Back
Home » ಸಮ್ಮಿಲನ
ಜೀವನದಲ್ಲಿ ಸಾಕಷ್ಟು ಹತಾಶೆಗೊಂಡಿದ್ದೀರಾ: ಈ ಸಪ್ತಸೂತ್ರಗಳನ್ನು ಅನುಸರಿಸಿ ಗೆಲುವು ಸಾಧಿಸಿ
Boldsky | 6th Nov, 2019 02:00 PM
 • 1. ಅನವಶ್ಯಕವಾಗಿ ಇನ್ನೊಬ್ಬರೊಡನೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ

  ಒಂದೇ ಕೈಗೆ ಸೇರಿದ ಐದು ಬೆರಳುಗಳು ಏಕಪ್ರಕಾರವಾಗಿಲ್ಲ ತಾನೇ? ಹಾಗಿದ್ದ ಮೇಲೆ ನಿಮ್ಮ ಜೀವನವು ಇನ್ಯಾರದ್ದೋ ಜೀವನದೊಂದಿಗೆ ಹೇಗೆ ತಾನೇ ಹೋಲಿಕೆಯಾದೀತು ಹೇಳಿ? ನಿಮ್ಮ ಜೀವನದ ಪ್ರತೀ ಕ್ಷಣವೂ ಇನ್ನೊಬ್ಬರ ಜೀವನದ ಆಯಾ ಕ್ಷಣಗಳಿಗಿಂತ ಭಿನ್ನವಾಗಿಯೇ ಇರುತ್ತದೆ. ಇನ್ನೊಬ್ಬರು ನಮಗೆ ಕೇವಲ ಪ್ರೇರಣೆಯಾಗಿರಲಿ ಹಾಗೂ ಆ ಮೂಲಕ ನಾವು ನಮಗಾಗಿಯೇ ಶ್ರಮವಹಿಸಿ, ನಮ್ಮದೇ ಇನ್ನಷ್ಟು ಉತ್ತಮ ಆವೃತ್ತಿಯಾಗುವುದರತ್ತ ಹೆಜ್ಜೆ ಹಾಕೋಣ. ಒಂದು ವೇಳೆ ನಿಮ್ಮ ಮಿತ್ರರೋರ್ವರು ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದು, ಕೈತುಂಬಾ ಸಂಬಳವನ್ನು ದುಡಿಯುತ್ತಿದ್ದರೆ, ಅದರರ್ಥ ನೀವೂ ಕೂಡಾ ಹಾಗೆಯೇ ಇರಲೇಬೇಕು ಎಂದೇನೂ ಅಲ್ಲ. ಹೀಗೆ ನಿಮ್ಮನ್ನು ನೀವು ಇನ್ನೊಬ್ಬರೊಡನೆ ಹೋಲಿಕೆ ಮಾಡುತ್ತಾ ಹೋದರೆ, ನಿಮ್ಮೊಳಗೆ ಕೀಳರಿಮೆಯ, ಹೊಟ್ಟೆಕಿಚ್ಚಿನ ಹಾಗೂ ದಯನೀಯ ಭಾವಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ ಮತ್ತು ಹೀಗಾದಾಗ ಕ್ರಮೇಣವಾಗಿ ನಿಮ್ಮೊಳಗಿನ ಆತ್ಮಸ್ಥೈರ್ಯ ಅವನತಿಯತ್ತ ಸಾಗುತ್ತದೆ. ಆತ್ಮಸ್ಥೈರ್ಯವನ್ನು ಕಳೆದುಕೊಂಡರೆ ಮುಂದೆ ಜೀವನದಲ್ಲಿ ಬಯಸಿದರೂ ನೀವೇನನ್ನೂ ಸಾಧಿಸಲಾಗದು. ಪ್ರತಿಯೊಬ್ಬರಿಗೂ ಅವರವರ ಜೀವನದಲ್ಲಿ ಅವರವರದ್ದೇ ಆದ ಏರಿಳಿತಗಳಿರುತ್ತವೆ ಎಂಬುದನ್ನು ನೀವು ಮೊದಲು ಅರ್ಥೈಸಿಕೊಳ್ಳಬೇಕು. ನಿಮ್ಮನ್ನು ನೀವೇ ಇತರರೊಂದಿಗೆ ಹೋಲಿಸಿಕೊಳ್ಳುತ್ತಾ ಕೂರುವ ಬದಲು, ನಿಮ್ಮ ಜೀವನದ ಒಳಿತಿಗೆ, ಅಭ್ಯುದಯಕ್ಕೆ ಪೂರಕವಾಗಬಲ್ಲ ಅಂಶಗಳತ್ತ ಗಮನಹರಿಸುವುದು ಸಾವಿರಪಾಲು ಮೇಲು.


