Back
Home » Business
ಪೆಟ್ರೋಲ್- ಡೀಸೆಲ್ ದರ ತಿಂಗಳ ನಂತರ ಏರಿಕೆಯತ್ತ; ಕಾರಣ ಏನು, ಎತ್ತ?
Good Returns | 8th Nov, 2019 02:13 PM

ಒಂದು ತಿಂಗಳ ನಂತರ ದೇಶದಲ್ಲಿ ಇಂಧನ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿಗಳು ಶುಕ್ರವಾರ (ನವೆಂಬರ್ ಎಂಟು) ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಮಾಡಿವೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 10 ಪೈಸೆ ಏರಿಕೆ ಮಾಡಿದ್ದು, ರು. 72.70 ತಲುಪಿದೆ. ಇನ್ನು ಮುಂಬೈನಲ್ಲಿ ರು. 78.38, ಕೋಲ್ಕತ್ತಾದಲ್ಲಿ ರು. 75.41 ಹಾಗೂ ಚೆನ್ನೈನಲ್ಲಿ ರು. 75.55 ಇದೆ.

ಡೀಸೆಲ್ ಬೆಲೆ 9 ಪೈಸೆ ಹೆಚ್ಚಳವಾಗಿದ್ದು, ದೆಹಲಿಯಲ್ಲಿ ರು. 65.84, ಮುಂಬೈನಲ್ಲಿ ರು. 69.06, ಕೋಲ್ಕತ್ತಾದಲ್ಲಿ ರು. 68.25 ಮತ್ತು ಚೆನ್ನೈನಲ್ಲಿ ರು. 69.59 ಇದೆ.

ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿ ತೈಲ ದರ ಒಂದೋ ಕಡಿತವಾಗಿತ್ತು ಅಥವಾ ಯಾವುದೇ ಬದಲಾವಣೆ ಆಗಿರಲಿಲ್ಲ. ಅಂದ ಹಾಗೆ ತೈಲ ದರವನ್ನು ಪ್ರತಿ ದಿನವೂ ಪರಿಷ್ಕರಿಸಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವನ್ನು ಹಾಗೂ ವಿದೇಶಿ ವಿನಿಮಯ ಮೌಲ್ಯವನ್ನು ಪರಿಗಣಿಸಿ, ತೈಲ ಮಾರ್ಕೆಟಿಂಗ್ ಕಂಪೆನಿಗಳು ದರ ಪರಿಷ್ಕರಣೆ ಮಾಡುತ್ತವೆ.

ಕಚ್ಚಾ ತೈಲ ಬೆಲೆಯು ಅಮೆರಿಕ ಹಾಗೂ ಚೀನಾ ಮಧ್ಯದ ವಾಣಿಜ್ಯ ಬಿಕ್ಕಟ್ಟಿನಿಂದ ಕಡಿಮೆ ಆಗಿತ್ತು. ಒಪೆಕ್ ನಿಂದ ಪೂರೈಕೆ ಕಡಿಮೆಯಾದರೂ ಮಾರ್ಚ್, 2020ರ ವರೆಗೆ ಇಂತಿಷ್ಟು ಪ್ರಮಾಣದ ತೈಲ ಸರಬರಾಜು ಆಗುತ್ತಿತ್ತು. ಚೀನಾದ ವಾಣಿಜ್ಯ ಸಚಿವಾಲಯ ಗುರುವಾರ ಘೋಷಣೆ ಮಾಡಿರುವ ಪ್ರಕಾರ, ವ್ಯಾಪಾರದ ತೆರಿಗೆಗಳನ್ನು ಹಂತಹಂತವಾಗಿ ರದ್ದು ಮಾಡಲು ಅಮೆರಿಕ ಜತೆಗೆ ಒಪ್ಪಂದಕ್ಕೆ ಬರಲಾಗಿದೆ. ಇನ್ನು ಜಾಗತಿಕ ಬ್ರೆಂಟ್ ಕಚ್ಚಾ ತೈಲ ದರವು ಬ್ಯಾರಲ್ ಗೆ $62ಕ್ಕೂ ಹೆಚ್ಚು ಇತ್ತು.

ಅಮೆರಿಕ- ಚೀನಾ ಮಧ್ಯೆ ವಾಣಿಜ್ಯ ಸಮರದ ಕಾರಣಕ್ಕೆ ಜಾಗತಿಕವಾಗಿ ತೈಲ ಬಳಕೆ ಇಳಿಕೆಯಾಗುತ್ತಿತ್ತು. ಆದರೆ ಈಗ ಆ ಆತಂಕವನ್ನು ಚೀನಾ ನಿವಾರಿಸಿದೆ. ಆದ್ದರಿಂದ ತೈಲ ಬೆಲೆಯಲ್ಲಿ ಏರಿಕೆ ಆಗುತ್ತಿದೆ.

   
 
ಹೆಲ್ತ್