಲಿ ಹಿಂದಿನ ದಿನದ ಚಟುವಟಿಕೆಯಿಂದ ಬಳಲಿದ್ದ ತ್ವಚೆ ಮರುಚೈತನ್ಯ ಪಡೆಯುವುದೂ ಒಂದು. ಹಾಗಾಗಿ ನಿಮ್ಮ ತ್ವಚೆ ಉತ್ತಮವಾಗಿರಬೇಕು ಎಂದರೆ ನಿಮ್ಮ ನಿದ್ದೆಯೂ ಗಾಢ ಹಾಗೂ ಉತ್ತಮ ಅವಧಿಯದ್ದಾಗಿರಬೇಕು.

ತೇವಕಾರಕ

ತ್ವಚೆಗೆ ಸಾಕಷ್ಟು ತೇವಕಾರಕ ಒದಗಿಸುವ (ಮಾಯಿಶ್ಚರೈಸಿಂಗ್) ಮೂಲಕ ಅದ್ಭುತವೆನಿಸುವ ಆರೈಕೆಯನ್ನು ಪಡೆಯಬಹುದು. ಈ ಮೂಲಕ ತ್ವಚೆಯ ಆಳಕ್ಕೆ ಅಗತ್ಯವಿರುವ ಆರ್ದ್ರತೆ ಒದಗಿಸಿದಂತಾಗುತ್ತದೆ ಹಾಗೂ ತ್ವಚೆ ಮೃದು ಮತ್ತು ಕೋಮಲವಾಗಿರಲು ಸಾಧ್ಯವಾಗುತ್ತದೆ. ಆದ್ದರಿಂದ ನಿತ್ಯವೂ ಉತ್ತಮ ಗುಣಮಟ್ಟದ ತೇವಕಾರಕವನ್ನು ಬಳಸುವುದು ಅಗತ್ಯ. ನಿತ್ಯದ ಸ್ನಾನ ಮುಗಿದ ತಕ್ಷಣವೇ ದೇಹವಿಡೀ ಆವರಿಸುವಂತೆ ಉತ್ತಮ ಗುಣಮಟ್ಟದ ಮಾಯಿಶ್ಚರೈಸಿಂಗ್ ಲೋಶನ್ (ತೇವಕಾರಕ ದ್ರವ)ವನ್ನು ತೆಳುವಾಗಿ ಲೇಪಿಸಿಕೊಳ್ಳಿ ಹಾಗೂ ಕೆಲವೇ ದಿನಗಳಲ್ಲಿ ಇದರ ಪರಿಣಾಮವನ್ನು ಅರಿಯುತ್ತೀರಿ.

ಸತ್ತ ಜೀವಕೋಶ ನಿವಾರಿಸಿ (ಎಕ್ಸ್ ಫೋಲಿಯೇಟ್)

ನಮ್ಮ ತ್ವಚೆಯ ಹೊರಪದರದ ಮೇಲೆ ತ್ವಚೆಯ ಸತ್ತ ಜೀವಕೋಶಗಳು ತೆಳುವಾದ ಪುಡಿಯ ರೂಪದಲ್ಲಿ ಗಟ್ಟಿಯಾಗಿ ಅಂಟಿ ಕೊಂಡಿರುತ್ತವೆ. ಇವನ್ನು ಆಗಾಗ ಕೆರೆದು ನಿವಾರಿಸುತ್ತಿರಬೇಕು. ಈ ಕ್ರಿಯೆಗೆ ಎಕ್ಸ್ ಫೋಲಿಯೇಶನ್ ಎಂದು ಕರೆಯುತ್ತಾರೆ. ನೈಸರ್ಗಿಕ ಸೌಂದರ್ಯಕ್ಕೆ ಈ ಕ್ರಿಯೆ ಅತಿ ಅಗತ್ಯವಾಗಿದೆ. ಈ ಮೂಲಕ ಸತ್ತ ಜೀವಕೋಶಗಳನ್ನು ನಿವಾರಿಸುವುದು ಮಾತ್ರವಲ್ಲ, ಇವು ಮುಚ್ಚಿದ್ದ ತ್ವಚೆಯ ಸೂಕ್ಷ್ಮರಂಧ್ರಗಳನ್ನು ತೆರೆದು ತ್ವಚೆ ಉಸಿರಾಡುವಂತೆ ಮಾಡಲೂ ಸಾಧ್ಯವಾಗುತ್ತದೆ. ಆದರೆ ಈ ಕ್ರಿಯೆಯನ್ನು ನಡೆಸುವ ಭರದಲ್ಲಿ ಹೆಚ್ಚಿನ ಒತ್ತಡದಲ್ಲಿ ಉಜ್ಜಬಾರದು, ಏಕೆಂದರೆ ಇದು ನಮ್ಮ ತ್ವಚೆಯ ಹೊರಪದರವನ್ನೇ ಹರಿದು ಘಾಸಿಗೊಳಿಸಬಹುದು. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಈ ಕ್ರಿಯೆಯನ್ನು ನಿರ್ವಹಿಸಿದರೆ ಬೇಕಾದಷ್ಟಾಯಿತು.