 • 2. ನಿಮ್ಮ ಮನಸ್ಥಿತಿಯನ್ನೇ ಬುಡಮೇಲು ಮಾಡಬಲ್ಲ ನೇತ್ಯಾತ್ಮಕ ಆಲೋಚನೆಗಳನ್ನು ದೂರವಿರಿಸಿರಿ

  ಕೆಲವೊಮ್ಮೆ, ಹಲವಾರು ಋಣಾತ್ಮಕ ಆಲೋಚನೆಗಳು ಮನಸ್ಸನ್ನು ಮುತ್ತಿಕೊಳ್ಳುವುದೂ ಇದೆ ಅಲ್ಲವೇ? ಯಾವುದೋ ಒಂದು ಸಂದರ್ಭದಲ್ಲಿ ನೀವು ವೈಫಲ್ಯವನ್ನು ಕಂಡದ್ದಕ್ಕಾಗಿ, "ನಾನು ಏನನ್ನೇ ಕೈಗೊಳ್ಳುವುದಕ್ಕೆ ಮುಂದಾದರೂ ನನಗೆ ಸೋಲೇ ಕಟ್ಟಿಟ್ಟ ಬುತ್ತಿ, ನನ್ನಿಂದ ಏನೂ ಸಾಧ್ಯವಿಲ್ಲ" ಎಂದು ನೀವು ಯೋಚಿಸುವ ಸಾಧ್ಯತೆಯೂ ಇಲ್ಲದಿಲ್ಲ. ನಿಮ್ಮ ಕನಸುಗಳನ್ನು ಹೊಸಕಿ ಹಾಕುವುದಕ್ಕೇ ನೀವು ಮುಂದಾಗುವ ಸಾಧ್ಯತೆಯೂ ಇದೆ. ಆದರೆ, ಇಂತಹ ಸಂದರ್ಭಗಳಲ್ಲಿ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವ ಒಂದು ಸಂಗತಿಯೇನೆಂದರೆ, ಅಂತಹ ಋಣಾತ್ಮಕ ಯೋಚನೆಗಳು ನಿಮ್ಮ ಮನಸ್ಸನ್ನಾಳುವುದಕ್ಕೆ ನೀವು ಅವಕಾಶವನ್ನು ಕಲ್ಪಿಸಿಕೊಟ್ಟರೆ, ಅದು ನಿಮ್ಮ ಉತ್ಪಾದಕ ಸಾಮರ್ಥ್ಯವನ್ನೇ ಉಡುಗಿಸೀತು. ಹೀಗಾದಾಗ, ನಿಮಗೆ ನಿಮ್ಮ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ನಿಮ್ಮ ಕಠಿಣ ಸವಾಲುಗಳಿಗೇ ಸವಾಲಾಗಿ ನಿಲ್ಲಬೇಕು, ಅವುಗಳನ್ನು ಮೆಟ್ಟಿನಿಲ್ಲಬೇಕು ಹಾಗೂ ಮುಂದುವರಿಯಬೇಕು.


