ಭಾರತದ ಆರ್ಥಿಕತೆಗೆ ಹೊಡೆತವೆಂಬಂತೆ ಮೂಡಿಸ್ ಸಂಸ್ಥೆ ದೇಶದ ಆರ್ಥಿಕ ವೃದ್ದಿ ದರ ಕುರಿತು ನಕಾರಾತ್ಮಕ ರೇಟಿಂಗ್ ನೀಡಿದೆ. ಈ ಹಿಂದೆ ಇದ್ದ 'ಸ್ಥಿರ' ದಿಂದ 'ನಕಾರಾತ್ಮಕ'ಕ್ಕೆ ಬದಲಿಸಿದೆ. ದೇಶದ ಆರ್ಥಿಕ ದುರ್ಬಲತೆಯನ್ನು ಗಮನಹರಿಸುವಲ್ಲಿ ಭಾರತ ಸರ್ಕಾರ ವಿಫಲವಾಗಿದ್ದು, ಇದರಿಂದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ ಎಂದು ಆಘಾತಕಾರಿ ಅಂಶವನ್ನು ಶುಕ್ರವಾರ (ನವೆಂಬರ್ 8) ಬಹಿರಂಗಪಡಿಸಿದೆ.
ಅಮೆರಿಕಾ ಮೂಲದ ಹಣಕಾಸು ಮತ್ತು ಸಾಲದ ಬದ್ಧತೆ ಈಡೇರಿಸುವ ಸಾಮರ್ಥ್ಯ ಮೌಲ್ಯಮಾಪನ ಸಂಸ್ಥೆಯಾದ ಮೂಡಿಸ್ ಈ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಭಾರತದ ಆರ್ಥಿಕತೆಗೆ ಮತ್ತೊಂದು ಹೊಡೆತ ನೀಡಿದೆ. ಆರ್ಥಿಕ ಕುಂಠಿತವನ್ನು ಎದುರಿಸಲು ಸರ್ಕಾರ ವಿಫಲವಾಗಿದ್ದು, ಇದು ದೇಶದ ಸಾಲದ ಹೊರೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದೆ.
2025ರಲ್ಲಿ ಸೃಷ್ಟಿಯಾಗಲಿದೆ 12 ಲಕ್ಷ ಉದ್ಯೋಗಗಳು
ದೇಶದ ಆರ್ಥಿಕ ವೃದ್ದಿ ದರವಷ್ಟೇ ಅಲ್ಲದೆ ಆರು ಭಾರತೀಯ ಹಣಕಾಸು ಸಂಸ್ಥೆಗಳ ದೃಷ್ಟಿಕೋನವನ್ನು 'ಸ್ಥಿರ' ದಿಂದ 'ನಕಾರಾತ್ಮಕ'ಕ್ಕೆ ಪರಿಷ್ಕರಿಸಿದೆ. ಇದರಲ್ಲಿ ಹೆಚ್ಡಿಎಫ್ ಸಿ ಬ್ಯಾಂಕ್, ಎಸ್ಬಿಐ, ಎಕ್ಸಿಮ್ ಬ್ಯಾಂಕ್, ಹೀರೊ ಫಿನ್ ಕಾರ್ಪ್, HUDCO, IRFC (ಭಾರತೀಯ ರೈಲ್ವೇ ಹಣಕಾಸು ನಿಗಮ)ಸೇರಿವೆ.
೨೦೧೯-೨೦ರಲ್ಲಿ ಭಾರತದ ಅಭಿವೃದ್ಧಿ ದರವು ಶೇಕಡಾ 5.8ರಷ್ಟು ಇರಲಿದೆ ಎಂದು ಅಕ್ಟೋಬರ್ನಲ್ಲಿ ಮೂಡಿಸ್ ಅಂದಾಜಿಸಿತ್ತು. ಅದಕ್ಕೂ ಮೊದಲು ಶೇಕಡಾ 6.2 ಇರಲಿದೆ ಎಂದು ಹೇಳಿತ್ತು. ಆದರೆ ಈಗ 2017ರಲ್ಲಿ ನೀಡಿದ್ದ 'ಬಿಬಿಎ2' ರೇಟಿಂಗ್ ಅನ್ನು ಮುಂದುವರಿಸಿದೆ. ಇದಕ್ಕೂ ಮೊದಲು 2004ರಲ್ಲಿ 'ಬಿಬಿಎ3' ರೇಟಿಂಗ್ ನೀಡಿತ್ತು. ಬಳಿಕ ನರೇಂದ್ರ ಮೋದಿ ಸರ್ಕಾರದಲ್ಲಿ ಆರ್ಥಿಕ ಸುಧಾರಣೆ ಅಂದಾಜಿಸಿ 2017ರಲ್ಲಿ 'ಬಿಬಿಎ2' ನೀಡಲಾಗಿತ್ತು.