ಟೋನರ್ ಬಳಸಿ

ನಮ್ಮಲ್ಲಿ ಹೆಚ್ಚಿನವರಿಗೆ ಟೋನರ್ ಪ್ರಸಾಧನದ ಮಹತ್ವವೇ ತಿಳಿದಿಲ್ಲ. ಮೇಕಪ್ ನ ಹೊರತಾಗಿ ಸಹಜ ಸೌಂದರ್ಯ ಪ್ರಜ್ವಲಿಸಬೇಕಿದ್ದರೆ ಈ ಟೋನರ್ ಅತಿ ಅಗತ್ಯವಾಗಿದೆ. ಇದಕ್ಕೂ ಮುನ್ನ ಟೋನರ್ ಎಂದರೇನು ಎಂಬುದನ್ನು ತಿಳಿದುಕೊಳ್ಳಬೇಕು. ತ್ವಚೆಯನ್ನು ಸ್ವಚ್ಛಗೊಳಿಸಿದ ಬಳಿಕ ತ್ವಚೆಯ ಸೂಕ್ಷ್ಮರಂಧ್ರಗಳಲ್ಲಿದ್ದ ಕಲ್ಮಶ ಹೊರ ಹೋದ ಬಳಿಕ ಈ ರಂಧ್ರಗಳು ಅಗಲವಾಗಿ ತೆರೆದಿರುತ್ತವೆ. ಅಂದರೆ ಮತ್ತೆ ಈ ರಂಧ್ರಗಳಲ್ಲಿ ಕೊಳೆ ತುಂಬಿಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ಈ ರಂಧ್ರಗಳನ್ನು ಕಿರಿದಾಗಿಸಿ ಕೊಳೆ ತುಂಬಿಕೊಳ್ಳದಂತೆ ತಡೆಯುವ ಕೆಲಸವನ್ನು ಮಾಡುವುದೇ ಟೋನರ್. ಹಾಗಾಗಿ ತ್ವಚೆಗೆ ಟೋನರ್ ಪ್ರಸಾದನವನ್ನು ಲೇಪಿಸಿಕೊಂಡು ತ್ವಚೆಯ ಸೆಳೆತ ಹೆಚ್ಚಿಸುವ ಮೂಲಕ ಮೇಕಪ್ ಇಲ್ಲದೆಯೇ ಸಹಜ ಕಾಂತಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ಮೊಡವೆಗಳನ್ನು ಚಿವುಟದಿರಿ