 • 3. ಸಾಧಿಸಬೇಕಾಗಿರುವ ಗುರಿಯ ಬಗ್ಗೆಯೇ ನಿಮ್ಮ ಮನಸ್ಸು ಸದಾ ಚಿಂತಿಸುತ್ತಿರಲಿ

  ನಿಮ್ಮ ಗುರಿಯನ್ನು ಸಾಧಿಸುವ ದಿಶೆಯಲ್ಲಿ, ನೀವು ಕಠಿಣ ಪರಿಶ್ರಮ ಪಡಬೇಕು ಹಾಗೂ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕು. ಆ ನಿಟ್ಟಿನಲ್ಲಿ ಸಂಕಲ್ಪಿತ ಮನೋಸ್ಥಿತಿಯಿರುವುದು ಅತ್ಯಗತ್ಯ. ಆದರೆ, ಗಮನವನ್ನು ಬೇರೆ ವಿಚಾರಗಳತ್ತ ಸೆಳೆಯುವ ಸಾಕಷ್ಟು ಸಂಗತಿಗಳು ನಿಮ್ಮ ಜೀವನದಲ್ಲಿ ಇದ್ದಾಗ, ಗುರಿಯ ಕುರಿತಾಗಿಯೇ ಗಮನ ಹರಿಸುವುದು ನಿಜಕ್ಕೂ ಬಲು ಕಷ್ಟ. ಕೆಲವೊಮ್ಮೆ, ನಿಮ್ಮಲ್ಲಿಯೇ ಆಲಸ್ಯ ಉಂಟಾಗಬಹುದು ಹಾಗೂ ನೀವು ಗುರಿಸಾಧನೆಗೆ ಸಂಬಂಧಿಸಿದ ಕೆಲಸಕಾರ್ಯಗಳನ್ನು ಮುಂದೂಡುತ್ತಲೂ ಇರಬಹುದು. ಇಂತಹ ಸನ್ನಿವೇಶದಲ್ಲಿ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು ಏನೆಂದರೆ, ಗುರಿಯ ಕುರಿತೇ ಸಾಧ್ಯವಾದಷ್ಟೂ ಚಿಂತಿಸುತ್ತಾ ಅದರ ಸಾಧನೆಯತ್ತ ಕಾರ್ಯಪ್ರವೃತ್ತರಾಗುತ್ತಲೇ ಇದ್ದಲ್ಲಿ, ನೀವು ಸುಲಭವಾಗಿ ಗುರಿ ಸಾಧಿಸಲು ಸಾಧ್ಯವಾಗುತ್ತದೆ.


 • 4. ನಿಮ್ಮ ವೈಫಲ್ಯದ ಕಾರಣವನ್ನು ಕಂಡುಕೊಳ್ಳಿರಿ

  ನಿಮ್ಮ ಗುರಿ ಸಾಧಿಸುವ ದಿಶೆಯಲ್ಲಿ ನೀವು ವಿಫಲಗೊಂಡಾಗ ಮನಸ್ಸು ಹದೆಗೆಡುವುದು ತೀರಾ ಸಹಜ. ಈ ಮಾನಸಿಕ ವಿರಕ್ತಿ ಅದೆಷ್ಟರಮಟ್ಟಿಗೆ ಹೆಚ್ಚಾದೀತೆಂದರೆ, ನಿಮ್ಮ ಕನಸುಗಳನ್ನು ಸ್ವಯಂ ನೀವೇ ಹೊಸಕಿಹಾಕಿಬಿಡುವಷ್ಟು. ಆದಾಗ್ಯೂ, ನೀವು ನಿಮ್ಮ ಈ ವೈಫಲ್ಯವನ್ನೇ ಧನಾತ್ಮಕ ರೀತಿಯಲ್ಲೂ ಬಳಸಿಕೊಳ್ಳಲು ನಿಮ್ಮಿಂದ ಸಾಧ್ಯವೆಂದು ನಾವು ಹೇಳಿದರೆ, ಅದು ಹೇಗೆ ಸಾಧ್ಯವೆಂದು ನಿಮಗೆ ಅಚ್ಚರಿಯಾದೀತು. ನೀವು ವಿಫಲಗೊಳ್ಳಲು ನಿಮ್ಮಲ್ಲಿನ ಯಾವುದರ ಕೊರತೆಯು ಕಾರಣವಾಯಿತೆಂಬುದರ ಕುರಿತು ಹಾಗೂ ಆ ಕೊರತೆಯನ್ನು ಹೇಗೆ ನೀಗಿಸಿಕೊಳ್ಳಬಹುದೆಂಬುದರ ಬಗ್ಗೆ ನೀವು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಮ್ಮ ಅತಿಯಾದ ಆತ್ಮವಿಶ್ವಾಸದ ಕಾರಣದಿಂದಲೋ ಅಥವಾ ನೀವು ತಯಾರಿಯನ್ನೇ ಮಾಡಿಕೊಳ್ಳದೇ ಇದ್ದ ಕಾರಣಕ್ಕಾಗಿಯೋ ಪ್ರಾಯಶ: ನೀವು ಸೋತಿರಬಹುದು. ಒಮ್ಮೆ ನಿಮ್ಮ ಸೋಲಿನ ಕಾರಣದ ಕುರಿತು ಆತ್ಮಾವಲೋಕನವನ್ನು ಮಾಡಿಕೊಂಡು, ಅದನ್ನು ಸರಿಪಡಿಸಿಕೊಂಡಲ್ಲಿ, ಭವಿಷ್ಯದಲ್ಲಿ ಜಯಮಾಲೆಯು ನಿಮ್ಮ ಕೊರಳನ್ನೇ ಅಲಂಕರಿಸುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.


 • 5. ಸಾಧ್ಯವಿರಬಹುದಾದ ಎಲ್ಲಾ ಪರಿಹಾರೋಪಾಯಗಳನ್ನೂ ಕಂಡುಕೊಳ್ಳಲು ಪ್ರಯತ್ನಿಸಿರಿ

  ಇದೀಗ ನಿಮ್ಮ ಸೋಲಿನ ಹಿಂದಿನ ಕಾರಣಗಳನ್ನು ಆತ್ಮಾವಲೋಕನದ ಮೂಲಕ ನೀವು ಕಂಡುಕೊಂಡಿರುವಿರಿ. ನಿಮ್ಮ ಹಿನ್ನಡೆಗೆ ಕಾರಣವನ್ನು ತಿಳಿದುಕೊಂಡ ಮೇಲೆ, ಅದರ ಎಲ್ಲಾ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು ನಿಮಗೆ ಯಾವ ಲೆಕ್ಕ ಹೇಳಿ?. ಗುರಿಯನ್ನು ಸಾಧಿಸುವ ದಿಶೆಯಲ್ಲಿ ಈಗ ನೀವು ಮನವನ್ನು ಸನ್ನದ್ಧಗೊಳಿಸಿ, ಕಂಡುಕೊಂಡ ಆ ಪರಿಹಾರೋಪಾಯದ ಪ್ರಕಾರವೇ ಕಾರ್ಯೋನ್ಮುಖರಾಗಬಹುದು. ಗುರಿ ಸಾಧನೆಯ ನಿಮ್ಮ ಯೋಜನೆಗಳ ಕುರಿತು ನಂಬಿಕಸ್ಥ ಗೆಳೆಯರೊಡನೆಯೋ ಅಥವಾ ಬಂಧುವರ್ಗದವರೊಡನೆಯೋ ಚರ್ಚಿಸಬಹುದು. ಜೊತೆಗೆ, ನಿಮಗೆ ನೆರವಾಗಲು ಸಮರ್ಥರು ಹಾಗೂ ನಿಮಗೆ ನೆರವನ್ನು ನೀಡುವವರು ಎಂದು ಭಾವಿಸುವ ವ್ಯಕ್ತಿಗಳಿಂದಲೂ ನೆರವನ್ನು ಪಡೆದುಕೊಳ್ಳಬಹುದು ಹಾಗೂ ಬಳಿಕ, ನಿಮಗಾಗಿಯೇ ಮತ್ತೊಂದು ಪರ್ಯಾಯ ಯೋಜನೆಯನ್ನೂ ಸಿದ್ಧಪಡಿಸಿಟ್ಟುಕೊಳ್ಳಬಹುದು.