ಹದಿಹರೆಯದಿಂದ ತೊಡಗುವ ಮೊಡವೆಗಳು ಹಿರಿಯವಯಸ್ಸಿನವರೆಗೂ ಕಾಡಿಯೇ ಕಾಡುತ್ತವೆ. ಆದರೆ ನಮ್ಮ ಕೆಲವು ಅಭ್ಯಾಸಗಳು ಇವುಗಳನ್ನು ಇನ್ನಿಲ್ಲದಷ್ಟು ಉಲ್ಬಣಿಸುತ್ತವೆ. ಇದರಲ್ಲಿ ಅತಿ ಹೆಚ್ಚು ಅಪಾಯಕಾರಿಯಾದ ಅಭ್ಯಾಸವೆಂದರೆ ಮೊಡವೆಗಳನ್ನು ಚಿವುಟುವುದು. ಹೀಗೆ ಚಿವುಟುವ ಮೂಲಕ ಕೇವಲ ಮೊಡವೆಯ ತುದಿಭಾಗದ ಚರ್ಮ ಒಡೆದು ಗಾಯವಾಗುವ ಜೊತೆಗೇ ಒಳಗಿದ್ದ ಕೀವು ಪೂರ್ತಿಯಾಗಿ ಹೊರಹೋಗದೇ ಈಗ ಗಾಳಿಗೆ ತೆರೆದು ಸೋಂಕು ಇನ್ನಷ್ಟು ಉಲ್ಬಣಿಸಲು ಕಾರ್ಣವಾಗುತ್ತದೆ. ಮೇಕಪ್ ಧರಿಸಿದಾಗ ಈ ಮೊಡವೆಯೂ ಅದರ ಅಡಿ ಮುಚ್ಚಿಹೋಗುತ್ತದೆ. ಆದರ್ ಮೇಕಪ್ ಇಲ್ಲದಿದ್ದಾಗ ಈ ಒಡೆದ ಮೊಡವೆಯ ಚರ್ಮ ಗಾಳಿಗೆ ತೆರೆದು ಸೋಂಕು ಉಲ್ಬಣಿಸುತ್ತದೆ. ಹಾಗಾಗಿ ಮೊಡವೆಗಳಿದ್ದರೆ ಸೂಕ್ತ ಕ್ರಮ ವಹಿಸಬೇಕೇ ವಿನಃ ಎಂದಿಗೂ ಚಿವುಟಬಾರದು.

ಹುಬ್ಬುಗಳನ್ನು ಓಪ್ಪವಾಗಿಸಿ

ಹುಬ್ಬಿನ ಕೂದಲನ್ನು ಒಪ್ಪ ಓರಣವಾಗಿಸುವುದರ ಮಹತ್ವ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದೇ ಇಲ್ಲ. ಮೇಕಪ್ ಇಲ್ಲದಿರುವಾಗ ಅಲ್ಪ ಆರೈಕೆಯಿಂದಲೇ ಹುಬ್ಬುಗಳನ್ನು ಒಪ್ಪವಾಗಿಸಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ದೊರಕುವ ನೈಸರ್ಗಿಕ ಸೊಬಗನ್ನು ವಣಿಸಲು ಸಾಧ್ಯವಿಲ್ಲ. ಹಾಗಾಗಿ ನಿಯಮಿತವಾಗಿ ನಿಮ್ಮ ಹುಬ್ಬುಗಳಿಗೆ ಅಗತ್ಯ ಆರೈಕೆಯನ್ನು ಒದಗಿಸುತ್ತಿರಿ.

ವಿವಿಧ ಕೇಶವಿನ್ಯಾಸ ಪ್ರಯತ್ನಿಸಿ

ನಿಮ್ಮ ಸಹಜ ಸೌಂದರ್ಯವನ್ನು ಪದರ್ಶಿಸುವ ಇನ್ನೊಂದು ವಿಧಾನವೆಂದರೆ ಕೇಶವಿನ್ಯಾಸದಲ್ಲಿ ಬದಲಾವಣೆ. ಸರಿಯಾಗಿ ಬಾಚಿರದ, ಆರೈಕೆಯಿಲ್ಲದ ಕೇಶ ಸಹಜ ಸೌಂದರ್ಯವನ್ನು ಮರೆಮಾಚುತ್ತದೆ. ಚೆನ್ನಾಗಿ ಬಾಚಿಕೊಂಡು ಕಟ್ಟಿಕೊಂಡ ತುರುಬು ಆರೋಗ್ಯದ ಜೊತೆಗೇ ಸೌಂದರ್ಯವನ್ನೂ ವೃದ್ದಿಸುತ್ತದೆ. ನಿಮ್ಮ ಕೂದಲ ಉದ್ದವನ್ನು ಆಧರಿಸಿ ಯಾವ ವಿನ್ಯಾಸ ಸೂಕ್ತವಾಗಬಹುದೆಂದು ಭಿನ್ನ ವಿನ್ಯಾಸಗಳನ್ನು ಪ್ರಯತ್ನಿಸಿ.