 • 6. ಪುಟಿದೇಳಿರಿ ಹಾಗೂ ಮತ್ತೊಮ್ಮೆ ಪ್ರಯತ್ನಿಸಿರಿ

  ನೀವು ಒಮ್ಮೆ ಸೋತಿರೆಂದ ಮಾತ್ರಕ್ಕೇ ಮತ್ತೆ ಮತ್ತೆ ಸೋಲುತ್ತಲೇ ಇರಬೇಕೆಂದೇನೂ ಇಲ್ಲ. ಆಗಿ ಹೋದ ನಷ್ಟ ಅಥವಾ ಹಾನಿಯ ಕುರಿತು ಕೊರಗುತ್ತಾ ಕನಸುಗಳನ್ನೇ ಹತ್ತಿಕ್ಕುವ ಬದಲು, ವಸ್ತು/ವಿಷಯಗಳು ನಿಮ್ಮ ಪರವಾಗಿ ಕೆಲಸ ಮಾಡುವಂತೆ ಮಾಡಿಕೊಳ್ಳಲು ನಿಮ್ಮಿಂದ ಸಾಧ್ಯವಿದೆ. ಆಶಾಭಾವನೆಯನ್ನು ಕಳೆದುಕೊಳ್ಳಬಾರದು. "ಅದರ ಉಸಾಬರಿಯೇ ಬೇಡ" ಎಂದು ಬಿಟ್ಟುಕೊಡುವುದಕ್ಕೆ ಮೊದಲು, ಆ ಒಂದು ನಿರ್ಧಿಷ್ಟ ಕಾರ್ಯವನ್ನು ಮಾಡಲು ಮುಂದಾದುದಾದರೂ ಏಕೆ ಎಂಬುದರ ಕುರಿತು ಮೊದಲು ಯೋಚಿಸಬೇಕು. ನಿಮ್ಮ ಕನಸುಗಳನ್ನೇ ಬಲಿಕೊಡಲು ಮುಂದಾಗುವುದೆಂದರೆ ಅದು ಹೇಡಿತನದ ಲಕ್ಷಣವಾಗಿರುತ್ತದೆ. ಆದ್ದರಿಂದ ನೀವು ಹೇಡಿಯೆನಿಸಿಕೊಳ್ಳದೇ, ಮೈಕೊಡವಿ ಎದ್ದು, ಮರಳಿ ಯತ್ನವನ್ನು ಮಾಡಲು ಮುಂದಾಗಬೇಕು.


 • 7. ನಿಮ್ಮಲ್ಲಿ ನಿಮಗೆ ನಂಬಿಕೆ, ವಿಶ್ವಾಸಗಳಿರಲಿ

  ಯಶಸ್ಸನ್ನು ಗಳಿಸುವ ದಿಶೆಯಲ್ಲಿ, ನಿಮ್ಮಲ್ಲಿರಬಹುದಾದ ಅತೀ ದೊಡ್ಡ ಆಯುಧವೆಂದರೆ ಅದು ಆತ್ಮವಿಶ್ವಾಸ. ತನ್ನಲ್ಲಿ ತಾನು ನಂಬಿಕೆ ಹಾಗೂ ವಿಶ್ವಾಸವನ್ನು ಕಳೆದುಕೊಳ್ಳುವುದೆಂದರೆ, ದುರಂತವನ್ನು ಆಹ್ವಾನಿಸಿಕೊಳ್ಳುವುದೆಂದೇ ಅರ್ಥ. ನಿಮ್ಮಲ್ಲಿಯೇ ನಿಮಗೆ ನಂಬಿಕೆ, ವಿಶ್ವಾಸಗಳು ಇಲ್ಲದೇ ಹೋದರೆ, ವಸ್ತು/ವಿಷಯಗಳು ಪರವಾಗಿ ಕೆಲಸ ಮಾಡುವಂತೆ ಮಾಡುವುದಕ್ಕೆ ನಿಮ್ಮಿಂದ ಸಾಧ್ಯವಾಗುವುದಿಲ್ಲ. ಆತ್ಮವಿಶ್ವಾಸ ಹಾಗೂ ದೃಢಸಂಕಲ್ಪವನ್ನು ಕಳೆದುಕೊಂಡ ಮರುಕ್ಷಣವೇ ಸೋಲು ನಿಮ್ಮನ್ನು ಬೆಂಬತ್ತಲಾರಂಭಿಸುತ್ತದೆ. ಆದ್ದರಿಂದ ನಿಮ್ಮ ಶಕ್ತಿ ಸಾಮರ್ಥ್ಯಗಳಲ್ಲಿ, ಪ್ರತಿಭೆಯಲ್ಲಿ, ಸಂಕಲ್ಪದಲ್ಲಿ ಹಾಗೂ ಪರಿಶ್ರಮದಲ್ಲಿ ನಂಬಿಕೆಯನ್ನಿರಿಸಿಕೊಳ್ಳಿರಿ. ಗುರಿ ಸಾಧನೆಯ ದೀರ್ಘ ಪಯಣದಲ್ಲಿ ಇದು ನಿಮಗೆ ತುಂಬಾ ನೆರವಾಗುತ್ತದೆ.