ಬಾಯಿಯ ಆರೋಗ್ಯಕ್ಕೆ ಮಹತ್ವ ನೀಡಿ

ಸಾಮಾನ್ಯವಾಗಿ ಸೌಂದರ್ಯದ ವಿಷಯ ಬಂದಾಗ ಬಾಯಿಯ ಆರೋಗ್ಯದ ಬಗ್ಗೆ ಚರ್ಚೆ ಆಗುವುದು ಕಡಿಮೆ. ಆದರೆ ವಾಸ್ತವವಾಗಿ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನೈಸರ್ಗಿಕ ಸೌಂದರ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮುಖದಲ್ಲಿ ನಗುವಿಲ್ಲದಿದ್ದರೆ ಯಾರೂ ಸುಂದರರಾಗಿ ಕಾಣಿಸರು. ಹಾಗಾಗಿ, ನಿಮ್ಮ ನಗು ಅತ್ಯುತ್ತಮವಾಗಿರಲು ನಿಮ್ಮ ಬಾಯಿಯ ಆರೋಗ್ಯವೂ ಚೆನ್ನಾಗಿರಬೇಕು. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ಸದಾ ಸೂರ್ಯ ಬೆಳಕಿನಿಂದ ರಕ್ಷಣೆ ಪಡೆಯಿರಿ

ಸೂರ್ಯನ ಕಿರಣಗಳು ನಿಮ್ಮ ತ್ವಚೆಗೆ ಎಷ್ಟು ಹಾನಿಕರವೆಂದು ನಿಮಗೆ ಗೊತ್ತಿರಲಾರದು. ಯಾವುದೇ ಬಗೆಯ ತ್ವಚೆ ಸೂರ್ಯನ ಕಿರಣಗಳಿಗೆ ನೇರವಾಗಿ ಒಡ್ಡಿಕೊಂಡಾಗ ಕೆಲವು ನಿಮಿಷಗಳಲ್ಲಿಯೇ ಆಘಾತಕ್ಕೆ ಒಳಗಾಗುತ್ತದೆ. ಪರಿಣಾಮವಾಗಿ ಸೂಕ್ಷ್ಮ ಗೆರೆಗಳು ಮೂಡುವುದು, ಕಪ್ಪಗಾಗುವುದು, ಜೋಲು ಬೀಳುವುದು ಹಾಗೂ ನೆರಿಗೆಗಳು ಮೂಡುವುದು ಮೊದಲಾದವು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಪ್ರತಿಬಾರಿಯೂ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳಬೇಕಾಗಿ ಬಂದಾಗ ಸೂಕ್ತ ರಕ್ಷಣಾ ದ್ರಾವಣವನ್ನು ಹಚ್ಚಿಯೇ ಹೋಗಬೇಕು. ಸಹಜಸೌಂದರ್ಯ ಪ್ರಜ್ವಲಿಸಲು ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯುವುದು ಅತಿ ಮಹತ್ವದ್ದಾಗಿದೆ. ಹಾಗಾಗಿ ಪ್ರತಿಬಾರಿ ಬಿಸಿಲಿಗೆ ಹೋಗಬೇಕಾಗಿ ಬಂದಾಗ ಸನ್ ಸ್ಕ್ರೀನ್ ಹಚ್ಚಿಯೇ ಹೋಗಿ.

ತುಟಿಗಳ ಆರೋಗ್ಯಕ್ಕೂ ಮಹತ್ವ ನೀಡಿ

ನಮ್ಮ ತುಟಿಗಳ ಚರ್ಮ ವಿಶಿಷ್ಟವಾಗಿದ್ದು ಬೇರೆ ಯಾವುದೇ ಚರ್ಮ ಹಿಗ್ಗುವುದಕ್ಕಿಂತ ಹೆಚ್ಚು ವಿಸ್ತಾರವಾಗಿ ಹಿಗ್ಗುವಂತೆ ನಿರ್ಮಿಸಲಾಗಿದೆ. ಬಾಯಿ ತೆರೆದಾಗ ಹೀಗೆ ವಿಸ್ತರಿಸಬೇಕಾದುದು ಅನಿವಾರ್ಯ. ಇದೇ ಕಾರಣಕ್ಕೆ ತುಟಿಯ ಚರ್ಮದ ಹೊರಪದರ ಅತಿ ತೆಳುವಾಗಿರುತ್ತದೆ ಹಾಗೂ ಕೂದಲು ರಹಿತವಾಗಿರುತ್ತದೆ. ತುಟಿಗಳಿಗೆ ಹೆಚ್ಚಿನ ತೇವದ ಅವಶ್ಯಕತೆ ಇರುತ್ತದೆ. ಈ ಅಗತ್ಯತೆಯನ್ನು ಪೂರೈಸಲು ಲಿಪ್ ಬಾಮ್ (lip balm) ಎಂಬ ಪ್ರಸಾದನ ಸದಾ ನಿಮ್ಮ ಜೊತೆಗಿರಿಸಿಕೊಳ್ಳಬೇಕು ಹಾಗೂ ಯಾವಾಗ ತುಟಿಗಳು ಒಣಗಿವೆ ಎಂಬ ಭಾವನೆ ಮೂಡಿತೋ ತಕ್ಷಣವೇ ಈ ಪ್ರಸಾದನವನ್ನು ಹಚ್ಚಿಕೊಳ್ಳಬೇಕು. ತನ್ಮೂಲಕ ತುಟಿಗಳ ತ್ವಚೆಯೂ ಕೋಮಲ, ಮೃದು ಹಾಗೂ ತುಂಬಿಕೊಂಡಿರುವಂತೆ ಮಾಡಿಕೊಂಡು ಯಾವುದೇ ಮೇಕಪ್ ಇಲ್ಲದೇ ಸಹಜಸೌಂದರ್ಯ ವೃದ್ದಿಸಲು ಸಾಧ್ಯವಾಗುತ್ತದೆ.

ಆರೋಗ್ಯಕರ ಆಹಾರ ಸೇವನೆ

ಕೊನೆಯದಾಗಿ, ಆದರೆ ಅಂತಿಮವಲ್ಲದ ಸಲಹೆ ಎಂದರೆ ಸಹಜ ಸೌಂದರ್ಯಕ್ಕಾಗಿ ಆರೋಗ್ಯಕರ ಘನ ಮತ್ತು ದ್ರವಾಹಾರದ ಸೇವನೆಗೆ ಹೆಚ್ಚಿನ ಮಹತ್ವ ನೀಡಬೇಕು. ನಿಮ್ಮ ಆಹಾರ ಕೇವಲ ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲ, ತ್ವಚೆಯ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ ಆಹಾರದಲ್ಲಿ ಸಾಕಷ್ಟು ಹಣ್ಣುಗಳು, ತರಕಾರಿಗಳು ಹಾಗೂ ಮುಖ್ಯವಾಗಿ, ಸಾಕಷ್ಟು ನೀರು ಒಳಗೊಂಡಿರುವಂತೆ ನೋಡಿಕೊಳ್ಳಬೇಕು. ಆಹಾರದ ಆಯ್ಕೆಯ ಜೊತೆಗೇ ಆರೋಗ್ಯಕರ ಆಹಾರಕ್ರಮವೂ ಸಹಜಸೌಂದರ್ಯವನ್ನು ಕಾಪಾಡಿಕೊಳ್ಳಲು ಮಹತ್ವದ ಪಾತ್ರ ವಹಿಸುತ್ತದೆ.

 
ಹೆಲ್ತ್