  ಜೀವನವೆಂಬ ಓಟದ ಪಂದ್ಯದಲ್ಲಿ, ನಿಮ್ಮನ್ನೂ ಒಳಗೊಂಡಂತೆ ಯಾರು ತಾನೇ ಹಿಂದೆ ಬೀಳಲು ಬಯಸುತ್ತಾರೆ ಹೇಳಿ? ಇಂತಹ ಒಂದು ಹತಾಶ ಮನೋಭಾವದಿಂದ ಹೊರಬರುವ ದಿಶೆಯಲ್ಲಿ ಖಂಡಿತವಾಗಿಯೂ ಪ್ರತಿಯೊಬ್ಬರಿಗೂ ಸ್ವಯಂ ತಮಗೆ ತಾವೇ ನೆರವಾಗುವುದಕ್ಕೆ ಸಾಧ್ಯವಿದೆ. ನೀವು ನೆನಪಿನಲ್ಲಿಟ್ಟುಕೊಂಡಿರಬೇಕಾದುದಿಷ್ಟೇ: ಕಠಿಣ ಪರಿಶ್ರಮ, ದೃಢಸಂಕಲ್ಪ, ಆಶಾಭಾವ, ಮತ್ತು ಆತ್ಮವಿಶ್ವಾಸ ಇವಿಷ್ಟು ಗುರಿ ಸಾಧನೆಯ ದಿಶೆಯಲ್ಲಿ ಅತ್ಯವಶ್ಯವಾಗಿ ಬೇಕಾಗುವ ಅಂಶಗಳು. ಜೊತೆಗೆ, ತಾಳ್ಮೆಯಿಂದಿರುವುದೂ ಕೂಡಾ ವಸ್ತು, ವ್ಯಕ್ತಿ, ವಿಷಯಗಳು ನಿಮ್ಮ ಪರವಾಗಿ ಕೆಲಸ ಮಾಡುವ ದಿಶೆಯಲ್ಲಿ ನೆರವಾಗುತ್ತದೆ.
ಜೀವನದಲ್ಲಿ ನಾವಂದುಕೊಂಡದ್ದೆಲ್ಲಾ ಎಷ್ಟರಮಟ್ಟಿಗೆ ನಡೆಯುತ್ತದೆ ಹೇಳಿ? ಹಾಗೊಂದು ವೇಳೆ ಯಾರದ್ದೇ ಜೀವನದಲ್ಲೇ ಆಗಲೀ, ಅಂದುಕೊಂಡದ್ದೆಲ್ಲಾ ನಡೆಯುತ್ತದೆ ಎಂದೇ ಆದಲ್ಲಿ, ಬಹುಶ: ಅವರಿಗಿಂತ ಭಾಗ್ಯಶಾಲಿಗಳು ಈ ಜಗತ್ತಿನಲ್ಲಿಯೇ ಬೇರೊಬ್ಬರು ಇರಲಾರರು. ಆದರೆ ವಸ್ತುಸ್ಥಿತಿ ಹಾಗಿಲ್ಲ. ಪ್ರತಿಯೊಬ್ಬರ ಜೀವನವೂ ಅನೇಕ ಆಕಸ್ಮಿಕ, ಅನಿರೀಕ್ಷಿತಗಳಿಂದಲೇ ತುಂಬಿಕೊಂಡಿದ್ದು, ಭವಿಷ್ಯವನ್ನು ಕರಾರುವಕ್ಕಾಗಿ ಪ್ರತಿಪಾದಿಸುವುದು ಯಾರಿಂದಲೂ ಸಾಧ್ಯವೇ ಇಲ್ಲ. ಬಹುಪಾಲು ಜೀವನವು ನಾವಂದುಕೊಂಡಂತೆ ಇರುವುದೇ ಇಲ್ಲ. ನಾಳಿನ ಜೀವನದಲ್ಲಿ ಏನು ನಡೆದೀತು ಎಂಬುದನ್ನು ನಾವು ಕನಸು ಮನಸಿನಲ್ಲಿಯೂ ಊಹಿಸಲು ಸಾಧ್ಯವಿಲ್ಲ, ಅಷ್ಟರಮಟ್ಟಿಗೆ ಜೀವನ ಅನಿರೀಕ್ಷಿತ. ಅಷ್ಟೇ ಅಲ್ಲ, ಯಾವುದೇ ವಿಚಾರದಲ್ಲೇ ಆಗಲೀ ಜೀವನದಲ್ಲಿ ಸಂಭವಿಸುವ ಸಂಗತಿಗಳ ಕುರಿತು ಇದಮಿತ್ಥಂ ಎಂದು ಯಾರಿಗೂ ಊಹಿಸಲಾಗದು ಮತ್ತು ಸಮಸ್ಯೆಗಳು ಈ ಕಾರಣದಿಂದಲೇ ಶುರುವಿಟ್ಟುಕೊಳ್ಳುವುದು.

ಪ್ರತಿಷ್ಠಿತ ಔತಣಕೂಟಗಳಲ್ಲಿ ಪಾಲ್ಗೊಳ್ಳುವುದು, ಬಂಧುಮಿತ್ರರೊಡನೆ ಐಷಾರಾಮವಾಗಿ ಕಾಲಕಳೆಯುವುದು, ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವುದು, ಸಾಕಪ್ಪಾ ಎನಿಸುವಷ್ಟು ಶಾಪಿಂಗ್ ಮಾಡುವುದಕ್ಕೆ ಸಾಧ್ಯವಾಗುವುದು ಅಥವಾ ಜಗತ್ತಿನಾದ್ಯಂತ ಪ್ರವಾಸ ಕೈಗೊಳ್ಳುವುದು; ಇವೆಲ್ಲವೂ ಯಾರಿಗೆ ತಾನೇ ಇಷ್ಟವಾಗದು ಹೇಳಿ?. ಆದರೆ, "ತಾನೊಂದು ಬಗೆದರೆ ದೈವವೊಂದು ಬಗೆಯಿತು" ಎಂಬ ಗಾದೆಯಂತೆ, ಜೀವನವು ನಿಮಗೆಂದೇ ಬೇರೆಯೇ ಹಂಚಿಕೆಯನ್ನು ಹೂಡಿರಲೂಬಹುದು ಹಾಗೂ ಆ ಹಂಚಿಕೆಯು ನಿಮಗೆ ಪ್ರಿಯವಲ್ಲದೇ ಇರುವಂತಹದ್ದೂ ಆಗಿರಲೂಬಹುದು. ಭವಿಷ್ಯದಲ್ಲಿ ಸಂಭವಿಸಬಹುದಾದ ಗಂಡಾಂತರವನ್ನು ಯಾರು ತಾನೇ ಊಹಿಸಬಲ್ಲರು. ನಿಮ್ಮ ನೆಂಟರಿಷ್ಟರು, ಸ್ನೇಹಿತರೆಲ್ಲರೂ ಸಂಭ್ರಮ, ಸಡಗರದಿಂದಿರುವಾಗ, ನೀವು ಮಾತ್ರ ಜೀವನದ ಕಷ್ಟಕಾರ್ಪಣ್ಯಗಳ ವಿರುದ್ಧ ಸೆಣಸಾಡುವ ಸಂಗತಿಯು ನಿಮಗೆ ಖಂಡಿತವಾಗಿಯೂ ಪ್ರಿಯವೆನಿಸಲಾರದು ಅಲ್ಲವೇ? ಅಂತಹ ಕಷ್ಟಕಾರ್ಪಣ್ಯಗಳ ವಿರುದ್ಧದ ನಿಮ್ಮ ಪ್ರತೀ ಹೋರಾಟವೂ ಸೋಲನ್ನೇ ಕಾಣುತ್ತಿದ್ದಲ್ಲಿ, ನಿಮಗೆ ಬಲುಬೇಗನೇ ಜೀವನವೇ ಜಿಗುಪ್ಸೆಯೆನಿಸೀತು.

ಇರಲಿ, ನಾವೇನೂ ನಿಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿಲ್ಲ; ಬದಲಿಗೆ, ಒಂದು ವೇಳೆ ನೀವು ಜೀವನದಲ್ಲಿ ಕಳೆದುಹೋಗಿರುವ ಅಥವಾ ಹತಾಶ ಮನೋಭಾವವನ್ನು ಅನುಭವಿಸುತ್ತಿದ್ದಲ್ಲಿ, ಜೀವನದ ಕುರಿತಂತೆ ನೀವು ಕಳೆದುಕೊಂಡಿರಬಹುದಾದ ಆ ಆಶಾಭಾವನೆಯನ್ನು ಮತ್ತೊಮ್ಮೆ ನಿಮ್ಮಲ್ಲಿ ತುಂಬುವ ದಿಶೆಯಲ್ಲಿ, ನಿಮಗಾಗಿ ಕೆಲವು ಸಲಹೆಸೂಚನೆಗಳನ್ನು ನೀಡುವ ಮೂಲಕ ನಿಮಗೆ ನೆರವಾಗುವ ಇರಾದೆ ನಮ್ಮದು.

 
ಹೆಲ್ತ್